ಶನಿವಾರ, ಜುಲೈ 3, 2021

ಸೇವಂತಿ (ಸಣ್ಣ ಕಥೆ) - ಶ್ರೀಮತಿ ಕಮಲಮ್ಮ ಬೆಂಗಳೂರು.

*ಸೇವಂತಿ*

ಸೇವಂತಿ ಕಾಯುತ್ತಿದ್ದಳು. ರಾತ್ರಿಯಾಗಿದ್ದರಿಂದ ರೈಲ್ವೇ ನಿಲ್ದಾಣದಲ್ಲಿ ಜನಜಂಗುಳಿ ಕಡಿಮೆ ಇತ್ತು. ವಿಜಯ್ ಹತ್ತು ಗಂಟೆಗೇ ಇರುತ್ತೇನೆಂದವ ಹನ್ನೆರಡಾದರೂ ಇಲ್ಲ. ಆಕೆಯ ಮನದಲ್ಲಿ ಆಗಲೇ ಅನುಮಾನ ಎಡೆಯಾಡುತ್ತಿತ್ತು. ಆ ಒಂಟಿ ಹೆಣ್ಣನ್ನ ಆಗಲೇ ಕೆಲವು ಆಸೆಗಣ್ಣುಗಳು ಹಿಂಬಾಲಿಸುತ್ತಿದ್ದವು.
ಒಡವೆಗಳ ಚೀಲವನ್ನು ಕೈ ಅವಿಚಿ ಹಿಡಿದಿತ್ತು.

ಛಿ!ಎಂಥಾ ದ್ರೋಹಿ! ನಾನು ಇಂಥವ್ನ ನಂಬ್ಕೊಂಡು ಅಪ್ಪ ಅಮ್ನಿಗೆ ಹೇಳ್ದೆ ಬಂದ್ಬಿಟ್ನಲ್ಲಾ! ದುಡ್ಡು ಒಡವೆ ಎಲ್ಲಾ ಎತ್ಕಂಡು  ಬಂದ್ನಲ್ಲಾ! ಅಲ್ಲಿ ಅಪ್ಪ ಹುಡುಕ್ತಾ ಇರ್ತಾರೆ. ಇಂಥಾ ನಂಬಿಕೆ ದ್ರೋಹೀನ ನಂಬಿ ಬಂದ್ನೆಲ್ಲಾ. ಅಯ್ಯೋ ದೇವರೇ ನಾನೇನು ಮಾಡಲಿ? ಅವಳ ಬೊಗಸೆ ಕಣ್ಣುಗಳಿಂದ ಹನಿಮುತ್ತುಗಳು ಉದುರಿದವು. 

ಹೆಣ್ಣು ಮಕ್ಕಳ ವೆಯಟಿಂಗ್ ಕೊಠಡಿಯಲ್ಲಿ ಆಕೆ ಮೂಲೆಯೊಂದರಲ್ಲಿ ಗುಬ್ಬಚ್ಚಿಯ ಹಾಗೆ ಮುದುಡಿ ಕುಳಿತಳು. ಬೆಳಗಾದರೂ ವಿಜಯ್ನ ಸುಳಿವಿಲ್ಲ. ಅವಳಿಗೆ ಗೊತ್ತಿದ್ದ ಬೈಗುಳ ಗಳನ್ನೆಲ್ಲಾ ಬೈದು ಶಾಪ ಹಾಕಿದಳು.

ಮಗಳು ಮನೆ ಬಿಟ್ಟು ಹೋಗಿದ್ದಕ್ಕೆ ದಿಕ್ಕೆಟ್ಟು ಕುಳಿತ್ತಿದ್ದ ಹಯವದನ ರಾಯರು ಮಗಳ ಫೋನು ಬಂದಾಕ್ಷಣ ಎಲ್ಲಿ ಹಾಳಾಗಿ ಹೋಗಿದೀಯೇ? ಬಾ ಮನೆಗೆ ನರಕ ತೋರಿಸ್ತೀನಿ ಅಂತ ಬೊಬ್ಬೆ ಹಾಕಿದರು.

ಅಪ್ಪಾ ನನ್ನ ಇದೊಂದು ಬಾರಿ ಕ್ಷಮಿಸಿ  ಬಿಡಿಯಪ್ಪಾ! ನೀವು ಹೇಳಿದ ಹಾಗೆ ಕೇಳ್ತೀನಿ. ನನಗೆ ನೀವು ಏನು ಶಿಕ್ಷೆ ಕೊಟ್ಟರೂ ಅನುಭವಿಸ್ತೀನಿ. ಪ್ಲೀಸ್ ಅಪ್ಪಾ ಮಗಳು ಗೋಗರೆದಳು.

ತಾಯಿ ಫೋನ್ ಕಿತ್ತುಕೊಂಡು ಚಿನ್ನಾ ನಿನ್ನ ತಪ್ಪು ನೀನು ತಿಳ್ಕಂಡಿದೀಯಲ್ಲಾ ಮನೆಗೆ ಬಾ. ಅಪ್ಪ ಕೂಗಾಡ್ತಾರೆ ಅಷ್ಟೇ! ನಿಂಗೆ ಏನೂ ಮಾದ್ಡೇ ಇರೋ ಹಾಗೆ ನಾನು ನೋಡ್ಕೋತೀನಿ. ಬೇಗ ಬಾ ಕಾಯ್ತಾ ಇದೀವಿ. ನೀನು ಹೋದಾಗಿನಿಂದ ಹನಿ ನೀರು ಕುಡ್ದಿಲ್ಲ ನಾವು. ಬಾರಮ್ಮಾ ಬಾ. ಕಾಯ್ತಾ ಇದೀವಿ ಬೇಗ ಬಾರೇ ಅಂದರು.

ಮಗಳು ಮನೆಗೆ ಬಂದು ತಾನು ಮನೆಯಿಂದ ತೆಗೆದುಕೊಂಡು ಹೋದ ಹಣ ಒಡವೆ ಅಪ್ಪನ ಕಾಲಹತ್ತಿರ ಇಟ್ಟು ಕಾಲು ಹಿಡಿದು ಕಣ್ಣೀರಿನಿಂದ ತೊಳೆದಳು. ತಂದೆ ಕಣ್ಣೊರೆಸಿಕೊಂಡು ತಲೆ ಸವರಿ ಮೇಲೆ ಹೋದರು.

ಈಗ ಅವಳ ಪೋನ್ ನಲ್ಲಿ ವಿಜಯ್ನ ನಂಬರ್ ಇಲ್ಲ. ಅವನ ನಂಬರ್ ಬ್ಲಾಕ್ ಆಗಿದೆ. ಅವನೂ ಅವಳಿಗೆ ಪೋನ್ ಮಾಡಿಲ್ಲ. ಆ ನಂಬಿಕೆ ದ್ರೋಹಿಯನ್ನ ಕನಸಲ್ಲೂ ನೆನಸಲ್ಲ ಅವಳು!

ಸ್ವಲ್ಪ ದಿನಗಳ ನಂತರ ಸೇವಂತಿಯ ಮದುವೆ ನಗರದ ಪ್ರತಿಷ್ಟಿತ ಕಲ್ಯಾಣ ಮಂದಿರದಲ್ಲಿ ಅಪ್ಪ ಅಮ್ಮ ನೋಡಿದ ಹುಡುಗನೊಡನೆ ನಡೆಯಿತು. ಮದುವೆಯಾದ ಮಾರನೇ ದಿನವೇ ಆಕೆ ಅಮೇರಿಕಕ್ಕೆ ಹಾರಿದಳು.

ಒಂದು ವಿಷಯ:
ಅಕೆಯ ಮದುವೆಯ ದಿನ ಯಾರೋ ಒಬ್ಬ ಯುವಕ ಗಾಲಿ ಕುರ್ಚಿಯ ಮೇಲೆ ಕುಳಿತುಕೊಂಡು ಬಂದು ಅಕ್ಷತೆ ಹಾಕಿ ಮನದಣಿಯೆ ಕಣ್ತುಂಬಿಕೊಂಡು ಕಣ್ಣು ತುಂಬಾ ನೀರು ತುಂಬಿಕೊಂಡು ಹಾರೈಸಿ ಊಟ ಮಾಡದೇ ಹೊರಗೆ ಹೋಗಿದ್ದು ಕೆಲವರ ಕಣ್ಣಿಗಾದರೂ ಬಿದ್ದಿತ್ತು.

ವಿಜಯ್ನ ತಾಯಿ ಅವನೆದುರು ಹೇಳುತ್ತಿದ್ದರು. ನಿಜ! ನೀನು ಅವಳಿಗಾಗಿ ಹೋಗುವಾಗ ನಿನಗೆ ಅಪಘಾತ ಆಗಿ ಆಸ್ಪತ್ರೆಗೆ ಸೇರಿದಾಗ ಅವಳಿಗೆ ತಿಳಿದಿದ್ದರೆ ನಿಜವಾದ ಪ್ರೀತಿ ಇದ್ದಲ್ಲಿ ಅವಳು ಖಂಡೀತ ಬರ್ತಿದ್ಳು.

ಆ ಮೇಲೇದ್ರೂ ನಿನ್ನ ಸ್ನೇಹಿತರ ಮೂಲಕವಾದ್ರೂ ಅವಳನ್ನ ಸಂಪರ್ಕಿಸಬಹುದಿತ್ತಲ್ಲಾ. ಆಗ ಅವ್ಳೇನು ಹೇಳ್ತಿದ್ಲೋ ಏನೋ ಅಂದರು.

ಅಮ್ಮ ಸುಮ್ನಿರು. ನಾನೂ ಆಗ ದುಡಕಿದ್ಕೇ ದೇವರು ನಂಗೆ ಈ ಶಿಕ್ಷೆ ಕೊಟ್ನೇನೋ! ಕಾಯಬೇಕಾಗಿತ್ತು ನಾನು. ಈಗ ಅವ್ಳು ನನ್ನ ಮರ್ತು ಹಾಯಾಗಿ ಅಮೇರಿಕಕ್ಕೆ ಹಾರಿದಾಳೆ. 
ಈ ಕುಂಟನ್ನ ಕಟ್ಕೊಂಡು ಏನ್ಮಾಡ್ತಾಳೆ ಅವ್ಳು? ಚೆನ್ನಗಿರ್ಲಮ್ಮಾ.

ಹಂಗಂತ ನೀನೇ ನನ್ನ ದುಡ್ದು ಸಾಕಬೇಡಮ್ಮಾ. ಸ್ವಲ್ಪ ಚೆನ್ನಾಗಾದ್ರೆ ಕೆಲ್ಸ ಹುಡುಕ್ಕೋತೀನಿ. ಅವ್ಳು ಯಾವಾಗ್ಲೂ ಮನಸಲ್ಲೇ ಇರ್ತಾಳೆ ಎಂದ.

ತಾಯಿಯ ಕಣ್ಣಲ್ಲಿ ನೀರು ತುಂಬಿತು.

- ಶ್ರೀಮತಿ ಕಮಲಮ್ಮ ಬೆಂಗಳೂರು.
೫೭೦/೨೫ ಮೊದಲನೇ ಹಂತ
ಎರಡನೆ ಅಡ್ಡರಸ್ತೆ 
ಶಿವಕುಮಾರಸ್ವಾಮಿ ನಗರ
ದಾವಣಗೆರೆ ೫೭೭೦೦೫.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...