ಬುಧವಾರ, ಜುಲೈ 7, 2021

ಭಾವನೆಗಳ ಝರಿ-'ಭಾವದೊನಲು' ಚುಟುಕು ಸಂಕಲನದತ್ತ ಒಂದು ನೋಟ (ವಿಮರ್ಶೆ) - ಭಾರತಿ ಸಿ ಪಾಟೀಲ.

ಭಾವನೆಗಳ ಝರಿ-'ಭಾವದೊನಲು' ಚುಟುಕು ಸಂಕಲನ"ದತ್ತ ಒಂದು ನೋಟ

ಇವನಾರವ,ಇವನಾರವ, ಇವನಾರವ? ಎಂದೆನಿಸದಿರಯ್ಯಾ
ಇವ ನಮ್ಮವ,ಇವ ನಮ್ಮವ,ಇವ ನಮ್ಮವ ಎಂದೆನಿಸಯ್ಯಾ
ಕೂಡಲಸಂಗಮದೇವ ನಿಮ್ಮ ಮನೆಯ ಮಗನೆಂದೆನಿಸಯ್ಯಾ
    
    ಎಂಬ ವಿಶ್ವಗುರು ಬಸವಣ್ಣನವರ ವಚನವನ್ನು ಅರ್ಥೈಸುತ್ತ "ಜಗತ್ತಿನಲ್ಲಿ ನಾನು ಯಾರೋ,ಎಲ್ಲಿಯವನೋ?ಎಂದು ಜನ ಅಲಕ್ಷ್ಯ ಮಾಡಿ ಮುನಿಯುವಂತೆ ಮಾಡದೆ; ಇವನು ನಮ್ಮವ,ನಮ್ಮಮನುಷ್ಯ ಎಂದು ಎಲ್ಲರೂ ಅಪ್ಪಿಕೊಳ್ಳುವಂತೆ,ಸ್ವೀಕರಿಸುವಂತೆ ಈ ನಿಮ್ಮ ಮಗ/ಮಗಳನ್ನು ಯೋಗ್ಯನನ್ನಾಗಿಸು ಸಂಗಮನಾಥ" ಎಂಬ ಪಂಕ್ತಿಗಳನ್ನು ಹೋಲುವಂತೆ ಮೂಲತಃ ರಾಯಚೂರು ಜಿಲ್ಲೆ ಸಂಗಾಪುರದ ಶ್ರೀಮತಿ ಗಿರಿಜಾ ನಾನಾಗೌಡ ಮಾಲಿಪಾಟೀಲ ರವರ ಜೀವನ. ರಾಯಚೂರಿನವರಾದರೂ ವಿಜಯಪುರ ಜಿಲ್ಲೆಯವರ ಮನೆಮಗಳೆನಿಸುವಷ್ಟು, ಮನೆಮಾತಾಗುತ್ತಿರುವುದು ಇವರ ಕಾರ್ಯದ ವೈಖರಿ. ಹೌದು ನಾನಿಂದು ಮಾತನಾಡುತ್ತಿರುವುದು ಪತ್ರಿಕಾ ಅಂಕಣಗಾರ್ತಿ,ಗಜಲ್ ಬರಹಗಾರ್ತಿ ಹಾಗೂ ಶ್ರೀ ಸಿದ್ದೇಶ್ವರಸಾಹಿತ್ಯವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರು ಆದ ಗಿರಿಜಾ ನಾನಾಗೌಡ ಮಾಲಿಪಾಟೀಲರ ಕುರಿತು.ಇವರು ವೃತ್ತಿಯಲ್ಲಿ ಕನ್ನಡ ಸಹಪ್ರಾಧ್ಯಾಪಕಿಯಾಗಿಯೂ,ಪ್ರವೃತ್ತಿಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿಯೂ  ತೊಡಗಿಸಿಕೊಂಡಿದ್ದಾರೆ. ಇವರು ಬರೆದ *ಭಾವದೊನಲು*- ಚುಟುಕು ಕವನಸಂಕಲನದತ್ತ ನಮ್ಮ ನೋಟವನ್ನು ಹರಿಸೋಣ.  

        "ಭಾವದೊನಲು"ಪುಸ್ತಕದ ಶಿರ್ಷಿಕೆಯೇ ಸೂಚಿಸುವಂತೆ ಇದೊಂದು ಮನಸ್ಸಿನ ಭಾವನೆಗಳು ಹರಿಯುವ ಝರಿಯಂತೆ ಭಾಸವಾಗುತ್ತದೆ.ಲೇಖಕಿಯರು ತಮ್ಮ ಜೀವನದ ಮತ್ತು ಸಮಾಜದಲ್ಲಿ ಪ್ರಸ್ತುತವಾಗಿ ಕಾಣಬರುವ ಸನ್ನಿವೇಶ, ಅನುಭವಗಳನ್ನು ತಮ್ಮ ಭಾವನೆಗಳಲ್ಲಿ ವ್ಯಕ್ತಪಡಿಸಿದ್ದಾರೆ. ಈ ಕೃತಿಗೆ  ಖ್ಯಾತ ಸಾಹಿತಿಗಳಾದ ಶ್ರೀಮತಿ ಪ್ರಭಾವತಿ. ಎಸ್.ದೇಸಾಯಿ ವಿಜಯಪುರ ರವರು ಮುನ್ನುಡಿಯನ್ನು ಬರೆದಿದ್ದಾರೆ. ಈ ಚುಟುಕು ಕವನಸಂಕಲನವು ಸರಿಸುಮಾರು ೨೦೦ ಚುಟುಕುಗಳನ್ನು ಒಳಗೊಂಡ ಸಂಗ್ರಹವಾಗಿದೆ.. ಚುಟುಕುಗಳಲ್ಲಿ ಅಡಕವಾಗಿರುವ ವೈವಿಧ್ಯಮಯ ವಿಷಯವಸ್ತುಗಳೆಂದರೆ ಬದುಕು, ಸ್ಪೂರ್ತಿ, ಬಂಧನ,ವಿಪರ್ಯಾಸ, ಒಲುವು-ಗೆಲುವು, ಸಮಾಜಸೇವಕಿ,ಸಂಸಾರ,ಚುನಾವಣೆ, ರಾಜಕಾರಣಿ,ರಾಜಕೀಯ ಪಕ್ಷ,ರಕ್ಷಾಬಂಧನ,ತಾಳ್ಮೆ, ಪ್ರೀತಿ, ಕೀರ್ತಿ, ಸಾಕ್ಷಾತ್ಕಾರ ಇನ್ನೂ ಹತ್ತು ಹಲವು ಅಂಶಗಳನ್ನು ಕಾಣಬಹುದು. ಲೇಖಕಿಯರು ಸಮಾಜದ ಹಲವು ಆಯಾಮಗಳಲ್ಲಿ ದೃಷ್ಟಿ ಹರಿಸಿ ಚುಟುಕುಗಳನ್ನು ಪ್ರಸ್ತುತಪಡಿಸಿದ್ದಾರೆ .
       
       ನನಗದರಲ್ಲಿ ಇಷ್ಟವಾದ ಚುಟುಕುಗಳೆಂದರೆ 
       
            *ಹೊತ್ತಿಗೆ*

     ಎಲ್ಲವನ್ನು ನೀಡುವ
     ನನ್ನಿಂದೇನು ಬಯಸದ
     ಸ್ನೇಹಿತರಾರು ಜಗದೊಳಗೆ
     ನಿನ್ನನೊರತುಪಡಿಸಿ ನನಗ್ಯಾರು
     ಕಾಣಲಿಲ್ಲ ಓ ಹೊತ್ತಿಗೆ
     
          ಲೇಖಕರಾದವರು ಪುಸ್ತಕಗಳನ್ನು ಸ್ನೇಹಿತರನ್ನಾಗಿಸಿಕೊಂಡಿರುತ್ತಾರೆ ಎಂಬ ನಿತ್ಯಸತ್ಯವನ್ನು ತಿಳಿಸಿದ್ದಾರೆ.
ಇನ್ನೊಂದು ಉದಾಹರಣೆ ಎಂದರೆ

          *ಹುಚ್ಚು*

 ಕೇಳುತಾರೆ ಎಲ್ರೂ
 ಯಾಕೆ ಬರತೀಯ ಹುಚ್ಚುಚ್ಚು
 ನಾನೇಳ್ತೀನಿ ಹಂಚಿಕೊಳ್ಳಲ್ಯಾರಿಲ್ಲ
 ನುಚ್ಚು ನೂರಾದ ಹುಚ್ಚಿಯ
 ಹುಚ್ಚು ಹುಚ್ಚು ಕನಸಗಳು
 ಕೊನೆಗಂಚಿಕೊಂಡೆ ಈ ಹಾಳೆಯಲಿ
 ಇಂಚಿಂಚು ಎಂದು
      
       ಕವಿಯು ಭಾವಗಳನ್ನು ವ್ಯಕ್ತಪಡಿಸಲು ಕಾರಣ ಮತ್ತು ಅದು ಕವನವಾಗಿ ಹೊರಹೊಮ್ಮುವ ಪರಿಯನ್ನು ತಿಳಿಸಿದ್ದಾರೆ. 

*ನಾ ಕವಿಯಲ್ಲ*

 ನಾ ಕವಿಯಲ್ಲ
 ನಾ ಕವಿಯಲ್ಲ ಕವಿಯಾಗಬೇಕೆಂದು
 ಎಂದೂ ಕನಸಿಲ್ಲ ಹಗಲೆಲ್ಲ ಯೋಚಿಸಿ ಇರುಳೆಲ್ಲ ಕನವರಿಸಿ ‍ಗೀಚಿದ ಸಾಲುಗಳೆಲ್ಲ ಕವನವಾದರೆ?
 
      ಯೋಚಿಸಿ ಬರೆದ ಸಾಲುಗಳೆಲ್ಲ ಕವನವಾಯಿತೆಂಬ ಸಹಜತೆಯನ್ನು ವ್ಯಕ್ತಪಡಿಸಿದ್ದಾರೆ. ಇದು ಗಿರಿಜಾರವರ ಸಾಹಿತ್ಯ ಕ್ಷೇತ್ರದಲ್ಲಿನ ಮೊದಲ ಹೆಜ್ಜೆಯಾಗಿದ್ದು, ಚೊಚ್ಚಲ ಕೃತಿಯಾಗಿದೆ. ಚುಟುಕುಗಳು  ತೋರಿಕೆಗೆ ಕಿರಿದಾಗಿ ಕಂಡರೂ ಹಿರಿಯ ಅರ್ಥವನ್ನು ಒಳಗೊಂಡು ಪಂಚ್ ನೀಡುವಲ್ಲಿ ಯಶಸ್ವಿಯಾಗಿವೆ.ಹಾಸ್ಯಮಯ ಚುಟುಕುಗಳಿಗೆ ಪ್ರಾಧಾನ್ಯತೆ ನೀಡಿರುವ ಇವರು ವಿಷಯವಸ್ತುವನ್ನು ಲಘುವಾಗಿ, ಸಹಜವಾಗಿ ಬಿಂಬಿಸಿದಂತೆ ಮೇಲ್ನೋಟಕ್ಕೆ ಕಂಡರೂ ಅದರ ತಿರುಳನ್ನು ಸೊಗಸಾಗಿ ತಿಳಿಸಿದ್ದಾರೆ. ‍          

       ಲೇಖಕಿಯು ತಪ್ಪು-ಒಪ್ಪುಗಳನ್ನು ಮುಕ್ತ ಹೃದಯದಿಂದ ಸ್ವಾಗತಿಸುವ ಹಿರಿಮೆಯನ್ನು ಮೆರೆದಿದ್ದಾರೆ. ಗಿರಿಜಾ ನಾನಾಗೌಡ ಮಾಲಿಪಾಟೀಲರು ಕೇವಲ ವ್ಯಕ್ತಿಯಲ್ಲ,ಅವರೊಂದು ಶಕ್ತಿ. ಸರ್ವರನ್ನು ಒಗ್ಗೂಡಿಸಿ ಕನ್ನಡಮ್ಮನ ಸೇವೆಯಲ್ಲಿ ತೊಡಗುವ ಸಂಘಟನಾ ಶಕ್ತಿ, ಯುಕ್ತಿ ಅವರಲ್ಲಿದೆ. ಇವರ ತಾಳ್ಮೆ,ಕ್ರಿಯಾಶೀಲತೆ,ಸತತಪ್ರಯತ್ನ,ಬರವಣಿಗೆಯಲ್ಲಿ ಸದಾ ತೊಡಗಿಕೊಂಡಿರುವ ಹವ್ಯಾಸ ಇತರರಿಗೆ ಸ್ಪೂರ್ತಿ.ರಾಜ್ಯದ ಹಲವಾರು ಸುಪ್ತಪ್ರತಿಭೆಗಳನ್ನು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಎಂಬ ಮುಖ್ಯ ವಾಹಿನಿಗೆ ತಂದು ಪ್ರೇರೆಪಿಸುತ್ತಿದ್ದಾರೆ. ಇಂತಹ ಇವರ ಸಾಮಾಜಿಕ ಕಾಳಜಿ, ಸಾಹಿತ್ಯದ ಕೃಷಿ-ಸೇವೆಗೆ ಇನ್ನಷ್ಟು ಯಶಸ್ಸು ದೊರೆಯಲಿ;ಇನ್ನೂ ಹಲವಾರು ಕೃತಿಗಳನ್ನು ಮುಂಬರುವ ದಿನಗಳಲ್ಲಿ ಹೊರತರಲಿ ಎಂಬುದು ನನ್ನ ಸದಾಶಯ.  
        
       *ಭಾರತಿ.ಸಿ.ಪಾಟೀಲ*
        *ಅಧ್ಯಕ್ಷರು,ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ವಿಜಯಪುರ ಜಿಲ್ಲೆ ಗ್ರಾಮೀಣ*


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713649)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...