ಮಂಗಳವಾರ, ಏಪ್ರಿಲ್ 11, 2023

ಹೆತ್ತವರು (ಕವಿತೆ) - ಮಹಂತೇಶ ಕೆ.

ಹೆತ್ತವರು ಇವರೆನ್ನ ಹೆತ್ತವರು
ನನ್ನ ಹುಟ್ಟಿಗಾಗಿ ತಾವು ಸತ್ತು ಹುಟ್ಟಿದವರು
ಕಷ್ಟ ಕಾರ್ಪಣ್ಯಗಳನ್ನು ಎದೆಗುಂದದೆ ಮೆಟ್ಟಿದವರು
ಹಗಲಿರುಳು ನನ್ನ ಏಳಿಗೆಗಾಗಿ ಸತ್ತವರು

 ನನ್ನ ಬದುಕಿಸಲೆಂದು ಮಲ ಹೊತ್ತವರು
 ನನಗಾಗಿ ತೋಟ, ಗದ್ದೆಗಳ ಕಳೆ ಕಿತ್ತವರು
 ಬದುಕಿಸಲೆಂದೆನ್ನ ನಗರದ ಗಲ್ಲಿಗಳ ಕಸ ಎತ್ತಿದವರು
ನನ್ನೋದಿಗಾಗಿ ಆಸ್ಥಿ, ಆಭರಣಗಳ ಅಡವಿತ್ತವರು 

ನನಗೆಂದೇ ಪೋಷಾಕು ಹೊಲಿಸಿ ಕೊಟ್ಟವರು
ನನಗಾಗಿ ಬರೀ ಚಿಂದಿ ಉಟ್ಟವರು
ಬಟ್ಟೆ ಕಾಣದ ಬರೀ ಮೈಯಿಂದ ಬೆವರು ಹರಿಸಿದವರು
ನನ್ನೊಳಿತಿಗಾಗಿ ಗುಡಿ-ಗುಂಡಾಂತರ ಸುತ್ತುವರು

ಹಣೆಯ ತುಂಬ ಹರಕೆಯ ಭಂಡಾರ ಹಚ್ಚುವರು
ಮುಕ್ಕೋಟಿ ದೇವರುಗಳಿಗಿಂತ ಹೆಚ್ಚಿವರು
ಹಗಳಿರುಳೆನ್ನದೇ ಹೊಲ ಗದ್ದೆಗಳ ಉತ್ತುವರು
ನನ್ನೊಳಗೆ ನ್ಯಾಯ,ನೀತಿ, ಧರ್ಮಗಳ ಬಿತ್ತಿದವರು

ಎಡವಿದಾಗ ನನ್ನ ಕೈ ಹಿಡಿದು ಮೇಲಕ್ಕೆ ಎತ್ತಿದವರು
ಬದುಕುವ ಭರವಸೆಯನ್ನು ತಲೆಗೆ ಮೆತ್ತಿದವರು
ನಾ ಅತ್ತಾಗ ಬಿಗಿದಪ್ಪಿ ಹಣೆಗೆ ಮುತ್ತಿಟ್ಟವರು               
ನನಗೆಂದೇ ಭಕ್ಷ್ಯ-ಭೋಜ್ಯಗಳನ್ನು ಅಟ್ಟಿಟ್ಟವರು

ಪ್ರತಿನಿತ್ಯ ನನಗಾಗಿ ಬಿಸಿರೊಟ್ಟಿ ತಟ್ಟುವರು
ದೇವರಾ ಮುಂದೆ ಪ್ರಾರ್ಥಿಸಿ ತಲೆ ಕುಟ್ಟುವರು
ಕರುಣೆ ಎಂಬ ಕಂಕಣವನ್ನು ಕರುಳಲ್ಲಿ ಕಟ್ಟಿಕೊಂಡವರು
ಕಷ್ಟಗಳಿಂದ ಜೀವನದಲ್ಲಿ ಎಚ್ಚೆತ್ತುಕೊಂಡವರು     

 ಸಾಗರದಷ್ಟು ದುಃಖವನ್ನು ಎದೆಯೊಳಗೆ ಬಚ್ಚಿಟ್ಟುಕೊಂಡವರು
ನನ್ನ ಬಗ್ಗೆ ಅಗಾಧ ಕನಸ್ಸುಗಳನ್ನು ಕಟ್ಟಿಕೊಂಡವರು
ಬಡತನದ ಬೇಗೆಯಲ್ಲಿ ಸುಟ್ಟು ಬೆಂದವರು
 ಬರೀಗೈಯಲ್ಲಿ ಬಂದವರು ಬರೀ ಮೈಯಲ್ಲಿ ಹೋದವರು
ಹೆತ್ತವರಿವರೆನಗಾಗಿ ಸತ್ತವರು……..
  
                
- ಮಹಂತೇಶ ಕೆ (ನದೀಜ).

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...