''ಸೇವೆಯ ಹಾದಿಯಲ್ಲಿ"ರುವವರಿಗೆ ಸ್ಫೂರ್ತಿಯ ಕೈಪಿಡಿ
"ಸಾಹಿತ್ಯ ಎಂಬುದು ಸುವಿಶಾಲವಾದ ಆಲದ ಮರ"ದಂತೆ. ವೇದೋಪನಿಷತ್ತುಗಳ ರಚನೆಯ ಜೊತೆಗೆ ಹಳಗನ್ನಡದ ಆದಿಕವಿ ಪಂಪನಿಂದ ಮೊದಲ್ಗೊಂಡು, ನಡುಗನ್ನಡದ ಶಿವಶರಣರ ವಚನಾಮೃತಗಳು, ದಾಸಶ್ರೇಷ್ಠರ ಕೀರ್ತನಗಳನ್ನು ಒಳಗೊಂಡು ಹೊಸಗನ್ನಡದ ಅನೇಕ ಲೇಖನ, ಕಥನ, ಕಾವ್ಯ ಪ್ರಕಾರಗಳಾಗಿ ಟಿಸಿಲೊಡೆದು ಬೃಹತ್ತಾಗಿ ಬೆಳೆದಿರುವ ಈ ಸಾಹಿತ್ಯವು ಸಹೃದಯರಿಗೆ ಹಿತವನ್ನಷ್ಟೇ ಅಲ್ಲದೆ ಉತ್ತಮ ಮಾರ್ಗದರ್ಶಕ, ಉನ್ನತ ಚಿಂತನೆಗೆ ಜ್ಞಾನ ದೀಪಕ, ಅಧ್ಯಯನಶೀಲರಿಗೆ ಸಂಪನ್ಮೂಲ ಭಂಡಾರಕ, ಪೀಳಿಗೆಯ ಸ್ಥಿತಿಗತಿಗಳ ಪ್ರವಾಹಕವಾಗಿ ಮಹತ್ವ ಪಡೆದಿದೆ. ಈ ದಾಖಲಾರ್ಹ ಕಾರ್ಯದ ಪ್ರವರ್ತಕರಾದ ಕವಿ, ಲೇಖಕ, ಸಾಹಿತಿಗಳ (ಕರ್ತೃಗಳು) ಬರಹ ಸೇವೆಯು ಅವರಿಗೆ ಪ್ರಚಾರವನ್ನು ಮಾತ್ರ ನೀಡದೆ, ಉದಯೋನ್ಮುಖ ಬರಹಗಾರರಿಗೆ ಉತ್ತಮ ಸರಕಾಗಿಯೂ ಉಳಿಯುತ್ತದೆ. ಜೊತೆಗೆ ಒಂದಿಷ್ಟು ಆತ್ಮ ಸಂತೋಷ ಜೀವನೋಲ್ಲಾಸವನ್ನೂ ಒದಗಿಸಬಲ್ಲದು. ಗೌರವಯುತವಾದ ಬದುಕನ್ನು ಕಟ್ಟಿಕೊಡಬಲ್ಲ ಸಾಮರ್ಥ್ಯವನ್ನು ಸಾಹಿತ್ಯವು ಬರಹ ಕೃಷಿಕರಿಗೆ ನೀಡುತ್ತದೆ. ಅಲ್ಲದೆ ಅನೇಕ ಮಹನೀಯರ ಸೇವೆ ಸಾಧನೆಯನ್ನು ಮುನ್ನೆಲೆಗೆ ತಂದು, ಅವರನ್ನು ಸಾರ್ವಜನಿಕವಾಗಿ ಪರಿಚಯಿಸುವ ಮೂಲಕ ಶಾಶ್ವತವಾಗಿ ಜನಮಾನಸದಲ್ಲಿ ಉಳಿಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆಲೋಚಿಸುವ, ಪ್ರತಿಭೆಗಳಿಗೆ ಬರಹದ ಮೂಲಕ ಪ್ರೋತ್ಸಾಹ ನೀಡಿ ಬೆಳೆಸುವ ಜಾಯಮಾನದ ಲೇಖಕರು ಬಹಳಷ್ಟು ಇದ್ದು ಅಂತಹವರಲ್ಲಿ ನಮ್ಮ ಹಸನಾದ ಹಾಸನ ಭಾಗದ ಹೇಮೆಯೊಡಲಲ್ಲಿ ಒಡನಾಡಿದ ಗೊರೂರು ಅನಂತರಾಜು ಅವರು ಪ್ರಮುಖವಾಗಿ ಹೆಸರಿಸಲ್ಪಡುವ ಬಹುಮುಖ ಪ್ರತಿಭಾ ಸಂಪನ್ನ , ಮಾನವೀಯ ಸಂವೇದನಾಶೀಲ ವ್ಯಕ್ತಿತ್ವದ ಕವಿ, ನಾಟಕಕಾರ ಮತ್ತು ಲೇಖಕರಾಗಿದ್ದಾರೆ. ಅವರ ಇತ್ತೀಚಿನ ಮೌಲಿಕವಾದ "ಸೇವೆಯ ಹಾದಿಯಲ್ಲಿ" ಕೃತಿಗೆ ಮುನ್ನುಡಿ ಬರೆಯುವ ಸೌಭಾಗ್ಯ ನನ್ನದಾಗಿರುವುದಕ್ಕೆ ಸಹಜವಾಗಿ ಹೆಮ್ಮೆಯೆನಿಸುತ್ತದೆ. ಹೆಚ್ಚಾಗಿ ಮಕ್ಕಳ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ನನ್ನ ಲೇಖನಿಯ ಮೇಲೆ ವಿಶ್ವಾಸವಿಟ್ಟು ಈ ಸದವಕಾಶವನ್ನು ನೀಡಿರುವ ಹಿರಿಯ ಆತ್ಮೀಯರಾದ ಗೊರೂರು ಅನಂತರಾಜು ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ಮುಂದುವರೆಯುತ್ತೇನೆ.
'ಸೇವೆ' ಎಂಬ ಶಬ್ದವೇ ನಿಸ್ವಾರ್ಥ ಭಾವವನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ಇತರರಿಗೆ, ಕುಟುಂಬಕ್ಕೆ ಅಥವಾ ನಮ್ಮ ಸಮಾಜಕ್ಕೆ ಬೇರೆ ಬೇರೆ ರೀತಿಯಲ್ಲಿ ಉಪಕರಿಸಬಹುದಾದ ನಿರಪೇಕ್ಷ ಕಾಯಕವನ್ನು ಸೇವೆ ಎನ್ನಬಹುದು. ಶಿಕ್ಷಕ, ವೈದ್ಯ, ಅಭಿಯಂತರ, ಶುಶ್ರೂಷಕ, ಪರಿಚಾರಕ, ವಕೀಲ, ಕೃಷಿಕ, ಸೈನಿಕ ಮುಂತಾದವುಗಳು ವೇತನಾಧಾರಿತವಾದ ವೃತ್ತಿಗಳಾಗಿದ್ದರೂ ಅವುಗಳನ್ನು ಸೇವೆಯೆಂದು ಪರಿಭಾವಿಸಿ ದುಡಿಯುವ ಒಂದು ವರ್ಗವನ್ನು ಸಮುದಾಯವು ಹೆಚ್ಚಾಗಿ ಗೌರವಿಸುವ, ಮನ್ನಣೆ ನೀಡುವ ಮೂಲಕ ಶ್ಲಾಘಿಸುವುದನ್ನು ಕಾಣುತ್ತೇವೆ. ಹಾಗೆಯೇ ಕಲೆ, ಸಂಗೀತ, ಸಾಹಿತ್ಯ, ನಾಟಕ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ತಮ್ಮ ಪ್ರವೃತ್ತಿಯ ಜೊತೆಗೆ ಇತರರಿಗೂ ಅವಕಾಶ, ಮಾರ್ಗದರ್ಶನ ನೀಡುವ ಮೂಲಕ ಅವರ ಸಾಧನಾ ಬದುಕಿಗೆ ದಾರಿ ತೋರಿಸುವ ಕೈಂಕರ್ಯವನ್ನು ಗೈಯ್ಯುತ್ತಾರೆ. ಈ ವೃತ್ತಿ ಮತ್ತು ಪ್ರವೃತ್ತಿಗಳೆರಡರಲ್ಲೂ ಗಣನೀಯವಾಗಿ ಸೇವೆ ಸಲ್ಲಿಸಿ ಸಮಾಜಕ್ಕೆ ವ್ಯವಸ್ಥೆಗೆ ಉಪಯುಕ್ತವಾದ ಕೊಡುಗೆ ನೀಡಿರುವ ಅನೇಕರ ಸಾಧನೆಯ ಪರಿಚಯ ಲೇಖನಗಳನ್ನು ಸಂಚಯಿಸಿರುವ ಸುಕೃತಿಯೇ "ಸೇವೆಯ ಹಾದಿಯಲ್ಲಿ".
ಈ ಕೃತಿಯನ್ನು ಓದುವ ಸಹೃದಯರ ಒಡಲಾಳದಲ್ಲಿ ನಾನೂ ಹೀಗಿರಬೇಕು, ಇವರಂತೆ ಏನಾದರೂ ಸಾಧಿಸಬೇಕು, ಇತರರಿಗೆ ಉಪಕರಿಸುವ ಮನೋಭಾವ ಹೊಂದಬೇಕು, ಸಮಾಜಕ್ಕೆ ಸದಾ ನೆನಪಿನಲ್ಲಿ ಉಳಿಯುವ ಏನಾದರೊಂದು ಕೊಡುಗೆ ಕೊಡಬೇಕು ಅನ್ನಿಸುವ ಸದ್ಭಾವನೆ ಖಂಡಿತವಾಗಿಯೂ ಮೂಡುತ್ತದೆ. ಏಕೆಂದರೆ ಅಂತಹ ಸಾಧಕ ಶ್ರೇಷ್ಠರ ಸೇವಾ ಹಾದಿಯ ಹೆಜ್ಜೆ ಗುರುತುಗಳನ್ನು ಗೊರೂರು ಅನಂತರಾಜು ಅವರು ಸ್ಪಷ್ಟವಾಗಿ ಮೂಡಿಸಿದ್ದಾರೆ. ಕೆಲವನ್ನು ಅವಲೋಕಿಸುವುದಾದರೆ,
"ಭತ್ತದ ಸಂಕರಣ ತಳಿಗಳ ಹರಿಕಾರ" ಎಂದು ಖ್ಯಾತರಾದ ಚಾಮರಾಜನಗರ ನಗರ ಜಿಲ್ಲೆಯ ಡಾ.ಎಂ.ಮಹಾದೇವಪ್ಪ ಅವರು ಪುಷ್ಪ, ಮಧು, ಪ್ರಗತಿ, ಮುಕ್ತಿ ಮುಂತಾದ ಹೈಬ್ರೀಡ್ ಭತ್ತದ ತಳಿಗಳನ್ನು ಸಂಕರಣ ಮಾಡಿ ಸಾಧನೆ ಗೈದ ಮಾಹಿತಿಯು ರೈತಾಪಿ ಬಂಧುಗಳಿಗೆ ಪರಿಚಯ ನೀಡುವ ಜೊತೆಗೆ ಹೆಚ್ಚು ಇಳುವರಿ ಪಡೆಯುವ ರಹಸ್ಯವನ್ನು ತಿಳಿಯಲು ಪೂರಕವಾಗಿದೆ. ಭೂಮಿಯ ಒಳಗಿನ ಅಂತರ್ಜಲವನ್ನು ಸಾಂಪ್ರದಾಯಿಕ ವಿಧಾನಗಳನ್ನು ಬಳಸಿ ಕಂಡು ಹಿಡಿಯುವ ಮೂಲಕ ಭೂ ವಿಜ್ಞಾನಿಗಳನ್ನೆ ನಿಬ್ಬೆರಗಾಗಿಸಿದ ನವಿಲು ಮಾರನ ಹಳ್ಳಿಯ ರಾಮೇಗೌಡರ ಪರಿಚಯ ಲೇಖನವು ಹಳ್ಳಿಗಳಲ್ಲಿ ಈಗಲೂ ಬಳಕೆಯಲ್ಲಿ ಇರುವ ತೆಂಗಿನಕಾಯಿ, ಬಿಂದಿಗೆ , ಕವಲು ಕಡ್ಡಿಯ ಮೂಲಕ ಅಂತರ್ಜಲವನ್ನು ಪತ್ತೆ ಮಾಡುವ ಪರಿಯನ್ನು ಪುಷ್ಟೀಕರಿಸಿದ್ದಾರೆ. ಗೊರೂರು-ಗೌರೀಪುರ ಮಾರ್ಗದ ನಡುವೆ ೨೮ ಎಕರೆ ವ್ಯಾಪ್ತಿಯಲ್ಲಿ ಗುಲಾಬಿ ಗಿಡಗಳನ್ನು ಬೆಳೆದು ಪುಷ್ಪ ಕೃಷಿಯಲ್ಲಿ ಸಫಲತೆ ಕಂಡ ಧೀರ ಮಹಿಳೆ ಹೇಮಾ ಅನಂತರಾಜು ಅವರ ಸಾಧನೆಯು ನಿಜಕ್ಕೂ ಕೃಷಿಯ ಬಗೆಗೆ ಅಲಕ್ಷ್ಯ ತೋರಿಸುವವರಿಗೆ ಆಸಕ್ತಿ ಹುಟ್ಟಿಸುತ್ತದೆ. ಸಂಸ್ಕೃತ ಅಧ್ಯಯನವು ಶೂದ್ರರಿಗೆ ನಿಷಿದ್ಧ ಎಂಬ ಗೊಡ್ಡು ಸಂಪ್ರದಾಯವನ್ನು ಮುರಿದು ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿ ಹೆಸರಾದ ಪ್ರೊ.ಸಿ.ಬಿ.ಪುರುಷೋತ್ತಮ್ ಅವರು ಜಡ್ಡುಗಟ್ಟಿರುವ ವ್ಯವಸ್ಥೆಯ ನಿಂತ ನೀರನ್ನು ಮತ್ತೆ ಹರಿಯುವಂತೆ ಮಾಡಿದ ಸಾಧನೆಯ ಲೇಖನವು ಹಿಂಜರಿಯುವವರಿಗೆ ಧೈರ್ಯ ನೀಡುವಂತಿದೆ. ಜನಪದ ಸಾಹಿತ್ಯದಲ್ಲಿ ಸಾಕಷ್ಟು ಹೆಸರು ಮಾಡಿದ ಅಕ್ಕಿ ಹೆಬ್ಬಾಳದ ಸಿಂಗನಹಳ್ಳಿ ಸ್ವಾಮಿಗೌಡ ಅವರ ಪರಿಚಯ ಲೇಖನವು ಇತ್ತೀಚೆಗೆ ಕಣ್ಮರೆಯಾಗುತ್ತಿರುವ ಸೋಬಾನೆ ಪದ, ಬೀಸೋಕಲ್ಲಿನ ಪದ, ಡೊಳ್ಳು ಕುಣಿತ, ಮುಂತಾದ ಜಾನಪದ ಕಲೆಗಳ ಸಿರಿವಂತಿಕೆಯ ಕಡೆಗೆ ಆಸಕ್ತರು ಕಣ್ಣು ಹಾಯಿಸಲು ಪ್ರೇರಣೆ ನೀಡುವಂತಿದೆ. ನೂರಾರು ಕವಿಗೋಷ್ಠಿ , ಕಮ್ಮಟಗಳನ್ನು ಆಯೋಜಿಸುವ, ಪ್ರತಿಭಾವಂತರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಪ್ರೋತ್ಸಾಹದಾಯಕ ಕಾರ್ಯಕ್ರಮಗಳ ಮೂಲಕ ರಾಜ್ಯ ಮಟ್ಟದಲ್ಲಿ ಹೆಸರು ಪಡೆದ "ಗ್ರಾಮಾಂತರ ಬುದ್ಧಿ ಜೀವಿಗಳ ಬಳಗ" ನೇತಾರರಾದ ಭೇರ್ಯ ರಾಮ್ ಕುಮಾರ್ ಅವರ ಅಮೋಘ ಸಾಧನೆಯ ಪರಿಚಯಾತ್ಮಕ ಲೇಖನವು ಕನ್ನಡ ಪರವಾಗಿ ಸೇವೆ ಸಲ್ಲಿಸುವ ಕ್ರಿಯಾಶೀಲ ಸಂಘಟನೆಗಳಿಗೆ ಸ್ಪೂರ್ತಿ ,ಆತ್ಮವಿಶ್ವಾಸ ನೀಡುವಂತಿದೆ. ಜನಪ್ರಿಯ ಹವ್ಯಾಸಗಳಲ್ಲಿ ಪ್ರಮುಖವಾದ ಹಳೆಯ ನಾಣ್ಯ ಮತ್ತು ನೋಟುಗಳ ಸಂಗ್ರಹ ಕಾರ್ಯದಲ್ಲಿ ತೊಡಗಿ, ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿ ಹೆಸರಾದ ಹುಣಸೂರಿನ ಪಿ.ಕೆ.ಕೇಶವಮೂರ್ತಿ ಅವರ ಸಾಧನೆಯನ್ನು ಓದುಗರಿಗೆ ಪರಿಚಯಿಸುವ ಮೂಲಕ ಹಳೆಯ ಉತ್ತಮ ಹವ್ಯಾಸಗಳ ಆಸಕ್ತರಿಗೆ ಹುರಿದುಂಬಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು ಹಾಸನ ನಗರದ ನಡುವಿನ ಮತ್ತು ಹೊರವಲಯದ ಕೆರೆ, ಕಲ್ಯಾಣಿಗಳನ್ನು ತಮ್ಮ ಶಿಷ್ಯ ಸೇನೆಯೊಂದಿಗೆ ಹೂಳು ಎತ್ತಿಸಿ, ಸ್ವಚ್ಛಗೊಳಿಸುವ ಪರಿಸರ ಪ್ರಿಯ ಕಾಯಕದೊಂಂದಿಗೆ ಹೆಸರಾದ ಎ.ವಿ.ಕೆ. ಕಾಲೇಜಿನ ಉಪನ್ಯಾಸಕರಾದ ಕೆ.ಎಸ್. ರವಿಕುಮಾರ್ ಅವರ ಅನನ್ಯ ಸೇವೆಯನ್ನು ಗೊರೂರು ಅನಂತರಾಜು ಅವರು ಶ್ಲಾಘಿಸಿರುವುದು ಈಗಿನ ಪರಿಸರ ಪ್ರೇಮಿಗಳ ಹುಮ್ಮಸ್ಸು ಹೆಚ್ಚಿಸುವಂತಿದೆ. ಮತ್ತೊಂದು ಲೇಖನದಲ್ಲಿ ವಿಶೇಷವಾಗಿ ಇಂಗ್ಲೆಂಡ್ ನ ಆಕ್ಸ್ಫರ್ಡ್ ನಲ್ಲಿರುವ ಇಂಟರ್ನ್ಯಾಷನಲ್ ಬಯೋಗ್ರಫಿಕಲ್ ಸೆಂಟರ್ ಪ್ರಕಟಿಸಿದ "ವಿಶ್ವದ ಅದ್ವಿತೀಯ ೨೦ ವ್ಯಕ್ತಿಗಳು" ಪಟ್ಟಿಯಲ್ಲಿ ಕನ್ನಡಿಗರಾದ ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ .ಎ.ಟಿ.ಈಶ್ವರ್ ಅವರ ಅದ್ಬುತ ಸಾಧನೆ, ಸೇವೆಯು ನಿಜಕ್ಕೂ ನಮ್ಮ ನಾಡಿನ ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೆ ಸಕಲೇಶಪುರ ಪಟ್ಟಣದಲ್ಲಿ ತಮ್ಮ ಶಿಷ್ಯರು, ಸಾರ್ವಜನಿಕರ ಸಮಕ್ಷಮದಲ್ಲಿ ಸತತ ೨೪ ಗಂಟೆಗಳ ಸುದೀರ್ಘ ಉಪನ್ಯಾಸ ನೀಡಿ 'ರಾಷ್ಟ್ರೀಯ ದಾಖಲೆ' ಯ ಸಾಧನೆ ಗೈದ ಹಾಸನದ ಬಿ.ಇಡಿ.ವಿದ್ಯಾಲಯದ ಓಬಳಪ್ಪ ಗಟ್ಟಿ ಅವರ ಗಟ್ಟಿತನವನ್ನು ತುಂಬಾ ಗೌರವದಿಂದ ಸ್ಮರಿಸಿಕೊಂಡು ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಬಿಂಬಿಸಿದ್ದಾರೆ. ಹೀಗೆಯೇ ಕನಸುಗಾರ ಶಿಕ್ಷಣಾಧಿಕಾರಿ ಕೆ.ಶಿವೇಗೌಡ, ಅರಕಲಗೂಡು ತಾಲ್ಲೂಕಿನ ಹನ್ಯಾಳು ಶಾಲೆಯ ಪ್ರಗತಿಗೆ ಶ್ರಮಿಸಿದ ಶಿಕ್ಷಕ ಟಿ.ಮಲ್ಲೇಶ್, ಹಾಸನ ತಾಲ್ಲೂಕು ಸೀಗೂರು ಶಾಲೆಯ ಔನ್ನತ್ಯಕ್ಕೆ ದುಡಿದ ಶಿಕ್ಷಕ ಭದ್ರೇಗೌಡ, ಯೋಗದಿಂದ ಆರೋಗ್ಯ ದೀಕ್ಷೆ ಸ್ವೀಕರಿಸಿದ ಬಿ.ಎನ್. ಮನೋಹರ್, ಗೊರೂರು ಪ್ರೌಢ ಶಾಲೆಯ ಜನ ಮೆಚ್ಚಿದ ಶಿಕ್ಷಕ ಹಾಲಸಿದ್ಧಪ್ಪ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ರಕ್ತ ದಾನಿ ಜಿ.ಮಂಜುನಾಥ್, ಶಾಂತಿ ಗ್ರಾಮದ ಪತ್ರಕರ್ತ ಪೂಚಣ್ಣ .... ಮುಂತಾದ ಹಲವಾರು ಸಾಧಕರನ್ನು, ಅವರ ಅನನ್ಯ ಸೇವೆಯ ಪರಿಚಯವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿರುವುದು ಅಧ್ಯಯನ ಶೀಲರಿಗೆ ಒಂದು ಒಳ್ಳೆಯ ಕೈಪಿಡಿ ದೊರೆತಂತಾಗಿದೆ.
ವಿಶೇಷವೆಂದರೆ ಈ ಕೃತಿಯಲ್ಲಿ ಅಡಕವಾಗಿರುವ ಲೇಖನಗಳು ೨೦೦೦ ನೇ ಇಸ್ವಿಯ ಆಸುಪಾಸಿನಲ್ಲಿ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿ ಈಗಾಗಲೇ ಓದುಗರ ಬಳಗಕ್ಕೆ ಪರಿಚಯವಾಗಿವೆ. ಈಗ ಇಡುಗಂಟಿನ ರೂಪದಲ್ಲಿ ಹೊಸ ಪೀಳಿಗೆಯ ವಾಚನಾಭಿರುಚಿಯ ಆಸ್ವಾದನೆಗಾಗಿ ಅವಕಾಶ ಸಿಕ್ಕಂತೆ ಈ ಕೃತಿ ಹೊರಬರುತ್ತಿರುವುದು ಸಾರ್ಥಕ್ಯಯುತವಾದ ಸತ್ಕಾರ್ಯವಾಗಿದೆ. ಕಸದಾ ಒಂದಿಲ್ಲೊಂದು ವಿಷಯವನ್ನು ಕುರಿತು ಬರೆಯುವ ಮೂಲಕ ಸಾಹಿತ್ಯ ಕೃಷಿಯ ತುಡಿತವಿರುವ ಅನಂತರಾಜು ಅವರ ನೂರಾರು ಲೇಖನಗಳು ಸಾವಿರವಾಗಲಿ ಮತ್ತು ಜನಮಾನಸದಲ್ಲಿ 'ಅನಂತ'ವಾಗಿ ಉಳಿಯಲಿ ಎಂದು ಆಶಿಸುತ್ತೇನೆ.
~ಹೊ.ರಾ.ಪರಮೇಶ್ ಹೊಡೇನೂರು
ಶಿಕ್ಷಕ ಸಾಹಿತಿ, ರುದ್ರಪಟ್ಟಣ
#7022765372.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ