ಗುರುವಾರ, ಫೆಬ್ರವರಿ 1, 2024

ಪ್ರಕೃತಿ (ಕವಿತೆ) - ಭಾಗ್ಯ ಎಸ್ ಅಡವಿ.

ಕೊಡಲಿಯ ಹಿಡಿದಾರ
ಕಡಿಲಿಕ ಬಂದಾರ್
ಕಷ್ಟದ ಸುದ್ದಿಯ
ಇಷ್ಟ ದಿ ಹೇಳಲೇ

ಸ್ವಾರ್ಥ ಕ್ಕ ಬಲಿಯಾದೆ
ಏನಕ್ಕ ಮಾಡಲಿ
ಮನುಷ್ಯನ ಮೊಸಕ್ಕ
ನನಾದೆ ಬರಡಕ್ಕ 

ಅತ್ತರು ಬಿಡಲಿಲ್ಲ
ಕರೆದರೂ ನೆಡ ಲಿಲ್ಲ
ಕಟ್ಟಿಗೆ ಕಡಿದಾರ
ಒಟ್ಟಾಗೀ ಒಯ್ಯದಾರ

ಹಚ್ಚಾಗ ಅತ್ತಾರ
ಕಡಿಯಾಗ ನಕ್ಕಾರ
ಹುಚ್ಚ ಮಂದಿಗೀ ನೋಡಿ
ಬೆಚ್ಚ ಬೆರಗ ಆಗೆನ.

- ಭಾಗ್ಯ ಎಸ್ ಅಡವಿ.

ಮೌನವಾಯಿತೆ ಮನಸು ನಿನ್ನಿಂದ(ಕವಿತೆ) - ಸುಭಾಷ್ ಸವಣೂರು.

ಮನದಾಳದ ಗರ್ಭದಲಿ
ನೊಂದ ನೆನಪುಗಳ ಚಿತ್ತಾರವು
ಸಣ್ಣ ಬೆಳಕಿಗೂ ಬಾರದೆ ಯಾರಿಗೂ ಕಾಣದೆ
ಅಡಗಿ ಕೂತಿದೆ ಯಾರಲು ಸೇರದೆ

ಕಡಲಾಳದಿಂದ ಉಕ್ಕಿ ಅಲೆಗಳಾಗಿ ಅಪ್ಪಳಿಸಿದಂತೆ
ನೊಂದು ಬೆಂದಾ ನೋವುಗಳು
ಮನದಾಳದಲ್ಲಿ ಕೊರಗಿ ಕೊರಗುತಲಿ
ಕಣ್ಣ ಹನಿಗಳಾಗಿ ಮೌನದಿ ಜಾರಿವೆ

ಸಾಗರದಂತಿದ್ದ ಪ್ರೀತಿಯೂ ಕೈ ಸರಿದು
ಮುಗಿಲೊಂದಿಗೆ ಮುಚ್ಚಿದಂತೆ
ಇದ್ದಕಿದ್ದಂತೆ ಕಂಡಾ ಸುಂದರ ನನಸು
ಕನಸಾಗಿ ಮಾಯವಾಗಿ  ಮನಸ್ಸು ಮೂಕವಾಗಿದೆ

ಮುಸ್ಸಂಜೆ ಸರಿದು ಇರುಳ ಬಯಸಿದಂತೆ
ತಡೆಯಲಾಗದ ಮನದ ಮಾತುಗಳು
ಹೃದಯ ಸೇರದೇ ಮೂಕವಾಗಿ
ಕತ್ತಲೆಯ ಆಸರೆ ಬಯಸಿ ಕಾರಾಳ ಇರುಳಲ್ಲಿ ನೆಲಸಿದೆ

ತುಂಬಿದ ನದಿಗಳು ಹರಿಯುವುದ
ತಡೆಯಲಾಗದಂತೆ
ಮನಸ್ಸಿನಲ್ಲಿ‌ ಚಿಗುರಿದಾ ಆಸೆಗಳೆಲ್ಲಾ
ಬಂದಿಸಲಾಗದೆ
ದುಖಃದ ಒಡಲಿನಲ್ಲಿ ಸೇರಿ ಕಂಬನಿಯಾಗಿ 
ಮೆಲ್ಲನೆ ಜಾರುವುದನ್ನು ತಡೆಯಲಾಗದಾಗಿದೆ

ಹೃದಯವು ಪ್ರೀತಿಯಾ ಸೇರದೆ ಮೌನವಾಗಿ ಮಿಡಿಯುತಾ
ಕಾಣದ ಪ್ರೀತಿಯೂ ಸಿಗಲಾರದೆ ವೇದನೆಯೂ ಹೆಚ್ಚಾಗಿ
ಮನಸ್ಸನು ತೊರೆದು ಮನಸಾರೆ ಹರಿಯುವುದೆ
ಕಾಣದ ಮಮತೆಯ ಪ್ರೀತಿಯ ಕಡಲ ಸೇರಲು.

- ಸುಭಾಷ್ ಸವಣೂರು.

ಸ್ವಾಮಿ ವಿವೇಕಾನಂದ(ಕವಿತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

ವಿಶ್ವದ ಪುಟದಲ್ಲಿ ಅಚ್ಚಳಿಯದೆ ಉಳಿದ
ರಾಮಕೃಷ್ಣ ಪರಮಹಂಸರ ಪ್ರೀತಿಯ ಶಿಷ್ಯನಾದ
ಸದ್ವಿಚಾರ ಬೆಳೆಸಿಕೊಂಡ ಭಾರತದ ಕಂದ
ಭಾರತದ ಕ್ರಾಂತಿಕಾರಿ ವಿವೇಕಾನಂದ

ಭಾರತದಲ್ಲಿರುವ ಆಧ್ಯಾತ್ಮದ ಅಗಾಧ ಸಂಪತ್ತು 
ಪಾಶ್ಚಾತ್ಯರಿಗೆನು ಗೊತ್ತು ಅದರ ಕಿಮ್ಮತ್ತು
ಕನ್ಯಾಕುಮಾರಿ ಬಂಡೆ ಮೇಲೆ ತಪವಗೈದು ಕುಳಿತ
ತನ್ನ ಯೌವ್ವನವೇ ರಾಷ್ಟ್ರಪ್ರೇಮಕ್ಕೊಪಿಸಿ ನಿಂತ

ಸೂರ್ಯ ಕಾಂತಿಯಂತೆ ಹೊಳೆವ ನಮ್ಮಸಂತ ದಿಟ್ಟ
ದೇಶಪ್ರೇಮದ ಉದ್ಧಾರಕ್ಕೆ ಚಿಕಾಗೋಕೆ ಕಾಲಿಟ್ಟ
ಸರ್ವಧರ್ಮ ಸಮ್ಮೇಳನದಲ್ಲಿ ಸಂತಗೈದ ಭಾಷಣ
ಸಹೋದರ ಸಹೋದರಿಯರೆಂಬ ಪದತಂದ ಭೂಷಣ

ದೇವರೆಲ್ಲಿಹನು ಎಂದು ಹುಡುಕುತಿರುವ ಪ್ರಶ್ನೆಯಲ್ಲಿ
ಉತ್ತರ ಕಂಡನು ಪರಮಹಂಸರ ಸಾನಿಧ್ಯದಲ್ಲಿ 
ದೇಹ ಚಿತ್ತ ಆತ್ಮಬಲದೊಂದಿಗೆ ಬೆಳೆದುನಿಂತನಲ್ಲ
ಗ್ರಹಣ ಶಕ್ತಿ ಸಮಯಪ್ರಜ್ಞೆ ಅವನಲ್ಲಿ ತುಂಬಿತಲ್ಲ

ಲೋಕದ ದೃಷ್ಟಿಯಲ್ಲಿ ಯುಗಪುರುಷನೆಂಬ ನಾಮ ಪಡೆದ
ಯೋಗಿಯಾಗುವ ಮೊದಲು ಉಪಯೋಗಿ ಆಗುಯೆಂದ
ನವಭಾರತ ಸ್ವಾತಂತ್ರ್ಯದ ಜನಕ ಸ್ವಾಮಿ ವಿವೇಕಾನಂದ
ನಿರ್ವಿಕಲ್ಪ ನಿಶ್ಚಿಂತ ಸಮಾಧಿಯಲ್ಲಿ ಲೀನನಾಗಿ ಹೋದ

- ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

ಸುಂದರ ಶುಭೋದಯದ (ಕವಿತೆ) - ಜಿಂಕೆಗಳ ಮಂಜುನಾಥ್.

ಇರುಳರಸನು ಇರುಳೆಲ್ಲಾ ಇಳೆದೇವಿಯನು
ರಮಿಸುತ ಮುದ್ದಿಸುತ..ಅವಳಾಳಕ್ಕಿಳಿಯುತ
ಕಣಿವೆಕತ್ತಲೆಗಳಲಿ ರಸಿಕನಂತೆ ಅಲೆಯುತ
ಸುಖಿಸಿ ಸುಸ್ತಾಗಿ ಎದ್ದು ಹೋದ ಸಮಯದಲಿ..

ಹುಣ್ಣಿಮೆ ಚಂದಿರನು ಸರಿರಾತ್ರಿಯ ಕದತೆರೆದು
ಪ್ರಕೃತಿದೇವಿಯ ಚೆಂದುಟಿಯನು ಚುಂಬಿಸುತ
ಅವಳೆದೆಯ ಬಿಸುಪಿನಲಿ ಹಾಲ್ಬೆಳದಿಂಗಳನು
ಸುರಿದು..ಸರಿದು ಎದ್ದು ಹೋದ ಘಳಿಗೆಯಲಿ..

ಮುಂಗಾರಿನ ಮಳೆಹನಿಯು ಮೇಘಗಳಿಂದಿಳಿದು
ಧರಣಿಯ ಹಣೆಯ ಸಿಂಧೂರವನು ತಾಕುತ
ಅವಳದೇ ಕಿಬ್ಬೊಟ್ಟೆಯ ಸೊಬಗಿನಲಿ ಧುಮ್ಮಿಕ್ಕುತ
ದಣಿದ ಭೂರಮೆಯ ಮೊಗದ ಬೆವರಹನಿಯನು
ಒರೆಸುತ..ಸುಖಿಸಿ ಎದ್ದು ಹೋಗುವ ವೇಳೆಯಲಿ..

ಆಗ..ಆಗತಾನೇ..ಉದಯಿಸಿಹನು ಬಾಲಭಾಸ್ಕರ..
ಸಮಸ್ತ ಜಗತ್ತಿಗೇ ಸಾರುತಿಹನು ಶುಭಸಮಾಚಾರ.

- ಜಿಂಕೆಗಳ ಮಂಜುನಾಥ್, ಕಲ್ವಮಂಜಲಿ,ಕೋಲಾರ.

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...