ಮಂಗಳವಾರ, ಆಗಸ್ಟ್ 3, 2021

ಸರ್ಕಾರಿ ಶಾಲೆಗಳ ಅಳಿವು ಉಳಿವು (ಲೇಖನ) - ಭವ್ಯ ಟಿ.ಎಸ್.ಶಿಕ್ಷಕರು.

ಸರ್ಕಾರಿ ಶಾಲೆಗಳ ಅಳಿವು ಉಳಿವು

ಸರ್ಕಾರಿ ಶಾಲೆಗಳೆಂದರೆ ಎಲ್ಲಾ ವರ್ಗದ ವಿದ್ಯಾರ್ಥಿಗಳು
ಬಂದು ಕಲಿಯುವ ಭವಿಷ್ಯಕ್ಕೆ ಬೆಳಕಾಗುವ ಜ್ಞಾನದೇಗುಲಗಳು.ಅತ್ಯಾಕರ್ಷಕ ಆಧುನಿಕ ಸವಲತ್ತು ಗಳಿಂದ ಸುಸಜ್ಜಿತವಾದ ನಗರದ ಅಂತರರಾಷ್ಟ್ರೀಯ ಶಾಲೆಗಳ ಈ ಕಾಲದಲ್ಲೂ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿರುವ ಯುವಪ್ರತಿಭೆಗಳು ನಮ್ಮ ಸರ್ಕಾರಿ ಶಾಲೆಗಳ ಕಲಿಕಾ ದ್ಯೋತಕಗಳು.ಪದವಿ ಮತ್ತು ತರಬೇತಿ ಹಂತದಲ್ಲಿ ಉತ್ತಮ ಅಂಕಗಳಿಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾದ ಗುಣಮಟ್ಟದ ಬೋಧಕರಿರುವ ಶಾಲೆಗಳೆಂದರೆ ಸರ್ಕಾರಿ ಶಾಲೆಗಳು ಮಾತ್ರ. ಗಣನೀಯವಾಗಿ ಇಳಿಮುಖವಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ, ಖಾಸಗಿ ಶಾಲೆಗಳೆಡಗಿನ ಪೋಷಕರ ಆಕರ್ಷಣೆ ಸರ್ಕಾರಿ ಶಾಲೆಗಳ ಉಳಿವಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.

ಹಳ್ಳಿ ಮತ್ತು ನಗರ ಭಾಗಗಳೆರಡರಲ್ಲೂ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಸೆಳೆಯಲು ಪೋಷಕರ, ಸಮುದಾಯದ ಸಹಕಾರದೊಂದಿಗೆ ಸರ್ಕಾರ ಮತ್ತು ಶಿಕ್ಷಕರು ಕಾರ್ಯೋನ್ಮುಖರಾಗಿದ್ದಾರೆ.ಇಂದು ಪೋಷಕರ ಪ್ರತಿಷ್ಠೆಯ ಪ್ರಶ್ನೆಗೆ ಉತ್ತರ ರೂಪದಲ್ಲಿ ನಗರದ ಖಾಸಗಿಶಾಲೆಗಳಲ್ಲಿ ಶಿಕ್ಷಣವೊಂದು ಉದ್ಯಮವಾಗಿ ಮಾರ್ಪಾಡಾಗುತ್ತಿದೆ.ಮಧ್ಯಮ ವರ್ಗದ ಜನರು ತಮ್ಮ ಆದಾಯದ ಗಡಿಮೀರಿ ಊಹೆಗೂ ನಿಲುಕದಷ್ಟು ಹಣಸುರಿದು ಖಾಸಗಿಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಿದ್ದಾರೆ.ಅತ್ಯಾಧುನಿಕ ಸೌಲಭ್ಯಗಳ ನಿರ್ವಹಣೆಗಾಗಿ ಶಾಲೆಗಳು ಮನಸೋ ಇಚ್ಛೆ ಶುಲ್ಕವನ್ನು ವಸೂಲಿ ಮಾಡುತ್ತಿವೆ.ಆದರೆ ಸರ್ಕಾರಿ ಶಾಲೆಗಳಲ್ಲಿ ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಹದಿನೆಂಟು ವರ್ಷದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಯಲ್ಲಿದೆ.ವಿದ್ಯಾರ್ಥಿಗಳಲ್ಲಿ ಪೌಷ್ಟಿಕಾಂಶ ಕೊರತೆ ನೀಗಿಸಲು ಕ್ಷೀರ ಭಾಗ್ಯ ಮತ್ತು ಬಿಸಿಯೂಟ ಯೋಜನೆಗಳಿವೆ.ದೂರದಿಂದ ಶಾಲೆಗೆ ಬರುವ ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಸೈಕಲ್ ವಿತರಣೆ. ಉಚಿತ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ.ವಿದ್ಯಾರ್ಥಿವೇತನ ಸೌಲಭ್ಯಗಳಿವೆ.ರಾಷ್ಟ್ರೀಯ ಪ್ರತಿಭಾನ್ವೇಷಣ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳ ಬುದ್ಧಿ ಮಟ್ಟದ ಪರೀಕ್ಷೆಗೆ ಅವಕಾಶಗಳಿವೆ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕಾಪ್ರಗತಿಗಾಗಿ ಶಿಕ್ಷಕವರ್ಗ ಯೋಜನಾಧಾರಿತ ಬೋಧನಾ ವಿಧಾನ ರೂಪಿಸಿಕೊಂಡಿದೆ.ಮಕ್ಕಳ ಕಲಿಕಾ ನ್ಯೂನ್ಯತೆಗಳನ್ನು ಪತ್ತೆ ಹಚ್ಚಿ ಪ್ರತಿ ವಿದ್ಯಾರ್ಥಿಯ ಕೃತಿ ಸಂಪುಟ ಮಾಡಿ ಸಾಮರ್ಥ್ಯಕ್ಕನುಗುಣವಾಗಿ ಬೋಧನೆ ನಡೆಯುತ್ತದೆ. 
ಸರ್ಕಾರಿ ಶಾಲೆಯಲ್ಲಿ ಪಠ್ಯದ ಜೊತೆಯಲ್ಲಿ ಮೌಲ್ಯಗಳು,ಜೀವನ ಕೌಶಲ್ಯಗಳ ಅಭಿವೃದ್ಧಿ, ಕ್ರೀಡೆಯ
ಮೂಲಕ ದೈಹಿಕ ಮಾನಸಿಕ ಸದೃಢತೆಗೆ ಪ್ರಯತ್ನಿಸಲಾಗುತ್ತಿದೆ. ಕೆಲವು ಸರ್ಕಾರಿ ಶಾಲೆಗಳಂತು ಯಾವುದೇ ಖಾಸಗಿ ಶಾಲೆಗೆ ಕಡಿಮೆಯಿಲ್ಲದ ಕೊಠಡಿ,ಕ್ರೀಡಾಂಗಣ,ಪ್ರಯೋಗಾಲಯ,ವಾಚನಾಲಯ,ಉದ್ಯಾನವನಗಳೊಂದಿಗೆ ಸುಸಜ್ಜಿತವಾಗಿವೆ.ಇದಕ್ಕೆ ಕಾರಣ ಸಮುದಾಯ, ಹಳೆಯ ವಿದ್ಯಾರ್ಥಿಗಳ ಸಂಘಟನೆಗಳು, ಉದಾರ ಹೃದಯದ ದಾನಿಗಳ ಕೊಡುಗೆ.
ಒಟ್ಟಿನಲ್ಲಿ ಈ ದಿನ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಭದ್ರ ಭವ್ಯ ಭವಿಷ್ಯದ ನಿರ್ಮಾಣಕ್ಕೆ ಸಜ್ಜಾಗುತ್ತಿವೆ.ಪೋಷಕರ ಮನಸ್ಥಿತಿಯಲ್ಲಿ ಅಗಾಧ ಬದಲಾವಣೆ,ಸಮುದಾಯದಲ್ಲಿ ಸಹಕಾರ ಪ್ರಜ್ಞೆ ಮೂಡಿದಾಗ ಮಾತ್ರ ಸರ್ಕಾರಿ ಶಾಲೆಗಳ ಬಗೆಗಿನ ಕೀಳರಿಮೆಯ ಧೋರಣೆ ತೊಲಗಲು ಸಾಧ್ಯ. ಲಕ್ಷಾಂತರ
ಹಣದ ವೆಚ್ಚಕ್ಕಿಂತ ಜೀವನಪಾಠದೊಂದಿಗೆ ಪಠ್ಯ ಬೋಧನೆ ಸಾಗುವ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಕರೆತರುವುದರ ಮೂಲಕ ಶಾಲೆಗಳನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ. ಸಮಾಜದ ಇಚ್ಛಾಶಕ್ತಿ ಸರ್ಕಾರ ಮತ್ತು ಶಿಕ್ಷಕರೊಂದಿಗೆ ಕೈ ಜೋಡಿಸುವುದು ಇದಕ್ಕೆ ಅತ್ಯಗತ್ಯವಾಗಿದೆ.

- ಭವ್ಯ ಟಿ.ಎಸ್.
ಶಿಕ್ಷಕರು.ಕಾನುಗೋಡು
ಹೊಸನಗರ
ಶಿವಮೊಗ್ಗ
9448286007.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...