ಕೈಯಲ್ಲಿ ಕೋಟು, ಬಗಲಲ್ಲಿ ಛತ್ರಿ
ಸುಮ್ಮನೆ ನಡುಗುತಿದ್ದವು
ನಾನು ಮಾತ್ರ ಬಾಹುಬಲಿ!
ಸೋದರನೆದುರಲ್ಲಿ ಕಾದುತಲೆ
ಕಾವಿರುವಾಗಲೆ ಬೆತ್ತಲಾದ
ಬದುಕಿನೆದುರಿಲ್ಲಿ ಸಾಗಿದ್ದಷ್ಟೆ
ಕಾಯುತಲಿರುವ ಈ ಬುದ್ಧ!
ಕರಿಮೋಡ ಬಿಗಿದ ಬಾನು
ಗೋಡೆಯಂತೆದ್ದ ನಿಶೆಗಡಲು
ಜಗತ್ತು ದೊಡ್ಡದಿರಬಹುದು
ನನಗಷ್ಟೆ ಗೊತ್ತು ನನ್ನೊಡಲು!
ಗುಡುಗು ಸಿಡಿಲಿನ ಆರ್ಭಟ
ಜೀವ ಸಂಕಟಗಳ ತೇರು
ಬಿಡದೆ ಸುರಿವ ಮಳೆಯಲಿ
ಕಾಣದು ಕಟ್ಟೆಯೊಡೆದ ಕಣ್ಣೀರು!
ನಿತ್ಯ ಮಳೆ ಮಧ್ಯದಲ್ಲಿ
ಅದೆಷ್ಟು ನೆನೆದೆನೋ?
ಬಾರದ ನೀನು, ಕರಗದ ನಾನು
ಮತ್ತೆಷ್ಟು ನೆಪವೋ!
ಮತ್ತೆಮತ್ತೆ ಮಳೆಯಲ್ಲೆ ಕಳೆವೆ
ಸಾವಿರ ಆಡಿಕೊಳ್ಳಬಹುದು ನೀವು
ಎಲ್ಲಾ ಇದ್ದೂ ಭಿಕಾರಿ ನಾನು
ನೀರ ಸಂತೆ ನಿಮ್ಮದು! ತೀರದ ದಾಹ ನನ್ನದು!?
~ ಅರಬಗಟ್ಟೆ ಅಣ್ಣಪ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ