ಶನಿವಾರ, ಏಪ್ರಿಲ್ 8, 2023

ಕನ್ನಡಮ್ಮನಿಗೆ ನಮನ (ಕವನ) - ಸುಭಾಷ್. ಜೆ. ಎಸ್. ಎಸ್.

ಕಲಿಯುವಾಗ ಸುಂದರ ಸ್ವರ್ಗವು
ರಮ್ಯರಮಣೀಯ ನಿಸರ್ಗವು
ಕಂಬನಿಗೆ ಮಿಡಿಯುವ ನಾಡು
ಕೈ ಹಿಡಿದು ಮೇಲೆತ್ತುವ ಬೀಡು 
ಅಮ್ಮ ಎಂದರೆ ಆರೈಕೆ
ಅಪ್ಪ ಎಂದರೆ ಓಲೈಕೆ

ಗಾಯಕರ ಗ್ರಾಮವಿದು 
ಲೇಖಕರ ಲೋಕವಿದು
ಶಾಸನಗಳ ನಾಡಿದು
ಕವಿಗಳ ಬೀಡಿದು

ಅಮೃತವೇ ಕಾವೇರಿ
ಶ್ರೀಮಂತಿಕೆಯೇ ಶ್ರೀಗಂಧ 
ಮಲೆನಾಡಿನ ಮಂದಹಾಸ
ಕಗಮೃಗಗಳ ತವರೂರು

ಜಂಬೂಸವಾರಿಯ ವೈಭೋಗ
ತರ ತರ ತಿನಿಸುಗಳ ಈ ಯೋಗ
ದೇವಾಲಯಗಳ ಆಗರ
ಎಂದಿಗೂ ಮಧುರ ಈ ನಗರ

ಕನ್ನಡವೇ ನಮ್ಮ ಉಸಿರು
ಕರ್ನಾಟಕವೇ ನಮ್ಮ ತವರು
ಕನ್ನಡಾಂಭೆಯೇ ನಮ್ಮಮ್ಮ 
ಅವಳಿಗೊಂದು ನಮನವ ಸಲ್ಲಿಸೋಣ.
- ಸುಭಾಷ್. ಜೆ. ಎಸ್. ಎಸ್.


ಗುರುವಾರ, ಏಪ್ರಿಲ್ 6, 2023

ಪೌರಕಾರ್ಮಿಕರ ಸಮಸ್ಯೆಗಳಿಗೆ ಕೊನೆ ಎಂದು (ಲೇಖನ) - ಆಶಾ, ಎನ್. ಬೆಂಗಳೂರು.

ನಿತ್ಯ ಜೀವನದಲ್ಲಿ ದುಡಿಯುವ ಎಷ್ಟೋ ಜನರಲ್ಲಿ, ಇವರು ಒಬ್ಬರು. ಪ್ರತಿದಿನ  ಮನೆ, ಮಠ ಎಲ್ಲವನ್ನೂ ಬಿಟ್ಟು ಬೆಳ್ಳಗ್ಗೆ ಚಳಿ, ಗಾಳಿ, ಮಳೆ ಎನ್ನದೆ ಬಂದು ರಸ್ತೆ ಗುಡಿಸಬೇಕು. ಮನೆಗಳ ಮುಂದೆ ಎಸೆದಿರುವ ಗಬ್ಬು ನಾರುವ ಸತ್ತ ಇಲಿ, ಹೆಗ್ಗಣ ಎಲ್ಲವನ್ನೂ ಗುಡಿಸಬೇಕು. ಎಲ್ಲಾ ಮನೆಗಳ ತ್ಯಜ್ಯವನ್ನು ತಂದು ವಿಂಗಡಣೆ ಮಾಡುವರು. ನಮ್ಮ ದೇಶದ ಜನರು ತಮ್ಮ-ತಮ್ಮ ಮನೆಯ ಕಸವನ್ನು ವಿಂಗಡಣೆ ಮಾಡಲು ಸಮಯವಿಲ್ಲದೆ ಮತ್ತು ಅಸಹ್ಯ ಪಡುವ ಜನರ ಮಧ್ಯೆ ಯಾವುದೂ ಕೆಟ್ಟದಲ್ಲ, ಎಂದೂ ಎಲ್ಲಾ ಮನೆಯ ಕಸವನ್ನು ತಂದು ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸುವರು. ಪೌರಕಾರ್ಮಿಕರೇ ಯಾಕೆ ಈ ಕೆಲಸವನ್ನು ಮಾಡಬೇಕು?. ಶ್ರೀಮಂತ ಕಂಪನಿಗಳು, ಹೋಟೆಲ್ ಗಳು , ಕಾರ್ಖಾನೆಗಳು ಪ್ರತಿ ನಿಮಿಷಕ್ಕೆ ಸಾವಿರಾರು ಟನ್ ಗಳಷ್ಟು ತ್ಯಜ್ಯವನ್ನು ಭೂಮಿಗೆ ಬೀಸಾಡುವರು. ಇದನೆಲ್ಲ ಸ್ವಚ್ವಮಾಡುವವರು ಪೌರಕಾರ್ಮಿಕರು. ಇವರ ಸ್ಥಿತಿ ಹೇಗೆ  ಇದೇ ಎಂದು ಯಾರಾದರೂ ಯೋಚಿಸುವರೇ?  ನಮಗೆ ಮಾತ್ರವೇ ಆರೋಗ್ಯ ಇರುವುದು , ಅವರಿಗೆ ಆರೋಗ್ಯ ಇಲ್ಲವೇ. ತ್ಯಜ್ಯವನ್ನು ವಿಂಗಡಣೆ ಮಾಡುವಾಗ ಅದರಲ್ಲಿನ ವಿಷಕಾರಿ ಅಂಶಗಳಿಂದ 60 ಮಂದಿ ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. ಇನ್ನೂ ಉಳಿದವರು ಹಲವಾರು ಖಾಯಿಲೆಗಳಿಗೆ ತುತ್ತಾಗಿದ್ದಾರೆ. ಸರ್ಕಾರದಿಂದ ಯಾವುದೇ  ರೀತಿಯ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ.
ನಮ್ಮ ನಗರದ ಸುತ್ತಮುತ್ತಲು ಸ್ಚಚ್ಚ ಮಾಡುವ ಪೌರಕಾರ್ಮಿಕರನ್ನು ತುಂಬಾ ಕೀಳಾಗಿ ಕಾಣುವುದು ನೋವಿನ ಸಂಗತಿ. ಅವರು ಒಂದು ದಿನ ಕೆಲಸ ಮಾಡದೇ ಇದ್ದರೆ ನಗರಗಳು ಗಬ್ಬು ನಾರುತ್ತವೆ. ಕಸದ ಗುಂಡಿಯನ್ನು ನೋಡಿದರೆ ಮೂಗು ಮುಚ್ಚಿಕೊಂಡು ಹೋಗುತ್ತಾರೆ. ಕಸ ಬೀಸಾಡುವರೇ ಮೂಗು, ಬಾಯಿ ಮುಚ್ಚಿಕೊಂಡು ಹೋದರೆ. ಅದನ್ನು ಪ್ರತಿನಿತ್ಯ ಸ್ವಚ್ಚ ಮಾಡುವರು ಅದರ ವಾಸನೆಯನ್ನು  ಕುಡಿಯುತ್ತಾ ಬದುಕಬೇಕಲ್ಲ ಎಂಬುದು ನೋವಿನ ಸಂಗತಿಯಾಗಿದೆ. ನಾವು ಬಿಸಾಡುವ ಕಸವನ್ನು ನಾವೇ ಸ್ವಚ್ಚ ಮಾಡಬೇಕು. 
ಕಾರ್ಮಿಕರು ಬಳಸುವ ವಸ್ತುಗಳುನ್ನು ಸರ್ಕಾರ ಯಾಕೆ ಸರಿಯಾಗಿ ನೀಡುತ್ತೀಲ್ಲ. ಸ್ವಚ್ಚತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹ, ಕುಡಿಯುವ ನೀರು, ಶೌಚಗೃಹ, ಪ್ರಥಮ ಚಿಕಿತ್ಸೆ, ಶುಚಿತ್ವ ಸೌಲಭ್ಯ, ಸಮುವಸ್ತ್ರ, ಹ್ಯಾಂಡ್ ಗ್ಲೌಸ್, ಟೋಪಿ, ರಬ್ಬರ್ ಶೂಗಳು, ಪಾದರಕ್ಷೆ ಶುಚಿಗೊಳಿಸುವ ಸಾಧನ, ಪೊರಕೆ, ತರಿಮಣಿ, ಸನಿಕೆ, ಮಾಸ್ಕ್, ಕಳೆ ತೆಗೆಯುವ ಯಂತ್ರ, ಚರಂಡಿ ಶುಚಿಗೊಳಿಸುವ ಉಪಕರಣ. ಬಿದಿರಿನ ಬುಟ್ಟಿಗಳು, ತ್ಯಜ್ಯ ಸಾಗಾಣೆ  ತಳ್ಳು ಬಂಡಿ, ಫಿನಾಯಲ್ ಹಾಗೂ ಬ್ಲೀಚಿಂಗ್ ಪೌಡರ್ ಸೇರಿ ಈ ಎಲ್ಲಾ ವಸ್ತುಗಳನ್ನು ಒದಗಿಸಬೇಕು. ಆದರೆ ಬಹುತೇಕ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಈ ಸೌಲಭ್ಯಗಳಲ್ಲಿ.  ಊಟ ಮಾಡಲು ಸರಿಯಾದ ಸ್ಥಳವಿಲ್ಲದೆ, ರಸ್ತೆ, ಚರಂಡಿಯ ಬದಿಯಲ್ಲಿ ಊಟ ಮಾಡುತ್ತಾರೆ. ಇಂತಹ ಪರಿಸ್ಥಿತಿಗೆ ನಾವೇ ಕಾರಣವಾದೆವು. ಸರ್ಕಾರದಿಂದ ಅವರಿಗೆ ಯಾವುದೇ ಸೌಲಭ್ಯಗಳು ಸರಿಯಾದ ಪ್ರಮಾಣದಲ್ಲಿ ದೊರಕಿಲ್ಲ.
ವಿಗ್ರಹ ಸ್ಥಪನೆಗಳಿಗೆ, ಧಾರ್ಮಿಕ  ಕ್ಷೇತ್ರಗಳಿಗೆ, ಕ್ರೀಡಾಂಗಣಗಳು, ಸಭೆ ಸಮಾರಂಭಗಳು, ಇವುಗಳಿಗೆಲ್ಲ  ಸರ್ಕಾರ ಅನಗತ್ಯವಾಗಿ  ಹಣವನ್ನು ಖರ್ಚುಮಾಡುವ ಬದಲು ಪೌರಕಾರ್ಮಿಕರಿಗೆ ವಸತಿ, ನೀರು, ಆಹಾರ, ಶಿಕ್ಷಣ ಈ  ಯೋಜನೆಗಳಿಗೆ  ಬಳಸಬೇಕು. ಪೌರಕಾರ್ಮಿಕರು ಮತ್ತು ಮಲದ ಗುಂಡಿಯಲ್ಲಿ ಇಳಿಯುವ ಕಾರ್ಮಿಕರು ಯಾವ ವರ್ಗದವರು? ಸಾವಿರಾರು ವ‍ರ್ಷಗಳಿಂದ ಇದೇ ಕೆಲಸವನ್ನು ಮಾಡಿಕೊಂಡು ಬಂದಿರುವರು. ನಮ್ಮ ಸಂವಿಧಾನ ಹೇಳುತೇ ಎಲ್ಲಾರು ಘನತೆ ಗೌರವದಿಂದ ಬದುಕುವುದು  ಎಲ್ಲಾರ ಹಕ್ಕು ಎಂದು. ಆದರು ಅವರು ಇಂದಿಗೂ ಅದೇ ಕೆಲಸವನ್ನು ಮಾಡಿಕೊಂಡು ಬಂದಿರುವರು . ಮಲದ ಗುಂಡಿಯಲ್ಲಿ ಕೆಲಸ ಮಾಡುವಾಗ ಉಸಿರಾಡಲು ಗಾಳಿ ಸಿಗದೇ , ಅಲ್ಲಿನ ವಿಷದ ಗಾಳಿಯನ್ನು ಸೇವಿಸಿ ಪ್ರತಿವರ್ಷ ಕಾರ್ಮಿಕರು ಸಾವಿಗಿಡಾಗುತ್ತಾರೆ. ಅದರೊಳಗೆ ಇಳಿಸಲು  ಮೆಷಿಗಳನ್ನು  ತರಬೇಕು. ಮಲದ ಗುಂಡಿಯನ್ನು ಸ್ವಚ್ಚ ಮಾಡಲು ಯಾಕೆ ಕಾರ್ಮಿಕರನ್ನು ಬಳಸಿಕೊಳುತ್ತೀರಾ? ಅದರಲ್ಲಿ ಉಸಿರುಗಟ್ಟಿ  ಸಾವನಪ್ಪಿದವರಿಗೆ  ಸರ್ಕಾರದ  ಪರಿಹಾರ ಸಾಕಾಗುವುದಿಲ್ಲ.
ಅವರಿಗೆ ವಾಸ ಮಾಡಲು ಮನೆಗಳು ಇಲ್ಲದೆ. ಶೌಚಾಲಯವಿಲ್ಲದೆ, ಸರಿಯಾದ ಪೌಷ್ಟಿಕ ಆಹಾರ ಸಿಗದೆ ಸಾಯುತ್ತಿದ್ದಾರೆ. ಪೌರಕಾರ್ಮಿಕರ ಹುದ್ದೆಯನ್ನು ಅತ್ಯಂತ ತಳಸಮುದಾಯದ ಜನರು ಮಾತ್ರ ಮಾಡುವ ಕೆಲಸ ಎಂದು ಭಾವಿಸಲಾಗಿದೆ. ಹಾಗಾಗಿ ಈ ಸಮುದಾಯ ಸಾಮಾಜಿಕವಾಗಿ ಇಂದಿಗೂ ನಾನಾ ರೀತಿಯಲ್ಲಿ ದೌರ್ಜನ್ಯ ಅವಮಾನಗಳಿಗೆ ಒಳಗಾಗುತ್ತಿದ್ದಾರೆ.ಇವರನ್ನು ಕಂಡರೆ ಮೂಗು ಮುಚ್ಚಿಕೊಂಡು ತಿರುಗುವ, ಕುಡಿಯಲು ನೀರು ಕೊಡದೆ, ಬಾಗಿಲಲ್ಲಿ ಕೂರಲು ಬಿಡದೆ, ಶೌಚಾಲಯಗಳಲ್ಲಿ ಬಳಸುವ ಚೆಂಬಲ್ಲಿ ನೀರು ಕೊಡುವರು, ಹಳಸಿದ ಅನ್ನವನ್ನು ಪ್ಲಾಸ್ಟಿಕ್ ಕವರಿನಲ್ಲಿ ನೀಡುವರು. ಇಂತಹ ಅಸ್ಪೃಶ್ಯತೆ, ಅಸಮಾನತೆ ಎಂಬ ಅನಿಷ್ಟ ಪದ್ದತಿಗಳು ತೊಲಗಬೇಕಾದರೆ ಪೌರಕಾರ್ಮಿಕರ ಮಕ್ಕಳು ಮುಂದೆ ಅದೇ ವೃತ್ತಿಯನ್ನು  ಹಿಡಿಯದೆ ಚೆನ್ನಾಗಿ ಓದಿ ಉನ್ನತ ಸ್ಥನಕ್ಕೆ ಬೆಳೆಯಬೇಕು. ಅದಕ್ಕಾಗಿ ಅವರ ಮಕ್ಕಳಿಗೆ ಉನ್ನತ ಮಟ್ಟದ ತನಕ ಉಚಿತ ಶಿಕ್ಷಣವನ್ನು ಕೊಡಿ. 
ಪೌರಕಾರ್ಮಿಕರಿಗೆ 9ಗಂಟೆಯ ಕೆಲಸವನ್ನು  6 ಗಂಟೆಗೆ ಇಳಿಸಿ ,ಕನಿಷ್ಠ ಹತ್ತು ವರ್ಷ ಸೇವೆ ಸಲ್ಲಿಸಿದವರಿಗೆ ಪೊರಕೆ ಬದಲು ಪ್ರಶಸ್ತಿಗಳನ್ನು ನೀಡಿ ಜಾತಿ, ಅಸ್ಪೃಶ್ಯತೆ ಅಳಿಸಲು ಹೀಗಾದರು ಮುಂದಾಗಿ. ಇವರೆಲ್ಲರು ಗೌರವದಿಂದ ಬದುಕನ್ನು ಕಟ್ಟಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
- ಆಶಾ, ಎನ್. ಬೆಂಗಳೂರು.

ನಡೆದಾಡುವ ದೇವರು (ಕವಿತೆ) - ಬಸವರಾಜ ಕರುವಿನ, ಬಸವನಾಳು.

ಹಸಿದ ಹೊಟ್ಟೆಗೆ ಅನ್ನವ ಉಣಿಸಿ
ಅಜ್ಞಾನವ ಅಳಿಸಲು ಅಕ್ಷರವ ಕಲಿಸಿ
ಆಚೆ ನಿಂತವರಿಗೆ ಆಶ್ರಯ ಕಲ್ಪಿಸಿ 
ಅರಿವಿಗೆ ಗುರುವಾದ ತ್ಯಾಗಮಹಿ

ನಡೆದಾಡುವ ದೇವರು 
ಬಡವರ ಕಣ್ಣೀರೊರೆಸಿದ ಜಗದ್ಗುರು
ಪರರ ಬಾಳು ಬೆಳಗಲು ಹರಿಸಿದರು ಬೆವರು 
ಉಜ್ವಲಿಸಿದೆ ನಾಡಿನ ತುಂಬೆಲ್ಲ ಅವರ ಹೆಸರು 

ನುಡಿದಂತೆ ನಡೆದ ದೈವ 
ಕಾಯಕದಲ್ಲಿ ಕೈಲಾಸ ಕಂಡ ಜೀವ
ತಮ್ಮ ತತ್ವಗಳ ಮೂಲಕ ದೂರ ಮಾಡಿದರು ಜನರ ನೋವ 
ಬಸವ ತತ್ವವೇ ಅವರ ಬಾಳಿನ ಭಾವ

ಅವಿರ್ಭವಿಸು ಈ ಜಗದಲಿ ಮತ್ತೊಮ್ಮೆ ಗುರುವೇ 
ಅರಳಿಸು ನೊಂದವರ ಮೊಗದಲ್ಲಿ ಮತ್ತೊಮ್ಮೆ ನಗುವೆ
ನಿಮ್ಮ ಅಗಮನಕೆ  ಕಾಯುತ್ತಿದೆ ಜಗವೆ 
ಬಂದು ಬಿಡು ಒಮ್ಮೆ  ನಲಿವಾಗಿ ದೈವವೇ.

- ಬಸವರಾಜ ಕರುವಿನ, ಬಸವನಾಳು.

ಆರೋಗ್ಯವೇ ಭಾಗ್ಯ (ಲೇಖನ) - ಆಶಾ ಎಲ್. ಎಸ್.

"ಶತಾಯು ವಜ್ರ ದೇಹಾಯ ಸರ್ವ ಸಂಪತ್ಕರಾಯಚ ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ" ಎಂದು ಹೇಳುತ್ತಾ ಯುಗಾದಿಯ ದಿನದಂದು ಬೇವು ಬೆಲ್ಲ ತಿನ್ಧುವುದು ನಮ್ಮ ಸಂಪ್ರದಾಯ... ಈ ಯುಗಾದಿಯು ಚೈತ್ರ ಮಾಸದಲ್ಲಿ ಬರಲಿದ್ದು, ಪ್ರಕೃತಿಯಲ್ಲಿ ಬದಲಾವಣೆಯಾಗುವ ಸಂದರ್ಭ‌. ಒಣಗಿದ ಮರಗಳು ಚಿಗುರಿ ಹಸಿರು ಎಲ್ಲೆಲ್ಲೂ , ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುವ ಸಮಯ. ದೇಹದ ಆರೋಗ್ಯದ ಮೇಲೆ ಹಲವಾರು ಪರಿಣಾಮ ಬೀರುವುದು. ಋತುಗಳು ಬದಲಾವಣೆಯಾದಾಗ ಆ ಋತುಗಳಲ್ಲಿ ಪ್ರಕೃತಿಯಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ. ಪ್ರಕೃತಿಯೇ ನಮಗೆ ಉಡುಗೊರೆಯಾಗಿ ನೀಡಿರುತ್ತದೆ. ನಾವು ಅದನ್ನು ಅರಿತು ಬಳಸಿಕೊಳ್ಳಬೇಕು. ಕಾಲಕಾಲಕ್ಕೆ ಅವುಗಳನ್ನು ಉಪಯೋಗಿಸಿಕೊಳ್ಳುವ ರೀತಿಯನ್ನು ನಮ್ಮ ಹಿರಿಯರು ಹಬ್ಬ ಹರಿದಿನಗಳ ಮುಖೇನ ತಿಳಿಸಿಕೊಟ್ಟಿರುತ್ತಾರೆ. ನಂಜು ನಿವಾರಕ ಬೇವು, ಪುಷ್ಟಿ ನೀಡುವ ಬೆಲ್ಲವನ್ನು, ಜೊತೆಗೆ ವಿವಿಧ ಹಣ್ಣುಗಳ ಪಾನಕಗಳನ್ನು ಸೇವಿಸುವುದರಿಂದ ದೇಹದ ಉಷ್ಣತೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಅನುಕೂಲ. ದೇಹದ ಆರೋಗ್ಯಕ್ಕೆ ನಮ್ಮ ಹಿರಿಯರು, ಪ್ರಕೃತಿ ನೀಡಿರುವ ಉಡುಗೊರೆ ಇದು..

ಆರೋಗ್ಯ ಎಂದರೇನು?  ದೇಹದ ಆರೋಗ್ಯವೇ ಮುಖ್ಯವೇ? ಮಾನಸಿಕ ಅನಾರೋಗ್ಯ ಇಲ್ಲವೇ? 
ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯ ಮುಖ್ಯವಾಗುತ್ತದೆ. ಒಬ್ಬ ವ್ಯಕ್ತಿ ದೈಹಿಕವಾಗಿ ಮಾನಸಿಕವಾಗಿ ಸ್ವಸ್ಥನಾಗಿದ್ದರೆ ಆರೋಗ್ಯವಂತ ಸದೃಢ ಸಮಾಜ ಕಟ್ಟಲು ಸಾಧ್ಯ. ಒಂದು ಸಮಾಜದ ಒಂದು ರಾಷ್ಟ್ರದಲ್ಲಿರುವ ಎಲ್ಲರೂ ಆರೋಗ್ಯವಾಗಿರಬೇಕು. ಹಾಗಾಗಿ ಆರೋಗ್ಯ ಎನ್ನುವುದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ.

ವೈದ್ಯ ಉಪಚಾರದಲ್ಲಿ ಹಲವಾರು ವಿಧಗಳನ್ನು ಕಾಣಬಹುದು. ಆಯುರ್ವೇದ, ಹೋಮಿಯೋಪತಿ, ಅಲೋಪತಿ, ಸಿದ್ಧ ಹೀಗೆ, ಅದರದೇ ರೀತಿಯಲ್ಲಿ ಆರೋಗ್ಯದ ಕುರಿತಂತೆ ವ್ಯಾಖ್ಯೆಗಳನ್ನು ನೀಡುತ್ತವೆ. ವಾತ, ಪಿತ್ತ, ಕಫದ ಮೂಲಕ ಆಯುರ್ವೇದ ದಲ್ಲಿ ನೋಡಿದರೆ, ಹಲವು ಪರೀಕ್ಷೆಗಳ ಮೂಲಕ ಅಲೋಪತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. 

ದೇಹದ/ ಮನಸಿನ ಅನಾರೋಗ್ಯಕ್ಕೆ ಕಾರಣಗಳೇನು?
ಮೊದಲನೆಯದಾಗಿ ಇತ್ತೀಚಿನ ದಿನಗಳಲ್ಲಿ ಕಾಣಬರುತ್ತಿರುವ ಜನರ ಜೀವನಶೈಲಿ... ಯಾವುದಕ್ಕೂ ಸಮಯವಿಲ್ಲ....
ಒತ್ತಡದ ಜೀವನ- ಒತ್ತಡ ಬೇಕು.. ಆದರೆ ಅತಿಯಾಗಬಾರದು‌. ಒತ್ತಡದಿಂದ ಚಿಂತೆಗೊಳಗಾಗಬಾರದು.
ಋಣಾತ್ಮಕ ಭಾವನೆಗಳು/ ಗುಣಗಳು- ಇವು ಮನಸಿನ ಮೇಲೆ ಪರಿಣಾಮ ಬೀರುವುದರಿಂದ ದೇಹವೂ ಸಹ ಅನಾರೋಗ್ಯಕ್ಕೆ ಈಡಾಗುತ್ತದೆ.
ನಾವು ಸೇವಿಸುವ ಆಹಾರ- ದಿನನಿತ್ಯದ ಆಹಾರ ಹೇಗಿರಬೇಕು, ಎಷ್ಟಿರಬೇಕು, ನಮ್ಮ ದೇಹಕ್ಕೆ ಒಗ್ಗುತ್ತದೆಯೇ ಇಲ್ಲವೇ ಎಂಬ ಅರಿವು ನಮಗಿರಬೇಕು. 
ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು. 

ಆಹಾರ ವಿಷವಾಗುವುದು ಯಾವಾಗ? ಪರಿಹಾರವೇನು ...ನೋಡೋಣ..
ಯಾವಾಗಲೂ ಆಹಾರವನ್ನು ಸ್ವಲ್ಪ ಸ್ವಲ್ಪವೇ ತಿನ್ನಬೇಕು. ಅತಿಯಾದರೆ ಅಮೃತವೂ ವಿಷವೇ ಅಲ್ಲವೇ.. ಊಟ ಮಾಡುವಾಗ ಸಂತೋಷದ ಭಾವನೆ ಇರಬೇಕು. 
ಅತಿಯಾಗಿ ತಿನ್ನಬಾರದು.
ಅವಸರದಿಂದ ತಿನ್ನಬಾರದು
ಹಸಿವಾದಾಗ ಮಾತ್ರ ಊಟ ಮಾಡಬೇಕು.
ಪ್ರತಿದಿನವೂ ವ್ಯಾಯಾಮ ಇರಬೇಕು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ದೈಹಿಕ ಶ್ರಮದ ಕೆಲಸ ಕಡಿಮೆ ಆಗಿರುವುದರಿಂದ ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸ ಆಗುವುದರಿಂದ ಬೊಜ್ಜು, ದೇಹದ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುವುದನ್ನು ನಾವು ನೋಡಬಹುದಾಗಿದೆ. ನಮ್ಮ ದೇಹ ತಡೆದುಕೊಳ್ಳುವಷ್ಟು ಮಾತ್ರ ನಿತ್ಯವೂ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ.

ಎಲ್ಲದಕ್ಕಿಂತ ಮುಖ್ಯವಾಗಿ 5 ಬಿಳಿವಿಷಗಳಾದ ಉಪ್ಪು, ಸಕ್ಕರೆ, ಮೈದಾ, ಹಾಲು, ಮೊಸರು ಇವುಗಳನ್ನು ಆದಷ್ಟೂ ಕಡಿಮೆ ಉಪಯೋಗಿಸಬೇಕು. ತೊರೆದರೆ ಇನ್ನೂ ಒಳ್ಳೆಯದು.

ಕೊನೆಯದಾಗಿ, ಬಸವಣ್ಣನವರು ಹೇಳಿರುವಂತೆ, ಕಾಯಕವೇ ಕೈಲಾಸ ಎಂದು ತಿಳಿದು, ನಾವು ಮಾಡುವ ಕಾರ್ಯಗಳಲ್ಲಿ ಉದಾಸೀನತೆ ತೋರದೇ ಸಂತೋಷದಿಂದ ಮಾಡುವುದರಿಂದ, ದೈಹಿಕವಾಗಿ, ಮಾನಸಿಕವಾಗಿ ನೆಮ್ಮದಿ ಹೊಂದುವುದರಿಂದ ಆರೋಗ್ಯವಾಗಿರಲು ಸಾಧ್ಯ ಎನ್ನುವುದು ವೈದ್ಯರ ಅಭಿಪ್ರಾಯ..ನಮ್ಮ ಆರೋಗ್ಯ ನಮ್ಮ ಕೈಯಲ್ಲಿ..
ಎಲ್ಲರಿಗೂ ವಿಶ್ವ ಆರೋಗ್ಯ ದಿನದ ಶುಭಾಶಯಗಳು..

1948 ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು  ಆಚರಣೆ ಮಾಡಲು 61 ದೇಶಗಳು ಈ ವಿಶ್ವ ಆರೋಗ್ಯ ಸಂಸ್ಥೆಯ ರಚನೆಯ ಒಪ್ಪಂದಕ್ಕೆ ಸಹಿ ಹಾಕಿದವು. ಈ ದಿನವನ್ನು ಮೊದಲ ಬಾರಿಗೆ ವಿಶ್ವ ಆರೋಗ್ಯ ದಿನವನ್ನಾಗಿ 1949ರಲ್ಲಿ ಜುಲೈ 22ರಂದು ಆಚರಣೆ ಮಾಡಲಾಯಿತು. ನಂತರ ಏಪ್ರಿಲ್ 07ಕ್ಕೆ ವಿಶ್ವ ಆರೋಗ್ಯ ದಿನವನ್ನಾಗಿ ಆಚರಣೆ ಮಾಡಲು ನಿರ್ಧಾರ ಕೈಗೊಳ್ಳಲಾಯಿತು.

ಪ್ರತಿ ವರ್ಷ ಈ ದಿನವನ್ನು ವಿಶೇಷ ಘೋಷವಾಕ್ಯದೊಂದಿಗೆ ಆಚರಣೆ ಮಾಡಲಾಗುತ್ತದೆ. ಈ ಬಾರಿ " ಎಲ್ಲರಿಗೂ ಆರೋಗ್ಯ" ಎಂಬ ಘೋಷವಾಕ್ಯ ಮಾಡಲಾಗಿದೆ. ಆರೋಗ್ಯ ಮತ್ತು ಸ್ವಾಸ್ಥ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಮನುಷ್ಯನು ಆರೋಗ್ಯಕರವಾಗಿ ಜೀವನ ನಡೆಸಲು ಸಹಾಯ ಮಾಡಲು ಈ ದಿನ ಹಲವು ಸಲಹೆಗಳನ್ನು ನೀಡಲಾಗುತ್ತದೆ.

- ಆಶಾ ಎಲ್. ಎಸ್, ಶಿವಮೊಗ್ಗ.


ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...