ಶನಿವಾರ, ಜುಲೈ 3, 2021

ವಾರ ಬಂತಮ್ಮ ರವಿ ವಾರ ಬಂತಮ್ಮ (ಲೇಖನ) - ಡಾ ಯಲ್ಲಮ್ಮ ಕೆ.

 ವಾರ ಬಂತಮ್ಮ..,ರವಿವಾರ ಬಂತಮ್ಮ


ಕಾಲಂಗಳೊಳಗೆ ಮಳೆ | ಗಾಲ ಲೋಕಕೆ ಪ್ರಾಣ

'ಕಾಲವಾಱಱಲಿ ಕಡು ಚೆಲುವು – ಬೇಸಗೆಯ 

ಕಾಲವತಿಸುಖವು ಸರ್ವಜ್ಞ’. 48*


ಪ್ರಾಕೃತಿಕ ಜಗತ್ತನ್ನು ಹಿಂದೂ ಪಂಚಾಂಗದಂತೆ : ೬ ಋತುಗಳು ಮತ್ತು ೧೨ ಮಾಸಗಳು : ೧. ವಸಂತ ಋತು  (ಚೈತ್ರ ‘March’ – ವೈಶಾಖ ‘April’ ) ೨. ಗ್ರೀಷ್ಮಋತು – (ಜ್ಯೇಷ್ಠ  ‘May’ – ಆಷಾಢ ‘June’) ೩. ವರ್ಷಋತು –(ಶ್ರಾವಣ ‘July’– ಭಾದ್ರಪದ ‘August’ ) ೪. ಶರದೃತು (ಆಶ್ವಯುಜ ‘September ‘ – ಕಾರ್ತೀಕ ‘October’) ೫. ಹೇಮಂತ ಋತು (ಮಾರ್ಗಶಿರ ‘November’ – ಪುಷ್ಯ ‘December’ ) ೬. ಶಿಶಿರ ಋತು  (ಮಾಘ ‘January’ – ಫಾಲ್ಗುಣ ‘February’ ) ಎಂಬ ವಿಂಗಡಿಸಿದ್ದನ್ನು ನೋಡಬಹುದು.; ಈ ಆರು ಋತುಗಳಲ್ಲಿ ಮಳೆಗಾಲವು ಲೋಕಕ್ಕೆ ಪ್ರಾಣವಾಗಿರುವುದು, ಕಾಲವಾರರಲಿ ಬೇಸಗೆ ಅಂದರೆ ‘ವಸಂತ’ ಕಾಲ, ‘ವಸಂತಕಾಲವೇ ಸುಗ್ಗಿ ಸಂಭ್ರಮದ ಕಾಲ ವಾಗಿರುವುದರಿಂದ’ - ಅತಿಸುಖವು ಎಂದಿದ್ದಾನೆ ಕವಿ ಸರ್ವಜ್ಞ. 


ಸಾಮಾನ್ಯವಾಗಿ ಮಾನವನ ಬದುಕಿನ ಕಾಲಘಟ್ಟವನ್ನು - ಪೂರ್ವ ಬಾಲ್ಯ, ಬಾಲ್ಯ, ಪ್ರೌಢ, ವೃದ್ಧಾಪ್ಯ ಎಂದು ವಿಂಗಡಿಸಬಹುದಾಗಿದೆ. ಬಾಲ್ಯಕ್ಕೆ ಜಾರುವ ಮನಸ್ಸು ಎಲ್ಲರದ್ದೂ. ಬಾಲ್ಯದ ನೆನಪುಗಳು ಬಾಳಿನ ಬುತ್ತಿಯಲ್ಲಿ ಯಾವತ್ತು ಸವಿಬೆಲ್ಲವ ಮೆದ್ದಂತೆ ಸವಿಯೋ ಸವಿ..! ‘ವಾರ ಬಂತಮ್ಮ ಗುರುವಾರ ಬಂತಮ್ಮ’ ಎಂಬ ಗುರು ರಾಯರ ಕುರಿತಾದ ಜನಪ್ರಿಯ ಭಗವದ್ಭಕ್ತಿಯ ಗೀತೆಯನ್ನು ಎಳವೆಯಿಂದಲೂ ಕೇಳಿಕೊಂಡು ; ಅದನ್ನು ‘ವಾರ ಬಂತಮ್ಮ ರವಿವಾರ ಬಂತಮ್ಮ .., ಶಾಲೆಗೆ ರಜೆಯಮ್ಮ ನಮ್ಮ ಶಾಲೆಗೆ ರಜೆಯಮ್ಮ, ಸೋಮ, ಮಂಗಳ, ಬುಧ, ಶುಕ್ರ, ಶನಿಯು ಕಳೆದು ರವಿವಾರ ಬಂತಮ್ಮ..!’ ಎಂದು ಅಣಕವಾಡಿಕೊಂಡು ಬೆಳೆದಿದ್ದನ್ನು ನೆನಪಿಸಿ ಕೊಂಡಾಗಲೆಲ್ಲ  ‘ದೇವರಿಗೆ ಅಣಕಿಸಬಾರದಮ್ಮ, ದೇವರಿಗೆ ಅಣಕಿಸಬಾರದಮ್ಮ’ ಎಂಬ ಅಮ್ಮನ ಗದರಿಕೆಯ ಮಾತು ಇಂದಿಗೂ ಕಿವಿಯಲ್ಲಿ ಅನುರಣಿಸುತ್ತದೆ. 


ನಾನು ಶಾಲೆಯ ಕಟ್ಟೆ ಹತ್ತಿದ್ದ ಸಮಯದಿ ಅಲ್ಲಿ ವಿದ್ಯೆ ಕಲಿಸುತ್ತಿದ್ದದು ‘ಗಂಟಿ ಹೊಡಿ ಪಗಾರ ತಗ’ (ಬಿಲ್ ಆಂಡ್ ಬೆಲ್ ; ಕರೋನಾ ಎಫೆಕ್ಟ್ ನಿಂದಾಗಿ ಬೆಲ್ ಇಲ್ಲದಲೇ ಬಿಲ್ ತೆಗೆದುಕೊಳ್ಳುವ ಕಾಲ) ಎಂಬ ಪರಂಪರೆಯೊಳಗಿನ ಮಾಸ್ತಾರರ ಕೈಯಲ್ಲಿ. ಮಗ್ಗಿ ಕಲಿತವರೆಲ್ಲ ಅಂದಿಗೆ ಮಾಸ್ತಾರರಾಗಿ ಕೆಲಸಕ್ಕೆ ಸೇರಿದ್ದರು. ಕಾಲನ ಹೊಡೆತಕ್ಕೆ ಸಿಲುಕಿ ಇಂದು ಮಗ್ಗಿ ಬಾರದೇ ಇರುವವರೆಲ್ಲ ಮಾಸ್ತಾರರಾಗಿದ್ದಾರೆ ಆ ಮಾತು ಬೇರೆ. ನಮಗೂ ಮಗ್ಗಿ ಕಂಠಪಾಠ ಹೊಡೆದು ಒಪ್ಪಿಸಬೇಕಾದ ; ಜೊತೆಜೊತೆಗೆ ಋತುಗಳು, ಮಾಸಗಳು, ಅ.ಆ,ಇ.ಈ ಎಂದು ಅಕ್ಷರಗಳನ್ನು ತಿದ್ದುವ ಶಿಕ್ಷೆ ತಪ್ಪಿದ್ದಿಲ್ಲ. ಆಧುನಿಕತೆಯ ಗಾಳಿ ಬೀಸತೊಡಗಿದ್ದರಿಂದ - ತುರುಕ, ವಡ್ಡ-ದಡ್ಡ, ಕೊರಮನೆಂದು ಜಾತಿವಿಡಿದು ಬೈಯ್ಯುವ, ಚಾಟೀ ಬೀಸುವ ರೂಢಿ ಮಾಯವಾಗಿ ಬಗ್ಗಿ ನಿಲ್ಲಿಸುವ, ಎಬ್ಬಿಸಿ ನಿಲ್ಲಿಸಿ ನಮ್ಮ ನಮ್ಮಲ್ಲೇ ಒಬ್ಬರಿಗೊಬ್ಬರನ್ನು ಮೂಗು ಹಿಡಿದು ಕಪಾಳಮೋಕ್ಷ ಮಾಡುವ ಸೂಕ್ಷ್ಮ ತಂತ್ರಗಳನ್ನು ಮಾಸ್ತಾರರು ಚಾಲ್ತಿಗೆ ತಂದಿದ್ದರು. ನಾನು ಮೂಗ್ಹಿಡಿದು ಹೊಡೆದದ್ದು ಹೆಚ್ಚು ಅಂದರೆ ಆತ್ಮಪ್ರಂಶಂಸೆಯಾದೀತು ; ಹೊಡೆಯಿಸಿಕೊಂಡಿದ್ದು ಹೆಚ್ಚೆಂದರೆ ದೊಡ್ಡತನ – ದಡ್ಡತನದ ಪ್ರತೀಕವಾದೀತು ಹಾಗಾಗಿ ಹೊಡೆದದ್ದು-ಹೊಡೆಸಿಕೊಂಡದ್ದು ಎರಡು ಸಂದರ್ಭ ಇತ್ತೆಂದು ಹೇಳಿದರೆ ಹೆಚ್ಚು ಸೂಕ್ತವಾದೀತು. 


ಹಾಗೇ ನಮ್ಮ ನಮ್ಮಲ್ಲೇ ತಂದಿತ್ತು ಮೋಜು ನೋಡುತ್ತಿದ್ದ ಮಾಸ್ತಾರರನ್ನು ಕಂಡರೆ ಎಲ್ಲಿಲ್ಲದ ಸಿಟ್ಟಿನ ಜೊತೆಗೆ ನಮಗೆ ಕಲಿಸಲು ಹೆಣಗುವ ಅವರ ಅಕ್ಷರ ಪ್ರೀತಿ ನೆನೆದರೆ ಇಂದಿಗೂ ಆಪ್ತವೆನಿಸುತ್ತದೆ. ನಮ್ಮೊಳಗಿನ ಸಿಡುಕು-ಮುಡುಕಾದರೂ ಎಷ್ಟು ಹೊತ್ತು ಇದ್ದೀತು..? ಇಂಟ್ರೋಲ್ ಬೆಲ್ ಹೊಡೆದು ಅಂಗಳಕ್ಕಿಳಿದಾಗ ಶಾಲಾ ಕಂಪೌಂಡಿನ ಆಚೆಯಲ್ಲಿ ಕುಳಿತು ಮಿಠಾಯಿ ಮಾರಲು, ಎಲಚಿಹಣ್ಣು ಮಾರಲು ಕುಳಿತ್ತಿದ್ದ ಅಜ್ಜಿಯ ದೆಸೆಯಿಂದ ಸಂಧಾನ ಏರ್ಪಟ್ಟು ಇರುಸು-ಮುರುಸು ಮಿಠಾಯಿ ಸಿಹಿಯಲ್ಲಿ ಪರ್ಯಾವಸಾನಗೊಳ್ಳುತ್ತಿತ್ತು. 


ಬಾಲ್ಯವೆಂಬುದು ಸವಿನೆನಪುಗಳ ಖಣಿ. ಮೆದ್ದಷ್ಟು ಸವಿಸವಿ..! ಇನ್ನೂ ವಾರದ ವಿಚಾರಕ್ಕೆ ಮರಳೋದಾದರೆ .., ವಾರಪೂರ್ತಿ ಪಠ್ಯ-ಪಠ್ಯೇತರ ಚಟುವಟಿಕೆಗಳು ಇದ್ದಾಗ್ಯೂ ಕೂಡ ಇದಕ್ಕೂ ಹೊರತಾದ ನಮ್ಮಯ ಕೋತಿ ಬುದ್ಧಿಯ ತರಲೇ ಕೆಲಸ-ಕಾರ್ಯಗಳಿಗಾಗಿ ರವಿವಾರವನ್ನು ಚಾತಕ ಪಕ್ಷಿಯಂತೆ ಕಾಯುತ್ತಿದ್ದೆವು. ವಾಸ್ತವದಲ್ಲಿ ನಮಗೆಲ್ಲ ಶನಿವಾರದ ಮಧ್ಯಾಹ್ನದಿಂದಲೇ ರವಿವಾರ ಶುರುವಿಟ್ಟುಕೊಳ್ಳುತ್ತಿತ್ತು. ಗೋಲಿಯಾಟ, ಚಿಣ್ಣೀದಾಂಡು, ಲಗೋರಿ, ಮಾವಿನ ವಟ್ಟದಾಟ, ಪಣ್ಣಕಾಳಾಟ, ಇತ್ತ ಸಂಪ್ರಾದಾಯಿಕವೂ ಅಲ್ಲದ ಅತ್ತ ಆಧುನಿಕವೂ ಅಲ್ಲದ ಆಟಗಳಲ್ಲಿ ಮುಳುಗೇಳುತ್ತಿದ್ದೆವು. ದನ ಕಾಯಲಿಕ್ಕೆ ಹೋಗುತ್ತಿದ್ದ ನೆನಪು ಹಚ್ಚಹಸಿರಾಗಿದೆ. ಒಂದ್ಹೊತ್ತುಂಡು, ಬುತ್ತಿಕಟ್ಟಿಕೊಂಡು ದನಕಾಯಲಿಕ್ಕೆ ಹೋಗೋದು ನೆಪಮಾತ್ರ ; ದನಗಳು ಊರ ಹೊರಗಿನ ಬಯಲಿನಲ್ಲಿ ತಮ್ಮ ಪಾಡಿಗೆ ತಾವು ಮೆಯ್ದುಕೊಂಡು ಇಳಿಹೊತ್ತಿಗೆ ಮನೆಸೇರಿದ್ದಾಗ್ಯೂ ನಾವು ಬರುವುದು ದೀಪ ಉರಿಸುವ ಹೊತ್ತಿಗೆ. 


ಇನ್ನು ಪ್ರಸ್ತುತ ಸಂದರ್ಭ ನೋಡುವುದಾದರೆ : ವಾರದ ಭಾನುವಾರ, ವೀಕ್ ಎಂಡ್, ಮೋಜು ಮಸ್ತಿ ಎಂಬುದು ಇತ್ತೀಚಿನ ಪರಿಭಾಷೆಯಾಗಿದೆ. ಬಾಳಿನ ಓಟದಿ ಸ್ಪರ್ಧಾಳಾಗಿ ಓಡಿ ಓಡಿ ಸರೀಕರನ್ನು ಹಿಂದ್ಹಿಕ್ಕಿ ಬಂದು ಸರ್ಕಾರಿ ಹುದ್ದೆ ಯನ್ಹಿಡಿದಾದಮೇಲೆ, ವೃತ್ತಿಧರ್ಮದಲ್ಲಿ ಕಾಲಮುಂದೂಡುತ್ತಿರುವಾಗ ಕೆಲಸದ ಒತ್ತಡಕ್ಕೆ ಸಿಲ್ಕಿ ಅಶಕ್ತರಾದಾಗ ‘Weak’  ನಮಗೆ ವೀಕ್ ಎಂಡ್ ನೆನಪಾಗುತ್ತದೆ. ಇನ್ನೂ ಮೋಜು, ಮಸ್ತಿ ಎನ್ನುವುದು ಹೆಣ್ಣುಮಕ್ಕಳಿಗದು ಗಗನ ಕುಸುಮವದು. ಸಮಯ ಪ್ರಜ್ಞೆ ‘Time Sence’ ಎಂಬ ಹಣೆಪಟ್ಟಿಯನ್ನು ಕಟ್ಟಿಸಿಕೊಂಡು ಓಡುವವರೆಂದರೆ..? ಬೋಧಕ ವರ್ಗದವರು. ಮಿಕ್ಕುಳಿದವರಲ್ಲಿ ಆ ಪ್ರಜ್ಞೆಯನ್ನು ಕಾಣಬಯಸಿದರೆ ಅದು ಕಗ್ಗತ್ತಲೆಯ ಕಾಡಿನಲ್ಲಿ ಕರಿಬಣ್ಣದ ಕಾಡುಬೆಕ್ಕನ್ನು ಹುಡುಕಿ ದಂತೆಯೇ ಸರಿ.  ಹೀಗೆ ವಾರವಿಡೀ ಓಡಿ ಓಡಿ ಬೇಸತ್ತ ಜೀವಕ್ಕೊಂದಿಷ್ಟು ನೆಮ್ಮದಿ ಬೇಡವೇ..? ಅದಕ್ಕಾಗಿ ಬಾಲ್ಯದ ಅಣಕವಾಡನ್ನು ಸ್ವಲ್ಪ ತಿರುಚಿಕೊಂಡು ‘ವಾರ ಬೇಕಮ್ಮ ರವಿವಾರ ಬೇಕಮ್ಮ, ದುಡ್ದುಡಿದು ದಣಿದ ದೇಹಕ್ಕೆ ವಿಶ್ರಾಂತಿ ಪಡೆಯಲು.., ವಾರ ಬೇಕಮ್ಮ, ರವಿವಾರ ಬೇಕಮ್ಮ’ ಎಂದು ರಾಯರಲ್ಲಿ ಪ್ರಾರ್ಥಿಸುವಂತಾಗಿದೆ. 


ವಾರವೇನೋ ಬಂತು..! ವಿಶ್ರಾಂತಿ ಸಿಕ್ಕೀತೆ..? ಹೆಣ್ಣಾಗಿ ಹುಟ್ಟಿದ್ಮೇಲೆ ಹುಟ್ಟಿದ ಮನೆಯಿರಲಿ, ಮೆಟ್ಟಿದ ಮನೆ ಯಿರಲಿ ಹೊತ್ತೂಡುವ ಮುನ್ನವೇ ಏಳಬೇಕು, ಏಳದಿದ್ದರೆ ಆ ಮನೆಗೆ ದರಿದ್ರವೆಂದು ಹೇಳಿದ ಅಮ್ಮನ ಮಾತು ಹೆಣ್ಣುಮಕ್ಕಳ ಪಾಲಿಗದು ಶಿಲಾಲೇಖ..! ವಿಧಿಲಿಖಿತ ಬದಲಾಗಬಹುದಾದರೂ ಈ ಶಿಲಾಲೇಖ ಬದಲಾಗುವುದುಂಟೆ..? ಅದೆಂದಿಗೂ ಅಸಾಧ್ಯ. ಇಂಥ ಹಲವು ಸಂಪ್ರಾದಾಯ, ಆಚರಣೆಗಳಲ್ಲಿ ಗಂಡಿಗೆ ವಿನಾಯಿತಿ ನೀಡಲಾಗಿದೆ ಆ ಮಾತು ಬೇರೆ. ಅಂತೂ ರವಿವಾರ ಬಂತು..! ಎಂದು ಖುಷಿ ಪಡುವ ಆಗಿಲ್ಲ, ಬೆಳ್ಳಂಬೆಳಿಗ್ಗೆ ಏಳಬೇಕು, ಕಸ-ಮುಸುರೆ, ಟೀ-ಕಾಫಿ ಬಸಿದು ಮನೆ-ಮಂದಿಗೆಲ್ಲ ಕೊಡಬೇಡವೆ..? ವಾರವಿಡೀ ಮೂಲೆಹಿಡಿದು ಕಾಯ್ದು ಕುಳಿತ ಮಣಭಾರದ ಮೈಲಿಗೆ ಬಟ್ಟೆಗಳನ್ನು ಮಡಿ ಮಾಡಬೇಡವೇ..?  ಜೀಡಿಗಟ್ಟಿದ ಮನೆಯ ಮೂಲೆಮೂಲೆಯನ್ನು ಸ್ಚಚ್ಛಗೊಳಿಸದಿದ್ದರೆ ಹೇಗೆ..? ಅಡುಗೆ ಮನೆ ನೋಡಿ ಬಂದವರು ಏನಂದಾರೆಂದುಕೊಂಡು, ನೆಲ ಹೊರೆಸಿ, ಒಪ್ಪೊರಣ ಮಾಡಿ ಚೊಕ್ಕಟಗೊಳಿಸಿ ದಾಗಲೇ ಮನಸ್ಸಿಗೊಂದಿಷ್ಟು ಸಮಾಧಾನ..! ಮನಸ್ಸಿಗೆ ಹಿತವಾದರೆ ಮುಗಿಯಿತೇ..? ಇಷ್ಟೆಲ್ಲ ತಲೆಬಿಸಿ ಒಳಗೂ-ಹೊರಗೂ, ಬೋರೆಂದು ಬೆವೆತ ಬೆವರ ಹನಿಗಳು ಮುಡಿಯಿಂದ ಅಡಿಯವರೆಗ್ಹಿಳಿದು ಘಮ್ಮಾನೆ ಘಮ್ಮಿಸುವ ವಾಸನೆ ಯನ್ನು ಯಾರು ತಾನೇ ಸಹಿಸಲಾದೀತು..? ಸ್ನಾನವೆಂಬ ನೇಮವ ಮಾಡಿ, ಟೀ ಬಸಿದುಕೊಂಡು ಬಿಸ್ಕತ್ತಿನೊಂದಿಗೆ ತಿಂದು-ಕುಡಿದು ಮುಗಿಸಿದಾಗ ಡೇ ಎಂಡಾಗುತ್ತದೆ. ರಾತ್ರಿ ಬೇಕೋ ಬೆಡವೋ ಎಂಬಂತೆ ಅನ್ನಾ-ಸಾರುಂಡು ಮಲಗಿದರೆ ನಿದಿರೆ ಹತ್ತಿತೆ..? ಸೋಮವಾರದ ‘Monday’ ಯ ದಿನದ ಕಾರ್ಯಭಾರವ ನೆನೆನೆನೆದು ಮಂಡೆ ಬಿಸಿ ಯಾಗಿರುವಾಗ ನಿದಿರೆ ಎಂಬದು ಕನಸಿನ ಮಾತೇ ಸರಿ..! ಅತ್ತ ಹೊರಳಿ ಇತ್ತ ಹೊರಳಿ ಇರುಳು ಕಳೆದರಾಯ್ತು ಮತ್ತೆ ಅದೇ ಕಥೆ-ವ್ಯಥೆ. ಇದು ನನ್ನೊಬ್ಬಳ ಕಥೆಯಲ್ಲ. ನಿಮ್ಮದೂ ಆಗಿರಬಹದು. 

* ಸರ್ವಜ್ಞನ ವಚನಗಳು – ಸಂ: ಡಾ.ಎಲ್.ಬಸವರಾಜು ; ಗೀತಾ ಬುಕ್ ಹೌಸ್, ಮೈಸೂರು -2012 ; ಪು.ಸಂ : 104




    -ಡಾ.ಯಲ್ಲಮ್ಮ.ಕೆ 

   ತಾವರಗೇರಾ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...