ಶನಿವಾರ, ಜನವರಿ 8, 2022

ಮರುಗದಿರು ಮನವೇ (ಕಥೆಯಾದರಿತ ಲೇಖನ) - ಶ್ರೀಮತಿ ಸುಮಂಗಲಾ ಕೃಷ್ಣಾ ಕೊಪ್ಪರದ

ಮಟಮಟ ಮಧ್ಯಾಹ್ನ....., ಕಪ್ಪನೆಯ ಮೋಡಗಳ ದಟ್ಟ ರಾಶಿಯು ಒಮ್ಮಿಂದೊಮ್ಮೆಲೆ ಆವರಿಸಿತ್ತು. ಬಿಸಿಲಿನ ತಾಪಮಾನ ತಗ್ಗಿ ,ಸೂರ್ಯನು ಮೋಡಗಳ ನಡುವೆ ಆಗಾಗ್ಗೆ ಕಣ್ಣು ಮಿಟುಕಿಸುತಿರುವಂತೆ ಭಾಸವಾಗುತ್ತಿತ್ತು .ಮಳೆ ಸೂಚನೆಯ ವಾತಾವರಣ .ಕೂಡಲೇ ಮನೆಯ ಅಂಗಳದಲ್ಲಿ ಬಿಸಿಲಿನ ತಾಪಕ್ಕೆಂದು ಹಾಕಿದ ಹಪ್ಪಳ ,ಸಂಡಿಗೆಗಳನ್ನು ಎತ್ತಿಟ್ಟು, ಅವಸರವಸರವಾಗಿ ಅಡುಗೆ ಮಾಡಿ ತಾನೂ ಒಂದಿಷ್ಟು ಡಬ್ಬಿಯಲ್ಲಿ ಬುತ್ತಿ ಕಟ್ಟಿಕೊಂಡು, ಕೆಲಸದಾಳನ್ನು ಕೂಗುತ್ತಾ, ಸಿದ್ಧಪ್ಪಾ ....ಸಿದ್ದಪ್ಪಾ ..ಎಲ್ಲಿದ್ದೀಯಾ ?ಬೇಗ ಬಾರೋ... ಮಳೆ ಬರ್ಬಹುದು, ಬೇಗ ಬಂಡಿ  ಹೂಡಿಕೊಂಡು ಹೊಲಕ್ಕೆ ಹೋಗಬೇಕು .ಶೇಂಗಾ ಬಣವಿ ಒಟ್ಟಿದ್ದಾರೋ ಇಲ್ಲವೋ..... ತಾಡಪಲ್ಲು, ಪ್ಲಾಸ್ಟಿಕ್ ಹಾಳೆ ಬಂಡ್ಯಾಗ ಹಾಕು .ಬಣವೆ ಮೇಲೆ ಹೊಚ್ಚಿ ಬರಬೇಕು .ಇಲ್ಲಾಂದ್ರೆ ಹೊಟ್ಟು ಕೆಟ್ಟು ಹೋಗುತ್ತೆ... ಎಂದು ಆತುರಾತುರವಾಗಿ   ಉಮಾ ಕೆಲಸದಾಳನ್ನು ಕರೆದುಕೊಂಡು ಹೊಲದತ್ತ ಸಾಗಿದಳು.ಮಗಳು ಸುಹಾಸಿನಿ ಅಮ್ಮ ಅವಸರವಸರವಾಗಿ ಹೊಲಕ್ಕೆ ಹೋಗೋದನ್ನ ನೋಡಿ ನಿದಾನಮ್ಮ ಯಾಕಿಷ್ಟು ಅವಸರ?.....ಎನ್ನುತ್ತಿದ್ದಂತೆ ,ಬಂದೆ ಇರು ಕೂಸೇ, ಎನ್ನುತ್ತ ಹೊಲಕೆ ಬಂಡಿಯಲ್ಲಿ ಹೋದಳು .  ಕೆಲಸಗಾರರು ಮಳೆಯ ಸೂಚನೆ ಅರಿತು ಬಣವೆ ಒಟ್ಟುತ್ತಿದ್ದರು .ಮಳೆ ಬಂದೇ.... ಬಿಡ್ತು. ಉಮಾ ಸಿದ್ಧಪ್ಪನಿಗೆ ತಾಡಪಲ್ ,ಪ್ಲಾಸ್ಟಿಕ್ ಹೊದಿಕೆ ಹಾಕಿ ಹೊಟ್ಟಿಗೆ ಚಾಟ್ ಮಾಡಪ್ಪ ಎಂದು ಹೇಳುತ್ತಾ ....ಹೊಲದಲ್ಲಿಯೇ ಇದ್ದ ಒಂದು ಚಿಕ್ಕ ಗುಡಿಸಲಿಗೆ ಬಂದು ಕುಳಿತಳು. ಭೂಮಿ ಆಕಾಶ ಒಂದಾಗುವಂತೆ ಮಳೆ ಸುರಿಯುತ್ತಿದ್ದುದ್ದರಿಂದ ಕೆಲಸಗಾರರೆಲ್ಲ ಬಣವಿಗೆ ಹೊಚ್ಚಿ ಗುಡಿಸಲಿನತ್ತ ಧಾವಿಸಿ ಬಂದು ಮಾತಾಡ್ತಾ ಕುಳಿತರು. ಎಷ್ಟೋ ಜನ ಇನ್ನೂ ರಾಶಿ ಮಾಡಿಲ್ಲ,... ಶೇಂಗಾ ಕಿತ್ತಿಲ್ಲ .....ಈ ರೀತಿಯ ಮಳೆ ಆದರೆ ಬೆಳೆಯೆಲ್ಲಾ ಕೊಳೆತು ಹೋಗುತ್ತದೆ .ಮಳೆರಾಯ ಕಾಲಕಾಲಕ್ಕೆ ಬಂದರೆ ರೈತನ ಹೊಟ್ಟೆಗೆ ಹಿಟ್ಟು. ಇಲ್ಲವೆಂದರೆ 'ಸಾಲದಾಗ ಹುಟ್ಟಿ, ಸಾಲ್ದಾಗ ಸಾಯಬೇಕಾಗುತೆ'  ಎಂದು ಗೊಣಗುತ್ತಾ ಮಳೆ ನಿಂತ ಮೇಲೆ ಪುನಃ ಕೆಲಸದತ್ತ ತೆರಳಿದರು. 
                  ಕೆಲಸಗಾರರೆಲ್ಲಾ ಹೋದಮೇಲೆ ಉಮಾ ಗುಡಿಸಲಿನ ಹೊರಗೆ ಬಂದುನಿಂತು ಆಕಾಶದತ್ತ ಮುಖ ಮಾಡಿದಾಗ,ಶುಭ್ರ ನೀಲ ಗಗನದಲಿ ಸಪ್ತ ಬಣ್ಣಗಳ  ಕಾಮನಬಿಲ್ಲು ಮೂಡಿದ್ದನ್ನು ಕಂಡು ಸಂತಸ ಪಟ್ಟಳು .ಗುಡಿಸಲಿನ ಮುಂದಿದ್ದ ಗರಿಕೆ, ಹುಲ್ಲಿನ ರಾಶಿ ,ತುಳಸೀ ಗಿಡ ,ಹೂವಿನ ಗಿಡಗಳ ಮೇಲೆ ಬಿದ್ದ ಮಳೆನೀರು ಮುತ್ತಿನ ಹನಿಗಳಂತೆ ಕಾಣುತ್ತಿದ್ದವು .ತಣ್ಣನೆಯ ಗಾಳಿ ಸುಯ್ಯನೇ   ಸುಳಿಯಲು ತೆಂಗಿನ ಗಿಡದ ಎಲೆಗಳಲ್ಲಿ ನಿಂತಿದ್ದ ನೀರಿನ ಹನಿಗಳು ಪಟಪಟನೆ ಧರೆಗುರುಳಿದವು. 
ಮಳೆ ಹನಿಗಳ ನಗುವಿನಿಂದ ಹೂಗಳ ಸೌಂದರ್ಯ ಇನ್ನಷ್ಟು ಹೆಚ್ಚಿದಂತೆ ಭಾಸವಾಗುತ್ತಿತ್ತು .
    
                      ನಗುವಿನಿಂದ ಕಂಗೊಳಿಸುತ್ತಿದ್ದ ಹೂಗಳನ್ನು ನೋಡುನೋಡುತ್ತಿದ್ದಂತೆ ,ಉಮಾ ಅವುಗಳನ್ನು ಬಿಡಿಸಿ ಮನೆಗೊಯ್ಯೋಣವೆಂದು ಕೊಂಡು ಕನಕಾಂಬರಿ ಮತ್ತು ಮಲ್ಲಿಗೆ ಹೂಗಳನ್ನು ಬಿಡಿಸತೊಡಗಿದಳು.ಹೂಗಳು ಒಂದಕ್ಕೊಂದು ಮಾತಾಡುತ್ತಿದ್ದವು. ನಮ್ಮನ್ನೆಲ್ಲ ಬಿಡಿಸಿಕೊಂಡು ಹೋಗ್ತಾರೆ, ದೇವರಿಗೆ ಅರ್ಪಿಸಿದರೆ ನಮಗೆ ಧನ್ಯತೆಯ ಭಾವ ಬರುತ್ತದೆ. ಇವರು ಏನ್ ಮಾಡ್ತಾರೋ.... ಏನೋ? ....ಎಂದು ಒಂದಕ್ಕೊಂದು ಎಂದು ಗೊಣಗುತ್ತಿದ್ದವು. ಅಲ್ಲಿಯೇ ಇದ್ದ ತುಳಸೀಗಿಡ ಅವುಗಳ ಮಾತು ಕೇಳಿ ,ಅದರ ಚಿಂತೆ ನಿಮಗೇಕೆ? ನಿಮ್ಮನ್ನು ದೇವರ ಪಾದಕ್ಕಾದರೂ ಅರ್ಪಿಸಲಿ, ತಾವಾದರೂ ಮುಡಿಯಲಿ ,ಸಭೆ ಸಮಾರಂಭಕ್ಕಾದರೂ ಬಳಸಲಿ, ಮಸಣದ ಪೂಜೆಗಾದರೂ ಒಯ್ಯಲಿ, ನಿಮ್ಮ ಮೌಲ್ಯವೇನೂ ಕಡಿಮೆಯಾಗುವುದಿಲ್ಲವಲ್ಲ...... ದೇವರ ಪಾದಕ್ಕೆ ಎಂದು ಏಕೆ ಕೇಳುವೆ? ಎಂದಿತು. ಅದಕ್ಕೆ ಹೂವುಗಳು ಮಾನವ ಮಾತ್ರ.... ಶ್ರೇಷ್ಠವಾದದ್ದನ್ನೇ ಬಯಸುತ್ತಾನೆ. ಶ್ರೀಮಂತಿಕೆ ,ಒಳ್ಳೆಯ ಊಟ, ಬಟ್ಟೆ ,ನೋಟ, ಜೀವನ ,ಸಹವಾಸ ಈ ಎಲ್ಲದರಲ್ಲಿ ಉತ್ತಮವಾದದ್ದನ್ನೇ ಆರಿಸುತ್ತಾನೆ. ನಾವು.... ದೇವರಿಗೆ ಅರ್ಪಿತವಾಗಬೇಕು ಎಂಬ ಬಯಕೆ ತಪ್ಪೆ ? ಎಂದು ತುಳಸಿ ಗಿಡಕ್ಕೆ ಮರು ಪ್ರಶ್ನಿಸಿತು.ಆಗ ಆ ಮಾತನ್ನು ಗರಕಿಯು ಆಲಿಸಿತು. ಎರಡು ಮುಸಿ ಮುಸಿ ನಕ್ಕವು .ತುಳಸಿ ಹೇಳಿತು....ನನ್ನಲ್ಲಿ ದೇಹದ ಪೋಷಣೆಗೆ ಅಗತ್ಯವಾದ ಲೋಹಾಂಶಗಳು ಇವೆ .ಮಾನವನ ಪ್ರತಿಯೊಂದು ಕಾಯಿಲೆಗೂ ಔಷಧವಾಗಿ ಬಳಸಲ್ಪಡುತ್ತೇನೆ.ನಿನ್ನಷ್ಟೇ ನಾನು ಶ್ರೇಷ್ಠವೆಂದು ಭಗವಂತನಿಗೆ ಅರ್ಪಿಸುತ್ತಾರೆ. ಆದರೆ ನಾನೆಂದೂ ನನ್ನನ್ನು ಹೀಗೇ.... ಬಳಸಿ ಎನ್ನುವುದಿಲ್ಲ. ಅದು ಮಾನವನ ಗುಣ ಸ್ವಭಾವಕ್ಕೆ ಬಿಟ್ಟದ್ದು. ನನಗಿಂತಲೂ  ಎತ್ತರದ ತೆಂಗಿನ ಮರ ತನ್ನಿಂದ ಜೀವಜಲ ಸ್ಪುರಿಸುತ್ತದೆ. ಅದು ತನ್ನನ್ನು ಶ್ರೇಷ್ಠ ,ಕನಿಷ್ಠ ಎಂದು ಎಂದಿಗೂ ನೋಡಿಲ್ಲ. ನಾವು ನಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಿದರೆ ನಮಗೆ ಸಿಗಬಹುದಾದ ಸ್ಥಾನಮಾನಗಳು ಸಿಗುತ್ತವೆ. ಉದಿಸಿದ ಪ್ರತಿಯೊಂದು ಸಸ್ಯವೂ..... ಶಿವನ ಮುಡಿ ಸೇರಲು ಸಾಧ್ಯವಿಲ್ಲ. ಕರ್ಮಾನುಸಾರ ಸ್ಥಾನ ನಮಗೆ ದೊರೆಯುತ್ತದೆ .ಊರಲ್ಲಿರುವ ನಮಗೆ ದೇವರ ಮುಡಿ ಸೇರುವ ಅವಕಾಶ. ಕಾಡಲ್ಲಿ ದ್ದವರಿಗೆ ಇನ್ನಾರಿಗೋ ಔಷಧವಾಗಿ ಬಳಸಲ್ಪಟ್ಟು  ನಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳುತ್ತೇವೆ ಎಂದ ತುಳಸೀಗಿಡದ ಮಾತಿಗೆ, ನಿಜವೆಂದು ಹೇಳಿತು ಗರಕಿಹುಲೢು.ಅತಿ ಎತ್ತರದ ಗಿಡದಲ್ಲಿ ಅರಳಿದರೂ ನಿನಗಿಲ್ಲದ ಸ್ಥಾನ ಗಣಪನ ಪೂಜೆಗೆ ನನ್ನನ್ನು ಬಳಸುತ್ತಾರೆ. ಹಾಗಂತ..... ನಾನೆಂದೂ ಅಹಂಕಾರ ಪಡುವುದಿಲ್ಲ .ನನಗೆ ಉತ್ತಮ ವೇಳೆ ಬರುವವರೆಗೂ ಕಾಯುತ್ತೇನೆ ಅಷ್ಟೆ. ಅಲ್ಲಿಯವರೆಗೂ ಯಾರಿಗೋ ಔಷಧವಾಗಿ, ಆಹಾರವಾಗಿ, ಉಪಯೋಗವಾಗುತ್ತೇನೆ ಎಂದಿತು ಗರಕಿಹುಲೢು.ಇದಾವುದರ ಪರಿವೆಯೇ ಇಲ್ಲದೆ ಉಮಾ ಯಾವುದೋ.... ಹಾಡನ್ನು ಗುನುಗುಡುತಾ .....ಹೂಗಳನ್ನ ಬಿಡಿಸಿಕೊಂಡು ತುಳಸಿ, ಗರಕಿಯನ್ನು ಕಿತ್ತುಕೊಂಡು ಬುಟ್ಟಿಯಲ್ಲಿ ಹಾಕಿ, ಮನೆಗೆ ಹೊರಡಲು ಸಿದ್ಧಳಾದಳು . ಭಾರದ ಚಪ್ಪಲಿ ಹಾಕಿಕೊಂಡು ಭರ ಭರನೇ .....ಭರ ಭರನೇ.... ನಡೆಯುತ್ತಾ ಹೋಗಿ  ಬಂಡಿ ಹತ್ತಿದಳು.ಅವಳ ರಭಸದ ನಡಿಗೆಗೆ ಎಷ್ಟೋ ಗರಕಿಯ ಸಸಿ ನಲುಗಿ ಬಾಡಿತು. ಅದನ್ನು ಕಂಡ ಮಲ್ಲಿಗೆ, ಕನಕಾಂಬರ ಹೂಗಳು ನೋವಾಯಿತಾ ಗೆಳೆಯಾ ?...ಎಂದು ಗರಕಿಯನ್ನು ಕೇಳಿದವು. ಅದಕ್ಕೆ ನಗುತ್ತಾ ಗರಕಿ ಯು ಇಲ್ವಲ್ಲಾ.... ಒಬ್ಬರು ಬದುಕಬೇಕೆಂದರೆ ಇನ್ನೊಬ್ಬರು ನಲುಗಲೇಬೇಕು. ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಎಲ್ಲರಿಗೂ ಕೊಟ್ಟಿರುತ್ತಾನೆ .ಅಲ್ಲಿ ನೋಡು ಶೇಂಗಾದ ಬಣವಿಯನ್ನು...... ಮನುಷ್ಯ ಭೂಮಿಯಿಂದ ಅದನ್ನು ಬೇರ್ಪಡಿಸಿದ ಕೂಡಲೇ ಅದು ಮರಣ ಹೊಂದುತ್ತದೆ. ಹಾಗಂತ ಅದನ್ನು ಹಾಗೆಯೇ ಬಿಡಲಾಗುವುದಿಲ್ಲ, ಮಾನವನ ಬದುಕಿಗಾಗಿ ನಿಗದಿತ ಅವಧಿಗೆ ಅದರ ಅಂತಿಮ ಅವಸಾನ ನಿಶ್ಚಿತ .ಪ್ರತಿಯೊಂದು ಧಾನ್ಯದ ಸ್ಥಿತಿಯೂ ಹೀಗೆ....... ಜೀವ ಕಳೆದುಕೊಂಡ ಪ್ರತಿಯೊಂದು ಸಸ್ಯಕ್ಕೆ ಅದರ ಬೀಜದಲ್ಲಿ ಚೈತನ್ಯ ತುಂಬಿ ಪುನಃ ಭೂಮಿಗೆ ಬಿದ್ದೊಡನೆ ಮರುಹುಟ್ಟು ಪಡೆಯುವ ಶಕ್ತಿಯನ್ನು  ಭಗವಂತ ತುಂಬಿರುತ್ತಾನೆ. "ಪುನರಪಿ ಜನನಂ ಪುನರಪಿ ಮರಣಂ" ಇದು ಸೃಷ್ಟಿಯ ನಿಯಮವಲ್ಲವೇ ? ಹಾಗೆಯೇ ನಾವೆಲ್ಲಾ......ಹಾಗಂತ ಎಲ್ಲ ಬೀಜಗಳು ಮರುಹುಟ್ಟು ಪಡೆಯುವುದಿಲ್ಲ .ಕೆಲವು ಬೀಜಗಳು ಮನುಷ್ಯ, ಪ್ರಾಣಿಗಳಿಗೆ ಆಹಾರವಾದರೆ.... ಮತ್ತಷ್ಟು ಬೀಜಗಳಿಗೆ ಮಾತ್ರ ಮರುಜನ್ಮದ ಸೌಭಾಗ್ಯ . ಇದು ಕೇವಲ ನಮಗೆ ಮಾತ್ರವಲ್ಲ ಮಾನವನಿಗೂ ಸಹ ಅನ್ವಯವಾಗುತ್ತದೆ .ಪ್ರತಿಯೊಬ್ಬ ಮನುಷ್ಯನ ಸಾವು ವಿಧಿ ಲಿಖಿತ. ಅವನು ಶ್ರೀಮಂತನೇ ಇರಲಿ ,ಬಡವನೇ ಇರಲಿ' ಯಾವಾಗ ಮಾನವನ ಅವಸಾನವೆಂಬುದು ಸೃಷ್ಟಿಸಿದ ಭಗವಂತನಿಗೆ ಮಾತ್ರ ಗೊತ್ತು. ಆ ರಹಸ್ಯ ಭೇದಿಸಲು ಸಾಧ್ಯವೇ?... ಎಂದಾಗ ಹೂಗಳು ಮೌನಕ್ಕೆ ಶರಣಾಗತವಾದವು. 
           ಮಳೆ ನಿಂತಿದ್ದರಿಂದ, ಮನೆಯಂಗಳದಲ್ಲಿ ನಿಂತ ನೀರಿನಲ್ಲಿ ಆಟವಾಡುತ್ತಾ ಮಗಳು ಸುಹಾಸಿನಿ ,ಅಮ್ಮ ಬಂದಿರುವುದನ್ನು ನೋಡಿ ಅಮ್ಮ ಬಂದ್ಲು..... ಅಮ್ಮ ಬಂದ್ಲು...... ಎಂದು ಚಪ್ಪಾಳೆ ಹಾಕುತ್ತಾ ಕೂಗಿದಳು.ಹೂವಿನ ಬುಟ್ಟಿಯೊಂದಿಗೆ ನಿಟ್ಟುಸಿರುಬಿಡುತ್ತಾ..... ಮನೆಗೆ ಬಂದ ಉಮಾಳನ್ನು ಕಂಡು ಏಕೆ?.... ಏನಾಯ್ತು?...... ಮಳೆಯಲ್ಲಿ ನೆನೆಯಲಿಲ್ಲ ತಾನೆ?.... ಎಂದು ಪತಿರಾಯ ನರಹರಿ ಕೇಳಿದಾಗ ,ಇಲ್ಲಾರಿ..... ಶೇಂಗಾ ಬಣವಿಗೆ ಚಾಟ್  ಮಾಡಿ ಬರಲುಹೋಗಿದ್ದೆ .ಹಾಗೆ ಹೂವು ಬಿಡಿಸ್ಕೊಂಡು ಬಂದೆ ,ಎಂದು ಪತಿರಾಯನ ಕೈಗೆ ಹೂವಿನ ಬುಟ್ಟಿ ಕೊಟ್ಟು.... ದೇವರ ಮನೇಲಿ ಇಡಿ,ನಾಳೆ ಪೂಜೆಗೆ ಬೇಕು ಎಂದಳು. ಉಮಾಳ ಮಾತನ್ನು ಕೇಳಿ ಹೂಗಳು ಬುಟ್ಟಿಯಲ್ಲೇ ಸಂತೋಷ ಪಟ್ಟವು .ನಾಳೆ ನಾವು ದೇವರ ಪಾದಕೆ ಅರ್ಪಿತವಾಗುತ್ತೇವೆ ಎಂದು ಆನಂದಿತವಾದವು. ಅಷ್ಟರಲ್ಲಿಯೇ ..... ಹೂವುಗಳ ಅಂದವನ್ನು ಕಂಡ ಮಗಳು ಸುಹಾಸಿನಿ, ಅಮ್ಮಾ ಅಮ್ಮಾ ,ನಾನು ಹೂವು ಮುಡಿದುಕೊಳ್ಳುತ್ತೇನೆ ಕಟ್ಕೊಡು ಎಂದು ಮಾಲೆ ಮಾಡಿಸಿಕೊಂಡು ಹೂವನ್ನು ಮುಡಿದಳು.ಉಮಾ ಗರಕಿ ಮತ್ತು ತುಳಸಿ ಮಾಲೆ ಮಾಡಿ ಮಾರನೆದಿನ ದೇವರಿಗರ್ಪಿಸಿದಳು. 
                ತುಳಸಿ ಮತ್ತು ಗರಕಿಗೆ ಅದೃಷ್ಟದ ಶುಭ ದಿನ. ದೇವರ ಕೊರಳಿಗೆ ಹಾರವಾಗಿ ಧನ್ಯತಾಭಾವ ಮೆರೆದವು.ಸುಹಾಸಿನಿಯ ಮುಡಿಯಲ್ಲಿದ್ದ   ಹೂವುಗಳಿಗೆ ಗರಕೆ ಮತ್ತು ತುಳಸಿಯ ಮಾತುಗಳು ಸತ್ಯ ಎನಿಸಿದವು. ಯಾರ ಸ್ಥಾನ ಎಲ್ಲಿ ಎಂಬುದನ್ನು ಭಗವಂತ ಮೊದಲೇ ನಿರ್ಧರಿಸಿರುತ್ತಾನೆ. ಅದಕ್ಕಾಗಿ ಚಿಂತಿಸಿ ಫಲವಿಲ್ಲವೆಂದುಕೊಂಡು ಸುಹಾಸಿನಿ ಮುಡಿಯಲ್ಲಿ ನಗುವ ಚೆಲ್ಲಿದವು .ಅವಳ ಅಂದದ ನಗುಮಲ್ಲಿಗೆ ಕಂಡ ಹಲವರು ಅಯ್ಯೋ ಎಷ್ಟು ಚೆನ್ನಾಗಿದೆ ಹೂವು!...... ನನಗೊಂದಿಷ್ಟು ತನ್ನಿ....     ನಮ್ಮ ಮನೆಯಲ್ಲಿ ನಾಳೆ ಪೂಜೆ ಇದೆ ಎಂದು ಪಕ್ಕದ ಮನೆಯವರು ಕೇಳಿದಾಗ..... ಸಂತೋಷದಿಂದಲೇ ಉಮಾ ಮಾರನೇ ದಿನ ಅದೇ ಗಿಡದ ಹೂಗಳನ್ನು ತರಿಸಿಕೊಟ್ಟಳು. ಅಂದು ಆ ಗಿಡದ ಹೂಗಳು ದೇವರ ಮುಡಿಗೇರಿ ಧನ್ಯತೆಯ ಭಾವ ಮೆರೆದವು. ಇಂದಿನ ಸ್ಥಿತಿ ಕಂಡು ದುಃಖಪಡದೆ ನಾಳೆ ಒಳ್ಳೆಯ ದಿನಗಳು ಇವೆ ಎಂದು ತಿಳಿದು ನಗುತಾ ಇನ್ನೊಬ್ಬರ ಮನಕೆ ಮುದ ನೀಡಿದ ಹೂವಿಗೆ ಭಗವಂತನ ಪಾದಕ್ಕೆ ಅರ್ಪಿತವಾಗುವ ಭಾಗ್ಯ ಒದಗಿ ಬಂತು.

                ಮಾರನೆಯ ದಿನ ಬೆಳಗಿನ ಜಾವ ಸೂರ್ಯರಶ್ಮಿ ತನ್ನ ಹೊಂಗಿರಣಗಳನ್ನು ಧರಣಿಗೆ ತಾಕಿಸಿದಾಗ ,ಉಮಾ ಮನೆಗೆಲಸ ಮುಗಿಸಿ, ಸಾರಣೆ ಮಾಡಿ,  ಸ್ನಾನ ಮಾಡಿ ,ಪೂಜೆಗೆ ಸಿದ್ಧತೆ ಮಾಡಿಕೊಂಡಳು .ಹಿಂದಿನ ದಿನ ದೇವರಿಗೆ ಸಮರ್ಪಿಸಿದ ತುಳಸಿ ಮತ್ತು ಗರಕಿ ಮಾಲೆಗಳನ್ನು ಬಾಡಿದ ಪುಷ್ಪ ಬುಟ್ಟಿಯಲ್ಲಿ ಹಾಕಿ, ಕೆಲಸದಾಳನ್ನು ಕರೆದು, ಇದನ್ನು ಹಳ್ಳಕ್ಕೆ ಹಾಕಿ ಬಾ..... ಎಂದು ಕೈಗಿತ್ತಳು. ಕೆಲಸದಾಳು ಆ ಬಾಡಿದ ಹೂ ಬುಟ್ಟಿ ಹಿಡಿದು ಸಣ್ಣದಾಗಿ ಹರಿಯುತ್ತಿದ್ದ ನೀರಿನ ತೊರೆಗೆ ಹಾಕಿ, ಮನೆಯತ್ತ ನಡೆದ .ತುಳಸಿ ಮತ್ತು ಗರಕಿ ಮಾಲೆಗಳು ತಮ್ಮ ಮುಂದಿನ ಜೀವನದ ಸ್ಥಿತಿಗತಿಗೆ ಹೊಂದಿಕೊಳ್ಳಲೇಬೇಕು......ಎಂದುಕೊಂಡು ನಿರ್ಲಿಪ್ತ ಭಾವನೆ ತಾಳಿದವು .ಕಡು ಬೇಸಿಗೆ ನೀರು ನಿಂತಲ್ಲೇ ನಿಂತು ನಿಂತು ಮಲಿನವಾಗುತ್ತಿತ್ತು. ಕ್ರಿಮಿ ಕೀಟಗಳು ಅವುಗಳ ಮೇಲೆ ಕುಳಿತು ರಾರಾಜಿಸುತ್ತಿದ್ದವು. ಇದು ಗರಕಿ ಮತ್ತು ತುಳಸಿಗೆ ಒದಗಿದ ಕಷ್ಟದ ದಿನಗಳಾಗಿದ್ದವು. ಭಗವಂತ ಆದಷ್ಟು ಬೇಗನೇ ಇಲ್ಲಿಂದ ಮುಕ್ತಿ  ಕರುಣಿಸು ದೇವಾ ಎಂದು ಆ ನೋವನ್ನು ಸಹಿಸಿಕೊಂಡವು. ಅಲ್ಲಿಯೇ ಒಂದು ಮರವಿತ್ತು. ಮರದ ಮೇಲೆ ಕುಳಿತ ಗಿಣಿಗಳೆರಡು ಕಲುಷಿತ ನೀರಿನಲ್ಲಿದ್ದ ತುಳಸಿ ಮತ್ತು ಗರಕಿಯ ಕಂಡು ನಗುತ್ತಿದ್ದವು.ಅವುಗಳ ನಗುವ ನೋಡಿ ತುಳಸಿ ಮತ್ತು ಗರಕಿಗಳು ಹೇಳಿದವು .....ನಗದಿರಿ ಹುಚ್ಚಪ್ಪಗಳಿರಾ....ಈ ದಿನ ನಿಮಗೆ ಶುಭದಿನವಿರಬಹುದು ಆದರೆ  ಇದು ಕಾಲಚಕ್ರ, ಹಗಲು ರಾತ್ರಿಗಳಂತೆ ಕಷ್ಟ ಮತ್ತು ಸುಖದ ದಿನಗಳು ಸರ್ವೇಸಾಮಾನ್ಯ. ಅದು ನಿಮಗೂ ಸಹ ಕಟ್ಟಿಟ್ಟ ಬುತ್ತಿ ಎಂದವು.ಅದನ್ನು ಕೇಳಿದ ಗಿಣಿಗಳೆರಡೂ ಅಹಂಕಾರದಿಂದ ನಗುನಗುತಾ ಹಾರಿಹೋದವು.  ಆದರೆ ಸಮಯ ಸರಿದಂತೆ ,ಮೋಡಗಳು ಕವಿದು, ಧಾರಾಕಾರ ಮಳೆ ಸುರಿದು, ಹಳ್ಳ ಕೊಳ್ಳಗಳೆಲ್ಲ ತುಂಬಿ ಹರಿಯತೊಡಗಿದುವು. ತುಳಸಿ ಮತ್ತು ಗರಕಿಗಳಿಗೆ ತಮಗೆ ನದಿ ಸೇರುವ ಉತ್ತಮ ದಿನಗಳ ಆಗಮನವಾಯಿತೆಂದು ಹರುಷಗೊಂಡವು. ಮಲಿನ ನೀರಿನಲ್ಲಿದ್ದ ಎಲ್ಲ ವಸ್ತುಗಳು ಹರಿಯುತ ನದಿ ಸೇರಿದವು.
            ಮಾರನೆಯ ದಿನ ಗಿಳಿಗಳೆರಡು ಹಾರ್ತಾ... ಹಾರ್ತಾ.... ಹಣ್ಣಿನ ತೋಟಕ್ಕೆ ಹಾರಿ ಬಂದವು.ಒಂದು ಗಿಳಿ ಹಣ್ಣನ್ನು ತಿನ್ನುತಿತ್ತು. ಅದನ್ನು ನೋಡಿದ ಕಾಡುಬೆಕ್ಕೊಂದು ಮೆಲೢನೆ ...... ಬಂದು...ಗಬಕ್ಕನೆ ಗಿಳಿಯನ್ನು ಹಿಡಿದು ಓಡಿಹೋಯಿತು.ಬೆಕ್ಕಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಆಗಲಿಲ್ಲ. ಅಷ್ಟರಲ್ಲಿ ಗಿಳಿಯ ಪ್ರಾಣಪಕ್ಷಿ ಹಾರಿಹೋಗಿತ್ತು.ಮತ್ತೊಂದು ಗಿಳಿಯನ್ನು ನೋಡಿದ ಬೇಟೆಗಾರ ಆ ಗಿಳಿಯನ್ನು ಹಿಡಿದು ಪಂಜರದಲ್ಲಿ ಬಂಧಿಸಿ ಮನೆಗೊಯ್ದ .ಸ್ವಚ್ಛಂದವಾಗಿ ಹಾರಾಡುತ್ತಾ ಇದ್ದಂತಹ ಗಿಳಿ ಪಂಜರದಲ್ಲಿ ಬಂಧಿಯಾಗಿ ವಿಲವಿಲನೆ ಒದ್ದಾಡುತ್ತಾ ಮೌನಿಯಾಯಿತು.ತುಳಸಿ ಗರಕಿಯ ಮಾತುಗಳು ಸತ್ಯವಾಗಿದ್ದವು.ಕಾಲಾಯ ತಸ್ಮೈ ನಮಃ ಎಂಬಂತಾಗಿತ್ತು ಅವುಗಳ ಸ್ಥಿತಿ. 
               ವರುಷಗಳು ಹಾಗೆ ಉರುಳಿದವು.... ಸುಹಾಸಿನಿ ಬೆಳೆದು ಪ್ರೌಢಾವಸ್ಥೆಯ ಹೊಸ್ತಿಲು ಮೆಟ್ಟಿದಳು .ಅಪ್ಪ ಅಮ್ಮಂದಿರ ಮುದ್ದಿನ ಲಾಲನೆ ಪಾಲನೆಯಲ್ಲಿ ವರುಷಗಳು  ಉರುಳಿದ್ದೆ ಗೊತ್ತಾಗಲಿಲ್ಲ......ವ್ಯವಸಾಯವೇ ಜೀವಾಳವೆಂದು ಕೊಂಡು ಹೊಲದಲ್ಲಿ ನಿತ್ಯ ಕಾಯಕದಲ್ಲಿ ತೊಡಗಿದ್ದರು ದಂಪತಿಗಳು.ಬೆಳಿಗ್ಗೆ ಎದ್ದ ಕೂಡಲೇ ಉಮಾಳ ಮನದಲ್ಲಿ ಏನೋ... ತಳಮಳ ....ಕಳವಳ... ಯಾವ ಕೆಲಸದಲ್ಲಿಯೂ ಆಸಕ್ತಿಯಿಲ್ಲ.ಮನಸ್ಸು ಭಾರವಾಗಿ ಏನೂ ಘಟಿಸಬಹುದೆಂಬ ಚಡಪಡಿಕೆ.ಅದೆಲ್ಲವನ್ನು ಮರೆತು ಮಗಳೊಂದಿಗೆ ಸಂತೋಷದಿಂದ ಇರಲು ಪ್ರಯತ್ನಿಸಿದಳು .  
                ಮುಸ್ಸಂಜೆಯ ಸಮಯ ಪಡುವಣ ದಿಕ್ಕಿನಲ್ಲಿ ಸೂರ್ಯ ಅಸ್ತಂಗತನಾಗುತ್ತಿದ್ದ.....ಎಂದಿನಂತೆ ಉಮಾ ಪತಿ ಮತ್ತು ಪುತ್ರಿಯೊಂದಿಗೆ ಸಂತೋಷದಿಂದ ಮಾತಾಡ್ತಾ ಕುಳಿತಿದ್ದಳು. ಅಷ್ಟರಲ್ಲಿ ಅಪ್ಪೋರೇ..... ಅಮ್ಮೋರೆ..... ಎಂಬ ಧ್ವನಿ ಕೇಳಿಸಿತು .ಕೆಲಸದಾಳು ಗಾಬರಿಯಿಂದ ಕೂಗುತ್ತ ಬಂದ.  ಅಪ್ಪೋರೇ,ಅಮ್ಮೋರೆ, ಯಾರೋ ಕಿಡಿಗೇಡಿಗಳು ನಮ್ಮ ಬಣೆವೆಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ .ಒಮ್ಮಿಂದೊಮ್ಮೆಲೆ ಎದೆ ಬಡಿತ ಹೆಚ್ಚಿಸಿಕೊಂಡ ದಂಪತಿಗಳು  ಹೊಲದತ್ತ ಧಾವಿಸಿದರು. ಶೇಂಗಾ ಬಣವಿ ಧಗಧಗ .....ಧಗಧಗ  ಹೊತ್ತಿ ಉರಿಯುತ್ತಿತ್ತು. ಕಷ್ಟಪಟ್ಟು ವರ್ಷಪೂರ್ತಿ ಬೆವರು  ಸುರಿಸಿ ಬೆಳೆದ ಬೆಳೆ ದುಷ್ಟ ಮನಸ್ಸುಗಳಿಂದ ಹಾಳಾಯಿತಲ್ಲ ಎಂದು ಎದೆ ಒಡೆದು ಪತಿರಾಯ ಹಾಗೇ ಕುಸಿದು ಬಿದ್ದ .ಉಮಾ ಮತ್ತಷ್ಟು ಘಾಬರಿಯಾಗಿ ರೀ....ಭಯ ಪಟ್ಕೋಬೇಡಿ ದೇವರಿದ್ದಾನೆ,.... ನೀವೇ ಧೈರ್ಯ ಕಳೆದುಕೊಂಡರೆ ನಮ್ಮ ಗತಿಯೇನು?... ಎಂದು ಧೈರ್ಯ ತುಂಬುತ್ತಲೇ ಇದ್ದಳು .ಆದರೆ ವಿಧಿಯಾಟ ಪತಿರಾಯ ಕೊನೆಯುಸಿರೆಳೆದಿದ್ದ. ಉಮಾಳಿಗೆ ಆಕಾಶವೇ ತಲೆಮೇಲೆ ಬಿದ್ದಂಗಾಯ್ತು. ಕರುಳು ಕಿತ್ತುಬರುವಂತೆ  ಬಿಕ್ಕಿ....ಬಿಕ್ಕಿ ಅತ್ತಳು. ಅದನ್ನು ನೋಡುತ್ತಿದ್ದಂತೆ ಕೆಲಸದಾಳುವಿನ ಕಣ್ಣಲ್ಲಿ ಅಶ್ರುಧಾರೆ ಸುರಿಯುತ್ತಿತ್ತು. ಯಜಮಾನ್ರೆ... ಯಜಮಾನ್ರೆ ಎಂದು ಅವರ ಪಾದಗಳನ್ನು ಹಿಡಿದು ಅಳತೊಡಗಿದ. ಸುಂದರ ಸಂಸಾರದಲ್ಲಿ ಬಿರುಗಾಳಿಯಂತೆ,  ನಗುನಗುತ್ತಾ ಜೀವನ ಸಾಗಿಸುತ್ತಿದ್ದ ಉಮಾಳ ಬಾಳಿನಲ್ಲಿ ಕತ್ತಲು ಕವಿದಿತ್ತು. ದುಃಖದ ಕಾರ್ಮೋಡ ಕಟ್ಟೆಯೊಡೆದು.... ಮಗಳನ್ನು ತಬ್ಬಿಕೊಂಡು ಅತ್ತಳು. ಸಿಂಧೂರ ಧರಿಸಿ ನಗುಮೊಗದಿ ಓಡಾಡುತ್ತಿದ್ದ ಅವಳ ಮೊಗದಲ್ಲಿ ಕ್ಷಣಮಾತ್ರದಿ ಸಿಂಧೂರ ಅಳಿಸಿ ವೈಧವ್ಯ ಪ್ರಾಪ್ತಿ ಆದಂತಹ ಹೃದಯವಿದ್ರಾವಕ ಘಟನೆ ಎಂಥವರ ಕಣ್ಣಂಚಿನಲ್ಲಿ ನೀರು ಜಿನುಗಿಸುತ್ತಿತ್ತು.

                    ವರುಷಗಳುರುಳಿದವು.....ಹೆಣ್ಣುಮಗಳನ್ನು ಬೆಳೆಸುತ್ತಾ ಗೌರವದಿಂದ ಜೀವನ ನಡೆಸುತ್ತಿದ್ದ ಉಮಾಳಿಗೆ ಮತ್ತಷ್ಟು ಕಷ್ಟದ ದಿನಗಳು ಎದುರಾಗಿದ್ದವು. ತುಳಸಿ ಮತ್ತು ಗರಕೆ ಮಾಲೆಗಳು ಕಲುಷಿತ ನೀರಿನಲ್ಲಿದ್ದಾಗ ಕ್ರಿಮಿಕೀಟಗಳು ಮುತ್ತಿಕೊಂಡಂತೆ..... ಉಮಾಳನು ಕೆಟ್ಟದೃಷ್ಟಿಯಿಂದ ಸಮಾಜ ನೋಡತೊಡಗಿತು. ಮಗಳಿಗೆ ತಂದೆಯಿಲ್ಲದೆ ಸಾಕಷ್ಟು ಅವಮಾನ ಪಡುವಂತಹ ಸ್ಥಿತಿ ಎದುರಾಯಿತು.ನಿಂದನೆಗಳು ...ಅವಮಾನಗಳು... ದೌರ್ಬಲ್ಯದ ಸ್ಥಿತಿಗಳೆಂಬ... ಕ್ರಿಮಿಕೀಟಗಳು ಮುತ್ತಿಕೊಂಡು ಜೀವನ  ಸಾಕಪ್ಪಾ ಎಂದು ಆ ಕ್ಷಣ ಅನ್ನಿಸಿತು .ಆದರೆ ಧೃತಿಗೆಡದ ಉಮಾ ಧೈರ್ಯದಿಂದ ಆ ಎಲ್ಲಾ ನಿಂದನೆಗಳನ್ನು ಸಹಿಸಿಕೊಂಡು, ನಮಗೂ ಒಳ್ಳೆಯ ದಿನಗಳು ಬರುತ್ತವೆ ಎಂಬ ಭರವಸೆಯನ್ನು ಸುಹಾಸಿನಿಗೆ ನೀಡುತ್ತಾ ಆತ್ಮಸ್ಥೈರ್ಯದಿಂದ ಅವಳನ್ನು ವಿದ್ಯಾವಂತಳನ್ನಾಗಿ ಮಾಡಿದಳು.ಸಮಾಜದ ಕೊಳಕನ್ನೆಲ್ಲಾ ಕಿತ್ತೆಸೆಯುವಂತ, ಸದೃಢ ಮಾತುಗಳಿಂದ ಆದರ್ಶ ಸಮಾಜ ನಿರ್ಮಾಣ ಮಾಡುವಂತಹ ವ್ಯಕ್ತಿಗಳನ್ನು ನಿರ್ಮಾಣ ಮಾಡುವ ಮೌಲ್ಯಯುತ ಶಿಕ್ಷಣ ನೀಡುವ ಶಿಕ್ಷಕಿಯಾಗಿ ಭವ್ಯ ನಾಗರಿಕರನ್ನು ಸೃಷ್ಟಿಸು..... ಎನ್ನುವ ತಾಯಿಯ ಆದರ್ಶದ ಮಾತಿನಂತೆ   ಸುಹಾಸಿನಿಯು ಸಹ ಧೃತಿಗೆಡದೆ ಓದಿ ಶಿಕ್ಷಕಿಯ ಪದವಿಯನ್ನು ಪಡೆದು ಶಿಕ್ಷಕಿಯಾಗಿ  ಹುದ್ದೆಯಲ್ಲಿ ಸೇರಿ ,ತನ್ನ ತಾಯಿಯ ಕಷ್ಟದ ದಿನಗಳನ್ನು ದೂರ ಮಾಡಿದಳು.ಜೀವನದಲ್ಲಿ ಮತ್ತೆ ಸುಖದ ದಿನಗಳ ಮೆಟ್ಟಿಲಿನಲ್ಲೇ ಅವರು ನಿಂತಿದ್ದರು .ಅವರ ತಾಳ್ಮೆಯೇ ಅವರನ್ನು ಆ ಮೆಟ್ಟಿಲೇರುವಂತೆ ಮಾಡಿತ್ತು .
ಕಥಾ ತಾತ್ಪರ್ಯದಿಂದ ಅಳವಡಿಕೆಯ ಅಂಶಗಳು :
             ಈ ಸತ್ಯವನ್ನು ಪ್ರತಿಯೊಬ್ಬ ಮನುಷ್ಯ ಅರಿತು ನಡೆದರೆ ಎಷ್ಟು ಚೆನ್ನ ಅಲ್ಲವೇ ?ಜೀವನವೆಂಬ ಈ ನಾಟಕ ರಂಗದಲ್ಲಿ ಬಡವರು, ಶ್ರೀಮಂತರು, ನಿರ್ಗತಿಕರು, ಅನಾಥರು, ಅಂಧರು ,ಅಂಗವಿಕಲರು,  ವಿಧುರರು, ವಿಧವೆಯರು ಹೀಗೆ ಎಲ್ಲರೂ ಬದುಕಿ ಬಾಳತಿದಿವಿ.ಒಬ್ಬರನ್ನು ಕಂಡು ಇನ್ನೊಬ್ಬರು ಮತ್ಸರ ಪಟ್ಟುಕೊಳ್ಳದೆ.... ಇಂದಿನ ದಿನ ಭಗವಂತ ನಮಗೆ ಕೊಟ್ಟ ಸ್ಥಾನವನ್ನು ಸಂತೋಷದಿಂದ ಸ್ವೀಕರಿಸಿ, ಅದರಿಂದ ಇತರರನ್ನು ಸಂತೋಷಪಡಿಸುತ್ತಾ... ದಿನ ಕಳೆದರೆ ,ಮುಂದೊಂದು ದಿನ ನಮಗೂ ಒಳ್ಳೆಯ ಕ್ಷಣಗಳು ಬರುತ್ತವೆ ಎಂಬ ಆಶಾ ಭಾವನೆಯಿಂದ ಬದುಕು ಸಾಗಿಸುವುದು ಉತ್ತಮವಲ್ಲವೇ ?"ಪುನರಪಿ ಜನನಂ ಪುನರಪಿ ಮರಣಂ! ಎನ್ನುವ ಹಾಗೆ ಒಂದು ಸಸ್ಯವನ್ನು  ಅಂತ್ಯಗೊಳಿಸಿದಾಗ ಅದರ ಬೀಜದಲ್ಲಿ ಚೈತನ್ಯವನ್ನು ತುಂಬುವಂತಹ ಭಗವಂತ ....ನಮ್ಮ ಅವಸಾನವಾದಾಗ ನಮ್ಮ ಆತ್ಮದಲ್ಲಿ ಚೈತನ್ಯ ತುಂಬಿ, ಪುನರ್ಜನ್ಮಕ್ಕೆ ಕಾಲಿಡುವಂತೆ ಮಾಡುತ್ತಾನೆ.ಬಾಲ್ಯದಲ್ಲಿ ಕಷ್ಟಗಳು ಎದರಾದರೆ ,ಮಧ್ಯವಯಸ್ಸಿನಲ್ಲಿ ಸುಖ ದೊರೆಯಬಹುದು.... ಮಧ್ಯವಯಸ್ಸಿನಲ್ಲಿ ಕಷ್ಟಗಳು ಎದುರಾದರೆ... ವೃದ್ಧಾಪ್ಯದ ಅವಧಿಯಲ್ಲಿ ಸುಖವಾಗಿರಬಹುದು.ಒಂದುವೇಳೆ   ಈ ಜನ್ಮದಲ್ಲಿ ನಮಗೆ ದೊರೆಯದೇ ಇದ್ದ ಸುಖ ಸಂತೋಷಗಳು... ಮುಂದಿನ ಜನ್ಮದಲ್ಲಿ ದೊರೆಯುವವು .....ಎಂಬ ಆಶಾಭಾವನೆಯೊಂದಿಗೆ ಬದುಕನ್ನು ಸಾಗಿಸುವುದು ಉತ್ತಮವಲ್ಲವೇ ?ಯಾರು ಕನಿಷ್ಠರಲ್ಲ. ಪ್ರತಿಯೊಬ್ಬರ ವ್ಯಕ್ತಿತ್ವವೂ ಇತರರಿಗೆ ಯಾವುದೋ ರೂಪದಲ್ಲಿ ಸಹಾಯಕ. ಈ ದಿನ ಒಬ್ಬರಿಗೆ ಬೇಡವಾಗಿ  ಕಷ್ಟದ ದಿನ ಎನಿಸಿದರೆ, ಮಾರನೇ ದಿನ ಮತ್ತಾರಿಗೋ ಅವಶ್ಯಕ ಎನಿಸಿ  ಒಳ್ಳೆಯ ದಿನವಾಗಬಹುದು .ಕಷ್ಟದ ದಿನವೆಂದು ಕೊರಗದೆ... ನಮ್ಮ ಕರ್ತವ್ಯವನ್ನು ಸುಹಾಸಿನಿಯ ಮುಡಿಯಲ್ಲಿದ್ದ ಹೂವು, ನಗುವ ಚೆಲ್ಲಿ ತನ್ನ ಕರ್ತವ್ಯವನ್ನು ತೋರಿದಂತೆ ,ನಾವೂ ಸಹ ಈ ದಿನ ನಮಗೆ ಬಂದ ಕಷ್ಟಗಳನ್ನು ಸ್ವೀಕರಿಸಿ ನಗುವಿನೊಂದಿಗೆ ಇತರರೊಡನೆ ಬೆರೆತಾಗ ,ದಿನ ಕಳೆದಂತೆ ಕಷ್ಟದ ದಿನಗಳು ಕರಗಿ ಸುಖದ ದಿನಗಳು ನಮ್ಮನ್ನು ಹುಡುಕಿಕೊಂಡು ಬಂದು ಒಳಿತುಂಟು ಮಾಡಬಹುದು ಅಲ್ಲವೇ ?ಶ್ರೇಷ್ಠವಾದ ಮಾನವ ಜನ್ಮದ ಅಮೂಲ್ಯ ಜೀವನವನ್ನು ಅನವಶ್ಯಕವಾದಂತಹ ದುಃಖ ದುಮ್ಮಾನಗಳಿಂದ ನಾಶಗೊಳಿಸಿಕೊಳ್ಳದೆ ಭಗವಂತನಿಟ್ಟಂತೆ ಇರೋಣ. ಈ ಜಗದಲಿ  ಪ್ರತಿಯೊಬ್ಬರನು  ಅವರವರ ಸ್ಥಾನಮಾನದಲಿ ಎಲ್ಲರನ್ನೂ ಗೌರವಿಸೋಣ. ಎಲ್ಲರೂ ಬದುಕಿ ಬಾಳುತ ಮಾನವೀಯತೆಯ ಮೆರೆಯೋಣ ಎನ್ನುವ ಪಾಠ ಸಸ್ಯಗಳಿಂದ ನಾವು ತಿಳಿದುಕೊಂಡರೆ ಸಾಕಲ್ಲವೇ ?ಕೋಟ್ಯಂತರ ಸಸ್ಯರಾಶಿಗಳು ತಾವೆಂದು ನಾನು ಶ್ರೇಷ್ಠ ನೀನು ಕನಿಷ್ಠ ಎಂಬ ಭೇದ ಭಾವವನ್ನು ಎಣಿಸದೆ ತಮಗೆ ಸಿಕ್ಕ ಸ್ಥಾನಮಾನಕ್ಕನುಗುಣವಾಗಿ ಮನುಕುಲಕ್ಕೆ ಒಳಿತನ್ನು ಮಾಡುತ್ತಿವೆ. ಅದೇ ರೀತಿ ನಾವೂ ಸಹ ನಮ್ಮ ಕರ್ತವ್ಯವನ್ನು ಮಾಡಬೇಕಲ್ಲವೇ ?ತನ್ನನ್ನು ಕಡಿದರೂ, ಸುಟ್ಟರೂ, ನಾಶ ಪಡಿಸಿದರೂ,ಮುನಿಸಿಕೊಳ್ಳದ ಒಂದು ಮರ ಯಾವುದೇ ರೀತಿಯ ದ್ವೇಷ ಅಸೂಯೆಗೆ ಒಳಗಾಗದೆ  ಸಿಹಿಯಾದ ಹಣ್ಣುಗಳನ್ನು ಕೊಡುತ್ತಿರುವಾಗ ,ಮನುಷ್ಯರಾದ ನಮಗೇಕೆ? ದ್ವೇಷ ಅಸೂಯೆಗಳು.ನಾವು ಮರಕ್ಕಿಂತ ಶ್ರೇಷ್ಠರಾಗಬೇಕೆ ವಿನಃ ಕನಿಷ್ಠ ರಾಗಬಾರದು .ಇರುವುದು ೪ ದಿನ .ಬರುವ ಕಷ್ಟಗಳನ್ನೆಲ್ಲಾ ಅಪ್ಪಿಕೊಂಡು ನಗನಗುತ್ತಾ ಜೀವನ ನಡೆಸೋಣ.  ಇರುವುದರಲ್ಲಿಯೇ ಹಂಚಿ ತಿನ್ನೋಣ. ಇಲ್ಲದಿದ್ದರೆ ನಮ್ಮಷ್ಟಕ್ಕೆ ನಾವೇ ಇರೋಣ .ಇರುವವರ ಬಗ್ಗೆ ಅಸೂಯೆ ಪಡುವುದು ಬೇಡ. ಇರುವಷ್ಟು ಕಾಲ ಪಾಲಿಗೆ ಬಂದದ್ದೇ ಪಂಚಾಮೃತವೆಂದುಕೊಂಡು ಈ ಜನ್ಮದ ಜೀವನ ಸಾರ್ಥಕ ಪಡಿಸಿಕೊಳ್ಳೋಣ .ಗಂಧದ ಕೊರಡು ತೇದಷ್ಟೂ ಪರಿಮಳವನ್ನೆ.... ಸೂಸುವಂತೆ, ನಮಗೆ ಬರುವಂತಹ ಕಷ್ಟಗಳು ನಮ್ಮ ಒಳಿತಿಗಾಗಿಯೇ ಎಂದು ಭಾವಿಸುತ್ತಾ ಜೀವನ ಸಾಗಿಸೋದೇ ಮಾನವನ ಶ್ರೇಷ್ಠ ಗುಣ .ಅದಕ್ಕಾಗಿ ಮರುಗದಿರು ಮನವೇ .........ಮುಂಬರುವ ದಿನಗಳು ನಿನಗೆ ಒಳಿತನ್ನುಂಟು ಮಾಡಲಿವೆ......
         -  ಶ್ರೀಮತಿ ಸುಮಂಗಲಾ ಕೃಷ್ಣಾ ಕೊಪ್ಪರದ ಶಿಕ್ಷಕಿ ಇಲಕಲ್ಲ



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...