ಶುಕ್ರವಾರ, ಸೆಪ್ಟೆಂಬರ್ 2, 2022

ವಿದ್ಯಾಲಯ (ಕವಿತೆ) - ಮಲ್ಲಿಕಾರ್ಜುನ ಎಸ್ ಆಲಮೇಲ ಯಡ್ರಾಮಿ.

ಮಾತೆ ಶ್ರೀ ಶಾರದೆಯ ಆಲಯ 
ನಾವು ಕಲಿಯುವ ವಿದ್ಯಾಲಯ 
ಮೊದಲು ಕಲಿಯಬೇಕು ವಿನಯ 
ಆಗ ಜೀವನವು ಕಲ್ಪವೃಕ್ಷಾಲಯ 

ಮೊದಲ ಗುರುವೇ ತಾಯಿಯು 
ಮನೆಯೇ ಪ್ರಥಮ ಶಾಲೆಯು 
ತಂದೆಯೆ ಪ್ರಪ್ರಥಮ ದೈವವು 
ಒಡಹುಟ್ಟಿದವರೆ ಸಹ ಪಾಟಿಯು 

ವಿದ್ಯಾಲಯದಿ ನೂತನ ಸ್ನೇಹವು 
ಜೊತೆಗೆ ಆಟ ಪಾಠಗಳ ಕೂಟವು 
ಶಿಕ್ಷಕರಿಗೆ ಕೊಡಬೇಕು ಗೌರವವು 
ಶಿಸ್ತಿನಿಂದಿದ್ದರೆ ಮಾನ ಸಮ್ಮಾನವು 

ಗುರುಗಳು ಮಾಡುವರು ಬೋಧನೆ 
ನಾವು ಮಾಡಬೇಕು ಅವ್ರ ಆರಾಧನೆ 
ಕಲಿಕೆಯಲ್ಲಿರಬೇಕು ಬಹಳ ಸಹನೆ 
ಆಗಲೇ ಸಾಧ್ಯವಾಗುವದು ಸಾಧನೆ 
- ಮಲ್ಲಿಕಾರ್ಜುನ ಎಸ್ ಆಲಮೇಲ ಯಡ್ರಾಮಿ.

ರಕ್ಷಾ ಬಂಧನ (ಕವಿತೆ) - ಬಿ.ಹೆಚ್.ತಿಮ್ಮಣ್ಣ.

ಮರದ ಆಸರೆಯಿಂದ ಬೆಳೆದ ಲತೆಯು 
ಬೆನ್ನಿಗೆ ಅಂಟಿಕೊಂಡು ಹುಟ್ಟಿದ ಸೋದರಿಯು 
ಕರುಳ ಬಳ್ಳಿ ಕತ್ತರಿಸಿ ಭವ ನೀಡಿದ ತಾಯಿಯು
ಜೀವನದುದ್ದಕ್ಕೂ ಮರೆಯಲಾಗುವುದೇ ತೋರಿದ ಮಮತೆಯು

ಅರಳುವ ಹೂಗಳಂತೆ ನಲ್ಮೊಗೆಯ ತುಟಿಯು
ಮುಖದ ಮೇಲೆ ಹೊಳೆವ ಬೆಳದಿಂಗಳ ಕಳೆಯು 
ನೀ ನಕ್ಕರೆ ಸುರಿಯುವುದು ಹೂವಿನ ಸೋನೆಯು 
ನನ್ನೆದೆಗೆ ಅಪ್ಪಿದೊಡೆ ದೂರಾಗುವುದು ಕಲ್ಮಶದ ನಶೆಯು

ಕೂಡಿ ಆಡುವೆವು ಮನ ಬಿಚ್ಚಿ ನಾವು
ಕಳೆದು ದೂರಾಗುವುದು ಹಡೆದವ್ವನ ನೋವು  
ಚಳಿಯೆಂದು ನಡುಗಿದೊಡೆ ನೀಡುವಳು ಕಾವು 
ಸಿಹಿ ಬೆರಸಿ ನೀಡುವಳು ಬೆಲ್ಲ ಕಲಿಸಿದ ಬೇವು

ಇಳೆ ರವಿಗೆ ಇರುವುದು ಬೆಳಕಿನ ಬಂಧನ 
ಶಶಿ,ಪುಷ್ಪಕೆ ನೀಡುವನು ಬೆಳದಿಂಗಳ ಬೆಳಕನ 
ನೀನಿರುವೆ ನನಗೆ ಬಂಗಾರದ ಚಂದನ 
ನಮ್ಮಿಬ್ಬರನ್ನು ಕೂಡಿಸಲು ಬಂತು ರಕ್ಷಾ ಬಂಧನ

ಅಣ್ಣನರಸಿ ಅಭಿಮಾನದಿಂದ ಬಂದ ಸಹೋದರಿ, 
ನಿನಗೆ ದೊರೆಯಲಿ ಸುಖ ಸಂಸಾರದ ದಾರಿ
ತವರಿನ ಹೆಸರನ್ನು ಬೆಳಗಿಸುವ ಕುಮಾರಿ 
ಎಂದೆಂದಿಗೂ ನನ್ನ ಹೃದಯದಲ್ಲಿರುವೆ ಬಂಗಾರಿ

ನನ್ನೆದೆ ಬಡಿತವು ನೀನಾದೆ ಪುಣ್ಯಮಾತೆ
ನೀಡುವೆ ನಿನಗೆ ದೇವರಿನ ಆದ್ಯತೆ 
ನಿನ್ನಲ್ಲಿ ನೆಲೆಸಿರುವುದು ತಾಯಿಯ ಮಮತೆ
ಸಹೋದರಿಯೇ ಜಗತ್ತಿಗೆ ಎರಡನೇ ದೇವತೆ.
  - ಬಿ.ಹೆಚ್.ತಿಮ್ಮಣ್ಣ.

ಮನಕಂಟಿದ ಕವಿತೆಗಳು (ವಿಮರ್ಶೆ) - ಮೈಬೂಬಸಾಹೇಬ.ವಾಯ್‌.ಜೆ.

 ಕಡಿಮೆ ಸಮಯದಲ್ಲಿ ಮಮತೆಯಿಂದ ಮನಗೆದ್ದ ಸಹೋದರ 

ಷಕೀಬ್ ಕಣದ್ಮನೆಯವರ ಸರಳತೆ ಎಂತಹ ವ್ಯಕ್ತಿಗೂ ಮಾದರಿ. ತಲೆ ಹೋಗುವ ಸಮಸ್ಯೆಯಿದ್ದರೂ ಹೂ  ನಗೆ ಚೆಲ್ಲುವ  ಶ್ರಮಜೀವಿ. ವಿದ್ಯಾರ್ಥಿ ಜೀವನದ ಜೊತೆಜೊತೆಗೆ ರೈತನ ಪಟ್ಟ ಹೊತ್ತಿರುವ ಯಾವಾಗಲೂ ತೋಟ -ಜಮೀನು ಕೆಲಸಗಳಲ್ಲಿ  ತೊಡಗಿ ಭೂಮಿಯ ಸ್ವರ್ಗವ  ಕಾಣುವ ವ್ಯಕ್ತಿತ್ವ ಒಂದೆಡೆಯಾದರೆ, ಕನ್ನಡ ನುಡಿಯುವ ಮನ ಮುಡಿಯದ ಭಾವಗಳು ಕಾಣಲಾಗದು. ಅಂತಹಾ ಕನ್ನಡ ಪರಿಸರದಿಂದಲೇ ಬೆಳೆದು ಬಂದಿರುವ ಷಕೀಬ್ ಅವರು ಮೋಹದ ಮೋಡದ ಮೂಲಕ ಕನ್ನಡ ಪುಸ್ತಕ ಪ್ರಪಂಚಕ್ಕೆ ಪರಿಚಿತರಾಗಿದ್ದಾರೆ. ಅವರ ಭಾಷೆ,ಭಾವ ನುಡಿಗಳ ಮೃದುತ್ವ, ಆಂತರ್ಯದ ಧೋರಣೆ ಅದಮ್ಯ ಹಂಬಲ ನಾಡು ನುಡಿಗಾಗಿ ನುಡಿಯುವ ಒಳಗ ಕರಳು ಎಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡಲು ನಿರತವಾಗಿದೆ ಅದಕ್ಕಾಗಿಯೇ ದೇಶದ ಬೆನ್ನೆಲುಬಿಗೆ ಹೊತ್ತಿಗೆ ಅರ್ಪಿಸಿದ್ದಾರೆ.
     ಬಂಡಾಯದ ಹಿನ್ನೆಲೆ ಹೊಂದಿರುವ ಡಾ ಸಿದ್ದ್ರಾಮ ಕಾರಣೀಕ ಅವರ ಮುನ್ನುಡಿ,ಹಂಪಿ ವಿವಿಯ ಕನ್ನಡ ಸಂಶೋಧಕ ಶರೀಪ ಹಸಮಕಲ್ಲ ಅವರ ಬೆನ್ನುಡಿಯನ್ನೊಳಗೊಂಡು ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದು ಮುದ್ರಿತವಾಗಿದ್ದು, 
  'ಕರುಳಲ್ಲಿ ಹುಟ್ಟ್ತೈತೆ ಕನ್ನಡ
   ಕಂಠದಲ್ಲಿ ಹರಿದಾಡತೈ ಗಡಗಡ '
 ಎನ್ನುವ ಪದ್ಯದ ಸಾಲುಗಳು ಕನ್ನಡ ಭಾಷೆಯ ಹಿರಿಮೆಯನ್ನು ಎತ್ತಿತೋರಿಸುವ ಮೂಲಕ ನಾಡುನುಡಿಯ ಪ್ರಖರತೆಯನ್ನು ತಲೆದೋರುವಲ್ಲಿ ಸಹಕಾರಿಯಾಗಿದೆ. 
ನಾಡುನುಡಿ,ದೇಶ ಪ್ರೇಮ,ಅನ್ನದಾತರಿಗೆ ಸಲಾಮು,ಹಜರತ್ ಸುಲ್ತಾನರ ಪರಾಕ್ರಮ,ಚಂದಿರನ ಲೋಲುಪತೆ,ಪ್ರಣಯದ ಹಾಡು,ಹಕ್ಕಿಹಾಡುವ ಶೋಕಗೀತೆ,ನನ್ನದಲ್ಲದ ಲೇಖನಿ ಎನ್ನುವ ಹಲವು ಪದ್ಯಗಳು ಮತ್ತೆ ಮತ್ತೆ ಓದಿಸಿಕೊಂಡರೆ, 
ಹೃದಯವನ್ನು ಗುಡಿಗೆ ಹೋಲಿಸಿ,ಸ್ನೇಹದಲ್ಲಿ ದೇವರನ್ನು ಕಾಣುವ ರೂಪಕ ಅತ್ಯಾಪ್ತವಾಗಿಸುತ್ತದೆ.
 "ನೆಮ್ಮದಿ ಇರದ ಜೀವನ 
 ಯಮನಿಗೆ ಅಹ್ವಾನ" 
    ಎನ್ನುವ ಕವಿವಾಣಿ,ಜೀವನದಲ್ಲಿ ತೃಪ್ತಿ ಎನ್ನುವುದು ಅತೀವ ಕಾಳಜಿಯ ವಾಕ್ಯವಾಗಿ ಗುರುತಿಸಿಕೊಂಡು ಜೀವನ ಪ್ರೀತಿಯನ್ನು ಸಾರುವುದರಲ್ಲಿ ಸಹಕಾರಿಯಾಗಿದೆ.'ಕವಿಯ ಕಲ್ಪನೆಗೆ ಎಟುಕದ ಸೌಂದರ್ಯ ನಿನ್ನದು ನಿನಗೆಂದೆ ಕಾಯುವ ಭಾಗ್ಯ‌ ನನ್ನದು'
  ಈ ರಸಭರಿತ ಕಾವ್ಯ ಕಲ್ಪನೆಗೂ ನಿಲುಕದ ನಿಲುವು ಪ್ರಾಸಭರಿತವಾದ ಹೊಸ ಛಾಯೆಯಗಳ ಮಾಯೆಯನ್ನು ಬರಮಾಡಿಕೊಳ್ಳುವ,
'ಅವಳು ನಕ್ಕರೆ ಮಲ್ಲಿಗೆಯ ಛಾಯೆ'ಎನ್ನುವಲ್ಲಿ ಪ್ರೇಮಿಯನ್ನು ಪ್ರೇಮಿಸುವ ಪರಿಯಲ್ಲಿ‌ ಹೊಸ ಪ್ರಮೇಯ ತೆರೆಯಲೆತ್ನಿಸಿದ್ದಾರೆ‌.ಆಚಾರ ಪತ್ನಿಯೊಂದಿಗೆ ವ್ಯವಹರಿಸುವ ವಿಚಾರ ಸತಿಯ ಸೇರಿಸಿ ಅದಕೆ ಸವಿಯ ಸುರಿಸಿ ಹರಸುವ ಪರಿ ಪರೋಕ್ಷವಾಗಿ ಪ್ರಪಂಚವೆಲ್ಲಾ ಪ್ರೇಮದಲ್ಲಿದೆ ಪ್ರೀತಿ ಇಲ್ಲದ ಹೊರತು ಏನನ್ನು ಮಾಡಲಾರೆ ದ್ವೇಷವನ್ನು ಕೂಡಾ' ಎನ್ನುವ  ಚಂಪಾ ಅವರ ಕವಿತೆಯ ಸಾಲುಗಳು ನೆನಪಿಸುತ್ತಾರೆ 
    ಪ್ರೇಮ ಋತುಮಾನಗಳಾಗಿ,ಶತಮಾನದ ಭಾವಗಳಾಗಿ,ಯುಗ ಯುಗಗಳ ಬಂಧನಗಳಾಗಿ ಬೆಳೆದರೂ ಹಳತಾಗುವುದಿಲ್ಲ. ಅಳತೆಯ ಸೆಳೆತದಲ್ಲಿ ಸಿಲುಕಿ ನಲುಗುವ ಹಲವಾರು ಪಡ್ಡೆ ಹುಡುಗರನ್ನು ಇಬ್ಬನಿಯ ರೂಪಕದಲ್ಲಿ ವಿವರಿಸುವ ಪ್ರಯತ್ನ‌ ಕೂಡ ಪ್ರಯಾಸದಿಂದ ಕೂಡಿದ್ದರೂ ಕೆಚ್ಚೆದೆಯಲ್ಲಿ ದೇಶಬಾಂದವರನ್ನು ಹಚ್ಚೆ ಹಾಕಿಸಿಕೊಳ್ಳಿ ಎನ್ನುವ 'ಮೌನರಾಗ'ಹೊಸತಲೆಮಾರಿನ ಹೋರಾಟಗಾರರಿಗೆ ಪರಿಚಯ ಮಾಡಿಸುತ್ತದೆ.
   ತಂಗಿಗಾಗಿ,ಮೌನಯಾನ ದಂತಹ ಕೆಲವು ಪದ್ಯಗಳು ಒಡಲ ಪ್ರೇಮ,ಪ್ರಾದೇಶಿಕತೆ ದಾರ್ಶನಿಕತೆಯನ್ನು ತಿಳಿಸುವುದರೊಂದಿಗೆ ತಿಳಿಸಿ ಪ್ರಾಂತ್ಯದ ಪ್ರೀತಿಯಿಂದ ರಾಷ್ಟ್ರಪ್ರೇಮದತ್ತ ತಿರುಗುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ.ಎನ್ನುವ ಕವಿಭಾವ ರಸದೌತ್ತತೆ ಸಾರುವಲ್ಲಿ ನಿರತವಾಗಿದೆ.
ತಮ್ಮ ತವರೂರಾದ ನವಿಲುರೂನಿಂದ ಹಿಡಿದು, ಭಾರತ ದೇಶದ ಬಗ್ಗೆಯೂ ಕವಿತೆಗಳನ್ನು ರಚಿಸಿ ದೇಶಪ್ರೇಮ ಮೆರೆದಿದ್ದಾರೆ. ತನ್ನ ಪ್ರೇಯಸಿಯನ್ನು ಕವಿತೆಗಳ ಮೂಲಕ ಕಾಡಿ, ಬೇಡಿ,  ಆರಾಧಿಸಿ, ಪ್ರೇಮ ಲಹರಿ ಒಂದೆಡೆ ಅದ್ಭುತವಾಗಿ ಮೂಡಿ ಬಂದಿದೆ. ಜೊತೆಗೆ ಪ್ರಕೃತಿಯ ಮಡಿಲಿನಲ್ಲಿ ಜೀವನ ನಡೆಸುವ ಇವರು ತಮ್ಮ ಕವನ ಸಂಕಲನದಲ್ಲಿ ಪ್ರಕೃತಿಯ ವಿವಿಧ ರೀತಿಯ ಮಜಲುಗಳನ್ನು ತುಂಬಾ ಮೋಹಕವಾಗಿ ವರ್ಣಿಸಿದ್ದಾರೆ
 ಒಂದೆರಡು ಕವಿತೆಗಳಾದ, ಹೀಗೇಕೆ?, ಕಣ್ಣೀರ ಮಳೆ
 ನಾನು ತುಂಬಾ ಭಾವುಕನಾದ ಕವಿತೆಗಳು. ತಮ್ಮ ತಂಗಿಯರಿಗೆ ಕವಿತೆ ಬರೆದು ಅಣ್ಣನ ವಾಸ್ತಲ್ಯವನ್ನು ಮೆರೆದಿರುವುದು  ಬಾಂಧವ್ಯಗಳಿಗೆ ಸಂಬಂಧಗಳಿಗೆ ಇವರು ನೀಡುವ ಪ್ರಾಮುಖ್ಯತೆಯನ್ನು ಕಲಿಸಿಕೊಡುತ್ತವೆ.    ಭಾರತದ ಬೆನ್ನೆಲುಬು ರೈತ, ಮತ್ತು ಯೋಧರಿಗೆ ನೈಜ್ಯತೆಯ  ವಂದನಾರ್ಪಣೆ   ಸಲ್ಲಿಸಿದ್ದಾರೆ. "ಈ ಪುಸ್ತಕದ ಪ್ರತಿ  ಪುಟಗಳ ತೆನೆ ಹಿಡಿದ ಕೈಗಳು ಚಿಹ್ನೆಯೂ" ಕವಿಯ ರೈತನ ಮೇಲಿನ ಅಭಿಮಾನ ತಿಳಿಸಿಕೊಡುತ್ತದೆ. ಮೊಟ್ಟಮೊದಲ ಪ್ರಯತ್ನವೇ ರಂಗುರಂಗಾಗಿದ್ದರು, ಅಲ್ಲಲ್ಲಿ ಕೆಲಮಟ್ಟಿನ ದ್ವಂದ್ವಗಳು ಕಂಡುಬಂದರೂ ಮೊದಲ ಪ್ರಯತ್ನದ ಕವನ ಕೃಷಿಯಲ್ಲಿ ತಕ್ಕಮಟ್ಟಿನ ಕಥನ ಪ್ರಿಯತೆಯೂ ಸೃಜಿಸಿದ್ದಾರೆ.ಎಲ್ಲವೂ ಒಳಿತಾಗಲಿ ಹೊಸತನ ನಿರಂತರವಾಗಲಿ.. ಮೋಹದ ಮೋಡಗಳು ತಿಳಿಯಾಗಿರುವಂತೆ ಬಾಸವಾಗುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಅತಿ  ಹೆಚ್ಚು ವಿಮರ್ಶೆ, ಕಥೆ, ಕವನ, ಕಾದಂಬರಿ ನಿಮ್ಮಿಂದ ಕರುನಾಡಿಗೆ ಕೊಡುಗೆ ಆಗಲಿ
    ನಾಡಿನ ಬಹುಸಂಖ್ಯಾತ ಆವಾಸದ ಮೇಲೆ ಬರೆ ಎಳೆಯುವ ಹುನ್ನಾರಗಳು ನಡೆಯುತ್ತಿರುವ ಈ ದಿನಗಳಲ್ಲಿ,ಸಮಾನ ಚಿಂತನೆಯ ಸುಸಂಸ್ಕೃತ ವ್ಯಕ್ತಿಯ ನಿರ್ಮಾಣ ಕಾರ್ಯ ಶಿಕ್ಷಣ ಸಂಸ್ಥೆಗಳು ಮಾಡಬೇಕಾದ ಹೊತ್ತಿನಲ್ಲಿ ಪಠ್ಯಗಳಲ್ಲಿ ವೈರತ್ವದ ಬೀಜ ನೆಡುವ ಕೆಲಸ ಗೊತ್ತಿಲ್ಲದದಂತೆ ನಡೆಯುವತ್ತಿರುವುದು ಖೇದಕರ ಸಂಗತಿ.ಈ ವರ್ಗೀಕರಣ ಪದ್ದತಿ ಹಿಂದಿನಿಂದಲೂ ನಡೆಯುತ್ತಲೇ ಬಂದಿತ್ತು. ಈಗಾಗಲೂ ನಡೆಯುತ್ತಿದೆ ಆ ವಿಚಾರ ಬೇರೆ,ಆದರೆ ಸಮತೆ ಬಿತ್ತುವ ನೆಲದಲ್ಲಿ ವೈಷಮ್ಯ,ದ್ವೇಷ,ಅಸೂಯೆ,ಅಸಮಾನತೆ, ಅಂದಭಕ್ತಿಯನ್ನು ದೇಶಭಕ್ತಿಯ ರೂಪದಲ್ಲಿ ಪಠ್ಯದಲ್ಲಿ ಇರಿಸುತ್ತಿರುವುದು ಅಂದಕ್ಕಾರದ ಮಹೋನ್ನತ ಹಂತ ತಲುಪಿದೆ ಎಂದ್ಹೇಳಡ್ಡಿಯಿಲ್ಲ‌.
       ಬಹು ಸಂಸ್ಕೃತಿಯ ಭಾರತ,ಜಾತಿ,ಮತ,ಧರ್ಮ,ಪಂಥಗಳನ್ನು ದೂರ ಸರಿಸಿ ನಾವೆಲ್ಲಾ ಭಾರತೀಯರು ಎನ್ನುವ ಭಾವ ಮೂಡಿಸುವ ಹೊತ್ತಿಗೆಯಲ್ಲಿ ವಿಷ ಪೋಣಿಸುವ ಹುನ್ನಾರ ನಡೆಯುತ್ತಿರುವ ವಿಚಾರ ಹೀನ ಸಂಸ್ಕಾರದ ಲಕ್ಷಣಗಳು,ಭಾರತೀಯತೆ,ಬಂದುತ್ವ,ಸಹೋದರತ್ವದ   ಉಗ್ರಾಣ ನಮ್ಮ ದೇಶ, ಅದನ್ನು ಅಗ್ರಹಾರದಂತೆ ಬದಲಿಸುತ್ತಿರುವ ಹೊಲಸು ರಾಜಕೀಯದವರು  ಮುಂದ್ಯಾವುದಕ್ಕೂ ಹೇಸುವುದಿಲ್ಲ. ಎನ್ನುವ ಕನ್ಸರ್ವೇಶನ್ನಗಳು ಆಗಾಗ ಸಾಬಿತಾಗುತ್ತಿವೆ.ಪ್ರಗತಿಪರ ವಿಚಾರವಾದಿಗಳನ್ನು ದೇಶದ್ರೋಹದ ಪಟ್ಟಕಟ್ಟಿ ಸಮಾಜದಿಂದ ತಿರಸ್ಕೃತರನ್ನಾಗಿ ಮಾಡುವ ಕುತಂತ್ರಿಗಳಿವರೆನ್ನುವುದರಲ್ಲಿ ಸಂದೇಹವಿಲ್ಲ.ಇಂತಹ ಬಸವಾದಿ ಶರಣರ ನಾಡಿನಲ್ಲಿ ಸಮಾನತೆಗಾಗಿ ಹಾತೊರೆಯುತ್ತಿರುವ ಪ್ರಗತಿಪರ ಚರಿಸ್ಮಾ ಕಾಣುವುದು ‌ವಿರಳಾತೀವಿರಳ ಅಂತ ವಿರಳ ಸಂಗತಿಗಳನ್ನು ತನ್ನ ಸರಳ ಸಾಹಿತ್ಯದಲ್ಲಿ ಅಳವಡಿಸಿ ಕೊಂಡಿದ್ದಲ್ಲದೆ ಬರೆದಂತೆ ಬದುಕಿರುವ ಚೇತನಕ್ಕೆ ಅಭಯ ಹಸ್ತದಿಂದ ಬರಮಾಡಿಕೊಳ್ಳೋಣ.

- ಮೈಬೂಬಸಾಹೇಬ.ವಾಯ್‌.ಜೆ.

ನಶಾ ಮುಕ್ತ - ಪರಿಸರಯುಕ್ತ ಭಾರತಕ್ಕಾಗಿ ಕೈ ಜೋಡಿಸೋಣ (ಲೇಖನ) - ಹನುಮಂತ ದಾಸರ ಹೊಗರನಾಳ.

ಸುಂದರ ಮತ್ತು ಸೊಗಸಾದ ಬದುಕನ್ನು ಸರಳವಾಗಿ ಸುಲಲಿತವಾಗಿ ಸಾಗಿ ಬದುಕುವ ಕ್ಷಣಗಳು ಸಾವಿರಾರು ನಮ್ಮೆಲ್ಲರ ಕಣ್ಮುಂದೆ ಸುಳಿದಿವೆ ಅಂತಹ ಒಳ್ಳೆಯ ಕ್ಷಣಗಳನ್ನು ಅನುಭವಿಸಿ ಆರೋಗ್ಯತವಾಗಿ ಬದುಕಿ ನಲಿಯುವ ಬದಲು ನಾವು ಇಂದಿನ ದಿನಮಾನಗಳಲ್ಲಿ ಹಲವಾರು ದುಶ್ಚಟಗಳಿಗೆ ಬಂಧಿಯಾಗಿ ನಮ್ಮ ಬದುಕಿಗೆ ನಾವೇ ಬೆಂಕಿ ಇಟ್ಟುಕೊಳ್ಳುವಂತಹ ಸಮಯ ಸಮೀಪ ಸುಳಿದಾಗಿದೆ. ಭಾರತದಲ್ಲಿ ಮಧ್ಯಪಾನ ಮತ್ತು ಧೂಮಪಾನಕ್ಕೆ ಸಂಬಂಧಿಸಿದಂತೆ ಉತ್ಪನ್ನಗಳ ತಯಾರಿಕಾ ಕಾರ್ಖಾನೆಗಳೂ ಕೂಡ ಹೇರಾಳವಾಗಿ ಅಭಿರುದ್ಧಿ ಹೊಂದುತ್ತಿರುವುದರಿಂದ ದೇಶಕ್ಕೆ ಆದಾಯ ಹೆಚ್ಚುತ್ತಿದೆ ಎನ್ನುವುದಾದರೆ ಮತ್ತೊಂದೆಡೆ ನೋಡಿದಾಗ ಇಂತಹ ಉತ್ಪನ್ನಗಳ ತಯಾರಿಕೆಯಿಂದ ಮುಖ್ಯವಾಗಿ ಯುವ ಪೀಳಿಗೆಯ ಮೇಲೆ ಬಹಳಷ್ಟು ಪರಿಣಾಮ ಬಿರುತ್ತದೆ. ವಿಶೇಷವಾಗಿ ಒಂದು ದೇಶಕ್ಕೆ ಯುವ ಪೀಳಿಗೆಯ ಶಕ್ತಿ ಅತ್ಯಾವಶ್ಯಕವಾಗಿರುತ್ತದೆ ಹೀಗಿರುವಾಗ ಇಂತಹ ಉತ್ಪನ್ನಗಳಿಂದ ಹದೆಗೆಡುತ್ತಿರುವ ಯುವ ಪೀಳಿಗೆ ಅಷ್ಟೇ ಅಲ್ಲದೇ ಇಂದಿನ ದಿನಮಾನಗಳಲ್ಲಿ ವಯೋಮಿತಿಗೆ ಮೀರಿ ಅಂದರೆ ಮುಖದ ಮೇಲೆ ಮೀಸೆ ಗಡ್ಡ ಮೂಡದೇ ಇರುವ ಬಾಲಕರು, ಹೆಣ್ಣು, ಗಂಡೆನ್ನದೆ ಪ್ರತಿಯೊಬ್ಬರೂ ಮಧ್ಯಪಾನ, ಧೂಮಪಾನ, ಗೂಟಕಾ, ತಂಬಾಕು ಹೀಗೆ ಹಲವಾರು ಚಟಗಳಿಗೆ ಮಾರುಹೋಗುವುದಷ್ಟೇ ಅಲ್ಲದೇ ಅದು ದೈನಂದಿನ ಚಟುವಟಿಕೆಯಾಗಿ ಮಾರ್ಪಟ್ಟಿದೆ ಹಾಗೂ ಬಿಟ್ಟರೂ ಬಿಡಲಾಗದ ಮಾಯೆ ಎಂಬಂತಾಗಿದೆ.
ಮಧ್ಯಪಾನ ಮತ್ತು ತಂಬಾಕು ಉತ್ಪನ್ನದ ವ್ಯಾಪಾರ ದೇಶದ ಮೂರನೇ ಅತಿದೊಡ್ಡ ವ್ಯಾಪಾರವಾಗಿದೆ. ದೇಶದಲ್ಲಿ  ದಿನಕ್ಕೆ ಸುಮಾರು 5 ಜನ ಇಂತಹ ದುಶ್ಚಟಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡವರಿದ್ದರೆ, ಕರ್ನಾಟಕದಲ್ಲಿ ಸುಮಾರು 6000 ಜನರು  ವರ್ಷಕ್ಕೆ ಈ ಮಧ್ಯಪಾನ ಮತ್ತು ಧೂಮಪಾನಗಳಂತಹ ವ್ಯಸನಗಳಿಂದ ಜೀವ ಕಳೆದುಕೊಳ್ಳುತ್ತಾರೆ. ಇಂತಹ ಭಯಾನಕ ಮತ್ತು ಮಾರಕವಾದಂತಹ ದುಶ್ಚಟಗಳಿಂದ ಪ್ರತಿಯೊಬ್ಬ ವ್ಯಕ್ತಿಯು ದೂರವಿರಲು ಮತ್ತು ತಡೆಗಟ್ಟಲು ಭಾರತ ಸರ್ಕಾರ ಹಲವಾರು ಅಭಿಯಾನ ಮತ್ತು ಯೋಜನೆಗಳನ್ನು ಜಾರಿಗೆ ತಂದು ಸಂಬಂಧಿಸಿದ ಇಲಾಖೆಗಳ ಮೂಲಕ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಮಾಹಿತಿ ತಲುಪಿ ಅವರನ್ನು ಜಾಗೃತಗೊಳಿಸಲೆಂದು ಹಲವಾರು " ತಂಬಾಕು ಮುಕ್ತ ಭಾರತ ", " ನಶಾ ಮುಕ್ತ ಭಾರತ "
ಮಧ್ಯಪಾನ ಮುಕ್ತ ಭಾರತ ಹೀಗೆ ಹಲವಾರು ಅಭಿಯಾನಗಳನ್ನು, ಕಾರ್ಯಕ್ರಮಗಳನ್ನು ಸಾರ್ವಜನಿಕರ ಹಿತಾಸಕ್ತಿಗಾಗಿ ನಡೆಯುತ್ತಲೇ ಇವೆ. ಆದರೇ ದುರದೃಷ್ಟವೆಂದರೇ ಭಾರತ ಮಧ್ಯಪಾನ ಮತ್ತು ಧೂಮಪಾನ ವ್ಯಾಪಾರದಲ್ಲಿ 3ನೇ ಅತಿದೊಡ್ಡ ವ್ಯಾಪಾರ ಹೊಂದಿದ್ದರೂ ಅದರಿಂದ ಶೇಖರಣೆಗೊಂಡ ಆದಾಯದಿಂದ ನಕ್ಸಲರಿಸ್ಮ್, ಟೆರಾರಿಸ್ಮ್ ಹೀಗೆ ಅನೇಕ ಕೆಟ್ಟ ಕೃತ್ಯಕ್ಕೆ ಮತ್ತು ಕೆಟ್ಟ ಕಾರ್ಯಕ್ರಮಗಳ ಉತ್ತೇಜನಕ್ಕೆ ಹಾಗೂ ಅಭಿರುದ್ಧಿಗಾಗಿ ಬಳಸಲಾಗುತ್ತಿದೆ ಎಂಬ ಸತ್ಯಂಶ ಹೊರಬಿದ್ದಿದೆ. ಆದರೇ ಯಾವತ್ತೂ ನಮ್ಮ ದೇಶ ಈ ಮಧ್ಯಪಾನ ಮತ್ತು ತಂಬಾಕು ಉತ್ಪನ್ನಗಳ ತಯಾರಿಕಾ ಕ್ಷೇತ್ರಗಳಿಂದ ಬರುವ ಆದಾಯದ ರೂಪ ಸಂಪೂರ್ಣವಾಗಿ ಬದಲಾಗಬೇಕು ಮತ್ತು ಅಂತಹ ವ್ಯಾಪಾರ ಕೇಂದ್ರಗಳನ್ನು ಸ್ಥಗಿತಗೊಳಿಸಬೇಕು ಆ ವ್ಯಾಪಾರಗಳಿಂದ ದೇಶಕ್ಕೆ ಬರುವ ಆದಾಯಕ್ಕೆ ಕಡಿವಾಣವಾಕಬೇಕು ಹಾಗೂ ಅಂತಹ ವ್ಯಾಪಾರಗಳು ನಡೆಯದಂತೆ ಸರ್ಕಾರ ಅದೊಂದು ಬಹುದೊಡ್ಡ ಕಾರ್ಯ ಮಾಡಬೇಕಿದೆ. ಏಕೆಂದರೆ ಮಧ್ಯಪಾನ ಮತ್ತು ಧುಮಪಾನದಿಂದ ಎಷ್ಟೋ ಯುವಕರು ಸಾವಿಗೀಡಾಗುತ್ತಿದ್ದಾರೆ ಅದೆಷ್ಟೋ ಶ್ವಾಸಕೋಶ, ಕ್ಯಾನ್ಸರ್ ಗಳಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅದೆಷ್ಟೋ ಪಾಲಕರು ಮಕ್ಕಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ, ಅದೆಷ್ಟೋ ಮಹಿಳೆಯರು ಪತಿಗಳನ್ನು ಕಳೆದುಕೊಂಡು ಮುಂಡೆಯರಾಗಿದ್ದಾರೆ, ಅದೆಷ್ಟೋ ಕಂದಮ್ಮಗಳು ತಂದೆಯನ್ನು ಕಳೆದುಕೊಂಡು ಅನಾಥ ಹಾಗೂ ತಂದೆಯ ಪ್ರೀತಿ ಇಲ್ಲದೇ ಮರುಗಿ ಬದುಕುತ್ತಿವೆ ಅದಕ್ಕಾಗಿ ಇಂತಹ ಹಲವಾರು ಭಾವನೋತ್ಮಕ ಅಂಶಗಳನ್ನು ಮನಗಂಡು ಸರ್ಕಾರ ನಶೆ ಮುಕ್ತ ಭಾರತಕ್ಕಾಗಿ ಕೈ ಜೋಡಿಸಿ ಮಧ್ಯಪಾನ ಮತ್ತು ಧೂಮಪಾನಕ್ಕೆ ಕಡಿವಾಣ ಹಾಕಬೇಕು ಹಾಗೂ ಯುವ ಜನತೆಯನ್ನು ಅಷ್ಟೇ ಅಲ್ಲದೇ ಪ್ರತಿಯೊಬ್ಬ ಮಾನವನನ್ನು ಅಂತಹ ಕೆಟ್ಟ ಚಟಗಳಿಂದ ಹೊರ ಬರುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಮುಖ್ಯವಾಗಿ ದೇಶದಲ್ಲಿ ಯಾರೇ ಹುಟ್ಟಿದ್ದರೂ ಅವರು ತಮ್ಮ ಸ್ವಂತ ನಿರ್ಧಾರದಿಂದ ಯಾವುದೇ ಆತ್ಮಹತ್ಯ ಕೃತ್ಯಕ್ಕೆ ಕೈ ಹಾಕುವುದಾಗಲಿ ಆತ್ಮಹತ್ಯ ಮಾಡಿಕೊಳ್ಳುವುದಾಗಲಿ ಆದರೇ ಆಕಸ್ಮಿಕವಾಗಿ ಬದುಕುಳಿದರೆ ಅವನಿಗೆ ಕಾನೂನು ಪ್ರಕಾರ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು ಎಂಬ ಸುಪ್ರೀಂ ಕೋರ್ಟ್ ನಿಯಮದಂತೆ ಇಂತಹ ಚಟಗಳಿಗೆ ತುತ್ತಾಗುವವರಿಗೂ ಕೂಡ ದಂಡ ಮತ್ತು ಶಿಕ್ಷೆ ವಿಧಿಸುವಂತಹ ನಿಯಮಗಳು ಅವಶ್ಯವಾಗಿ ಜಾರಿಯಾಗಲಿ ವಿಶೇಷವಾಗಿ ಇಂತಹ ಕೆಟ್ಟ ಚಟಗಳು ಬರೀ ಪುರುಷರಿಗಷ್ಟೇ ಅಂಟಿದ್ದಲ್ಲ ಇದು ಮಹಿಳೆಯರಿಗೂ ತಲುಪಿದೆ ಅವರೂ ಕೂಡ ಕೆಟ್ಟ ಚಟಗಳಿಗೆ ದಾಸರಾಗಿದ್ದಾರೆ ಹಾಗೂ ಅದೊಂದು ಪ್ರಸ್ತುತ ಕಾಲಮಾನದ ಪಾಶ್ಚಿಮತ್ಯಾ ಶೈಲಿಯ ಟ್ರೆಂಡ್ ಆಗಿ ರೂಪಿತಗೊಂಡಿದೆ ಈ ಶೈಲಿಯನ್ನು ಆದಷ್ಟು ಬೇಗ ಕಡಿಮೆಗೊಳಿಸುವಂತೆ ಕಡಿವಾಣ ಹಾಕಬೇಕು ಏಕೆಂದರೆ ಪುರುಷರಿಗಿಂತ ಮಹಿಳೆಯರಿಗೆ ನಿಕೋಟಿನ್ ಮತ್ತು ಸ್ಪಿರಿಟ್ ನಂತಹ ಅಂಶಗಳು ದೇಹಕ್ಕೆ ಬೇಗನೆ ಅಂಟಿಕೊಂಡು ಇಡೀ ದೇಹದ ಸ್ಥಿತಿಯನ್ನೇ ಬದಲಿಸಿ ಅವರ ಗರ್ಭಧಾರಣೆಯ ಸಮಯದಲ್ಲಿ ಹಾರ್ಮೋನ್ ಬಿಡುಗಡೆಗೂ, ಸ್ಥನಗಳ ಹಾರ್ಮೋನಿಗೂ ಮತ್ತು ಇನ್ನಿತರ ದೇಹದ ಬದಲಾವಣೆಗೆ ಕಾರಣವಾಗಿರುವ ಎಲ್ಲಾ ತೆರನಾದ ಹಾರ್ಮೋನ್ ಬಿಡುಗಡೆಯ ತೊಂದರೆಗೂ ಮತ್ತು ಬಂಜೆತನಕ್ಕೂ ಕಾರಣವಾಗಬಲ್ಲ ಪದಾರ್ಥಗಳಾಗಿವೆ ಹೀಗಾಗಿ ಇಂತಹ ದುಶ್ಚಟಗಳಿಂದ ಆದಷ್ಟು ಮಹಿಳೆಯರನ್ನು ಮುಕ್ತಗೊಳಿಸುವಂತಹ ಕಾರ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯಗಳು ಕಾರ್ಯನಿರ್ವಹಿಸಬೇಕಿದೆ. ಭಾರತೀಯ ನಾಗರಿಕರಾದ ನಾವುಗಳು ಯಾವುದೇ ಕೆಟ್ಟ ಚಟಗಳಿಗೆ ದಾಸರಾಗದೆ ಯಾವುದೇ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ, ಚೈನೀಸ್ ತಿಂಡಿ ತಿನಿಸುಗಳಿಗೆ ಎಡಿಕ್ಟ್ ಆಗದೇ ನಮ್ಮ ದೇಶಿಯ ಪದ್ಧತಿಯ ತಿಂಡಿ ತಿನಿಸುಗಳು, ಉಡುಗೆ ತೊಡುಗೆಯ ಸಂಸ್ಕೃತಿಯ ಜೊತೆಗೆ ಸ್ವದೇಶೀ ಉತ್ಪನ್ನಗಳನ್ನು ಉಪಯೋಗಿಸುವ ಮೂಲಕ ನಮ್ಮ ದೇಶದ ಆದಾಯವನ್ನು ಹೆಚ್ಚಿಸುವುದಲ್ಲದೇ ಆರೋಗ್ಯತವಾದ ದೇಶ ಮತ್ತು ಆರೋಗ್ಯತವಾದ ದೇಹವನ್ನಾಗಿ ಕಾಪಾಡಿಕೊಳ್ಳಬಹುದು. ಭವ್ಯ ಭಾರತದಲ್ಲಿ ಭಿನ್ನವಾಗಿ ಬದುಕೋಣ, ಭವ್ಯ ಭಾರತಕ್ಕೊಂದು ಭಿನ್ನತೆಯ ಭಾವ ತರೋಣ ಬೇರಾವುದೇ ದುಶ್ಚಟಕ್ಕೊಳಗಾಗಿ ದೇಹದ ಖಿನ್ನತೆಗೆ ಬಲಿಯಾಗದಿರೋಣ ಸಹಸ್ರಾರು ವರ್ಷಗಳಿರುವ ಭಾರತದ ಇತಿಹಾಸದಂತೆ ಒಳ್ಳೆಯ ತಿಂಡಿ ತಿನಿಸು ಆಹಾರ ಪದ್ಧತಿಯನ್ನು ಅನುಸರಿಸಿ ಧ್ಯಾನ ಯೋಗಾಸನಗಳೊಂದಿಗೆ ನೂರಾರು ವರ್ಷಗಳಷ್ಟು ಬದುಕೋಣ ನಶಾ ಮುಕ್ತ ಭಾರತ-ಪರಿಸರಯುಕ್ತ ಭಾರತವೆಂದು ವಿಶ್ವಕ್ಕೆ ಮಾದರಿಯಾಗೋಣ.
- ಹನುಮಂತ ದಾಸರ ಹೊಗರನಾಳ.
ಮೊ:9945246234.


ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...