ಆತ್ಮಶ್ರದ್ಧೆ
"ಶ್ರದ್ಧಾವಾನ್ ಲಭ್ಯತೇ ಜ್ಞಾನಮ್
ಶ್ರದ್ಧಾವಾನ್ ಲಭ್ಯತೇ ಸರ್ವಮ್".
ಬದುಕಿನ ಗೆಲುವಿಗೆ ಶ್ರದ್ಧೆಯೇ ಕಾರಣ,ಪ್ರತಿ ವ್ಯಕ್ತಿಯೊಳಗೆ ಅಡಗಿರುವ ಆತ್ಮಬಲ,ಆತ್ಮಶಕ್ತಿ,ಆತ್ಮಶ್ರದ್ಧೆಯು ಎಚ್ಚರಗೊಳ್ಳಬೇಕಾದ ಅಗತ್ಯತೆ ತುಂಬಾ ಇದೆ.ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ ಅವಿದ್ಯಾವಂತರಿಗಿಂತ ಹೆಚ್ಚು ಅಪ್ರಾಮಾಣಿಕರಾಗುತ್ತಿದ್ದಾರೆ,ಇದಕ್ಕೆ ಮೂಲಕಾರಣ ತಮ್ಮ ಬಾಲ್ಯದಿಂದಲೇ ಅಥವಾ ಪ್ರಾಥಮಿಕ ತರಗತಿಯಿಂದಲೇ ಈಗಿನ ಯುವಜನತೆ ಬೆಳೆಸಿಕೊಂಡು ಬಂದ ಆತ್ಮವಿಶ್ವಾಸಹೀನತೆ,ಭವಿಷ್ಯದ ಭಯ,ಸುರಕ್ಷತೆಯ ಅಭಾವ,ಸೋಲನ್ನು ಸವಾಲಾಗಿ ಸ್ವೀಕರಿಸದೇ ಇರುವ ಮನೋಭಾವ,ಸಿನಿಮಾ ಕಲ್ಪನೆಯ ವಿಲಾಸಿ ಜೀವನಾಕಾಂಕ್ಷೆ,ಇವುಗಳಲ್ಲಿ ಯಾವುದಾದರೊಂದು ಕಾರಣವಂತೂ ಇರಲೇಬೇಕು.ನಮ್ಮಲ್ಲಿಯೇ ಅಡಗಿರುವ ಆತ್ಮವಿಶ್ವಾಸ,ಆತ್ಮ ಶ್ರದ್ಧೆಯ ಅಭಾವ ನಮ್ಮನ್ನು ಅಧಃಪತನದೆಡೆಗೆ ಹೇಗೆ ಕೊಂಡೊಯ್ಯುತ್ತದೆ ಎಂಬುದನ್ನು ಯೋಚಿಸಲು ಅಸಾಧ್ಯವಾಗಿದೆ.
ಶ್ರದ್ಧೆ ಒಂದು ಆತ್ಮ ಗುಣ.ಮನಸ್ಸಿನ ಒಂದು ಮಹಾಶಕ್ತಿ.ಅದರ ಉಪಯೋಗವನ್ನು ಎಲ್ಲರೂ ಎಲ್ಲಾ ಕಾಲದಲ್ಲಿಯೂ ಪಡೆಯಬಹುದು.ನಮ್ಮ ಆಯಸ್ಸು,ಆರೋಗ್ಯ,ವಿದ್ಯೆ,ಉದ್ಯೋಗ,ಆತ್ಮಾನಂದ ಈ ಎಲ್ಲವುಗಳ ಮೇಲೆ ಶ್ರದ್ಧೆಯ ಪರಿಣಾಮ ಶತಃಸಿದ್ಧ.ವಿಶ್ವದಲ್ಲಿರುವ ಎಲ್ಲಾ ರಹಸ್ಯದ ಬಾಗಿಲುಗಳನ್ನು ತೆರೆಯುವ ಕೀಲಿಕೈ ಶ್ರದ್ಧೆ,ಪ್ರಪಂಚದ ಎಲ್ಲಾ ಶಕ್ತಿಗಳೂ ಹೊರಹೊಮ್ಮುವ,ಮೂಲಮಂತ್ರವಾದ ಪಾರಮಾರ್ಥಕ್ಕೂ ಅದು ಪರಿಪೂರ್ಣ ಮಾರ್ಗ,ಸರ್ವನಾಶದ ಮಧ್ಯೆ ಆಶಾವಾದಿಯಾಗಿ ಅಲುಗಾಡದೇ ನಿಲ್ಲುವ ಸ್ಥೈರ್ಯವನ್ನು ನೀಡುವುದು ಈ ಶ್ರದ್ಧೆಯೇ! ನಿಜವಾದ ಶ್ರದ್ಧೆ ಇತ್ತೆಂದರೆ ದಿವ್ಯಜ್ಞಾನವನ್ನು ಪಡೆಯಬಹುದೆಂದು ಭಗವದ್ಗೀತೆಯ ಒಂದು ಉಕ್ತಿ ಸಾರಿ ಸೇಳಿದೆ.
ಸ್ವಾಮಿ ವಿವೇಕಾನಂದರು ಆತ್ಮಶ್ರದ್ಧೆಯನ್ನು ರೂಢಿಸಿಕೊಳ್ಳುವ ಅವಶ್ಯಕತೆಯನ್ನು ಮತ್ತೆ ಮತ್ತೆ ಬೋಧಿಸಿದ್ದರು.ಆತ್ಮಶ್ರದ್ಧೆಯು ಆದರ್ಶ ಬದುಕಿಗೆ ಅತ್ಯಂತ ಉಪಕಾರಿಯಾದದ್ದು,ನಮ್ಮಲ್ಲಿ ನಮಗೆ ಶ್ರದ್ಧೆ,ವಿಶ್ವಾಸ,ನಂಬಿಕೆ ಉಂಟಾಗುವಂತೆ ಬೋಧಿಸುವ ವ್ಯವಸ್ಥೆ ಶಿಕ್ಷಣದಲ್ಲಿ ಅಳವಡಿಸಿ ಅನುಷ್ಠಾನ ಮಾಡಿದ್ದಾದರೆ ಪ್ರಪಂಚದಲ್ಲಿ ಕಂಡು ಬರುವ ದುರಂತಗಳು,ದುಷ್ಟತನ ದೂರವಾಗುತ್ತಿದ್ದವು ಎಂಬುದರಲ್ಲಿ ಸಂದೇಹವಿಲ್ಲ.ನಾವು ಕಲಿಸುತ್ತಿರುವ ನಮ್ಮ ನಮ್ಮ ಶಾಲೆಯ ಮಕ್ಕಳಲ್ಲಿ ಈ ಆತ್ಮವಿಶ್ವಾಸ,ಆತ್ಮಶ್ರದ್ಧೆಯನ್ನು ಮೈಗೂಡಿಸೋಣ.ಕೇವಲ ಪದವಿ,ಉದ್ಯೋಗದ ದೃಷ್ಟಿಯಿಂದ ವಿದ್ಯಾಭ್ಯಾಸವನ್ನು ಮಾಡಿಸದೆ ಆತ್ಮಬಲ,ಆತ್ಮಶಕ್ತಿ,ಆತ್ಮವಿಶ್ವಾಸವನ್ನು ಬಲಪಡಿಸುವ ವಿದ್ಯೆಯನ್ನು ಕಲಿಸೋಣ.
ಮನುಕುಲದ ಇತಿಹಾಸದ ಪುಟಗಳಲಿ ಕಂಗೊಳಿಸಿರುವ ಮಹಾಪುರುಷರ ಜೀವನದಲ್ಲಿ ಎಲ್ಲಕ್ಕಿಂತ ಮಿಗಿಲಾಗಿ ಅವರ ಅದ್ಭುತ ಕಾರ್ಯಶಕ್ತಿಗೆ ಪ್ರೇರಣೆಯಾಗಿ ಕೆಲಸ ಮಾಡಿದುದು ಅವರ ಆತ್ಮಬಲ,ಆತ್ಮಶಕ್ತಿ,ಆತ್ಮವಿಶ್ವಾಸ,ಆತ್ಮಶ್ರದ್ಧೆಯೇ.
"ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಆತ್ಮಶ್ರದ್ಧೆಯೇ ದಾರಿದೀಪ"
"ಪ್ರತಿಯೊಬ್ಬರ ಅಂತರಂಗದ ಆಳದಲ್ಲಿ ಅಡಗಿರುವ ಮಹಾಘನ ಶ್ರದ್ಧಾ ಶಕ್ತಿಯನ್ನು ಎಚ್ಚರಗೊಳಿಸೋಣ.
- ಆನಂದಜಲ, ಶಿಕ್ಷಕಿ.
ಅಧ್ಯಕ್ಷರು ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ. ತುರುವೇಕೆರೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ