ಬುಧವಾರ, ಸೆಪ್ಟೆಂಬರ್ 13, 2023

ಶಾಪಗ್ರಸ್ಥ ಅಪ್ಪ (ಕವಿತೆ) - ಎ. ಎನ್. ರಮೇಶ್, ಗುಬ್ಬಿ.

ಅಮ್ಮ ಪ್ರಸವ ವೇದನೆಯಲಿ ನೋವಿನಲಿ
ನರಳುತ್ತಿದ್ದರೆ ಹೆರಿಗೆಕೋಣೆಯ ಒಳಗೆ..
ಒಂದೆಡೆ ಕೂರದೆ ನಿಲ್ಲದೆ ಕಳವಳಿಸುತ್ತಿದ್ದ
ಅಪ್ಪ ಇದ್ದಬದ್ದ ದೇವರನೆಲ್ಲ ಜಪಿಸುತ್ತಿದ್ದ
ಕ್ಷಣಕ್ಷಣ ಜೀವವ ಹಿಡಿದು ಮುಷ್ಟಿಯಲಿ
ತಪಿಸಿ ಪರಿತಪಿಸಿ ಚಡಪಡಿಸುತ್ತಿದ್ದ ಹೊರಗೆ
ಸತಿಸುತರ ವಿಷಯದಿ ಮಹಾಪುಕ್ಕಲ ಅಪ್ಪ.!

ಹಗಲಿರುಳು ದುಡಿದು ಓದಿಸಿ ಬೆಳೆಸಿದ ಮಗ
ಮುಂದೊಂದು ದಿನ ಎಲ್ಲರೆದುರು ಕಡೆಗಣಿಸಿ
“ಜಾಸ್ತಿ ಓದಿಲ್ಲ ನನ್ನಪ್ಪ, ನನ್ನಷ್ಟು ತಿಳಿದಿಲ್ಲ..”
ಎಂದು ಮೂದಲಿಸುವಾಗ ಪೇಲವ ನಗೆನಕ್ಕು
ಜಗದೆದುರು ಮೂರ್ಖನಾಗುವ ಬೆಪ್ಪುತಕ್ಕಡಿ ಅಪ್ಪ.!
ಹೆಗಲಲ್ಲಾಡಿದ ಮಗನೇ ಹಗುರಾಗಿ ಕಾಣುವಾಗ
ಸಂಕಟ ನುಂಗಿಕೊಳ್ಳುವ ನಿಷ್ಪಾಪಿಜೀವ ಅಪ್ಪ.!

ಕೇಳಿ ಕೇಳಿದ್ದನ್ನೆಲ್ಲ ಕೊಡಿಸಿ ಮುದ್ದುಮಾಡಿ ಮೆರೆಸಿ
ಅಕ್ಷರಶಃ ರಾಜಕುಮಾರಿಯಂತೆ ಬೆಳೆಸಿದ ಮಗಳು..
ತಾನೇ ಕಣ್ಣಲ್ಲಿ ಎಣ್ಣೆ ಹಾಕಿ ಹುಡುಕಿದ ಸಿರಿವಂತರ
ಮನೆಗೆ ಸೊಸೆಯಾಗಿ ಹೋದಮೇಲೆ ಉಢಾಫೆಯಲಿ
“ನನ್ನ ಗಂಡನಷ್ಟು ದುಡ್ಡಿಲ್ಲ, ದುಡಿದಿಲ್ಲ ಬಡವ ನನ್ನಪ್ಪ”
ಎಂದಾಗ.. ಎತ್ತಾಡಿಸಿದ ಮನೆಮಗಳೇ ಎತ್ತಾಡುವಾಗ..
ಮೌನದಿ ಹಿಡಿಜೀವವಾಗುವ ಬಡಪಾಯಿ ಅಪ್ಪ.! 

‘ಮಕ್ಕಳಿಗೆ ಆಸ್ತಿ ಮಾಡಬೇಡಿ ಮಕ್ಕಳನೇ ಆಸ್ತಿಮಾಡಿ’
ಎಂಬ ವೇದಾಂತಿಗಳ ನುಡಿ ಕೇಳಿ ಮಕ್ಕಳಿಗೆ ಹಾಗೆ
ಚೆಂದದ ಬದುಕು ಭವಿಷ್ಯ ಕೊಟ್ಟರೂ, ಕಡೆಗವರು..
“ನಮ್ಮಪ್ಪ ಹಣ ಜಮೀನು ಮಾಡದ ಮಹಾಉಡಾಳ’
ಎಂದು ಲೋಕಕೆಲ್ಲ ಸಾರುವಾಗ, ಹಂಗಿಸಿ ಆಡುವಾಗ
ಒಳಗೊಳಗೆ ಕುಗ್ಗಿ ಹೋಗುವ ಕನಿಷ್ಟದವನು ಅಪ್ಪ
ಎಲ್ಲ ಮಾಡಿ ಎಲ್ಲಿಯೂ ಸಲ್ಲದ ಶಾಪಗ್ರಸ್ಥ ತ್ರಿಶಂಕು ಅಪ್ಪ.!

ಮಾಡಿಟ್ಟಮನೆ, ಕೂಡಿಟ್ಟಹಣ ಹಂಚಿಕೊಂಡ ಮಕ್ಕಳು
ಅಗುಳಗುಳಿಗು ಲೆಕ್ಕಿಸುವಾಗ, ಅಡಿಗಡಿಗು ಹಳಿವಾಗ
ಅವಡುಗಚ್ಚುತ ಸಹಿಸಿಕೊಳ್ಳುವ ಅಸಹಾಯಕ ಅಪ್ಪ
ತಾ ಹೆತ್ತು ಹೊತ್ತ ಮಕ್ಕಳೇ, ತನ್ನನೇ ಹೊರೆಯೆಂದು
ಬೀದಿಪಾಲು ಮಾಡಿದಾಗ, ವೃದ್ದಾಶ್ರಮಕೆ ದೂಡಿದಾಗ
ಇಳಿವಯಸಿನಲಿ ಅಬ್ಬೆಪಾರಿಯಾಗುವ ಅಶಕ್ತ ಅಪ್ಪ
ಅಳುವುದ ಬಲ್ಲದ, ಅಳಲೊಲ್ಲದ ಆತ್ಮಾಭಿಮಾನಿ ಅಪ್ಪ.!  



- ಎ.ಎನ್.ರಮೇಶ್. ಗುಬ್ಬಿ.

ನನ್ನ ಕಂದ (ಭಾವಗೀತೆ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ, ಇಳಕಲ್.

ಮಗುವೆ ನಿನ್ನ ನಗುವಿನಲ್ಲಿ 
ಗೆಲುವಿನಲೆಯ ಕಂಡೆನಿಲ್ಲಿ 
ಬಸಿರ ಹಸಿರ ಉಡುಗೆಯಲ್ಲಿ 
ಏನಿದು ಹೊಸ ಅನುಭವ... l 
                                 llಪಲ್ಲವಿ ll
ನನ್ನ ಮಡಿಲ ಕುಡಿಯು ನೀನು 
ನಮ್ಮ ಬಾಳಿನ ಬೆಳಕು ನೀನು 
ಗಗನದಿ ಹೊಳೆವ ತಾರೆಯಂತೆ 
ಬೆಳಗು  ನೀನೆಂದೆಂದಿಗೂ...... ಬೆಳಗು
  ನೀನೆಂದೆಂದಿಗೂ.....
                                 ಚರಣ ೧
ನಿನ್ನ ತುಂಟಾಟದಾಟಗಳು 
ನಿನ್ನ ಮುಗ್ಧ ಅಳುವಿನ ಕರೆಯು
ಸೆಳೆಯಿತೆನ್ನನು ನಿನ್ನ ಬಳಿಯಲಿ
ಬಾಚಿತಬ್ಬಿಕೊಳ್ಳಲು.... ಅಪ್ಪಿ ಮುದ್ದಾಡಲು...
                                   ಚರಣ ೨

ನಾಡಿನೊಳಿತಿಗಾಗಿ ಬಾಳು 
ನಾಡಜನರ ಕುವರನಾಗು 
ನಾದಲೋಕದ ಮುರಳಿಯಾಗು 
ನಾರಿದೇವಕಿ ಕಂದ ಕೃಷ್ಣನಂತಾಗು....
                                      ಚರಣ ೩

- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ, ಇಳಕಲ್.

ಶರಣ ಪುರದ ನಾಗಣ್ಣ (ಲೇಖನ) - ಶ್ರೀಮತಿ ಸುಲೋಚನಾ ಮಾಲಿ ಪಾಟೀಲ.

ಹನ್ನೆರಡನೆಯ ಶತಮಾನದ ಕಾಲಘಟ್ಟ
ಒಟ್ಟಾರೆ ಹೇಳುವುದಾದರೆ ಅದೊಂದು ವ್ಯಕ್ತಿ ಮತ್ತು ಸಮಾಜದ ಆಂತರ್ಯದಲ್ಲಿನ ಸರ್ವತೋಮುಖದ ಸಂಘರ್ಷದ ಪರ್ವ ಕಾಲವಾಗಿದೆ. ಇದಕ್ಕೆ ಸಾಕ್ಷಿಯಾಗಿ ಅಪ್ಪ ಬಸವಾದಿ ಶರಣರು ಮಾಡಿದ ಆ ಕಲ್ಯಾಣ ಕ್ರಾಂತಿಯ ಚಾರಿತ್ರಿಕ ಘಟನೆಗಳನ್ನು ಹಾಗೂ ವಚನಗಳ ಆಂತರ್ಯದ ಆಳವನ್ನು ಪರಿಶೀಲನೆ ಮಾಡಿ ನೋಡ ಬಹುದಾಗಿದೆ. ಇಂದು ಶರಣರು ಹಾಗೂ ವಚನಗಳು ಜನಮಾನಸದಲ್ಲಿ ಉನ್ನತ ಸ್ಥಾನವನ್ನು ಪಡೆದಿವೆಯೇನೋ ನಿಜ. ಆದರೆ, ಅಂದು ಶರಣರು ಎದುರಿಸಿದ ಸಂಘರ್ಷ ವ್ಯಕ್ತಿ ನೆಲೆಯಲ್ಲಿ ಹಾಗೂ ಸಾಮಾಜಿಕ ನೆಲೆಯಲ್ಲಿ ಎಂಥಾ ಕಡುಕಷ್ಟದ್ದಿತ್ತು ಎಂಬ ಸಂಗತಿಯೇ ಹೃನ್ಮನಗಳ ಹಿಂಡುತ್ತದೆ. ಅಂತಹವರಲ್ಲಿ ನಮ್ಮ ಪುರದ ನಾಗಣ್ಣನವರ ಹತ್ತು ವಚನಗಳು ಪ್ರಚಲಿತದಲ್ಲಿವೆ.
ಬಸವಾದಿ ಶರಣರ ಸ್ತುತಿ, ನಿಜಾನಂದ ಭಕ್ತಿಯ ಬಯಕೆ, ಗುರುಪಾದೋದಕದ ಮಹಿಮೆ, ಶರಣನ ಸ್ವರೂಪ, ಲಿಂಗನಿಷ್ಠೆ ಮೊದಲಾದ ವಿಷಯಗಳ ವಿವರಗಳು ಇವರ ವಚನಗಳಲ್ಲಿ ಕಂಡುಬರುತ್ತವೆ.  ಕೆಲವು ವಚನಗಳು ಬೆಡಗಿನ ಪರಿಭಾಷೆಯಲ್ಲಿವೆ. ಇನ್ನು ಕೆಲ ವಚನಗಳಲ್ಲಿ ಈ ಪುರದ ನಾಗಣ್ಣನವರು ಪಾದೋದಕದ ಮಹಿಮೆಯನ್ನು ಹೇಳಿರುವರು.
ಈ ಶರಣರ ಜನ್ಮಸ್ಥಳ ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಅಮರಗುಂಡ ಗ್ರಾಮವಾಗಿದೆ. ಕಾಲ ೧೧೬೦, ಇವರ ತಂದೆ ಅಮರಗುಂಡ ಮಲ್ಲಿಕಾರ್ಜುನರು. ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲಿ ಪುರದ ನಾಗಣ್ಣ ಕೂಡ ಒಬ್ಬ ವಚನಕಾರ ಶರಣರು. 'ಅಮರಗುಂಡದ ಮಲ್ಲಿಕಾರ್ಜುನ' ಅಂಕಿತನಾಮದಲ್ಲಿ  ಶರಣರು ಬರೆದ ಹತ್ತು ವಚನಗಳು ದೊರೆತಿವೆ.    

ವಚನ 
ನೆನೆವ ಮನಕ್ಕೆ ಮೆತ್ತನೆ ತೋರಿದೆ
ನೋಡುವ ಕಣ್ಣಿಗೆ ಹೆಣ್ಣನೆ ತೋರಿದೆ
ಪೂಜಿಸುವ ಕೈಗೆ ಹೊನ್ನನೆ ತೋರಿದೆ
ಇಂತೀ ತ್ರಿವಿಧವನೆ ತೋರಿ ಕೊಟ್ಟು ಮರಹನಿಕ್ಕಿದೆಯಯ್ಯಾ
ಅಮರಗುಂಡ ಮಲ್ಲಿಕಾರ್ಜುನಯ್ಯಾ
ನೀ ಮಾಡಿದ ಬಿನ್ನಾಣಕ್ಕೆ ನಾನು ಬೇರಗಾದೆನು

ವಿಶ್ಲೇಷಣೆ
ಲಿಂಗ ನೆನೆಯುವ ಮನಸ್ಸಿನಲ್ಲಿ ಭೂಮಿ ಗಳಿಸುವ ಆಸೆ ತೋರಿದೆ. ಲಿಂಗ ನೋಡುವ ಕಣ್ಣಿಗೆ ಹೆಣ್ಣನ್ನು ತೋರಿಸಿದೆ.ಪೂಜಿಸುವ ಕೈಗೆ ಹೊನ್ನಿನ ಆಸೆ ತೋರಿಸಿ ನಿನ್ನ ಮರೆವನ್ನು ಕೊಟ್ಟೆ. ಮಲ್ಲಿಕಾರ್ಜುನಾ ನೀ ತೋರಿದ ನಾಟಕವನ್ನು, ಮೋಹಮಾಯೆಯನ್ನು ನೋಡಿ ಬೆರೆಗಾದೆನು.
ಪರಮಾತ್ಮನು ಭಕ್ತನಿಗೆ ಹೆಣ್ಣು, ಹೊನ್ನು, ಮಣ್ಣನ್ನು ತೋರಿಸಿಕೊಟ್ಟು ತನ್ನ ಧ್ಯಾನದಿಂದ ಮರೆಯಾಗುವ ಕತೆ ಮಾಡಿದ ಮಾಯಾಜಾಲ ನನ್ನು ಕಂಡು ಬೆರಗಾಗಿದ್ದೆನೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಶರಣರು ಈ ಅರಿವಿನ ಮೂಲ ಅರಿತು ಆಸೆಯ, ಮಾಯೆಯ ಒಳಗಾಗದೆ ಮುಕ್ತರಾಗಿದ್ದಾರೆ.
ಅಲ್ಲಮ ಪ್ರಭುಗಳ ಒಂದು ವಚನ ಕೂಡ ಹೀಗೆ ಇದೆ. 
ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ.

ತಮ್ಮ ಒಂದು ವಚನದಲ್ಲಿ; ಬೇಸಾಯದ ಕ್ರಿಯೆಯನ್ನು ಹೇಳುತ್ತಾ ಆಧ್ಯಾತ್ಮವನ್ನು ಅದಕ್ಕೆ ಅನ್ವಯಿಸುವರು. ಭಕ್ತನ ಲಿಂಗ ಭಿನ್ನವಾಗಲು ಆ ಲಿಂಗದೊಡನೆ ಪ್ರಾಣ ವನ್ನು ಬಿಡಬೇಕೆನ್ನುವ ನಿಷ್ಠುರ ವ್ರತವನ್ನು ಆಚರಿಸ ಬೇಕೆಂದು ಪ್ರತಿಪಾದಿಸಿದ ನಿಷ್ಠುರ ಶರಣರಿವರು.

ವಚನ

ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ: 
ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ ದೇವಾ 
ನಿಮ್ಮತ್ತಲೊಂದೆಳವುತ್ತಲದೆ.
ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿ ಯಿಡುವೆನಯ್ಯಾ ನಾನು ?
ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ.      ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ.
ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ
ತಂದೆ ಈ ದಂದುಗವ ಮಾಣಿಸಿ
ನಿಮ್ಮ ನಿಜಾನಂದ ಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ.
  
ವಿಶ್ಲೇಷಣೆ 

 ಇಲ್ಲಿ ವಚನಕಾರರು ಅಂದಿನ ಕಾಲದ ವ್ಯಕ್ತಿ ತಾನು ಭಕ್ತಿಯ ಮಾರ್ಗಕ್ಕೆ ಬರುವ ಹಂಬಲದಿಂದ ಶರಣನಾಗಲು ಬಂದು ಸೇರಿದಂತೆಯೇ ಎದುರಿಸುವ ಆಂತರಿಕ ಸಂಘರ್ಷದ ತುಮುಲವನ್ನು ತಿಳಿಸಿದ್ದಾರೆ. ಇಲ್ಲಿ ಕಾಯದ ಅರುವಿನ ಅಂಗಪ್ರಜ್ಞೆಯಲ್ಲಿ ತನ್ನನ್ನು ತಾನು ಪರಿಶೀಲಿಸಿ ನೋಡಿದರೆ ಸ್ಪಷ್ಟವಾಗಿ ಎರಡು ಸ್ಥಿತಿ ಕಂಡಿವೆ. ಅದರ ಬಗ್ಗೆ ವಚನಕಾರರು ತಮ್ಮ ಇಷ್ಟಲಿಂಗಕ್ಕೆ ನಿವೇದನೆ ಮಾಡಿಕೊಂಡು, ಒಂದು ಭ್ರಾಂತಿಯತ್ತ ಎಳೆಯುತ್ತದೆ ಮತ್ತೊಂದು ನಿಮ್ಮತ್ತ ಎಳೆಯುತ್ತದೆ ದೇವಾ ಎನ್ನುವರು. ಇವು ಪರಸ್ಪರ ಅರಿತು ಅನುಸರಿಸಿ ನಡೆಯದೇ ಇರುವಾಗ ನಾನು ಸತ್ಪಥಕ್ಕೆ (ನೇರ)ಹೇಗೆ ಅಡಿಯಿಡಲು ಸಾಧ್ಯವೆನ್ನುವರು.
ಹೀಗೆ ಅವುಗಳ ಪರಸ್ಪರರ ಸಂಘರ್ಷದಲ್ಲಿ ಕಾಲಚಕ್ರದಲ್ಲಿ ಹುಟ್ಟಿ, ಕರ್ಮ ಚಕ್ರದಲ್ಲಿಯೇ ಆಯುಷ್ಯ ಕಳೆಯುತ್ತಿದ್ದೆ. ಎರಡು ತಲೆಯ ಗಂಡಬೇರುಂಡ ಪಕ್ಷಿಯಂತೆ ಒಂದು ತಲೆಯಿಂದ ವಿಷವನ್ನು ಮತ್ತೊಂದರಿಂದ ನಿರ್ವಿಷವನ್ನು ಸೇವಿಸಿದಂತೆ ಆಗಿದೆ. ಅಂದಿನ ಅರಿವು ಅಂದಿಗೇ ಮರೆತು ಹೋಯಿತೆಂದು ಪರಿತಪಿಸುವರು. ಮುಂದೆ ಇಷ್ಟಲಿಂಗ ಸಾಧನೆಯನ್ನು ಮಾಡಲು ಯಾವಾಗ ಯತ್ನಿಸುತ್ತಿದ್ದಾರೆಯೋ ಆಗ ಈ ರೀತಿಯ ಗೊಂದಲ ಉಂಟಾಗುತ್ತದೆ. ಇದನ್ನು ಹೋಗಲಾಡಿಸಿ, ನಿಮ್ಮ ನಿಜಾನಂದ ಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ ಎಂದು ಪರಿಪರಿಯಾಗಿ ಬಿನ್ನವಿಸುವಲ್ಲಿ ಶರಣತತ್ವ ಗಳ (ಇಷ್ಟಲಿಂಗದ) ನಿಜವಾದ ಅನುಷ್ಠಾನ ಎಷ್ಟು ಕಷ್ಟದ್ದೆಂಬುದನ್ನು ಈ ವಚನದಲ್ಲಿ ಲೌಕಿಕದ ನೇರ ಅನುಭವದ ಚಿತ್ರಣ ನೀಡುವ ಮೂಲಕ ಸ್ಪಷ್ಟಪಡಿಸಲಾಗಿದೆ.

- ಶ್ರೀಮತಿ ಸುಲೋಚನಾ ಮಾಲಿ ಪಾಟೀಲ.


ಸುಂಕದವನು (ಕವಿತೆ) - ಪ್ರೊ ಗಂಗಾರಾಂ ಚಂಡಾಲ, ಮೈಸೂರು.

ಒಂದು ಬಾರಿ ಅವಕಾಶ ತಾನಾಗಿ ಮೂಡಲಿದೆ ನಾಟ್ಯ

ಮತ್ತೊಂದು ಬಾರಿ ಅವಕಾಶ ದುಪ್ಪಟ್ಟು ಬೆಲೆ ರೈತರ ಬೆಳೆಗಳಿಗೆ

ನಾನೊಂದು ಭರವಸೆಯ ಬೆಳಕು ವಿಶ್ವದ ಮುಂದೆ ತಲೆ ಎತ್ತಲು

ಸವೆಸಿ ಹತ್ತು ವರ್ಷಗಳು ಅಮೃತ ಕಾಲ ಮುಂದುವರಿಯುವ ಆಸೆ

ಗಾಂಧಿ ಜಯಂತಿ ಆಚರಣೆ ಮಾಡುತ್ತಲೆ ಗಾಂಧಿಗೆ ಗುಂಡು ಹೊಡೆದವರಿಗೆ ಶಾಸಕ ಸ್ಥಾನ
ಮಂದಿರದಲ್ಲಿ

ಆಹಾರ ಕಾಯ್ದೆ ಅಪೌಷ್ಟಿಕತೆ ವಿಶ್ವ ನುಡಿ ನಾಲಿಗೆ ಹಿಂದೆ ಸರಿದಿದೆ

ನುಡಿ ಸ್ವಾತಂತ್ರ್ಯ ಸುಂಕದೆಸರಲ್ಲಿ ತನಿಖೆ ತನ್ನ ಪರ ಮಾತಾಡುವವರನ್ನಾಗಿ ಮಾಡಲೆಂದು

ಕಾದ ಹೆಂಚಿನ ಮೇಲೆ ಹಾಕಿ ಕೆನ್ನೆ ಸವರುತ್ತಾ ಉರಿ ಹೆಚ್ಚು ಹೆಚ್ಚು

ಮಕ್ಕಳ ಹೆರುವಂತೆ ಸನ್ಯಾಸಿ ಉಪದೇಶ ಹತ್ತು ದೇಶಕ್ಕಾಗಿ

ಸುಂಕ ವಸೂಲಿ ಮಾಡುವ ಆಸೆ
ಸಾಕುವ ಉಸಾಬರಿ ಬೇಡ

ಮಕ್ಕಳು ಬಡವರಾಗಿಯೇ ಇರಬೇಕು ಹೇಳಿದಂತೆ ಕೇಳಲು ಲಜ್ಜೆಗೇಡಿ ಮನಸ್ಸು

ಸೈನಿಕರಲ್ಲಿ ಹೆಣ್ಣಿನ ಪಡೆ ಪಥಸಂಚಲನ ಅಯ್ಯಪ್ಪನ ದರ್ಶನ ದೂರ ದೂರ ಸುಪ್ರೀಂ ಹೇಳಿದರು

ಸುಂಕದವರು ಸ್ವಾಮಿ ಕನಿಕರ ಇಲ್ಲದವರು ಉಳ್ಳವರಿಗೆ ಉಚಿತ ಸಾಲ ಮನ್ನಾ 

ನಿಗಿ ನಿಗಿ ಕೆಂಡ ಹಾಗೆಯೇ ಇರದು ಇದ್ದಲು ಅಥವಾ ಬೂದಿ ಆಗಬೇಕು ಚುನಾವಣೆಯಲ್ಲಿ

ಅವಸರ ಮರೆವು ತಾನು ನೀಡಿದ ಭರವಸೆ ಸೆಡವು ಸುಟ್ಟುಕೊಂಡ ಚೊರ್ರೆಂದು

ಬೂದಿಯಲ್ಲಿ ಮಲಗಿ ಹೇತು ನಾತ ಹೊಡೆದರು ಸುಗಂಧ ಜನರಿಗಾಗಿ ಹದಿನೆಂಟು ಗಂಟೆ ದಿನಕ್ಕೆ

ದಾರಿ ನಡೆದದ್ದು ಕರ್ಮ ಸಿದ್ಧಾಂತ ನಂಬುವ ಹಾಗೆ ಅರಮನೆ ಬಂದೀಖಾನೆ ಆದೀತು

ಬಲಗಾಲದಲ್ಲಿ ಒದ್ದರೆ ಒಳ್ಳೆಯ ಕಾರ್ಯಕ್ರಮವೇ ಘೋಷಣೆಯೆ

ಬಿಕ್ಕಳಿಕೆ ಬರುತ್ತೆ ಎಂದು ನೀರು ಹಿಡಿದು ಸುಪ್ರಭಾತ ಹೇಳುವ ಹಾಗೆ ಸುಂಕ ವಸೂಲಿ

ಕತ್ತಿ ಅಲಗಿನ ಮೇಲೆ ನಡೆದು ಹೆಜ್ಜೆ ತಪ್ಪಿ ಹೋಯಿತು ಓಟು ಮುಳುವಾಯಿತು ಹೆಣ್ಣೆಂದು ತಿಳಿದು

ಹಗೆ ಸಾಧಿಸುವ ರೀತಿ ಸುಂಕ ಹೆಚ್ಚಳ ಪೆಟ್ರೋಲ್ ಖಾಸಗಿ ದರ ಮೀರಿ

ಪಾಪ ಪುಣ್ಯ ಉಳ್ಳವರಿಗೆ ಮಾತ್ರ ಬಡವರಿಗೆ ಸಾಲ ಉಳಿಯಿತು ಅಭಿವೃದ್ಧಿ ಹೆಸರಲ್ಲಿ

ಬಣ್ಣಗೆಟ್ಟ ಬಾವುಟವನ್ನು ಎತ್ತಿ ಎತ್ತಿ
ಓಟು ಕೇಳಿದರೆ ಸಾಕು ಪ್ರತಿಯೊಬ್ಬರ ಇವಿಎಂ ಒಳಗೆ ಕರಾಮತ್ತು

ಹಸಿವೆ ತಿಳಿಯದವರು ಬೆಂದು ಅನ್ನವಾಗಲು ಬಿಡದೆ ಸುಂಕ ಕೊಟ್ಟಿಲ್ಲ ಎಂದು

ಅರ್ದ ಸುಟ್ಟ ಕಟ್ಟಿಗೆ ತುಂಡು ಕರಕಲಾಗಿ ತಣ್ಣಗೆ ಇದ್ದಿಲಾಗದೆ ಪರಿತಪಿಸುತ್ತದೆ

ಕಹಿ ನೋವಿನ ಕಣ್ಣಿರ ಇಂಗುಗುಂಡಿ ಗಂಟಲಲ್ಲಿ ಸಮಾಧಿ ಹೆಸರು ಅಭಿವೃದ್ಧಿ

ವೀರ್ಯ ಫಲಿಸದಿರಲು ಕಸರತ್ತು ದಾಳಿ ತನ್ನ ಒಪ್ಪದವರ ಅನ್ನದ ಶಾಪ ಉಚಿತ ಕಡಿತ

ಹತ್ತಿಕ್ಕುವ ಕುತ್ತಿಗೆಗೆ ಕೈ ಹಾಕಿ ಕೈಗೆ ಬೇಡಿ ಹಾಕುವ ಪ್ರತಿಜ್ಞೆ ಪತ್ರಕರ್ತರಿಗೆ

ಬದುಕು ಕಾದ ಹೆಂಚು ಅಚ್ಚೇ ದಿನ ಆಯೇಗಾ ಸುಟ್ಟುಕೊಂಡ ಬೆರಳು ಮಸಿ ಗುರುತು

ಆ ರಾತ್ರಿ ಕಣ್ಮುಚ್ಚಿ ಕುಳಿತ ಹೆಣ್ಣು ಮರು ದಿನ ಬೆಳಗು ನಗುವ ಹಾಗೆ ಸುಮ್ಮನೆ ನಿಂತಳು

ತುಡುಗು ದನಗಳು ಆಯ್ಕೆ ಶಾಸನಸಭೆಗೆ ಬೆರಗು ಮಾತುಗಳಿಗೆ

ಸುಂಕ ಜಾಸ್ತಿ ಆಯಿತು ಸುಂಕ ಕಡಿಮೆ ಮಾಡುತ್ತೇವೆ ಜನದನ್ ಗ್ಯಾರಂಟಿ

ಹೆಣ್ಣಿನ ಶಾಪ ಗೆಜ್ಜೆ ತಪ್ಪಿದರೂ ನಾಟ್ಯವೆಂದು ಹೇಳುವವರಿಗೆ ಅಭಿವೃದ್ಧಿ ಮಂಕಾಗಿ

ಸೀದು ಹೋದ ಬದುಕು ಕಾನೂನು ಪಾಲನೆ ಕೆಲವರಿಗೆ

ಅದೆಷ್ಟು ಸುಂಕ ಹೆಚ್ಚಳ ಸಹಿಸಬೇಕು ಕೆಲವು ಸರದಾರರ ಮೋಜು ಮಸ್ತಿಗಾಗಿ.

- ಪ್ರೊ ಗಂಗಾರಾಂ ಚಂಡಾಲ, ಮೈಸೂರು. 

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...