ಬದಲಾವಣೆ
ಪ್ರತಿಯೊಬ್ಬರಿಗೂ ಬದಲಾವಣೆ ಆಗಬೇಕೆನ್ನುವುದು ಆಸೆ,ಕನಸು. ನನ್ನ ದೇಶ ಬದಲಾಗಬೇಕು, ನನ್ನ ಜೀವನ ಬದಲಾಗಬೇಕು ಎಂದೂ ಯೋಚಿಸುವವರು ನಾವು.ಬರಿ ಬಾಯಿ ಮಾತಿನಲ್ಲೇ ಭಾಷಣ ಮಾಡುವವರು ಅಥವಾ ಭಾಷಣ ಕೇಳುವವರು ನಾವು. ಅಷ್ಟಕ್ಕೂ ಬದಲಾವಣೆ ಅಂದರೆ ಏನು ? ಏಕೆ ಬದಲಾವಣೆ ಬೇಕು? ಯಾರು ಬದಲಾಗಬೇಕು ? ಎಂಬಿತ್ಯಾದಿ ಪ್ರಶ್ನೆಗಳನ್ನು ಹಾಕಿಕೊಂಡರೆ ಪ್ರಶ್ನೆಗಳೇ ಸಿಗುವುದೇ ಹೊರತು ಉತ್ತರವಲ್ಲ.
ಆ ಪಕ್ಷ ಬಂದರೆ ಬದಲಾಗಬಹುದು, ಈ ಪಕ್ಷ ಬಂದರೆ ಬದಲಾವಣೆ ಸಾಧ್ಯ ಎಂಬ ಹಗಲುಕನಸಿನಲ್ಲೇ ಬದುಕುವ ನಾವು ಭ್ರಷ್ಟಾಚಾರದ ಬಗ್ಗೆ , ಲಂಚದ ಬಗ್ಗೆ ದೊಡ್ಡ ಭಾಷಣವನ್ನೇ ಮಾಡುತ್ತೇವೆಯೇ ವಿನಹ ಹೇಗೆ ಭ್ರಷ್ಟಾಚಾರ ನಿರ್ಮೂಲನೆ ಮಾಡಬಹುದೆಂದು ಒಂದು ಕ್ಷಣಕ್ಕೂ ಯೋಚಿಸುವುದಿಲ್ಲ. ಎಲ್ಲ ಜನರಲ್ಲೂ ಇರುವ ನಂಬಿಕೆ ಅಂದರೆ ಭ್ರಷ್ಟಾಚಾರ , ಲಂಚ ಅಂದರೆ ರಾಜಕೀಯದವರು ಮಾಡುವ ಅನಾಚಾರ ಎಂದೇ ವಿನಹ ಅವರು ಆ ರೀತಿ ಮಾಡಲು ಕಾರಣರಾದವರು ಯಾರು ಎಂದು ಯೋಚಿಸುವುದೇ ಇಲ್ಲ, ಅದರ ಬದಲು ಆ ಪಕ್ಷ ಬಂದರೆ ಭ್ರಷ್ಟಾಚಾರ ನಿರ್ಮೂಲನೆ ಆಗಬಹುದು, ಈ ಪಕ್ಷ ಬಂದರೆ ಆಗಬಹುದು ಎಂದು ಯೋಚಿಸುವ ನಾವು ನಮ್ಮಲ್ಲೇ ಕೇಳಿಕೊಳ್ಳಬೇಕಾದ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಬೇಕು. ಹೀಗೆ ಹೇಳಿದರೆ ನಾವೇನೂ ಭ್ರಷ್ಟಾಚಾರಿಗಳೇ ? ಕೋಟಿ ಕೋಟಿ ದುಡ್ಡನ್ನು ಕೊಳ್ಳೆ ಹೊಡೆದವರೆ ? ಎಂದು ಉತ್ತರಿಸುವ ಜನರೇ ಕಂಡುಬರುತ್ತಾರೆಯೇ ವಿನಹ ಹೇಗೆ ಭ್ರಷ್ಟಾಚಾರದಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ಸಾಧ್ಯವೆಂದು ಯೋಚಿಸುವುದೇ ಇಲ್ಲ.
ಉದಾಹರಣೆಗೆ ನೀವು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ನಿಮಗೆ ಟಿಕೆಟ್ ಅನ್ನು ಕೊಡದೆ ಕಡಿಮೆ ದುಡ್ಡನ್ನು ತೆಗೆದುಕೊಂಡು ಕಂಡಕ್ಟರ್ ಹೋದ ಎಂದು ಭಾವಿಸೋಣ.ಆ ಕ್ಷಣಕ್ಕೆ ನಮಗೆ ತಿಳಿಯುವುದು ಅಬ್ಬಾ ೫ರೂಪಾಯಿ ಉಳಿಯಿತು ಎಂದೇ ವಿನಹ ೫ರೂಪಾಯಿ ಲಂಚ ಕೊಟ್ಟೆ ಅಂದಲ್ಲ. ನಿಮ್ಮ ಪ್ರಕಾರ ಐದು ರೂಪಾಯಿ ಏನು ಮಹಾ ? ಎಂದು ಭಾವಿಸುವುದಾದರೆ ಐದು ರೂಪಾಯಿಯನ್ನು ಆ ಕಂಡಕ್ಟರ್ ಮೋಸ ಮಾಡಿದ್ದು ತಪ್ಪಿಲ್ಲ ಎಂದಾದರೆ ಮತ್ತೊಬ್ಬ ಕೂಡ ಐದು ಕೋಟಿ ಮೋಸ ಮಾಡಿದ್ದು ತಪ್ಪಿಲ್ಲವೆಂದೇ ಭಾವಿಸುತ್ತಾನೆ.
ಮತ್ತೂ ಹೇಳುವುದಾದರೆ ಶಾಲಾ ಅಥವಾ ಕಾಲೇಜು ದಾಖಲಾತಿ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅವಶ್ಯಕತೆ ಇದ್ದೇ ಇರುತ್ತದೆ. ನಿಜವಾಗಿಯೂ ಪ್ರಮಾಣ ಪತ್ರ ನಮಗೆ ದೊರಕಬೇಕಾದರೆ ೨೧ದಿನಗಳು ಬೇಕು (ರಜಾದಿನಗಳನ್ನು ಹೊರತಪಡಿಸಿ) ಆದರೆ ನಮಗೆ ಅಷ್ಟು ದಿನ ಕಾಯಲು ಆಗದು. ತುರ್ತಾಗಿ ಪ್ರಮಾಣ ಪತ್ರದ ಅವಶ್ಯಕತೆ ಇದೆ ಎಂದು ಐದು ರೂಪಾಯಿ ಇರುವ ಪತ್ರಕ್ಕೆ ೫೦೦ರೂಪಾಯಿ ಕೊಟ್ಟು ಪ್ರಮಾಣ ಪತ್ರ ಪಡೆದು ದಾಖಲಾತಿ ಆಗಿತ್ತೇವೆ. ಆಗ ನಾವು ಮಾಡಿದ್ದು ತಪ್ಪು ಎಂದು ನಮಗೆ ಅನಿಸುವುದೇ ಇಲ್ಲ. ಹೀಗೆಯೇ ಜನನ ಪ್ರಮಾಣ ಪತ್ರ , ಮರಣ ಪ್ರಮಾಣ ಪತ್ರವನ್ನು ಪಡೆಯುವಾಗಲೂ ಇದೇ ತಂತ್ರವನ್ನು ಉಪಯೋಗಿಸಿ ಪತ್ರ ಪಡೆಯುತ್ತೇವೆಯೇ ಹೊರತು ನೇರಮಾರ್ಗದಲ್ಲಿ ಪಡೆಯಲು ಯತ್ನಿಸುವುದೇ ಇಲ್ಲ ಅಥವಾ ಯತ್ನಿಸಿದರೂ ಅಲ್ಲಿರುವವರು ಅದಕ್ಕೆ ಆಸ್ಪದ ಕೊಡುವುದೇ ಇಲ್ಲ.
ಇನ್ನೂ ತೆರಿಗೆಯ ವಿಷಯದಲ್ಲೂ ಇದನ್ನು ಕೇಳುವದೇ ಬೇಡ .ಕಟ್ಟಬೇಕಾದ ಸರಿಯಾದ ತೆರಿಗೆಯನ್ನು ಬಿಟ್ಟು ಸರ್ಕಾರಕ್ಕೆ ವಂಚಿಸಿ ತೆರಿಗೆ ಪಾವತಿ ಮಾಡಿರುತ್ತೇವೆ ಯಾರಾದರೂ ಕೇಳಿದರೆ ನಾನೊಬ್ಬ ಸರಿಯಾಗಿ ಕಟ್ಟಿದರೆ ಸಾಕಾ ? ಅಥವಾ ಸರ್ಕಾರದವರು ಮೋಸಮಾಡೊಲ್ವ ? ಎಂಬ ತೇಲಿಕೆಯ ಉತ್ತರವನ್ನು ನೀಡಿ ಜಾಣ್ಮೆಯಿಂದ ಪಲಾಯನ ಮಾಡುತ್ತೇವೆ.
ಇದನ್ನು ಹೇಳುವಾಗ ಕಥೆಯೊಂದು ನೆನಪಿಗೆ ಬರುತ್ತದೆ..ಒಂದಾನೊಂದು ಊರಲ್ಲಿ ಒಬ್ಬ ರಾಜನಿದ್ದ. ಅವನು ತನ್ನ ಆಸ್ಥಾನದ ಮಧ್ಯದಲ್ಲಿ ತೊಟ್ಟಿಯೊಂದನ್ನು ನಿರ್ಮಿಸಿ ಪ್ರತಿ ದಿನ ಊರನಲ್ಲಿ ಇರುವ ಜನರು ಒಂದು ಲೀಟರ್ ಹಾಲನ್ನು ತಂದು ಈ ತೊಟ್ಟಿಗೆ ಸುರಿಯಬೇಕೆಂದು ಆಜ್ಞೆ ಹೊರಡಿಸಿದ. ಜನರೆಲ್ಲರೂ ರಾಜನು ಹೇಳಿದಂತೆ ಮಾಡಿದರು .ದಿನ ಕಳೆದಂತೆ ಒಬ್ಬ ವ್ಯಕ್ತಿ ಒಂದು ದಿನ ಯೋಚಿಸಿದ ನಾನು ತೆಗೆದುಕೊಂಡು ಹೋದ ಹಾಲನ್ನು ಯಾರು ನೋಡುವುದಿಲ್ಲ .ನಾನೇಕೆ ಹಾಲಿನ ಬದಲು ನೀರು ತೆಗೆದುಕೊಂಡು ಹೋಗಬಾರದು.ರಾಜನ ಆಜ್ಞೆಯು ಪಾಲಿಸಿದಂತೆ ಆಗುತ್ತದೆ ನನಗೂ ಹಾಲು ಉಳಿತಾಯವಾಗುತ್ತದೆ ಎಂದು ಭಾವಿಸಿ ನೀರನ್ನು ತೆಗೆದುಕೊಂಡು ತೊಟ್ಟಿಯ ಹತ್ತಿರ ಬಂದಾಗ ಅವನಿಗೆ ಆಶ್ಚರ್ಯ ಕಾದಿತ್ತು.ಅವನಿಗಿಂತ ಮೊದಲು ಬಂದವರೇ ಅವನ ತರಹವೇ ಯೋಚಿಸಿ ನೀರನ್ನು ಹಾಕಿ ಹೋಗಿದ್ದರು.ತೊಟ್ಟಿಯ ತುಂಬಾ ನೀರು ಇತ್ತೇ ವಿನಹ ಹಾಲು ಇರಲಿಲ್ಲ
ಕಥೆಯ ಸತ್ಯಾತತೆ ಏನೇ ಇರಲೀ ಅಲ್ಲಿ ಗಮನಿಸುವ ವಿಚಾರವೊಂದಿದೆ.ಬರಿ ಭಾಷಣದಲ್ಲಿ ಅಥವಾ ಮಾತಿನಲ್ಲೇ ಬದಲಾಗಬೇಕು ಎಂದರೆ ಸಾಲದು. ದೇಶ ಬದಲಾಗಬೇಕು ರಾಜ್ಯ ಬದಲಾಗಬೇಕು ಎಂದಾದರೆ ಮೊದಲು ನಾವು ಬದಲಾಗಬೇಕು.ನಮ್ಮ ಚಿಂತನೆಗಳು ಬದಲಾಗಬೇಕು. ನಾನೊಬ್ಬ ಬದಲಾದರೆ ಸಾಕಾ ಎಂದರೆ ಖಂಡಿತ ಸಾಕು.ಹನಿ ಹನಿಗೂಡಿದರೆ ಹಳ್ಳ ಎನ್ನುವ ಹಾಗೇ ನಿನ್ನೊಬ್ಬನನ್ನು ನೋಡಿ ನಾಲ್ಕು ಜನ ಅವರನ್ನು ನೋಡಿ ಇನ್ನಾಲ್ಕು ಜನ ಹೀಗೆ ಬದಲಾವಣೆ ಸಾಧ್ಯ
ಇನ್ನಾದರೂ ನಮ್ಮ ದೇಶವನ್ನು, ನಮ್ಮ ರಾಜ್ಯವನ್ನು, ನಮ್ಮ ಜಿಲ್ಲೆಯನ್ನು ಹಳ್ಳಿಯನ್ನು ಬೇರೆ ದೇಶ ಅಥವಾ ಬೇರೆ ರಾಜ್ಯದೊಂದಿಗೆ ಹೋಲಿಕೆ ಮಾಡುವುದನ್ನು ಬಿಟ್ಟು ಹೇಗೆ ನಾವಿರುವ ಜಾಗವನ್ನು ಬದಲಾಯಿಸಬಹುದೆಂದು ಯೋಚಿಸೋಣ, ಮೊದಲು ನಾವು ಬದಲಾಗೋಣ, ನಮ್ಮ ಯೋಚನೆಯನ್ನು ಬದಲಿಸೋಣ. ನಾವು ಸುಳ್ಳನ್ನು ಹೇಳಬೇಡ ಎಂದು ಮಕ್ಕಳಿಗೆ ಹೇಳಿ ಮಕ್ಕಳ ಎದುರಲ್ಲೇ ಸುಳ್ಳನ್ನು ಹೇಳಿದರೆ ಎಷ್ಟು ಸರಿ ? ಅದಕ್ಕೆ ಹೇಳಿದ್ದು ಬದಲಾವಣೆ ಎಲ್ಲೋ ಆಗುವುದಿಲ್ಲ ಅದು ನಮ್ಮಲ್ಲಿ ಆಗಬೇಕು.ನಾವು ಬದಲಾದರೆ ನಮ್ಮ ಹಳ್ಳಿ, ಹಳ್ಳಿಯಿಂದ ಹೋಬಳಿ, ಹೋಬಳಿಯಿಂದ ತಾಲ್ಲೂಕು, ತಾಲ್ಲೂಕಿನಿಂದ ಜಿಲ್ಲೆ ಜಿಲ್ಲೆಯಿಂದ ರಾಜ್ಯ.ರಾಜ್ಯದಿಂದ ರಾಷ್ಟ್ರ ಬದಲಾಗುತ್ತದೆ
ಬದಲಾವಣೆ ಆಗಬೇಕು ಎನ್ನುವುದನ್ನು ಬಿಟ್ಟು ನಾನು ಬದಲಾಗಬೇಕು ನನ್ನಿಂದಲೇ ಬದಲಾವಣೆ ಸಾಧ್ಯವೆಂದು ಭಾವಿಸೋಣ.ಆಗ ನಿಜವಾಗಿಯೂ ನನ್ನ ದೇಶ.ರಾಜ್ಯ, ಜಿಲ್ಲೆ ಎಲ್ಲವೂ ಬದಲಾಗುತ್ತದೆ.
ಇದೇ ನಿಜವಾದ ಬದಲಾವಣೆ
- ರಾಘವೇಂದ್ರ ಸಿ ಎಸ್
ಮೈಸೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ