ಇಲಕಲ್ಲ ನಗರದಲ್ಲೊಂದು ಆಧ್ಯಾತ್ಮಿಕ ಲಲಿತಾಬಳಗ
ಪ್ರತಿಯೊಂದು ಸಂಘ ಅಥವಾ ಸಂಸ್ಥೆಗಳು ಒಂದು ಉದ್ದೇಶ ಸಾಧನೆಗಾಗಿ ಸ್ಥಾಪಿತಗೊಂಡಿರುತ್ತವೆ .ಅದೇ ರೀತಿ ಇಲಕಲ್ಲ ನಗರದಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸುವುದಕ್ಕಾಗಿಯೇ ಒಂದು ಭಗಿನಿಯರ ಗುಂಪು ದಿನದಿಂದ ದಿನಕ್ಕೆ ಬೆಳೆಯುತ್ತಾ ತನ್ನದೇ ಆದ ಉದ್ದೇಶ ಸಾಧನೆಯತ್ತ ನಿರಾತಂಕವಾಗಿ ದಾಪುಗಾಲು ಹಾಕುತ್ತಿದೆ. ಆ ಭಗಿನಿಯರ ಬಳಗವೇ *ಲಲಿತಾಬಳಗ*.ಈ ಬಳಗವನ್ನು ಹುಟ್ಟು ಹಾಕಿದ ಕಾರಣಕರ್ತರು, ಹಿರಿಯರಾದ ರಾಮಚಂದ್ರಪ್ಪ ಕರ್ಜಿಗಿರವರ ಕುಟುಂಬದ ಸೊಸೆಯಾದ ದಿವಂಗತ ಶ್ರೀ ಶೈಲಪ್ಪ ನವರ ಧರ್ಮಪತ್ನಿಯಾದ ಸುನಿತಮ್ಮ ಕರ್ಜಗಿಯವರು .ಇವರು ಬೇರೆ ಬೇರೆ ಊರುಗಳಿಗೆ ಹೋದಾಗ ಅಲ್ಲೆಲ್ಲಾ ಮಹಿಳಾ ಸಂಘದವರು ಲಲಿತ ,ರುದ್ರ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಿದ್ದುದನ್ನು ಗಮನಿಸಿ, ತಾವು ಕಲಿಯಲು ಇಚ್ಛೆಪಟ್ಟರು.ಸದಾ ಆಧ್ಯಾತ್ಮಿಕ ಚಿಂತನೆಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿರುತ್ತಿದ್ದ ಸುನಿತಮ್ಮ ನಿರಂತರವಾಗಿ ಮನೆಯಲ್ಲಿ ಬಿಡುವಿನ ವೇಳೆಯಲ್ಲಿ ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ರುದ್ರಪಠಣ ಮಾಡುವ ಹವ್ಯಾಸ ಹೊಂದಿದ್ದರು.ಇದೇ ರೀತಿಯ ಹವ್ಯಾಸ ಶ್ರೀಮತಿ ವೀಣಾ ದೇವಾಂಗಮಠ ಹಾಗೂ ಶ್ರೀಮತಿ ವೀಣಾ ಮುನವಳ್ಳಿ ಇವರಲ್ಲಿಯೂ ಇತ್ತು . ಪ್ರತಿವರ್ಷ ಶ್ರಾವಣ ಮಾಸದಲ್ಲಿ ಜ್ಯೋತಿರ್ಭವನದಲ್ಲಿ ನಡೆಯುತ್ತಿದ್ದ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಗಳಲ್ಲಿ ಶ್ರೋತೃವಾಗಿ ಆಗಮಿಸುತ್ತಾ ಅಲ್ಲಿಯ ಅಮೃತವಾಣಿಯನ್ನು ಆಲಿಸುತ್ತಿದ್ದರು .ತಾವು ಆಧ್ಯಾತ್ಮಿಕವಾಗಿ ಏನಾದರೊಂದು ಸತ್ಕಾರ್ಯ ಮಾಡಬೇಕೆಂದು ಚಿಂತಿಸುತ್ತಿದ್ದರು .ಅವರ ಮನದಲ್ಲಿ ಮೂಡಿ ಬಂದದ್ದು ತಾವು ಪಾರಾಯಣ ಮಾಡುತ್ತಿದ್ದ ದೇವತಾ ಶ್ಲೋಕಗಳನ್ನು ಇಲಕಲ್ಲಿನ ಮಹಿಳೆಯರಿಗೆ ಕಲಿಸಬೇಕು ಎಂದು ತೀರ್ಮಾನಿಸಿದರು. ೨೦೧೮ ರ ಅವಧಿ ಗಾಯತ್ರಿ ಮಹಿಳಾ ಸಂಘದಲ್ಲಿ ಮಾಸಿಕ ಸಭೆ ಸೇರುತ್ತಿದ್ದ ಮಹಿಳೆಯರಿಗೆ ತಮ್ಮ ಮನದಿಂಗಿತವನು ಸುನಿತಮ್ಮ ತಿಳಿಸಿದರು. ಆಸಕ್ತ ಸಾಕಷ್ಟು ಮಹಿಳೆಯರು ಇದಕ್ಕೆ ಸಮ್ಮತಿಸಿ, ಶ್ಲೋಕಗಳ ಕಲಿಯುವಿಕೆಗೆ ಒಪ್ಪಿಗೆ ಸೂಚಿಸಿದರು .ಆದರೆ ಇಲ್ಲಿ ಅವರು ಅನುಸರಿಸಿದ ಒಂದು ಕಠಿಣ ಮತ್ತು ಅತ್ಯುತ್ತಮ ನಿಯಮವೆಂದರೆ ಸಮಯಪಾಲನೆ .ನಿರ್ಧರಿಸಿದ ಸಮಯಕ್ಕೆ ನಿಗದಿತ ಪಡಿಸಿದ ದೇವಸ್ಥಾನದಲ್ಲಿ ಎಲ್ಲರೂ ಬಂದು ಕಲಿಕೆಯಲ್ಲಿ ತೊಡಗಬೇಕೆಂದು. ಅವರ ಆಸೆಯಂತೆ ಮನೆಯಲ್ಲಿ ಏನೇ ಕೆಲಸ ಕಾರ್ಯಗಳಿದ್ದರೂ ಸಾಕಷ್ಟು ಗೃಹಿಣಿಯರು ಕಲಿಕೆಯ ಹಸಿವಿನಿಂದ ಆಗಮಿಸಿ ಮೊದಲಿಗೆ ಲಲಿತಾ ಸಹಸ್ರನಾಮ ಹೇಳುವ ಕ್ರಮಬದ್ಧ ಕಲಿಕೆಯಲ್ಲಿ ತೊಡಗಿದರು.
ಆರಂಭದಲ್ಲಿ ಕೆಲವೇ ಮಹಿಳೆಯರು ಆಸಕ್ತಿ ವಹಿಸಿದ್ದನು ಕಂಡು ಸುನಿತಮ್ಮ ಮನದಲ್ಲಿಯೇ ನೊಂದುಕೊಂಡಿದ್ದರು. ಎಲ್ಲರೂ ಈ ಧಾರ್ಮಿಕ ಕಲಿಕೆಗೆ ಮುಂದಾದರೆ ಮುಂದಿನ ಮಕ್ಕಳ ಮೇಲೆ ಇದು ಉತ್ತಮ ಪರಿಣಾಮ ಬೀರಬಹುದೆಂಬ ಆಸೆ ಅವರಿಗೆ.ಪಾರಾಯಣದಲ್ಲಿ ನಿಪುಣತೆ ಹೊಂದಿದ ಮಹಿಳೆಯರು ಬನಶಂಕರಿ ದೇವಸ್ಥಾನದಲ್ಲಿ ಸುಶ್ರಾವ್ಯವಾಗಿ ಹಾಡತೊಡಗಿದಾಗ ಅದನ್ನು ಕೇಳಿದವರೆಲ್ಲರೂ ನಾ ಮುಂದು ತಾ ಮುಂದು ಎಂಬಂತೆ ಕಲಿಯಲು ಆಸಕ್ತಿ ತೋರಿ ಆಗಮಿಸಿದರು .ಇಳಕಲ್ ನಗರದ ೪ ಪೇಟೆಗಳಾದ ಕೊಪ್ಪರದ, ಮುನವಳ್ಳಿ, ಗುಗ್ಗರಿ ,ಹಾಗೂ ಸಾಲ ಪೇಟೆಗಳಲ್ಲಿ ಮಹಿಳೆಯರು ಪ್ರತ್ಯೇಕವಾಗಿ ತಮಗೆ ಅನುಕೂಲಕರವಾದ ಸಮಯದಲ್ಲಿ ಕಲಿಕೆಗೆ ತೊಡಗಿ ನಿಪುಣರಾದರು. ಇಲ್ಲಿಂದ ಶ್ಲೋಕಗಳ ಕಲಿಕೆಯ ಹಸಿವು ಎಲ್ಲರಲ್ಲಿಯೂ ಹೆಚ್ಚಾಯಿತು. ಅವರು ಸುನಿತಮ್ಮನವರಿಗೆ ವಿಷ್ಣು ಸಹಸ್ರನಾಮ ಮತ್ತು ರುದ್ರಪಠಣವನ್ನು ಕಲಿಸುವಂತೆ ಒತ್ತಾಯಪಡಿಸಿದರು .ತಮ್ಮ ಬಹುದಿನದ ಕನಸು ನನಸಾಗುವ ದಿನ ಸಮೀಪಿಸುತ್ತಿದೆ ಎಂದು ಆಸಕ್ತಿಯಿಂದ ಸುನಿತಮ್ಮ ನವರು ವಿಷ್ಣು ಸಹಸ್ರನಾಮ ಮತ್ತು ರುದ್ರ ಪಠಣ ಮಾಡುವ ರೀತಿಯನ್ನು ಕಲಿಸಿದರು .
ಲಲಿತಾ ಬಳಗದ ಪ್ರತಿಯೊಬ್ಬ ಹೆಂಗಳೆಯರ ಮುಖದಲ್ಲಿ ಮಂದಹಾಸ .ಎಲ್ಲರೂ ಒಂದೆಡೆ ಸೇರಿ, ಇಷ್ಟು ನಿಷ್ಠೆಯಿಂದ ನಮ್ಮೆಲ್ಲರನ್ನು ಸನ್ಮಾರ್ಗದಲ್ಲಿ ಕರೆದೊಯ್ಯುತ್ತಿರುವ, ತಮ್ಮ ಸಮಯವನ್ನು ಬದಿಗಿಟ್ಟು ಸ್ತೋತ್ರಪಠಣ ಕಲಿಸಿದ ಗುರುಮಾತೆ ಸುನಿತಮ್ಮಳನ್ನು ಪ್ರೀತಿಪೂರ್ವಕವಾಗಿ ಗೌರವಿಸಬೇಕೆಂದು ನಿರ್ಧರಿಸಿ, ಮೊಟ್ಟಮೊದಲ ಬಾರಿಗೆ ಮುನವಳ್ಳಿ ಪೇಟೆಯ ಶ್ರೀಮತಿ ವೀಣಾ ಮುನವಳ್ಳಿ ಇವರು ತಿಳಿಸಿದಾಗ ,ಎಲ್ಲರೂ ಸಂತೋಷದಿಂದ ಮುನವಳ್ಳಿ ಪೇಟೆಯ ಬನಶಂಕರಿ ಗುಡಿಯಲ್ಲಿ ಸನ್ಮಾನ ಕಾರ್ಯಕ್ರಮವನ್ನು ಕೈಗೊಂಡರು .ಅಂದಿನ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತು ಅಳಿಲು ಸೇವೆ ಸಲ್ಲಿಸುವ ಕಾರ್ಯ ನನ್ನದಾಗಿದ್ದುದರಿಂದ ಸಂತೋಷಪಟ್ಟೆ .
ಇಳಕಲ್ ನಗರದ ಲಲಿತಾ ಬಳಗದ ೧೦೦ ಕ್ಕೂ ಅಧಿಕ ಮಹಿಳೆಯರು ಪಾರಾಯಣ ಮಾಡುವ ವಿಷಯವು ಪ್ರತಿವರ್ಷ ಇಳಕಲ್ ನಗರಕ್ಕೆ ಧನುರ್ಮಾಸದಲ್ಲಿ ಆಗಮಿಸುತ್ತಿದ್ದ ಕಾಶಿಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ೧೦೦೮ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ತಿಳಿದಾಗ ತುಂಬಾ ಹರ್ಷ ವ್ಯಕ್ತಪಡಿಸಿದರು .ಅವರು ಜ್ಯೋತಿರ್ಭವನದಲ್ಲಿ ನಡೆಯುತ್ತಿದ್ದ ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನ ನಡೆಯುವ ಸ್ಥಳಕ್ಕೆ ಲಲಿತಾ ಬಳಗಕ್ಕೆ ಆಹ್ವಾನವಿತ್ತು ,ಅಲ್ಲೆ ರುದ್ರಪಟ್ಟಣ ಮತ್ತು ವಿಷ್ಣು ಸಹಸ್ರನಾಮಗಳನ್ನು ಹೇಳಿಸುವುದರ ಮೂಲಕ ಆಶೀರ್ವದಿಸಿದರು ."ಆಧ್ಯಾತ್ಮಿಕ ಕೇಂದ್ರ" ವೆಂದೇ ಹೆಸರಾದ ಇಳಕಲ್ ನಗರದಲ್ಲಿ ಮಹಿಳೆಯರು ಆಧ್ಯಾತ್ಮಿಕ ಕಾರ್ಯಗಳಿಗೆ ಕೈ ಜೋಡಿಸುತ್ತಿದ್ದಾರೆ ,ಇದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು .ಇಂತಹ ಒಂದು ಸತ್ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಸುನೀತಮ್ಮ ಕರ್ಜಗಿ ಅವರಿಗೆ ಸನ್ಮಾನಿಸಿದ ತಕ್ಷಣ ನಾವೆಲ್ಲರೂ ಸಂಭ್ರಮಪಟ್ಟ ಮಧುರ ಕ್ಷಣವಾಗಿತ್ತು .ಅಲ್ಲದೆ ಲಯಬದ್ಧವಾಗಿ ರುದ್ರಪಠಣ ಮಾಡಿದ ಭಗಿನಿಯರೆಲ್ಲರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .ಅದೇ ವರ್ಷ ಕಾಶಿಯಲ್ಲಿ ನಡೆಯುತ್ತಿದ್ದ ಕೋಟಿ ಜಪಯಜ್ಞ ರುದ್ರಪಠಣದ ಕಾರ್ಯದಲ್ಲಿ ಪಾಲ್ಗೊಳ್ಳಿ ,ಎಂದು ಆಹ್ವಾನಿಸಿದ್ದು ಎಲ್ಲರಿಗೂ ಸಂತಸದ ಕ್ಷಣವಾಗಿತ್ತು.
ಕಾಶಿ ಜಗದ್ಗುರುಗಳ ಆಶೀರ್ವಾದ ದೊರೆಯುತ್ತಿದ್ದಂತೆ ಲಲಿತಾ ಬಳಗದ ಲಲಿತೆಯರೆಲ್ಲರೂ ತಮ್ಮದೇ ಆದ ರೂಪುರೇಷಗಳನ್ನು ಹಾಕಿಕೊಂಡರು .ಅವುಗಳೆಂದರೆ ....
*ಯಾವುದೇ ದೇವಾಲಯದ ಪೂಜಾ ಕಾರ್ಯಗಳಲ್ಲಿ ಆಹ್ವಾನವಿತ್ತಾಗ ಆ ದೇವಾಲಯಗಳಿಗೆ ತೆರಳಿ ಪಾರಾಯಣ ಮಾಡುವುದು .
*ಬಡವ ಶ್ರೀಮಂತರೆಂಬ ಭೇದವಿಲ್ಲದೆ ಅರಿಶಿನ ಕುಂಕುಮಕ್ಕೆ ಕರೆದು ನಮ್ಮ ಮನೆಯ ಕಾರ್ಯಕ್ರಮದಲ್ಲಿ ಪಾರಾಯಣ ಮಾಡಿ ಎಂದು ಕೇಳಿಕೊಂಡವರೆಲ್ಲರ ಕುಟುಂಬಕ್ಕೆ ಒಳಿತನ್ನು ಬಯಸಿ ಪಾರಾಯಣ ಕಾರ್ಯದಲ್ಲಿ ತೊಡಗುವುದು .
*ಜನನದಂತಹ ಶುಭ ಸಂದರ್ಭವಿರಲಿ ಪುಣ್ಯತಿಥಿಯಂತಹ ದುಃಖದ ಸಂದರ್ಭವಿರಲಿ ಆ ಕುಟುಂಬದವರಿಗೆ ಒಳಿತು ಉಂಟಾಗಲೆಂದು ಆಹ್ವಾನವಿತ್ತ ಅವರ ಮನೆಗೆ ಹೋಗಿ ಅವರಿಚ್ಛೆ ಪಟ್ಟ ದೇವತಾ ಶ್ಲೋಕದ ಪಾರಾಯಣ ಮಾಡುವ ಕಾರ್ಯ ಮಾಡಬೇಕೆಂದು ನಿರ್ಧರಿಸಿದರು .
ಇದೊಂದು ವಿನೂತನ ಕಾರ್ಯಕ್ರಮವೆಂದು ಭಾವಿಸಿ ಇಲಕಲ್ಲ ನಗರದಲ್ಲಿ ಯಾರೇ ತಮ್ಮ ಮನೆಯ ಗೃಹಪ್ರವೇಶ ,ತೊಟ್ಟಿಲುಶಾಸ್ತ್ರ ,ಉಡಿ ತುಂಬುವ ಶಾಸ್ತ್ರ ,ಉಪನಯನ, ಸತ್ಯನಾರಾಯಣನ ಪೂಜೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಆಹ್ವಾನವಿತ್ತಾಗ ಮಂದಹಾಸದ ನಗುವಿನೊಂದಿಗೆ ಸರ್ವರು ಸಮಯಕ್ಕೆ ಸರಿಯಾಗಿ ತೆರಳಿ ಪಾರಾಯಣ ಮಾಡುವ ಪರಿಪಾಠವಿಟ್ಟುಕೊಂಡಿದ್ದಾರೆ. ಇದು ನಿರಂತರವಾಗಿ ನಡೆದಿದೆ ಕಳೆದ ಒಂದೂವರೆ ವರ್ಷದಿಂದ ಕರೋನ ಸೋಂಕಿನ ಕಾರಣದಿಂದಾಗಿ ಎಲ್ಲರೂ ಮನೆಯಲ್ಲಿಯೇ ನಿತ್ಯ ಪಾರಾಯಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ .
ಇಲಕಲ್ಲ ನಗರದ ಜನಮನ ಗೆದ್ದ ಇವರ ಅಧ್ಯಾತ್ಮಿಕ ಕಾರ್ಯಕ್ರಮವೆಂದರೆ,೪ ಪೇಟೆಗಳಲ್ಲಿರುವ ಬನಶಂಕರಿ ದೇವಾಲಯಗಳಲ್ಲಿ ಅಖಂಡ ಲಲಿತಾ ಪಾರಾಯಣ ಮಾಡುವಂತಹದ್ದು .ಕಳೆದ ೨ ವರ್ಷದ ಹಿಂದೆ ೨೦೧೯ ರಲ್ಲಿ ಶ್ರಾವಣ ಮಾಸದಂದು ಪ್ರತಿ ಶುಕ್ರವಾರ ಅಖಂಡ ಲಲಿತಾ ಪಾರಾಯಣ ಮಾಡುವ ನಿರ್ಧಾರ ಕೈಗೊಂಡರು.ಮೊದಲಿಗೆ ಮುನವಳ್ಳಿ ಪೇಟೆಯ ಹಳೇ ಬನಶಂಕರಿ ದೇವಾಲಯದಲ್ಲಿ ಶ್ರೀಮತಿ ವೀಣಾ ಮುನವಳ್ಳಿ ಬಳಗದ ಸದಸ್ಯರೆಲ್ಲರನ್ನೂ ತಂಡಗಳನ್ನಾಗಿ ವಿಭಾಗಿಸಿ ಪ್ರತಿ ತಂಡದ ನಂತರ ಮತ್ತೊಂದು ತಂಡ ಬಂದು ಆ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಿ, ಬೆಳಿಗ್ಗೆ ೬ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ನಿರಂತರವಾಗಿ ಪಾರಾಯಣ ನಡೆಯುವಂತೆ ನೋಡಿಕೊಂಡರು.ಪ್ರತಿಯೊಂದು ಪೇಟೆಯ ಗುಡಿಯ ಮಹಿಳಾ ಬಳಗದವರು ತಮ್ಮದೇ ಆದಂತಹ ವಿಭಿನ್ನ ಬಣ್ಣದ ಸೀರೆಯನ್ನು ಸಮವಸ್ತ್ರವನ್ನಾಗಿ ಧರಿಸಿ ,ಪಾರಾಯಣ ಕಾರ್ಯದಲ್ಲಿ ತೊಡಗಿದ್ದು ವಿಶೇಷವಾಗಿತ್ತು . ಪ್ರತಿ ಕುಟುಂಬದ ಪುರುಷ ಭಾಂದವರು ಇದಕ್ಕೆ ಸಹಕಾರ ನೀಡಿ ತಾವೂ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಎಲ್ಲರ ಮೊಗದಲಿ ಮಂದಹಾಸ ಮೂಡಿಸಿದ್ದು ಇಂದಿಗೂ ಮನದ ಮೂಲೆಯಲ್ಲಿ ನೆನಪಿನ ಹಂದರವಾಗಿ ಹರಿದಾಡುತ್ತಿದೆ. ಪಾರಾಯಣ ಮಾಡಿದವರೆಲ್ಲರಿಗೂ ಅರಿಶಿನ, ಕುಂಕುಮ, ಹೂ ,ಹಣ್ಣು ,ಕಾಯಿ, ಬಳೆಗಳೊಂದಿಗೆ ಉಡಿತುಂಬುವ ಮಂಗಲ ಕಾರ್ಯದ ಜೊತೆಗೆ ಉಪಾಹಾರ ವ್ಯವಸ್ಥೆ ಮಾಡುವುದರ ಮೂಲಕ ಇಂತಹ ಪೂಜನೀಯ ಕಾರ್ಯಕ್ಕೆ ಅಡಿಪಾಯ ಹಾಕಿದರು .ಇದನ್ನು ಗಮನಿಸುತ್ತಿದ್ದ ಇಂದಿನ ಮಕ್ಕಳ ಮೊಗದಲ್ಲಿಯೂ ಒಂದು ರೀತಿಯ ವಿಭಿನ್ನ ಕಾರ್ಯಕ್ರಮ ಎಂಬ ಮಂದಹಾಸ ತೇಲಿಬರುತ್ತಿತ್ತು.ಇಂತಹ ಮಹತ್ವಪೂರ್ಣ ಕಾರ್ಯಕ್ಕೆ ಚಾಲನೆ ನೀಡಿದ ಸುನಿತಮ್ಮನವರಿಗೆ ೪ ಪೇಟೆಯ ಗುಡಿಯವರು ಅಭಿನಂದನೆ ಸಲ್ಲಿಸುವುದರ ಮೂಲಕ ಶುಭ ಕೋರಿದರು .ಅಲ್ಲದೆ ಲಲಿತಾಬಳಗದವರು ದೇವಾಂಗ ಕುಲಬಾಂಧವರೆಲ್ಲ ತಾಯಿ ಬನಶಂಕರಿ ದೇವಿಗೆ ಪ್ರತಿವರ್ಷ ಸಲ್ಲಿಸುವ ತವರಿನ ಉಡುಗೊರೆಯಾದ ಪೀತಾಂಬರವನ್ನು ಸಮರ್ಪಿಸುವ ಸಂದರ್ಭದಲ್ಲಿ ,ಹಂಪೆಯ ಹೇಮಕೂಟದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಜಿಗಳು ನಗರಕ್ಕೆ ಪೀತಾಂಬರವನ್ನು ಹೊತ್ತ ಅಡ್ಡಪಲ್ಲಕ್ಕಿಯೊಂದಿಗೆ ಪಾದ್ರೆ ಪಾದಯಾತ್ರೆಯ ಮೂಲಕ ಆಗಮಿಸಿದಾಗ, ಗಾಯತ್ರಿ ಮಹಿಳಾ ಸಂಘದ ಸರ್ವಸದಸ್ಯರೆಲ್ಲರೊಡಗೂಡಿ ಮಹಿಳೆಯರು ಲಲಿತಾಸಹಸ್ರನಾಮ ಪಠಣದ ಮೂಲಕ ಕುಂಭ ಹೊರುವ ಸೇವೆಯನ್ನು ಸಲ್ಲಿಸುವ ಮಹತ್ ಕಾರ್ಯ ಮಾಡಿದರು .
ಈ ಎಲ್ಲಾ ಕಾರ್ಯಗಳಲ್ಲಿ ಪ್ರತಿಕ್ಷಣವೂ ನೆರವಾದವರನೇಕರು. ಅವರಲ್ಲಿ ಗಾಯತ್ರಿ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಲಲಿತಮ್ಮ ಸಪ್ಪರದ ಹಾಗೂ ಸಂಘದ ಸರ್ವ ಸದಸ್ಯರು ,ಹಾಗೆಯೇ ಲಲಿತಾ ಬಳಗದ ವೀಣಾ ಕೊಪ್ಪರದ, ಮಾಲಾ ಕಾಳಗಿ , ವೀಣಾ ದೇವಾಂಗಮಠ ಗುರುಮಾತೆ , ಆಶಾ ವನಕಿ ,ಶ್ರೀದೇವಿ ಕರ್ಜಗಿ, ಹೇಮಲತಾ ನಾಗಲೋಟಿ' ಶಂಕ್ರಮ್ಮ ಕೊಪ್ಪರದ' ಗಂಗಮ್ಮ ಬಿಜ್ಜಲ್, ಭಾರತಿ ಚಿಂಚಮಿ, ಸುನೀತಾ ಕಿರಗಿ,ಸುಶೀಲಾ ಕೊಪ್ಪರದ, ಲಲಿತಾ ಕೊಪ್ಪರದ, ವಿಜಯಲಕ್ಷ್ಮಿ ಗೂಳಿ ಇತ್ಯಾದಿಯಾಗಿ ಅವರಿವರೆನ್ನದೆ ಎಲ್ಲರೂ ಕೈಜೋಡಿಸಿ ಒಗ್ಗಟ್ಟಿನಿಂದ ಈ ಪವಿತ್ರ ಧಾರ್ಮಿಕ ಕಾರ್ಯವನ್ನು ಮುನ್ನೆಡೆಸುತ್ತಿದ್ದಾರೆ .ಈ ಪವಿತ್ರ ಪಾರಾಯಣ ಕಾರ್ಯ ಕೇವಲ ಇಳಕಲ್ ನಗರದಲ್ಲಿ ಮಾತ್ರವಲ್ಲದೆ ಇಳಕಲ್ಲಿನ ಸುತ್ತಮುತ್ತಲಿನ ಊರುಗಳಲ್ಲಿಯೂ ಪಾರಾಯಣ ಮಾಡುವಂತಹ ಕಲೆಯನ್ನು ಕಲಿಸಿ ಧಾರ್ಮಿಕ ವಾತಾವರಣವನ್ನು ಸೃಷ್ಟಿ ಮಾಡುವ ಉದ್ದೇಶವನ್ನು ಈ ಮಹಿಳಾ ಸಂಘದವರು ಹೊಂದಿದ್ದಾರೆ. ಇವರ ಮನದಿಚ್ಛೆ ಆದಷ್ಟು ಬೇಗನೆ ಪೂರ್ಣಗೊಳ್ಳಲಿ ಈ ಕರೋನಾ ಸೋಂಕಿನಿಂದ ಸರ್ವರೂ ಮುಕ್ತರಾಗಿ ಪುನಃ ಮೊದಲಿನ ಸಂಭ್ರಮ, ಧಾರ್ಮಿಕ ಸಭೆ ಸಮಾರಂಭಗಳು ನಡೆಯುವಂತಾಗಲಿ ಎಂದು ಬಯಸುತ್ತೇನೆ.ಆಧ್ಯಾತ್ಮಿಕ ಕಾರ್ಯಕ್ರಮಗಳಿಂದಲೇ ಮನಶ್ಶಾಂತಿ ,ಏಕಾಗ್ರತೆ,ಒತ್ತಡದ ಬದುಕಿನಿಂದ ಸಹಜ ಸ್ಥಿತಿ ಮೂಡಿಸುವಂತಹ ವಾತಾವರಣ ನಿರ್ಮಾಣವಾಗುವುದೆಂಬ ಮನೋಭಾವನೆ ಎಲ್ಲರಲ್ಲಿ ಬೆಳೆಯುವಂತಾಗಬೇಕಾದರೆ ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲೇಬೇಕು
ಧನ್ಯವಾದಗಳೊಂದಿಗೆ ......
ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಇಲಕಲ್ಲ .
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ