ಶನಿವಾರ, ಜೂನ್ 26, 2021

ಚುಟುಕು ಕವಿತೆಗಳು - ಭರತ್ ಕುಮಾರ್ ಆರ್.

ಚುಟುಕುಗಳು

ಅಡುಗೆ ಕೆಟ್ಟರೆ ಒಂದು ದಿನದ ದು:ಖ
ಮಾತು ಕೆಟ್ಟರೆ ಒಂದು ವಾರದ ದು:ಖ
ಪ್ರೀತಿ ಕೆಟ್ಟರೆ ಒಂದು ವಷ೯ದ ದು:ಖ
ಬದುಕೆ ಕೆಟ್ಟರೆ ಇಡೀ ಜೀವನವೇ ದು:ಖ



ಗುಣ ಇಲ್ಲದಿದ್ದರೆ ರೂಪ ವ್ಯಥ೯
ಸಮಗ್ರತೆ ಇಲ್ಲ ದಿದ್ದರೆ ವಿದ್ಯೆ ವ್ಯರ್ಥ
ಉಪಯೋಗಿಸದಿದ್ದರೆ ಧನ ವ್ಯರ್ಥ 
ಹಸಿವಿಲ್ಲ ದಿದ್ದರೆ ಭೋಜನ ವ್ಯರ್ಥ
ಪೊಜೆ ಇಲ್ಲ ದಿದ್ದರೆ ಪ್ರತಿಮೆ ವ್ಯಥ೯
ಗುರು ಇಲ್ಲ ದಿದ್ದರೆ ಸಾಧನೆ ವ್ಯರ್ಥ
ನೀನನ್ನು ನೀ ಅರಿಯದಿದ್ದರೆ ಜೀವನವೇ‌ ವ್ಯರ್ಥ



 ಹುಟ್ಟಿದ ಊರನ್ನು ಮರೆಯೋಕಾಗಲ್ಲ
ತಾಯಿ ಋಣವನ್ನು ತೀರಿಸೋಕೆ ಆಗಲ್ಲ
ಬಯಸದೆ ಬಂದ ಪ್ರೀತಿನ ಬಿಡೊಕಾಗಲ್ಲ
ಜೀವಕ್ಕೆ ಜೀವವಾಗಿರೂ ನಿಮ್ಮನ್ನು
ಕಂಡಿತ ಮಿಸ್ ಮಾಡೋಕಾಗಲ್ಲ


ಭರತ್ ಕುಮಾರ್ ಆರ್
ಕೊಣನೂರು
✍️✍️✍️✍️✍️.


(ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448241450 ಸಂಪಾದಕರು ವಿ ಮ ಸಾ ಪತ್ರಿಕೆ )

ಮುಂಜಾಗ್ರತೆಯ ಜನಜಾಗೃತಿ (ಕರೋನಾ ಜಾಗೃತಿ ಕತೆ) - ಕೊಂಡಮ್ಮ ಪ್ರಭಾಕರ್

*ಕರುನಾಡು ಸಾಹಿತ್ಯ ಪರಿಷತ್ತು*
*ಜಿಲ್ಲಾ ಘಟಕ - ಕೋಲಾರ ಹಾಗೂ ಶ್ರೀ ಟ್ರಸ್ಟ್, ಬೆಂಗಳೂರು*
*ರಾಜ್ಯ ಮಟ್ಟದ ಕಥಾ ಸ್ಪರ್ಧೆಗಾಗಿ*
*ದಿನಾಂಕ: ೨೦.೬.೨೦೨೧*

*ವಿಷಯ: ಕೋವಿಡ್ - ೧೯ ನಿಯಂತ್ರಣ ಹಾಗೂ ವ್ಯಾಕ್ಸಿನ್ ಕುರಿತ ಜಾಗೃತಿ*

ಕರುನಾಡು ಕಥಾ ಸ್ಪರ್ಧೆ ಯಲ್ಲಿ ಸಮಾಧಾನಕರ ಸ್ಥಾನ ಪಡೆದ ಕತೆ

*ಕಥಾ ಶೀರ್ಷಿಕೆ: ಮುಂಜಾಗ್ರತೆಯ ಜನಜಾಗೃತಿ*

ನಗರದಲ್ಲಿ ಎಲ್ಲಾ ಕಡೆ ಕಟ್ಟಡದ ಕೆಲಸವೆಲ್ಲಾ ನಿಂತುಹೋಯಿತು. ಹನುಮಪ್ಪ ಕೂಲಿ ಕೆಲಸ ಸಿಗದೆ, ಎರಡು ದಿನ ಅಲೆದಾಡಿ, ಕೊನೆಗೆ ಹೇಗೋ ತನ್ನ ಸಣ್ಣಹಳ್ಳಿ ತಲುಪಿದ. ಹಳ್ಳಿಯ ಜನ ಹನುಮಪ್ಪನನ್ನು ಹಳ್ಳಿಗೆ ಹಿಂದಿರುಗಿ ಬರಲು ಕಾರಣವೇನೆಂದು ಕೇಳಿದರು. "ಏನೋ ಗೊತ್ತಿಲ್ಲ,  ನಗರದಲ್ಲಿ ಅಂಗಡಿಗಳು ಎಲ್ಲಾ ಮುಚ್ಚಿವೆ‌, ಕಟ್ಟಡದ ಕೆಲಸವೂ ನಿಂತು ಹೋಗಿದೆ.  ಶಾಲಾಕಾಲೇಜುಗಳು ಮುಚ್ಚಿವೆ. ಜನರು ಯಾರೂ ಓಡಾಡುವ ಹಾಗಿಲ್ಲ, ಬಸ್ , ಲಾರಿ ಯಾವುದೂ ಇಲ್ಲ.  ಎಲ್ಲಾ ಕಡೆ ಪೋಲೀಸರ ಕಾವಲು. ಎಲ್ಲರೂ ಮುಖಮುಚ್ಚಿ ಓಡಾಡುತ್ತಿದ್ದಾರೆ., ಏನೋ ರೋಗವಂತೆ. ನನಗೆ ಅದರ ಹೆಸರು ಹೇಳಲು ಬರುವುದಿಲ್ಲ, ಒಂದು ಗಾಡಿ ಸಿಕ್ತು, ಹೇಗೋ ಬಂದುಬಿಟ್ಟೆ" ಎಂದನು.  ಸ್ವಲ್ಪದಿನ ಕಳೆಯುವಷ್ಟರಲ್ಲಿ ಒಬ್ಬೊಬ್ಬರೇ ನಗರದಿಂದ ಹಳ್ಳಿಯ ಕಡೆ ಮುಖ ಮಾಡಿದರು. ಹನುಮಪ್ಪ ಜಮೀನ್ದಾರರೊಬ್ಬರ ತೋಟದಲ್ಲಿ ಕೂಲಿ ಕೆಲಸ ಮಾಡುತ್ತ ಪತ್ನಿ ರಾಧಮ್ಮ ಹಾಗೂ ಮೂರು ಜನ ಚಿಕ್ಕಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದನು.  ರಾಧಮ್ಮ ಮಕ್ಕಳನ್ನು ಮನೆಯಲ್ಲಿ ಬಿಟ್ಟು,  ಅಕ್ಕಪಕ್ಕದ ಮನೆಗಳಲ್ಲಿ ಹರಟೆ ಹೊಡೆಯುತ್ತಾ ಕಾಲಕಳೆಯುತ್ತಿದ್ದಳು. 

ಹನುಮಪ್ಪ ಕೆಲಸ ಮುಗಿಸಿ ಸಾಯಂಕಾಲ ಮನೆಗೆ ಬಂದಾಗ ಹೆಂಡತಿ ಜ್ವರದಿಂದ ನರಳುತ್ತಿದ್ದಳು. ಮಕ್ಕಳು ಹಸಿವಿನಿಂದ ಅಳುತ್ತಿದ್ದರು. ಹನುಮಪ್ಪ ದಿಕ್ಕು ತೋಚದೆ, ಕೊನೆಗೆ ಒಲೆಯ ಮೇಲೆ ಅಕ್ಕಿ ಇಟ್ಟು, ನೀರು ಹೆಚ್ಚಿಗೆ ಹಾಕಿ ಗಂಜಿ ಮಾಡಿ, ಮಕ್ಕಳಿಗೂ ಹಾಗೂ ಮಡದಿಗೂ ನೀಡಿ, ತಾನೂ ಕುಡಿದು ಮಲಗಿದರು.  ಮಾರನೇದಿನ ಬೆಳಿಗ್ಗೆ ಹನುಮಪ್ಪನಿಗೂ ಜ್ವರ ಕಾಣಿಸಿಕೊಂಡಿತು. ಬೆಳಿಗ್ಗೆ ಹೇಗೋ ಕಷ್ಟಪಟ್ಟು ಎದ್ದು, ಸ್ವಲ್ಪ ಅನ್ನ, ಸಾರು ಮಾಡಿ ಎಲ್ಲರಿಗೂ ತಿನ್ನಲು ಕೊಟ್ಟು, ತಾನೂ ತಿಂದು ತೋಟದ ಕೆಲಸಕ್ಕೆ ಹೋದನು.

ಸಾಯಂಕಾಲ ದಣಿದು, ತೋಟದಿಂದ ಹನುಮಪ್ಪ ಮನೆಗೆ ಬಂದಾಗ, ಪಕ್ಕದ ಮನೆಯ ಗಂಡಹೆಂಡತಿಯನ್ನು ಪಕ್ಕದೂರಿನ ಆಸ್ಪತ್ರೆಗೆ ಕೊಂಡೊಯ್ಯಲು ರುಗ್ಣಯಾನ (ಆಂಬುಲೆನ್ಸ್) ನಿಂತಿರುವುದು ಕಾಣುತ್ತದೆ. 
ಏನಾಯಿತೆಂದು ಅವರ ಮಗ ಕೇಶವನನ್ನು ವಿಚಾರಿಸಿದನು ಹನುಮಪ್ಪ.  ಕೇಶವ ಪದವೀಧರನಾಗಿ,  ನಗರದ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿರುವನು‌. ಸರ್ಕಾರವು ಲಾಕ್ಡೌನ್ ಘೋಷಿಸಿರುವ ಕಾರಣ, ಸಂಸ್ಥೆ ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ಹಳ್ಳಿಗೆ ಹಿಂದಿನ ದಿನವಷ್ಟೇ ಬಂದಿದ್ದನು. "ಒಂದು ವಾರದ ಹಿಂದೆ, ತಂದೆ ಪಟ್ಟಣಕ್ಕೆ ವ್ಯಾಪಾರಕ್ಕೆಂದು ಹೋಗಿದ್ದರು. ಸ್ವಲ್ಪ ದಿನಗಳ ನಂತರ ತಂದೆ ಹಾಗೂ ತಾಯಿ ಇಬ್ಬರಿಗೂ ಜ್ವರ ಬರುತ್ತಿತ್ತು. ನೆನ್ನೆಯಿಂದ ಇಬ್ಬರಿಗೂ ಉಸಿರಾಟದ ತೊಂದರೆ ಕಾಣುತ್ತಿದೆ,  ಅದಕ್ಕೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇನೆ" ಎಂದು ಹನುಮಪ್ಪನಿಗೆ ಹೇಳಿದನು ಕೇಶವ.

ಹನುಮಪ್ಪ ನಗರದಿಂದ ಬಂದಿದ್ದರೂ, ಕೊರೊನ ಸೋಂಕಿನ ಬಗ್ಗೆ ಸ್ವಲ್ಪವೂ ತಿಳಿದಿಲ್ಲ. ಕೇಶವ ತನ್ನ ತಂದೆತಾಯಿಯನ್ನು ಆಸ್ಪತ್ರೆಯಲ್ಲಿ ಸೇರಿಸಿ ಮನೆಗೆ ಬಂದನು. ಮುಖಕ್ಕೆ ಮುಖಕವಚ ಧರಿಸಿದ್ದನು. ಹನುಮಪ್ಪ ಹಾಗೂ ರಾಧಮ್ಮಳಿಗೂ ಜ್ವರ ಬಂದಿರುವುದು ತಿಳಿಯಿತು. ಕೇಶವನಿಗೆ ಇದು ಸೋಂಕಿನ ಲಕ್ಷಣವೇ ಎಂದು ಖಚಿತವಾಯಿತು.  ಏಕೆಂದರೆ ರಾಧಮ್ಮ ತನ್ನ ತಾಯಿಯ ಹತ್ತಿರ ಆಗಾಗ ಹರಟೆಗೆ ಕೂಡುತ್ತಿದ್ದಳು. ಕೇಶವ ಹನುಮಪ್ಪನಿಂದ ದೂರ ನಿಂತು "ನೀನು ಮತ್ತು ರಾಧಮ್ಮ ಇಬ್ಬರೂ ಬೇರೆ ಬೇರೆ ಕೋಣೆಯಲ್ಲಿ ವಾಸಮಾಡಿ, ವೈದ್ಯರು, ಔಷಧಿ ಹಾಗೂ ಊಟದ ವ್ಯವಸ್ಥೆ ನಾನು ಮಾಡುತ್ತೇನೆ.  ಇದು ಒಬ್ಬರಿಂದ ಒಬ್ಬರಿಗೆ ಹರಡಿ, ಉಸಿರಾಟದ ತೊಂದರೆ ಉಂಟಾಗುತ್ತದೆ. ಕೈಗಳನ್ನು ಸೋಪಿನಿಂದ ಆಗಾಗ್ಗೆ ತೊಳೆದು ಸ್ವಚ್ಛವಾಗಿರಿ, ಹೊರಗಡೆ ಬರಬೇಡಿ, ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು" ಎಂದನು.

ಹಳ್ಳಿಯವರನ್ನು ಕರೆದು, ಕೊರೊನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಶೀಘ್ರವಾಗಿ ಹರಡುವ ರೀತಿ, ಅದರಿಂದಾಗುವ ಪ್ರಾಣಹಾನಿಯನ್ನು ವಿವರಿಸಿದನು.  ಕೊರೊನಾ ಸೋಂಕು ಹರಡದಂತೆ ತಡೆಯಲು ಎಚ್ಚರಿಕೆಯ ಕ್ರಮಗಳನ್ನು ತಿಳಿಸಿದನು.  "ಒಬ್ಬರಿಂದ ಒಬ್ಬರು ದೂರದೂರವಿರಿ, ಹೊರಗೆ ಹೋಗುವಾಗ ತಪ್ಪದೆ ಮುಖಕವಚ ಧರಿಸಿ, ಆಗಿಂದಾಗ್ಗೆ ಸೋಪಿನಿಂದ ಕೈಗಳನ್ನು ತೊಳೆಯಿರಿ. ಅನಾವಶ್ಯಕವಾಗಿ ಹೊರಗಡೆ ಹೋಗಬೇಡಿ. ಮಕ್ಕಳಿಗೆ ಶಾಲೆಗಳು ಇಲ್ಲ.  ಮಕ್ಕಳನ್ನು ಜಾಗ್ರತೆಯಾಗಿ ನೋಡಿಕೊಳ್ಳಿ. ಮನೆಯಲ್ಲಿಯೇ ಓದಿಕೊಳ್ಳಲು ಹೇಳಿ. ಅಕ್ಕಪಕ್ಕದ ಮನೆಗಳಿಗೆ, ಬೇರೆ ಊರುಗಳಿಗೆ, ಸಮಾರಂಭಗಳಿಗೆ ಹೋಗಬೇಡಿ, ಗುಂಪು ಸೇರಬೇಡಿ, ನಿಮ್ಮ ಕುಟುಂಬದ ರಕ್ಷಣೆ ನಿಮ್ಮ ಕೈಯ್ಯಲ್ಲಿ" ಎಂದು ಕೊರೊನ ನಿಯಂತ್ರಣದ ಬಗ್ಗೆ ಹೇಳಿದನು. ನಗರ, ದೇಶ ಹಾಗೂ ಇಡೀ ವಿಶ್ವದ ನೋವಿನ ಚಿತ್ರಣವನ್ನು ವಿವರಿಸಿದನು. ದೇಶದಲ್ಲಿ ಲಾಕ್ಡೌನ್ ಇರುವುದರಿಂದ ಎಲ್ಲವೂ ಸ್ಥಗಿತಗೊಂಡಿದೆ. ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೆ ಆಚರಿಸುವುದು ನಾಗರೀಕರಾದ ನಮ್ಮೆಲ್ಲರ ಕರ್ತವ್ಯವೆಂದು ಸರಳವಾಗಿ ತಿಳಿಸಿದನು. 

ಕೇಶವ, ಮುಂದುವರೆದು "ಕೋವಿಡ್-೧೯ ನಿಯಂತ್ರಣಕ್ಕೆ ಎರಡು ರೀತಿಯ ವ್ಯಾಕ್ಸಿನ್ ನಮ್ಮ ದೇಶದಲ್ಲಿ ಲಭ್ಯವಿದೆ. ಈ ಲಸಿಕೆ ಹಾಕುವುದರಿಂದ,  ರೋಗವು ಬಂದರೂ, ಶ್ವಾಸಕೋಶದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿ,  ಪ್ರಾಣಹಾನಿಯಿಂದ ಪಾರಾಗಬಹುದು. ಎಲ್ಲರೂ ದಯವಿಟ್ಟು ತಪ್ಪದೇ ಹತ್ತಿರದ ಆಸ್ಪತ್ರೆಗೆ ತೆರಳಿ ಎರಡು ಬಾರಿ ಲಸಿಕೆ ಹಾಕಿಸಿಕೊಳ್ಳೋಣ, ಕುಟುಂಬ, ದೇಶ ಹಾಗೂ ವಿಶ್ವವನ್ನು ಕೊರೊನ ಮುಕ್ತವನ್ನಾಗಿ ಮಾಡೋಣ. ಭಯಪಡದೆ ಊಹಾಪೋಹಗಳಿಗೆ ಕಿವಿಗೊಡದೆ ಧೈರ್ಯದಿಂದ, ಮುಂಜಾಗ್ರತಾ ಕ್ರಮದಿಂದ ಆರೋಗ್ಯ ಕಾಪಾಡಿಕೊಳ್ಳೋಣ" ವೆಂದು ಹಳ್ಳಿಯ ಜನರಿಗೆ ಮನದಟ್ಟು ಮಾಡಿದನು. ನಿಯಮಗಳನ್ನು ಪಾಲಿಸಲು ಹಾಗೂ ಲಸಿಕೆ ಹಾಕಿಸಿಕೊಳ್ಳಲು ಎಲ್ಲರೂ ಸಿದ್ಧರಾದರು. ಊರಿನಲ್ಲಿದ್ದ ದರ್ಜಿ ರಾಜಪ್ಪ ಹಳ್ಳಿಯವರಿಗೆಲ್ಲಾ ಮುಖಕವಚಗಳನ್ನು ಹೊಲಿದುಕೊಟ್ಟನು. ಹಳ್ಳಿಯ ಜನ ಕೇಶವನನ್ನು ಹೊಗಳಿದರು. 

ಕೇಶವನ ತಂದೆತಾಯಿ ಸೋಂಕುರಹಿತರಾಗಿ ಮನೆಗೆ ಹಿಂದಿರುಗಿದರು. ಹನುಮಪ್ಪ ಹಾಗೂ ರಾಧಮ್ಮ ದಿನೇದಿನೇ ಚೇತರಿಸಿಕೊಂಡರು. ಸರಿಯಾದ ಸಮಯಕ್ಕೆ ಕೇಶವನು ನೀಡಿದ ಕೋವಿಡ್-೧೯ ನಿಯಂತ್ರಣ ಹಾಗೂ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯ ಕುರಿತ ಜಾಗೃತಿಯಿಂದಾಗಿ ಹಳ್ಳಿಯ ಜನ ಸುರಕ್ಷಿತರಾದರು‌. ಕೊರೊನಾ ಮುಕ್ತ ಹಳ್ಳಿಯೆಂದು ಘೋಷಿಸಲಾಯಿತು.

ನೀತಿ: *ರೋಗ ವಾಸಿಯಾಗಲು ಸೆಣಸಾಡುವುದಕ್ಕಿಂತ ರೋಗ ತಡೆಯಲು ಮುಂಜಾಗ್ರತೆಯು ಸೂಕ್ತವು*


*ಕೊಂಡಮ್ಮ ಪ್ರಭಾಕರ್*

*ವಿಳಾಸ:*
ಕೊಂಡಮ್ಮ ಪ್ರಭಾಕರ್
#107, ರಿಟ್ರೀಟ್ ಗಾರ್ಡನ್ಸ್
2ನೇ ಮುಖ್ಯರಸ್ತೆ, ವೈಟ್ ಸಿಟಿ ಲೇಔಟ್,
ಸೀಗೇಹಳ್ಳಿ, ಬೆಂಗಳೂರು - 560 049
ಮೊ.9663812303.


( ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448241450 ಸಂಪಾದಕರು ವಿ ಮ ಸಾ ಪತ್ರಿಕೆ)






ಕರೋನವೆಂಬ ಕಾರ್ಮೋಡ (ಕರೋನಾ ಜಾಗೃತಿ ಕತೆ) - ಭಾಗ್ಯಲಕ್ಷ್ಮೀ ಎಂ.

ಕರುನಾಡು ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಟ್ರಸ್ಟ್ ; ಬೆಂಗಳೂರು ಇವರ ಜಂಟಿ                      ಸಹಯೋಗದ ಕಥಾ ಸ್ಪರ್ಧೆಗೆ ರಚಿಸಲಾದ ಕಥೆ.


ವಿಷಯ: *ಕೋವಿಡ್- ೧೯ ನಿಯಂತ್ರಣ ಹಾಗೂ ವ್ಯಾಕ್ಸಿನ್ ಕುರಿತು ಜಾಗೃತಿ                  

ಈ ಕತೆ ಕರುನಾಡು ಕಥಾ ಸ್ಪರ್ಧೆ ಯಲ್ಲಿ ತೃತೀಯ ಬಹುಮಾನವನ್ನು ಪಡೆದಿರುತ್ತೆ.
                             

ಶಿರ್ಷಿಕೆ: ಕೊರೊನಾವೆಂಬ ಕಾರ್ಮೋಡ

2020 ಇದೊಂಥರಾ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯುವ ವರ್ಷ. ಜೊತೆಗೆ ಈ ಒಂದು ಪೀಳಿಗೆಯವರು ಜೀವನವೀಡಿ ಮರೆಯಲಾಗದ ವರ್ಷ. ಅದಕ್ಕೆಲ್ಲಾ ಕಾರಣ ಈ ಕೊರೊನಾ.ಚೀನಾದ ವೂಹಾನ್ ನಗರದಲ್ಲಿ ಹುಟ್ಟಿದ ಈ ಭೀಕರ ಖಾಯಿಲೆ ಪ್ರಸ್ತುತ ಜಗತ್ತಿನ ಎಲ್ಲಾ ಎಲ್ಲೆಗಳನ್ನು ಆವರಿಸಿಬಿಟ್ಟಿದೆ. ಇದರಿಂದ ನಮ್ಮ ಜೀವನದಲ್ಲಿ ಬಹಳ ಬದಲಾವಣೆಯಾಗಿರುವುದು ಸುಳ್ಳಲ್ಲ.. ಆದರೆ ಈ ಬದಲಾವಣೆಯಿಂದಾಗಿ ನಾವು ಹೊಸ ಜೀವನ ಪದ್ಥತಿಗೆ ಹೊಂದಿಕೊಳ್ಳದೆ ಬೇರೆ ದಾರಿ ಇಲ್ಲ ಅನ್ನುವಂತಹ ಪರಿಸ್ಥಿತಿಯಲ್ಲಿ ತಂದು ನಿಲ್ಲಿಸಿದೆ ಈ ಕೊರೊನಾ ಮಹಾಮಾರಿ. 

ನಾನೊಬ್ಬಳು ಕಾಲೇಜಿನ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕಾಗಿ ಹಾಸ್ಟೇಲ್ನಲ್ಲಿ ತಂಗಿದ್ದೆ ,  ಕೊರೊನಾ ಭಾರತದ್ಯಂತ ಪ್ರಾರಂಭವಾಯಿತು . ಪ್ರಮುಖ ಪ್ರಕಟಣೆ: ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಂದು ವಾರಗಳ ಕಾಲ‌ ಲಾಕ್ ಡೌನ್ ವಿಧಿಸಲಾಗಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತು. ಇದರಿಂದಾಗಿ ನಮ್ಮ ಶೈಕ್ಷಣಿಕ ವರ್ಷದ ಪರೀಕ್ಷೆಗಳನ್ನು ಮುಂದೂಡಲಾಯಿತು ಹಾಗಾಗಿ ನಾನು ಮತ್ತು ನನ್ನ ಗೆಳತಿಯರು ಈ ಕೊರೊನಾಗೆ ಶಾಪ ಹಾಕುತಾ ಮನೆಯ ಹಾದಿ ಹಿಡಿದೆವು.  ಹೋಗುವಾಗ ತಿಳಿಯದ ಒಂದು ಆತಂಕ! ಆದರೂ ಈ ಕೊರೊನಾ ನನ್ನ ಹಿಂಬಾಲಿಸಿಕೊಂಡು ಬರುವುದಿಲ್ಲವೆಂದು  ರೈಲಿನಲ್ಲಿ 50 ಕಿ.ಮೀ ನಿಂತುಕೊಂಡೆ ಊರಿಗೆ ಸೇರಿ  ಬದುಕಿದೆ ಎಂದು ನನ್ನ ಪುಟ್ಟ ಮನೆಯನ್ನು ಸೇರಿಕೊಂಡೆ.ಮನೆಗೆ ಬರುವಾಗ ನನಗೆ ಯಾವ ಜ್ವರವು ಇರಲಿಲ್ಲ ಹಾಗಾಗಿ ನಾನು ಆರೋಗ್ಯವಾಗಿದ್ದೆನೆ ಅಂದುಕೊಂಡೆ. ಮನೆಗೆ ಬಂದರೆ ನನಗೆ ಸಿಗುವ ಆತಿಥ್ಯ ಹಾಗೂ ಊರು  ಕೇರಿ ಎಲ್ಲ ನೆನಸಿಕೊಂಡೆ ಮನದಲ್ಲಿಯೇ ಖುಷಿಯಾಗಿತ್ತು. ಆದರೆ ಏನು ಮಾಡೊದು ಈ ಕೊರೊನಾ ಪರಿಣಾಮದಿಂದ ಯಾರು ಬದಲಾಗಿದ್ದರೊ ಇಲ್ಲವೊ ನಮ್ಮಮ್ಮ ಪೂರ್ತಿಯಾಗಿ ಬದಲಾಗಿದ್ದಳು. ನಮ್ಮಮ್ಮ ಕೊರೊನಾ ಬಂದಾಗಿನಿಂದ ನ್ಯೂಸ್ ಚಾನಲ್ ಬಿಟ್ಟು ಬೇರೆ ನೊಡತ್ತಾ ಇರಲಿಲ್ಲ ಇದರಿಂದ ತುಂಬಾ ಹೆದರಿದ್ದಳು. ಅವರಿಗೆ ಮಕ್ಕಳ ಯೋಗಕ್ಷೇಮದ ಬಗ್ಗೆ ಚಿಂತೆ ಆದರೆ ಇದು ತಪ್ಪು ಅಂತ ಹೇಳುವಂತಿಲ್ಲ ಆದರೆ ಈ ಸಾಮಾಜಿಕ ಮಾಧ್ಯಮಗಳು ಕೊರೊನಾ ಬಂದರೆ ಅವರ ಜೀವನ ಮುಗಿತು ಸಾವು ಖಚಿತ ಅಲ್ಲಿ ಅಷ್ಟು ಜನ ಸಾವನ್ನಪ್ಪಿದ್ದಾರೆ ಇಲ್ಲಿ ಅಷ್ಟು ಕೇಸ್ಗಳು ಎಂಬೆಲ್ಲಾ ಸುದ್ಧಿಗಳು, ಜನರನ್ನು ಆತಂಕಕ್ಕೆ ಗುರಿಮಾಡುತ್ತೆ  ಅನ್ನುವ ಪ್ರಜ್ಞೆ ಇರುವುದಿಲ್ಲ ಅಂತಹದ್ದೇ ಆತಂಕ ನಮ್ಮಮ್ಮನಲ್ಲಿ ಸಹ ಇತ್ತು ಹಾಗಾಗಿ ಮನೆಗೆ ಬಂದ ಕೂಡಲೇ ನಮ್ಮ ಅಣ್ಣನ ಮಗನನ್ನು ಮುದ್ದಿಸಬೇಕು ಅನ್ನುವ ಆಸೆ ಆದರೆ ಅಮ್ಮ ಅದಕ್ಕೂ ಬಿಡಲಿಲ್ಲ ನಿನು ಯಾರನ್ನು ಮಾತಾಡಿಸೊದು ಬೇಡ ಮೊದಲು ಹೋಗೆ ಸ್ನಾನ ಮುಗಿಸಿ ಬಾ ಅಂತ ಹೊಸ ಟವಲ್ ಕೊಟ್ಟಳು…ನಾನಾಗ ಅಂದೆ ನಾನಗೇನು ಕೊರೊನಾ ಬಂದಿಲ್ಲ ಮಾರಾಯ್ತಿ  ಅದಕ್ಕೆ ಅಮ್ಮನ ಉತ್ತರ ಟಿವಿ ನೋಡು ಗೊತ್ತಾಗುತ್ತೆ ನಿಮ್ ಅಂತವರಿಗೆ ನಾವು ಹೇಳೊದು ತಮಾಷೆಯಾಗಿದೆ. ಕೊರೊನಾ ಅಷ್ಷು ಅಸಢ್ಯದ ವಿಷಯವಲ್ಲ ನಾವು‌ ನಮ್ಮ ಮುಂಜಾಗ್ರತೆಯಲ್ಲಿ ಇರಬೇಕು ಗೊತ್ತಾಯ್ತ ಹಾಗೆ  ಮಾಸ್ಕ್( ಮುಖಕವಚ) ಅವಾಗವಾಗ ಸ್ಯಾನಿಟೇಸರ್ ಬಳಸಬೇಕು ಹೊರಗಡೆ ಅನಗತ್ಯವಾಗಿ ತಿರಗಾಡಬೇಡ  ಎಂಬ ಸೂಚನೆಗಳನ್ನು ಸಹ ಕೊಟ್ಟರು.. ಸರಿ ಅಂತ‌‌ ತಲೆ ಆಡಿಸಿದೆ.   ಕೆಲ ದಿನಗಳ ನಂತರ ನಮ್ಮ‌ ಮನೆಯ ಪಕ್ಕದ ಮನೆಗೆ ಪಾಪ ಎಂತದೊ ಕಮಿಟಿ ಅಂತೆ ಎಲ್ಲಾ ಬಂದಿದ್ದರು. ಆಶಾ, ಸಿಸ್ಟರ್ ,ಆಂಗನವಾಡಿ ಟೀಚರ್, ಪಿ.ಡಿ.ಒ. ವಿ.ಎ,. ಪೊಲೀಸ್, ಗ್ರಾಮ ಪಂಚಾಯತಿ ಮೆಂಬರ್ ಎಲ್ಲಾ ಬಂದಿದ್ದರು ನಾನು ಈ ಮೊದಲು ಸರ್ಕಾರಿ ಅಧಿಕಾರಿಗಳೆಂದರೆ ಬರೀ ಕಛೇರಿ ದುಡ್ಡು ಎಂದು ತಪ್ಪಾಗಿ ತಿಳಿದುಕೊಂಡಿದ್ದೆ ಆದರೆ ನಿಜಕ್ಕೂ ಇವರೆಲ್ಲ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜನರ ಯೋಗಕ್ಷೇಮದ ಕಾರ್ಯದಲ್ಲಿ ನಿರತರಾಗಿದ್ದಾರೆ. ಪಾಪ ಅವರಿಗೆಲ್ಲಾ ಆ ಮನೆಯವರು ನೀಡಿದ ಜವಾಬು ನೋಡಬೇಕಿತ್ತು, ನಮಗೇನೂ ಕೊರೊನಾ ಬಂದಿಲ್ಲ ಸರ್ ಟೆಸ್ಟ್ ಆಗಿದೆ , ಎಲ್ಲರೂ ಹೊರಗಡೆ ಸುತ್ತಾಡತ್ತಾ ಇರತ್ತಾರೆ ನಮಗೆ ಮಾತ್ರ ಹೇಳತ್ತಿರಾ ಇಲ್ಲಿ ಯಾರಿಗೂ ಕೊರೊನಾ ಬಂದಿಲ್ಲ ಪ್ಲೀಸ್ ಇಲ್ಲಿಂದ ಹೋಗಿ ಅಂತ ಮನೆಯವರೆಲ್ಲಾ ಒಕ್ಕೂರಿಲಿನಿಂದ ಕಿರುಚಿತ್ತಿದ್ದರು.ಅದರಲ್ಲಿ ಒಬ್ಬನಂತೂ we have commonsense pls go ಎಂದನು. ಈ ಮಾತು ಕೇಳಿ ಪಿ.ಡಿ.ಒ ಆಫೀಸರ್ ತುಂಬಾ ಸಿಟ್ಟಿನವರಿರಬೇಕು, ಆದರೂ ಸಮಾಧಾನ ತಂದುಕೊಂಡು , ನಾವೇಕೆ ಈ ಬಿಸಿನಲ್ಲಿ ನಿಮ್ಮ ಮನೆಗೆ ಬರಬೇಕು , ಅರ್ಥ ಆಗಲ್ವ ನಿಮಗೆ , ನಿಮ್ಮ ಕುಟುಂಬಕ್ಕಾಗಿ ನೀವು ಮನೆಯಲ್ಲಿಯೇ ಇರಿ ಅಂತ ಜೋರು ಮಾಡಿದರು. ಲಾಕ್ ಡೌನ್ ಅಂದರೆ ಮನೆಯಲ್ಲಿ ಇರೊದು ಕ್ವಾರಟೈನ್ ಅಂದರೆ ಮನೆಯಲ್ಲಿ ಪ್ರತ್ಯೇಕವಾಗಿರೋದು , ನಿಮಗೆ ಕೊರೊನಾ ಬಂದಿದೆ ಅಂತ ಹೇಳತ್ತಿಲ್ಲ ನೀವೆ ನಿಮ್ಮ ಮನೆಯವರಿಗೆ ವಿಲನ್ ಆಗಬೇಡಿ ನಿಮ್ಮ ಕುಟುಂಬ ಕ್ಕಾಗಿ ನಾವು ಬಂದಿದ್ದೀವಿ ಎಂದು ತಿಳಿಸಿ ಹೇಳಿದರು. ಅಂತೂ ಸಮಾಧಾನ ಆದರು. ಅಂತೂ ರಣಕೇಕೆ ಹಾಕುತ್ತಿರೊ ಈ ಕೊರೊನಾ ಗೆ ವ್ಯಾಕ್ಸಿನ್ ಬಂತು ಆದರೆ ಅದರ ಹಿಂದೆ ಹಲವಾರು ಊಹಾಪೋಹಗಳು ಉಂಟುಕೊಂಡವು ಇದರಿಂದ ಅನೇಕ ಜನ ವ್ಯಾಕ್ಸಿನ್ ಹಾಕೊಂಡ್ರೆ ಸಾಯತಾರಂತೆ ಹಾಸ್ಪಿಟಲ್ ನಲ್ಲಿ ದುಡ್ಡು ಮಾಡೊಕೊಳ್ಳಕ್ಕೆ ಸರ್ಕಾರದ ಯೊಜನೆ ಇದು ಎಂಬಂತೆಲ್ಲಾ ವದಂತಿಗಳು ಹರದಡತ್ತಾ  ಇದೆ ಹಾಗಾಗಿ ಜನ ವ್ಯಾಕ್ಸಿನ್ ಹಾಕೊಳ್ಳಕ್ಕೆ ಎದರಿ ಮನೆಯಲ್ಲಿ ಉಳಿದಿದ್ದಾರೆ ತಮಾಷೆ ಏನು ಅಂದರೆ ನಮ್ ಮನೆಯಲ್ಲಿ ನಮ್ಮ ಅಮ್ಮ  ಅಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳೊರೆ ಇವತ್ತು ಅವರು ವ್ಯಾಕ್ಸಿನ್ ಗೆ ಎದರಿ ಮನೆಯಲ್ಲಿ ಇದ್ದರು  ಆದರೆ ನಾನು ಅದು ಬರೀ ವದಂತಿ ಅಷ್ಟೇ ವ್ಯಾಕ್ಸಿನ್ ಹಾಕಿಸಿಕೊಳ್ಳುವುದರಿಂದ ಯಾವುದೇ ದುಷ್ಪರಿಣಾಮಗಳು ಉಂಟಾಗೊದಿಲ್ಲ ವ್ಯಾಕ್ಸಿನ್ ಹಾಕಿಸಿಕೊಳ್ಳುವುದರಿಂದ ನಮ್ಮಲ್ಲಿ humunity power boost up ಆಗುತ್ತೆ  ಅಂತ ಹೇಳಿದೆ ಅದಕ್ಕೆ ಅಮ್ಮನ ಉತ್ತರ ಓ ಹಾಗಿದ್ದರೆ ಯಾಕೆ ಜ್ವರ ಬಂದು ಎಲ್ಲಾ ಸಾಯತ್ತಾ ಇದಾರೆ ? ಅಯ್ಯೋ ಅಮ್ಮ ಅದು ವ್ಯಾಕ್ಸಿನ್ನಿಂದ ಅಲ್ಲ ಅವರು ಮೊದಲೇ ಬೇರೆ ಆರೋಗ್ಯ ಸಮಸ್ಯೆ ಇರುತ್ತವೆ ಇನ್ನೂ ಇದನ್ನು ಹಾಕಿಸಿಕೊಂಡಾಗ ಜ್ವರ  ಬರುತ್ತೆ ಕೆಲವರಿಗೆ  ಅದು ನಿನು ನನಗೆ ಒಂದು ವರ್ಷ ಇದ್ದಾಗ ಇನ್ ಜಂಕ್ಷನ್ ಹಾಕಿಸಿದ್ಯಲ್ವಾ ನೆ‌ನಪಿದಿಯಾ ಅವಾಗ ನನಗೆ ಜ್ವರ ಬಂದಿತ್ತು ಅಲ್ವಾ ಅದೇ ತರ ಇದು ಕೂಡಾ ಅಂತ ತಿಳಿಸಿ ಹೇಳಿದೆ ಅವಾಗ ಕಿರುನಗೆಯಿಂದ ಹೌದಾ…. !ಎಂಬ ಪ್ರತಿಕ್ರಿಯೆ ಬಂತು ಅಂತು ನಮ್ ಮನೆಯಲ್ಲಿ ಕೊನೆಗೂ ವ್ಯಾಕ್ಸಿನ್ ಹಾಕಿಸಿದೆ‌ ಇದೇ ನನ್ನಗೆ ಸಮಾಧಾನ.
    ನಮಗಾಗಿ ಪೋಲೀಸ್ , ಡಾಕ್ಟರ್‌,  ಆಶಾ ಕಾರ್ಯಕರ್ತೆ ಯರು, ಪಿ.ಡಿ.ಒಗಳು ನರ್ಸಗಳು, ಇವೆರಲ್ಲಾ ನಮಗಾಗಿ ನಮ್ಮ ಕುಟುಂಬಕ್ಕಾಗಿ ಕೆಲಸ ಮಾಡತ್ತಾ ಇದ್ದಾರೆ. ನಾನು ತುಂಬಾ ಬದಲಾಗಿದ್ದೆ ,ನಮಗಾಗಿ ಇವರೆಲ್ಲರೂ ಇಷ್ಟೆಲ್ಲಾ ಶ್ರಮಪಡುತ್ತಿದ್ದಾರೆ. ಪ್ರತಿಯೊಬ್ಬರೂ ಹೀಗೆ ಅಧಿಕ ಪ್ರಸಂಗ ಮಾಡುತ್ತಿದ್ದರೆ ಯಾರಿಗೆ ಅಂತ ಉತ್ತರ ಕೊಡತ್ತಾರೆ , ಎಲ್ಲರೂ ಮಾತಾಡೊರೆ , ಮನಸ್ಸಿಗೆ ಬಂದಂತೆ ಪ್ರಶ್ನೆ ಕೇಳೋರೆ , ನಮ್ಮ ಬದುಕಲ್ವಾ , ನಾವು ತಿಳ್ಕೋಬೇಕಾಲ್ವ , ನಮಗೆ ನಾವೇ ಲಾಕ್ ಡೌನ್ ಆಗಬೇಕು , ನಮಗೆ ನಾವೇ ಕ್ವಾರೈಟೆನ್ ಆಗಬೇಕು  , ಇದ್ದಿದ್ದನ್ನು ತಿನ್ನುತ್ತಾ ಒಂದಿಷ್ಟು ದಿನ ಕಳೆಯಬೇಕು.  ಬದುಕಿದ್ದರೆ ತಾನೇ ಎಲ್ಲ, ಮುಂದೆ ಬರುವ ಸಂತೋಷಗಳನ್ನು ಅನುಭವಿಸಬಹುದು . ಕುಟುಂಬದಲ್ಲಿ ಒಬ್ಬರಿಗೆ ಏನಾದರೂ ಹಾನಿಯಾದರೆ ನೆನಸಿಕೊಳ್ಳಲು ಸಾಧ್ಯವೇ, ಹಾಗಾಗಿ ಎಲ್ಲರೂ ಮುಂಜಾಗ್ರತೆ ವಹಿಸಬೇಕಾಗಿದೆ. 

              “   ಮನೆಗೊಂದು ಮರ , ಮನುಷ್ಯನಿಗೊಂದು ಮಾಸ್ಕ್”….…. 🤗
.                                                       .* ಮುಕ್ತಾಯ.*
  
ಭಾಗ್ಯಲಕ್ಷ್ಮಿ .ಎಂ. 2nd b.ed                                    ಗೊಲ್ಡ್ ಪೀಲ್ಡ್ ಕಾಲೇಜ್ ಆಫ್ ಎಜುಕೇಷನ್ , 
ಬಂಗಾರಪೇಟೆ. ಕೋಲಾರ ಜಿಲ್ಲೆ.

ವಿಳಾಸ:
ಅಜಗೊಂಡನಹಳ್ಳಿ ಗ್ರಾಮ
ಹೊಸಕೋಟೆ ತಾಲ್ಲೂಕು
ಬೆಂಗಳೂರು ಗ್ರಾಮಾಂತರ. 



ಸುರಕ್ಷತಾ ಕ್ರಮದ ಮಹತ್ವ ( ಕರೋನಾ ಜಾಗೃತಿ ಕತೆ) - ಕು ಶ್ರದ್ಧಾ ದೀಪಕ ಸಾಮಂತ.

( ಕರುನಾಡು ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಟ್ರಸ್ಟ್ ಬೆಂಗಳೂರು ಇವರ ಜಂಟಿ ಸಹಯೋಗದ ಕಥೆ ಸ್ಪರ್ಧೆಗಾಗಿ ರಚಿಸಿದ ಕತೆ
ವಿಷಯ :- ಕೋವಿಡ್ - ೧೯ ನಿಯಂತ್ರಣ ಹಾಗೂ ವ್ಯಾಕ್ಸಿನ್ ಕುರಿತ ಜಾಗೃತಿ )

🌹ಸುರಕ್ಷತಾ ಕ್ರಮದ ಮಹತ್ವ 🌹

ಒಂದು ಚಿಕ್ಕ ಹಳ್ಳಿಯಲ್ಲಿ ಗೋಪಾಲನೆಂಬ ಹುಡುಗನಿದ್ದನು. ಆತ ಪ್ರತಿದಿನ ತನ್ನ ಗೆಳೆಯರೊಂದಿಗೆ ಶಾಲೆಗೆ ಹೋಗುತ್ತಿದ್ದನು . ಒಂದು ದಿನ ಶಾಲೆ ಮುಗಿಸಿ ಗೋಪಾಲ ಓಡಿ ಬಂದು ಮನೆ ಸೇರಿದನು . ಗೋಪಾಲ ಸಂತೋಷದಿಂದ "ಅವ್ವಾ ನಾಳೆಯಿಂದ ಶಾಲೆಗೆ ಸೂಟಿ ಅಂತ. ಇನ್ನೂ ಒಂದು ತಿಂಗಳ ಪೂರ್ತಿ ನಾ ಮನೆಯಲ್ಲೇ ಇರೋದು" ಎಂದನು.
 ಗೋಪಾಲನ ಅಮ್ಮ "ಗೋಪಿ ಯಾಕಾದ್ರೂ ಸೂಟಿ ಕೊಟ್ರಪ್ಪಾ ಹೇಳು" ಎಂದಳು.  "ಅವ್ವ ಅದು ಯಾವ್ದೊ ಕೊರೋನಾ ಅಂತ ರೋಗ ಬಂದೈತಿ ಅದಕ್ಕ ಸೂಟಿ ಕೊಟ್ರು, ಮತ್ತ ನಾವು ಕೈ ತೊಳಿತಾ ಇರಬೇಕಂತ ಹೇಳ್ಯಾರ" ಅಂತ ಗೋಪಾಲ  ಹೇಳಿದ್ದನ್ನು ಕೇಳಿದ ಅಮ್ಮ " ಆ ಕೊರೋನಾ ಗಿರೋನಾ ಏನು ಮಾಡಲ್ಲ, ಅದೆಲ್ಲ ಸುಳ್ಳ್ಸುದ್ದಿ, ಅದು ಬಿಡು, ನಿನಗೆ ಸೂಟಿ ಇದೆ ಅಂತ ಮನೆಯಲ್ಲಿ ಇರಬೇಡ ನಂಜೊತೆ ಕೂಲಿ ಕೆಲಸ ಮಾಡಕ್ಕೆ ಬಂದ್ಬಿಡು"  ಎಂದಳು. ಗೋಪಾಲ "ಅದ್ಯಾಕ ನಾನ ಸುಮಾ ಮತ್ತ ರಾಜು ಜೊತಿಗ ಆಡಬೇಕ, ನಾಬರಲ್ಲಾ" ಎಂದನು. ಅಮ್ಮ ಸಿಟ್ಟಿನಿಂದ  "ನನ್ನ ಜೊತಿ ಬಾ ಆಡೋದ್ರಿಂದ   ಏನೂ ಸಿಗಂಗಿಲ್ಲ ಗೊತ್ತಾಯ್ತಾ  " ಅಂದಾಗ ಮನಸ್ಸಿಲ್ಲದಿದ್ದರೂ ಗೋಪಾಲ ಅಮ್ಮನ ಮಾತು ಕೇಳಬೇಕಾಯಿತು. ಮಾರನೆ ದಿನ ಗೋಪಾಲ ಅಮ್ಮನೊಂದಿಗೆ ಕೆಲಸಕ್ಕೆ ಹೊರಡುತ್ತಿದ್ದಾಗ ಸುಮಾ ಮತ್ತು ರಾಜು ಈ ವಿಷಯ ಕೇಳಿ ಅಲ್ಲಿ ಬಂದು ಗೋಪಾಲನಿಗೆ ಒಂದು ಮಾಸ್ಕ ಕೊಟ್ಟರು
ಗೋಪಾಲನ ಅಮ್ಮ "ಗೋಪಿ ನೀನು ಇದೆಲ್ಲಾ ಹಾಕ್ಬೇಡ ಈ ಕೊರೋನಾ ಗಿರೋನಾ ಏನು ಇಲ್ಲ ಮತ್ತ ಸುಮ್ಮನೆ ನನ್ನ ಜೋತಿ ಬಾ" ಎಂದು ಹೇಳಿದಳು. ಗೋಪಾಲ ಅಳುತ್ತಾ ಅಮ್ಮನೊಡನೆ ಕೆಲಸಕ್ಕೆ ಹೋದ. ಹೀಗೆ ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದ ಗೋಪಾಲ ಮತ್ತು ಅವನ ಅಮ್ಮನಿಗೆ ಕೊರೋನಾ ವೈರಾಣುವಿನ ಸೋಂಕು ತಗುಲಿತು. ಅಮ್ಮ ನಾಲ್ಕು ದಿನದಲ್ಲೇ ಗುಣಮುಖಳಾದಳು ಆದರೆ ಗೋಪಾಲ ಆಸ್ಪತ್ರೆಗೆ ಸೇರಿದನು. ಚಿಕಿತ್ಸೆಯನ್ನು ಪಡೆದು ಗುಣಮುಖನಾದ ಕೆಲವೇ ದಿನದಲ್ಲಿ ಗೋಪಾಲನ ತಾಯಿ ಅವನ ಕಾಳಜಿ ವಹಿಸದೆ ಕೆಲಸಕ್ಕೆ ಕರೆದುಕೊಂಡು ಹೋದಳು. ಮೊದಲೇ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದರಿಂದ ಇನ್ನೂ ಘಾತಕವಾದ ಕಪ್ಪು ಶಿಲೀಂಧ್ರದ ಸೋಂಕಿಗೆ ತುತ್ತಾಗಿ ಗೋಪಾಲನ ಒಂದು ಕಣ್ಣು ತೆಗೆಯಬೇಕಾಯಿತು.
ಶಸ್ತ್ರಚಿಕಿತ್ಸೆಗೆ ದುಡ್ಡಿಲ್ಲದೆ ಗೋಪಾಲನ ಅಮ್ಮ  ಕೂಲಿ ಕೆಲಸದೊಂದಿಗೆ ಬೇರೆಯವರ ಮನೆಯಲ್ಲಿ ಆಳಾಗಿ ದುಡಿಯಲು ಪ್ರಾರಂಭಿಸಿದಳು. ಗೋಪಾಲನ ಪರಿಸ್ಥಿತಿ ಅರಿತ ಸುಮಾ ಮತ್ತು ರಾಜು ತಮ್ಮ ತಂದೆ ತಾಯಿಯರಿಗೆ ಈ ವಿಷಯ ಹೇಳಿ ಶಸ್ತ್ರಚಿಕಿತ್ಸೆಗೆ ದುಡ್ಡಿನ ಸಹಾಯ ಮಾಡಿದರು. ಅಂತೂ ಇಂತೂ ಶಸ್ತ್ರಚಿಕಿತ್ಸೆಗೆ ಬೇಕಾದಷ್ಟು ಹಣ ಕೂಡಿತು. ದುಡ್ಡು ಕೊಡಲು ಬಂದ ಗೋಪಾಲನ ತಾಯಿಗೆ ಡಾಕ್ಟರ್ ಬಂದು "ಅಮ್ಮ ನಿಮ್ಮ ಮಗ ಇನ್ನಿಲ್ಲ" ಎಂದರು. ಇದನ್ನು ಕೇಳಿದ ಗೋಪಾಲನ ಅಮ್ಮನ ಹೃದಯ ಒಡೆದು ಚೂರುಚೂರಾಯಿತು. ಊರಿನ ಜನರೆಲ್ಲ ಅವಳನ್ನು ಸಮಾಧಾನ ಪಡಿಸಿದರು. ಗೋಪಾಲನ ಅಮ್ಮ 'ಈಗ ಎಲ್ಲವೂ ಮುಗಿಯಿತು' ಎಂದು ಭಾವಿಸಿದಳು. ತಾನು ಮಾಡಿದ ಒಂದು ತಪ್ಪಿಗೆ ಎಷ್ಟು ದೊಡ್ಡ ಶಿಕ್ಷೆಯೇ ಸಿಕ್ಕಿತಲ್ಲ ಎಂದು ಬಿಕ್ಕಿಬಿಕ್ಕಿ ಅತ್ತಳು.
ತಾನು ತನ್ನ  ಮಗನ ಜೀವನವನ್ನೇ ಪಣಕ್ಕಿಟ್ಟು ಹಣದ ಹಿಂದೆ ಬಿದ್ದು ಇದೆಂತಹ ಪಾಪ ಕೃತ್ಯ ಮಾಡಿದೆ ಎಂಬ ಮಾತನ್ನು ಅರಿತಳು.  ಹಣವಿದ್ದರೂ ಅಥವಾ ಹಣವಿಲ್ಲದಿದ್ದರೂ ಮರಣವನ್ನು ತಡೆಯಲು ಸಾಧ್ಯವಿಲ್ಲ. ನಾನು ಅಂದು ಆತನನ್ನು ಸುರಕ್ಷಿತವಾಗಿ ಮನೆಯಲ್ಲಿ ಬಿಟ್ಟು ಹೋಗಿದ್ದರೆ ಇಂದು ನನ್ನ ಗೋಪಿ ನನ್ನೊಟ್ಟಿಗೆ ಇರುತ್ತಿದ್ದನು ಎಂಬ ಅರಿವಾಗಿ ಸುರಕ್ಷತಾ ಕ್ರಮದ ಮಹತ್ವದ ಬಗ್ಗೆ ಪಾಠ ಕಲಿತಳು. ಇನ್ನು ನನ್ನೊಂದಿಗೆ ಆದ ಘಟನೆ ಯಾರೊಂದಿಗೂ ಆಗಬಾರದೆಂದು ಊರಿನ ಜನರಲ್ಲಿ ಕೊರೋನಾದ ಬಗ್ಗೆ ಜಾಗೃತಿ ಮೂಡಿಸಿದಳು. ಆದರೂ ತಿಳಿಯದ ಜನರಿಗೆ ತನ್ನೊಂದಿಗಾದ ಪ್ರಸಂಗವನ್ನು ಹೇಳಿ ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬಿದಳು. ಅವಳ ಸತತ ಪರಿಶ್ರಮದಿಂದ ಹಳ್ಳಿಯಲ್ಲಿ ಕೋರೋನಾ ಸೋಂಕಿತರ ಸಂಖ್ಯೆ ಸೊನ್ನೆಯಾಯಿತು.

✍️ಕುಮಾರಿ ಶ್ರದ್ಧಾ ದೀಪಕ ಸಾಮಂತ, ೭ ನೇ ತರಗತಿ, ಕೆನರಾ ವೆಲ್ ಫೆರ್ ಟ್ರಸ್ಟ್, ಆಂಗ್ಲ ಮಾಧ್ಯಮ ಶಾಲೆ, ದಾಂಡೇಲಿ, ಉತ್ತರ ಕನ್ನಡ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...