ಜಯ ಭಾರತ ಜನನಿಯ ತನುಜಾತೆ', 'ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು', 'ಓ ನನ್ನ ಚೇತನ ಆಗುವ ನೀ ಅನಿಕೇತನ' ಹೀಗೆ ರಾಷ್ಟ್ರಕವಿ ಕುವೆಂಪು ಅವರ ಹಲವಾರು ಕವನಗಳು ಕನ್ನಡಿಗರ ಮನದಾಳದಲ್ಲಿ ಹಾಸುಹೊಕ್ಕಾಗಿದೆ.
ರಾಷ್ಟ್ರಕವಿ ಕುವೆಂಪು ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ 1904 ಡಿಸೆಂಬರ್ 29 ರಂದು ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ಪೂರೈಸಿ ಪ್ರೌಢಶಾಲಾ ಶಿಕ್ಷಣದಿಂದ ಹಿಡಿದು ಎಂಎ ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ಕುವೆಂಪು ಅವರು ಕನ್ನಡದ ಅಗ್ರಮಾನ್ಯ ಕಾದಂಬರಿಕಾರ ನಾಟಕಕಾರ, ವಿಮರ್ಷಕ ಮತ್ತು ಚಿಂತಕ, ಇಪ್ಪತ್ತನೆಯ ಶತಮಾನದಲ್ಲಿ ಕಂಡ ದೈತ್ಯ ಪ್ರತಿಭೆ. ರಾಷ್ಟ್ರಕವಿ ಕುವೆಂಪು ಅವರು ವರಕವಿ ಬೇಂದ್ರೆ ಯವರಿಂದ “ಯುಗದ ಕವಿ” “ಜಗದ ಕವಿ” ಎನಿಸಿಕೊಂಡವರು.ವಿಶ್ವಮಾನವ ಸಂದೇಶ ನೀಡಿದವರು.
ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ಕನ್ನಡದಲ್ಲಿ ಎಂ. ಎ. ಪದವಿಯನ್ನೂ ಪಡೆದರು. ಟಿ. ಎಸ್. ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು.
ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿದ್ದರು. ನಂತರ ಉಪಕುಲಪತಿಗಳಾದರು. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು. ವಿಶ್ವವಿದ್ಯಾನಿಲಯವನ್ನು ಅಧ್ಯಯನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿದರು. ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು.
ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಅವರ ಮಕ್ಕಳು. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಅಗ್ರಮಾನ್ಯ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕೋಕಿಲೋದಯ ಚೈತ್ರ ಅವರು ಇಂಜಿನಿಯರ್ ಆಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಚಿದಾನಂದಗೌಡ ಅವರು ಕುವೆಂಪು ಅವರ ಅಳಿಯ.
ಕುವೆಂಪು ಅವರು 20ನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ 'ಶ್ರೀ ರಾಮಾಯಣ ದರ್ಶನಂ'ನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದಾರೆ. ಅವರ ಎರಡು ಬೃಹತ್ ಕಾದಂಬರಿಗಳಾದ 'ಕಾನೂರು ಹೆಗ್ಗಡತಿ' ಹಾಗೂ 'ಮಲೆಗಳಲ್ಲಿ ಮದುಮಗಳು' ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿವೆ. ಅವರ ನಾಟಕಗಳಿಗೆ ವೈಚಾರಿಕತೆಯ ಸ್ಪರ್ಶವಿದೆ.
೧೯೨೯ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ಪ್ರಿನ್ಸಿಪಾಲರಾಗಿ ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ ೧೯೬0ರಲ್ಲಿ ನಿವೃತ್ತರಾದರು.
ಕುವೆಂಪು ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದರು. ಅವರು ಕನ್ನಡಕ್ಕೆ ನೀಡಿದ ಕೊಡುಗೆಗಳಿಗಾಗಿ ಕನ್ನಡದ ಸಾಹಿತ್ಯಗಳನ್ನು ರಚಿಸಿದ್ದಕ್ಕಾಗಿ ಅವರಿಗೆ ಅನೇಕ ಮನ್ನಣೆ ಪ್ರಶಸ್ತಿಗಳು ದೊರೆತವು. ಮೈಸೂರಿನಲ್ಲಿ ನಡೆದ ೩೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾದರು. ಧಾರವಾಡದಲ್ಲಿ ೧೯೫೭ರಲ್ಲಿ ನಡೆದ ೩೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿಯನ್ನೂ, ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದರು.
ಬೆಂಗಳೂರು ವಿಶ್ವವಿದ್ಯಾನಿಲದಿಂದ ೧೯೬೯ರಲ್ಲಿ ಗೌರವ ಡಿ.ಲಿಟ್. ಲಭಿಸಿತು. ಪಂಪ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ರಾಷ್ಟ್ರಕವಿ ಪ್ರಶಸ್ತಿಗಳು ಕುವೆಂಪು ಅವರ ದೈತ್ಯಸಾಹಿತ್ಯ ಪ್ರತಿಭೆಗೆ ಸಿಕ್ಕ ಪುರಸ್ಕಾರಗಳಾಗಿವೆ.
೧೯೬೮ರಲ್ಲಿ ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇದು ಕನ್ನಡದಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ ಆಗಿದೆ. ೧೯೯೫ರಲ್ಲಿ ನಾಡೋಜ ಪ್ರಶಸ್ತಿಯನ್ನು ಅವರಿಗೆ ಮರಣೋತ್ತರ ನೀಡಲಾಯಿತು. ೧೯೮೫ರಲ್ಲಿ ಮೈಸೂರಿನಲ್ಲಿ ನಡೆದ ಮೊದಲನೇ ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದರು.
ಅಪಾರ ಅನುಪಮ ಸಾಹಿತ್ಯ ರಚನೆ ಮಾಡಿದ್ದ ಕುವೆಂಪು ಅವರು, ಕವನ ಸಂಕಲನ, ಖಂಡಕಾವ್ಯ, ಮಹಾಕಾವ್ಯಗಳನ್ನು ರಚಿಸಿದರು. ಅನುವಾದಿತ ಮತ್ತು ಸ್ವತಂತ್ರ ನಾಟಕಗಳನ್ನು ಬರೆದರು. ಕಾದಂಬರಿ, ಕಥೆ, ಗದ್ಯಚಿತ್ರ. ಆತ್ಮಚರಿತ್ರೆ, ಭಾಷಾಂತರ ಗ್ರಂಥಗಳನ್ನು ರಚಿಸಿದರು. ಮಾಸ್ತಿ ಜತೆ ಕರ್ಣಾಟಕ ಭಾರತ ಕಥಾಮಂಜರಿಯನ್ನು ಸಂಪಾದಿಸಿದ್ದಾರೆ.
ಅವರ ಕೆಲವು ಪ್ರಸಿದ್ಧ ಕೃತಿಗಳು ಇವು:- ಶ್ರೀರಾಮಯಣ ದರ್ಶನಂ, ಕಬ್ಬಿಗನ ಕೈಬುಟ್ಟಿ, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ವಿಚಾರ ಕ್ರಾಂತಿಗೆ ಆಹ್ವಾನ, ಬೆರಳ್ಗೆ ಕೊರಳ್, ಶೂದ್ರತಪಸ್ವಿ, ಸ್ವಾಮಿ ವಿವೇಕಾನಂದ, ಚಿತ್ರಾಂಗದಾ, ಪಾಂಚಜನ್ಯ, ಬೊಮ್ಮನಹಳ್ಳ್ಳಿ ಕಿಂದರಿಜೋಗಿ, ಕೊಳಲು ಇತ್ಯಾದಿ.
ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿದ್ದ ಕುವೆಂಪು ಅವರು ೧೧-೧೧-೧೯೯೪ರಲ್ಲಿ ಮೈಸೂರಿನಲ್ಲಿ ನಿಧನರಾದರು.
ಕವಿಮನೆ:-
ಕುವೆಂಪುರವರ ಪೂರ್ವಜರು ಕಟ್ಟಿರುವ ನೂರು ವರ್ಷದ ಹಳೆಯ ತೊಟ್ಟಿ ಮನೆಯನ್ನು ನವೀಕರಿಸಲಾಗಿದೆ. ಎರಡು ಮಹಡಿಗಳು, ಮಧ್ಯ ಒಳ ಅಂಗಳ ಇರುವ ಈ ಮನೆಯು ಮಲೆನಾಡಿನ ಜಮೀನುದಾರರ ಮನೆ ಹಾಗೆ ಕಾಣುತ್ತದೆ.
ಕುವೆಂಪು ಅವರ ಕುಪ್ಪಳ್ಳಿಯಲ್ಲಿದ್ದಾಗ ಬಳಸುತ್ತಿದ್ದ ಅಧ್ಯಯನ ಕೊಠಡಿ, ಅವರ ಸೂರ್ಯೋದಯವನ್ನು ವೀಕ್ಷಿಸುತ್ತಿದ್ದ ಪೂರ್ವ ದಿಕ್ಕಿಗೆ ತೆರೆದುಕೊಂಡಿರುವ ಮಹಡಿ, 'ಮನೆಯ ಶಾಲೆ' ನಡೆಯುತ್ತಿದ್ದ ಸ್ಥಳ, 'ಅಜ್ಜಯ್ಯನ ಅಭ್ಯಂಜನದ' ಬಚ್ಚಲುಮನೆ, ಕೊಳ, ಮನೆಯ ಸಮೀಪದ ಕೆರೆ ಇವು ಸಂದರ್ಶಕರನ್ನು ಭಾವ ಪರವಶವನ್ನಾಗಿಸುತ್ತವೆ.
ಕುವೆಂಪು ಅವರ ವಿವಾಹ ನಡೆದ ಮರದ ಮಂಟಪ, ಮೈಸೂರಿನ ಮನೆಯಲ್ಲಿ ಕುವೆಂಪು ಅವರ ದಿನನಿತ್ಯ ಬಳಸುತ್ತಿದ್ದ ವಸ್ತುಗಳು ಮತ್ತು ಅವರಿಗೆ ಬಂದ ಪ್ರಶಸ್ತಿಗಳನ್ನು ಮಹಡಿಯಲ್ಲಿ ಪ್ರದರ್ಶಿಸಲಾಗಿದೆ. ಅವರ ಪುಸ್ತಕಗಳ ಮೊದಲ ಆವೃತ್ತಿಗಳೂ, ಕೆಲವು ಹಸ್ತಪ್ರತಿಗಳೂ ಇಲ್ಲಿವೆ.
ಕೆಳ ಅಂತಸ್ತಿನ ಹಿಂಬದಿಯ ಹಜಾರದಲ್ಲಿ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಸಂಗ್ರಹಿಸಿರುವ ಕುವೆಂಪು ಅವರ ಚಿಕ್ಕ ವಯಸ್ಸಿನ ಫೋಟೋಗಳು, ಅವರ ಮಕ್ಕಳು, ಮೊಮ್ಮಕ್ಕಳು, ಬಂಧುಗಳ ಛಾಯಾಚಿತ್ರಗಳು, ಕವಿಯ ಬದುಕಿನ ಕೆಲವು ಅವಿಸ್ಮರಣೀಯ ಘಳಿಗೆಗಳ ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಕುವೆಂಪು ಅವರ ಕಾಲದಲ್ಲಿ ಮನೆಗಳಲ್ಲಿ ಬಳಸುತ್ತಿದ್ದ ಗೃಹಉಪಯೋಗಿ ವಸ್ತುಗಳನ್ನು, ವ್ಯವಸಾಯದ ಸಲಕರಣೆಗಳನ್ನು ಸಹಾ ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ.
ಕುವೆಂಪುರವರ ಪೂರ್ವಜರು ಕಟ್ಟಿರುವ ನೂರು ವರ್ಷದ ಹಳೆಯ ತೊಟ್ಟಿ ಮನೆಯನ್ನು ನವೀಕರಿಸಲಾಗಿದೆ. ಎರಡು ಮಹಡಿಗಳು, ಮಧ್ಯ ಒಳ ಅಂಗಳ ಇರುವ ಈ ಮನೆಯು ಮಲೆನಾಡಿನ ಜಮೀನುದಾರರ ಮನೆ ಹಾಗೆ ಕಾಣುತ್ತದೆ.
ಕುವೆಂಪು ಅವರ ಕುಪ್ಪಳ್ಳಿಯಲ್ಲಿದ್ದಾಗ ಬಳಸುತ್ತಿದ್ದ ಅಧ್ಯಯನ ಕೊಠಡಿ, ಅವರ ಸೂರ್ಯೋದಯವನ್ನು ವೀಕ್ಷಿಸುತ್ತಿದ್ದ ಪೂರ್ವ ದಿಕ್ಕಿಗೆ ತೆರೆದುಕೊಂಡಿರುವ ಮಹಡಿ, 'ಮನೆಯ ಶಾಲೆ' ನಡೆಯುತ್ತಿದ್ದ ಸ್ಥಳ, 'ಅಜ್ಜಯ್ಯನ ಅಭ್ಯಂಜನದ' ಬಚ್ಚಲುಮನೆ, ಕೊಳ, ಮನೆಯ ಸಮೀಪದ ಕೆರೆ ಇವು ಸಂದರ್ಶಕರನ್ನು ಭಾವ ಪರವಶವನ್ನಾಗಿಸುತ್ತವೆ.
ಕುವೆಂಪು ಅವರ ವಿವಾಹ ನಡೆದ ಮರದ ಮಂಟಪ, ಮೈಸೂರಿನ ಮನೆಯಲ್ಲಿ ಕುವೆಂಪು ಅವರ ದಿನನಿತ್ಯ ಬಳಸುತ್ತಿದ್ದ ವಸ್ತುಗಳು ಮತ್ತು ಅವರಿಗೆ ಬಂದ ಪ್ರಶಸ್ತಿಗಳನ್ನು ಮಹಡಿಯಲ್ಲಿ ಪ್ರದರ್ಶಿಸಲಾಗಿದೆ. ಅವರ ಪುಸ್ತಕಗಳ ಮೊದಲ ಆವೃತ್ತಿಗಳೂ, ಕೆಲವು ಹಸ್ತಪ್ರತಿಗಳೂ ಇಲ್ಲಿವೆ.
ಕೆಳ ಅಂತಸ್ತಿನ ಹಿಂಬದಿಯ ಹಜಾರದಲ್ಲಿ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಸಂಗ್ರಹಿಸಿರುವ ಕುವೆಂಪು ಅವರ ಚಿಕ್ಕ ವಯಸ್ಸಿನ ಫೋಟೋಗಳು, ಅವರ ಮಕ್ಕಳು, ಮೊಮ್ಮಕ್ಕಳು, ಬಂಧುಗಳ ಛಾಯಾಚಿತ್ರಗಳು, ಕವಿಯ ಬದುಕಿನ ಕೆಲವು ಅವಿಸ್ಮರಣೀಯ ಘಳಿಗೆಗಳ ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಕುವೆಂಪು ಅವರ ಕಾಲದಲ್ಲಿ ಮಲೆನಾಡಿನ ಮನೆಗಳಲ್ಲಿ ಬಳಸುತ್ತಿದ್ದ ಗೃಹಉಪಯೋಗಿ ವಸ್ತುಗಳನ್ನು, ವ್ಯವಸಾಯದ ಸಲಕರಣೆಗಳನ್ನು ಸಹಾ ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ.
ಕವಿಶೈಲ:- ಕವಿಮನೆಯ ದಕ್ಷಿಣ ದಿಕ್ಕಿಗೆ ಮನೆಗೆ ಹೊಂದಿಕೊಂಡು ಇರುವ ಬೆಟ್ಟವೇ ಕವಿಶೈಲ, ಕವಿಯ ಸ್ಫೂರ್ತಿಯ ತಾಣ. ಕುವೆಂಪು ಎಳವೆಯಿಂದಲೇ ಆಕರ್ಷಿತರಾಗಿ ಮತ್ತೆ ಮತ್ತೆ ಭೇಟಿ ನೀಡುತ್ತಿದ್ದ ಸ್ಥಳ ಕವಿಶೈಲ. ಅವರ ಅನೇಕ ಪ್ರಸಿದ್ಧ ಕವಿತೆಗಳೂ, ಕಾದಂಬರಿ ಮಹಾಕಾವ್ಯಗಳ ನಿಸರ್ಗ ವರ್ಣನೆಗಳೂ ಇಲ್ಲಿಯ ಸ್ನಿಗ್ಧ, ಭವ್ಯ ಸೌಂದರ್ಯದಿಂದ ಪ್ರೇರಿತವಾದವು.
ಕುವೆಂಪು ರವರ ಆಪ್ತ ಸ್ನೇನಿತರು, ಸಾಹಿತಿಗಳು ಆಗಾಗ ಕುಪ್ಪಳ್ಳಿಗೆ ಕವಿಶೈಲಕ್ಕೆ ಭೇಟಿ ನೀಡುತ್ತಿದ್ದುದುಂಟು. 1936 ರಲ್ಲಿ ಕವಿಶೈಲದ ಬಂಡೆಯ ಮೇಲೆ “ದೇವರ ರುಜು”ವಿನ ಸಮ್ಮುಖದಲ್ಲಿ, ಇರುವ ತಮ್ಮ ಹೆಸರಿನ ಅಕ್ಷರಗಳನ್ನೂ ಕೆತ್ತಿ ತಮ್ಮ ಭೇಟಿಯ ಗುರುತುಗಳನ್ನು ಊಳಿಸಿ ಹೋಗಿದ್ದಾರೆ. ಕುವೆಂಪು, ಬಿ.ಎಂ.ಶ್ರೀ,. ಟಿ.ಎಸ್.ವೆಂ. ಎಂಬ ಅಕ್ಷರಗಳು ಇಲ್ಲಿವೆ.
ಬಾಲ್ಯದ ಒಡನಾಡಿಯಾಗಿ, ನಂತರ ಸ್ಮೃತಿಕೋಶದ ಭಾಗವಾಗಿ, ಕವೆಂಪುರವರನ್ನು ಜೀವನದುದ್ದಕ್ಕೂ ಪ್ರಭಾವಿಸಿದ ಕವಿಶೈಲದಲ್ಲಿಯೇ 11.11.1994 ರಂದು ಅವರ ಭೌತಿಕ ಶರೀರ ಲೀನವಾಯಿತು. ಕವಿಯ ಪ್ರೀತಿಯ ಕವಿಶೈಲದ ಅಂತಿಮ ಸಂಸ್ಕಾರ ನಡೆಯಿತು. ಆ ಜಾಗವೀಗ ಇಲ್ಲಿನ ಪ್ರಕೃತಿಯ ಚೆಲುವಿನೊಡನೆ ಸೇರಿ ಪವಿತ್ರ ಪ್ರಭಾವಲಯವೊಂದನ್ನು ಸೃಷ್ಟಿಸಿದೆ.
“ಗಿರಿಯ ಬಿತ್ತರ, ಶಿಖರದತ್ತರ ಹಾಗೂ ರಸಋಷಿಮತಿ ಕವಿದೃಷ್ಟಿ'ಗಳು ಕೂಡಿ ಸೃಷ್ಟಿಸಿದ ಭವ್ಯ ಸಾಹಿತ್ಯ ಲೋಕದ ಅನುಭೂತಿ ಕವಿಶೈಲದಲ್ಲಿ ನಿಂತಾಗ ಆದೀತು. ಕಲಾವಿದ ಕೆ.ಟಿ. ಶಿವಪ್ರಸಾದ್ ರವರ ಬೃಹತ್ ಶಿಲಾ ಶಿಲ್ಪದ ರೂಪದಲ್ಲಿ ನಿಂತಿದೆ. 'ಸ್ಥಳ ನಿರ್ದಿಷ್ಟ ಕಲಾಕೃತಿಗೆ” ಉತ್ತಮ ಉದಾಹರಣೆ ಈ ಶಿಲ್ಪಗಳು.
ಕವಿಮನೆಯಿಂದ ಕವಿಶೈಲಕ್ಕೆ ಕಾಲುದಾರಿಯಲ್ಲಿ ನಡೆದರೆ 5-10 ನಿಮಿಷ ಬೇಕಾಗುತ್ತದೆ. ರಸ್ತೆಯ ಮೂಲಕ ವಾಹನದಲ್ಲೂ ಹೋಗಬಹುದು.
ಕುವೆಂಪು ಜೈವಿಕ ಧಾಮ:- ಕುಪ್ಪಳ್ಳಿ ಮತ್ತು ಕವಿಶೈಲ ಪರಿಸರದ ಸುತ್ತಲಿನ ಸುಮಾರು 3,600 ಎಕರೆ ಅರಣ್ಯ ಪ್ರದೇಶವನ್ನು 'ಕುವೆಂಪು ಜೈವಿಕ ಅರಣ್ಯಧಾಮ' ಎಂದು ಕರ್ನಾಟಕ ಸರ್ಕಾರವು ಘೋಷಿಸಿ ಸಂರಕ್ಷಣೆಗೆ ಕ್ರಮ ಕೈಗೊಂಡಿದೆ.
ಜೀವ ವೈವಿಧ್ಯದ ದರಷ್ಟಿಯಿಂದ ಮುಖ್ಯವಾದ ಪ್ರಪಂಚದ ಮೊದಲ18 ಸ್ಥಳಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಅರಣ್ಯ ಇಲ್ಲಿದೆ. ಅನೇಕ ಬಗೆಯ ಅಪರೂಪದ ಪ್ರಾಣಿ - ಪಕ್ಷಿಗಳೂ, ಗಿಡಮೂಲಿಕೆಗಳೂ, ವಿರಳ ಪ್ರಭೇದವಾದ ಅಶೋಲ ವೈಕ್ಷ (Saraca Indica) ಗಳೂ ಈ ಕಾಡಿನಲ್ಲಿವೆ. ವೀಕ್ಷಣೆ - ಸಂಶೋಧನೆ ಕಾರ್ಯಕ್ಕೆ ಈ ಅರಣ್ಯಧಾಮದಲ್ಲಿ ಅನುಕೂಲವಿದೆ. ಪ್ರಕೃತಿ ಪ್ರಿಯರು ಇಲ್ಲಿ ತಂಗಿ, ಚಾರಣ ಹಮ್ಮಿಕೊಳ್ಳಬಹುದು. ಕವಿಮನೆಯ ಪಕ್ಕದಲ್ಲಿ ಚಿಟ್ಟೆವನವನ್ನು ಅಭಿವೃದ್ಧಿಪಡಿಸಲಾಗಿದೆ.
ಕುವೆಂಪು ಜನ್ಮ ಶತಮಾನೋತ್ಸವ ಸ್ಮಾರಕ ಭವನ:- ಮಲೆನಾಡಿನ ಮನೆಗಳ ಸಾಂಪ್ರದಾಯಿಕ ವಿನ್ಯಾಸದಲ್ಲಿ ನಿರ್ಮಿಸಿರುವ ಸುಂದರ ಕಟ್ಟಡ, ಸ್ಥಳೀಯವಾಗಿ ದೊರೆಯುವ ಕಲ್ಲಿಂದ ಕಂಬ, ತೊಲೆಗಳನ್ನು ಹೆಚ್ಚಿನದಾಗಿ ಬಳಸಲಾಗಿದೆ. ಒಳಾಂಗಣದಲ್ಲಿ 'ಹೇಮಾಂಗಣ' ಹೆಸರಿನ ರಂಗಮಂದಿರ ಇದೆ. ಕೆಳ ಅಂತಸ್ತಿನಲ್ಲಿ ಗ್ರಂಥಾಲಯವಿದೆ, ಅಧ್ಯಯನಾಸಕ್ತರು, ಪ್ರವಾಸಿಗಳು ಉಳಿದುಕೊಳ್ಳಲು ಕೊಠಡಿಗಳು ಮತ್ತು ಅಗತ್ಯ ಸೌಲಭ್ಯಗಳು ಇಲ್ಲಿವೆ. ಕನ್ನಡ ವಿಶ್ವವಿದ್ಯಾಯಲಯದ ಕುವೆಂಪು ಅಧ್ಯಯನ ಕೇಂದ್ರದ ಮುಂಭಾಗದ ಕೊಠಡಿಯಲ್ಲಿ ಹಂಪಿ ಕಛೇರಿಯಿದೆ, ಮಹಡಿಯಲ್ಲಿರುವ ಸಭಾಂಗಣ ಸಾಹಿತ್ಯ ಗೋಷ್ಠಿಗಳನ್ನು ನಡೆಸಲು ಅನುಕೂಲವಾಗಿದೆ. ಕಟ್ಟಡದ ಮುಂಭಾಗವನ್ನು ತೆರೆದ ರಂಗಭೂಮಿ'ಯಂತೆ ವಿನ್ಯಾಸಗೊಳಿಸಲಾಗಿದೆ. ಮೆಟ್ಟಿಲು ಮೆಟ್ಟಿಲಾಗಿ ಹುಲ್ಲು ಬೆಳಸಲಾದ ಜಾಗದಲ್ಲಿ ಕುಳಿತುಕೊಂಡು ಮುಖ ಮಂಟಪದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನೋಡಬಹುದು. ಒಳಾಂಗಣದಲ್ಲಿ ಕುವೆಂಪು ಸೂಕ್ತಿಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳನ್ನು, ಗೋಷ್ಠಿಗಳನ್ನು ಮತ್ತು ಶಿಬಿರಗಳನ್ನು ನಡೆಸಲು ಸೂಕ್ತವಾದ ಕಟ್ಟಡ ಇದಾಗಿದೆ. ವಿಶೇಷವಾಗಿ ಶಿಬಿರಾರ್ಥಿಗಳು ವಾಸ್ತವ್ಯ ಮಾಡಲು ಅನುಕೂಲವನ್ನು ಈ ಕಟ್ಟಡ ಹೊಂದಿದೆ.
ಕುವೆಂಪು ಅಧ್ಯಯನ ಕೇಂದ್ರ:- ಕನ್ನಡ ವಿಶ್ವವಿದ್ಯಾಲಯ ಹಂಪಿ, ಇವರು ಕುಪ್ಪಳಿಯಲ್ಲಿ 'ಕುವೆಂಪು ಕನ್ನಡ ಅಧ್ಯಯನ ಕೇಂದ್ರ'ವನ್ನು ತೆರೆದಿರುತ್ತಾರೆ. ಕನ್ನಡ ಸಾಂಸ್ಕೃತಿಕ ಅಧ್ಯಯನದಲ್ಲಿ ಪಿ.ಎಚ್.ಡಿ. ಹಾಗೂ ಎಂ.ಫಿಲ್. ಸಂಶೋಧನೆಯಲ್ಲಿ ತೊಡಗುವವರಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಉತ್ತಮವಾದ ಗ್ರಂಥಾಲಯವನ್ನು ಸಿದ್ಧಗೊಳಿಸಲಾಗುತ್ತಿದೆ. ಕುವೆಂಪು ಕುರಿತ ಬಹಳಷ್ಟು ಕೆಲಸಗಳನ್ನು ಮಾಡಲು ಕನ್ನಡ ವಿಶ್ವವಿದ್ಯಾಲಯವು ಮುಂದಾಗಿದೆ.
ಅರಣ್ಯ ಇಲಾಖೆಯ ಕುಟೀರಗಳು:- ಅರಣ್ಯ ಇಲಾಖೆ 3 ಕುಟೀರಗಳನ್ನು ಹಾಗೂ ಸಭಾಮಂಟಪವನ್ನು ಕಾಡಿನ ಮಧ್ಯದಲ್ಲಿ ನಿರ್ಮಿಸಿದೆ. ಮಳೆಗಾಲದ ನೀರನ್ನು ತಡೆದು ನಿಲ್ಲಿಸಲು ಚೆಕ್ ಡ್ಯಾಮ್ ನಿರ್ಮಾಣ ಮಾಡಲಾಗಿದೆ. ಕುಟೀರಕ್ಕೆ ಹೊಂದಿಕೊಂಡಿರುವ 10 ಎಕರೆ ಪ್ರದೇಶದಲ್ಲಿ ಸ್ಥಳೀಯ ಜಾತಿಯ ಸಸ್ಯಗಳನ್ನು ಬೆಳೆಸುತ್ತಿದ್ದಾರೆ. ಈ ಪ್ರದೇಶಕ್ಕೆ “ಕುವೆಂಪು ಸಂದೇಶ ವನ” ಎಂದು ಹೆಸರಿಡಲಾಗಿದೆ.
ಕುಪ್ಪಳಿಯಲ್ಲಿ ನನ್ನ ಅನುಭವ:- ದಿನಾಂಕ 29-10-2021 (ಅಂದರೆ ಇಂದು) ಅಕ್ಕಿಹೆಬ್ಬಾಳಿನಿಂದ ಪ್ರಾರಂಭವಾದ ನಮ್ಮ ಪಯಣವು ನಿಂತಿತ್ತು ಕುವೆಂಪುರವರ ಸುಂದರ ಮನೆ ಕವಿಶೈಲದ ಮುಂದೆ. ನಾನು ಮತ್ತು ನನ್ನ ಸ್ನೇಹ ವೃಂದವು ಇಂದು ರೈಲಿನ ಮಾರ್ಗವಾಗಿ ಕುಪ್ಪಳ್ಳಿಯಲ್ಲಿ ನಡೆಯುತ್ತಿರುವ ಕುವೆಂಪು ಅಧ್ಯಯನ ಶಿಬಿರಕ್ಕೆ ಶಿಬಿರದ ಅಭ್ಯರ್ಥಿಗಳಾಗಿ ಇಂದು ಪಯಣ ಬೆಳೆಸುತ್ತಿದ್ದೇವೆ. ನಮ್ಮ ಜೊತೆ ರೈತರ ಪರವಾಗಿ ಹೋರಾಟ ಮಾಡಿರುವ ನಂದಿನಿ ಮೇಡಂ ಕೂಡ ಇದ್ದಾರೆ. ನಾವು ಕುವೆಂಪುರವರ ಸುಂದರ ತಾಣ ಕವಿಶೈಲ ಮತ್ತು ಅವರ ಮನೆಯನ್ನು ನೋಡಲು ಹೊರಟಿದ್ದೇವೆ. ಹೊರಟಿದ್ದು ಅವರ ಮನೆ ನೋಡಲು ಅಲ್ಲ ಅವರ ಜೀವನ ಚರಿತ್ರೆ ಮತ್ತು ಅವರ ಸಾಹಿತ್ಯ ಅಧ್ಯಯನವನ್ನು ಮಾಡಲು ಹೋಗುತ್ತಿದ್ದೇವೆ. ಕುವೆಂಪು ಮನೆಯೆಂದರೆ ಎಲ್ಲರಿಗೂ ಒಂದು ಕ್ಷಣ ನೋಡಬೇಕಾದ ಸ್ಥಳ ಎನಿಸುವುದು ಕಾರಣ ದಿನ ಸುಂದರ ಪ್ರಕೃತಿಯ ನೋಟ ನೋಡಬೇಕಾದ ಅನೇಕ ರೀತಿಯ ವಿಸ್ಮಯ ಸ್ವರ್ಗದ ಜಗತ್ತು ಅಲ್ಲಿದೆ. ನಮ್ಮ ಮನದಲ್ಲಿ ಒಂದು ಕಡೆ ಆನಂದ ಹಾಗೂ ಇನ್ನೊಂದು ಕಡೆ ಕಾತುರತೆ. ಎರಡನ್ನು ನಮ್ಮ ಮನದಲ್ಲಿ ಇಟ್ಟುಕೊಂಡು ನಮ್ಮ ಪಯಣವನ್ನು ಇಂದು ನಾವು ಕುವೆಂಪು ಮನೆಯ ಕಡೆ ಬೆಳೆಸಿದೆವು. ಈ ಪಯಣದ ಶೀರ್ಷಿಕೆಯನ್ನು ನಾನು "ನಮ್ಮ ನಡೆ ಕುವೆಂಪು ಮನೆಯ ಕಡೆ" ಎಂದು ನೀಡಿ ಹೊಸ ಅನುಭವವನ್ನು ಅನುಭವಿಸಲು ಹೋಗುತ್ತಿದ್ದೇವೆ. ಅಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ನಾವು ಭಾಗಿಯಾಗಿ ಹೊಸ ಪಾಠವನ್ನು ಕಲಿತು ಇನ್ನೊಬ್ಬರಿಗೆ ಕಲಿಸುತ್ತೇವೆ. ಜೊತೆ ನಾವು ಸ್ವಲ್ಪ ಆನಂದಿಸುತ್ತೇವೆ. ಇವೆಲ್ಲವನ್ನೂ ಮನದಲ್ಲಿ ಯೋಚನೆ ಮಾಡಿಕೊಂಡು ಅಕ್ಕಿಹೆಬ್ಬಾಳು ನಿಂದ ಶಿವಮೊಗ್ಗಕ್ಕೆ ನಾವು ರೈಲನ್ನು ಹತ್ತಿದೆವು. ರೈಲುಗಾಡಿಗೆ ಮುಸ್ಸಂಜೆಯಲ್ಲಿ ಶಿವಮೊಗ್ಗ ತಲುಪಿತು. ನಾನು ಮತ್ತು ನನ್ನ ಸ್ನೇಹಿತರು ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಆಟೋದಲ್ಲಿ ಹೋದೆವು ಆನಂತರ ಅಲ್ಲಿಂದ ತೀರ್ಥಹಳ್ಳಿ ಬಸ್ ಸಿದ್ಧವಾಗಿ ನಿಂತಿತ್ತು ಆ ಬಸ್ಸನ್ನು ಹತ್ತಿದವು. ತೀರ್ಥಹಳ್ಳಿ ತಿಳಿದ ತಕ್ಷಣವೇ ಅಲ್ಲಿಂದ ಕುವೆಂಪುರವರ ಮನೆ ಕಡೆ ಹೋಗುವ ಬಸ್ ಸಿದ್ಧವಾಗಿ ನಿಂತಿತ್ತು ಆ ಬಸ್ಸಿಗೆ ನಾವು ಹೋದೆವು. ಆ ಬಸ್ಸು ರಾತ್ರಿ ಹೊತ್ತಿಗೆ ಕುವೆಂಪುರವರ ಕುಪ್ಪಳ್ಳಿಗೆ ಹೋದೆವು ನಾವು ಅಲ್ಲಿಂದ ಒಂದು ಮೈಲಿಯಷ್ಟು ನಡೆದುಕೊಂಡು ಹೋದವು. ರಸ್ತೆ ಉದ್ದಕ್ಕೂ ನಮಗೆ ಅನೇಕ ಸ್ನೇಹಿತರು ಪರಿಚಯವಾದರೂ ಅವರೆಲ್ಲ ಶಿಬಿರ ಅಭ್ಯರ್ಥಿಗಳಾಗಿ ಭಾಗವಹಿಸಲು ಬಂದಿದ್ದರು. ಅವರನ್ನು ನೋಡಿದ ತಕ್ಷಣ ನಮ್ಮ ಮನಕ್ಕೆ ಹೊಳೆದದ್ದು ಇಷ್ಟೇ ಇವರು ಇಷ್ಟು ಕಲಿತಿದ್ದರು ಮತ್ತೆ ಅಭ್ಯರ್ಥಿಗಳಾಗಿ ಶಿಬಿರಕ್ಕೆ ಭಾಗವಹಿಸುತ್ತಿದ್ದಾರೆ ಎಂಬ ಪ್ರಶ್ನೆಯು ನನ್ನ ಮನದಲ್ಲಿ ಬಂದಿತ್ತು. ಇತರ ನಾವು ಶಿಬಿರ ನಡೆಯುವ ಸ್ಥಳದಲ್ಲಿ ಹೋದವು ಅಲ್ಲಿ ನಮಗಾಗಿ ಸಿದ್ದವಾದ ಊಟ ಮತ್ತು ಕೊಠಡಿ ಸಿದ್ದವಾಗಿತ್ತು. ಅಲ್ಲಿ ಊಟ ಮಾಡಿ ನಾವು ಕುವೆಂಪುರವರ ಮನೆಗೆ ಪಯಣ ಬೆಳೆಸಿದೆವು. ರಾತ್ರಿಯ ಮಲೆನಾಡಿನ ಸೌಂದರ್ಯದಲ್ಲಿ ಕುವೆಂಪುರವರ ಮನೆಯ ಸೌಂದರ್ಯ ಲಹರಿಯ ಹಾಗೆ ಮಿಂಚುತ್ತಿತ್ತು ಅದನ್ನು ನಾನು ನೋಡಿ ತುಂಬಾ ಆನಂದ ಪಟ್ಟೆ. ಆ ಕ್ಷಣಕ್ಕೆ ನನ್ನ ಮನದಲ್ಲಿ ಕಾಡಿದು ಕುವೆಂಪು ರವರ ಸಾಹಿತ್ಯ ಇಷ್ಟು ಸೊಗಸಾಗಿ ಇರಲು ಕಾರಣವೇನೆಂದು ನನಗೆ ಅಲ್ಲಿ ತಿಳಿಯಿತು.
ನಾವು ಕುವೆಂಪುರವರ ಶಿಬಿರವನ್ನು ಅನುಭವಿಸಲು ಆರಂಭಿಸಿದ ಕ್ಷಣಗಳನ್ನು ಮಧುರ ದಿಂದ ಕಲಿಯಲು ಮೊದಲೇ ಯೋಚನೆ ಮಾಡಿಕೊಂಡಿದ್ದವು. ಹೀಗಿರುವಾಗ ಬೆಳಗ್ಗೆ ನಾಲ್ಕು ಗಂಟೆಗೆ ಎಚ್ಚರವಾಯಿತು. ನನಗೆ ಎಚ್ಚರವಾಗಲು ಕಾರಣ ಕುವೆಂಪುರವರ ಕವಿಶೈಲ ನೋಡಲು. ನನಗೆ ರಾತ್ರಿಯಿಡೀ ನಿದ್ದೆ ಬರಲಿಲ್ಲ ಅವರ ಕವಿಶೈಲ ನೋಡಲು ನಾನು ಕಾತರಿಸುತ್ತಿದೆ. ಬೆಳಿಗ್ಗೆ 5:30 ಹೊತ್ತಿಗೆ ಎಲ್ಲರೂ ಕುವೆಂಪುರವರ ಕವಿಶೈಲಕ್ಕೆ ಹೋಗಲು ಸಿದ್ಧವಾದವು ನಾನು ಕೂಡ ಅವರ ಜೊತೆ ಹೋಗಲು ಸಿದ್ಧನಾದೆ. ನಾವು ಇದ್ದ ಜಗತ್ತು ಕುವೆಂಪುರವರ ಕವಿಶೈಲಕ್ಕೆ ಒಂದು ಮೈಲಿಯಷ್ಟು ದೂರ. ಆ ಕಾಡಿನ ದಾರಿಯಲ್ಲಿ ಹೋಗುವ ಹೊಸ ಅನುಭವವನ್ನು ಆ ಸಂದರ್ಭದಲ್ಲಿ ತೆಗೆದುಕೊಂಡೆ. ಕಾಡುದಾರಿಯಲ್ಲಿ ನವಿಲುಗಳ ಶಬ್ದ ಹಾಗೂ ಅಲ್ಲಿನ ಹೊಸಹೊಸ ಪಕ್ಷಿಗಳ ಹಿಂಪಾದ ಧ್ವನಿಯನ್ನು ಕೇಳಿಸಿಕೊಂಡು ಮೌನದಿಂದ ಎಲ್ಲವನ್ನು ಆಲಿಸಿ ಕೊಳ್ಳುತ್ತಾ ಹೋಗುತ್ತಿದ್ದೆ. ನಡೆದ ಹಾಗೆ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ ಸವಿಯುತ್ತ ಚಪ್ಪಲಿ ಇಲ್ಲದೆ ಆ ಕಾಲುದಾರಿಯಲ್ಲಿ ಆನಂದಮಯ ಮನಸ್ಸಿನಲ್ಲಿ ನಡೆದೆ. ಅಲ್ಲಿ ಹೋಗಿ ನೋಡಿದರೆ ಕುವೆಂಪುರವರ ಸಮಾಧಿ ಕಂಡೆ. ಕುವೆಂಪುರವರು ಓಡಾಡಿದ ಜಾಗಗಳು ಆಗು ಅವರು ಧ್ಯಾನ ಮಾಡುತ್ತಿದ್ದ ಜಾಗದಲ್ಲಿ ಕೆಲವು ಕ್ಷಣಗಳು ಕುಳಿತು ನಾನು ಕೂಡ ಧ್ಯಾನ ಮಾಡಿದೆ. ನನಗೆ ನಾ ಮಲೆನಾಡಿನ ಸೌಂದರ್ಯವನ್ನು ಕಂಡು ಕವನಗಳು ಮನಸ್ಸಿನಲ್ಲಿ ಗೋಚರಿಸಿದವು ಅಲ್ಲೇ ಕುಳಿತು ಅನೇಕ ಕವನಗಳನ್ನು ಬರೆದೆ ಹಾಗೆ ನನ್ನ ಮನದಲ್ಲಿ ಕುವೆಂಪುರವರನ್ನು ನೆನೆದು ಅವರ ತಪಸ್ಸಿಗೆ ಕುಳಿತ ನನ್ನ ಮನದಲ್ಲಿ ಕುವೆಂಪುರವರು ಸಾಹಿತ್ಯ ವಿಮರ್ಶೆ ಮಾಡಿದ ಹಾಗೆ ನನ್ನ ಮನದಲ್ಲಿ ಬಂದಿತು. ಆ ಕವಿಶೈಲದ ಸೌಂದರ್ಯವನ್ನು ಪ್ರಕೃತಿ ಮಧ್ಯೆ ಸವಿದ ನಂತರ ಕಾಡುದಾರಿಯಲ್ಲಿ ನಾ ನಡೆಯಲು ಹೋದೆ. ಆ ಕಾಡುದಾರಿಯಲ್ಲಿ ನನಗೆ 3-4 ಜಿಗಣೆಗಳು ಕಚ್ಚಿದವು. ಆ ಜಿಗಣೆಗಳನ್ನು ನಾ ಬಿಡಿಸಿಕೊಂಡು ಮತ್ತೆ ಶಿಬಿರ ನಡೆಯುತ್ತಿದ್ದ ಸ್ಥಳಕ್ಕೆ ಬಂದವು. ಶಿಬಿರದಲ್ಲಿ ಅನೇಕ ರೀತಿಯ ಹೊಸ ಹೊಸ ವಿಷಯ ತಿಳಿದಿರುವ ವ್ಯಕ್ತಿಗಳು ನಮಗೆ ಪರಿಚಯವಾದರು. ಅನೇಕ ಸಂಪನ್ಮೂಲ ವ್ಯಕ್ತಿಗಳು ನಮಗೆ ಅನೇಕ ರೀತಿಯ ಮಾಹಿತಿಗಳನ್ನು ಬೆಳಗ್ಗಿನಿಂದ ಸಂಜೆಯವರೆಗೆ ಹೇಳಿದರು ಸಂಜೆಯ ನಂತರ ನಮ್ಮ ಪಯಣ ವಾಗಿತ್ತು ಕುವೆಂಪು ಮನೆ ಒಡನಾಟದಲ್ಲಿ ನೋಡಲು. ಸಂಜೆ ಶಿಬಿರ ಮುಗಿದ ತಕ್ಷಣ ನಾವು ಕುವೆಂಪು ಮನೆ ನೋಡಲು ಕಾತುರದಿಂದ ನಡೆದವು. ಕುವೆಂಪು ಮನೆಯೂ ಸಂಜೆ ತುಂಬಾ ಅಂದರೆ ತುಂಬಾ ಸೌಂದರ್ಯ ಮಯವಾಗಿ ಕಾಣಿಸುತ್ತದೆ. ನಾನು ಮತ್ತು ನನ್ನ ಸ್ನೇಹ ವೃಂದವು ಟಿಕೆಟ್ ಪಡೆದು ಕುವೆಂಪು ಮನೆ ನೋಡಲು ಒಳ ಹೋದವು. ಕುವೆಂಪು ಮನೆಯಲ್ಲಿ ಅವರು ಉಪಯೋಗಿಸುತ್ತಿದ್ದ ವಸ್ತುಗಳು ಹಾಗೂ ಅವರು ಕೊಡುತ್ತಿದ್ದ ಬಟ್ಟೆಗಳನ್ನು ನೋಡಿ ಒಂದುಕ್ಷಣ ರೋಮಾಂಚನಗೊಂಡಿತು. ಸುಂದರವಾದ ವಾತಾವರಣದಲ್ಲಿ ಕುವೆಂಪು ಬೆಳೆದಿದ್ದಾರೆ ಎಂಬುವುದು ನಮಗೆ ನಿಜಕ್ಕೂ ಅಚ್ಚರಿ ಮತ್ತು ವಿಸ್ಮಯಕಾರಿ ವಿಷಯದ ಹಾಗೆ ತಿಳಿಸಿ. ಕುವೆಂಪುರವರ ಪ್ರಶಸ್ತಿಗಳು ಹಾಗೂ ಅವರ ಮೊದಲ ಆವೃತ್ತಿಯಲ್ಲಿ ಮುದ್ರಣವಾದ ಪುಸ್ತಕಗಳನ್ನು ನೋಡಿ ನಾವೂ ಆನಂದಮಯ ಪಟ್ಟವು ಆನಂತರ ಕುವೆಂಪುರವರ ಪುಸ್ತಕಗಳನ್ನು ಕೊಳ್ಳಲು ನಾನು ಮತ್ತು ನನ್ನ ಗೆಳತಿ ಸಹನಾ ರವರು ಕುವೆಂಪುರವರ ಪುಸ್ತಕಗಳನ್ನು ಕೊಳ್ಳಲು ಕಾತುರದಿಂದ ನಾವು ಹೊರಟಾಗ ಅಲ್ಲಿನ ಮೊದಲನೇ ದಿನ ಮಲೆಗಳಲ್ಲಿ ಮದುಮಗಳು ಕೃತಿಯನ್ನು ಕೊಂಡು. ಕುವೆಂಪುರವರ ಮನೆ ಮುಂದೆ ಕೆಲವೊಂದು ಫೋಟೋಗಳನ್ನು ತೆಗೆದುಕೊಂಡು ಅಂದಿಂದ ನಾವು ಶಿಬಿರಕ್ಕೆ ಮತ್ತೆ ತೆರಳಿದವು.
ಹಾಗೆ ನಾವು ಎರಡನೆಯ ದಿನದ ಪಯಣವನ್ನು ಅದೇ ರೀತಿ ಆರಂಭ ಮಾಡಿದವು ಮತ್ತೆ ಬೆಳಗ್ಗೆ ಆದ ತಕ್ಷಣ ಕುವೆಂಪುರವರ ಕವಿಶೈಲ ನೋಡಲು ಅಲ್ಲಿ ಕೆಲವು ಕ್ಷಣ ಕುಳಿತು ಧ್ಯಾನ ಮಾಡಿ ನನ್ನ ಮನಸ್ಸಿಗೆ ಎನಿಸುವ ಗೋಚರಿಸುವ ಕೆಲಸವನ್ನು ಇದೇ ರೀತಿ ಪ್ರಾರಂಭ ಮಾಡಿದೆ. ಈಸಂದರ್ಭದಲ್ಲಿ ನನಗೆ ಪಾಠ ಮಾಡಿದ ಹಳೆಯ ಗುರುಗಳ ನೆನಪಾಯಿತು ಅವರು ನನಗೆ ಒಂದು ಮಾತು ಹೇಳಿದರು ನೀನು ಮಲೆನಾಡಿನ ಸೌಂದರ್ಯವನ್ನು ಒಮ್ಮೆ ಸವಿದರೆ ಇನ್ನೂ ಹೆಚ್ಚಿನ ಮತ್ತು ಸುಂದರ ಕವನಗಳನ್ನು ಬರೆಯುವ ಎಂಬ ಮಾತು ನನ್ನ ಮನದಲ್ಲಿ ನೆನಪಾಯಿತು.
ಅದೇ ವಿಷಯವನ್ನು ನಾನು ನನ್ನ ಮನದಲ್ಲಿ ನೆನೆದುಕೊಂಡು ಕುವೆಂಪುರವರ ಸಾಹಿತ್ಯವನ್ನು ಒಮ್ಮೆ ಮೆಲುಕು ಹಾಕುತ್ತಿದ್ದೆ. ಆ ಸಂದರ್ಭದಲ್ಲಿ ನನಗೆ ಕೆಲವು ಸಾಲುಗಳು ಗೀಚಿದ ಆ ಸಾಲುಗಳನ್ನು ನೆನೆದುಕೊಂಡು ಅಲ್ಲೇ ಕುಳಿತು ಒಂದು ಕವನ ಬರೆದೆ. ಆ ಕವನವು ನನಗೆ ತುಂಬಾ ಅಂದರೆ ತುಂಬಾ ಪ್ರಭಾವ ರೀತಿಯಲ್ಲಿ ಇಷ್ಟವಾಯಿತು. ಅದೇ ರೀತಿ ನಮ್ಮ ಶಿಬಿರದ ಎರಡನೇ ದಿನದ ಅಧ್ಯಯನವು ಮುಂದುವರೆಯಿತು. ಬೆಳಿಗ್ಗೆ ಪ್ರಾರಂಭವಾದರೆ ಸಂಜೆಯವರೆಗೂ ಹೊಸ ಹೊಸ ಅನುಭವಗಳ ಅಧ್ಯಯನಗಳನ್ನು ತಿಳಿಸುತ್ತಿದ್ದ ಸಂಪನ್ಮೂಲ ವ್ಯಕ್ತಿಗಳು. ನಮ್ಮ ಮಂಡ್ಯ ಭಾಗ ಬಿಟ್ಟು ಶಿವಮೊಗ್ಗದ ಮಲೆನಾಡಿನ ಹೊಸ ಬಗೆಬಗೆಯ ಊಟಗಳು. ಇದರ ಜೊತೆಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಹೇಳಿರುವ ಅನೇಕ ರೀತಿಯ ಮಾಹಿತಿಗಳನ್ನು ನಮ್ಮ ಪುಸ್ತಕದಲ್ಲಿ ಬರೆದುಕೊಂಡು ಅಲ್ಲಿನ ಮಾಹಿತಿಗಳನ್ನು ನಾವು ನಮ್ಮ ಪುಸ್ತಕದಲ್ಲಿ ಬರೆಯುತ್ತ ಹೋಗುತ್ತಿದ್ದವು. ಹೀಗೆ ನಮ್ಮ 2ನೇದಿನದ ಶಿಬಿರವು ಮುಗಿದು ಸಮಾರೋಪದ ಹಂತಕ್ಕೆ ಬಂದು ಸಮಾರೋಪ ಸಮಾರಂಭವು ಮುಗಿದುಹೋಯಿತು ಊರಿಗೆ ಹೋಗುವ ಕ್ಷಣ ಬಂದೇ ಬಿಟ್ಟಿತು. ಎರಡು ದಿನದಲ್ಲಿ ಆಗಿದ್ದ ಸ್ನೇಹವನ್ನು ನಮಗೂ ಬಿಟ್ಟು ಹೋಗಲು ತುಂಬಾ ಕಷ್ಟವಾಗುತ್ತಿತ್ತು.
ಈ ಶಿಬಿರ ಮುಗಿದ ತಕ್ಷಣ ನಾವು ಹೊರಡಬೇಕಾಗಿತ್ತು ಆದರೆ ನಮಗೆ ಆ ದಿನ ರೈಲ್ವೆ ಟಿಕೆಟ್ ದೊರೆಯಲಿಲ್ಲ. ಒಂದು ಕಡೆ ಬೇಸರ ಇನ್ನೊಂದು ಕಡೆ ತುಂಬಾ ಅಂದ್ರೆ ತುಂಬಾ ಆನಂದ ಏಕೆಂದರೆ ಇನ್ನೂ ಒಂದು ದಿನ ನಾವು ಕುವೆಂಪುರವರ ಮನೆಯಲ್ಲಿ ಉಳಿಯಬಹುದಾದ ಎಂಬ ಸಂತೋಷವು ನಮಗೆ ಮೂಡಿತು. ಇವುಗಳ ಮುಗಿದ ತಕ್ಷಣ ನಾವೆಲ್ಲ ಸ್ವಲ್ಪಹೊತ್ತು ವಿಶ್ರಾಂತಿ ಪಡೆದುಕೊಂಡು ನಾವು ಕುವೆಂಪು ಮನೆಯ ಕಡೆಗೆ ಪಯಣ ಬೆಳೆಸಿದೆವು. ನಾನು ಮತ್ತು ನನ್ನ ಸ್ನೇಹಿತರು ಕಾಡುಗಳನ್ನು ಸುತ್ತಾಡಿಕೊಂಡು ಬರೋಣ ಎಂದು ಒಂದು ಯೋಚನೆ ಮಾಡಿದವು ಆದರೆ ಅಲ್ಲಿದ್ದ ಬೇರೆ ಶಿಬಿರ ಅಭ್ಯರ್ಥಿಗಳು ಇದನ್ನು ಬೇಡ ಎಂದು ನಿರಾಕರಿಸಿದರು ಆ ಕಾರಣದಿಂದ ನಮಗೆ ಸ್ವಲ್ಪ ಬೇಸರವಾಯಿತು. ಆದರೂ ನಾವು ಬಿಡಲಿಲ್ಲ ಕುವೆಂಪುರವರ ಮನೆಯಿಂದ ಕವಿಶೈಲ ಇರುವ ಕಾಲುದಾರಿಯಲ್ಲಿ ಬೆಟ್ಟಏರಿದೆ ರಾತ್ರಿಯಲ್ಲಿ ಚಂದ್ರ ಮುಳುಗುವ ಸಂದರ್ಭದಲ್ಲಿ ಮಲೆನಾಡಿನ ಸೌಂದರ್ಯವು ಒಂದು ಸುಂದರ ಎಂದು ತಿಳಿದು ನಾ ಆನಂದ ಪಟ್ಟೆ. ಹಾಗೆ ಆ ದಿನ ಮುಗಿದ ತಕ್ಷಣ ಮಾರನೆ ದಿನ ಬೆಳಗ್ಗೆ ನಾವು 5ಗಂಟೆಗೆ ಕುವೆಂಪು ಮನೆಯನ್ನು ಬಿಟ್ಟು ನಮ್ಮ ಊರಿಗೆ ತಲುಪಬೇಕಾಗಿತ್ತು. ನನ್ನ ಮನದಲ್ಲಿ ಕೊನೆಯಬಾರಿ ಕವಿಶೈಲ ನೋಡಬೇಕೆಂದು ತುಂಬಾ ಹಂಬಲವಿತ್ತು ಆದರೆ ನಮ್ಮ ಕೊಠಡಿಯ ಬೀಗವನ್ನು ಬೇರೆಯವರು ಹಾಕಿ ಅವರು ಬೇರೆ ಕೋಣೆಯಲ್ಲಿ ಮಲಗಿದ್ದರು ಆದರೆ ನಾನು ಬಿಡಲಿಲ್ಲ ಹಿಂದಿನ ಬಾಗಿಲಿನಿಂದ ಹೋಗಿ ಕೆ 4 ಗಂಟೆಗೆ ಕವಿಶೈಲವನ್ನು ಹೇರಿ ಅಲ್ಲಿನ ಸೌಂದರ್ಯವನ್ನು ಸವಿದು ನಾನು ಊರಿನ ಕಡೆ ಹೊರಟೆ. ಮರೆಯಲಾಗದ ಸೌಂದರ್ಯ ಮರೆಯಲಾಗದ ಸಾಹಿತ್ಯ ಮರೆಯಲಾಗದ ಕುವೆಂಪು ತಾಣ ಇವೆಲ್ಲವನ್ನೂ ನೋಡಿ ನನಗೆ ಒಂದು ಕ್ಷಣ ಅಲ್ಲಿರುವ ಆಸೆ ಹೆಚ್ಚಾಯಿತು. ಕುವೆಂಪುರವರ ತಾಣದಲ್ಲಿ ಇಷ್ಟೊಂದು ನೆಮ್ಮದಿ ಇದೆ ಎಂದು ನನಗೆ ಒಂದು ತಿಳಿಯಿತು ನನಗೆ ಅಲ್ಲೇ ಉಳಿದುಕೊಳ್ಳಲು ತುಂಬಾ ಎಂದರೆ ತುಂಬಾ ಆಸೆ ಆಯಿತು.
ನಾವು ವಿದ್ಯಾರ್ಥಿಗಳು ಕುವೆಂಪು ಸಾಹಿತ್ಯವನ್ನು ಹೆಚ್ಚಾಗಿ ಓದಬೇಕು. ಕುವೆಂಪು ಸಾಹಿತ್ಯ ಓದಿ ಅರ್ಥ ಮಾಡಿಕೊಂಡು ಬೇರೆಯವರಿಗೂ ಹೇಳಿಕೊಡಬೇಕು. ಕವಿ ಮನೆಗೆ ಭೇಟಿ ನೀಡಿ ಹೊಸ ಅನುಭವವನ್ನು ಪಡೆದುಕೊಳ್ಳಬೇಕು. ಕುವೆಂಪು ಅವರ ಜೀವನ ಶೈಲಿಯನ್ನು ನಾವು ಅನುಸರಿಸಿಕೊಂಡು ಹೊಸಬದುಕನ್ನು ಕಟ್ಟಿಕೊಳ್ಳಬೇಕು ಎಂದು ಈ ಲೇಖನದ ಮೂಲಕ ಆಶಿಸುತ್ತೇನೆ.
- ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ
ಅಕ್ಕಿಹೆಬ್ಬಾಳು ಗ್ರಾಮ
ಕೃಷ್ಣರಾಜಪೇಟೆ ತಾಲ್ಲೂಕು
ಮಂಡ್ಯ ಜಿಲ್ಲೆ-571605.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ