ಮನಸ್ಸಿಗೆ ವ್ಯಾಕ್ಸಿನ್ ಕೊಡುವವರು ಯಾರು?
ದೇಶದೆಲ್ಲೆಡೆ ಕೊರೋನಾ ಬಹುದೊಡ್ಡ ಭೀಕರ ದುರಂತವನ್ನು ತಂದೊಡ್ಡಿದೆ. ಪ್ರತಿನಿತ್ಯ ಕೋವಿಡ್ ವಾರ್ಡ್ಗಳಲ್ಲಿ ಸಾವಿರಾರು ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ನಮ್ಮ ರಾಜ್ಯವೂ ಸಹ ಇದರಿಂದ ಬೇಸತ್ತು ಹೋಗಿದೆ. ಜನಸಾಮಾನ್ಯರ ಬದುಕು ಅತಂತ್ರ ಸ್ಥಿತಿಗೆ ಬಂದೊದಗಿದೆ. ಒಂದೆಡೆ ಜೀವಕ್ಕಾಗಿ ಹೋರಾಟ ನಡೆಯುತ್ತಿದ್ದರೆ ಮತ್ತೊಂದು ಜೀವನಕ್ಕಾಗಿ ಹೋರಾಟ ನಡೆಯುತ್ತಿದೆ.
ಕೋವಿಡ್ ತಮಗೆ ಬಂದಿದೆ ಎಂದರೆ ಬಹಳಷ್ಟು ಜನ ಮನಸ್ಸು ಹೊಡೆದುಕೊಂಡು ಭಯಭೀತರಾಗುತ್ತಾರೆ. ಸದಾ ಮನಸ್ಸಿನಲ್ಲಿ ಅದನ್ನೇ ಚಿಂತಸಿ ಮಾನಸಿಕವಾಗಿ ಕುಸಿದು ಹೋಗುತ್ತಾರೆ. ಮನಸ್ಸಿನಂತೆ ಮಹಾದೇವ ಕನಸಿನಂತೆ ಕೈಲಾಸ ಎಂಬ ಗಾದೆಯ ಮಾತಿನಂತೆ ಮಾನಸಿಕ ಸ್ಥಿತಿ ಕುಗ್ಗುತ್ತಾ ಹೋದಂತೆ ದೈಹಿಕ ಸ್ಥಿತಿಯು ಕುಗ್ಗುತ್ತದೆ. ಮನಸ್ಸು ದೃಢವಾಗಿದ್ದರೆ ಕೊರೋನಾ ಏನೂ ಹಾನಿ ಮಾಡುವುದಿಲ್ಲವಾ ಎಂದು ನೀವು ಕೇಳಬಹುದು. ಕೊರೋನಾ ಹಾನಿ ಮಾಡುವುದು ದೇಹಕ್ಕೆ ಮಾತ್ರ ಮನಸ್ಸಿಗಲ್ಲ. ಕೊರೋನಾದಿಂದ ಹಾನಿಯಾದ ದೈಹಿಕ ಸ್ಥಿತಿಯನ್ನು ವೈದ್ಯಕೀಯ ಔಷಧೋಪಚಾರದಿಂದ ವಾಸಿ ಮಾಡಬಹುದು. ಆದರೆ ಮನಸ್ಸಿಗೆ ನಾವು ಮಾಡಿಕೊಂಡ ಹಾನಿಗೆ ಔಷಧಿ ನಮ್ಮಲ್ಲೇ ಇದೆ. ಅದುವೇ ಧೈರ್ಯ ಧೈರ್ಯ ಧೈರ್ಯ....
ಈ ಒಂದೆರಡು ವಾರದಿಂದ ಸುದ್ಧಿ ಮಾಧ್ಯಮಗಳನ್ನು ಗಮನಿಸಿದರೆ ಇದು ನಮಗೆ ಗೊತ್ತಾಗುತ್ತದೆ. ನಿಮಗೆ ಕೋವಿಡ್ ಪಾಸಿಟಿವ್ ಬಂದಿದೆ ಹದಿನಾಲ್ಕು ದಿನ ಮೆಡಿಸಿನ್ ತೆಗೆದುಕೊಂಡು ಹೋಂ ಐಸೊಲೇಶನ್ನನಲ್ಲಿ ಇರಿ ಅಂತ ಡಾಕ್ಟರ್ ಅಂದದ್ದನ್ನು ಕೇಳಿದ ಶಿಕ್ಷಕನೊಬ್ಬ ನನ್ನಿಂದ ನನ್ನ ಮನೆಯವರಿಗೆ ತೊಂದರೆ ಎಂದು ರಸ್ತೆಯ ಪಕ್ಕ ಬೈಕ್ ನಿಲ್ಲಿಸಿ ಪೋನು ಪರ್ಸು ಎಲ್ಲಾ ಕೆಳಗೆ ಇಟ್ಟು ನೀರಿಗೆ ಹಾರಿದ್ದಾನೆ. ಹೀಗೆ ಕೋವಿಡ್ ಪಾಸಿಟಿವ್ ಬಂದದ್ದನ್ನು ಕೇಳಿ ಒಬ್ಬ ನಿವೃತ್ತ ಉಪ ತಹಶಿಲ್ದಾರರ್ ನೇಣು ಬಿಗಿದುಕೊಂಡು ಜೀವ ಬಿಟ್ಟಿದ್ದಾನೆ. ಇದೇ ವಿಷಯಕ್ಕೆ ಮತ್ತೊಬ್ಬನಾರೋ ರೈಲು ಅಳಿಗೆ ತಲೆಕೊಟ್ಟು ಸತ್ತನಂತೆ. ದಿನನಿತ್ಯ ಇಂತಹ ಸಾಲು ಸಾಲು ಸುದ್ದಿಗಳು ಬರುತ್ತಿವೆ. ಇಂತಹ ನಿರ್ಧಾರಗಳಿಗೆ ಬಹುಮುಖ್ಯ ಕಾರಣ ಕೋವಿಡ್ನ ಮೇಲಿನ ಅತಿಯಾದ ಭಯ. ಇದು ಕೋವಿಡನ್ನು ದೇಹದಿಂದ ಮನಸ್ಸಿಗೆ ತಂದೊಡ್ಡುತ್ತದೆ. ಸಾವಿಗೆ ಐವತ್ತು ಭಾಗ ಕೋವಿಡ್ ಕಾರಣವಾದರೆ ಇನೈವತ್ತು ಭಾಗ ಮನಸ್ಸಿನ ಭಯವೇ ಪ್ರಬಲ ಕಾರಣವಾಗುತ್ತದೆ.
ಕೋವಿಡ್ನಿಂದ ಮೃತಪಟ್ಟವರಲ್ಲಿ ಹೆಚ್ಚು ಜನರು ಮೃತಪಟ್ಟಿರುವುದು ಆಸ್ಪತ್ರೆಯಲ್ಲೇ ಹೊರತು ಮನೆಯಲಲ್ಲ ಎಂಬುದನ್ನು ನಾವು ಮನಗಾಣಬೇಕು. ಕೊರೋನಾ ಸೋಂಕಿತರು ಆಸ್ಪತ್ರೆಯಲ್ಲಿ ಒಬ್ಬಂಟಿಗಳಾಗಿಬಿಡುತ್ತಾರೆ. ತಮ್ಮ ಮನಸ್ಸಿನ ಭಾವನೆಗಳನ್ನು ಬಿಚ್ಚಿ ಹೇಳಿಕೊಳ್ಳಲು ಯಾರು ಸಿಗುವುದಿಲ್ಲವಾದ್ದರಿಂದ ಏಕಾಂಗಿತನ ಕಾಡುತ್ತದೆ. ಪಕ್ಕದಲ್ಲಿ ಒಂದೆರಡು ಸಾವುಗಳನ್ನು ನೋಡಿದರೆ ಭಯಗೊಂಡು ಆ ಜಾಗದಲ್ಲಿ ತಮ್ಮನ್ನು ಕಲ್ಪಿಸಿಕೊಳ್ಳುತ್ತಾ ಹುಚ್ಚು ಆಲೋಚನೆಯಲ್ಲಿ ತೊಡಗುತ್ತಾರೆ. ಇನ್ನೂ ಸಮಯಕ್ಕೆ ಸರಿಯಾಗಿ ಊಟ ನೀರನ್ನು ಅದೆಷ್ಟರ ಮಟ್ಟಿಗೆ ಸೇವಿಸುತ್ತಾರೋ ಅವರಿಗೆ ಗೊತ್ತು. ಆದರೆ ಕೆಲ ಕೋವಿಡ್ ಸೆಂಟರ್ಗಳಲ್ಲಿ ವೈದ್ಯರು ತಮ್ಮ ವೈದ್ಯಕೀಯ ವೃತ್ತಿ ಹೊರತಾಗಿ ಕೋವಿಡ್ ಸೋಂಕಿತರಿಗೆ ಮಾನಸಿಕ ಆತ್ಮಸ್ತೈರ್ಯವನ್ನು ತುಂಬುತ್ತಿರುವುದು ಶ್ಲಾಘಿಸುವಂತದ್ದು
ಮೊನ್ನೆ ತಾನೇ ಮಳವಳ್ಳಿಯ ಶಾಸಕರಾದ ಡಾ. ಕೆ ಅನ್ನದಾನಿ ಮತ್ತು ನಂತರದಲ್ಲಿ ಹೊನ್ನಾಳಿಯ ಶಾಸಕರಾದ ಎಂ ಪಿ ರೇಣುಕಾಚಾರ್ಯ ಇವರು ಕೋವಿಡ್ ಸೆಂಟರ್ಗಳಲ್ಲಿ ಕಲಾವಿದರನ್ನು ಕರೆಸಿ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಕೋವಿಡ್ ಸೋಂಕಿತರ ಮನಸ್ಸಿಗೆ ಮನರಂಜನೆಯನ್ನು ಒದಗಿರುವುದು ಅಲ್ಲಿ ಸ್ವತಃ ಪೋಲೀಸರೊಬ್ಬರು ಹಾಡು ಹಾಡಿರುವುದು, ಸ್ವತಃ ಶಾಸಕರೂ ಸಹ ಕಲಾವಿದರಾಗಿ ಕಲಾವಿದರೊಂದಿಗೆ ನೃತ್ಯ ಮಾಡಿರುವುದು ಅತ್ಯಂತ ಶ್ಲಾಘನೀಯವಾದುದು. ಸಂಗೀತ, ನೃತ್ಯ, ಹಾಡುಗಳು, ವ್ಯಾಯಾಮ, ಯೋಗ, ಮೊದಲಾದ ಲಲಿತ ಕಲೆಗಳು ಮನುಷ್ಯನ ಮನಸ್ಸಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲೂ ವಿಶೇಷವಾಗಿ ಸಂಗೀತದ ಒಂದೊಂದು ರಾಗಗಳಿಗೂ ಸಹ ಮನಸ್ಸನ್ನು ಶಾಂತವಾಗಿರಿಸುವ ಜೊತೆಗೆ ಒಂದೊಂದು ರೋಗಗಳನ್ನು ಶಮನ ಮಾಡುವ ಶಕ್ತಿಯಿದೆ. ಆದುದರಿಂದ ಸರ್ಕಾರ ಸೋಂಕಿತರ ಮನಸ್ಸಿಗೆ ಕಲೆಗಳ ವ್ಯಾಕ್ಸಿನ್ ಕೊಟ್ಟರೆ ಸಾವಿನ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು ಎಂಬುದು ನನ್ನ ಅನಿಸಿಕೆ
ಆದುದರಿಂದ ಜಾಗ್ರತೆಯಿಂದ ಇರಿ, ಸ್ವಚ್ಛ ಮಾಡಿದ ಮಾಸ್ಕ್ ಬಳಸಿ, ದೈಹಿಕ ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ. ಮೊದಲು ಊಟ ಆಮೇಲೆ ಮೆಡಿಸಿನ್. ಆದುದರಿಂದ ಸಮಯಕ್ಕೆ ಸರಿಯಾಗಿ ಊಟ ಮಾಡಿ. ಇದೆಲ್ಲದಕ್ಕೂ ಹೆಚ್ಚಾಗಿ ಧೈರ್ಯದಿಂದ ಇರಿ. ಹಾಡು ಕೇಳಿರಿ, ನೀವೂ ಹಾಡಿರಿ, ಕುಣಿಯಿರಿ, ನಲಿಯಿರಿ, ಯೋಗ ಮಾಡಿ, ಧ್ಯಾನ ಮಾಡಿ, ನಿಮ್ಮ ಸ್ನೇಹಿತರೊಂದಿಗೆ ಮಾತನಾಡಿ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳಿ, ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ, ಏಕೆಂದರೆ ನಿಮ್ಮ ಮನಸ್ಸಿಗೆ ವ್ಯಾಕ್ಸಿನ್ ತಯಾರಿಸಿಕೊಳ್ಳುವವರು ನೀವೇ ಮತ್ತು ಪಡೆದುಕೊಳ್ಳುವವರು ಸಹ ನೀವೇ ಆಗಿರುತ್ತೀರಿ. ನೀನು ಏನನ್ನು ಆಲೋಚಿಸುತ್ತೀಯೋ ಅದೇ ಆಗುತ್ತೀಯ ಎಂಬ ಮಾತನ್ನು ಅರ್ಥೈಸಿಕೊಂಡು ಸದಾ ಧನಾತ್ಮಕ ಆಲೋಚನೆಯಲ್ಲಿ ತೊಡಗಿ ಚೆನ್ನಾಗಿರಿ.... ನಾವಿರುವವರೆಗೂ ಸಾವಿನ ಬಗ್ಗೆ ಚಿಂತೆ ಬೇಡ. ಏಕೆಂದರೆ ನಾವಿರುವವರೆದು ಸಾವು ಬರುವುದಿಲ್ಲ. ಸಾವು ಬಂದಾಗ ನಾವಿರುವುದಿಲ್ಲವಲ್ಲ!
- ಮಾರುತಿ ಹೆಚ್ ಬಿ ಕವಿ, ಕಲಾವಿದರು ಜಗಳೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ