ಗುರು ವಂದನೆ
ಶ್ರೀ ಗುರುಭ್ಯೋ ನಮ:
ಗುರುರ್ಬ್ರಹ್ಮ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ
ಗುರುರೇವ ಪರಂ ಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ
ಗುರು ಎಂದರೆ ಜ್ಞಾನ ಭಕ್ತಿ ಬುದ್ಧಿವಂತಿಕೆ ಕಾರ್ಯಕುಶಲತೆ ಹೊಂದಿರುವ ಇತರರಿಗೆ ಮಾರ್ಗದರ್ಶನ ಮಾಡುವವರು ಎಂದು ಅರ್ಥ.
ಗು ಎಂದರೆ ಅಂಧಕಾರ ಮತ್ತು ರು ಎಂದರೆ ಬೆಳಕು ಅಂಧಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ವ್ಯಕ್ತಿ.
ವೇದಗಳ ಕಾಲದಿಂದಲೂ ಬೃಹಸ್ಪತಿಗೆ ಮೊದಲ ಗುರುವಿನ ಆದ್ಯತೆ ಇದೆ. ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂದರೆ ಗುರುವಿಗೆ ಶರಣಾದರೆ ಮಾತ್ರ ನಮಗೆ ಮುಕ್ತಿ ದೊರಕಲು ಸಾಧ್ಯ. ಮಹಾಭಾರತದಲ್ಲಿ ಅರ್ಜುನನು ಕೃಷ್ಣನನ್ನು ಗುರುವಾಗಿ ಸ್ವೀಕರಿಸುತ್ತಾನೆ. ಹಾಗೆಯೇ ತನ್ನ ಎಲ್ಲ ಪ್ರಶ್ನೆಗಳಿಗೂ ಗೀತೋಪದೇಶದ ಮೂಲಕ ಉತ್ತರ ಕಂಡುಕೊಳ್ಳುತ್ತಾನೆ. ಇದು ಇಂದಿಗೂ ಎಲ್ಲರಿಗೂ ಆದರ್ಶಪ್ರಾಯವಾಗಿದೆ.
ಗುರುವಿನ ಪಾತ್ರ ಆಧ್ಯಾತ್ಮ ಜ್ಞಾನದಲ್ಲಿ, ವೇದಾಂತದಲ್ಲಿ, ಯೋಗ, ತಂತ್ರ ವಿದ್ಯೆ, ಭಕ್ತಿ ಹಾಗೂ ಸ್ಕೂಲ್ ಗಳ ಮೂಲಕ ಮುಂದುವರೆದಿದೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಗುರುವಿನ ಪಾತ್ರ ಹಿಮಾಲಯದಷ್ಟು ಅಥವಾ ಅದಕ್ಕಿಂತ ಹೆಚ್ಚಿನದಾಗಿದೆ.
ಅತಿ ಹೆಚ್ಚು ಪ್ರಭಾವಬೀರಿದ ಪೂಜನೀಯ ವ್ಯಕ್ತಿಗಳೇ ಗುರುಗಳು. ಮಂತ್ರೋಪದೇಶ ದ ಮೂಲಕ ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಗುರುಗಳು ದೈವಿಕ ಶಕ್ತಿಗಳನ್ನು ನಮಗೆ ಧಾರೆ ಎರೆಯುತ್ತಾರೆ. ದೀಕ್ಷೆ ಪಡೆದ ಮೇಲೆ ದೇವರಿಗೆ ಶರಣಾದರೆ ನಮ್ಮೆಲ್ಲ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬುದು ನನ್ನ ಸ್ವಂತ ಅನುಭವ. ನನ್ನ ಪ್ರಕಾರ ದೇವರು ಗುರುಗಳು ಎಲ್ಲರೂ ಒಂದೇ! ನಾವು ಗುರುಗಳಿಗೆ ಗೌರವ, ಭಧ್ದತೆ, ಭಕ್ತಿ ಹಾಗೂ ವಿಧೇಯತೆಯನ್ನು ತೋರಬೇಕು ಮತ್ತು ಗುರುಗಳ ಬಗ್ಗೆ ನಮಗೆ ನಂಬಿಕೆ ನಿಷ್ಠೆ ಇರಬೇಕು.
ಗುರುಗಳಿಂದ ನಮ್ಮಲ್ಲಿರುವ ಅಹಂ ನ ಭಾವೋದ್ರೇಕವು ನಾಶವಾಗುತ್ತದೆ ಮತ್ತು ಶಾಂತಿಯುತ ಜೀವನವನ್ನು ನಡೆಸಲು ಸಹಕಾರಿಯಾಗುತ್ತದೆ. ಭಜನೆ ಧ್ಯಾನ ಜಪಗಳಿಂದ ನಮಗೆ ಅದ್ವಿತೀಯ ಮನಶ್ಯಾಂತಿ ಸಿಗುತ್ತದೆ ಎಂದು ನನ್ನ ಅನಿಸಿಕೆ.
ಅನೇಕ ಜನ್ಮ ಸಂಪ್ರಾಪ್ತ ಕರ್ಮ ಬಂಧವಿದಾಹಿನೆ
ಆತ್ಮಜ್ಞಾನ ಪ್ರಧಾನೇನ ತಸ್ಮೈ ಶ್ರೀ ಗುರವೆ ನಮ:
ಅನೇಕ ಜನ್ಮಗಳಿಂದ ಮಾಡುತ್ತಾ ಬಂದಿರುವ ಎಲ್ಲಾ ಕರ್ಮ ಪಾಪಗಳಿಂದ ಗುರುಗಳು ನಮ್ಮನ್ನು ಬಂಧಮುಕ್ತ ರಾಗಿ ಸುತ್ತಾರೆ. ಆತ್ಮಜ್ಞಾನದ ದರ್ಶನ ಮಾಡಿಸುತ್ತಾ ಜ್ಞಾನ ಜ್ಯೋತಿಯ ದೀವಿಗೆಯನ್ನು ಬೆಳಗಿಸುತ್ತಾರೆ ಎಂಬುದು ಈ ಶ್ಲೋಕದ ಅರ್ಥ.
ಗುರುವಿನ ಅನುಗ್ರಹ ದೊರಕದೆ ಇದ್ದಲ್ಲಿ ಎಷ್ಟೇ ಹಣ ವಿರಲಿ ಸಂಪತ್ತಿರಲಿ ಎಲ್ಲವೂ ವ್ಯರ್ಥ! ಮಹಾಮಹಿಮರಾದ ಗುರುಗಳನ್ನು ನಾನು ನನ್ನ ಕೊನೆಯ ಉಸಿರು ಇರುವ ತನಕ ನೆನೆಯುತ್ತೇನೆ.
ಸ್ವರಚಿತ ಕವನ
ವಿಷಯ:- ಗುರಿ ತೋರಿದ ಗುರುವರ
ಗುರು ನೀ ಬ್ರಹ್ಮ ವಿಷ್ಣು ಮಹೇಶ್ವರ
ಕೃಪೆ ತೋರೆಂದು ತವಕದಿ ಮೊರೆಯುವೆ
ಜ್ಞಾನದ ದೀವಿಗೆ ತೋರಿದ ಗುರುವರ
ಅಕ್ಷರ ಜ್ಞಾನ ನೀಡಿದ ಗುರುವೇ
ನೀ ನನ್ನ ದೈವವು ಜನ್ಮದ ಬಂಧು
ಪ್ರೀತಿಯ ಸ್ನೇಹಿತ ಹೃದಯದಿ ನೆಲೆಸಿರು
ಕತ್ತಲ ಕಳೆದು ಬೆಳಕನು ನೀಡಿದೆ
ದೀನಬಂಧು ಕರುಣಾಮೂರ್ತಿ
ಕರ್ಮ ಬಂದವ ಕಳಚಿದ ಧೀರ
ತನುಮನ ಅರ್ಪಣೆ ಓ ಗುರುದೇವ!
ನಿನ್ನಯ ಪಾದಕೆ ಶಿರವು ಮಣಿಯಲಿ
ಅಹಂಕಾರವೆಲ್ಲ ಮುಳುಗಲಶ್ರುಜಲದಲಿ
ನಿನ್ನೆಯ ಪೂಜೆಯೇ ಭಕ್ತಿಯ ಸಾಧನೆ
ಕರುಣಿಸು ದೇವ ನೆಮ್ಮದಿ ಶಾಂತಿ!
ತಮವ ಕಳೆದು ಬೆಳಕು ಹರಿಸಿ ಅಕ್ಷರಜ್ಞಾನ ನೀಡಿ ಬಾಳಿಗೆ ದಾರಿದೀಪವಾಗಿ...
ಜಗದ ಅರಿವಿನ ಜ್ಞಾನ ನೀಡಿದ ಗುರುಗಳಿಗೆ ಹೃದಯದಾಳದ ನಮನಗಳೊಂದಿಗೆ ಶಿರಾ ಸಾಷ್ಟಾಂಗ ಪ್ರಣಾಮಗಳು.
- ಶ್ರೀಮತಿ ಕಲ್ಪನಾ ಡಿ.ಎನ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಗುರುವಿನ ಮಹಿಮೆಯ ಬಗ್ಗೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಲೇಖನ 👌👌🙏🙏
ಪ್ರತ್ಯುತ್ತರಅಳಿಸಿ