ಮಂಗಳವಾರ, ಜುಲೈ 13, 2021

ಗತಕಾಲ ಗತಿಸಿದರೂ ಮಾಸದ ದಾಸಿಮಯ್ಯನವರ ಆದರ್ಶಗಳು (ಲೇಖನ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ.

ಗತಕಾಲ ಗತಿಸಿದರೂ ಮಾಸದ ದಾಸಿಮಯ್ಯನವರ ಆದರ್ಶಗಳು

ನಾಡಿನ ಸಮಸ್ತ ಜನತೆಗೆ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ೧೦೪೨ ನೇ ಜಯಂತ್ಯುತ್ಸವ ರ ಹಾರ್ದಿಕ ಶುಭಾಶಯಗಳು.ಕನ್ನಡ ನಾಡಿನ ಸಾಹಿತ್ಯ ಲೋಕದಲ್ಲಿ ತಮ್ಮ ಅನುಭಾವವನ್ನು ವಚನರೂಪದಲ್ಲಿ ಮೊಟ್ಟಮೊದಲು ಸೃಷ್ಟಿಸಿದ ಶ್ರೇಷ್ಠ ಅನುಭಾವಿ  ಹಾಗೂ ಕಾಯಕ ಯೋಗಿ ದೇವರ ದಾಸಿಮಯ್ಯನವರು ನಿತ್ಯಜೀವನದಲ್ಲಿ ನೇಕಾರಿಕೆಯ ಪವಿತ್ರ ಕಾಯಕದಿಂದ ಪ್ರಸಿದ್ಧಿ ಪಡೆದವರು.ಬಸವಯುಗ ಪೂರ್ವದಲ್ಲಿ ಅಂದರೆ ಹನ್ನೊಂದನೇ ಶತಮಾನದಲ್ಲಿ ಅಂದರೆ ೯೮೦ ರಲ್ಲಿ  ಭಕ್ತಿವಂತರಾದ ರಾಮಯ್ಯ ಮತ್ತು ಶಂಕರಮ್ಮ ಇವರ ಪವಿತ್ರ ಗರ್ಭದಲ್ಲಿದೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರಿನಲ್ಲಿ  ಜನಿಸಿದರು.ಕಾಯಕದ ಮಹತ್ವ ತಿಳಿಸುತ್ತಾ ತಾನು ನೇಯ್ಗೆಯ ಕಾಯಕವನ್ನು ಮಾಡುತ್ತ ಮನೆಯಲ್ಲಿ ನಿತ್ಯ ಅನ್ನ ದಾಸೋಹವನ್ನು ನಡೆಸುತ್ತಿದ್ದರು.ದುಗ್ಗಳೆ ಎಂಬ ಕನ್ಯೆಯೊಡನೆ ವಿವಾಹವಾಯಿತು ಗೃಹಸ್ಥಾಶ್ರಮವನ್ನು ಸೇರಿದರು.ತಂದೆ ತಾಯಿ ಗುರು ಹಿರಿಯರ ಸೇವೆ ಮಾಡುತ್ತಾ ಧರ್ಮಪತ್ನಿ ದುಗ್ಗಳೆಯೂಂದಿಗೆ  ನೇಕಾರಿಕೆಯ ಕಾಯಕದಲ್ಲಿ ಮುನ್ನೆಡೆದು ಕಾಯಕದ ಜೊತೆಗೆ ದೀನದಲಿತರ ಸೇವೆ,ಅನ್ನದಾಸೋಹ ಮುಂತಾದ ಸತ್ಕಾರ್ಯಗಳನ್ನು ಉಸಿರಾಗಿಸಿಕೊಂಡು ತಮ್ಮ ಅನುಭವಗಳನ್ನು ವಚನ ರೂಪದಲ್ಲಿ ರಚಿಸಿದ್ದಾರೆ.

ಸತ್ಯದ ನಡೆ ತೀರ್ಥ ಭಕ್ತಿ ನಡೆ ತೀರ್ಥ 
ಮುಕ್ತಿಯ ಪ್ರಸಂಗ ಉಳ್ಳಡೆ ತೀರ್ಥ 
ಹರಿಯುವ ನದಿ ಎತ್ತಣ ತೀರ್ಥ  ರಾಮನಾಥ ।

ಹರಿದ ಗೋಣಿಯಲೂಬ್ಬ ಕಳವೆಯ  ತುಂಬಿದ    
ಇರುಳೆಲ್ಲಾ ನಡೆದನಾ ಸುಂಕಕ್ಕಂಜಿ 
ಕಳವೆಯ ಎಲ್ಲಾ ಹೋಗಿ ಬರಿದು ಗೋಣಿ ಉಳಿಯಿತು 
ಅಳಿಮನದವನ ಭಕ್ತಿ ಇಂತಾಯಿತು  ರಾಮನಾಥ । 

 ಹೀಗೆ ಸಮಾಜದ ಜನರ ಲೋಪ ದೋಷಗಳನ್ನು ತಿಳಿಸುವ ಪ್ರಯತ್ನ ಮಾಡಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಚನ ಸಾಹಿತ್ಯಕ್ಕೆ ನಾಂದಿಯಾಗಿ ಆದ್ಯ ವಚನಕಾರರೆಂದು ಪ್ರಸಿದ್ಧಿ ಪಡೆದರು. ಸತಿಪತಿಗಳು ಕಾಯಕನಿಷ್ಠೆಗೆ ಬದ್ಧರಾಗಿ ಬದುಕಿ ಬಾಳಿದಂತ ಪುಣ್ಯ ಭೂಮಿ ನಮ್ಮ ಕನ್ನಡ ನಾಡು. ಈ ಮುದನೂರು ಕ್ಷೇತ್ರದ ನೇಕಾರನಾದ ದೇವರ ದಾಸಿಮಯ್ಯನ ಸ್ಮರಣೆಗಾಗಿಯೇ ೨೦೧೫ ರಿಂದಲೇ ಕರ್ನಾಟಕ ಸರಕಾರ ಆದ್ಯ ವಚನಕಾರನ ಜಯಂತುತ್ಸವವನ್ನು ಆಚರಿಸುತ್ತಾ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ.
        ದೇವರ ದಾಸಿಮಯ್ಯನವರು ಗತಿಸಿ ಸಾವಿರವರ್ಷಗಳಿಗೆ ಅಧಿಕವಾಗಿದ್ದರೂ ಅವರು ಹಾಕಿದ ಆದರ್ಶದ ನೀತಿ, ಕಾಯಕನಿಷ್ಠೆ, ಇಂದಿಗೂ ನಮ್ಮ ಜನರ ಜೀವನದಲ್ಲಿ ಹಾಸುಹೊಕ್ಕಾಗಿ ಅವರ ಆದರ್ಶಗಳಿಗೆ ಅನುಗುಣವಾಗಿಯೇ ಜೀವನ ನಡೆಸುತ್ತಿದ್ದಾರೆ. ದಾಸಿಮಯ್ಯನವರ ಜಯಂತ್ಯುತ್ಸವದ  ಈ ಶುಭ ಸಂದರ್ಭದಲ್ಲಿ ನೇಕಾರಿಕೆಯೇ ಜೀವಾಳ ಎಂದು ಬದುಕಿದ ಕುಟುಂಬಗಳು ಕಾಲ ಗತಿಸಿದಂತೆ ಪರಿಸ್ಥಿತಿಗೆ ಮಣಿದು ವೃತ್ತಿ ಬದಲಾವಣೆಗೆ ಒಳಪಟ್ಟರೂ" ನಾವು ನೇಕಾರರು" ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ  ಕುಟುಂಬಗಳ ಬಗ್ಗೆ ಪರಿಚಯ ಮಾಡುವ ಮನಸ್ಸಾಗುತ್ತಿದೆ.ಕೊಪ್ಪಳ ಜಿಲ್ಲೆಗೆ ಸೇರಿದ ಅಳವಂಡಿ- ಕಂಪ್ಲಿ ಗ್ರಾಮದ ದೇವಾಂಗ ಕುಲದ ಗೊಂಡಬಾಳ, ಗಾಳಿ ,ಗುಗ್ಗರಿ ,ಕೊಳ್ಳಿ, ಧೋತರಗಾವಿ ಇತ್ಯಾದಿ ಮನೆತನಗಳ ಜೊತೆಗೆ   ಅನ್ಯ ಧರ್ಮೀಯರೂ ಸಹ ನೇಕಾರಿಕೆ ವೃತ್ತಿಯಲ್ಲಿ ತೊಡಗಿದ್ದರು. ಕಿನ್ನಾಳ ಗ್ರಾಮದ ಮೆಣೆದಾಳ ಶಲ್ಲೇದ, ಕುದ್ರಿಮೋತಿ ಇತ್ಯಾದಿ ಮನೆತನಗಳು ಭಾಗ್ಯನಗರದ ಬೆಟಗೇರಿ ,ಗುಪ್ತಾ ಇತ್ಯಾದಿ ಮನೆತನಗಳು ಹೀಗೆ ಹಲವಾರು ಕುಟುಂಬಗಳ ಪೂರ್ವಿಕರು ನೇಕಾರಿಕೆಯ ವೃತ್ತಿ ಯೇ ಜೀವಾಳ ವೆಂದುಕೊಂಡು ಬದುಕು ಕಟ್ಟಿಕೊಂಡು ಜೀವನ ನಡಸಿ ನೂರಾರು ಕುಟುಂಬಗಳಿಗೆ ದಾರಿ ದೀಪವಾಗಿದ್ದರು.ಅಳವಂಡಿಯ ಗಾಳಿ ಮನೆತನದ ಭೀಮನಗೌಡ್ರ ಆ ಪುಟ್ಟ ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸುಮಾರು ೧೦೦ ಕೈಮಗ್ಗಗಳನು ಹಾಕಿಸಿ ಬದುಕು ಕಟ್ಟಿಕೊಟ್ಟಿದ್ದಾರೆ. ಆದರೆ ಕಾಲಕ್ರಮೇಣ ಆ ಕುಟುಂಬದ ಮುಂದಿನ ಪೀಳಿಗೆ ಅಂದರೆ ಭೀಮನಗೌಡರ ಪುತ್ರರಾದ ತಿಪ್ಪನಗೌಡ್ರು ಕಚ್ಚಾವಸ್ತುವಿನ ಪೂರೈಕೆ ಕೊರತೆಯಿಂದಾಗಿ ತಮ್ಮ ಗಮನವನ್ನು ಒಕ್ಕಲುತನದತ್ತ ಹರಿಸಿ ಕೃಷಿಯೊಂದಿಗೆ ವ್ಯಾಪಾರಿ ಪ್ರವೃತ್ತಿಯಲ್ಲಿ ತೊಡಗಿಕೊಂಡರು.ಅದೇ ರೀತಿ ಕಿನ್ನಾಳದ ಮೇಣೆದಾಳ ಮನೆತನದ ದಿ। ತೇಜಪ್ಪನವರು ಟಾಕಮ್ಮ ದಂಪತಿಗಳು ನೇಕಾರಿಕೆಯೇ ಜೀವಾಳವೆಂದು ಕೊಂಡು ಕೊನೆಯವರೆಗೂ ಅದೇ ವೃತ್ತಿಯಲ್ಲಿ  ಜೀವನ ಕಳೆದರು.ಹಾಗೆಯೇ ದಿ।ನಾಗಣ್ಣನವರು - ಈರಮ್ಮ ಶಲ್ಯೇದ ದಂಪತಿಗಳು,ದಿ। ಸೋಮಣ್ಣನವರು ಸತ್ಯಮ್ಮ ಕುದುರಿಮೋತಿ ಮನೆತನಗಳು ನೇಕಾರಿಕೆಯಲ್ಲಿ ಸಾಕಷ್ಟು ಕುಟುಂಬಗಳಿಗೆ ಬದುಕು ಕಟ್ಟಿಕೊಳ್ಳಲು ಸಹಾಯಕ ವಾದಂತಹ ಮನೆತನಗಳು.ದೇವಾಂಗ ಕುಲದ ನೇಕಾರರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಕುಟುಂಬವೊಂದರ ಸಮಾಜಮುಖಿ ಕೆಲಸದಲ್ಲಿ ತನ್ನನ್ನು ಸದಾ ತೊಡಗಿಸಿಕೊಂಡಿದ್ದ ಹಿರಿಯ ಚೇತನವೂಂದು ನಮ್ಮನ್ನು ಅಗಲಿ, ಅವರ ನೆನಪೊಂದೇ ನಮಗೆ ಇಂದು ಹಸಿರಾಗಿದೆ ಅವರೇ ಕಿನ್ನಾಳ ಗ್ರಾಮದ ಶಂಕ್ರಪ್ಪಣ್ಣನವರು ಶಲ್ಯೇದ.
ಹಸಿವೆಂಬ ಹೆಬ್ಬಾವು ಬಸಿರ ಬಂದಿಡಿದೊಡೆ 
ವಿಷವೇರಿತ್ತಯ್ಯ ಅಪಾದಮಸ್ತಕಕ್ಕೆ
ಹಸಿವಿಗನ್ನವನಿಕ್ಕಿ ವಿಷವನೀಳುವ ಬಲ್ಲಡೆ 
ವಸುಧೆಯೊಳಗಾತನೇ ಗಾರುಡಿಗ ಕಾಣಾ ರಾಮನಾಥ ।

ಹಸಿವು ಎನ್ನುವುದು ವಿಷಪೂರಿತ ಹೆಬ್ಬಾವು ಇದ್ದಂತೆ. ಅದು ಹೊಟ್ಟೆಯನ್ನು ಆವರಿಸಿದರೆ ಕಾಲಿನಿಂದ ತಲೆಯವರೆಗೂ ವಿಷವೇರುತ್ತದೆ. ಹಾವಿನ ವಿಷ ಇಳಿ
ಇಳಿಸಲು ಗಾರುಡಿಗ ಬೇಕು .ಅದೇ ರೀತಿ ಹಸಿದವನಿಗೆ ಅನ್ನ ಕೊಡುವವನೇ ಜೀವ ಉಳಿಸುವ ವನೇ ನಿಜವಾದ ದೇವರು ಎಂದು ದಾಸಿಮಯ್ಯನವರು ತಿಳಿಸುವಂತೆ, ಅಂತಹ ಆದರ್ಶ ಜೀವನ ಹೊಂದಿದ, ಸಮಾಜಮುಖಿಯಾಗಿ ಸಮಾಜದ ಜನರ ವಿವಿಧ ಬೇಡಿಕೆಗಳ ಪೂರೈಸುವಲ್ಲಿ ಸಹಾಯಹಸ್ತ ಚಾಚುತ್ತ ಸಂಪೂರ್ಣವಾಗಿ ತನ್ನನ್ನು ತಾನು ಸಮಾಜಸೇವೆಗೆ ಅರ್ಪಿಸಿಕೊಂಡ ವ್ಯಕ್ತಿಯಾಗಿದ್ದ ಶಂಕ್ರಪ್ಪ ಣ್ಣನವರ ಬಗ್ಗೆ ಇಂದು ನೆನಪಿಸಿಕೊಳ್ಳಲೇಬೇಕಾಗಿದೆ.

        ೨೫-೩-೨೦೨೧ ಗುರುವಾರ ಬೆಳಿಗ್ಗೆ 7ಗಂಟೆಗೆ ಮನೆ ಕಸ ಗೂಡಿಸಿ ಹೊಸ್ತಿಲು ಸಾರಿಸಿ ರಂಗೋಲಿ ಹಾಕುತ್ತಿದ್ದೆ ,ಒಂದು ಆಘಾತಕಾರಿ ಊಹಿಸಲಸಾಧ್ಯವಾದ ಸುದ್ದಿಯೊಂದು ಬರಸಿಡಿಲಿನಂತೆ ಮನಸ್ಸನ್ನು ಕಂಪಿಸಿತು .ಅದುವೇ ನಮ್ಮ ನೆಚ್ಚಿನ ಅಣ್ಣನವರಾದ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ  ಮನೆತನದ ದಿವಂಗತ ನಾಗಣ್ಣನವರು -ವೀರಮ್ಮ ದಂಪತಿಗಳ ಹಿರಿಯ ಸುಪುತ್ರರಾದ ಶಂಕ್ರಪ್ಪಣ್ಣನವರು(೧೫-೧೧-೧೯೫೦) ಹೃದಯಾಘಾತದಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ನಿಧನರಾದರು ಎಂಬ ಕಹಿ ಸುದ್ದಿಯನ್ನು ಮನಸ್ಸು ಒಪ್ಪಿಕೊಳ್ಳುತ್ತಿಲ್ಲ. ಏಕೆಂದರೆ ೨೩-೩-೨೦೨೧ ರಂದುನನ್ನ ಅಣ್ಣ ಅತ್ತಿಗೆ ಯವರೊಡನೆ ಅವರನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದೆವು .ಆದರೆ ತುರ್ತು ನಿಗಾ ಘಟಕದಲ್ಲಿದ್ದರಿಂದ ನಮ್ಮ ಭೇಟಿಗೆ ಅವಕಾಶ ಕಲ್ಪಿಸಲಿಲ್ಲ. ಗುಣಮುಖರಾಗುವರೆಂಬ ಭರವಸೆಯಿಂದ ಹಾಗೆ ಹಿಂದಿರುಗಿ ಬರುತ್ತಿದ್ದಾಗ ಆಸ್ಪತ್ರೆಯ ಎದುರಿಗೆ ಗಮನಿಸಿದೆ ಆ ದೇವಾಲಯದ ಸುತ್ತಲೂ ಕಣ್ಣಾಡಿಸಿದೆ ಒಂದು ಕಡೆ ಇಸ್ಲಾಂ ಗುಮ್ಮಟ, ಮತ್ತೊಂದು ಕಡೆ ಕ್ರೈಸ್ತರ ಶಿಲುಬೆ ,ಮತ್ತೊಂದು ಕಡೆ ಬೌದ್ಧ ವಿಹಾರ ಗಮನಿಸಿ‌ದೆ.ಅಲ್ಲೆಲಾ  ಆಯಾ ಧರ್ಮಿಯರು ಆಸ್ಪತ್ರೆಯಲ್ಲಿದ್ದ ತಮ್ಮ ಸಂಬಂಧಿಕರು ಬೇಗ ಗುಣಮುಖರಾಗಲೆಂದು ತಮ್ಮ ದೇವರುಗಳಲ್ಲಿ ಪ್ರಾರ್ಥಿಸುತ್ತಿರುವುದನ್ನು ಕಂಡು ಅಪಾರ ಬಂಧು ಬಳಗ ಹೊಂದಿದ್ದ ನಮ್ಮ ಶಂಕ್ರಪ್ಪಣ್ಣನವರು ಆದಷ್ಟು ಬೇಗನೇ ಗುಣಮುಖರಾಗಿ ಬರಲೆಂದು ನಾನು ಪ್ರಾಥಿ೯ಸುತ ಮರಳಿ ಬಂದೆ.
      ಹುಟ್ಟು ಸಾವು ಪ್ರತಿಯೊಬ್ಬರಿಗೆ ಅನಿವಾರ್ಯ, ಆದರೆ ಸಮಾಜಮುಖಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಮರಣ ಹೊಂದಿದರೆ ಆಗುವಂತಹ ದುಃಖ ಅಷ್ಟಿಷ್ಟಲ್ಲ. ಇವರಿಗೆ ಇಬ್ಬರು ಸಹೋದರರು, 4ಜನ ಸಹೋದರಿಯರು, ಒಬ್ಬ ಪುತ್ರ, 3ಜನ ಪುತ್ರಿಯರು ಹಾಗೂ ಮೊಮ್ಮಕ್ಕಳು ಮತ್ತು ಅತ್ಯಂತ ಆತ್ಮೀಯ ಅಪಾರ ಬಂಧುಬಳಗವನ್ನು ಅಗಲಿದ್ದು,ತುಂಬಲಾರದ ನಷ್ಟವಾಗಿದೆ ದೇವಾಂಗ ಸಮಾಜದ ಹಿರಿಯರಲ್ಲಿ ಒಬ್ಬರಾದ ಇವರು ಕಿನ್ನಾಳ, ಕೊಪ್ಪಳ, ಭಾಗ್ಯನಗರ, ಅಳವಂಡಿ ,ಕಂಪ್ಲಿ, ಇಲಕಲ್ಲ , ದೋಟಿಹಾಳ, ಹೊಸಪೇಟೆ, ಗುಳೇದಗುಡ್ಡ 'ಕಮತಗಿ, ಹಾವೇರಿ, ಬೆಂಗಳೂರು, ರಾಣೆಬೆನ್ನೂರು ಹೀಗೆ ಹಲವು ಊರುಗಳಲ್ಲಿ ಅಪಾರ ಬಂದುಬಳಗ ಒಳಗೊಂಡಿದ್ದು ಅವರೆಲ್ಲರಿಗೂ ನೆಚ್ಚಿನವರಾಗಿದ್ದರು .ನನ್ನ ತವರಿನ ಜೊತೆ ಅವಿನಾಭಾವ ಸಂಬಂಧವಿತ್ತು ಏಕೆಂದರೆ ಅದು ಅವರ ಚಿಕ್ಕಮ್ಮನ ಮನೆಯೇ ಆಗಿತ್ತು .ಅವರೆಂದೂ ದೊಡ್ಡಮ್ಮನ ಮಗ ಅನ್ನಿಸಿಯೇ ಇರಲಿಲ್ಲ. ನಮ್ಮ ಒಡಹುಟ್ಟಿದವರೆಂಬ ಪ್ರೀತಿಯಿಂದಲೇ ಪ್ರತಿಯೊಬ್ಬರ ಪ್ರೀತಿಗೆ ಪಾತ್ರನಾಗಿದ್ದ.ನನಗೆ ನೆನಪಿ ದ್ದಂತೆ ಇದುವರೆಗಿನ ನಮ್ಮ ತುಂಬು ಕುಟುಂಬದ ಯಾವುದೇ ಕಾರ್ಯಕ್ರಮ ಅವರಿಲ್ಲದೇ ಮಾಡಿದ ನೆನಪೇ ಇಲ್ಲ.ಕೇವಲ ನಮ್ಮ ಕುಟುಂಬವಷ್ಟೇ ಅಲ್ಲ ಯಾರೇ ಆಗಲಿ, ಯಾವುದೇ ಸಂದರ್ಭದಲ್ಲಿ ಆಗಲಿ,ಯಾವ ಸಮಯದಲ್ಲಾಗಲಿ, ಕರೆದೊಡನೆಯೇ ಹೋಗಿ ಅವರ ಕಾರ್ಯದಲ್ಲಿ ಭಾಗಿಯಾಗಿ ಅವರ ಕುಟುಂಬದವರಿಗೆ ನೆರವಾಗುವ ಉದಾತ್ತ ಗುಣ ಹೊಂದಿದ್ದರು ಕರೆದ ವ್ಯಕ್ತಿ ಶ್ರೀಮಂತನೂ, ಬಡವನೋ, ಹೋಗಬೇಕೋ, ಹೋಗಬಾರದೋ ಎಂದು ಹಲವಾರು ರೀತಿಯಲ್ಲಿ ಲೆಕ್ಕ ಹಾಕುತ್ತಾ ಕನಿಷ್ಠ ಮನಸ್ಥಿತಿ ಹೊಂದಿದ್ದ ಜನರ ನಡುವೆ ಬಡವ ಶ್ರೀಮಂತ ಎಂಬ ಭೇದಭಾವವಿಲ್ಲದೆ ಅವರ ಕರೆಗೆ ಸ್ಪಂದಿಸುವ ಶಂಕ್ರಪ್ಪ ಣ್ಣನವರ ಆ ಗುಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ .

ಬಸಿರೊಳಗಣ ಶಿಶು ತಾಯಿ ಮುಖವನರಿಯದು 
ತಾಯಿಯು ಶಿಶುವಿನ ಮುಖವನೆಂದೂ ಅರಿಯಳು
ಮಾಯಾ ಪ್ರಪಂಚದೊಳಗಿನ ಭಕ್ತ ದೇವನರಿಯ ದೇವರು ಭಕ್ತನೆಂದೂ ಅರಿಯ ಕಾಣಾ ರಾಮನಾಥ ।

ಎಂಬ ದಾಸಿಮಯ್ಯನವರ ನುಡಿಯಂತೆ ಸಮಾಜದಲ್ಲಿರುವ ಅನೇಕರ ನಡುವೆ ತನಗರಿವಿಲ್ಲದಂತೆ ಸಮಾಜಮುಖಿ ಕೆಲಸಗಳಿಂದ ತನ್ನ ವ್ಯಕ್ತಿತ್ವಕ್ಕೊಂದು ಮೆರಗು ಗಳಸಿಕೊಂಡಂತಹ  ಆದರ್ಶ ಜೀವನ ಇವರದಾಗಿತ್ತು ಯಾರ ಮನೆಯಲ್ಲಿ ಯಾವ ಕಾರ್ಯಕ್ರಮವಿದ್ದರೂ ಅಲ್ಲಿ ಅಣ್ಣನವರು ಇರುತ್ತಿದ್ದರು. ಇರದಿದ್ದರೆ ಪ್ರತಿಯೊಬ್ಬರ ಶಂಕ್ರಣ್ಣನವರು ಬಂದೇ ಇಲ್ಲ! ಮೊದಲು ಅವರನ್ನು ಕರೆದುಕೊಂಡು ಬನ್ನಿ  ಅವರಿಲ್ಲದ ಕಾರ್ಯ ಕಾರ್ಯವೇ? ಎಂಬ ಅಭಿಮಾನ ಪೂರ್ವಕ ಮಾತುಗಳು ಅವರ ಬಗ್ಗೆ ಜನರಿಗಿದ್ದ ಪ್ರೀತಿ ವಿಶ್ವಾಸ ಗೌರವಾಧರಗಳನ್ನು ತೋರಿಸುತ್ತಿತ್ತು.ದೇವಾಂಗ ಸಮಾಜದ ಹಿರಿಯರಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು.ಇತ್ತಿಚೀಗೆ ಭಾಗ್ಯನಗರದಲ್ಲಿ ನಡೆದ ಬನಶಂಕರಿ ದೇವಾಲಯದ ದೀಪಸ್ತಂಭ ಉದ್ಘಾಟನಾ ಸಮಾರಂಭದಲ್ಲಿ ಸಮಾಜದ ಹಿರಿಯರೆನಿಸಿದ್ದ ಇವರಿಗೆ ದೇವಾಂಗ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಜಿಗಳು  ಗೌರವ ಸತ್ಕಾರವನ್ನು ಪಡೆದುಕೊಂಡಿದ್ದರು. ಇತ್ತೀಚೆಗೆ ಕರೋನಾ ತನ್ನ ಅಟ್ಟಹಾಸವನ್ನು ಮೆರೆದು ಸಹಜ ಸಾವಿಗೆ ಒಳಗಾದವರನ್ನು ಅನುಮಾನದಿಂದಲೇ ನೋಡಿದ ಅನೇಕರು ಆ ಸಂದರ್ಭದಲ್ಲಿ ಮರಣ ಹೊಂದಿದ ಕುಟುಂಬದವರಿಗೆ ಧೈರ್ಯತುಂಬಿ ವಿಧಿವತ್ತಾಗಿ ಅಂತ್ಯಸಂಸ್ಕಾರ ನೆರವೇರುವಂತೆ ಸಹಾಯ ಮಾಡಿದ್ದು ಇವರಲ್ಲಿದ್ದ  ಔದಾರ್ಯವನ್ನೂ ತೋರಿಸುತ್ತದೆ. ಆಡಂಬರವಿಲ್ಲದ ಸರಳ ಉಡುಗೆ ತೊಡುಗೆಯ ಮಾತಿನಲ್ಲೂ ಸಾಮ್ಯತೆ, ಹಿರಿಯ ಕಿರಿಯರ ಮೇಲೆ ಗೌರವಾಧಾರಗಳಿಂದಾಗಿ ಎಲ್ಲರ ಮನದಲ್ಲಿ ನೆಲೆಸಿದ್ದ ಶಂಕ್ರಪ್ಪ ಣ್ಣನವ ರು ಇಂದು ನೆನಪು ಮಾತ್ರ ಮನೆಯೇ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು ಎನ್ನುವ ಹಾಗೆ ತಾಯಿಯವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಬೆಳೆದ ಮಕ್ಕಳು ಅವರ ಆದರ್ಶ ಹೊತ್ತು ಬದುಕಿ ಬೆಳಕಾದರು. ಮೂರು ದೇಹ ಒಂದು ಪ್ರಾಣ ವೆಂಬಂತೆ ಬದುಕಿ ಬಾಳಿದ ಈರಮ್ಮ- ರಿಂದಮ್ಮ- ಶಂಕ್ರಮ್ಮ ಈ ಮೂವರು ತಾಯಿಯವರ ಅಕ್ಕರೆಯಲ್ಲಿ ಬೆಳೆದವರವರು .
ಬಂದುದನರಿದು ಬಳಸುವಳು 
ಬಂದುದ ಪರಿಣಾಮಿಸುವಳು ಬಂಧುಬಳಗವ ಮರೆಸುವಳು ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ ।

ಎಂಬ ದಾಸಿಮಯ್ಯನವರ ವಚನ ದಂತೆ ದುಗ್ಗಳೆ ತಾಯಿಯಂತೆ, ನಮ್ಮೆಲ್ಲರ ಈ ಮೂವರು ತಾಯಂದಿರು ದುಗ್ಗಳೆಯ ಆದರ್ಶಗಳನ್ನು ಕಣ್ಣಿಗೊತ್ತಿಕೊಂಡು ಅದರಂತೆಯೇ ಕೊನೆಯವರೆಗೂ ನಡೆದುಕೊಂಡವರು .ಇಂತಹ ತಾಯಿಯರ ಆಶೀರ್ವಾದ ಶಂಕ್ರಪ್ಪ ಣ್ಣನವರ ಮೇಲಿರಲಿ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ .

ಶ್ರೀಮತಿ ಸುಮಂಗಲಾ ಕಷ್ಣ ಕೊಪ್ಪರದ 
ಶಿಕ್ಷಕಿ ಎ.ಸಿ.ಓ. ಪ್ರೌಢಶಾಲೆ ಇಲಕಲ್ಲ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...