ಶ್ರೀಮತಿ ಆಶಾಕಿರಣ ಬೇಲೂರು. ಶಿಕ್ಷಕರು, ಬರಹಗಾರರು ಹಾಗೂ ಸಾಮಾಜ ಸೇವಕರು. ಬೇಲೂರು, ಹಾಸನ ಜಿಲ್ಲೆ. ಇವರು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ 14 ನೇ ವಾರ್ಷಿಕೋತ್ಸವದ ನಿಮಿತ್ತ ನಡೆಯುತ್ತಿರುವ ನಾಲ್ಕನೇ ಕೃಷಿ, ಸಾಹಿತ್ಯ, ಸಂಸ್ಕೃತಿ ಸಮಾವೇಶದ ಸರ್ವಾಧ್ಯಕ್ಷ್ಯರಾಗಿ ಆಯ್ಕೆ ಆಗಿರುವ ಹಿನ್ನೆಲೆಯಲ್ಲಿ ಶ್ರೀಮತಿ ಆಶಾಕಿರಣ್ ಅವರ ಸಂದರ್ಶನ.
ಸಂದರ್ಶಕರು: ನಮಸ್ಕಾರ ಮೇಡಮ್
ಶ್ರೀಮತಿ ಆಶಾಕಿರಣ್: ನಮಸ್ತೆ ಸರ್.
ಸಂದರ್ಶಕರು: ತಾವು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ನಾಲ್ಕನೇ ಕೃಷಿ, ಸಾಹಿತ್ಯ, ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವಿರಿ ಇದಕ್ಕಾಗಿ, ತಮಗೆ ನಮ್ಮ ವಿಚಾರ ಮಂಟಪ ಬಳಗದಿಂದ ತುಂಬು ಹೃದಯದ ಅಭಿನಂದನೆಗಳು. ನೀವು ಈ ಒಂದು ಮಹತ್ವದ ಸ್ಥಾನಕ್ಕೆ ಆಯ್ಕೆಯಾಗಿರುವುದು ನಿಮಗೆ ಹೇಗನಿಸುತ್ತಿದೆ ? ವಿವರಿಸಬಹುದೇ.
ಶ್ರೀಮತಿ ಆಶಾಕಿರಣ್: ಧನ್ಯವಾದ ತಮಗೆ. ಇದು ಒಂದು ರೀತಿ ಬಯಸದೇ ಬಂದ ಭಾಗ್ಯ ಅಂತ ಹೇಳಬಹುದು. ಈ ಅವಕಾಶಕ್ಕಾಗಿ ನಾನು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ರಾಜ್ಯಾಧ್ಯಕ್ಷರು ಹಾಗೂ ಸಂಸ್ಥಾಪಕರೂ ಆಗಿರುವ ಶ್ರೀಮತಿ ಕಲಾವತಿ ಮಧುಸೂದನ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅದೇ ರೀತಿ ನನ್ನನ್ನು ಅವಿರೋಧವಾಗಿ ಈ ಸ್ಥಾನಕ್ಕೆ ಆಯ್ಕೆ ಮಾಡಿರುವ ಸ್ಪಂದನ ಸಿರಿ ವೇದಿಕೆಯ ಎಲ್ಲ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೂ ನನ್ನ ಧನ್ಯವಾದಗಳು ಸಲ್ಲುತ್ತವೆ. ನನ್ನ ಸೇವೆಯನ್ನು ಗುರುತಿಸಿ ನನಗೆ ಈ ಸ್ಥಾನವನ್ನು ಕೊಟ್ಟಿರುವುದು ನನಗೆ ಬಹಳಷ್ಟು ಖುಷಿಯ ವಿಷಯ. ಈ ಸರ್ವಾಧ್ಯಕ್ಷತೆಯ ಸ್ಥಾನ ನನಗೆ ಖುಷಿ ಕೊಡುವುದರ ಜೊತೆಗೆ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಈ ಸ್ಥಾನದ ಘನತೆಯನ್ನ, ಗೌರವವನ್ನ ಉಳಿಸುವ ಕೆಲಸವನ್ನು ನಾನು ಸದಾಕಾಲ ಮಾಡುತ್ತಿದ್ದೇನೆ ಮತ್ತು ಈ ಸಮ್ಮೇಳನ ಯಶಸ್ವಿಯಾಗುವುದಕ್ಕಾಗಿ ಶ್ರಮಿಸುತ್ತೇನೆ ಎಂದು ಈ ಮೂಲಕ ಹೇಳಬಯಸುವೆ.
ಸಂದರ್ಶಕರು: ಮೇಡಮ್ ತಮ್ಮ ತಂದೆ-ತಾಯಿಗಳು ನಿಮ್ಮ ಬಾಲ್ಯ ಮತ್ತು ನಿಮ್ಮ ಕುಟುಂಬವನ್ನ ಕುರಿತು ಹೇಳಬಹುದೇ?
ಶ್ರೀಮತಿ ಆಶಾಕಿರಣ್: ಖಂಡಿತ. ನಾನು ಹುಟ್ಟಿದ್ದು ೧೯೬೮ ನವೆಂಬರ್ ೨೫ ನೇ ತಾರೀಖು. ನನ್ನ ತಂದೆ ಪಿ.ಎ. ಮಂಜುನಾಥ್, ತಾಯಿ ಬಿ. ಎನ್ ಲಲಿತಮ್ಮ. ನನ್ನ ಅಣ್ಣ ನಟೇಶ್ ಅಂತ. ನಾನು ಬಾಲ್ಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಸುಮಾರು ೨ ವರ್ಷ ಹಾಸಿಗೆಯಲ್ಲಿಯೇ ಕಳೆಯುವಂತಾಗಿತ್ತು. ದಾರಿಯಲ್ಲಿ ಹೋಗುವಾಗ ಬಿದ್ದು, ಗಾಯಮಾಡಿಕೊಂಡಿದ್ದ ನನಗೆ ಸೂಕ್ತವಾದ ವೈದ್ಯರ ಚಿಕಿತ್ಸೆ ದೊರೆಯದೇ ೨ ವರ್ಷ ಹಾಸಿಗೆಯಲ್ಲೇ ಇರುವಂತಾಗಿತ್ತು. ಆಗೆಲ್ಲ ನಮ್ಮ ತಂದೆತಾಯಿ ನನ್ನನ್ನು ಸಾಕಷ್ಟು ಆರೈಕೆ ಮಾಡಿದರು. ಅವರಿಗಿದ್ದ ಆಸ್ತಿಯಲ್ಲಿ ಸ್ವಲ್ಪ ಭಾಗವನ್ನ ಮಾರಿ ನನ್ನ ಆರೋಗ್ಯ ಸುಧಾರಿಸುವಂತೆ ಮಾಡಿದರು. ಮುಂದೆ ನಮ್ಮ ಸ್ವಂತ ಊರಾದ ಚನ್ನರಾಯಟ್ಟಣದ ತಾಲೂಕಿನ ಕಲ್ಕೆರೆ ಚೌಡೇನಹಳ್ಳಿ ಎಂಬ ಗ್ರಾಮದಲ್ಲಿ ೪ ನೇ ತರಗತಿಯವರೆಗೆ, ನಂತರ ನಮ್ಮ ಅಜ್ಜಿಯ ಊರಾದ ಹೊಳೆನರಸೀಪುರದ ಬೀಚೇನಹಳ್ಳಿಯಲ್ಲಿ ೫, ೬ ಮತ್ತು ೭ ನೇ ತರಗತಿಯನ್ನ ಪೂರೈಸಿ, ಮುಂದೆ ಹೊಳೆನರಸೀಪುರ ತಾಲೂಕಿನ ಹೂವಿನಹಳ್ಳಿಯಲ್ಲಿ ಮತ್ತು ನಮ್ಮ ಸೋದರ ಮಾನವನರ ಆಶ್ರಯದಲ್ಲಿ ಮಂಗಳೂರಿನ ಜ್ಯೋತಿ ಸರ್ಕಲ್‍ನಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಪೂರೈಸಿದೆ. ಅದಾದ ನಂತರ ಚಿಕ್ಕಮಗಳೂರಿನಲ್ಲಿ ಶಿಕ್ಷಕರ ತರಬೇತಿ ಪಡೆದೆ. ಡಿಗ್ರಿ ಮಾಡಲೇ ಬೇಕೆಂಬ ಆಸೆಯಿಂದ ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಜೊತೆಗೆ ಹಿಂದಿ ಡಿಗ್ರಿಯನ್ನು ಅಂಚೆ ಮತ್ತು ತೆರಪಿನ ಶಿಕ್ಷಣದ ಅಡಿಯಲ್ಲಿ ಮುಗಿಸಿದೆ. ನಂತರ ೧೯೮೯-೯೩ ರ ವರೆಗೆ ಕಲ್ಕೆರೆಯಲ್ಲಿರುವ ರಾಘವೇಂದ್ರ ಕಾನ್ವೆಂಟ್ ನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದೆ. ಮುಂದೆ ೧೯೯೪ ರಲ್ಲಿ ನನಗೆ ಬೇಲೂರು ತಾಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ನಂತರ ೧೯೯೬ರಲ್ಲಿ ಬೇಲೂರಿನ ಕೇಶವ ಕಿರಣ್ ಅವರೊಂದಿಗೆ ನನ್ನ ವಿವಾಹವಾಯಿತು. ನಮ್ಮ ಮನೆಯವರು ಬೇಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರತಿಗೊಂದೊ ಕೀರ್ತಿಗೊಂದು ಎಂಬಂತೆ ನಮಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಶಿಲ್ಪಾ ಇವರಿಗೆ ಬೆಂಗಳೂರಿನ ಸುಮುಖ್ ಎಂಬ ಉದ್ಯಮಿಯೊಬ್ಬರ ಜೊತೆ ವಿವಾಹವಾಗಿದೆ. ಅಲ್ಲದೇ ಇವರೊಬ್ಬ ಶಾಸ್ತ್ರೀಯ ನೃತ್ಯ ಕಲಾವಿದೆಯೂ ಹೌದು. ಹಲವಾರು ರಾಜ್ಯ-ರಾಷ್ಟ್ರಮಟ್ಟದ ಪ್ರದರ್ಶನಗಳನ್ನು ನೀಡಿ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ. ಈಗ ಶಾಸ್ತ್ರೀಯ ನೃತ್ಯದ ವಿಷಯವನ್ನು ಕುರಿತು ಪಿಎಚ್‌ಡಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಮಗ ಶ್ರೇಯಸ್ ಇವರು ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ಬಿಎಸ್ಸ್‌ಸಿ ಪದವಿ ಮಾಡುತ್ತಿದ್ದಾರೆ. ಸರ್ಕಾರಿ ಆಡಳಿತ ಸೇವೆಗೆ ಆಯ್ಕೆಯಾಗಿ ಸಮಾಜ ಸೇವೆ ಮಾಡಬೇಕೆಂಬುದು ನನ್ನ ಮಗನ ಕನಸು.
ಸಂದರ್ಶಕರು: ತಮ್ಮ ವೃತ್ತಿ ಜೀವನ, ತಮ್ಮ ಸಾಮಾಜಿಕ ಸೇವೆ ಇವುಗಳನ್ನು ಕುರಿತು ಮಾಹಿತಿ ನೀಡಬಹುದೇ ?
ಶ್ರೀಮತಿ ಆಶಾಕಿರಣ್: ಹಿಂದೆ ಹೇಳಿದಂತೆ ನನಗೆ ೧೯೯೪ ರಲ್ಲಿ ಬೇಲೂರು ತಾಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ಅದಕ್ಕೆ ಹಿಂದೆಯೂ ನಾನು ಶಿಕ್ಷಕಿಯಾಗಿ ಖಾಸಗಿ ಶಾಲೆಯೊಂದರಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಸರ್ಕಾರಿ ಕೆಲಸವೆಂದರೆ ಅದು ದೇವರ ಕೆಲಸ ಎಂಬುದು ನನ್ನ ತಲೆಯಲ್ಲಿ ಅಚ್ಚಿಳಿಯದೇ ಕುಳಿತುಬಿಟ್ಟಿದೆ. ನನ್ನ ಇತರೆ ಸಾಮಾಜಿಕ ಕಾರ್ಯಗಳಿಗಾಗಿ ನನ್ನ ವೃತ್ತಿ ಜೀವನವನ್ನು ನಾನೆಂದೂ ಬಲಿ ಕೊಟ್ಟಿಲ್ಲ. ರಜೆ ದಿನಗಳಲ್ಲಿ, ಅಥವಾ ನಮಗೆ ಸರ್ಕಾರ ಕೊಟ್ಟಿರುವ ರಜೆಯ ಅವಕಾಶಗಳನ್ನು ಬಳಸಿಕೊಂಡು ಮಾತ್ರವೇ ಇತರೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೇನೆ. ನನ್ನ ಮೊದಲ ಆಧ್ಯತೆ ನನ್ನ ಶಾಲೆ ಮತ್ತು ನನ್ನ ವಿದ್ಯಾರ್ಥಿಗಳು. ನನ್ನ ಶಿಕ್ಷಕ ವೃತ್ತಿಯನ್ನು ಗುರುತಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ನನಗೆ ೨೦೧೯ ರ ಜಿಲ್ಲಾ ಮಟ್ಟದ ʼಅತ್ಯುತ್ತಮ ಶಿಕ್ಷಕಿʼ ಪ್ರಶಸ್ತಿಯನ್ನೂ ಕೊಟ್ಟು ಗೌರವಿಸಿದೆ.
ಇನ್ನು ಸಮಾಜ ಸೇವೆಗೆ ಬಂದರೆ ನಾನು ಸುಮಾರು ೫ ವರ್ಷಗಳ ಕಾಲ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಳಾಗಿ ಕಾರ್ಯನಿರ್ವಹಿಸಿದ್ದೇನೆ. ಆ ಸಂದರ್ಭದಲ್ಲಿ, ಯಾರ ಬಳಿಯೂ ಹಣ ಪಡೆಯದೇ, ಕ್ರೀಡೆಯಲ್ಲಿ ಸಾಧನೆ ಮಾಡುವ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿರುವ, ಹೆಚ್ಚು ಅಂಕಗಳನ್ನು ಪಡೆದಿರುವ ಮಕ್ಕಳನ್ನು ಗುರುತಿಸುವ ಪ್ರೋತ್ಸಾಹಿಸುವ ಕೆಲಸವನ್ನು ನಿರಂತರವಾಗಿ ಮಾಡಿದ್ದೇನೆ. ಮುಂದೆ, ಸ್ಪಂದನ ಸಿರಿ ವೇದಿಕೆಗೆ ಬಂದಾಗಲೂ ಇಂತಹ ಸಾಕಷ್ಟು ಕಾರ್ಯಗಳನ್ನು ಮಾಡಿದ್ದೇನೆ. ಬೇಲೂರಿನಲ್ಲಿ ಸುಮಾರು ೭೦-೮೦ ಮಕ್ಕಳನ್ನು ಕೂಡಿಸಿಕೊಂಡು “ನೃತ್ಯೋತ್ಸವ” ಎಂಬ ಕಾರ್ಯಕ್ರಮವನ್ನು ಮಾಡಲಾಯಿತು. ಇದೇ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಕರೆದು ಅವರನ್ನು ಗೌರವಿಸಲಾಗಿತ್ತು. ಅಲ್ಲದೇ, ವೈಧ್ಯರ ದಿನ, ಸೈನಿಕರ ದಿನ, ಕ್ರೀಡಾ ದಿನ ಮುಂತಾದ ಸಂದರ್ಭಗಳಲ್ಲಿ ಆಯಾ ಕ್ಷೇತ್ರದ ಗಣ್ಯರನ್ನ ಕರೆದು ಗೌರವಿಸಲಾಗಿದೆ. ಎಲೆಮರೆಯ ಕಾಯಿಗಳಂತೆ ಕಾರ್ಯನಿವರ್ಹಿಸುತ್ತಿರುವವನ್ನು ಗುರುತಿಸಿ ಪ್ರೋತ್ಸಾಹಿಸಿದ್ದೇವೆ. ಇದಕ್ಕೆಲ್ಲ ನಮ್ಮ ಶಾಸಕರನ್ನು ಮೊದಲ್ಗೊಂಡು ನೂರಾರು ಸಾವಿರಾರು ಮಂದಿ ನಮಗೆ ಸಹಕಾರ ನೀಡಿದ್ದಾರೆ, ನಮಗೆ ೫-೧೦ ಸಾವಿರ ಧನ ಸಹಾಯ ಮಾಡಿದರನ್ನೂ ಕರೆದು ಗೌರವಿಸಿದ್ದಲ್ಲದೇ ಇದನ್ನು ಕುರಿತು ಪತ್ರಿಕಾ ಪ್ರಕಟಣೆಯನ್ನೂ ನೀಡಲಾಗಿದೆ.
ಸಂದರ್ಶಕರು : ತಮ್ಮ ಬರವಣಿಗೆಗೆಳು ಮತ್ತು ತಮಗೆ ಸಂದಿರುವ ಪ್ರಶಸ್ತಿಗಳ ವಿವರ ತಿಳಿಸಬಹುದೇ.?
ಶ್ರೀಮತಿ ಆಶಾಕಿರಣ್ : ನಾನು ಮೊದಲು ಬೇರೊಂದು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಅಲ್ಲಿಂದ ಸ್ಪಂದನ ಸಿರಿ ವೇದಿಕೆಗೆ ಬಂದೆ. ಈ ಹಿಂದೆ ನಾನು ನನ್ನ ಸಮಾಧಾನಕ್ಕಾಗಿ ಸಾಕಷ್ಟು ಕವಿತೆಗಳನ್ನು ಬರೆದು ಇಟ್ಟುಕೊಳ್ಳುತ್ತಿದ್ದೆ. ಆದರೆ, ಪ್ರಕಟಿಸುವ ಸಾಹಸಕ್ಕೆ ಹೋಗಿರಲಿಲ್ಲ. ಸ್ಪಂದನ ಸಿರಿ ವೇದಿಕೆಗೆ ಬಂದಾಗ ಶ್ರೀಮತಿ ಕಲಾವತಿಯವರು ತಮ್ಮ ಸ್ಪಂದನ ಸಿರಿ ಪ್ರಕಾಶನದ ಪರವಾಗಿ ಮತ್ತೊಂದು ಕವನ ಸಂಕಲನವನ್ನು ಪ್ರಕಟಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಆಗ ನಾನು ಸಹ ಕವಿತೆಗಳನ್ನು ಬರೆಯುತ್ತೇನೆ ಮೇಡಮ್ ಅಂತ ನಾನು ಹೇಳಿದಾಗ ಅವರು ತಮ್ಮ ಪ್ರಕಾಶನದ ವತಿಯಿಂದ ನನ್ನ ಮೊದಲ ಕವನ ಸಂಕಲನ “ಸುಮುಖ ಕಲಾ” ಪ್ರಕಟಿಸಿದರು. ಆ ಮೂಲಕ ನನ್ನನ್ನು ಒಬ್ಬ ಕವಿಯಾಗಿ ಅಧಿಕೃತವಾಗಿ ಸಮಾಜಕ್ಕೆ ಪರಿಚಯಿಸಿದರು. ಇದಾದ ನಂತರ ನಾನು ಒಂದು ಪತ್ತೆದಾರಿ ಕಾದಂಬರಿಯನ್ನೂ ಬರೆದೆ. ನನಗೆ ಕಾದಂಬರಿ ಬರೆಯುವ ಆಸೆ ಮೊದಲಿನಿಂದಲೂ ಇತ್ತಾದರೂ ಆಸೆ ನೆರವೇರಿರಲಿಲ್ಲ, ನನ್ನ ಕವನ ಸಂಕಲನ ಪ್ರಕಟವಾದ ನಂತರ ʼಅಪರಾಧಿ ನಾನಲ್ಲʼ ಎಂಬ ಒಂದು ಪತ್ತೆದಾರಿ ಕಾದಂಬರಿಯನ್ನೂ ನಾನು ಬರೆದು ಇದೇ ಸ್ಪಂದನ ಸಿರಿ ಪ್ರಕಾಶನದಿಂದ ಪ್ರಕಟಿಸುವಂತಾಯಿತು. ಇವು ನನ್ನ ಪ್ರಸ್ತುತ ಪ್ರಕಟಿತ ಕೃತಿಗಳು.
ಇನ್ನು ಪ್ರಶಸ್ತಿಗಳ ವಿಷಯಕ್ಕೆ ಬಂದರೆ, ನಾನೆಂದೂ ಪ್ರಶಸ್ತಿಗಳ ಹಿಂದೆ ಹೋದವಳಲ್ಲ. ಯಾವುದೂ ಪ್ರಶಸ್ತಿಗೂ ಅರ್ಜಿ ಹಾಕಿದವಳೂ ಅಲ್ಲ. ಅದಾಗ್ಯೂ ನನ್ನ ಶ್ರಮ ಮತ್ತು ನನ್ನ ತಂದೆ ತಾಯಿ ಆಶಿರ್ವಾದದಿಂದ ನನಗೆ ೨೦೧೯ ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಸಂದಿದೆ. ನನ್ನ ಸಮಾಜ ಸೇವೆಗಾಗಿ ಬೆಂಗಳೂರಿನ ಜನತಾ ಸಮಾಜ ಸೇವಾ ಟ್ರಸ್ಟ್ ಇವರು ಸೇವಾ ರತ್ನ ಪ್ರಶಸ್ತಿಯನ್ನು, ಸ್ಪಂದನ ಸಿರಿ ವೇದಿಕೆಯ ವತಿಯಿಂದ ಸ್ಪಂದನ ಸಿರಿ ಸೇವಾ ವಿಭೂಷಣ ಪ್ರಶಸ್ತಿಯನ್ನು, ಜನಶ್ರೀ ಪೌಂಡೇಶನ್‌ನ ವತಿಯಿಂದ ಕವಿಪ್ರೇರಣಾ ಪ್ರಶಸ್ತಿ, ದೇಶಭಕ್ತರ ಬಳಗ ಬೇಲೂರು ಇವರು ಶ್ರೀಮತಿ ಸಾವಿತ್ರಿಬಾಯಿ ಹೋಳ್ಕರ್ ಪ್ರಶಸ್ತಿಯನ್ನು, ಬೇಲೂರು ಸಾವಿತ್ರಿಬಾಯಿ ಸಂಘದ ವತಿಯಿಂದ ಸಾವಿತ್ರಿಬಾಯಿ ಫುಲೆ ಸಾಧಕರ ಪ್ರಶಸ್ತಿಯನ್ನು, ಕನ್ನಡ ಸಾಹಿತ್ಯ ಭವನ ಕಾಸರಗೂಡು ಇವರು ಅಂತರ್‌ರಾಜ್ಯ ಕನ್ನಡ ಪಯಸ್ವಿನಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಮತ್ತು ಸನ್ಮಾನಗಳು ಸಂದಿವೆ.
ನನ್ನ ವಿದ್ಯಾರ್ಥಿ ನಟರಾಜ್ ಎಂಬವರು ಸಿವಿಲ್ ಕೋರ್ಟ್ ನ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ನನ್ನ ವಿದ್ಯಾರ್ಥಿಗಳಲ್ಲಿ ಕೆಲವರು ನಮ್ಮ ಮನೆಯವರು ಕೆಲಸ ಮಾಡುವ ಪದವಿ ಕಾಲೇಜಿನಲ್ಲಿಯೂ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ವಿದ್ಯಾರ್ಥಿನಿ ಸುಮಾ ಪೃಥ್ವಿ ಒಬ್ಬ ಕವಿಯಾಗಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನನಗೆ ನನ್ನ ವಿದ್ಯಾರ್ಥಿಗಳ ಈ ಸಾಧನೆಯೇ ಬಹು ದೊಡ್ಡ ಸಾಧನೆ ಮತ್ತು ನನಗೆ ಸಂಧಿರುವ ಅತ್ಯಮೂಲ್ಯ ಪ್ರಶಸ್ತಿ ಎನಿಸುತ್ತದೆ.
ಸಂದರ್ಶಕರು : ನಿಮ್ಮ ಮುಂದಿರುವ ಇತರೆ ಯೋಜನೆಗಳು ಏನು?
ಶ್ರೀಮತಿ ಆಶಾಕಿರಣ್ : ಸದ್ಯ, ಮಧ್ಯಮ ವರ್ಗದ ಜನರಿಗೆ ಕ್ಯಾನ್ಸರ್ ನಂತಹ ಕಾಯಿಲೆ ಬಂದರೆ ಅವರು ಅದನ್ನ ಹೇಗೆ ಎದುರಿಸ್ತಾರೆ. ಇಂತಹ ದುಬಾರಿ ಚಿಕಿತ್ಸೆಯನ್ನು ಭರಿಸುವುದು ಹೇಗೆ, ಅದರಲ್ಲಿಯೂ ತಂದೆ-ತಾಯಿಯನ್ನು ಬಿಟ್ಟು ಪ್ರೀತಿಸಿ ಮದುವೆಯಾದವರಿಗೆ ಕ್ಯಾನ್ಸರ್ ಬಂದರೆ ಅವರ ಪರಿಸ್ಥಿತಿ ಹೇಗೆ? ಚಿಕಿತ್ಸೆಗೆ ಹಣ ಹೊಂದಿಸಲಾರದೆ ಅವರು ಪಡುವ ಪಾಡು ಎಂತದ್ದು ಎಂಬ ಕತೆಯನ್ನಿಟ್ಟುಕೊಂಡು ಒಂದು ಕಾದಂಬರಿಯನ್ನು ಬರೆಯುತ್ತಿದ್ದೇನೆ. ಅದೇ ರೀತಿ ನೃತ್ಯವನ್ನು ಕುರಿತು ಒಂದು ಖಂಡ ಕಾವ್ಯ ಬರೆಯುವ ಪ್ರಯತ್ನವನ್ನೂ ಪ್ರಾರಂಭಿಸಿದ್ದೇನೆ. ಜೊತೆಗೆ ನನ್ನ ತಂದೆ ಆಯುರ್ವೇದಿಕ್ ವೈಧ್ಯರಾಗಿದ್ದರು. ಅವರ ನೆನಪಿಗಾಗಿ ಇವರ ಬಳಿ ಇದ್ದ ಚರಕನು ರಚಿಸಿದ ಕೃತಿಯೊಂದನ್ನು ಆಧರಿಸಿ ಅಲ್ಲಿರುವ ಕೆಲವು ಮನೆಮದ್ದುಗಳ ವಿವರಗಳನ್ನು ಸಂಗ್ರಹಿಸಿ ಪ್ರಕಟಿಸುವ ಪ್ರಯತ್ನವೂ ಮಾಡುತ್ತಿದ್ದೇನೆ. ಜೊತೆಗೆ ಒಂದು ಕಥಾ ಸಂಕಲನ ಮತ್ತು ಲೇಖನಗಳ ಸಂಕಲನವನ್ನೂ ತರುವ ಆಲೋಚನೆ ಇದೆ. ಅಲ್ಲದೇ, ಇನ್ನು ಸಾಕಷ್ಟು ಸಮಾಜ ಸೇವಾ ಕಾರ್ಯಕ್ರಮಗಳನ್ನು ಮಾಡುವ ಎಲೆ ಮರೆಯ ಕಾಯಿಗಳನ್ನು ಗುರುತಿಸಿ ಗೌರವಿಸುವ ಉದ್ದೇಶವನ್ನು ಹೊಂದಿದ್ದೇನೆ. ಈ ಗುರಿಗಳನ್ನು ಎಷ್ಟು ಮಾತ್ರ ತಲುಪಲು ಸಾಧ್ಯವೂ ಅಷ್ಟೂ ಪ್ರಯತ್ನಸುತ್ತೇನೆ. ಅದರ ಮೇಲೆ ದೈವಾನುಗ್ರಹವೂ ಬೇಕು.
ಸಂದರ್ಶಕರು : ಬದಲಾದ ಈ ಸಂದರ್ಭದಲ್ಲಿ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಒಬ್ಬ ಶಿಕ್ಷಕಿಯಾಗಿ ನೀವು ಏನು ಸಂದೇಶ ಕೊಡ್ತೀರಿ?
ಶ್ರೀಮತಿ ಆಶಾಕಿರಣ್ : ಇಂದು ಕಾಲ ಬದಲಾಗಿದೆ. ಮಕ್ಕಳು ತಂದೆ-ತಾಯಿಯರ ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ಇದಕ್ಕೆ ತಂದೆ-ತಾಯಿಗಳೂ ಕಾರಣ. ಮಕ್ಕಳನ್ನು ಹೆಚ್ಚು ಮುದ್ದು ಮಾಡುವುದು, ಕೇಳಿದನ್ನೆಲ್ಲ ಇಲ್ಲವೆನ್ನದೇ ಕೊಡಿಸುವುದು ಇದರಿಂದ ಮಕ್ಕಳು ಹಾಳಾಗುತ್ತಿದ್ದಾರೆ. ಇಂದಿನ ಮಕ್ಕಳಿಗೆ ಬೆಳಿಗ್ಗೆ ಬೇಗ ಏಳುವ ಅಭ್ಯಾಸವೇ ಇಲ್ಲ. ಉದಯಿಸುವ ಸೂರ್ಯನನ್ನು ಎಷ್ಟೋ ಮಕ್ಕಳು ನೋಡುವುದೇ ಇಲ್ಲ. ಹಿಂದೆ ತಂದೆ-ತಾಯಿ ಬೇಗನೆ ಮಕ್ಕಳನ್ನು ಎಬ್ಬಿಸುತ್ತಿದ್ದರು. ಆದರೆ, ಈಗ ಮಕ್ಕಳು ಬೇಗ ಎದ್ದು ಏನು ಮಾಡಬೇಕು ಮಲಗಲಿ ಬಿಡಿ ಎಂದು ತಂದೆಯಾಯಿಗಳೇ ಹೇಳುತ್ತಾರೆ. ಮಕ್ಕಳನ್ನು ಎಲ್ಲ ತಂದೆ ತಾಯಿಗಳೂ ಮುದ್ದು ಮಾಡಿಯೇ ಬೆಳೆಸುತ್ತಾರೆ. ಆದರೆ, ಯಾವಾಗ ಮುದ್ದು ಮಾಡಬೇಕು, ಯಾವಾಗ ಬೇಡ ಎನ್ನುವುದನ್ನು ಪೋಷಕರು ಅರಿತಿರಬೇಕು. ಯಾವಾಗ ಶಿಕ್ಷೆ ನೀಡಬೇಕೋ ಆಗ ಶಿಕ್ಷೆ ಕೊಡುವುದೂ ಪೋಷಕರ ಕೆಲಸ. ಇಂದಿನ ಮಕ್ಕಳು ಮೊಬೈಲ್‌ಗೆ ಹೆಚ್ಚು ಅಡಿಕ್ಟ್ ಆಗುತ್ತಿದ್ದಾರೆ. ಮಗುವಿನ ಕೈಗೆ ಮೊಬೈಲ್ ನೀಡಿ ತಾಯಿಯರು ಮಕ್ಕಳಿಗೆ ಊಟ ಮಾಡಿಸುತ್ತಾರೆ. ಚಿಕ್ಕ ವಯಸ್ಸಿಗೇ ಮಕ್ಕಳಿಗೆ ಪೋನ್ ಕೊಡುವುದು ತೀರ ಅಪಾಯಕಾರಿ. ಇದನ್ನು ಪೋಷಕರು ತಡೆಯಬೇಕು. ಕರೋನಾ ಬಂದಾದ ಮೇಲೆ ಇದು ಇನ್ನೂ ಹೆಚ್ಚಾಗಿದೆ. ನಾವು ಚೀನಾ, ಜಪಾನ್‌ದಂತಹ ದೇಶಗಳ ಪೋಷಕರನ್ನು ಗಮನಿಸಿದರೆ, ಅಲ್ಲಿನ ಮಕ್ಕಳಿಗೆ ಆಟದ ಮೂಲಕ ಪಾಠವನ್ನು, ಕೌಶಲ್ಯಗಳನ್ನು ಬಹಳ ಯಶಸ್ವಿಯಾಗಿ ಕಲಿಸಲಾಗುತ್ತಿದೆ. ಹಿಂದೆ ಕೆರೆ-ದಡ, ಕುಂಟೆ ಬಿಲ್ಲೆ, ಪಗಡೆ ಇತ್ಯಾದಿ ಆಟಗಳು ನಮ್ಮಲ್ಲಿದ್ದವು. ಇವೆಲ್ಲ ಮಕ್ಕಳಲ್ಲಿ ಕೌಶಲಗಳನ್ನು ಕಲಿಸುವ ಆಟಗಳು. ಆದರೆ, ಈಗ ಇವನ್ನು ನಾವು ಮರೆತಿದ್ದೇವೆ. ಇಂದಿನ ತಾಯಿಯರು ಸಾಕಷ್ಟು ಬದಲಾಗಿದ್ದಾರೆ. ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಹೆಚ್ಚಿನದ್ದು. ಚಿಕ್ಕ ವಯಸ್ಸಿನಿಂದ ಮಕ್ಕಳಿಗೆ ಪೋನ್ ಕೊಡುವುದನ್ನು ನಿಲ್ಲಿಸಬೇಕು. ಇದಕ್ಕೆ ಬದಲಾಗಿ ನಮ್ಮ ದೇಸಿ ಆಟಗಳನ್ನು ಮಕ್ಕಳಿಗೆ ಕಲಿಸಬೇಕು. ಇವು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಗಳೆರಡನ್ನೂ ವೃದ್ಧಿಸುತ್ತವೆ. ನಮ್ಮ ಸ್ಪಂದನ ಸಿರಿವೇದಿಕೆಯ ಮೂಲಕ ಬೇರೆ ಬೇರೆ ಶಾಲೆಗಳ ಮಕ್ಕಳಲ್ಲಿ ದೇಸಿ ಆಟಗಳನ್ನು ಕಲಿಸುವ, ಸ್ಪರ್ಧೆ ಏರ್ಪಡಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ತಂದೆ-ತಾಯಿಗಳು ಕೇಳಿದ್ದಕ್ಕೆಲ್ಲ ಮಕ್ಕಳಿಗೆ ಹಣ ಕೊಡುತ್ತಾರೆ. ಇದರಿಂದ ಮಕ್ಕಳು ದುಶ್ಚಟಗಳಿಗೆ ದಾಸರಾಗುವ ಅಪಾಯಗಳೂ ಇವೆ. ಇದನ್ನು ತಡೆಯುವುದು ಪೋಷಕರ ಜವಾಬ್ದಾರಿ. ಇಂದು ಮಕ್ಕಳಲ್ಲಿ ಸಂಸ್ಕಾರದ ಕೊರತೆ ಹೆಚ್ಚಾಗಿದೆ. ಮಕ್ಕಳಿಗೆ ಹಿರಿಯರನ್ನು ಗೌರವಿಸುವುದು ಗೊತ್ತಿಲ್ಲ, ಪೋಷಕರು ಇದನ್ನು ಕಲಿಸುವ ಕೆಲಸವನ್ನೂ ಮಾಡುತ್ತಿಲ್ಲ. ಶಾಲೆಯಲ್ಲಿ ಮೌಲ್ಯ ಶಿಕ್ಷಣ ಎಂಬ ಪರಿಕಲ್ಪನೆ ಇದೆ. ಇದರ ಅಡಿಯಲ್ಲಿ ಸಾಕಷ್ಟು ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುತ್ತದೆ. ಆದರೆ, ಇದನ್ನು ಪೋಷಿಸುವ ಜವಾಬ್ದಾರಿ ತಂದೆ-ತಾಯಿಗಳದ್ದು. ಹಿಂದೆ ನಮ್ಮ ತಂದೆ ತಾಯಿಗಳು ಅವರಿಗೆ ಅಕ್ಷರ ಜ್ಞಾನವಿಲ್ಲದಿದ್ದರೂ ನಮ್ಮನ್ನು ಮುಂದೆ ಕೂರಿಸಿಕೊಂಡು ಓದಿಸುತ್ತಿದ್ದರು. ಆದರೆ, ಇಂದಿನ ತಂದೆ-ತಾಯಿಗಳು ಹೀಗೆ ಮಾಡುತ್ತಿಲ್ಲ. ಇಂದು ಶಿಕ್ಷೆ ಇಲ್ಲದ ಶಿಕ್ಷಣ ಹೆಚ್ಚಾಗುತ್ತಿದೆ. ಮಕ್ಕಳು ಇದರಿಂದ ಹಾಳಾಗುತ್ತಿದ್ದಾರೆ. ಅವರಲ್ಲಿ ಭಯವೂ ಕಡಿಮೆಯಾಗಿದೆ. ಮಕ್ಕಳಲ್ಲಿ ಶಿಕ್ಷಕರನ್ನು ಕುರಿತ ಭಕ್ತಿಯನ್ನು ಮತ್ತು ಭಯವನ್ನು ಉಳಿಸುವ ಬೆಳೆಸುವ ಕೆಲಸವನ್ನೂ ಪೋಷಕರು ಮಾಡಬೇಕು. ಆದರೆ, ಇದನ್ನು ಯಾರೂ ಮಾಡುತ್ತಿಲ್ಲ. ಹಾಗೆ ನೋಡಿದರೆ ಇಂದಿನ ತಾಯಿ-ತಂದೆಗಳಲ್ಲೇ ಇಂಥಹ ಸಂಸ್ಕಾರಗಳು ಕೊರತೆಯಾಗಿವೆ. ಇದು ನಿಜಕ್ಕೂ ವಿಪರ್ಯಾಸ.
ಸಂದರ್ಶಕರು : ಕೊನೆಯದಾಗಿ, ನೀವು ಯಾರಿಗಾದರೂ ಧನ್ಯವಾದಗಳು, ಕ್ಷಮಾಪಣೆ ಹೇಳುವುದಕ್ಕೆ ಇದೆಯಾ ?
ಶ್ರೀಮತಿ ಆಶಾಕಿರಣ್ : ನನ್ನ ಬರವಣಿಗೆಗೆ ನನ್ನ ತಂದೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ ಹಾಗೆಯೇ ವಿವಾಹಾನಂತರ ನನ್ನ ಅತ್ತೆ ನನ್ನ ಓದಿಗೆ ಸಾಕಷ್ಟು ಸಹಕಾರನ್ನಿತ್ತಿದ್ದಾರೆ. ನನ್ನ ತಾಯಿ ನನ್ನ ಬಾಲ್ಯದಿಂದಲೂ ನನ್ನನ್ನು ಹೆಚ್ಚು ಹೆಚ್ಚು ಪ್ರೀತಿಯನ್ನು ತೋರಿ ಪ್ರೋತ್ಸಾಹಿಸಿದ್ದಾರೆ. ನನ್ನ ಬಾಳ ಸಂಗಾತಿ ಕೇಶವ್ ಕಿರಣ್ ಅವರ ನನ್ನೆಲ್ಲಾ ಸಾಹಿತ್ಯ ಮತ್ತು ಸಮಾಜ ಸೇವೆಗೆ ಬೆನ್ನೆಲುಬಾಗಿದ್ದಾರೆ. ಇವರಿಗೆಲ್ಲ ನಾನು ಧನ್ಯವಾದಗಳನ್ನು ಹೇಳಲೇಬೇಕು. ನನ್ನನ್ನು ಒಬ್ಬ ಸಾಹಿತಿಯಾಗಿ ಲೋಕಕ್ಕೆ ಪರಿಚಯಿಸಿದ, ಮತ್ತು ನನ್ನ ಹಲವಾರು ಸಮಾಜಿಕ ಕಾರ್ಯಗಳಿಗೆ ಸ್ಪೂರ್ತಿಯಾದವರು ಶ್ರೀಮತಿ ಕಲಾವತಿ ಮಧುಸೂದನರು. ಇವರಿಗೆ ನಾನು ಧನ್ಯವಾದಗಳನ್ನು, ಕೃತಜ್ಞತೆಗಳನ್ನೂ ಸಲ್ಲಿಸುತ್ತೇನೆ. ನನಗೆ, ಒಂದು ಸಂಸ್ಥೆಯ ಅಧ್ಯಕ್ಷರು ಎನ್ನುವುದಕ್ಕಿಂತಲೂ ಹೆಚ್ಚಾಗಿ ನಮ್ಮ ತಾಯಿಗೆ ಕೊಡುವಷ್ಟೇ ಗೌರವ ಅವರ ಮೇಲಿದೆ. ಅಲ್ಲದೇ, ನನ್ನ ಎಲ್ಲ ಕೆಲಸಗಳಿಗೂ ಸಹಕಾರ ನೀಡುವ ಸ್ಪಂದನಸಿರಿ ವೇದಿಕೆ ಬೇಲೂರಿನ ತಾಲೂಕು ಅಧ್ಯಕ್ಷರಾದ ಶ್ರೀಮತಿ ಪ್ರತಿಭಾ ಮಯ್ಯ ಅವರಿಗೆ ಮತ್ತು ಸ್ಪಂದನ ಸಿರಿ ವೇದಿಕೆಯ ಸಮಸ್ತ ಪದಾಧಿಕಾರಿಗಳಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ. ಅದೇ ರೀತಿ, ಡಾ ರವಿಕಿರಣ್ ಇವರು ನನ್ನ ಕ್ಯಾನ್ಸರ್ ಚಿಕಿತ್ಸೆಗೆ ಚಿಕಿತ್ಸೆ ನೀಡಿದವರು ಇವರಿಗೂ ನಾನು ನಿಮ್ಮ ಪತ್ರಿಕೆಯ ಮೂಲಕ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ. ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ರಾಜೇಗೌಡರು ನನಗೆ 30 ವರ್ಷದ ವಿಶೇಷ ಸೇವಾ ಬಡ್ತಿಯನ್ನು ನೀಡುವುದರ ಜೊತೆಗೆ 7 ವರ್ಷಗಳ ವೇತನ ಬಾಕಿಯನ್ನು ನೀಡಿರುತ್ತಾರೆ. ಈ ಸಹಾಯವನ್ನು ನಾನಿಲ್ಲಿ ನೆನೆಯಲೇಬೇಕು. ಇವರ ಸಹಾಯಕ್ಕೆ ನಾನೆಂದೂ ಋಣಿ. ನಾನು ಸ್ವಂದನ ಸಿರಿ ವೇದಿಕೆಯ್ಲಲಿ ಸಾಮಾಜಿಕ ಸೇವೆ ಸಲ್ಲಿಸಲು ನನ್ನ ಗೆಳತಿಯರದ ಶಶಿಕಲಾ ಶಿಕ್ಷಕಿ ಹಾಗೂ ರಾಧಾ ಶಿಕ್ಷಕಿ ಇವರುಗಳಿಗು ಸಾಕಷ್ಟು ಸಹಕಾರವಿತ್ತಿದ್ದಾರೆ ಇವರಿಗೂ ನನ್ನ ಧನ್ಯವಾದಗಳು ಸಲ್ಲುತ್ತವೆ. ಜೊತೆಗೆ ನನ್ನ ಈ ಸೇವೆಗೆ ಸಾಧನೆಗೆ ಸಹಕಾರವನ್ನಿತ್ತಿರುವ ಎಲ್ಲರಿಗೂ ನಾನು ಧನ್ಯವಾದಗಳನ್ನು ತಿಳಿಸುವೆ. ಅದೇ ರೀತಿ ನನ್ನನ್ನು ಸಂದರ್ಶನ ಮಾಡುತ್ತಿರುವ ನಿಮಗೂ, ವಿಚಾರ ಮಂಟಪ ವೇದಿಕೆಯ ಸಮಸ್ತ ಪದಾಧಿಕಾರಿಗಳಿಗೂ ನನ್ನ ಧನ್ಯವಾದಗಳು. ಇನ್ನು ಕ್ಷಮೆ ಕೇಳುವುದು ಅಂದರೆ, ನಾನು ನನಗೆ ಅರಿವಿರುವ ಮಟ್ಟಿಗೆ ನಾನು ಯಾರಿಗೂ ಯಾವುದೇ ನೋವನ್ನು ಮಾಡಿಲ್ಲ. ಏಕೆಂದರೆ, ನಾನು ಬೆಳೆದು ಬಂದಿರುವುದು ಬಡತನದಿಂದ ಹಾಗಾಗಿ ನನಗೆ ಮತ್ತೊಬ್ಬರನ್ನು ಬೈಯುವ ಮನಸ್ಸು ಎಂದಿಗೂ ಬರುವುದಿಲ್ಲ.
ಸಂದರ್ಶಕರು: ತುಂಬ ಧನ್ಯವಾದಗಳು ಮೇಡಮ್, ಇಷ್ಟು ಸಮಯ ನಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೀರಿ. ಬಹಳ ಖುಷಿಯಾಯಿತು, ತಮಗೆ ಮತ್ತೊಮ್ಮೆ ಧನ್ಯವಾದಗಳು. ನಮಸ್ಕಾರ.
.ಧನ್ಯವಾದಗಳು
ಶ್ರೀಮತಿ ಆಶಾಕಿರಣ್: ತಮಗೂ ಧನ್ಯವಾದಗಳು ಸರ್, ನಮಸ್ಕಾರ.
(ಸಂದರ್ಶನ ಮಾಡಿದವರು: ವರುಣ್‌ರಾಜ್ ಜಿ., ಅಧ್ಯಕ್ಷರು, ವಿಚಾರ ಮಂಟಪ ಸಾಹಿತ್ಯ ಬಳಗ, ತುಮಕೂರು)
“ಶ್ರೀಮತಿ ಆಶಾಕಿರಣ್ ಮೇಡಂ ಅವರು ಒಬ್ಬ ಶಿಕ್ಷಕಿಯಾಗಿ, ಸಾಹಿತಿಯಾಗಿ ಸಮಾಜ ಸೇವಕಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಮ್ಮ ಸ್ಪಂದನ ಸಿರಿ ವೇದಿಕೆಗೆ ಸೇರ್ಪಡೆಯಾದಂದಿನಿಂದ ಒಂದಿಲ್ಲೊಂದು ಕಾರ್ಯಕ್ರಮವನ್ನೋ, ಸಾಮಾಜಿಕ ಸೇವೆಯನ್ನೋ ಏಕನಿಷ್ಠೆಯಿಂದ ಮಾಡುತ್ತಲೇ ಬರುತ್ತಿದ್ದಾರೆ. ಇವರು ಸತತವಾಗಿ ಮತ್ತು ಸಕ್ರಿಯವಾಗಿ ನಮ್ಮ ಸಂಸ್ಥೆಯ ಹೆಸರನ್ನ ಸದಾಕಾಲ ಕ್ರಿಯಾಶೀಲವಾಗಿಟ್ಟಿದ್ದಾರೆ. ಅಲ್ಲದೇ ಸಮಾಜ ಸೇವೆ, ಶಿಕ್ಷಕ ವೃತ್ತಿಯಲ್ಲೂ ಇವರು ಸೇವೆ ಅಪಾರ. ಪ್ರಚಾರವನ್ನು ಬಯಸದೇ ಸದಾ ಎಲೆಮರೆಯ ಕಾಯಿಯಂತೆ ಜೀವಿಸಿರುವ ಇವರ ಈ ಸೇವೆಯನ್ನು ಗುರುತಿಸಿ ನಾವು ಶ್ರೀಮತಿ ಆಶಾಕಿರಣ್ ಅವರನ್ನು ನಮ್ಮ ನಾಲ್ಕನೇ ಕೃಷಿ, ಸಾಹಿತ್ಯ, ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿರುತ್ತೇವೆ.”
ಶ್ರೀಮತಿ ಕಲಾವತಿಮಧುಸೂದನ, ಅಧ್ಯಕ್ಷರು, ಕರ್ನಾಟಕ ರಾಜ್ಯ ಸ್ಪಂದನಸಿರಿ ವೇದಿಕೆ, ಹಾಸನ.