ಕನ್ನಡದ ತಾಯಿ ಭುವನೇಶ್ವರಿಯ ಪಾದಾರವಿಂದಕ್ಕೆ ನಮಸ್ಕರಿಸುತ್ತಾ,
ಕನ್ನಡ ಅಕ್ಷರಮಾಲೆಗೆ ತಲೆಬಾಗಿ ವಂದಿಸುತ್ತಾ,
ಸಾಗುತಿರುವೆ ನನ್ನ ತಾಯ್ನುಡಿ ಕನ್ನಡದ ಬಗ್ಗೆ ಬರೆಯುತ್ತಾ...
ಅಮ್ಮ ಎಂದು ಮೊದಲು ತೊದಲು ನುಡಿದ ನನ್ನ ಕನ್ನಡ ನುಡಿ,
ನನ್ನ ಹೃದಯ ಬಡಿತದ ನರನಾಡಿಯಲ್ಲೂ ನನ್ನ ಕನ್ನಡ ನುಡಿ,
ನನ್ನ ತಾಯ್ನುಡಿ ಕನ್ನಡವೊಂದೇ ಕೈ ಹಿಡಿದು ಸಲಹುತಲಿಹುದು ನೋಡಿ,
ಜನನಿ ಜನ್ಮಭೂಮಿ ನಾನು ನಿಮ್ಮ ಪ್ರೇಮಿ,
ಕನ್ನಡಮ್ಮನ ಮಡಿಲಲ್ಲಿ ನೆಲೆಯ ಕಂಡಿರುವ ಆಸಾಮಿ..
ಕನ್ನಡದ ಬಗ್ಗೆ-ಕನ್ನಡಮ್ಮನ ಹಿರಿಮೆಯ ಬಗ್ಗೆ ವರ್ಣಿಸಲು ನಾನಲ್ಲ ಸಾಹಿತಿ,
ನನ್ನ ಕನ್ನಡವೆಂದರೆ ನನಗೆ ಎಲ್ಲಿಲ್ಲದ ಪ್ರೀತಿ,
ಹಾಲು ಕುಡಿದಷ್ಟು ತೃಪ್ತಿ -ಸಂತೃಪ್ತಿ....
ಕನ್ನಡದ ಬಾವುಟ ಅರಿಶಿಣ ಕುಂಕುಮದ ಪ್ರತೀಕ,
ಅರಿಶಿಣ ಕುಂಕುಮವು ಪ್ರತೀ ಹೆಣ್ಣಿನ ಹಣೆಯಲ್ಲಿ ರಾರಾಜಿಸುವ ಸೌಭಾಗ್ಯ ತಿಲಕ...
ಕನ್ನಡಕ್ಕೆ ಕುರುಹಾಗಿರುವ ಹಲ್ಮಿಡಿ ಶಾಸನವೇ ಆಧಾರ,
ಕದಂಬರ ರಾಜ ಮಯೂರವರ್ಮನು ನಡೆಸಿದನು ಕರುನಾಡಿನ ರಾಜ್ಯಭಾರ,
ಶ್ರೀವಿಜಯ, ಶಿವಕೋಟ್ಯಾಚಾರ್ಯ, ಪಂಪ, ಪೊನ್ನ, ರನ್ನರ ಕೃತಿಗಳಲ್ಲಿದೆ ಕನ್ನಡದ ಸಾರ,
ಅಕ್ಕ ಮಹಾದೇವಿ, ಅಣ್ಣ ಬಸವಣ್ಣ, ಅಲ್ಲಮ ಪ್ರಭು, ಅಂಬಿಗರ ಚೌಡಯ್ಯ, ಆಯ್ದಕ್ಕಿ ಲಕ್ಕಮ್ಮ-ಮಾರಯ್ಯ ಮುಂತಾದವರ ಕೈಗಳಲ್ಲಿ ರಚನೆಯಾದ ಕನ್ನಡದ ಶ್ರೇಷ್ಠ ವಚನಸಾಹಿತ್ಯವೇ ಬಹು ದೊಡ್ಡ ಜ್ಞಾನದ ಆಗರ,
ಸರ್ವಜ್ಞನ ತ್ರಿಪದಿಗಳೇ ಜ್ಞಾನದ ಗಣಿಯನ್ನು ಹೊತ್ತ ಹೆಮ್ಮರ,
ದಾಸರ ಪದಗಳು-ಕೀರ್ತನೆಗಳು ಪ್ರತೀ ಮನ-ಮನೆಗಳಲ್ಲೂ ಸಾರುತಿವೆ ಭಕ್ತಿಯ ಸಾರ,
ಜ್ಞಾನಪೀಠಗಳು ಕನ್ನಡಮ್ಮನ ಕೊರಳಲ್ಲಿ ರಾರಾಜಿಸುತಿರುವ ಹೊಳೆಯುವ ಮುತ್ತಿನ ಹಾರ,
ತಾಳೆಗರಿಗಳ ಮೇಲೆ ಕಲ್ಲುಗಳ ಮೇಲಿನ ಕೆತ್ತನೆಯಿಂದ-ಬಟ್ಟೆಗಳ ಮೇಲೆನಿ ಬರವಣಿಗೆಯಿಂದ ಲೇಖನಿಯ ಹರಿತದ ಬರವಣಿಗೆಯವರೆಗೆ ಬೆಳೆದು ಬಂದ ನನ್ನ ಹೆಮ್ಮೆಯ ಕನ್ನಡ,
ಇಂದು ದೂರದರ್ಶನ- ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ನುಡಿ-ಧ್ವನಿಯ ಮೂಲಕ ಮೂಡಿಬರುತ್ತಿರುವ ನನ್ನ ಹೆಮ್ಮೆಯ ಕನ್ನಡ,
ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ನವರಸಭರಿತ ಇಂಪಿನ ಕಂಪನ್ನು ಪಸರಿಸುತಿರುವ ನನ್ನ ಹೆಮ್ಮೆಯ ಕನ್ನಡ..
ಕನ್ನಡವನ್ನು ಬರೆದು ಬೆಳೆಸುತ್ತಿರುವ ಬರಹಗಾರರು-ಕವಿಗಳು-ಸಾಹಿತಿಗಳು ಅನೇಕರು,
ಕನ್ನಡವನ್ನು ಮಾತಿನಿಂದ ಹೊಗಳುತ್ತಿರುವ ಕನ್ನಡ ವಾಗ್ಮಿಗಳು ಸಾವಿರಾರು,
ಸರಿಗಮಪದನಿ ಸಪ್ತಸ್ವರಗಳ ನಾದ-ನಿನಾದವ ಬಳಸಿ ಕನ್ನಡದ ಸಂಗೀತ ಸ್ವರದ ಇಂಪನ್ನು ಸಪ್ತಸಾಗರದಾಚೆಗೂ ಆಲಿಸುವಂತೆ ಮಾಡುವ ಸಂಗೀತಗಾರರು,
ಹಳ್ಳಿಕಟ್ಟೆಯಿಂದ ಅಂತರಾಷ್ಟ್ರೀಯ ಮಟ್ಟಕ್ಕೆ ಕನ್ನಡದ ಕೀರ್ತಿಯ ತಲುಪಿಸುವ ಕನ್ನಡ ಸಿನಿಮಾಗಳ ನಟ-ನಟಿಯರು, ನಿರ್ದೇಶಕರು, ಪಾತ್ರಧಾರಿಗಳು ಲೆಕ್ಕಕ್ಕೆ ಸಿಗದಷ್ಟಿರುವರು..
ಕನ್ನಡವ ಕಲಿಸುವ ಕನ್ನಡ ಶಾಲೆಯ ಅಕ್ಕೋರು-ಮಾಸ್ತರರು,
ಬೋಧಕರು, ಭಾಷಾ ತಜ್ಞರು, ಸಂಶೋಧಕರು,
ಕನ್ನಡ ನಾಡು-ನುಡಿಯ ಹೋರಾಟಗಾರರು,
ರಂಗಕರ್ಮಿಗಳು, ಭಾಷಾ ಪ್ರೇಮಿಗಳು, ಎಣಿಕೆಗೂ ಸಿಗದಷ್ಟು ಕನ್ನಡದ ಕಲಾವಿದರು,
ನಾವೆಲ್ಲಾ ಕನ್ನಡಿಗರು,ಕನ್ನಡ ಮಾತಾಡುವವರು-ಕನ್ನಡಮ್ಮನ ಋುಣವ ತೀರಿಸಲಾಗದವರು..
ಕನ್ನಡಮ್ಮನು ಉಣಿಸುತ್ತಿರುವ ಕೈ ತುತ್ತಿನ ಸವಿಯಾದ ಪ್ರೀತಿ ಅತೀ-ಅತೀ,
ಈ ಜಗದೊಳಗೆ ಕನ್ನಡಮ್ಮನು ನೀಡುವ ಪ್ರೀತಿಗಿಂತ ಮಿಗಿಲ್ಯಾವುದೈತಿ,
ಕನ್ನಡಮ್ಮನಿಗೆ ಸಲ್ಲಿಸುತಿರುವೆ ನನ್ನ ಪುಟ್ಚ ಬರಹಗಳ ಪ್ರೀತಿ...
- ಶಾಂತಾರಾಮ ಶಿರಸಿ, ಉತ್ತರ ಕನ್ನಡ...
8762110543
7676106237.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ