ಪ್ರತಿಬಾನಂ, ಕಾವ್ಯವಿದ್ಯಾ ಪ್ರಚಯ ಪರಿಚಯಂ, ವೃದ್ಧಸೇವಾನುರಾಗಂ ಸತತಭ್ಯಾಸ ಪ್ರಯತ್ನಂ, ಕವಿತೆಗೆ ನಿಯತಂ ಕಾರಣಂ
ಪ್ರತಿಭಾನಂ ಕಾವ್ಯವಿದ್ಯಾ ಪ್ರಚಯ ಪರಿಚಯಂ ವೃದ್ದ ಸೇವಾನುರಾಗಂ
ಸತತಾಭ್ಯಾಸ ಪ್ರಯತ್ನಂ ಕವಿತೆಗೆ ನಿಯತಂ ಕಾರಣಂ ಪೇಳ್ದೊಡಂತಾ|
ಪ್ರತಿಭಾನಂ ಶಕ್ತಿ ಲೋಕಾಗಮಸಕಲಕಲಾವೇದನಂ ವಿದ್ಯೆ ಶಾಸ್ತ್ರಾನ್ವಿತನಪ್ಪಂ ವೃದ್ಧನಾಲಸ್ಯಮನುಪೆದೆಸಪುದ್ಯೋಗಮಭ್ಯಾಸಕರ್ಮಂ” ಎಂದು ನಾಗವರ್ಮ ತನ್ನ ಕಾವ್ಯವಲೋಕನದಲ್ಲಿ ಕವಿಗೆ ಪ್ರತಿಭೆಯ ಜೊತೆಗೆ ಸತತವಾದ ಅಭ್ಯಾಸವು ಕೂಡ ಅಗತ್ಯವೆಂದು ಹೇಳುತ್ತಾನೆ. ಹಾಗೆಯೆ ರುದ್ರಟ ಶಕ್ತಿವ್ಯುತ್ಪತ್ತಿರಭ್ಯಾಸಃ ಎಂದರೆ ಶಕ್ತಿ, ವ್ಯುತ್ಪತ್ತಿ, ಅಭ್ಯಾಸಗಳೆ ಪ್ರತಿಭಾ ಶಕ್ತಿ ಎಂದಿದ್ದಾನೆ. ದಂಡಿಯೂ ಕೂಡ ಸ್ವಭಾವಸಿದ್ದವಾದ ಪ್ರತಿಭೆಯ ಜೊತೆಗೆ ಸತತವಾದ ಅಭ್ಯಾಸ ಇವು ಅವಶ್ಯವೆಂದಿದ್ದಾನೆ.
ಅಭ್ಯಾಸ ಎನ್ನುವುದು ಎಲ್ಲಾ ಕ್ಷೇತ್ರದಲ್ಲೂ ಅಗತ್ಯ ಹಾಗೂ ಗುರಿ ಸಾಧನೆಗೆ ಅನಿವಾರ್ಯ ಕೂಡ ಆಗಿದೆ. ನಿರಂತರ ಅಭ್ಯಾಸ ಒಂದು ಅರ್ಥದಲ್ಲಿ ಇದನ್ನು ಪರಿಶ್ರಮವೆಂದು ಕೂಡ ಕರೆಯಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆಯಾಗಿ ನಾವು ಬಾಲ್ಯದಿಂದಲೂ ಕೇಳುತ್ತಾ ಬಂದಿರುವ ಆಮೆ ಮತ್ತು ಮೊಲದ ಕತೆಯಾಗಿದೆ. ಹೌದು ಯಾವುದೇ ಒಂದು ಕೆಲಸಕ್ಕಾಗಲಿ ನಿರಂತರ ಅಭ್ಯಾಸ ಬಹಳ ಮುಖ್ಯ. ಅದರಲ್ಲೂ ಸಾಹಿತಿಗಳಾಗಬೇಕೆಂದು ಹೊರಟವರಿಗೆ ಈ ಅಭ್ಯಾಸ ಎನ್ನುವುದು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಅಭ್ಯಾಸ ಎಂದರೆ ಕವಿ ಕಾವ್ಯ ರಚನೆಗೆ ಮುಂಚೆ ಮಾಡಿಕೊಳ್ಳುವ ಸಿದ್ದತೆಯಾಗಿದೆ. ಅಭ್ಯಾಸದಿಂದ ಸಂಸ್ಕಾರ ಹೊಂದಿದ ಪ್ರತಿಭೆಯನ್ನು ಕಾವ್ಯಾಮೃತವೆಂದು ಕರೆಯಲಾಗುತ್ತದೆ. ಕಾವ್ಯ ಮಿಮಾಂಸಕರಾದ ಹೇಮಚಂದ್ರ, ನಾಗವರ್ಮ ಮತ್ತು ಕೇಶಿರಾಜರು ಅಭ್ಯಾಸದ ಅಗತ್ಯತೆಯನ್ನು ಒತ್ತಿ ಹೇಳುತ್ತಾರೆ. ಅಭ್ಯಾಸವೆಂದರೆ ಆಲಸ್ಯವಿಲ್ಲದೆ ಮಾಡುವ ಉದ್ಯೋಗ ಸತತ ಅಭ್ಯಾಸದಿಂದ ಸರಸ್ವತಿಯನ್ನು ವಶಗೊಳಿಸಿಕೊಳ್ಳಬಹುದು. ಅದರಲ್ಲೂ ಉತ್ತಮ ಕಾವ್ಯ ಸೃಷ್ಟಿಗೆ ಈ ಅಭ್ಯಾಸ ಬಹಳ ಮುಖ್ಯವಾಗಿದೆ. ನಿರಂತರವಾದ ಅಭ್ಯಾಸದ ಬಲದಿಂದ ಮಾತ್ರ ಉತ್ತಮ ಕೃತಿ ರಚಿಸಲು ಸಾಧ್ಯವಾಗುತ್ತದೆ. ಒಂದು ಕಾವ್ಯ ರಚನೆಗೆ ಬೇಕಾದ ಪದಸಂಪತ್ತು, ವ್ಯಾಕರಣ ಶುದ್ಧತೆ, ಕಾವ್ಯಕ್ಕೆ ಬೇಕಾದ ಭಾಷಾ ಶುದ್ದತೆ, ಮೃದುತ್ವ, ಛಂದಸ್ಸು, ವ್ಯಂಗ್ಯಾರ್ಥ, ಧ್ವನಿ, ಭಾವ ತೀವ್ರತೆ, ಜ್ಞಾನ, ಪಾಂಡಿತ್ಯಗಳೆಲ್ಲಾ ಕವಿಗೆ ಒಲಿಯಬೇಕಾದರೆ ಅವನು ನಿರಂತರವಗಿ ತನ್ನ ಪೂರ್ವಜರ ಕೃತಿಗಳ ಅಧ್ಯಯನದಲ್ಲಿ ತೊಡಗಬೇಕಾಗುತ್ತದೆ. ಇದನ್ನೇ ಅಭ್ಯಾಸ ಎಂದು ಕರೆಯಲಾಗುತ್ತದೆ. ಕಾವ್ಯ ರಚನೆಗೆ ಪ್ರತಿಭೆಯಷ್ಟೇ ಮುಖ್ಯ ಪಾತ್ರ ವಹಿಸುವ ಈ ಅಭ್ಯಾಸದಿಂದ ಮಾತ್ರ ಉತ್ತಮ ಕೃತಿ ರಚನೆಯಾಗಲು ಸಾಧ್ಯ ಪ್ರತಿಭೆ ಇದೆ ಎನ್ನುವ ಕಾರಣಕ್ಕೆ ಎಂತಹದ್ದೊ ಕಾವ್ಯ ರಚನೆ ಮಾಡುತ್ತೇನೆ ಎಂದರೆ ಹೇಗೆ ಕೇವಲ ಪ್ರತಿಭೆಯಿಂದ ಮಾತ್ರ ರಚನೆಯಾದ ಕಾವ್ಯದಲ್ಲಿ ಅಕ್ಷರ ದೋಶ, ವ್ಯಾಕರಣ ದೋಶ ಹೆಚ್ಚಾಗಿ ಕಂಡು ಬಂದರೆ ಪ್ರತಿಭೆ ಇದ್ದರೂ ವ್ಯರ್ಥವಾದಂತೆ ಅಲ್ಲವೆ.
ರಾಜಶೇಖರನು ತನ್ನ ಕಾವ್ಯ ಮಿಮಾಂಸೆಯಲ್ಲಿ “ದೇಹಮನಸ್ಸುಗಳ ಸ್ವಸ್ಥತೆ, ಪ್ರತಿಭೆ, ಅಭ್ಯಾಸ, ಭಕ್ತಿ, ವಿಧ್ವಾಂರೊಡನೆ ಮಾತುಕತೆ, ಪಾಂಡಿತ್ಯ, ದೃಢವಾದ ಜ್ಞಾಪಕ ಶಕ್ತಿ, ಉತ್ಸಾಹ, ಇವೆಂಟು ಕವಿತ್ವಕ್ಕೆ ತಾಯಂದಿರು ಎಂದಿದ್ದಾನೆ, ಹಾಗೆ ಅಭ್ಯಾಸದ ಕುರಿತು ಮಮ್ಮಟ ತನ್ನ ಕಾವ್ಯ ಪ್ರಕಾಶದಲ್ಲಿ ವ್ಯುತ್ಪತ್ತಿ ಮತ್ತು ಅಭ್ಯಾಸಗಳು ಸಂಗಮಿಸಿಯೇ ಕಾವ್ಯಹೇತುಗಳಾಗುತ್ತವೆ ಎನ್ನುತ್ತಾನೆ. ಮುಂದುವರೆದು ಅಭಿನವಗುಪ್ತನ ಪ್ರಕಾರ ಸರಸ್ವತಾಸ್ತತ್ವಂ ಕವಿ ಸಹೃದಯಾಖ್ಯಂ ವಿಜಯತೆ. ಎಂದಿದ್ದಾನೆ.
ಕವಿ ಕಾವ್ಯ ರಚನೆಗೆ ತೊಡಗುವ ಪೂರ್ವದಲ್ಲಿ ಮಾಡುವ ಸಿದ್ಧತೆಯನ್ನು ಅಭ್ಯಾಸವೆಂದು ಕರೆಯಲಾಗುತ್ತದೆ. ಅಭ್ಯಾಸದಿಂದ ಸಂಸ್ಕಾರ ಹೊಂದಿದ ಪ್ರತಿಭೆ ಕಾವ್ಯಾಮೃತವನ್ನು ಉಣಬಡಿಸುತ್ತದೆ. ಹೇಮಚಂದ್ರ, ನಾಗವರ್ಮ ಮತ್ತು ಕೇಶಿರಾಜರು ಅಭ್ಯಾಸದ ಅಗತ್ಯತೆಯನ್ನು ಒತ್ತಿ ಹೇಳುತ್ತಾರೆ. ಹೀಗೆ ಕವಿಗೆ ಅಗತ್ಯ ಅಂಶಗಳನ್ನು ಪಟ್ಟಿ ಮಾಡುವುದು ಬಹಳ ಮುಖ್ಯವಾಗಿದೆ. ಅಭ್ಯಾಸವೆಂದರೆ ಅಲಸ್ಯವಿಲ್ಲದೆ ಮಾಡುವ ಉದ್ಯೋಗವಾಗಿದೆ. ಹೇಮಚಂದ್ರ, ನಾಗವರ್ಮ ಮತ್ತು ಕೇಶಿರಾಜರು ಅಭ್ಯಾಸದ ಅಗತ್ಯತೆಯನ್ನು ಒತ್ತಿ ಹೇಳುತ್ತಾರೆ. ಸತತ ಅಭ್ಯಾಸದಿಂದ ಸರಸ್ವತಿಯನ್ನು ವಶಗೊಳಿಸಿಕೊಳ್ಳಬಹುದು. ಹೀಗೆ ಕವಿಗೆ ಅಗತ್ಯ ಅಂಶಗಳನ್ನು ಪಟ್ಟಿ ಮಾಡುವ ಅಭ್ಯಾಸ ಬೆಳೆದಿದ್ದರಿಂದಲೆ ಬಹುಷಃ ಕವಿಶಿಕ್ಷಾದಂತಹ ಗ್ರಂಥಗಳು ಹುಟ್ಟಿದವು ಅಭ್ಯಾಸದಿಂದ ಕವಿಗಳಲ್ಲಿ ಕಾಣುವ ಅಂಶ ಎಂದರೆ ಅಪಹರಣ ಮತ್ತು ಸ್ವೀಕರಣ, ಪ್ರಭಾವಗಳನ್ನು ಗುರುತಿಸಬಹುದು. ಕದಿಯದ ಕವಿಯಿಲ್ಲ, ಕದಿಯದ ವರ್ತಕನಿಲ್ಲ ಎಂದೆನ್ನುತ್ತಾನೆ ರಾಜಶೇಖರ. ಜಗತ್ತಿನ ಕವಿಗಳನ್ನೆಲ್ಲಾ ಸಾಲಾಗಿ ನಿಲ್ಲಿಸಿದರೆ ಒಬ್ಬನ ಕೈ ಇನ್ನೊಬ್ಬರ ಕಿಸೆಯಲ್ಲಿರುತ್ತದೆ ಎನ್ನುತ್ತಾರೆ. ಪ್ರತಿಭಾವಂತನಾಗಿದ್ದರೆ ಇದೂ ಸತ್ಯವೆ ಎನ್ನುತ್ತಾರೆ ಕುವೆಂಪು. ಇಲ್ಲಿ ಗಮನಿಸಬೇಕಾದಂತಹ ಮತ್ತೊಂದು ವಿಷಯವೆಂದರೆ. ನಿಜ ಹೆಚ್ಚು ಹೆಚ್ಚು ಒಬ್ಬ ವ್ಯಕ್ತಿಯ ಕೃತಿಗಳನ್ನೆ ನಾವು ಅಭ್ಯಾಸ ಮಾಡುತ್ತಿದ್ದರೆ ಖಂಡಿತ ಅವರ ಪ್ರಭಾವ ನಮ್ಮ ಸಾಹಿತ್ಯದ ಮೇಲೂ ಆಗುತ್ತದೆ. ಈ ನಿಟ್ಟಿನಲ್ಲಿ ಕೊಂಚ ನಿಗಾವಹಿಸಿ ನಮ್ಮ ಸ್ವಂತಿಕೆಯನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಹಾಗೆಯೆ ಕೆಲವೊಂದು ಸಾರಿ ನಮ್ಮ ಅರಿವಿಗೆ ಬಾರದಂತೆಯೇ ಕೆಲವು ಕೃತಿಗಳ ಪ್ರಭಾವ ನಮ್ಮ ಕೃತಿಯ ಮೇಲಾಗಿರುತ್ತದೆ. ಇದು ಖಂಡಿತಾ ಕ್ಷಮಾಅರ್ಹ ಮತ್ತು ಇದು ಅನಿವಾರ್ಯ ಕೂಡ ಆಗಿದೆ.
ಆದರೆ ಇತ್ತೀಚಿನ ಸಾಹಿತಿಗಳಲ್ಲಿ ಹೆಚ್ಚಾಗಿ ಕಂಡು ಬರುವ ಅಭ್ಯಾಸ ದೋಶ ಹಾಗೂ ಕೃತಿ ಚೌರ್ಯದಂತಹ ಸನ್ನಿವೇಶಗಳು ಸಾರಸತ್ವ ಲೋಕಕ್ಕೆ ನಾವು ಮಾಡುವ ಅಪಚಾರವೇ ಸರಿ ಎಂದು ಹೇಳಬಹುದು. ಅಭ್ಯಾಸದ ಕೊರತೆಯಿಂದ ರಚನೆಯಾದ ಕೃತಿಗಳನ್ನೇನೊ ಹೇಗೊ ಮನ್ನಿಸಬಹುದು ಆದರೆ ಕೃತಿ ಚೌರ್ಯ ಅಕ್ಷಮ್ಯ ಅಪರಾದ ಮತ್ತೊಬ್ಬರ ಕಾವ್ಯ, ಕೃತಿಗಳನ್ನು ಕದಿಯುವುದು ನಿಜಕ್ಕೂ ಅಕ್ಷಮ್ಯ ಅಪರಾದವಾಗಿದೆ.
ಕಾವ್ಯದಲ್ಲಿ ಪ್ರತಿಭೆಯ ಮೂಲಕ ಹುಟ್ಟುವ ಸ್ವಂತಿಕೆ ಹಾಗೂ ಅಭ್ಯಾಸದಿಂದ ಬರುವ ವಿದ್ವತ್ತಿನ ಸಂಯೋಜನೆಯಾದಗ ಮಾತ್ರ ಉತ್ತಮ ಕೃತಿ ರಚನೆಯಾಗುತ್ತದೆ.
- ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ