ಕರ್ಮದ ಹಾದಿಯಲ್ಲಿ...
'ಕರ್ಮ' ಎಂದೊಡನೆ ಅದರೊಡನೆ ನೆನಪಾಗುವ ಇನ್ನೊಂದು ಪದ 'ಕರ್ಮಫಲ', ಒಳ್ಳೆಯ ಕರ್ಮ ಮಾಡಬೇಕೆಂದು ಯಾರೆಲ್ಲ ಬಯಸುತ್ತಾರೋ ಹಾಗೂ ಯಾರು ಅಂತಹ ಕರ್ಮಗಳನ್ನು ಮಾಡುತ್ತಾರೋ ಅವರಲ್ಲಿ ಶೇ.೫೦ ರಷ್ಟು ಜನರು ಕರ್ಮದ ಜೊತೆ-ಜೊತೆಗೆ ಕರ್ಮ ಫಲಕ್ಕೂ ಬೆಲೆ ನೀಡುತ್ತಾರೆ ಹಾಗೂ ಇವರುಗಳು ಕೆಲವೊಮ್ಮೆ ಒಳ್ಳೆಯ ಕರ್ಮಗಳಲ್ಲೂ ಕೂಡ ಸಫಲವಾಗುವುದಿಲ್ಲ.
ಹೌದು..! ಕರ್ಮಕ್ಕೂ ಮೊದಲು ಕರ್ಮಫಲದ ಕುರಿತು ಚಿಂತಿಸಿದರೆ ಕರ್ಮವು ತನ್ನ ಮೌಲ್ಯವನ್ನು ಕಳೆದುಕೊಂಡುಬಿಡುತ್ತದೆ.
ಯಾರೂ ಕೇವಲ ಕರ್ಮವನ್ನು ನಂಬುತ್ತಾರೆಯೋ, ಅವರೇ ವಾಸ್ತವದಲ್ಲಿ ಕರ್ಮದ ಫಲಾನುಭವಿಗಳಾಗಿರುತ್ತಾರೆ ಹಾಗೂ ಇದುವೇ ಸೃಷ್ಟಿಯ ನಿಯಮ ಕೂಡ ಹೌದು....ಸಾಕ್ಷಾತ್ ಜಗತ್ತಿನ ಸೃಷ್ಟಿಕಾರ ಕೂಡ ಇದನ್ನು ಮೀರಲಾರನು.
ಎಂದು ನಾವು ಕರ್ಮವನ್ನು ಮಾಡುತ್ತೇವೆಯೋ, ಅಂದೇ ಫಲದ ನಿರ್ಣಯವೂ ಆಗಿರುತ್ತದೆ ಹಾಗೂ ಆ ಫಲದಿಂದ ಯಾರೊಬ್ಬರೂ ಹೊರತಾಗಿರಲು ಸಾಧ್ಯವಿಲ್ಲ.....
ಪ್ರಭು ಶ್ರೀ ರಾಮರು ಹೇಳಿದಂತೆ
'ಹಣೆಬರಹ ಪೂರ್ವನಿಯೋಜಿತವಲ್ಲ, ಅದಕ್ಕೆ ಕರ್ಮವೇ ಆಧಾರವಾಗಿರುತ್ತದೆ.' ಖಂಡಿತಾ ಹೌದು, ನಮಗೆದುರಾಗುವ ಪ್ರತಿಯೊಂದು ಸನ್ನಿವೇಶವು ಕೂಡ ನಮ್ಮ ಕರ್ಮದಿಂದಲೇ ಆಗಿರುತ್ತದೆ.
ಕರ್ಮ ಧರ್ಮಕ್ಕಾಗಿ ಮಾಡುತ್ತಿದ್ದೇವೆ ಎಂದಾಗ, ಅದು ನಮ್ಮ ಕರ್ತವ್ಯವೆಂದೇ ನಾವು ಭಾವಿಸಬೇಕು ಹಾಗೂ ನಮ್ಮ ದೌರ್ಬಲ್ಯಗಳ ಕುರಿತು ಚಿಂತಿಸದೆ ಕರ್ಮ ಮಾಡುವುದು ನಮ್ಮ ಧರ್ಮವೇ ಆಗಿರುತ್ತದೆ. ಮತ್ತು ಆ ಕರ್ಮ ಮಾಡುವಾಗ ಸಂಕಷ್ಟಗಳೆದುರಾದರೂ, ಅವು ಮುಂದೆ ಜೀವನದ ಅನೇಕ ಸವಾಲುಗಳನ್ನೆದುರಿಸಲು ನಮ್ಮನ್ನು ಸದೃಢರನ್ನಾಗಿಸುತ್ತದೆ ಹಾಗೂ ದುಃಖಗಳೆದುರಾದರೇ ವ್ಯಥೆ ಪಡದೇ, ಧರ್ಮಕ್ಕಾಗಿ ನಮ್ಮ ಕರ್ಮ ಎಂಬ ಆತ್ಮತೃಪ್ತಿಯಿಂದ ಮುನ್ನಡೆದರೆ ಗೆಲುವು ನಮ್ಮದೇ ಆಗಿರುತ್ತದೆ.
ನಮ್ಮ ಕರ್ಮ ಸಾಗುವಾಗ ಬೇರಾರೋ ಅದಕ್ಕಡ್ಡಿಯಾಗಿ ನಮಗೆ ನೋವುಂಟು ಮಾಡುತ್ತಿದ್ದಾರೆಂದಾಗ, ಅವರಲ್ಲಿ ಕರ್ಮದ ಕುರಿತಾಗಿ ಜ್ಞಾನ ಜ್ಯೋತಿ ಬೆಳಗಿಸುವುದೂ ಕೂಡ ನಮ್ಮದೇ ಕರ್ಮವಾಗಿರುತ್ತದೆ.
ನಮ್ಮ ಪ್ರತಿ ಕರ್ಮಕ್ಕೂ ಧರ್ಮದ ಜೊತೆ ನಂಟಿಟ್ಟರೇ ಬಹುಶಃ ರಾಮರಾಜ್ಯದ ಸ್ಥಾಪನೆಯಾದೀತೇನೋ, ಕಾರಣ ಧರ್ಮಕ್ಕಾಗಿ ಮಾಡುವ ಕರ್ಮ ಎಂದಿಗೂ ಸಫಲತೆಯನ್ನೇ ನೀಡುತ್ತದೆ ಅಲ್ಲವೇ...??
ಯಾರೂ? ಎಂದು? ತಮ್ಮ ಅಸಹಾಯಕತೆ ಹಾಗೂ ಇನ್ನಿತರ ಕಾರಣಗಳಿಂದ ತಮ್ಮ ಕರ್ಮಕ್ಕೆ ಬೆನ್ನು ತೋರಿಸಿ ನಡೆಯುತ್ತಾರೋ, ಅವರೂ ಕೂಡ ಆ ವಂಚನೆಯ ಕರ್ಮಕ್ಕೆ ಫಲವನ್ನು ಅನುಭವಿಸಲೇಬೇಕು. ಕಾರಣ, ತಪ್ಪು ಚಿಕ್ಕದಾದರೂ ಅಥವಾ ದೊಡ್ಡದಾದರೂ ಕೂಡ ತಪ್ಪೇ ಆಗಿರುತ್ತದೆ.
ಒಮ್ಮೆ ಗೋಕುಲದ ರಾಜ ನಂದನು ಪುತ್ರ ಕೃಷ್ಣನಿಗೊಂದು ಕಥೆ ಹೇಳುವನು:
'ಒಂದು ನದಿ ದಂಡೆಯಲ್ಲಿ ಒಬ್ಬ ಬೆಸ್ತನು, ಉಕ್ಕುತ್ತಿರುವ ಪ್ರವಾಹವನ್ನು ಕೂಡ ಲೆಕ್ಕಿಸದೇ, ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಒಂದು ಚೇಳನ್ನು ರಕ್ಷಿಸಲು ಹೊರಡುವನಂತೆ.
ಒಮ್ಮೆ ಆ ಬೆಸ್ತ ಆ ಚೇಳನ್ನು ಮುಟ್ಟಲು ಹೋದಾಗ ಅದು ಆತನಿಗೆ ಕಚ್ಚಿಬಿಡುತ್ತದೆ, ಹಾಗೂ ಮತ್ತೊಮ್ಮೆ, ಮಗದೊಮ್ಮೆ ಹೀಗೆ ಐದಾರು ಬಾರಿ ಅದನ್ನು ರಕ್ಷಿಸುವಲ್ಲಿ ಬೆಸ್ತ ಸೋಲುವನು, ಆದರೂ ಮತ್ತೊಮ್ಮೆ ಆತ ನೋವು ನುಂಗಿಕೊಂಡು ಆ ಚೇಳನ್ನು ದಡಕ್ಕೆತ್ತಿ ಬಿಡುವನು' ಎಂದು. ಹಾಗೂ ಇದರ ಸಾರಾಂಶ: ತನ್ನ ಕರ್ಮ ಮಾಡುವಾಗ ತನಗೆಷ್ಟೇ ನೋವಾದರೂ, ಅದು ಕೂಡ ಸ್ವತಃ ಯಾರ ರಕ್ಷಣೆಗೆ ನಾವು ಹೊರಟಿರುತ್ತೇವೆಯೋ, ಅವರಿಂದಲೇ ನಮಗೆ ನೋವಾದರೂ ಕೂಡ, ಅಸಹಾಯಕರ ರಕ್ಷಣೆ ನಮ್ಮದೇ ಕರ್ಮವಾಗಿದ್ದಾಗ, ಅದರಿಂದ ನಾವು ವಂಚಿತರಾಗಬಾರದೆಂದಾಗಿದೆ.
ಹಾಗೂ ಇದೇ ರೀತಿಯ ನಂದನ ಪಾಠದಿಂದ ಮುಂದೆ ಭಗವಾನ್ ಶ್ರೀ ಕೃಷ್ಣ, ತಮ್ಮ ಪುತ್ರ ಸಾಂಭ ಬದಲಾಗನು ಎಂದು ತಿಳಿದಿದ್ದರೂ, ತಂದೆಯಾಗಿ ತಮ್ಮ ಕರ್ಮ ಮಾಡುತ್ತಾರೆ ಮತ್ತು ಇದೇ ರೀತಿಯ ಕರ್ಮ ಎಲ್ಲಾ ಪೋಷಕರು ಮಾಡಬೇಕು, ಬದಲಾಗಿ ತಮ್ಮ ಸಂತಾನದಿಂದ ಏನನ್ನೂ ಬಯಸದೇ.....
'ಕಾಯಕವೇ ಕೈಲಾಸ' ಎಂದು ಯಾರು ನಂಬುತ್ತಾರೋ,ಅವರು ಭುವಿಯಲ್ಲೇ ಕೈಲಾಸ ಕಾಣುವರು ಹಾಗೂ ಅಲ್ಪತೃಪ್ತಿಗಳಲ್ಲೇ ಆತ್ಮತೃಪ್ತಿ ಕಾಣುವರು. ಮತ್ತು ಇದೇ ಅವರ ಒಳ್ಳೆಯ ಕರ್ಮವಾಗಿರುತ್ತದೆ.
ಯಾರೂ ತಮ್ಮ ಕರ್ಮಗಳನ್ನು ನಂಬುತ್ತಾರೆಯೋ ಅವರು ಪ್ರತಿನಿತ್ಯ ಭಗವಂತನನ್ನು ಆರಾಧಿಸದಿದ್ದರೂ ನಡೆದಿತೇನೋ.....ಆದರೇ ಯಾರು ಕೆಟ್ಟ ಕರ್ಮಗಳನ್ನು ಮಾಡುತ್ತಾ, ಬಾಯಿ ತೆರೆದರೇ ರಾಮನಾಮ ಜಪಿಸುವರೋ ಅಂತಹವರಿಗೆ ರಾಮ ಒಲಿಯುವನೇನೂ...?? ಖಂಡಿತಾ ಇಲ್ಲ.
'ಅನ್ಯಕ್ಷೇತ್ರೇ ಕೃತಂ ಪಾಪಂ ಪುಣ್ಯಕ್ಷೇತ್ರೇ ವಿನಶ್ಯತಿ|
ಪುಣ್ಯಕ್ಷೇತ್ರೇ ಕೃತಂ ಪಾಪಂ ವಜ್ರಲೇಪೋ ಭವಿಷ್ಯತಿ||'
: ಬೇರೆ ಸ್ಥಳದಲ್ಲಿ ಮಾಡಿದ ಪಾಪವು ಪುಣ್ಯಕ್ಷೇತ್ರದಲ್ಲಿ ನಾಶವಾಗುತ್ತದೆ, ಹಾಗೂ ಪುಣ್ಯಕ್ಷೇತ್ರದಲ್ಲಿ ಮಾಡಿದ ಪಾಪವು ವಜ್ರಲೇಪವಾಗಿ ಪರಿಣಮಿಸುತ್ತದೆ.
ನಮಗಂತೂ ತಿಳಿದೇ ಇದೆ, ಪ್ರತೀ ಸ್ಥಳದಲ್ಲೂ, ಪ್ರತೀ ಜೀವಿಯಲ್ಲೂ ದೇವರಿದ್ದಾನೆ ಎಂದು. ಹೀಗಿರುವಾಗ ಪ್ರತಿಯೊಂದು ಸ್ಥಳವೂ ಪುಣ್ಯಕ್ಷೇತ್ರವೇ ಅಲ್ಲವೇ?? ಹಾಗೂ ನಾವು ಎಲ್ಲಿಯೇ ಪಾಪ ಮಾಡಿದರೂ ಕೂಡ ವಜ್ರಲೇಪವಾಗಿಯೇ ಪರಿಣಮಿಸುತ್ತದೆ, ಇದರಿಂದ ನಾವು ವಂಚಿತರಾಗಲು ಸಾಧ್ಯವೇ..?, 'ಸಾಧ್ಯವಿದೆ' ಎನ್ನುವವನು ಮೂರ್ಖನೆ ಆಗಿರುತ್ತಾನೆ.
ಸಮಾಜದಲ್ಲಿ ಓರ್ವ ವ್ಯಕ್ತಿಯನ್ನು 'ಕೆಟ್ಟವನು' ಅಥವಾ 'ಒಳ್ಳೆಯವನು' ಎಂದು ನಿರ್ಧರಿಸುವುದು ಕೂಡ ಆತನ ಕರ್ಮದ ಆಧಾರದ ಮೇಲೆಯೇ ಆಗಿರುತ್ತದೆ.
ಧರ್ಮದ ಹುಟ್ಟು:
'ಪರಿತ್ರಾಣಾಯ ಸಾಧೂನಾಂ'-ಒಳ್ಳೆಯವರಿಗೆ ಮುಕ್ತಿ ದೊರಕಿಸಲು
ಹಾಗೂ 'ವಿನಾಶಾಯ ಚ ದುಷ್ಕೃತಾಂ'-
ಕೆಟ್ಟವರ ವಿನಾಶ ಮಾಡಲೆಂದೇ ಆಗಿರುತ್ತದೆ. ಹಾಗೂ ಧರ್ಮವನ್ನು ಕರ್ಮದ ಆಧಾರವಾಗಿಸುವಲ್ಲಿ ನಾವು ಎಡವಿದ್ದೇ ಆದರೇ ನಮ್ಮ ವಿನಾಶದ ಸೂಚನೆ ಅಂದೇ ನಮಗೆ ಸಿಕ್ಕಂತೆ..
ಭಾರತದ ಪ್ರತಿಯೊಂದು ಸನಾತನ ಧರ್ಮಗಳಲ್ಲೂ ಕರ್ಮಕ್ಕೆ ಶ್ರೇಷ್ಠ ಸ್ಥಾನಮಾನ ನೀಡಿದ್ದಾರೆ, ಹಾಗೂ ಅದನ್ನು ಮಾನವ ಪಾಲಿಸುತ್ತಿಲ್ಲ ಎಂದಾದರೇ, ಆತ ತನ್ನ ಧರ್ಮಕ್ಕೆ ಅನ್ಯಾಯ ಮಾಡುತ್ತಿದ್ದಾನೆಂದರ್ಥ.
ಪ್ರತಿಯೊಬ್ಬರ ಕೆಟ್ಟ ಕರ್ಮಕ್ಕೆ ಅವರ ದೌರ್ಬಲ್ಯವೇ ಕಾರಣವಾಗಿರುತ್ತದೆ, ಹಾಗೂ ಆ ಕರ್ಮಗಳಿಂದ ಅವರು ಮತ್ತಷ್ಟು ದೌರ್ಬಲ್ಯಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿಯೇ ನಾವು ಪ್ರತಿ ಒಳ್ಳೆಯ ಕರ್ಮಕ್ಕೂ ಮುನ್ನ ಕರ್ಮಫಲದ ಕುರಿತು ಚಿಂತಿಸದೇ, ಕೆಟ್ಟ ಕ್ರಮಕ್ಕೂ ಮುನ್ನ ಚಿಂತಿಸಿದ್ದೇ ಆದರೇ ಬಹುಶಃ ನಾವಂದೇ ಸುಖ ಜೀವನದ ರಹಸ್ಯ ತಿಳಿದಂತೆ....
ನಾವೆಷ್ಟೂ ಶಿರ ಬಾಗಿಸಿ ಒಳ್ಳೆಯ ಕರ್ಮಗಳನ್ನು ಮಾಡುತ್ತೇವೆಯೋ, ಹಾಗೂ ಅದೇ ಕರ್ಮಗಳು ಮುಂದೊಮ್ಮೆ ಇಡೀ ಜಗತ್ತಿನ ಎದುರಿಗೆ ನಿಮ್ಮನ್ನು ತಲೆಯೆತ್ತಿ ನಿಲ್ಲುವ ಹಾಗೆ ಮಾಡುತ್ತದೆ ಹಾಗೂ ಇದೇ ಕರ್ಮದ ಗರಿಮೆ.
ಭಗವಂತನ ಪೂಜೆಗೆ ಒಂದು ಪುಷ್ಪವನಿಡುವ ಬದಲು, ಒಂದು ಒಳ್ಳೆಯ ಕರ್ಮ ಮಾಡುವುದು ಭಗವಂತನ ಪಾದಕ್ಕೆ ಪುಷ್ಪದ ಮಳೆಯನ್ನೇ ಹರಿಸಿದಷ್ಟಕ್ಕೆ ಸಮನಾಗಿರುತ್ತದೆ. ಹಾಗೂ ಭಗವಂತ ನಮ್ಮಿಂದ ಬಯಸುವುದೂ ಕೂಡ ಒಳ್ಳೆಯ ಕರ್ಮಗಳನ್ನೇ ಅಲ್ಲವೇ...
ಹೀಗೆ ಒಳ್ಳೆಯ ಕರ್ಮಗಳನ್ನು ಮಾಡುವಾಗ, ನಮ್ಮನ್ನು ಶಿಕ್ಷಿಸಲು ಭಗವಂತನಿಗೆ ಕಾರಣವಾದರೂ ಸಿಗಬೇಕಲ್ಲವೇ?? ಖಂಡಿತಾ ಸಿಗುವುದಿಲ್ಲ.
ಭಗವಾನ್ ಶ್ರೀ ಕೃಷ್ಣ ಹೇಳಿದಂತೆ, 'ಕರ್ಮಣ್ಯೇ ವಾಧಿಕಾರಸ್ತೇ, ಮಾಫಲೇಷು ಕದಾಚನ'
: ಕರ್ಮವನ್ನು ಮಾತ್ರವೇ ಮಾಡೋಣ, ಫಲವನ್ನು ಈಶ್ವರನಿಗೆ ಬಿಟ್ಟುಬಿಡೋಣ.
ಒಳ್ಳೆಯ ಕರ್ಮಕ್ಕೆ ಸತ್ಫಲ ಸಿಕ್ಕೇ ಸಿಗುತ್ತದೆ.
✍️ಶ್ವೇತಾ ಪಿ ಜೈನ್
ಕಲ್ಲುಗುಡ್ಡೆ, ಕೊಪ್ಪ.
( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ