ವಿಶ್ವ ಗುರು ಶ್ರೀ ಬಸವ (ಶರ ಷಟ್ಪದಿ)
ಕರುನಾಡಿನ ಜನ
ಮೆರೆಯುತಿಹ ದಿನವು
ಸಾರಿದೆ ಸರ್ವರು ಸಮರೆಂದು
ಬರೆದೆ ವಚನಗಳ
ಅರಿಸಿಹೆ ಮನಗಳ
ತೆರೆಸಿದೆ ಮೌಢ್ಯದ ಮನಗಳನು 01.
ಮಾದರಸರ ಸತಿ
ಮಾದಾಂಬೆಯವರ
ಉದರದಲಿ ಜನಿಸಿದ ತನಯನು
ಕದಡಿ ಉಪನಯನ
ವೇದವನೋದಿದ
ಪದವಿ ಪಡೆದ ಬಿಜ್ಜಳನ ಬಳಿ 02
ಅವಕಾಶ ಪಡೆದು
ಸೇವೆ ನಡೆಸಿದನು
ಅವರಿವರೆನ್ನದೆ ಉಪಚರಿಸಿ
ಸರ್ವರು ಪೂಜಿಸಿ
ದೇವನ ಎಂದನು
ಶಿವನಿಗೆ ಅರ್ಪಿಸುತ ಎಡೆಯನು 03.
ಭಂಡಾರದ ಹಣ
ಪಡೆದಿರುವನಿತನು
ಕೆಡಿಸುತಿಹನು ಹಿಂದೂ ಧರ್ಮ
ಕಿಡಿದರು ಕುಜನರು
ಕಡಿಯಲು ಹಲ್ಲನು
ನಡೆಯಿತು ಕಲ್ಯಾಣ ಕ್ರಾಂತಿ 04.
ಕಂಡ ಜನಗತಿಯ
ಕಡುನೊಂದ ಗುರುವು
ಕಡುವಾಗಿ ಹಿಯಾಳಿಸಿ ಮನದಿ
ನಡೆನುಡಿ ಟೀಕಿಸಿ
ಖಂಡಿಸಿ ಜಾತಿಯ
ಕೂಡಲದೆಡೆಗೆ ನಡೆದ ವಿಭುವು 05.
ಮೂರ್ತಿಯ ಪೂಜೆಯ
ಮತಿಯ ಪಥವನು
ಪ್ರತಿರೋಧಿಸಿದ ಗುರು ಮಹಿಮನು
ಜಾತಿಯ ಕಿತ್ತು
ಪ್ರೀತಿಯ ಹಂಚಿ
ಜ್ಯೋತಿಯೆನಿಸಿದ ಜಗಕ್ಕೆಲ್ಲಾ 06.
ವಿಶ್ವಾಸ ನೆರಳು
ಈಶ್ವರ ಭಕ್ತಿಗೆ
ವಿಶ್ವಕೆ ಗುರುವೆನಿಸಿದನಿತನು
ಐಶ್ವರ್ಯವೆನದು
ನಶ್ವರ ಬದುಕದು
ಅಶ್ವ ಜಲವಿರದ ಕೆರೆಕಂಡು 07.
ಕಾಯಕ ಭಕ್ತಿಯ
ಲಯದಲಿ ಮಾಡಿರೆ
ಕಾಯಕದಲ್ಲೇ ಕೈಲಾಸ
ಮಯನ ವಚನವನು
ನೋಯದೆ ಕೇಳಿರೆ
ದಯವೇ ಧರ್ಮದ ಮೂಲವದು 08.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
Kavigale🥰🥰🙏🙏
ಪ್ರತ್ಯುತ್ತರಅಳಿಸಿ