ಈ ಗಾಡ ಮೌನದಲೂ ಕೆಲ ಮಾತುಗಳಿವೆ” ಎನ್ನುವ ಹೊನ್ಕಲ್‍ರ ಆತ್ಮಸಖಿ.
“ಏಕತೆಯ ಬದುಕಿಗಾಗಿ ಶಾಂತಿ ಭಾವೈಕ್ಯದಿ ಕೂಡಿ ನಡೆದುಬಿಡೋಣ ಈಗ
ನಮ್ಮಲ್ಲಿರುವ ಭೇದ ಭಾವ ಮರೆತು ಜೊತೆಗೆ ಸಾಗಿಬಿಡೋಣ ಈಗ
ಸಾಕು ಈ ಒಡೆದಾಳುವ ಆಟಗಳು, ಮನಸು ಮುರಿಯಬೇಡಿ
ನಮ್ಮೀ ದೇಶಕೆ ಒಲವು ಚೆಲುವು ಗೆಲುವು ತುಂಬಿಬಿಡೋಣ ಈಗ
ನಮ್ಮ ದಾರಿ ಸಾಗಲೀಗ ಆ ವಿಶ್ವ ಮಾನವ ಬಂಧುತ್ವದೆಡೆಗೆ
ದೇಶಿಗರು ನಾವೆಲ್ಲ ಒಂದೆಂದು ಸಾರಿ ಸಾರಿ ಹೇಳಿಬಿಡೋಣ ಈಗ
ಹರಿವ ನದಿಯ ಆಳ ಅಗಲ ನಮ್ಮದಾಗಿಸಿ ಸಮುದ್ರವಾಗುವ
ಬೆಳಕು ಹರಿದು ಧರ್ಮದ ಮೌಡ್ಯವನು ಕಳೆದುಬಿಡೋಣ ಈಗ
ಅರಳುವ ಹೂ ಮೊಗ್ಗು ಹಸಿರಾಗಲಿ ದೇಶಿಗರ ಮನಸುಗಳು
ಹೊನ್ನು ಬೆಂದ ಹೃದಯಗಳ ಸಂತೈಸಿ ಭಾತೃತ್ವದಿ ಬಾಳಿಬಿಡೋಣ ಈಗ
ಈ ಗಜಲ್ ಸಿದ್ದರಾಮ ಹೊನ್ಕಲ್ ಅವರ ‘ಆತ್ಮ ಸಖಿಯ ಧ್ಯಾನದಲಿ’ ಎನ್ನುವ ಗಜಲ್ ಸಂಕಲದ್ದಾಗಿದ್ದು ದೇಶದ ಸೌಹಾರ್ದತೆಯನ್ನು ಎತ್ತಿ ಹಿಡಿಯುವ ಈ ಗಜಲ್ ಅವರ ಮಾನವ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಹಾಗೆಯೆ ಸಮಾಜ ಶಾಸ್ತ್ರ ಉಪನ್ಯಾಸಕರಾಗಿ ಅವರು ಮಾತೃಭೂಮಿಯ ಕುರಿತ ಕಾಳಜಿ ಹೊಂದಿರುವುದು ಕೂಡ ವೇದ್ಯವಾಗುತ್ತದೆ.
ಮೂಲತಃ ಯಾದಗಿರಿ ಜಿಲ್ಲೆಯವರಾದ ಹೊನ್ಕಲ್ ಅವರು ಸಾಹಿತ್ಯ ಲೋಕದ ಮೇರು ವ್ಯಕ್ತಿತ್ವವಾಗಿದ್ದಾರೆ. ಸರಳ ಸಜ್ಜನಿಕೆಯ ಸ್ನೇಹ ಜೀವಿಯಾದ ಇವರು ಸದಾ ಸಕಾರಾತ್ಮಕ ದೋರಣೆಯುಳ್ಳ ಉತ್ಸಾಹಿಗಳು. ಅನಿಶ್ಚಿತವಾದ ಈ ಒಂದೇ ಒಂದು ಬದುಕನ್ನು ತುಂಬಾ ಹಾಸ್ಯಮಯವಾಗಿ ಆಸ್ವಾದಿಸುವ ಜಾಣ ಕಲೆಗಾರೆಕೆತನ ಇವರ ವಿಶಿಷ್ಟತೆಯಾಗಿದೆ. ಎಲ್ಲರಿಗೂ ಅಚ್ಚು ಮೆಚ್ಚಿನವರಾದ ಇವರು ಮಾತೃ ಹೃದಯದ ಕಾಳಜಿಉಳ್ಳವರು. ಯಾರನ್ನೂ ಖಿನ್ನರಾಗಲು ಬಿಡದೆ ಎಲ್ಲರನ್ನೂ ಮಾತನಾಡಿಸುತ್ತ ಚೈತನ್ಯ ತುಂಬುವ ಚಿಲುಮೆಯಾಗಿದ್ದಾರೆ.
ಈಗಾಗಲೆ ಆಕಾಶಕ್ಕೆ ಹಲವು ಬಣ್ಣಗಳು, ಹೊನ್ನ ಮಹಲ್, ನಿನ್ನ ಪ್ರೇಮವಿಲ್ಲದೆ ಸಾಖಿ ಎನ್ನುವ ಮೂರು ಗಜಲ್ ಸಂಕಲನಗಳು ಪ್ರಕಟವಾಗಿದ್ದು ಇದು ನಾಲ್ಕನೆಯ ಸಂಕಲನವಾಗಿದೆ. ಗಜಲ್ ಸಂಕಲನವಷ್ಟೆ ಅಲ್ಲದೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ ಇವರು ಹಲವಾರು ಕೃತಿಗಳನ್ನು ಹೊರತಂದಿದ್ದಾರೆ. ಹಾಗೆಯೆ ಹಲವು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
ಪ್ರತಿಯೊಬ್ಬರ ಬಗ್ಗೆಯೂ ಒಳ್ಳೆಯ ಭಾವನೆಗಳಿರುವ ಇವರು ತುಂಬಾ ನಿಷ್ಕಲ್ಮóಷ ಮನಸ್ಸುಳ್ಳವರಾಗಿದ್ದಾರೆ. ಇವರ ಒಂದು ಗಜಲ್ ನಲ್ಲಿ ಬರುವ ಒಂದು ಸಾಲು ಇವರ ತ್ಯಾಗ ಗುಣವನ್ನು ಬಿತ್ತರಿಸುತ್ತದೆ. “ನಿನ್ನ ನೋವುಗಳೆಲ್ಲ ನನಗಿರಲಿ ಸಖಿ ಜಗದ ಸುಖಗಳೆಲ್ಲ ನಿನ್ನದಾಗಿರಲಿ ಸಖಿ” ಹೌದು ಹೆಂಗರಳಿನ ಇವರು “ ಜಗದ ಮಹಿಳೆಯರ ಆ ನೋವು ಕೇಳುತ್ತಿವೆ, ಯಾರಿಗೆ ನೀಡಲಿ ದೂರು ಸಾಕಿ, ಅಕ್ಕನ ಬಿಕ್ಕುಗಳೆಲ್ಲ ಸಿಕ್ಕಿಲ್ಲಿ ಹರಡುತ್ತಿವೆ, ಯಾರಿಗೆ ನೀಡಲಿ ದೂರು ಸಾಕಿ” ಎಂದು ಸಮಾಜಿಕ ಕಳಕಳಿಗೆ ನಿಲ್ಲುತ್ತಾರೆ ಹಾಗೆ ಸ್ತ್ರೀಪರ ದೋರಣೆಯ ದಿಟ್ಟ ಧ್ವನಿಯೂ ಆಗುತ್ತಾರೆ “ಹೆಣ್ಣು ಅಬಲೆ ತಂದೆ ಪ್ರತಿ ಮಕ್ಕಳ ಆಶ್ರಯದಿ ಇರಬೇಕೆಂದನು ಮನು ಕಾಯುವ ಕೈಗಳೇ ಭ್ರೂಣಗಳ ಹಿಸುಕುತ್ತಿವೆ ಯಾರಿಗೆ ನೀಡಲಿ ದೂರು ಸಾಕಿ”
ಇವರ ಮತ್ತೊಂದು ಗಜಲ್ “ಗಾಡಾಂದಕಾರದಲಿ ಬೆಳಕಿನ ಬರವಸೆಯಿರಲಿ ಗೆಳೆಯ, ಮುಳುಗುವ ಹಡಗಿನಲಿ ಬದುಕುವ ಛಲವಿರಲಿ ಗೆಳೆಯ” ಎನ್ನುವಲ್ಲಿ ಬಾಳಿಗೆ ಭರವಸೆಯ ಹಣತೆ ಹಚ್ಚುವಲ್ಲಿ ಸಫಲರಾಗಿದ್ದಾರೆ. ನಿಜ ನನಗೂ ತುಂಬಾ ಬೇಸರ ಕಾಡುವಾಗ ನಾನು ಕೈಲಿ ಪೋನ್ ಹಿಡಿದು ಹೊನ್ಕಲ್ ಸರ್ ಎಂದುಬಿಡುತ್ತೇನೆ ಆ ಕಡೆಯ ಧ್ವನಿಯಲ್ಲಿನ ಕಾಳಜಿ ಮಮಕಾರ ಖಂಡಿತಾ ನನಗಿಷ್ಟು ಬೆಚ್ಚಗಿನ ಭಾವದ ಅನುಭವ ನೀಡಿಬಿಡುತ್ತಾರೆ. ನವಿರಾದ ಹಾಸ್ಯದ ಹೊನಲಿನಲ್ಲಿ ನಗಿಸಿ ಇದ್ದ ಬಿದ್ದ ಎಲ್ಲ ಒತ್ತಡ, ಚಿಂತೆ, ದುಗುಡ ಕ್ಷಣಾರ್ದದಲ್ಲಿ ಮಾಯವಾಗುತ್ತದೆ. ತುಂಬಾ ಸಾರಿ ನನಗೆ ಹೊನ್ಕಲ್ ಅವರು ಚಿಂತೆ ಮರೆಸಿ ಒತ್ತಡವನ್ನು ದೂರಮಾಡುವ ಜಾದೂಗಾರನಂತೆ ಭಾಸವಾಗುತ್ತಾರೆ. ಅಯ್ಯೋ! ಇಷ್ಟಕ್ಕೆನಾ ನಾನು ಅಷ್ಟೊಂದು ಬೇಸರ ಆಗಿದ್ದು ಅಂತ ನನ್ನ ಬೆಪ್ಪುತನಕ್ಕೆ ನಾನೇ ನಾಚಿಕೆ ಪಟ್ಟುಕೊಳ್ಳುತ್ತೇನೆ. ಹೊನ್ಕಲ್ ಸರ್ ಮಾತಿನಲ್ಲಿ ನನಗೆ ಅವರು ಹೇಳದೆಯೆ ವೇದ್ಯವಾಗುವ ಸಂದೇಶ ಒಂದಿದೆ “ನಾಲ್ಕು ದಿನ ಬದುಕುತ್ತೇವೆ ಪ್ರೀತಿ, ಭರವಸೆ, ಆನಂದಗಳನ್ನು ನೀಡುತ್ತಾ ಬದುಕೋಣ”
ಹೌದು ಇವರ ಗಜಲ್ ಸಂಕಲನದಲ್ಲಿರುವ ಈ ಗಜಲ್ ಹೊನ್ಕಲ್ ಅವರನ್ನು ಕುರಿತ ನಮ್ಮ ಭಾವನೆಗಳು ಅನ್ನಿಸಿಬಿಡುತ್ತವೆ ಈ ಗಜಲ್ ಅವರ ಅಂತಃಕರಣದ ಪ್ರತಿಯಂತಿದೆ ಎಂದರೆ ತಪ್ಪಾಗಲಾರದು
“ಎಲ್ಲರನೂ ತಮ್ಮವರೆಂದು ನಂಬಿ ನಗುತಾ ಹತ್ತಿರವಾದ
ಸುತ್ತಲಿನವರು ಬೇರೆ ಅನಿಸದೆ ಪ್ರೀತಿಸುತಾ ಹತ್ತಿರವಾದ
ಜಗದ ಜನರಲಿ ಭೇಧ ಭಾವ ಇದೆಯೆಂದು ನಂಬಿರಲಿಲ್ಲ
ಮೇಲು ಕೀಳೆನ್ನದೆ ನೊಂದವರಿಗೆ ಸಾಂತ್ವಾನ ಹೇಳುತಾ ಹತ್ತಿರವಾದ
ಅವರ ಕಷ್ಟ ಸುಖ ತನ್ನದೆನಿಸಿ ಭಾವನೆಗೆ ಬೆಲೆ ನೀಡಿದ
ಕಷ್ಟವೆಂದವರ ಅಳಲು ಕೇಳಿ ಸಹಕರಿಸುತಾ ಹತ್ತಿರವಾದ
ಸ್ನೇಹದಲೂ ಮೋಸ ಕಪಟ ವಂಚನೆ ಇದೆ ಎಂದು ಕೇಳಿರಲಿಲ್ಲ
ಮನೆಮನ ಮರೆತು ಹಗಲಿರುಳು ನೋವಿಗೆ ಸ್ಪಂದಿಸುತಾ ಹತ್ತಿರವಾದ
ಸೇವೆ ಸಹಕಾರದ ಹೆಸರಲೂ ಲೂಟಿ ಧಗಾ ಇದೆ ಎಂದು ತಿಳಿದಿರಲಿಲ್ಲ
ಉಣ್ಣಿಸುವ ಸುಖ ಉಣ್ಣುವಲಿ ಇಲ್ಲ ಅರಿಯುತ ಹತ್ತಿರವಾದ
ಆತ್ಮತೃಪ್ತಿಗೆ ಎಲ್ಲದರಲ್ಲಿ ಸಮಾಧಾನ ಅರಸುತಾ ಸೋತ ಹೊನ್ನಸಿರಿ
ಆ ಮನಶಾಂತಿ ನಿರ್ವಾಜ್ಯ ಪ್ರೀತಿ ಸ್ನೇಹದಲ್ಲಿದೆ ಎಂದರಿತು ಹುಡುಕುತಾ ಹತ್ತಿರವಾದ
ಸಾಕಷ್ಟು ಇವರ ಗಜಲ್ ನಲ್ಲಿ ಪ್ರೇಮ ವೇಫಲ್ಯದ, ತೀವ್ರ ವಿರಹ ವೇದನೆಯ ಇಲ್ಲವೆ ಪ್ರೇಮ ನಿವೇದನೆಯ ಭಾವ ಎದ್ದು ಕಾಣುತ್ತದೆ ನನಗೆ ಇಷ್ಟವಾದ ಇವರ ತರಹೀ ಗಜಲ್ ಎಂದರೆ
“ಪ್ರೀತಿ ವಂಚಿತ ಕಡು ವಿರಹಿಗಳಲ್ಲಿ ಹೀಗಾಗಬಾರದಿತ್ತು
ಅವಳ ಗುಂಗಿನಲಿ ರಾತ್ರಿ ಸಾಕಿಯನು ಕಾಡಬಾರದಿತ್ತು
ಮನಸಿನಲ್ಲಿ ಕಾಡುವವಳನ್ನು ಇವಳಲ್ಲಿ ಶೋಧಿಸಬಾರದಿತ್ತು
ಇಡೀ ಲೋಕ ಈ ರೀತಿಯಲ್ಲಿ ತಣಿದು ಹೋಗಬಾರದಿತ್ತು”
ಹೌದು ಈ ಸಾಲುಗಳು ನನ್ನನ್ನು ತುಂಬಾ ಕಾಡಿವೆ ಹೌದು ಮುಗಿಸುವ ಮುನ್ನ ಇವರ ಇನ್ನೊಂದು ಸಾಲು ಹೇಳಿಬಿಡುತ್ತೇನೆ “ಸುಪ್ತ ಕಾಡುವ ಕಾಮನೆಗಳು ಗೆಲ್ಲಲು ದೇವತೆಗಳೇ ಸೋತಿಹರು ನಿಲುಕದ ನಕ್ಷತ್ರವನು ಮೋಹದಿ ಒಳ ಬಚ್ಚಿಟ್ಟುಕೊಳ್ಳಬಾರದಿತ್ತು ಸಖಿ”
- ಶ್ರೀಮತಿ ಗಿರಿಜಾ ಮಾಲಿ ಪಾಟೀಲ, ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ - ಕರ್ನಾಟಕ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ