"ಹೇಮೆಯ ಮಡಿಲಲ್ಲಿ" ಗೊರೂರು ಅನಂತರಾಜು
' ಗೊರೂರು' ಎಂಬ ಹೆಸರು ಕಿವಿಗೆ ಬಿದ್ದ ತಕ್ಷಣ ನಮ್ಮ ಸ್ಮೃತಿಗೆ ಬರುವುದು 'ಹೇಮಾವತಿ ಜಲಾಶಯ' ಮತ್ತು ಖ್ಯಾತ ಸಾಹಿತಿಗಳಾದ 'ರಾಮಸ್ವಾಮಿ ಅಯ್ಯಂಗಾರ್'. ಅನ್ನದಾತರಿಗೆ ಜೀವದಾತೆಯಾಗಿರುವ ಹೇಮಾವತಿ ನದಿಯ ಅಣೆಕಟ್ಟು ನಾಡಿನ ಸುಪ್ರಸಿದ್ಧ ಪ್ರವಾಸಿ ಸ್ಥಳವಾಗಿ ಮಹತ್ವವನ್ನು ಗಳಿಸಿಕೊಂಡಿದ್ದರೆ, ತಮ್ಮ ಮೌಲಿಕವಾದ ಬರಹಗಳಿಂದ ಸಾಹಿತ್ಯ ಪ್ರಿಯರ ಮನಸೂರೆಗೊಂಡು ನಾಡಿನಾದ್ಯಂತ ಮನೆ ಮಾತಾಗಿರುವ ರಾಮಸ್ವಾಮಿ ಅಯ್ಯಂಗಾರ್ 'ಗೊರೂರು' ಹೆಸರನ್ನು ಕನ್ನಡ ಸಾಹಿತ್ಯ ಚರಿತ್ರೆಯ ಪುಟಗಳಲ್ಲಿ ಚಿರಂತನವಾಗಿಸಿದ್ದಾರೆ. ಹೇಮೆಯ ಪ್ರೇರಣೆಯೋ ಅಯ್ಯಂಗಾರ್ ಅವರ ಸ್ಫೂರ್ತಿಯೋ ಮುಂದಿನ ತಲೆಮಾರಿನ ಬರಹಗಾರರು ಅದೇ ಅನುಕರಣೀಯ ಹಾದಿಯಲ್ಲಿ ಸಾಗುತ್ತಾ 'ಗೊರೂರು' ಹೆಸರನ್ನು ಶಾಶ್ವತವಾಗಿ ಉಳಿಸುವ ಸಾರ್ಥಕತೆಯ ಸನ್ಮಾರ್ಗದಲ್ಲಿ ಮುನ್ನಡೆದಿದ್ದಾರೆ. ಉಲ್ಲೇಖಿಸಬಹುದಾದ ಹೆಸರುಗಳೆಂದರೆ ಗೊರೂರು ಸೋಮಶೇಖರ್, ಗೊರೂರು ಶಿವೇಶ್ , ಗೊರೂರು ನಿಷ್ಕಲ.... ಮುಂತಾದವರ ಪಟ್ಟಿಯಲ್ಲಿ ಸೇರುವ ಮತ್ತೊಂದು ಪ್ರಮುಖ ಹೆಸರು "ಗೊರೂರು ಅನಂತರಾಜು".
ಸುಮಾರು ಮೂವತ್ತೈದು ವರ್ಷಗಳ ಸಮೃದ್ಧವಾದ ಸಾಹಿತ್ಯ ಕೃಷಿಯಲ್ಲಿ ವೈವಿಧ್ಯಮಯ ಪ್ರಕಾರದ ಸಾಹಿತ್ಯದ ಬೆಳೆಗಳನ್ನು ಯಶಸ್ವಿಯಾಗಿ ಬೆಳೆದು ಸಹೃದಯರಿಗೆ ಪ್ರೀತಿಯಿಂದ ಉಣಬಡಿಸುವ ಮೂಲಕ ಸಾಹಿತ್ಯ ಚರಿತ್ರೆಯಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಹಾಸನ ಭಾಗದ ಸಾಹಿತಿಗಳ ಪಟ್ಟಿಯಲ್ಲಿ ಮುಂಚೂಣಿಯ ಸ್ಥಾನ ಪಡೆದವರಲ್ಲೊಬ್ಬರಾಗಿದ್ದಾರೆ. ೧೯೬೧ ರ ಮೇ ೧೩ ರಂದು ಬಸವರಾಜು ಮತ್ತು ಪುಟ್ಟ ಲಕ್ಷ್ಮಮ್ಮ ದಂಪತಿಗಳ ಪುಣ್ಯ ಗರ್ಭದಲ್ಲಿ ಜನಿಸಿದ ಅನಂತರಾಜು ಅವರು ಹುಟ್ಟೂರಿನ ಹಸಿರು ಸಿರಿ ಸಮೃದ್ಧವಾದ ಪರಿಸರದಲ್ಲಿ ಆಡಿ ಬೆಳೆದವರು. ಸೂಕ್ಷ್ಮ ಗ್ರಾಹಿ ಪ್ರವೃತ್ತಿಯವರಾದ ಇವರು ತಮ್ಮ ಊರಿನ ಜನಜೀವನದ ಅವಲೋಕನದ ಜೊತೆಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಆಚರಣೆಗಳು, ಹಳ್ಳಿಗರ ಹವ್ಯಾಸಿ ನಾಟಕಗಳನ್ನು ನೋಡುತ್ತಾ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಾಹಿತ್ಯಾಸಕ್ತಿಯನ್ನು ಮೈಗೂಡಿಸಿಕೊಂಡವರು. ಉತ್ತಮ ಪುಸ್ತಕಗಳನ್ನು ಓದುವ ಅಧ್ಯಯನ ಮಾಡುವ ಮತ್ತು ಆಯಾ ಪುಸ್ತಕಗಳ ಹೂರಣವನ್ನು ತಮ್ಮದೇ ದೃಷ್ಟಿಕೋನದಿಂದ ಪರಾಮರ್ಶಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡ ಪರಿಣಾಮವಾಗಿ ಅನೇಕ ಲೇಖನಗಳನ್ನು ಬರೆಯುವಲ್ಲಿ ಯಶಸ್ಸು ಕಂಡರು. ಜೊತೆಗೆ ನಾಡಿನ ಅನೇಕ ಪ್ರಮುಖ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನೂರಾರು ವೈವಿಧ್ಯಮಯ ಬರಹಗಳನ್ನು ಸಹೃದಯರಿಗೆ ನೀಡಿ ಮನೆ ಮಾತಾದರು. ವಿಶೇಷವಾಗಿ ನಾಟಕ ರಂಗದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಅನಂತರಾಜು ಅವರು ಹಾಸನದ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳುವ ಯಾವುದೇ ಪ್ರಕಾರದ ನಾಟಕವಿದ್ದರೂ ತಪ್ಪದೆ ಹಾಜರಾಗಿ, ತಮ್ಮ ಸೂಕ್ಷ್ಮ ಅವಲೋಕನದಿಂದ ವೀಕ್ಷಿಸುವ ಜೊತೆಗೆ ಪ್ರದರ್ಶನಗೊಂಡ ನಾಟಕ ಮತ್ತು ಪಾತ್ರಧಾರಿಗಳನ್ನು ಕುರಿತು ಲೇಖನವಾಗಿಸಿ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಪ್ರೋತ್ಸಾಹ ತುಂಬುತ್ತಾರೆ. ಅಂತಹ ಉದಾತ್ತ ಮನಸ್ಸಿನ, ಕಾವ್ಯ ಪ್ರಿಯರಾದ ಇವರು
ಇದುವರೆಗೂ ಮೂವತ್ತೈದಕ್ಕಿಂತ ಹೆಚ್ಚು ಕೃತಿಗಳನ್ನು ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಗೊರೂರು ಅನಂತರಾಜು ಅವರ ಮೌಲಿಕವಾದ ಕೃತಿಗಳಲ್ಲಿ ಒಂದಾದ "ಹೇಮೆಯ ಮಡಿಲಲ್ಲಿ" ಪುಸ್ತಕವನ್ನು ಕುರಿತಂತೆ ಕಿರು ಲೇಖನವಿದು.
"ಹೇಮೆಯ ಮಡಿಲಲ್ಲಿ" ಗೊರೂರು ಅನಂತರಾಜು ಅವರು ಬರೆದ, ಆಗಾಗ ಪತ್ರಿಕೆಗಳಲ್ಲಿ ಪ್ರಕಟಗೊಂಡ ಒಟ್ಟು ೨೦ ಲೇಖನಗಳು ಅಡಕವಾಗಿವೆ. ಪ್ರತಿ ಲೇಖನವು ವೈವಿಧ್ಯಮಯ ವಿಷಯ ವಸ್ತುವನ್ನು ಹೊಂದಿದ್ದು, ವಿಶೇಷವಾಗಿ ಮಾತೃ ಜಿಲ್ಲೆಯ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ನಾಟಕ, ಜಾನಪದ, ಇತಿಹಾಸ ವೈಶಿಷ್ಟ್ಯತೆ ಮತ್ತು ವ್ಯಕ್ತಿ ಸಾಧನೆ ಮುಂತಾದ ಅನೇಕ ವಸ್ತುಗಳನ್ನು ಹೊಂದಿವೆ. ತಮ್ಮ ಮೊದಲ ಲೇಖನ "ಹೇಮೆಯ ಮಡಿಲಲ್ಲಿ' ಶೀರ್ಷಿಕೆಯನ್ನೇ ಕೃತಿಗೂ ಹೆಸರಿಸುವ ಮೂಲಕ ತಮ್ಮ ಜನ್ಮಭೂಮಿಯನ್ನು ಅತ್ಯಂತ ಪ್ರೀತಿಯಿಂದ ಸ್ಮರಿಸಿಕೊಂಡಿದ್ದಾರೆ. ಇದೇ ಲೇಖನದಲ್ಲಿ ಹೇಮಾವತಿ ನದಿಯ ಉಗಮ, ಅಣೆಕಟ್ಟಿನ ನಿರ್ಮಾಣ, ಅನುಕೂಲತೆ ಪಡೆದಿರುವ ಜಲಾನಯನ ಪ್ರದೇಶದ ವ್ಯಾಪ್ತಿ ಮುಂತಾದ ಅನೇಕ ಮಾಹಿತಿಗಳನ್ನು ಕರಾರುವಕ್ಕಾದ ಅಂಕಿಅಂಶಗಳೊಂದಿಗೆ ವಿವರಿಸಿರುವುದು ಅಧ್ಯಯನ ಪ್ರಿಯರಿಗೆ ಸುಲಭವಾಗಿ ದೊರಕುವ ಸರಕಿನಂತಾಗಿದೆ. ಜೊತೆಗೆ ಗೊರೂರಿನ ಐತಿಹಾಸಿಕ ಕುರುಹುಗಳು, ದೇವಾಲಯಗಳು, ಕೋಟೆಗಳು ಹಾಗೂ ರಾಮಸ್ವಾಮಿ ಅಯ್ಯಂಗಾರ್ ಅವರನ್ನು ಒಳಗೊಂಡಂತೆ ಇಲ್ಲಿನ ಸಾಹಿತ್ಯ ಸಾಧಕರನ್ನು ಸಂಕ್ಷಿಪ್ತವಾಗಿ ಉಲ್ಲೇಖಿಸಿದ್ದಾರೆ.
"ಹಾಸನ ಜಿಲ್ಲೆಯ ಜಾನಪದ ಅಧ್ಯಯನ:ಗುರುಮುಖ" ಲೇಖನದಲ್ಲಿ ಕನ್ನಡ ಪ್ರಾಧ್ಯಾಪಕರೂ, ಖ್ಯಾತ ಜಾನಪದ ವಿದ್ವಾಂಸರೂ ಆದ ಡಾ.ಹಂಪನಹಳ್ಳಿ ತಿಮ್ಮೇಗೌಡರ ಪಿಹೆಚ್ಡಿ ನಿಬಂಧದ ಪ್ರಮುಖ ಅಂಶಗಳನ್ನು ಒಳಗೊಂಡಂತೆ ಹಾಸನ ಭಾಗದ ಜಾನಪದ ಅಂಶಗಳು, ಕಲಾವಿದರು, ಕಲಾಪ್ರಕಾರಗಳೆಲ್ಲವನ್ನೂ ಸಾಂದರ್ಭಿಕವಾದ ಜನಪದ ಗೀತೆಗಳು, ಖ್ಯಾತ ಲೇಖಕರು ಬರೆದ ಜಾನಪದ ಕೃತಿಗಳ ಉಲ್ಲೇಖದೊಂದಿಗೆ ಸಮಗ್ರವಾಗಿ ವಿವರಿಸುವ ಪ್ರಯತ್ನ ಮಾಡಿದ್ದಾರೆ.
"ಪಂಡಿತ ಸ್ವಾಮಿಗೌಡರ ಸಾಹಿತ್ಯ ಕೊಡುಗೆ" ಲೇಖನದಲ್ಲಿ ಆಲೂರು ತಾಲ್ಲೂಕಿನ ಪೊನ್ನಾಥಪುರ ದಾಸೇಗೌಡನ ಕೊಪ್ಪಲು ಗ್ರಾಮ ಸಂಜಾತ ಸಾಹಿತಿ ಸ್ವಾಮಿಗೌಡರ ಅಮೋಘ ಸಾಹಿತ್ಯಕ ಕೊಡುಗೆಯನ್ನು ಅನೇಕ ಉದಾಹರಣೆಗಳೊಂದಿಗೆ ವಿವರಿಸಿದ್ದಾರೆ. ೧೯೭೨ ರಲ್ಲಿ ಅವರು ಸಂಪಾದಿಸಿದ ಇವರ 'ಸೋಬಾನೆ ಪದಗಳು' ಹಾಸನ ಜಿಲ್ಲೆಯ ಮೊದಲ ಸೋಬಾನೆ ಪದಗಳ ಸಂಗ್ರಹ ಕೃತಿ ಇದಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಸ್ವಾಮಿಗೌಡರು ಸಂಪಾದಿಸಿದ ಜಾನಪದ ಸಂಪ್ರದಾಯದ ಹಾಡುಗಳ ಬಗ್ಗೆಯೂ ವಿವರಿಸಿದ್ದಾರೆ.
ನಮ್ಮ ನಾಡನ್ನು ಆಳಿದ ಅನೇಕ ರಾಜವಂಶಗಳಲ್ಲಿ ಹಾಸನ ಜಿಲ್ಲೆಯ ಕೀರ್ತಿಯನ್ನು ಅಜರಾಮರಗೊಳಿಸಿದ ಹೊಯ್ಸಳ ಸಾಮ್ರಾಜ್ಯದ ಆಳ್ವಿಕೆಯ ಸಂದರ್ಭದಲ್ಲಿ ಸಾಹಿತ್ಯಕ್ಕೆ ನೀಡಿದ ಹಲವಾರು ಕೊಡುಗೆಗಳನ್ನು 'ಹೊಯ್ಸಳ ಕಾಲದ ಸಾಹಿತ್ಯ' ಲೇಖನದಲ್ಲಿ ವಿವರವಾಗಿ ತಿಳಿಸಿಕೊಟ್ಟು ಇತಿಹಾಸ ಪ್ರಿಯರಿಗೆ ಒಳ್ಳೆಯ ಹಿಮ್ಮಾಹಿತಿಯನ್ನು ಒದಗಿಸಿರುವ ಅನಂತರಾಜು ಅವರು ಹೊಯ್ಸಳ ದೊರೆಗಳ ಸಾಹಿತ್ಯದ ಬಗೆಗಿನ ಕಾಳಜಿಯನ್ನು ಓದುಗರಿಗೆ ತಿಳಿಸಿಕೊಟ್ಟಿದ್ದಾರೆ. ಮುಂದೆ ರಾಮನಾಥಪುರ ಬೇಲೂರು ಹಳೇಬೀಡು ಶ್ರವಣಬೆಳಗೊಳ ದಂತದಂತಹ ಶಿಲ್ಪಕಲೆಗಳಿಂದ ಕರ್ನಾಟಕದ ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿರುವ ಬಡವರ ಊಟಿ, ಸಿಂಹಾಸನಪುರಿ ಎಂಬ ಅನ್ವರ್ಥಕ ನಾಮ ವಿಶೇಷಣವನ್ನು ಪಡೆದ ಹಸನಾದ 'ಹಾಸನ' ಜಿಲ್ಲೆಯ ವಿವಿಧ ತಾಲ್ಲೂಕುಗಳ ಶಿಲ್ಪ ಕಲಾವೈಭವದ ಸವಿಸ್ಮರಣೆಗಳನ್ನು "ಶಿಲ್ಪಕಲೆಯ ನಾಡಿನಲ್ಲಿ" ಎಂಬ ಲೇಖನದಲ್ಲಿ ನಿರೂಪಿಸಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಹರಿಯುವ ಕಾವೇರಿ, ಹೇಮಾವತಿ, ಯಗಚಿ, ವಾಟೆಹೊಳೆ ನದಿಗಳ ಹರಿವಿನ ವಿಸ್ತಾರ, ಉಪಯೋಗ ಪಡೆಯುತ್ತಿರುವ ಕೃಷಿ ಜಮೀನುಗಳ ವಿಸ್ತೀರ್ಣ, ಕೃಷಿಯೇತರ ಬಳಕೆಯ ಮಾಹಿತಿಗಳೆಲ್ಲವನ್ನು ನಿಖರವಾಗಿ ದಾಖಲಿಸಿದ್ದಾರೆ. ಅಲ್ಲದೆ ಸಂಗೀತ ಪರಂಪರೆಯ ಹಿನ್ನೆಲೆಯಲ್ಲಿ 'ಕರ್ನಾಟಕದ ತಂಜಾವೂರು' ಎಂಬ ಖ್ಯಾತಿಗೆ ಪಾತ್ರವಾಗಿರುವ ಅರಕಲಗೂಡು ತಾಲ್ಲೂಕಿನ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಹುಟ್ಟಿ ಶಾಸ್ತ್ರೀಯ ಸಂಗೀತದ ಸಾಧನೆಯಲ್ಲಿ ಮಹತ್ಸಾಧನೆ ಗೈದಿರುವ ಶತಾವಧಾನಿ ವೆಂಕಟರಮಣಯ್ಯ, ಆರ್. ಕೆ.ಶ್ರೀಕಂಠನ್, ಆರ್. ಕೆ.ತ್ಯಾಗರಾಜನ್, ಆರ್. ಕೆ.ತಾರಾನಾಥನ್, ಆರ್. ಡಾ. ಎನ್. ಶ್ರೀಲತಾ.... ಮುಂತಾದವರ ಸಂಗೀತ ಸೇವೆಯನ್ನು ಸ್ಮರಿಸಿಕೊಂಡಿದ್ದಾರೆ. ಇದೇ ಗ್ರಾಮದಲ್ಲಿ ಸಂಗೀತ ಪರಂಪರೆಯನ್ನು ಈಗಲೂ ಮುಂದುವರೆಸಿಕೊಂಡು ಹೋಗುತ್ತಿರುವ, ವಿಶ್ವ ವಿಖ್ಯಾತ ಕಲಾಕೃತಿ 'ಸಪ್ತಸ್ವರ ದೇವತಾ ಧ್ಯಾನ ಮಂದಿರ' ಮತ್ತು ಇತ್ತೀಚಿನ 'ದ್ವಾದಶ ಸ್ವರಸ್ತಂಭ ಮಂಟಪ'ದ ನಿರ್ಮಾಣದ ಜೊತೆಗೆ ಪ್ರತಿ ವರ್ಷವೂ 'ಸಂಗೀತೋತ್ಸವ'ವನ್ನು ಯಶಸ್ವಿಯಾಗಿ ನಡೆಸುತ್ತಿರುವ ಗಾನಕಲಾಭೂಷಣ ಡಾ.ಆರ್. ಕೆ.ಪದ್ಮನಾಭ ಅವರನ್ನು ಸ್ಮರಿಸಿಕೊಳ್ಳುವುದು ಅತ್ಯಂತ ಸಮಂಜಸವಾಗುತ್ತದೆ.
ಕರ್ನಾಟಕ ರತ್ನ ಡಾ. ದೇಜಗೌ ಶತಮಾನೋತ್ಸವ ಸಂದರ್ಭದ ಅಭಿನಂದನಾ ಗ್ರಂಥದ ಕೃತಿಯೊಂದರ ಪರಿಚಯ ಲೇಖನವಾಗಿ "ದೇಜಗೌ ನೆನಪಿನಾಳದಲಿ ನಿಂದವರು" ಬರೆಯುವ ಸುವರ್ಣಾವಕಾಶ ಪಡೆದ ಗೊ.ಅನಂತರಾಜು ಅವರು ದೇಜಗೌ ಅವರು ಬರೆದ ವಿವಿಧ ಕ್ಷೇತ್ರಗಳ ಸಾಧಕ ಮಹಿಮರನ್ನು ಕುರಿತ ವ್ಯಕ್ತಿ ಚಿತ್ರಣಗಳ ಲೇಖನಗಳನ್ನು ಕುರಿತು ಸವಿಸ್ತಾರವಾಗಿ ಬರೆದು ಕೃತಾರ್ಥ ಭಾವ ತಳೆದಿದ್ದಾರೆ. ಮುಂದಿನ ಲೇಖನ 'ಜಲಪ್ರಳಯ-ಭಗೀರಥನ ಕತೆ'ಯಲ್ಲಿ ಭಗೀರಥನು ಭೂಲೋಕಕ್ಕೆ ಗಂಗೆಯನ್ನು ಕರೆತರುವ ಪ್ರಸ್ತಾವನೆಯೊಂದಿಗೆ ಹಿಮಾಲಯದ ಪರ್ವತಶ್ರೇಣಿಯಿಂದ ಹರಿಯುವ ನದಿಗಳು, ಅವುಗಳ ಹರಿವಿನ ವಿಸ್ತಾರ ಮತ್ತು ನದೀಪಾತ್ರಗಳಲ್ಲಿರುವ ಪುಣ್ಯ ಕ್ಷೇತ್ರಗಳ ಹಲವಾರು ಮಾಹಿತಿಗಳನ್ನು ಒದಗಿಸಿದ್ದಾರೆ. ಗೊರೂರು ಸೋಮಶೇಖರ್ ಅವರ ಬಡವರ್ಗಗಳು ಒಂದು ಸಂವಾದ ಸೇರಿದಂತೆ ಸಮಾಜದ ಅನೇಕ ಸಮಸ್ಯೆಗಳ, ಪ್ರಶ್ನಾರ್ಥಕ ವಿಷಯಗಳನ್ನು ಒಳಗೊಂಡ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ ಕೃತಿ ಬಸವಣ್ಣನ ಪುರಾತ ದಾಸಿಮಯ್ಯ - ಕೆಳವರ್ಗದ ತಲ್ಲಣಗಳು ಎಂಬ ಲೇಖನವನ್ನು ಕುರಿತು ವಿಮರ್ಶಿಸಿದ್ದಾರೆ.
ಇಂತಹ ಅನೇಕ ಮೌಲಿಕ ಲೇಖನಗಳ ಸಾಹಿತ್ಯ ಸವಿಭರಿತ ಗೊಂಚಲಿನಲ್ಲಿ 'ದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ', 'ಬೇಲೂರು ವೈಕುಂಠ ದಾಸರು ಮತ್ತು ಕೆಲ್ಲಂಗೆರೆ ತಿಮ್ಮಪ್ಪದಾಸರು', ಗಾನಕೋಗಿಲೆ- ಎಸ್. ಜಾನಕಿ', 'ಜಾನಪದ ಹಾಡುಗಳಲ್ಲಿ ಕಬ್ಬತ್ತಿರಂಗ- ಭರತೂರು ಬಿಂದಿಗಮ್ಮ', 'ಜನಪದ ಸಾಹಿತ್ಯದಲ್ಲಿ ಮಳಲಿ ಗಿಡ್ಡಮ್ಮ' ಮುಂತಾದ ಮಹಾ ಸಾಧಕರ ಸಾಧನೆಯ ಮಜಲುಗಳನ್ನು ವಿವರವಾಗಿ ಪರಿಚಯಿಸುವ ಮೂಲಕ ಓದುಗರ ಆಸಕ್ತಿಗೆ ಅನುಗುಣವಾದ ಸಾಹಿತ್ಯ ಸೌರಭವನ್ನು ಹಂಚಿದ್ದಾರೆ. ಇವುಗಳ ಜೊತೆಗೆ 'ಹೊಯ್ಸಳ ಚಿತ್ರಕ್ಕೆ ರಿಯಲ್ ಹುಲಿ' ಲೇಖನದಲ್ಲಿ ನಿರ್ದೇಶಕರಾದ ಸಿ.ವಿ.ಶಿವಶಂಕರ್ ಅವರು ಹೊಯ್ಸಳ ಚಿತ್ರದಲ್ಲಿ ಸಳನು ಹುಲಿಯೊಂದಿಗೆ ಹೋರಾಡುವ ದೃಶ್ಯದ ಚಿತ್ರೀಕರಣಕ್ಕಾಗಿ ಮದರಾಸಿನಿಂದ ನಿಜವಾದ ಹುಲಿಯನ್ನು ತರಿಸಿ, ಅನುಭವಿಸಿದ ರೋಮಾಂಚನಕಾರಿ ಪ್ರಸಂಗವನ್ನು ತಿಳಿಸಿದ್ದಾರೆ. ಖ್ಯಾತ ಪತ್ರಕರ್ತರಾದ ನಾಗರಾಜ್ ಹೆತ್ತೂರ್ ಅವರ 'ಮನೆಯಲ್ಲಿ ಅಟ್ಟೆನೆಂದಡೆ ಹೊಟ್ಟೆ ತುಂಬಿದುದುಂಟೆ?' ಲೇಖನವನ್ನು ಕುರಿತು ವಿವರಿಸಿರುವ ಗೊ.ಅನಂತರಾಜು ಅವರು ಪೌರಕಾರ್ಮಿಕ ಪುನೀತ್ ಅವರ ಸೇವೆಯ ಸ್ಮರಣೆಯೊಂದಿಗೆ ನಮ್ಮ ಜನಸಾಮಾನ್ಯರಲ್ಲಿ ಜಡ್ಡುಗಟ್ಟಿರುವ ನೈರ್ಮಲ್ಯದ ನಿಷ್ಕಾಳಜಿ, ಶೌಚಾಲಯ ನಿರ್ವಹಣೆಯ ಬಗೆಗಿನ ಅಲಕ್ಷ್ಯ, ಸುತ್ತ ಮುತ್ತಲಿನ ಪರಿಸರ ಪ್ರಜ್ಞೆಯ ಕೊರತೆಗಳಿಂದಾಗಿ ಪೌರಕಾರ್ಮಿಕರು ಏನೆಲ್ಲಾ ಕಷ್ಟಗಳನ್ನು ಎದುರಿಸಬೇಕೆಂಬ ಬಗೆಗಿನ ನಾಗರಾಜ್ ಹೆತ್ತೂರರ ಮಾನವೀಯ ಕಳಕಳಿ ಹಾಗೂ ಸಾಮಾಜಿಕ ಅಸಮಾನತೆಯ ಜಿಜ್ಞಾಸೆಯನ್ನು ಬಿಚ್ಚಿಟ್ಟಿದ್ದಾರೆ.
ಹೀಗೆ ಸಾಹಿತ್ಯ, ಭಾಷೆ, ಕಾವ್ಯ, ಸಂಸ್ಕೃತಿ ಮತ್ತು ಸಾಮಾಜಿಕತೆ ವಿಷಯಗಳನ್ನು ಕುರಿತು ಭರಪೂರವಾದ ಸಾಹಿತ್ಯ ಭಂಡಾರವನ್ನು ಪತ್ರಿಕೆಗಳಲ್ಲಿ ಹಂಚಿ ಮತ್ತು ಅವುಗಳನ್ನು ಸೊಗಸಾದ ಶೀರ್ಷಿಕೆ "ಹೇಮೆಯ ಮಡಿಲಲ್ಲಿ" ಹೂರಣವಾಗಿಸಿ ಓದುಗರ ವಾಚನಾಭಿರುಚಿಯನ್ನು ತಣಿಸಲು ಕೊಟ್ಟಿದ್ದಾರೆ. ಈ ಕೃತಿಗೆ ಹಾಸನದ ಹಿರಿಯ ಕವಿಗಳಾದ ಶ್ರೀ ಎನ್.ಎಲ್ ಚನ್ನೇಗೌಡರು ತಮ್ಮ ವಿದ್ವತ್ಪೂರ್ಣವಾಗಿ ಮುನ್ನುಡಿ ಆಡಿರುವುದು ಮತ್ತು ಲೇಖಕರಾದ ಶ್ರೀ ನಿಡಿಗೆರೆ ಕೃಷ್ಣಯ್ಯಂಗಾರ್ ಅವರು ಬೆನ್ನುಡಿಯ ಮೂಲಕ ಪ್ರೋತ್ಸಾಹ ನೀಡಿರುವುದು ಕೃತಿಯ ತೂಕವನ್ನು ಹೆಚ್ಚಿಸಿದಂತಾಗಿದೆ. ಸದಾ ಒಂದಿಲ್ಲೊಂದು ಲೇಖನ, ಕಾವ್ಯ, ನಾಟಕ, ವಿಮರ್ಶೆ, ಕಮ್ಮಟ, ಕವಿಗೋಷ್ಠಿ ಮುಂತಾದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗೊರೂರು ಅನಂತರಾಜು ಅವರ ದೈಹಿಕ ವಯಸ್ಸು ಅರವತ್ತರ ಕಡೆಗೆ ಸಾಗುತ್ತಿದ್ದರೂ ಮಾನಸಿಕ ವಯಸ್ಸು ಇನ್ನೂ ಮೂವತ್ತರಲ್ಲಿಯೇ ಇರುವುದು ಅವರ ಕ್ರಿಯಾಶೀಲ ಮನಸ್ಥಿತಿಯನ್ನು ಬಿಂಬಿಸುತ್ತದೆ. ಹೀಗೆ ನಿರಂತರವಾಗಿ ಸಾಹಿತ್ಯ ಲೋಕದಲ್ಲಿ ವಿಹರಿಸುತ್ತ, ವಿಜೃಭಿಸುತ್ತ ಕಿರಿಯ ಬರಹಗಾರರಿಗೆ ಮಾರ್ಗದರ್ಶನ ನೀಡುತ್ತ , ಇನ್ನೂ ಹಲವಾರು ಕೃತಿ ರತ್ನಗಳನ್ನು ಓದುಗರ ಕರಗಳಿಗೀಯುತ್ತ, ನೂರು ವರ್ಷಗಳು ಸಾಹಿತ್ಯ ಸರಸ್ವತಿಯ ಉಪಾಸನೆ ಗೈಯಲೆಂದು ಹಾರೈಸೋಣ.
~✍🏼 *ಹೊ.ರಾ.ಪರಮೇಶ್ ಹೊಡೇನೂರು*
ಶಿಕ್ಷಕ ಸಾಹಿತಿ, @ ರುದ್ರಪಟ್ಟಣ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ