ತೀಕ್ಷ್ಣತಮ ಸಂವೇದನೆಗಳಲ್ಲಿ ಸಮಾಜಮುಖಿಯಾದ ದಿಟ್ಟ ಹೆಜ್ಜೆಯಾಗಿ -ಎಂ.ಕೆ ಇಂದಿರಾ ಅವರ ‘ಗೆಜ್ಜೆ ಪೂಜೆ’
ಎಂ.ಕೆ.ಇಂದಿರಾ ಅವರು ಕನ್ನಡದ ಹೆಸರಾಂತ ಲೇಖಕರು ಹಾಗೂ ಕಾದಂಬರಿಗಾರ್ತಿ. ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಜನಿಸಿದರು. ತುಂಗಭದ್ರ ಇವರ ಮೊದಲ ಕೃತಿ. ಕಥೆ ಕಾದಂಬರಿ, ಪ್ರಹಸನ, ಹರಟೆ, ವ್ಯಕ್ತಿಚಿತ್ರ ಇತ್ಯಾದಿಯಾಗಿ 60 ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಇವರ ಗೆಜ್ಜೆಪೂಜೆ, ಫಣಿಯಮ್ಮ, ಮುಸುಕು,ಗಿರಿಬಾಲೆ, ಜಾಲ,ನೂರೊಂದು ಬಾಗಿಲು ಮತ್ತು ಪೂರ್ವಾಪರ ಎಂಬ ಕಾದಂಬರಿಗಳು ಚಲನಚಿತ್ರಗಳಾಗಿವೆ. ಓದಿದ್ದು ಬರೀ ಎರಡನೇ ತರಗತಿಯಾದರೂ ಇವರಿಂದ ಹರಿದು ಬಂದದ್ದು ಸಮೃದ್ಧ ಸಾಹಿತ್ಯ. ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾ ವಿವಾಹ, ಬಾಲ್ಯವಿವಾಹ, ವಿಧವೆಯ ಬದುಕಿನ ಕರಾಳ ಮುಖ, ಜಾತಿ ಪದ್ಧತಿ, ವೇಶ್ಯಾವಾಟಿಕೆ ಇವೆಲ್ಲವೂ ಇವರ ಕಾದಂಬರಿಗಳಲ್ಲಿ ವ್ಯಕ್ತವಾಗಿವೆ. ಸ್ತ್ರೀ ಸಂವೇದನೆಗಳ ಪರವಾಗಿ ದಿಟ್ಟ ಧ್ವನಿಯಾಗಿ ಹೊರಹೊಮ್ಮಿದ ಎಂ.ಕೆ. ಇಂದಿರಾ ನಮ್ಮ ನಡುವಿನ ಅಪೂರ್ವ ಸಾಹಿತಿಯಾಗಿದ್ದಾರೆ.
ಅದರಲ್ಲೂ ನನ್ನನ್ನೂ ತುಂಬಾ ಕಾಡುವ ಇವರ ಪ್ರಸಿದ್ಧ ಕಾದಂಬರಿ ಗೆಜ್ಜೆಪೂಜೆಯು ವೆಶ್ಯಾವಾಟಿಕೆಯ ಬದುಕಿನ ದುರಂತವನ್ನು ಕಟ್ಟಿಕೊಡುತ್ತದೆ. ಸಮಾಜದಲ್ಲಿ ಎಲ್ಲರೂ ಗಂಡು ಮಗು ಹುಟ್ಟಿದರೆ ಸಂಭ್ರಮ ಪಡುತ್ತಾರೆ. ಆದರೆ ಗೆಜ್ಜೆ ಪೂಜೆ ಕಾದಂಬರಿಯಲ್ಲಿ ಮಾತ್ರ ತಾಯಿ ತನ್ನ ಮಗಳಿಗೆ ಗಂಡು ಮಗುವಾದರೆ ಹೇಗೆ ಎಂಬ ಕಳವಳ ಪಡುತ್ತಲೇ ಹೆಣ್ಣು ಮಗುವಿಗಾಗಿ ಹಾತೊರೆಯುತ್ತಾಳೆ ಕಾರಣ ಹೊಟ್ಟೆಪಾಡಿಗಾಗಿ. ವ್ಯವಸ್ಥೆ ಎನ್ನುವುದು ಮನುಷ್ಯನ ಆಕಾಂಕ್ಷೆಗಳನ್ನು ಯಾವ ರೀತಿಯಾದರೂ ಬದಲಾಯಿಸಬಹುದು ಎನ್ನುವದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ. ಚಂದ್ರಳನ್ನು ಹೆತ್ತು ತನ್ನ ಪ್ರಿಯಕರನ ಬರುವಿಕೆಗಾಗಿ ಪಿಟಿಲು ನುಡಿಸುತ್ತಾ ಕಾಯುತ್ತಾಳೆ. ಇದನ್ನು ಸಹಿಸದ ಅವಳ ತಾಯಿ ಹೊಟ್ಟೆ ಪಾಡಿಗಾಗಿ ಮತ್ತೊಬ್ಬನನ್ನು ಅವಲಂಬಿಸುವಂತೆ ವತ್ತಾಯಿಸುತ್ತಾಳೆ. ವಿದಿ ಇಲ್ಲದೆ ಚಂದ್ರಾಳ ತಾಯಿ ವೇಶ್ಯಾವಾಟಿಕೆಯನ್ನು ಮುಂದುವರಿಸುತ್ತಾಳೆ. ಆದರೆ ತನ್ನ ಮಗಳು ವೇಶ್ಯೆಯಾಗದಂತೆ ತಡೆಯಲು ಅವಳಿಗೆ ಶಿಕ್ಷಣ ಕೊಡಲು ಹತ್ತಿರದ ಮೈಸೂರು ಪಟ್ಟಣಕ್ಕೆ ಕುಟುಂಬ ವಲಸೆ ಹೋಗುತ್ತದೆ. ಅಲ್ಲಿ ಆರಂಭದಲ್ಲಿ ಚಂದ್ರಾಳ ಕುಟುಂಬವನ್ನು ತಿರಸ್ಕಾರದಿಂದ ನೋಡುತ್ತಿದ್ದ ನೆರೆಹೊರೆಯವರು ಚಂದ್ರಾ ಹಾಗೂ ಅವಳ ತಾಯಿಯ ಸದ್ಗುಣಗಳನ್ನು ಮೆಚ್ಚಿ ಗೌರವಿಸಲು ಶುರು ಮಾಡುತ್ತಾರೆ. ಪುಟ್ಟ ಮಗುವಾಗಿದ್ದ ಚಂದ್ರಾ ಎದುರು ಮನೆಯ ತನ್ನ ವಾರಿಗೆಯ ಶೇಖರ ಹಾಗೂ ಅವನ ತಂಗಿಯೊಂದಿಗೆ ಹೆಚ್ಚು ಒಡನಾಟ ಬೆಳೆಸಿಕೊಳ್ಳುತ್ತಾಳೆ. ಶೇಖರನ ತಂದೆ ಚಂದ್ರಾಳ ಸುಗುಣ ಹಾಗೂ ಬುದ್ದಿವಂತಿಕೆಯನ್ನು ಮೆಚ್ಚಿ ಅವಳನ್ನು ತುಂಬಾ ಮಮಕಾರದಿಂದ ಪ್ರತಿ ದಿನವೂ ಆಕೆಯನ್ನು ಕರೆದು ದೇವರ ತೀರ್ಪು ಕೊಡುತ್ತಿರುತ್ತಾನೆ. ಆದರೆ ಇದನ್ನು ಸಹಿಸದ ಅವನ ಹೆಂಡತಿ ಅವರು ವೇಶ್ಯೆಯರು ಎಂದು ಜರಿಯುತ್ತಿರುತ್ತಾಳೆ. ಆದರೆ ಶೇಖರನ ತಂದೆ ಮಾತ್ರ ವೇಶ್ಯೆಯರಿಗೆ ನಮಗೆ ಏನು ಅಂತ ಮಹಾವ್ಯತ್ಯಾಸ? ನಾವು ಮದುವೆ ಎಂದು ಕರೆಯುವುದಕ್ಕೆ ಅವರು ಗೆಜ್ಜೆ ಪೂಜೆ ಎನ್ನುತ್ತಾರೆ ಅಷ್ಟೆ ಆದರಿಲ್ಲಿ ಮನಸ್ಸು ಎಷ್ಟು ಪವಿತ್ರವಾಗಿದೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ ಎಂದು ಹೇಳುತ್ತಾ ಚಂದ್ರಾಳನ್ನು ಅತ್ಯಂತ ಪ್ರೀತಿ ಆದರಗಳಿಂದ ಕಾಣುತ್ತಿರುವುದು ವಿಶೇಷವಾಗಿದೆ.
ಚಂದ್ರಳ ತಾಯಿಯ ಬಳಿ ಬರುತ್ತಿದ್ದ ಸಹುಕಾರ ಚಂದ್ರಾಳ ಕುಟುಂಬವನ್ನು ತುಂಬಾ ಸುರಕ್ಷಿತವಾಗಿ ನೋಡಿಕೊಳ್ಳುತ್ತಾನೆ. ಆದರೆ ಅವನು ಚಂದ್ರ ತನ್ನ ಮಗಳಲ್ಲವೆಂಬ ಕಾರಣಕ್ಕೆ ಯಾವುದೇ ರೀತಿಯ ಭಾವನಾತ್ಮಕ ಸಂಬಂಧ ಹೊಂದಿರುವುದಿಲ್ಲ ಎನ್ನುವುದು ಅವಳು ಪರಿಕ್ಷೆಯಲ್ಲಿ ರ್ಯಾಂಕ್‍ನಲ್ಲಿ ಫಾಸಾದಾಗ ಸಂತೋಷದಿಂದ ಹೇಳಲು ಹೋದಾಗ ಯಾವುದೇ ಪ್ರತಿಕ್ರಿಯೆ ನೀಡದೆ ಹೊದಾಗ ತಿಳಿಯುತ್ತದೆ. ಆಗ ಚಂದ್ರಾ ಅಘಾತಕ್ಕೆ ಒಳಗಾಗಿ ತನ್ನ ನಿಜವಾದ ತಂದೆ ಯಾರೆಂದು ತಾಯಿಯನ್ನು ಕೇಳುತ್ತಾಳೆ. ಹೌದು ಚಂದ್ರಾ ಹೊಟ್ಟೆಯಲ್ಲಿದ್ದಾಗಲೆ ಅವಳನ್ನು ಬಿಟ್ಟು ನಡೆದ ನಿಜವಾದ ತಂದೆಗಿಂತ ಅವಳ ತಾಯಿಯೊಂದಿಗೆ ದೇಹವನ್ನು ಹಂಚಿಕೊಂಡು ಕಡೆಯವರೆಗೆ ಕುಟುಂಬವನ್ನು ರಕ್ಷಿಸಿದ್ದಲ್ಲದೆ ಚಂದ್ರಾಳ ಅಷ್ಟೂ ಶಿಕ್ಷಣದ ಜವಾಬ್ಧಾರಿ ಹೊತ್ತುಕೊಂಡ ಸಾಹುಕಾರ ಆದರ್ಶವಾಗಿ ನಿಲ್ಲುತ್ತಾನೆ.
ಚಂದ್ರಾಳ ಕುಟುಂಬದ ವೇಶ್ಯಾ ವೃತ್ತಿಯನ್ನು ಹೀನಾಯವಾಗಿ ಆಡಿಕೊಳ್ಳುತ್ತಿದ್ದ ಆಚೆ ಮನೆಯ ಹೆಂಗಸು ಕೆಲ ದಿನಗಳಲ್ಲೆ ತಾನೂ ಗಂಡನನ್ನು ಬಿಟ್ಟು ಬೇರೊಬ್ಬನೊಂದಿಗೆ ಓಡಿ ಹೋಗುವುದನ್ನು ನೋಡಿದಾಗ ನಿಜಕ್ಕೂ ಇಲ್ಲಿ ಯಾರು ವೇಶ್ಯೆಯರು ಎನ್ನುವ ಪ್ರಶ್ನೆ ಕಾಡುತ್ತದೆ. ಹೌದು ಚಂದ್ರಾಳ ತಾಯಿ ಹೊರಗೆ ಬಾರದೆ ಸಾಹುಕಾರನನ್ನೇ ಸಾಯುವತನಕ ಹೊಟ್ಟೆಪಾಡಿಗಾಗಿ ಅವಲಂಬಿಸಿದ್ದು ಇಲ್ಲಿ ತಪ್ಪಾಗಿ ಕಾಣುವುದಿಲ್ಲ. ಆದರೆ ಹೊರ ಪ್ರಪಂಚಕ್ಕೆ ತಾನು ಗರತಿಯ ಹಾಗೆ ವೇಶ ತೊಟ್ಟು ಗಂಡನನ್ನು ತೊರೆದು ಮತ್ತೊಬ್ಬನ ಹಿಂದೆ ಹೋಗುವವಳು ವೇಶ್ಯೆಯಲ್ಲವೆ ಎನ್ನುವ ತರ್ಕ ಇಲ್ಲಿ ವಿಶೇಷವಾಗಿದೆ. ಚಂದ್ರಳ ಬದುಕಿಗೆ ಬೆಳಕಾದ ಸಹುಕಾರ ಸತ್ತ ಮೇಲೆ ಬರುವ ಚಂದ್ರಾಳ ನಿಜವಾದ ತಂದೆ ಅವಳ ಬದುಕಿನ ದುರಂತಕ್ಕೆ ಕಾರಣನಾಗುತ್ತಾನೆ. ಅತೀ ತೀಕ್ಷ್ಣವಾದ ಭಾವನಾತ್ಮಕ ಸಂವೇದನೆಗಳ ಮೇಲೆ ಹೆಣೆಯಲಾದ ಈ ಕತೆ ಅತ್ಯದ್ಭುತವಾಗಿ ಮೂಡಿಬಂದಿದೆ.
ಒಂದು ರಾತ್ರಿ ಚಂದ್ರಾಳ ತಾಯಿಯನ್ನು ಅನಿರೀಕ್ಷಿತವಾಗಿ ಬೇಟಿಯಾಗಲು ಬಂದ ಚಂದ್ರಾಳ ತಂದೆ ಹೋಗುವಾಗ ಚಂದ್ರಾಳನ್ನು ತಬ್ಬಕೊಂಡು ಕಣ್ಣೀರಿಡುವ ದೃಶ್ಯವನ್ನು ನೋಡಿ ಸಂಶಯಿಸಿದ ಶೇಕರ್ ಚಂದ್ರಾಳನ್ನು ಮದುವೆಯಾಗುವ ತನ್ನ ನಿರ್ಧಾರವನ್ನು ಬದಲಾಯಿಸಿ ತಂದೆ ತಾಯಿ ತೋರಿದ ಹುಡುಗಿಯನ್ನು ಮದುವೆಯಾಗುತ್ತಾನೆ. ಆ ಹುಡುಗಿ ಚಂದ್ರಾಳ ತಂಗಿಯೇ ಆಗಿರುವುದು ಹಾಗೂ ತನ್ನ ದರ್ಮ ಪತ್ನಿಯ ಮಗಳಿಗಾಗಿ ಚಂದ್ರಾಳನ್ನು ನಯವಾಗಿ ವಂಚಿಸುವ ಅವಳ ನಿಜವಾದ ತಂದೆಯ ಪಾತ್ರ ನಯವಂಚನೆಯಿಂದ ಕೂಡಿದ್ದು ಇವನಿಂದಾಗಿ ಕಡೆಗೆ ಚಂದ್ರಾ ಹಾಗೂ ಅವಳ ತಾಯಿ ದುರಂತವಾಗಿ ಮರಣವನ್ನಪ್ಪುತ್ತಾರೆ. ಆದರೆ ಶೇಖರನಿಗೆ ಸತ್ಯ ಗೊತ್ತಾಗುವ ವೇಳೆಗೆ ಕಾಲ ಮಿಂಚಿರುತ್ತದೆ.
ತಾನು ವೇಶ್ಯೆಯಾಗದೆ ಮದುವೆಯಾಗಿ ಸಂಸಾರಿಯಾಗಬೇಕೆನ್ನುವ ಚಂದ್ರಾಳ ಮಹದಾಶೆ ಹಾಗೂ ಅವಳು ಅದಕ್ಕಾಗಿ ಪಡೆದ ಉನ್ನತ ವ್ಯಾಸಂಗ ಕೊನೆಗೆ ಮಣ್ಣುಪಾಲಾಗುತ್ತದೆ. ಕಾರಣ ಅವಳು ವೆಶ್ಯೆಯ ಮಗಳು ಎನ್ನುವ ಕಾರಣಕ್ಕೆ ಹೌದು ಚಂದ್ರಾ ಎಷ್ಟೇ ಬಿದ್ದಿವಂತೆ, ಸದ್ಗುಣಿ, ಚಲುವೆಯಾದರೂ ಯಾವುದೂ ಅವಳ ಬದುಕಿಗೆ ಮಾನದಂಡವಾಗುವದೇ ಇಲ್ಲ. ಹೌದು ಈ ಕಾದಂಬರಿ ಸಮಾಜದಲ್ಲಿ ವೇಶ್ಯಾವಾಟಿಕೆಯ ಬದಿಕಿನ ದುರಂತವನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿದೆ. ಹಾಗೆಯೆ ಇಲ್ಲಿ ಚಂದ್ರಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅವಳ ಮನಸ್ಥಿತಿಗೆ ಕಾರಣವಾದ ಘಟನೆ ಶೇಖರನ ಮದುವೆ, ತನ್ನ ತಂದೆಯ ಮೋಸ ಇವೆಲ್ಲಾ ಅವರ ಅಂತರಾಳದ ಭಾವೋದ್ವೇಗಕ್ಕೆ ಕಾರಣವಾಗುತ್ತವೆ.
- ಶ್ರೀಮತಿ ಗಿರಿಜಾ ಮಾಲಿ ಪಾಟೀಲ್ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ