ತವರಿಗೆ ಬಾ ತಂಗಿ
ಆಷಾಡ ಮಾಸವು ಬಂತವ್ವ ಹೆತ್ತವ್ವ
ತಂಗಿಯ ತವರಿಗೆ ಕರಿಬೇಕವ್ವ!ನನ್ನವ್ವ
ಚೊಚ್ಚಲ ಹೆರಿಗೆಗೆ ಕರಿಬೇಕವ್ವ!!
ಮದುವೆ ಮಾಡಿ ಕೊಟ್ಟು ವರ್ಷವಾಯ್ತು ತಂಗಿ
ತವರಿಗೆ ತಂಗೆವ್ವ ಬರಲಿಲ್ಲ!ನನ್ನ ತಂಗಿ
ಸೌಭಾಗ್ಯ ನಿನಗಿರಲಿ ನೀ ಬಾರವ್ವ!!
ಒಬ್ಬಂಟಿಗ ನನ್ನ ಗಂಡ ಬಿತ್ತನೆ ಬಂದೈತೆ
ಹೊತ್ತಾರೆ ಹೊಲಕ್ಕೆ ಹೋಗಬೇಕು! ನನ್ನಣ್ಣ
ಬುತ್ತಿಯ ಹೊತ್ತೊತ್ತಿಗೆ ಕೊಡಬೇಕು!!
ಒಂದು ಮಾಸ ಬಿಡುವಿರಲಿ ಭಾವಾಗೆ ಹೇಳುವೆ
ತವರನ್ನು ಅರಸಾಲು ಬಾರವ್ವ!ನನ್ನ ತಂಗಿ
ಭಾವನಿಗೆ ನಾ ಮಾಡುವೆ ಸಹಕಾರ!!
ನನ್ನ ಪಾಲಿಗೆ ದೇವರು ನೀನಾದೆ ನನ್ನಣ್ಣ
ಕೊಟ್ಟಿರುವೆ ನನ್ನ ಹೊಸಮನೆಗೆ!ನನ್ನಣ್ಣ
ಉತ್ತಮಳಾಗಿ ತವರಿಗೆ ಹೆಸರುಳಿಸುವೆ!!
ನೀ ನನ್ನ ಉಸಿರಾಗಿ ಲೋಕಕ್ಕೆ ಹೆಸರಾಗಿ
ಹೆತ್ತವರ ಮನೆಗೆ ಸಿರಿಯಾಗಿ !ನನ್ನ ತಂಗಿ
ಮುತೈದಳಾಗಿ ಚಿರಕಾಲ ಬಾಳವ್ವ!!
ಸುತ್ತೇಳು ಊರಿಗೆ ಹೆಸರಿಟ್ಟ ಹೆತ್ತವರಿಗೆ
ಕಳಂಕ ತರಲಾರೆ ತವರುಮನೆಗೆ! ನನ್ನಣ್ಣ
ಕಟ್ಟಿಕೊಂಡ ಗಂಡನ ಮನೆಗೂ ಹೆಸರುಳಿಸುವೆ!!
ನನ್ನ ತಂಗಿ ಸಂಪನ್ನೆ ನೂರೊರುಷ ಬಾಳವ್ವ
ಅತ್ತೆಯ ಮನೆಗೆ ಬೆಳಕು ನೀನವ್ವ! ನನ್ನ ತಂಗಿ
ಮರೆಯದೆ ತವರಿಗೆ ಬರಬೇಕವ್ವ!!
- ಜಿ ಟಿ ಆರ್ ದುರ್ಗ ಬಂಗಾರಪೇಟೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448241450 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ