ಮಂಗಳವಾರ, ಅಕ್ಟೋಬರ್ 5, 2021

ಶರನ್ನವರಾತ್ರಿಯ ವಿಶೇಷತೆಯೊಂದಿಗೆ ವಿಜಯದಶಮಿ ಆಚರಣೆ (ಲೇಖನ) - ಶ್ರೀಮತಿ ಸುಮಂಗಲಾ ಕೃಷ್ಣಾ ಕೊಪ್ಪರದ , ಇಲಕಲ್ಲ.

ಶರನ್ನವರಾತ್ರಿಯ ವಿಶೇಷತೆಯೊಂದಿಗೆ ವಿಜಯದಶಮಿ ಆಚರಣೆ:
              ಪ್ರತಿವರ್ಷದಂತೆ ಈ ವರ್ಷವೂ ದಸರಾ ಹಬ್ಬದ ಸಂಭ್ರಮದಲ್ಲಿದ್ದೇವೆ. ಕರೋನದ ಕರಿ ಛಾಯೆಯ ನಡುವೆ ದಸರಾ ಹಬ್ಬದ ಆಚರಣೆ ಮಾಡಬೇಕಾಗಿರುವುದು ಅನಿವಾರ್ಯ.೨ ವರ್ಷಗಳು ಸಾರ್ವಜನಿಕರಿಗೆ ಅವಕಾಶವಿಲ್ಲದೆ, ಮೈಸೂರಿನಲ್ಲಿ  ಮತ್ತು ರಾಷ್ಟ್ರಾದ್ಯಂತ ಎಲ್ಲ ದೇವಾಲಯಗಳಲ್ಲಿ ದಸರಾ ಉತ್ಸವದ ಪೂಜಾರಂಭಗಳು ನಡೆಸಿದ್ದು, ಸಾಕಷ್ಟು ಭಕ್ತರಿಗೆ ನೋವಿನ ಸಂಗತಿಯಾಗಿತ್ತು .ಆದರೆ ಈ ವರ್ಷ ದಸರಾ ಉತ್ಸವದ ಸಂಭ್ರಮಾಚರಣೆ ಮಾಡುತ್ತಿದ್ದೇವೆ.   ಅದರ ಜೊತೆಗೆ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಎಚ್ಚರಿಕೆಯೂ ಸಹ ಅಗತ್ಯ .ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಭಾರತದ ಎಲ್ಲೆಡೆ ಶಕ್ತಿಯ ಆರಾಧನೆ ನಡೆಯುತ್ತದೆ. ಶಕ್ತಿಯ ಹಲವು ರೂಪಗಳಲ್ಲಿ ದುರ್ಗೆ ವಿಶಿಷ್ಟ ದೇವತೆ. ಸದಾ "ದುಷ್ಟರ ಶಿಕ್ಷೆ, ಶಿಷ್ಟರ ರಕ್ಷೆ"ಯಕಾರ್ಯದಲ್ಲಿ  ನಿರತಳಾಗಿರುವ ಈ ಶಕ್ತಿಯ ಆರಾಧನೆಯಲ್ಲಿ ನವರಾತ್ರಿಗೆ ವಿಶೇಷ ಮಹತ್ವವಿದೆ. ನವರಾತ್ರಿಯೆಂದರೆ ಒಂಬತ್ತು ರಾತ್ರಿಗಳ ಸಮೂಹ. ನವರಾತ್ರಿಯ ಒಂದೊಂದು ದಿನವೂ ಒಂದೊಂದು ರೂಪದಲ್ಲಿ ದುರ್ಗೆಯನ್ನು ಪೂಜಿಸಲಾಗುತ್ತದೆ. ಹತ್ತನೇ ದಿನ ವಿಜಯದಶಮಿ.

ನವರಾತ್ರಿಯ/ಶರನ್ನವರಾತ್ರಿಯ ಹಿನ್ನಲೆ :

ಪುರಾಣದಲ್ಲಿ ಬರುವ ಕಥೆಯ ಪ್ರಕಾರ, ಮಹಿಷಾಸುರನೆಂಬ ಎಮ್ಮೆಯ ರೂಪದ ಒಬ್ಬ ಅಸುರ ದೇವತೆಗಳಿಂದ ವರವನ್ನು ಪಡೆದು, 
ತನ್ನ ಸೈನ್ಯದೊಂದಿಗೆ ದೇವಲೋಕಕ್ಕೆ ದಾಳಿ ಮಾಡಿ ದೇವತೆಗಳೊಂದಿಗೆ ಹೊರಾಡುತ್ತಾನೆ. ಆಗ ದೇವತೆಗಳು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರನನ್ನು ಕಾಪಾಡುವಂತೆ ಕೇಳಿಕೊಂಡಾಗ, ಮೂವರು ತಮ್ಮ ಶಕ್ತಿಯನ್ನು ಸೇರಿಸಿ ದೇವತೆಯನ್ನು ಸೃಷ್ಟಿಸುತ್ತಾರೆ. ತ್ರಿಮೂರ್ತಿಗಳ ಶಕ್ತಿಗಳ ಸಂಗಮವಾಗಿದ್ದರಿಂದ ದೇವಿ ದುರ್ಗೆಯ ಅವತಾರವೆತ್ತಿದಳು. ಹೀಗೆ ಅವತಾರವೆತ್ತಿದ ದುರ್ಗೆಯು  ದಶಭುಜದಾರಿಯಾದಳು.ಹತ್ತು ಕೈಗಳನ್ನು ಹೊಂದಿರುವ ಸುಂದರವಾದ ಸ್ತ್ರೀ ಯಾಗಿ ಹುಟ್ಟಿದ ನಂತರ ದೇವತೆಗಳೆಲ್ಲಾ ಆಕೆಗೆ ವಿವಿಧ ಆಯುಧಗಳನ್ನು ನೀಡುತ್ತಾರೆ. ಶಿವನು ತ್ರಿಶೂಲವನ್ನು, ವಿಷ್ಣು ಚಕ್ರವನ್ನು, ವರುಣನು ಪಾಶವನ್ನು ,ಇಂದ್ರನು ವಜ್ರಾಯುಧವನ್ನು, ವಾಯುವು  ಬಾಣಗಳನ್ನು, ದುರ್ಗೆಗೆ ನೀಡಿದರು. ವಸ್ತ್ರಗಳನ್ನು ಮತ್ತು ವಾಹನವಾದ ಸಿಂಹವನ್ನೂ ಪರ್ವತರಾಜ ಹಿಮವಂತನು ನೀಡಿದನು. ಎಲ್ಲಾ ಆಯುಧಗಳಿಂದ ಸನ್ನದ್ಧಳಾದ ದೇವಿಯು ಯುದ್ಧಕ್ಕೆ ಸಿದ್ಧಳಾದಳು.ಮಹಿಷಾಸುರನ  ಅಸುರ ಸೈನ್ಯದ ಮೇಲೆ ಆಕ್ರಮಣ ಮಾಡಿದಳು.೯ ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಮಹಿಷಾಸುರನನ್ನು ದೇವಿಯು ತನ್ನ ಸಿಂಹ ಹಾಗೂ ಆಯುಧಗಳ ಸಹಾಯದಿಂದ ಸಂಹರಿಸಿದಳು. ದುರ್ಗೆಯು ಮಹಿಷಾಸುರನನ್ನು ಸಂಹರಿಸಿದ ದಿನವೇ ವಿಜಯದಶಮಿ. ಆದ್ದರಿಂದ ದುಷ್ಟರ ಸಂಹಾರಕ್ಕಾಗಿ, ಶಿಷ್ಟರ ರಕ್ಷಣೆಗಾಗಿ ನವ ಅವತಾರಗಳನ್ನು ಎತ್ತಿ ಅಸುರರನ್ನು ಸಂಹರಿಸಿದ ಶಕ್ತಿರೂಪಿಣಿ ದುರ್ಗಾದೇವಿ ನವರಾತ್ರಿಯ  ೯ ದಿನಗಳಲ್ಲಿ ದುರ್ಗೆಯ ಶಕ್ತಿಯ ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ ,ಸ್ಕಂದಮಾತಾ ಕಾತ್ಯಾಯನಿ ಕಾಲರಾತ್ರಿ ಮಹಾಗೌರಿ ,ಸಿದ್ಧಿದಾತ್ರಿ ಎಂಬ ದೇವತೆಗಳ ಆರಾಧನೆ ನಡೆಯುತ್ತದೆ. ಅಲ್ಲದೇ  ದುರ್ಗಾದೇವಿಯು  ಮಧು- ಕೈಟಭರನ್ನು ಸಂಹರಿಸಿ,ಮಧುಕೈಟಭ ಭಂಜಿನಿಯಾದಳು.ಕಾಲಾಂತರದಲ್ಲಿ ಶುಂಭ ನಿಶುಂಭರೆಂಬ ದೈತ್ಯರೀರ್ವರು ಸ್ವರ್ಗವನ್ನು ದೇವತೆಗಳಿಂದ ವಶಪಡಿಸಿ ಅಸುರಿ ಗುಣಗಳಿಂದ ಆಳತೊಡಗಿದರು. ದೇವತೆಗಳು ಜಗದಂಬೆಯ ಮೊರೆಹೋದರು. ದಾನವಕುಲ ದಮನಕ್ಕೆ ಪಾರ್ವತಿಯ ಶರೀರ ಕೋಶದಿಂದ ಅವಿರ್ಭವಿಸಿದ ಜಗದಂಬೆಯ ಸುಂದರರೂಪ ಕಂಡು, ಚಂಡ ಮುಂಡರೆಂಬ ಅಸುರರು  ಮೋಹಿತರಾದಾಗ, ಆ ಚಂಡ ಮುಂಡರನ್ನು ಕಾಳಿರೂಪದಿಂದ ಸಂಹರಿಸಿದ ದೇವಿಯು ಚಾಮುಂಡಿ ಎನಿಸಿದಳು.ಇದರಿಂದ ಕೋಪಿಷ್ಟನಾದ ಶುಂಭ ರಕ್ತಬೀಜಾಸುರನನ್ನು ಕಳುಹಿಸಿದ. ರಕ್ತಬೀಜನ ಶರೀರದಿಂದ ಒಂದು ಹನಿ ರಕ್ತ ನೆಲ ಸೋಕಿದರೆ ಆತನಷ್ಟೇ ಬಲಶಾಲಿಯಾದ ಮತ್ತೊಬ್ಬ ದಾನವ ಹುಟ್ಟುತ್ತಿದ್ದ. ಮಹಾಬಲಶಾಲಿಯಾದ ಆತನೊಡನೆ ಕಾದಾಡಿದ ದೇವಿಯು ಸಪ್ತಮಾತೃಕೆಯರಾದ ಬ್ರಾಹ್ಮಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಚಾಮುಂಡಿಯರನ್ನು ಸೃಷ್ಟಿಸಿದಳು. ಇಂದ್ರಾಣಿಯ ವಜ್ರಾಯುಧದ ಘಾತದಿಂದ ರಕ್ತಬೀಜನ ಮೈಯಿಂದ ರಕ್ತ ಸೋರಿ, ಅವನಂತೆ ರೂಪ ಪರಾಕ್ರಮವುಳ್ಳ ದೈತ್ಯರು ಹುಟ್ಟಿದರು. ಇದನ್ನು ಕಂಡ "ಕಾಳಿಯು" ತನ್ನ ಬಾಯಿಯನ್ನು ವಿಸ್ತರಿಸಿ ನಾಲಿಗೆಯಿಂದ ಆತನ ರಕ್ತವನ್ನು ಹೀರಿ ಕುಡಿಯುತ್ತಾ ಶಕ್ತಿಹೀನನಾಗಿ ಮಾಡಿದಳು. ಕೊನೆಗೆ ರಕ್ತಬೀಜನು ದೇವಿಯ ಅಸ್ತ್ರಘಾತದಿಂದ ನಿತ್ರಾಣಗೊಂಡು ರಕ್ತ ಹೀನನಾಗಿ ಮಡಿದನು. ನಂತರ ಶುಂಭ ನಿಶುಂಭರು ಯುದ್ಧಕ್ಕೆ ಬಂದರು. ಘನಘೋರ ಯುದ್ಧದಲ್ಲಿ ದೇವಿಯು ಅವರಿಬ್ಬರನ್ನು ಕೊಂದು "ಶಾಂಭವಿ" ಎನಿಸಿದಳು. ಹೀಗೆ ದೈತ್ಯರನ್ನು ಕೊಂದು ದೇವತೆಗಳನ್ನು ಸಂತುಷ್ಟಗೊಳಿಸಿ ಕಷ್ಟ ಬಂದಾಗ ಸ್ಮರಿಸಿ ದುಷ್ಟ ಸಂಹಾರಿಣಿಯಾಗಿ ಮತ್ತೆ ಅವತರಿಸಿಬರುವೆ ಎಂದು ನುಡಿದಳೆಂದು ಪುರಾಣಗಳಿಂದ ತಿಳಿದುಬರುತ್ತದೆ .
    ದುರ್ಗಾಮಾತೆಯ ನವ ಸ್ವರೂಪಗಳು :
 
 ಜಗಜ್ಜನನಿ ದುರ್ಗಾದೇವಿಯ ಮೊದಲನೇ ಸ್ವರೂಪವನ್ನು' ಶೈಲಪುತ್ರೀ 'ಎಂದು ತಿಳಿಯಲಾಗುತ್ತದೆ .

ವಂದೇ ವಾಂಚಿತಲಾಭಾಯ ಚಂದ್ರಾಧ೯ಕೃತಶೇಖರಾಮ್। 
ವೃಷಾರೂಡಾಂ ಶೂಲಧರಾಂಶೈಲಪುತ್ರಿಂ ಯಶಸ್ವಿನೀಮ್ ॥
೧)
 ಪರ್ವತ ರಾಜ ಹಿಮವಂತನ ಪುತ್ರಿಯಾಗಿ ಅವತರಿಸಿದ ಕಾರಣ "ಶೈಲಪುತ್ರಿ" ಎಂಬ ಹೆಸರಾಯಿತು. ವೃಷಭ ವಾಹನೆಯಾಗಿರುವ ಇವಳ ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲಪುಷ್ಪ ಶೋಭಿತವಾಗಿ ಕಂಗೊಳಿಸುತ್ತದೆ.ಹಿಂದಿನ ಜನ್ಮದಲ್ಲಿ ಪ್ರಜಾಪತಿ ದಕ್ಷನ ಮಗಳಾಗಿ ಜನಿಸಿ, ಸತಿ ಎಂಬ ಹೆಸರನ್ನು ಹೊಂದಿದ್ದ ಇವಳಿಗೆ  ಶಿವನೊಡನೆ ವಿವಾಹವಾಗುತದೆ.ಪ್ರಜಾಪತಿ ದಕ್ಷ ಮಹಾರಾಜ ತಾನು ಆರಂಭಿಸಿದ ಮಹಾಯಜ್ಞಕ್ಕೆ ಶಿವನಿಗೆ ಆಹ್ವಾನ ನೀಡದೆ ಅವಮಾನ ಗೊಳಿಸಿದಾಗ, ಸತಿಯು ತನ್ನ ಪತಿಗಾದ  ಅವಮಾನವನ್ನು ಸಹಿಸದಾದಳು. ಅವಳು ತನ್ನ ಆ ರೂಪವನ್ನು ಕೂಡಲೇ ಅಲ್ಲೇ ಯೋಗಾಗ್ನಿಯಿಂದ ಸುಟ್ಟು ಭಸ್ಮ ಮಾಡಿದಳು .ಈ ದಾರುಣ ದುಃಖದ ಘಟನೆಯನ್ನು ಕೇಳಿ ಶಿವನು ಕ್ರೋಧಾಗ್ನಿಯಿಂದ, ತನ್ನ ಗಣಗಳನ್ನು ಕಳಿಸಿ ದಕ್ಷನ ಯಜ್ಞವನ್ನು ಪೂರ್ಣವಾಗಿ ಧ್ವಂಸ ಮಾಡಿಸಿದ .ಸತಿಯು ಯೋಗಾಗ್ನಿಯಿಂದ ತನ್ನ ಶರೀರವನ್ನು ಭಸ್ಮವಾಗಿ ಸಿ ಮುಂದಿನ ಜನ್ಮದಲ್ಲಿ ಶೈಲರಾಜ ಹಿಮವಂತನ ಪುತ್ರಿಯ ರೂಪದಲ್ಲಿ ಅವತರಿಸಿದಳು. ಅವಳೇ ಶೈಲಪುತ್ರಿ .ಈ ದಿನದ ಉಪಾಸನೆಯಲ್ಲಿ ಯೋಗಿಗಳು ತಮ್ಮ ಮನವನ್ನು 'ಮೂಲಾಧಾರಚಕ್ರ,ದಲ್ಲಿ ನೆಲೆಗೊಳಿಸಿಕೊಳ್ಳುತ್ತಾರೆ. ಇಲ್ಲಿಂದಲೇ ಅವರ ಯೋಗ ಸಾಧನೆಯು ಪ್ರಾರಂಭವಾಗುತ್ತದೆ 

೨) ದುರ್ಗಾದೇವಿಯ ಎರಡನೇ ಸ್ವರೂಪ "ಬ್ರಹ್ಮಚಾರಿಣಿ" .

ದಧಾನ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ।ದೇವೀಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ॥

ಇಲ್ಲಿ 'ಬ್ರಹ್ಮ' ಶಬ್ದದ ಅರ್ಥ ತಪಸ್ಸು ಎಂದಾಗಿದೆ. ಬ್ರಹ್ಮಚಾರಿಣಿ ಅರ್ಥಾತ್ ತಪಸ್ಸಿನ ಚಾರಿಣಿ, ತಪಸ್ಸನ್ನು ಆಚರಿಸುವವಳು ಎಂದರ್ಥ. ಇವಳ ಬಲಗೈಯಲ್ಲಿ ಜಪಮಾಲೆ ಮತ್ತು ಎಡಕೈಯಲ್ಲಿ ಕಮಂಡಲು ಇರುತ್ತದೆ.ಹಿಂದಿನ ಜನ್ಮದಲ್ಲಿ ಇವಳು ಹಿಮಾಲಯನ ಪುತ್ರಿಯಾಗಿ ಅವತರಿಸಿದಾಗ ,ನಾರದರ ಉಪದೇಶದಂತೆ ಭಗವಾನ್ ಶಿವನನ್ನು ಪತಿಯಾಗಿ ಪಡೆದುಕೊಳ್ಳಲು ಅತಿಯಾದ ಕಠಿಣ ತಪಸ್ಸನ್ನು ಮಾಡಿದಳು. ಇಂತಹ ಕಠಿಣ ತಪಸ್ಸಿನ ಕಾರಣ ಇವಳನ್ನು   ತಪಾಶ್ಚಾರಿಣಿ ಅರ್ಥಾತ್ ಬ್ರಹ್ಮಚಾರಿಣಿ ಎಂಬ ಹೆಸರಿನಿಂದ ಕರೆಯಲಾಯಿತು.ಎಲ್ಲಾ ದೇವತೆಗಳೂ ಋಷಿಗಳೂ ಸಿದ್ಧಗಣಮುನಿಗಳು ತಪಸ್ಸನ್ನು ಅಭೂತಪೂರ್ವ ಪುಣ್ಯಕೃತಿ ಎಂದು ಹೇಳುತ್ತಾ ಅವಳನ್ನು ಹೊಗಳತೊಡಗಿದರು. ಬ್ರಹ್ಮದೇವರು ನಿನ್ನ ಮನೋಕಾಮನೆಯು ಎಲ್ಲ ವಿಧದಿಂದ ಪೂರ್ಣವಾದೀತು ಭಗವಾನ್ ಚಂದ್ರಮೌಳಿ ಶಿವನು ನಿನಗೆ ಪತಿಯಾಗಿ ದೊರೆಯುವನು ಈಗ ನೀನು ತಪಸ್ಸನ್ನು ಬಿಟ್ಟು ಹಿಂತಿರುಗು ಎಂದು ಹೇಳಿದಾಗ ಜಗನ್ಮಾತೆ ದುರ್ಗಿಯು ಹಿಂತಿರುಗುವಳು. ಈ ತಾಯಿಯ ಆರಾಧನೆಯಿಂದ ಮನುಷ್ಯರಲ್ಲಿ ತ್ಯಾಗ, ವೈರಾಗ್ಯ, ಸದಾಚಾರ, ಸಂಯಮಗಳು ವೃದ್ಧಿಯಾಗುತ್ತವೆ. ಜೀವನದ ಕಠಿಣ ಸಂಘರ್ಷದಲ್ಲಿಯೂ ಮನಸ್ಸು ಕರ್ತವ್ಯದಿಂದ ವಿಚಲಿತವಾಗಲಾರದು ಎಂಬ ನಂಬಿಕೆ .ಎರಡನೇ ದಿನ ಸಾಧಕನ ಮನಸ್ಸು "ಸ್ವಾಧಿಷ್ಠಾನ ಚಕ್ರದಲ್ಲಿ" ಸ್ಥಿತವಾಗುತ್ತದೆ .ಇಲ್ಲಿ ಯೋಗಿಯು ದೇವಿಯ ಕೃಪೆ ಮತ್ತು ಭಕ್ತಿಯನ್ನು ಪಡೆದುಕೊಳ್ಳುತ್ತಾನೆ.


೩) ಜಗಜ್ಜನನಿ ದುರ್ಗೆಯ ಮೂರನೇ ಶಕ್ತಿಯ ಹೆಸರ  'ಚಂದ್ರಘಂಟಾ'ಎಂದಾಗಿದೆ .

ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈ ಯು೯ತಾ।
 ಪ್ರಸಾದಂ ತನುತೇ ಮಯ್ಯಂ ಚಂದ್ರಘಂಟೇತಿ ವಿಶ್ರುತಾ ॥

ನವರಾತ್ರಿಯ ಉಪಾಸನೆಯಲ್ಲಿ ಮೂರನೇ ದಿನ ಇವಳ ವಿಗ್ರಹದಂತೆ ಪೂಜೆ ಆರಾಧನೆ ಮಾಡಲಾಗುತ್ತದೆ. ಈ ತಾಯಿಯ ಮಸ್ತಕದಲ್ಲಿ ಘಂಟೆಯ ಆಕಾರದ ಅರ್ಧಚಂದ್ರನಿದ್ದಾನೆ. ಇದರಿಂದಲೇ ಇವಳನ್ನು ಚಂದ್ರಘಂಟಾದೇವಿ ಎಂದು ಹೇಳಲಾಗುತ್ತದೆ. ದೇವಿಗೆ ಹತ್ತು ಕೈಗಳಿದ್ದು ಕೈಗಳಲ್ಲಿ ಖಡ್ಗ, ಇತ್ಯಾದಿ ಶಸ್ತ್ರಗಳು ಭೂಷಣ ಪ್ರಾಯವಾಗಿವೆ. ಇವಳ ವಾಹನ ಸಿಂಹವಾಗಿದೆ. ದುಷ್ಟರ ದಮನ ಮತ್ತು ವಿನಾಶ ಮಾಡುವುದರಲ್ಲಿ ಸದಾಕಾಲ ತತ್ಪರಳಾಗಿ  ಇವಳ ಸ್ವರೂಪವು ದರ್ಶನೀಯ ಹಾಗೂ ಆರಾಧಕನಿಗೆ ಅತ್ಯಂತ ಸೌಮ್ಯ ಮತ್ತು ಶಾಂತಿಯಿಂದ ಪರಿಪೂರ್ಣವಾಗಿರುತ್ತದೆ .ಈ ತಾಯಿಯ ವಾಹನ ಸಿಂಹವಾದ್ದರಿಂದ ಇವಳ ಉಪಾಸಕನು ಸಿಂಹದಂತೆ ಪರಾಕ್ರಮಿ ಮತ್ತು ನಿರ್ಭಯನಾಗುತ್ತಾನೆ. ಇವಳ ಗಂಟೆಯ ಧ್ವನಿಯು ಸದಾಕಾಲ ತನ್ನ ಭಕ್ತರ ಪ್ರೇತ, ಬಾಧೆ ಮುಂತಾದವುಗಳಿಂದ ರಕ್ಷಿಸುತ್ತದೆ .ಈ ದಿನ ಸಾಧಕನ ಮನಸ್ಸು "ಮಣಿಪೂರ ಚಕ್ರ"ದಲ್ಲಿ ಪ್ರವೇಶಿಸುತ್ತದೆ .

೪) ಜಗನ್ಮಾತೆ ದುರ್ಗೆಯ ನಾಲ್ಕನೇ ಸ್ವರೂಪದ ಹೆಸರು "ಕೂಷ್ಮಾಂಡಾ" ಎಂದಾಗಿದೆ.

ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವಚ 
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭ ದಾಸ್ತುಮೇ ॥

ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರ ಪಸರಿಸಿತ್ತು .ಆಗ ದೇವಿಯು ತನ್ನ ಮಂದ ಮಧುರ ನಗುವಿನಿಂದ, ಬ್ರಹ್ಮಾಂಡವನ್ನು ಸೃಷ್ಟಿಸಿದಳು. ಆದ್ದರಿಂದ ಕೂಷ್ಮಾಂಡದೇವಿ ಎಂದು ಕರೆಯುವರು .ಇವಳಿಗೆ ಎಂಟು ಭುಜಗಳಿದ್ದು ,ಅಷ್ಟಭುಜ ದೇವಿ ಎಂದು ಖ್ಯಾತಳಾಗಿದ್ದಾಳೆ. ಇವಳ ವಾಹನ ಸಿಂಹವಾಗಿದೆ.ಕರಗಳಲ್ಲಿ ಅಮೃತ ತುಂಬಿದ ಕಲಶ, ಕಮಂಡಲು ಹಿಡಿದಿರುತ್ತಾಳೆ . ಸಂಸ್ಕೃತದಲ್ಲಿ ಕುಂಬಳಕಾಯಿಯನ್ನು ಕೂಷ್ಮಾಂಡಾವೆಂದು ಹೇಳುತ್ತಾರೆ. ಬಲಿಯಲ್ಲಿ ಕುಂಬಳಕಾಯಿಯ ಬಲಿಯೇ ಇವಳಿಗೆ ಸರ್ವಾಧಿಕಪ್ರಿಯವಾಗಿದೆ ಈ ಕಾರಣದಿಂದಲೂ ಇವಳನ್ನು ಕೂಷ್ಮಾಂಡಾದೇವಿ ಎಂದು ಹೇಳುತ್ತಾರೆ.ಈ ದಿನ ಸಾಧಕನ ಮನಸ್ಸು "ಅನಾಹತ ಚಕ್ರ"ದಲ್ಲಿ ನೆಲೆ ನಿಲ್ಲುತ್ತದೆ. ಜಗಜ್ಜನನಿ ಕೂಷ್ಮಾಂಡಾ ದೇವಿ ಯ ಉಪಾಸನೆಯಿಂದ ಭಕ್ತರ ಎಲ್ಲಾ ರೋಗ, ಶೋಕಗಳು ನಾಶವಾಗುತ್ತವೆ. ಇವಳನ್ನು ಭಕ್ತಿಯಿಂದ ಆರಾಧಿಸಿದರೆ ಯಶ, ಬಲ, ಆರೋಗ್ಯ ವೃದ್ಧಿಯಾಗುತ್ತದೆ .

೫) ಜಗನ್ಮಾತೆ ದುರ್ಗೆಯ ಐದನೇ ಸ್ವರೂಪವನ್ನು'ಸ್ಕಂದಮಾತಾ' ಎಂಬ ಹೆಸರಿನಿಂದ ತಿಳಿಯಲಾಗುತ್ತದೆ.

ಸಿಂಹಾಸನಗತಾ  ನಿತ್ಯಂ ಪದ್ಮಾಶ್ರಿತಕರದ್ವಯಮ್।
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ॥

    ಕಾರ್ತಿಕೇಯನನ್ನು ಷಣ್ಮುಖನೆಂದೂ, (ಆರು ಮುಖಗಳನ್ನು ಹೊಂದಿದವ) ಸ್ಕಂಧ ಎಂದೂ, ಕರೆಯುತ್ತಾರೆ. ಸ್ಕಂದನ ತಾಯಿಯಾಗಿದ್ದರಿಂದ ದುರ್ಗೆಯನ್ನು 'ಸ್ಕಂದಮಾತಾ' ಎಂದು ಕರೆಯುತ್ತಾರೆ.ಸ್ಕಂದಮಾತಾ ವಿಗ್ರಹದಲ್ಲಿ ಭಗವಾನ್ ಸ್ಕಂದನು ಬಾಲರೂಪದಲ್ಲಿ ಇವಳ ತೊಡೆಯ ಮೇಲೆ ಕುಳಿತಿರುತ್ತಾನೆ .ಸ್ಕಂದ ಮಾತೆಯಾದ ಇವಳಿಗೆ ನಾಲ್ಕು ಭುಜ ಗಳಿರುತ್ತವೆ. ಇವಳು ಬಲಗಡೆಯ ಮೇಲಿನ ಕೈಯಿಂದ ಸ್ಕಂದನನ್ನು ತೊಡೆಯಲ್ಲಿ ಹಿಡಿದಿರುವಳು .ಮೇಲೆ ಇರುವ ಎರಡೂ ಕೈಗಳಲ್ಲಿ ಕಮಲ ಪುಷ್ಪವನ್ನು ಹಿಡಿದಿರುವಳು .ಸ್ಕಂದಮಾತೆಯು ಸಿಂಹವಾಹನಧಾರಿಯಾಗಿದು ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ .ಇದೇ ಕಾರಣದಿಂದ ಇವಳನ್ನು 'ಪದ್ಮಾಸನದೇವಿ' ಎಂದು ಹೇಳುತ್ತಾರೆ . ಉಪಾಸನೆಯಿಂದ ಬಾಲರೂಪಿ ಭಗವಂತ ಸ್ಕಂದನ ಉಪಾಸನೆಯು ಕೂಡ ಆಗುತ್ತದೆ. ಆದ್ದರಿಂದ ಏಕಾಗ್ರಭಾವದಿಂದ ಮನಸ್ಸನ್ನು ಪವಿತ್ರ ವಾಗಿರಿಸಿಕೊಂಡು ಜಗಜ್ಜನನಿಯನ್ನು ಧ್ಯಾನಿಸಬೇಕು. ಈ ದಿನ ಸಾಧಕನ ಮನಸ್ಸು "ವಿಶುದ್ಧ ಚಕ್ರ"ದಲ್ಲಿ ನೆಲೆ ನಿಲ್ಲುತ್ತದೆ. 
೬)  ಜಗನ್ಮಾತೆ ದುರ್ಗೆಯ ಆರಾಧನೆ ಸ್ವರೂಪವನ್ನು 'ಕಾತ್ಯಾಯನೀ' ಎಂದು ಕರೆಯಲಾಗಿದೆ .

ಚಂದ್ರಹಾಸೋಜ್ವಲಕರಾ ಶಾರ್ಧೂಲವರವಾಹನಾ।
ಕಾತ್ಯಾಯನೀ ಶುಭಂ ದದ್ಯಾದ್ದೇವೀ ದಾನವಘಾತಿನೀ॥

'ಕತ' ಎಂಬ ಓರ್ವ ಪ್ರಸಿದ್ಧ ಋಷಿ ಮುನಿ.  ಅವರ ಪುತ್ರನ ಹೆಸರು ಕಾತ್ಯ. ಇದೇ ಕಾತ್ಯ ಗೋತ್ರದಲ್ಲಿ ವಿಶ್ವಪ್ರಸಿದ್ಧ ಮಹರ್ಷಿ ಕಾತ್ಯಾಯನರು ಹುಟ್ಟಿದರು. ಇವರು ಭಗವತಿ ಪರಾಂಬರಿಕೆಯ ಉಪಾಸನೆ ಮಾಡುತ್ತಾ, ಅನೇಕ ವರ್ಷಗಳವರೆಗೆ ಭಗವತಿಯು ತಮ್ಮ ಮನೆಯಲ್ಲಿ ಪುತ್ರಿಯಾಗಿ ಅವತರಿಸಬೇಕೆಂಬ ಇಚ್ಛೆ ಹೊಂದಿ ಕಠಿಣ ತಪಸ್ಸನ್ನಾಚರಿಸಿದ್ದರು. ಭಗವತಿಯು ಆ ಪ್ರಾರ್ಥನೆಯನ್ನು ನಡೆಸಿಕೊಟ್ಟಳು. ಮಹರ್ಷಿ ಕಾತ್ಯಾಯನರ ಪುತ್ರಿ ರೂಪದಿಂದ ಅವತರಿಸಿದ್ದರಿಂದ' ಕಾತ್ಯಾಯನಿ' ಎಂಬ ಹೆಸರು ಬಂದಿತೆಂಬುದು ಪುರಾಣದಿಂದ ತಿಳಿದುಬರುತ್ತದೆ .ಚತುರ್ಬಾಹುಗಳನ್ನು ಹೊಂದಿದ ಕಾತ್ಯಾಯನಿ ಸಿಂಹ ವಾಹನಧಾರಿಣಿಯಾಗಿದ್ದಾಳೆ. ಕಾತ್ಯಾಯನೀ ದೇವಿಯ ಉಪಾಸನೆಯ ಮೂಲಕ ಮನುಷ್ಯನಿಗೆ ರೋಗ, ಶೋಕ, ಸಂತಾಪ, ಭಯ ಮುಂತಾದವುಗಳು ನಾಶವಾಗುತ್ತವೆ .ಉಪಾಸನೆಯ ಈ ದಿನ ಸಾಧಕನ ಮನಸ್ಸು 'ಆಜ್ಞಾಚಕ್ರ'ದಲ್ಲಿ ನೆಲೆಗೊಳ್ಳುತ್ತದೆ .

೭) ಜಗನ್ಮಾತೆ ದುರ್ಗಿಯು ಏಳನೇ ಶಕ್ತಿಯನ್ನು 'ಕಾಲರಾತ್ರಿ 'ಎಂಬ ಹೆಸರಿನಿಂದ ತಿಳಿಯಲಾಗುತ್ತದೆ .

ಕಾಲರಾತ್ರಿಮ೯ಹಾರಾತ್ರಿ ಮೋ೯ಹರಾತ್ರಿಶ್ಚ ದಾರುಣಾ। 
ತ್ವಂ ಶ್ರೀಸ್ತವಮೀಶ್ವರೀ ತ್ವಂ ಹ್ರೀಸ್ತವಂ ಬುದ್ಧಿಬೋ೯ಧಲಕ್ಷಣಾ॥  

'ಕಾಲರಾತ್ರಿ' ದೇವಿಯ ಶರೀರದ ಬಣ್ಣವು ದಟ್ಟವಾದ ಅಂಧಕಾರದಂತೆ ಪೂರ್ಣವಾಗಿ ಕಪ್ಪಾಗಿದೆ. ತಲೆಯ ಕೂದಲು ಬಿಟ್ಟುಕೊಂಡು ಹರಡಿಕೊಂಡಿದೆ. ಕತ್ತಿನಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ ಇದ್ದು, ಮೂರು ಕಣ್ಣುಗಳಿವೆ. ಈ ಮೂರು ಕಣ್ಣುಗಳು ಬ್ರಹ್ಮಾಂಡದಂತೆ ಗೋಲಾಕಾರವಾಗಿದೆ.ಚತುರ್ಬಾಹು ಧಾರಿಯಾದ ಇವಳ ವಾಹನ ಕತ್ತೆಯಾಗಿದೆ.ಮೇಲಕ್ಕೆ ಎತ್ತಿರುವ ಬಲಕೈಯು ವರ ಮುದ್ರೆಯಿಂದ, ಎಲ್ಲರಿಗೆ ವರದಾನ ನೀಡುತ್ತಿರುವಳು ಮತ್ತು  ಅಭಯ ಮುದ್ರೆಯನ್ನು ಹೊಂದಿದೆ .ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗವಿದೆ. ಇನ್ನೊಂದು ಕೈಯಲ್ಲಿ ಕಬ್ಬಿಣದ ಆಯುಧವಿದೆ .ಕಾಲರಾತ್ರೀ ದುರ್ಗೆಯ ಸ್ವರೂಪವು ನೋಡಲು ಅತ್ಯಂತ ಭಯಂಕರವಾಗಿದೆ. ಆದರೆ ಇವಳು ಯಾವಾಗಲೂ ಶುಭ ಫಲವನ್ನೇ ಕೊಡುವವಳು ಆಗಿದ್ದರಿಂದ ಈಕೆಯನ್ನು 'ಶುಭಂಕರಿ 'ಎಂದೂ ಸಹ ಕರೆಯುತ್ತಾರೆ. ಜಗನ್ಮಾತೆ ಕಾಲರಾತ್ರಿಯು ದುಷ್ಟರ ವಿನಾಶ ಮಾಡುವವಳಾಗಿದ್ದಾಳೆ. ದಾನವ, ದೈತ್ಯ, ರಾಕ್ಷಸ, ಭೂತ, ಪ್ರೇತ ಮುಂತಾದವುಗಳು ಇವಳ ಸ್ಮರಣೆಯಿಂದಲೇ ಭಯಭೀತರಾಗಿ ಓಡಿಹೋಗುತ್ತವೆ.ಈ ತಾಯಿಯ ಉಪಾಸಕರಿಗೆ ಅಗ್ನಿ, ಜಲ, ಜಂತು, ಶತ್ರು, ರಾತ್ರಿ ಭಯ ಇರುವುದಿಲ್ಲ .ಈ ದಿನ ಸಾಧಕನ ಮನಸ್ಸು 'ಸಹಸ್ರಾರ ಚಕ್ರದಲ್ಲಿ' ನೆಲೆಗೊಳ್ಳುತ್ತದೆ. 

೮) ಜಗನ್ಮಾತೆ ದುರ್ಗಾದೇವಿಯ ಎಂಟನೇ ಶಕ್ತಿಯ ಹೆಸರು 'ಮಹಾಗೌರಿ' ಎಂದಾಗಿದೆ .

 ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿಃ ।
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ॥ 

    ಈ ತಾಯಿಯ ಎಲ್ಲ ವಸ್ತ್ರ ಹಾಗೂ ಭೂಷಣಗಳು ಬಿಳಿಯಾದಾಗಿವೆ .ಈಕೆಯು ಎಂಟು ವರ್ಷದ ಬಾಲಕಿ ಸ್ವರೂಪಿಣಿ ಹೀಗಾಗಿ 'ಅಷ್ಟವರ್ಷಾ ಭವೇದ ಗೌರಿ'ಎನ್ನುವರು. ಇವಳಿಗೆ ನಾಲ್ಕು ಭುಜಗಳಿದ್ದು, ವಾಹನ  ವೃಷಭವು ಬೆಳ್ಳಗಿದ್ದು, ಇವಳ ಮೇಲಿನ ಬಲಗೈಯಲ್ಲಿ ಅಭಯಮುದ್ರೆ ಮತ್ತು ಕೆಳಗಿನ ಬಲಗೈಯಲ್ಲಿ ತ್ರಿಶೂಲವಿದೆ.ಎಡಭಾಗದ ಒಂದುಕೈಯಲ್ಲಿ ಡಮರು ಮತ್ತೊಂದು ಕೈಯು ವರಮುದ್ರೆರೂಪ.ಈಕೆಯು ಪಾರ್ವತಿ ರೂಪದಲ್ಲಿ ಶಿವನನ್ನು ಪತಿಯಾಗಿ ಪಡೆಯಲು ಕಠಿಣವಾದ ತಪಸ್ಸನ್ನು ಮಾಡುತ್ತಿದ್ದಾಗ, ಇವಳ ಶರೀರವು ಪೂರ್ಣವಾಗಿ ಕಪ್ಪಾಗಿತ್ತು .ಇವಳ ತಪಸ್ಸಿಗೆ ಸಂತುಷ್ಟನಾದ ಶಿವನು ಇವಳ ಶರೀರವನ್ನು ಗಂಗೆಯ ಪವಿತ್ರ ಜಲದಿಂದ ಪ್ರೋಕ್ಷಿಸಿದಾಗ, ವಿದ್ವತ್ತಿನಂತೆ ಶರೀರವು ಪ್ರಕಾಶಮಾನವಾಗಿ ಬೆಳ್ಳಗಾಯಿತು.ಅಂದಿನಿಂದ ಇವಳ ಹೆಸರು" ಗೌರಿ" ಎಂದಾಯಿತು ಎಂದು ಪುರಾಣಗಳಿಂದ ತಿಳಿದುಬರುತ್ತದೆ .ಆದ್ದರಿಂದ ಈ ತಾಯಿಯ ಉಪಾಸನೆಯಿಂದ ಭಕ್ತರ ಎಲ್ಲ ಕಲ್ಮಶಗಳು ತೊಳೆದು ಹೋಗುತ್ತವೆ ಎಂಬ ನಂಬಿಕೆ ಇದೆ .ಈ ಜಗಜ್ಜನನಿಯ ಧ್ಯಾನ ಸ್ಮರಣೆ ಪೂಜಾ ಆರಾಧನೆಯಿಂದ ಭಕ್ತರಿಗೆ ಎಲ್ಲ ವಿಧದಿಂದ ಶ್ರೇಯಸ್ಕರವಾಗಿದೆ. ಆದ್ದರಿಂದ ಪ್ರತಿಯೊಬ್ಬ ಭಕ್ತನೂ ಮಹಾಗೌರಿಯನ್ನು 
ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ।
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ ॥     ಎಂದು ಪ್ರಾರ್ಥಿಸುತ್ತಾರೆ .

೯) ಜಗನ್ಮಾತೆ ದುರ್ಗಾದೇವಿಯ ಒಂಭತ್ತನೇ ಶಕ್ತಿಯ ಹೆಸರು 'ಸಿದ್ದಿಧಾತ್ರಿ' ಎಂದು ತಿಳಿಯುತ್ತದೆ .
ಸಿದ್ದಗಂಧರ್ವಯಕ್ಷಾದ್ಯೆೈ ರಸೂರೈರಮರೆೈರಪಿ
 ಸೇವ್ಯಮಾನ ಸದಾ ಭೂಯಾತ್ ಸಿದ್ದಿದಾ ಸಿದ್ದಿದಾಯಿನೀ॥

ಮಾರ್ಕಂಡೇಯ ಪುರಾಣ ಕ್ಕನುಸಾರ ಅಣಿಮಾ, ಮಹಿಮಾ, ಗರಿಮಾ ,ಲಘಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶತ್ವ ,ಮತ್ತು ವಶಿತ್ವ ಎಂಬ ಎಂಟು ಸಿದ್ಧಿಗಳಲ್ಲಿ ಹಾಗೂ ಶ್ರೀಕೃಷ್ಣ ಜನ್ಮಖಂಡದಲ್ಲಿ ಹದಿನೆಂಟು ಸಿದ್ಧಿಗಳಿವೆ ಎಂದು ತಿಳಿಸಲಾಗುತ್ತದೆ. ಜಗಜ್ಜನನಿ 'ಸಿದ್ಧಿಧಾತ್ರಿ' ದೇವಿಯು ಭಕ್ತರಿಗೆ ಮತ್ತು ಸಾಧಕರಿಗೆ ಇವೆಲ್ಲಾ ಸಿದ್ಧಿಗಳನ್ನು ಪೂರೈಸುತ್ತಾಳೆ .ಈ ಸಿದ್ಧಿಧಾತ್ರಿ ದೇವಿಯ ಅನುಗ್ರಹದಿಂದಲೇ ಶಿವನ ಅರ್ಧ ಶರೀರವು  ದೇವಿಯದಾಗಿತ್ತು. 'ಅರ್ಧನಾರೀಶ್ವರ' ಎಂಬ ಹೆಸರಿನಿಂದ ಪ್ರಸಿದ್ಧನಾದನು.  ಚತುರ್ಭುಜ ಧಾರಿಯಾಗಿ  ಕಮಲ ಪುಷ್ಪದ ಮೇಲೆ ವಿರಾಜಮಾನಳಾದ ತಾಯಿ ಬಲಗೈಯಲ್ಲಿ ಚಕ್ರ ಹಾಗೂ ಗದೆಗಳನ್ನು ,ಎಡಗಡೆಯ ಕೈಯಲ್ಲಿ ಶಂಖ ಮತ್ತು ಕಮಲ ಪುಷ್ಪವನ್ನು ಧರಿಸಿದ್ದಾಳೆ. ಈ ದಿನ ಶಾಸ್ತ್ರೀಯ ವಿಧಿ ವಿಧಾನದಿಂದ ಪೂರ್ಣ ನಿಷ್ಠೆಯಿಂದ ಸಾಧನೆ ಮಾಡುವ ಸಾಧಕರಿಗೆ ಎಲ್ಲ ಸಿದ್ಧಿಗಳು ಪ್ರಾಪ್ತವಾಗುತ್ತವೆ ಎಂಬ ನಂಬಿಕೆ .ನವದುರ್ಗೆಯರಲ್ಲಿ ಸಿದ್ಧಿಧಾತ್ರಿ ದೇವಿಯು ಕೊನೆಯವಳಾಗಿದ್ದಾಳೆ.ಭಗವತಿ ಸಿದ್ಧಿಧಾತ್ರಿಯ ಈ ಚರಣಗಳ ಸಾನಿಧ್ಯವನ್ನು ಪಡೆಯಲು ನಾವು ನಿರಂತರ ನಿಯಮ ನಿಷ್ಠರಾಗಿ ತಾಯಿಯ ಉಪಾಸನೆ ಮಾಡಬೇಕು ಇದರಿಂದ ಸಂಸಾರದ ಅಸಾರತೆಯನ್ನು ನೀಗಿ ಶಾಂತಿದಾಯಕ ಅಮೃತ ಜೀವನ ಪ್ರಾಪ್ತವಾಗುತ್ತದೆಎಂದು ಶಾಸ್ತ್ರಗಳಿಂದ ತಿಳಿದುಬರುವದು. 

ಸ್ತ್ರೀಯನ್ನು ಶಕ್ತಿ ಸ್ವರೂಪಿಣಿ ಎಂದು ನಮ್ಮ ಪೂರ್ವಜರು ಕರೆದರು . "ಸರ್ವೇಷಾಂ ಜಗತಾ ಮೇಷಾಂ ಮಾತಾ ಶಕ್ತಿ;ಪಿತಾ ಶಿವ"ಅಂದರೆ ಶಿವನು ತಂದೆ, ಶಕ್ತಿಯು ತಾಯಿ ಎಂದು. ಹಾಗಾಗಿಯೇ ಜಗನ್ಮಾತಾಪಿತ ಯಾರೆಂದು ಕೇಳಿದರೆ ನಿಸ್ಸಂಶಯವಾಗಿ ಪಾರ್ವತಿ ಪರಮೇಶ್ವರರೆಂದು  ಎಂದು ಹೇಳಬಹುದು. ಆದಿ ಗುರು ಶ್ರೀ ಶಂಕರಾಚಾರ್ಯರ ಸೌಂದರ್ಯಲಹರಿ ಎಂಬ ಶ್ಲೋಕ ಶತಕದ ಮೊದಲ ಸ್ತೋತ್ರದಲ್ಲಿ  ಜಗನ್ಮಾತೆಯ ಸ್ಥಾನವನ್ನು ಈ ರೀತಿ ನಿರೂಪಿಸುತ್ತಾರೆ .

ಶಿವಃ  ಶಕ್ತ್ಯಾಯುಕೋ ಯದಿ ಭವತಿ ಶಕ್ತಃ ಪ್ರಭವಿತುಂ 
ನ ಚೇದೇವಂ ದೇವ ನ ಖಲು ಕುಶಲಃ ಸ್ಪಂದಿತುಮಪಿ। 
ಆತಸ್ತಾವಮಾರಾದ್ಯಂ  ಹರಿಹರವಿರಿಂಚಾದಿ ಭಿರಪಿ 
ಪ್ರಣಂತುಂ ಸ್ತೋತುಂ ವಾ  ಕಥಮಕೃತಪುಣ್ಯ:ಪ್ರಭವತಿ॥ 

ಅಂದರೆ ಪರಮೇಶ್ವರನು ಶಕ್ತಿಯೊಡನೆ ಕೂಡಿದರೆ ಮಾತ್ರ ಪ್ರಪಂಚ ಸೃಷ್ಟಿಸಲು ಸಮರ್ಥನಾಗುತ್ತಾನೆ. ಹೀಗೆ ಅವನು ಶಕ್ತಿಯೊಂದಿಗೆ ಕೂಡದಿದ್ದರೆ ಚಲಿಸುವುದಕ್ಕೂ ಸಮರ್ಥನಾಗುವುದಿಲ್ಲ .ಆದುದರಿಂದ ಹರಿಹರಬ್ರಹ್ಮಾದಿಗಳ ಪೂಜೆಗೆ ಅಹ೯ಳಾದ ನಿನ್ನನ್ನು, ಪುಣ್ಯವನ್ನು ಮಾಡದೆ ಇರುವವನು ನಮಸ್ಕರಿಸುವುದಕ್ಕಾಗಲೀ, ಸ್ತುತಿಸುವ ವುದಕ್ಕಾಗಲೀ ಹೇಗೆ ಸಮರ್ಥನಾಗುವನು ಎಂದಿದ್ದಾರೆ. ಮಗು ತಾಯಿಯನ್ನು ಪ್ರಾರ್ಥಿಸುವಂತೆ ಶ್ರೀಶಂಕರಾಚಾರ್ಯರು ಇಲ್ಲಿ ಜಗನ್ಮಾತೆಯನ್ನು ಪ್ರಾರ್ಥಿಸುತ್ತಾರೆ .ಅವರು ಸ್ವತಃ   ಶ್ರೀವಿದ್ಯಾ ಸರಸ್ವತಿಯ ಉಪಾಸಕರಾಗಿದ್ದು ಆನಂದಲಹರೀ, ಸೌಂದರ್ಯಲಹರೀ, ಲಲಿತಾ ತ್ರಿಶತಿ ಭಾಷಾ ಮುಂತಾದ ಗ್ರಂಥಗಳನ್ನು ರಚಿಸಿದ್ದಾರೆ .
ಇಂತಹ ಶಕ್ತಿ ಸ್ವರೂಪಿಣಿಯಾದ ದುರ್ಗೆಯ ಆರಾಧನೆಯನ್ನು ನವರಾತ್ರಿಯ ೯ದಿನಗಳಲ್ಲಿ ಪ್ರತಿದಿನವೂ ವಿಶಿಷ್ಟವಾಗಿ ಪೂಜೆಯನ್ನು ಸಲ್ಲಿಸುತ್ತಾರೆ.

             ದುರ್ಗೆಯು ರಾಕ್ಷಸರನ್ನು ಸಂಹರಿಸಿ ವಿಜಯ ಸಾಧಿಸಿದ ದಿನ. ಇದು ತ್ರೇತಾಯುಗದ ಶ್ರೀರಾಮ ರಾವಣನನ್ನು ಕೊಂದ ದಿನ. ಹಾಗೂ ದ್ವಾಪರಯುಗದಲ್ಲಿ ಪಾಂಡವರು ಕೌರವರನ್ನು ಸೋಲಿಸಿದ ದಿನವೂ ಹೌದು. ದಸರಾ ಎನ್ನುವ ಶಬ್ದದ ಉತ್ಪತ್ತಿಯು 'ದಶಹರಾ' ಎಂದು ಇದೆ .ದಶ ಎಂದರೆ ಹತ್ತು ,ಹರಾ ಎಂದರೆ ಸೋಲು .ಅಂದರೆ ಹತ್ತು ದಿಕ್ಕುಗಳಲ್ಲಿನ ದಿಕ್ಪಾಲಕರು, ಗಣರು ಮುಂತಾದವರ ಮೇಲೆ ನಿಯಂತ್ರಣವಿರುತ್ತದೆ. ಅಸುರ ಶಕ್ತಿಯ ನಾಶದ ವಿಜಯ ಸಂಕೇತವಾದ ದಿನವೇ ವಿಜಯದಶಮಿ. ಇದಕ್ಕಾಗಿಯೇ ದಶಹರಾ ಅಥವಾ ದಸರಾ ಅಥವಾ ವಿಜಯದಶಮಿ ಎಂಬ ಹೆಸರುಗಳಿವೆ .ದಸರಾ ಎಂದ ತಕ್ಷಣವೇ ನಮ್ಮ ಕಣ್ಮುಂದೆ  ಬರುವ ಘಟನೆ ಮೈಸೂರು ದಸರಾ ಉತ್ಸವದ ಜಂಬೂ ಸವಾರಿಯ ಮರೆಯಲಾಗದ ಕ್ಷಣಗಳು .ಬಂಗಾರದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ವಿಗ್ರಹವನ್ನು ಹೊತ್ತ ಗಜರಾಜ ಪಡೆಯನು  ನೋಡಲು ಕಣ್ಣುಗಳೆರಡು ಸಾಲದು .ದಸರಾ ಉತ್ಸವಕ್ಕೂ, ಮೈಸೂರಿಗೂ ಅವಿನಾಭಾವ ಸಂಬಂಧ. ಹೀಗಾಗಿ  ನಮ್ಮ ಹೆಮ್ಮೆಯ ಮೈಸೂರಿನ ಬಗ್ಗೆ ಬರೆದ ಕವನ ನೆನಪಿಗೆ ಬರುತ್ತದೆ .

  ಕವನದ ಶೀರ್ಷಿಕೆ: ಭಾರತದ ಹೆಮ್ಮೆಯ ನಗರ

ಭರತಖಂಡದ ಕೂಸು ಕರುನಾಡಿನ ಕುಡಿಯು
ಸಾಂಸ್ಕೃತಿಕ ರಾಜಧಾನಿ ಅರಮನೆಗಳ ನಗರ
ನಮ್ಮ ಹೆಮ್ಮೆಯ ಮೈಸೂರು ನೋಡಾ।

ಚಾಮುಂಡೇಶ್ವರಿ ತಾಯಿ ಮಹಿಷಾಸುರನನ್ನು ಸಂಹರಿಸಲು 
ಮಹೇಷಾಸುರನೂರು ಮಹಿಷಪುರಿಯಾಗಲು
ಮಹಿಷಪುರಿಯೇ ಮೈಸೂರೆಂದಾಯಿತು ನೋಡಾ।

ಮೊದಲರಸು ಯದುರಾಯ ಯದುವಂಶದ ಸ್ಥಾಪಕ  
ನವರಾತ್ರಿ ಉತ್ಸವದ ಚಾಲಕ ರಾಜಒಡೆಯರನೆಂಬ ಕುಲತಿಲಕ 
ರಾಮರಾಜ್ಯದ ಕನಸೊತ್ತು ಒಡೆಯರು ರಾಜ್ಯವಾಳಿದರು ನೋಡಾ।

ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜರ್ಷಿಯನಿಸಿದ
ಶಿಕ್ಷಣದ ಬೆನ್ನೆಲುಬಾಗಿ ವಿಶ್ವವಿದ್ಯಾನಿಲಯ ಸ್ಥಾಪಿಸಿದ 
ನೂತನ ಮೈಸೂರು ಅರಮನೆಯ ನಿರ್ಮಾತೃ ಎನಿಸಿದ ನೋಡಾ।

ವಿಶ್ವೇಶ್ವರಯ್ಯನಂತ ಅಭಿಯಂತರನ ಆಶ್ರಯತಾಣ 
ಚೌಡಯ್ಯನಂತ ಪಿಟೀಲುವಾದಕನ ಸಂಗೀತನೆಲೆ 
ವಿಷ್ಣುವರ್ಧನನಂತ  ಮೇರುನಟನ ಜನ್ಮಭೂಮಿ ನೋಡಾ।

ನಾಡಿಗಾಗಿ ಹೋರಾಡಿದರು ಹೈದರಾಲಿ ಟೀಪು ಸುಲ್ತಾನರು 
ನಾಡ ಜನರಿಗಾಗಿ ಸೇವೆ ಸಲ್ಲಿಸಿದರು ಸಂಸ್ಥಾನದ ದಿವಾನರು 
ಧರ್ಮಸಾಮರಸ್ಯದ ಪುಣ್ಯಭೂಮಿಯಾಗಿಸಿದರು ನೋಡಾ।

ಬ್ರಿಟಿಷರನ್ನು  ಕಲಿತನದಿ ಎದುರಿಸಿದರು ಒಡೆಯರು 
ಸ್ವಾತಂತ್ರ್ಯಾನಂತರ ಮೈಸೂರು ರಾಜ್ಯದವರಾದರು 
ಭಾಷಾಏಕೀಕರಣದಿ ವಿಶಾಲ ಮೈಸೂರು ರಾಜ್ಯದವರಾದರು ನೋಡಾ। 

ಮೈಸೂರು ಮಲ್ಲಿಗೆ ಗಂಧದೆಣ್ಣೆಯ ಪರಿಮಳ
ಮೈಸೂರಪಾಕ್ ಮೈಲಾರಿದೋಸೆಯ ಸವಿರುಚಿ
ಮೈಸೂರು ಪೇಟಾ ರೇಷ್ಮೆ ಸೀರೆಗೆ ಜನ ಮನಸೋತಿದೆ ನೋಡಾ।

ಚಾಮುಂಡೇಶ್ವರಿಗೆ ನವರಾತ್ರಿ ಹಬ್ಬದ ತಯಾರಿ
ನಾಡಹಬ್ಬ ದಸರಾ ಉತ್ಸವದ ಜಂಬೂಸವಾರಿ
ದೇಶ ವಿದೇಶಿಗರನ್ನು ಚುಂಬಕದಂತೆ ಸೆಳೆದಿದೆ ನೋಡಾ।

ಗಜಪಡೆಯ ಅಭಿಮನ್ಯುವಿನ ಮನಮೋಹಕ ನಡಿಗೆ 
ಪೋಲಿಸ್ ಬ್ಯಾಂಡ್ ತಾಳವಾದ್ಯಗಳ ಆಕರ್ಷಕ ಮೇಳ 
ಸ್ತಬ್ಧಚಿತ್ರಗಳು ಜಾನಪದ ನೃತ್ಯಗಳು ಕಣ್ಮನ ತಣಿಸಿವೆ ನೋಡಾ।

ವಿಜಯದಶಮಿಯ ಹಿಂದಿನ ದಿನ ನವಮಿಯಂದು ಆಯುಧಪೂಜೆಯಾಗಿರುವುದರಿಂದ ಈ ದಿನ ಹಿಂದೆ ರಾಜರು, ಸಾಮಂತರು, ಸರದಾರರು, ತಮ್ಮ ಶಸ್ತ್ರಗಳನ್ನು ಪೂಜೆ ಮಾಡುತ್ತಿದ್ದರು .ಈಗಲೂ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ನವಮಿಯಂದು ಆಯುಧ ಪೂಜಾ ಪದ್ದತಿ ಇದೆ .ದಶಮಿಯ ದಿನ ಬನ್ನಿ ವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ /ಬನ್ನಿಯನ್ನು ವಿನಿಯೋಗ ಮಾಡುವ ಮೂಲಕ ಎಲ್ಲರ ಜೀವನ ಬಂಗಾರದಂತಾಗಲಿ ಎಂದು ಶುಭ ಕೋರುವುದು ವಾಡಿಕೆ.ರೈತರು ಮಳೆಗಾಲದಲ್ಲಿ ಬಿತ್ತಿದ ಪ್ರಥಮ ಪೈರು ಮನೆಗೆ ಬಂದಾಗ ಈ ಉತ್ಸವ ಆಚರಿಸುತ್ತಿದ್ದರು ಇಂದಿಗೂ ಘಟ ಸ್ಥಾಪನೆಯ ದಿನ ಕಲಶದ ಕೆಳಗಿನ ಪೀಠದಲ್ಲಿ ೯ ಧಾನ್ಯಗಳನ್ನು ಬಿತ್ತುತ್ತಾರೆ. ದಸರಾ ವಿಜಯದಶಮಿಯ ದಿನ ಈ ಧಾನ್ಯದ ಮೊಳಕೆಗಳನ್ನು ತೆಗೆದು ತಾಯಿಗೆ ಅರ್ಪಿಸುವುದು ವಾಡಿಕೆ .ಸರ್ವೇ ಜನಃ ಸುಖಿನೋ ಭವಂತು ಎನ್ನುವಂತೆ ಸರ್ವರು ತಾಯಿ ದುರ್ಗೆಯನ್ನು ಪೂಜಿಸಿ ಈ ದಸರಾ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳೋಣ .ಮುಖ್ಯವಾಗಿ ಮಹಿಳೆಯರು ೯ ದಿನಗಳ ಕಾಲ ವಿಭಿನ್ನ ಬಣ್ಣದ  ಉಡುಗೆಗಳನ್ನು ಅಂದರೆ  ಆರಂಭದ ಮೊದಲ ನೇ ದಿನದಿಂದ ಹಳದಿ, ಹಸಿರು, ಊದಾ, ಕಿತ್ತಳೆ, ಬಿಳಿ ,ಕೆಂಪು ,ನೀಲಿ, ಗುಲಾಬಿ, ನೇರಳೆ  ಬಣ್ಣದಉಡುಗೆಗಳನು ಧರಿಸಿಕೊಂಡು ತಾಯಿ ದುರ್ಗಾ ಮಾತೆಯ ಪೂಜೆಯಲ್ಲಿ ತೊಡಗುವುದು ಸಹ ಒಂದು ವಿಶೇಷ ಎನ್ನಬಹುದು.  


ಮೈಸೂರು ದಸರಾ ಸೊಬಗಿನ ಬಗ್ಗೆ ,ಮೈಸೂರು ಅರಮನೆ ಮತ್ತು ಚಾಮುಂಡಿಬೆಟ್ಟದ ತಾಯಿ ಚಾಮುಂಡೇಶ್ವರಿ ಮಹಿಮೆ ಇತ್ಯಾದಿ ವಿಷಯಗಳನ್ನು ನಾವು ಶಾಲಾ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋದಾಗ ಹೇಳುತ್ತಿದ್ದುದರ ನೆನಪು ಮರುಕಳಿಸಿತು .ನಮ್ಮ ನಾಡಿನ ಸಂಸ್ಕೃತಿ ಪರಂಪರೆಯ ಬಗ್ಗೆ ಮಕ್ಕಳಿಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯವಲೣವೇ?

- ಶ್ರೀಮತಿ ಸುಮಂಗಲಾ ಕೃಷ್ಣಾ ಕೊಪ್ಪರದ , ಇಲಕಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...