ಬುಧವಾರ, ಅಕ್ಟೋಬರ್ 20, 2021

ಸದಾ ಮುಗುಳ್ನಗೆಯ ಹೊಳಪು ತೋರಿದ ಗೌರವಾನ್ವಿತ ಗುರುಗಳಾದ ನಾಗರಾಜ ಗಾಂವಕರ್ ಸರ್ (ಲೇಖನ) - ಸೌಮ್ಯ ಗಣಪತಿ ನಾಯ್ಕ.

ಅಡುಗೆ ಹಾಳಾದರೆ ಒಂದು ದಿನ ನಷ್ಟ, ಬೇಳೆ ಹಾಳಾದರೆ ಒಂದು ವರ್ಷ ನಷ್ಟ, ಆದರೆ ವಿದ್ಯೆ ಹಾಳಾದರೆ ಇಡೀ ಜೀವನವೇ ನಷ್ಟ. ಎಂದು ಎ. ಪಿ. ಜೆ. ಅಬ್ದುಲ್ ಕಲಾಂ ಅವರು ಹೇಳಿದ್ದಾರೆ. ಇದು ಎಷ್ಟೋಂದು ಸತ್ಯವಾದ ಮಾತು  ಅಲ್ವ! 
         ಪುರಾತನ ಕಾಲದಿಂದಲೂ ಗುರು ಎನ್ನುವ  ಅದ್ಬುತ ಶಕ್ತಿಗೆ ಅವರ ಘನತೆ, ಗೌರವಕ್ಕೆ ತಕ್ಕ  ಮರ್ಯಾದೆ  ಸಿಗುತ್ತಲೇ  ಬಂದಿದೆ.
         ಜೀವನದಲ್ಲಿ ನಾವು ಏನೇ ಆಗಲಿ, ತಂದೆ- ತಾಯಿಯ ಆಶೀರ್ವಾದದ ಜೋತೆಗೆ ಒಬ್ಬ ಉತ್ತಮವಾದ ಗುರುವಿನ ಮಾರ್ಗದರ್ಶನವು ನಮಗೆ ಅವಶ್ಯಕವಾಗಿ ಬೇಕಾಗಿರುತ್ತದೆ. ನಾವು  ದೊಡ್ಡ ಹುದ್ದೆಯಲ್ಲಿ ಇರಲಿ, ಚಿಕ್ಕ ಹುದ್ದೆಯಲ್ಲಿ ಇರಲಿ ಆ ಹುದ್ದೆ ಪಡೆಯೋ ಘನತೆ, ಅರ್ಹತೆ, ಕಲಿಸೋ ಏಕೈಕ ವ್ಯಕ್ತಿ ಒಬ್ಬ ಗುರು.... ಶಿಕ್ಷಣ ಕಲಿಸೋ ಶಿಕ್ಷಕ ಉತ್ತಮ  ಚಾರಿತ್ರೆ ಹೊಂದಿರುತ್ತಾರೆ. ಯಾವ ಒಬ್ಬ ವ್ಯಕ್ತಿ ಸೇವೆಯಲ್ಲಿ ತಮ್ಮನ್ನು ತಾವೇ ಸ್ವತಃ ತೊಡಗಿಸಿಕೊಂಡಿರುವರೆಂದರೆ ಅದು ಗುರುಗಳಿಂದ ಮಾತ್ರ ಸಾಧ್ಯ. ಗುರುಗಳು  ತಮ್ಮ ಶಿಷ್ಯರಲ್ಲಿ ಸಾಧಿಸುವ ಛಲ , ಸ್ಥೈರ್ಯವನ್ನು ತುಂಬುತ್ತಾರೆ.  ಪ್ರತಿಯೊಬ್ಬ ಶಿಷ್ಯರ ಪಾಲಿಗೂ ಗುರುಗಳೇ ಶಕ್ತಿಯಾಗಿರುತ್ತಾರೆ. ಗುರು ಹೇಳುವ ಈ ಎರಡಕ್ಷರ  ಬರೆಯೋದು ಸುಲಭ, ಓದೋದು ಸರಳವಾಗಿದೆ. ಆದರೆ ಆ ಎರಡು ಪದ ಬೆಲೆನೇ  ಕಟ್ಟೋಕಾಗದ ಅತ್ಯುತ್ತಮವಾದ , ಅಮೂಲ್ಯವಾದ ರತ್ನ ಪ್ರತಿಯೊಬ್ಬ ಶಿಷ್ಯರ  ಬಾಳಿಗೆ. ಗುರಿ ಮುಂದಿರಬೇಕು, ಗುರು ಹಿಂದಿರಬೇಕು. ಅನ್ನುವ ಮಾತಿದೆ. ಹಾಗೆ ಗುರಿಯಿಲ್ಲದ ಜೀವನ, ಗುರುಗಳಿಲ್ಲಿದ ಜೀವನ ಬರಡು ಭೂಮಿಗೆ ಸಮ. ಗಿಡಗಳಲ್ಲಿ ಅರಳಿರೋ ಹೂ ಯಾರದ್ದೋ ಜಡೆಗೆ  ಅಂದ ಹೆಚ್ಚಿಸಬಹುದು ಆದರೆ, ಅದಕ್ಕೆ ಯಾವುದೇ ಅಸ್ತಿತ್ವ, ಘನತೆ ಇರೋದಿಲ್ಲ. ಆದರೆ ಅದೇ ಹೂ ದೇವರ ಮುಡಿಗೆ  ಏರಿಸಿದರೆ ಜನರು ಪ್ರಸಾದದ ರೂಪದಲ್ಲಿ  ಸ್ವೀಕರಿಸುತ್ತಾರೆ. ಗುರು ಕೂಡಾ ಹಾಗೆ ಅಂದ ಇರಲಿ, ಆಕಾರ ಇಲ್ಲದೆ ಇರಲಿ ಗುರುವನ್ನು ದೇವರ  ಸ್ಥಾನದಲ್ಲಿ ಪೂಜಿಸೋದು ನಮ್ಮ ಸಂಸ್ಕೃತಿ,  ಸಂಸ್ಕಾರ,   ..  ಸನ್ನಡತೆಯ ಜೋತೆ ಜೊತೆಗೆ ಭಾಷಾ ವಿನ್ಯಾಸ ಸರಳ ರೂಪದಲ್ಲಿ ತಿಳಿಸಿರುವ ನನ್ನ ಗುರುವಾದ ಶ್ರೀಯುತ ನಾಗರಾಜ ಗಾಂವಕರ್ ಸರ್ ರವರ ಬಗ್ಗೆ ನನ್ನೆರಡು ವಾಕ್ಯದಲ್ಲಿ ನಿರೂಪಿಸಿರುವ ಪ್ರಯತ್ನ ನನ್ನದು. 
            ಇವರ ಪೂರ್ಣ ಹೆಸರು- ನಾಗರಾಜ ಎಲ್ ಗಾಂವಕರ್  , ಇವರ ತಂದೆ -  ಲಕ್ಷ್ಮಣ ಗಾಂವಕರ್ ತಾಯಿ-  ಪಾರ್ವತಿ ಗಾಂವಕರ್ ಇವರದ್ದು  ಕೃಷಿ ಕುಟುಂಬ. ಸ್ವಂತ ದುಡಿಮೆ ಮಾಡಿ, ಕೃಷಿ ಯಲ್ಲಿ  ಅದ್ಬುತ ಸಾಧನೆಗೈದವರು. ರಾತ್ರಿ- ಹಗಲು ನೋಡದೆ ದುಡಿದು , ಕೃಷಿಕರು ಕೂಡಾ ಸಾಧಿಸಲು ಯೋಗ್ಯರೆಂದು ಹೆಮ್ಮೆಯಿಂದ ನೂರಾರು ಜನರ  ನಡುವೆ ತಲೆಯೆತ್ತಿ ನಡೆದವರು. ಈ ಸುಂದರವಾದ ಕುಟುಂಬಕ್ಕೆ ನಾಲ್ಕು ಮಕ್ಕಳ ಆಗಮನದಿಂದ ಬಹಳ ಸಂತಸದ ಛಾಯೆ ಮೂಡಿತು. ನಾಗರಾಜ್ ಗಾಂವಕರ್, ಹರೀಶ್ ಗಾಂವಕರ್, ಸುರೇಶ್ ಗಾಂವಕರ್, ಸಂತೋಷ್ ಗಾಂವಕರ್.  ಈ ನಾಲ್ಕು ಮುತ್ತು ಗಳು  ಹೊಳೆಯುವ ಸ್ಪಟಿಕದಂತೆ ವಿಜ್ರಂಭಣೆಯಿಂದ  ಇದ್ದರು. 
           ೨೯- ೧೨- ೧೯೬೪ ರಲ್ಲಿ  ಲಕ್ಷ್ಮಣ ಗಾಂವಕರ್ ಮತ್ತು  ಪಾರ್ವತಿ ಗಾಂವಕರ್ ರವರಿಗೆ ಒಂದು ಗಂಡು ಮಗುವಿನ ಜನನವಾಯಿತು. ಇವರ ಹೆಸರೆ ನಾಗರಾಜ್ ಗಾಂವಕರ್. ಇವರು ನಾಡಮಕ್ಕೇರಿ ಊರಿನಲ್ಲಿ ಕುಮಟಾ ತಾಲೂಕಿನ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಿಸಿದರು. ಇವರು ತಂದೆ- ತಾಯಿಯ ಅಚ್ಚುಮೆಚ್ಚಿನ ಮಗನಾಗಿ ನಡತೆ, ಗಾಂಬಿರ್ಯ ದಲ್ಲಿ ತಂದೆಯನ್ನು ಹೋಗುತ್ತಿದ್ದರು. ಇವರಿಗೂ ಎಲ್ಲರಂತೆ ತಂದೆ- ತಾಯಿಯ ಗೌರವ, ಪ್ರತಿಷ್ಠೆಯನ್ನು ಆಕಾಶದಸ್ಟು ಎತ್ತರಕ್ಕೆ, ಉತ್ತುಂಗದ  ಸ್ಥಾನಕ್ಕೆ ಏರಿಸುವ ಛಲವನ್ನು ಹೊಂದಿದ್ದರು. ಇದು ಕೂಡಾ ತಂದೆ- ತಾಯಿಯ ಬಳುವಳಿಯೇ  ಆಗಿರುತ್ತದೆ. 
              ಇವರು ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಡಮಕ್ಕೇರಿಯಲ್ಲಿ ಮುಗಿಸುತ್ತಾರೆ. ಪ್ರೌಢ ಶಿಕ್ಷಣವನ್ನು ಪಿ. ಎಮ್. ಹೈಸ್ಕೂಲ್ ಅಂಕೋಲದಲ್ಲಿ  ಮುಗಿಸುತ್ತಾರೆ ಒಳ್ಳೆಯ ಅಂಕ ಪಡೆದು ಶಾಲೆಯ   ಕೀರ್ತಿಯ ಜೋತೆಗೆ ತಂದೆ- ತಾಯಿಯ  ಕೀರ್ತಿಗೂ ಪಾತ್ರರಾದರು.ಇಲ್ಲಿಂದ ಅವರ ಜೀವನ  ಹೊಸ ತಿರುವನ್ನೇ ಪಡೆದುಕೊಂಡಿತು. ಪಿ. ಯು. ಸಿ ಅನ್ನು ಇವರು ಜೆ. ಸಿ ಕಾಲೇಜು ಅಂಕೋಲಾದಲ್ಲಿ ಪಡೆದು  ಮುಂದಿನ ವಿದ್ಯಾಬ್ಯಾಸ ಪ್ರಾರಂಭಿಸಿದರು. ಆಂಗ್ಲ ಐಚ್ಛಿಕ ಭಾಷೆಯ ಮೂಲಕ ಪದವಿ ಪೂರ್ವ ಶಿಕ್ಷಣ ಪಡೆದುಕೊಳ್ಳುತ್ತಾರೆ. ಓದಿನ ಜೋತೆ ಜೋತೆಗೆ ನಮ್ಮ ಕಲೆ, ಸಂಸ್ಕೃತಿಗೆ ಹೆಚ್ಚಿನ ಮಹತ್ವ ನೀಡಿದರು. ಯಾರ ಮಾತಿಗೂ ಅಂಜದೇ ಮುನ್ನುಗ್ಗಿ, ಕಾಲೇಜುಗಳಲ್ಲೂ ಹೆಚ್ಚಿನ ಅಂಕ ಪಡೆದರು.  ಸ್ನಾತಕೋತ್ತರ ಪದವಿಯನ್ನು ಧಾರವಾಡದಲ್ಲಿ ಮುಗಿಸಿದರು. (M. A)  . ನಂತರ ಉಪನ್ಯಾಸಕರ ವೃತ್ತಿ ಪ್ರಾರಂಭಿಸಿದರು. 1991-1992 ರಲ್ಲಿ ಒಂದು ವರ್ಷ ಅವರು ಜೆ. ಸಿ ಕಾಲೇಜು ಅಂಕೋಲಾದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ನಂತರ 1993 ರಲ್ಲಿ ಕೈ. ಪಿ. ಎಸ್. ಸಿ ಮೂಲಕ ನೇರವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಇಲ್ಲಿಂದಲೇ ಅವರು ತಮ್ಮನ್ನು ತಾವು ಸೇವೆಯಲ್ಲಿ ತೊಡಗಿಸಿಕೊಂಡರು. ಇವರ ಸರ್ಕಾರಿ ಸೇವೆ 1993  ಸೆಪ್ಟೆಂಬರ್ 3ರಂದು ಕೆ. ಆರ್ ಪೇಟೆಯಿಂದ ಪ್ರಾರಂಭವಾಯಿತು. ಮಂಡ್ಯ ಜಿಲ್ಲೆಯ ಕೆ. ಆರ್ ಪೇಟೆಯಿಂದ 1995 ರಲ್ಲಿ ಉಡುಪಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜು( kokkarne. )  ಕಾಲೇಜಿಗೆ  ವರ್ಗಾವಣೆಯಾಯಿತು. ಅಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದರು. 1997 ರಲ್ಲಿ ಜೂನ್ ತಿಂಗಳಲ್ಲಿ ಶ್ರೀ ಮಾರಿಕಾಂಬಾ ಸರ್ಕಾರಿ ಪದವಿ ಪೂರ್ವ ಕಾಲೇಜು ನಮ್ಮ ಶಿರಸಿಗೆ  ವರ್ಗಾವಣೆಯಾಯಿತು. ತಮ್ಮ ಸೇವಾ ಅವದಿಯಲ್ಲಿಯೂ ಕೂಡಾ  ಸ್ವಲ್ಪ  ಕಾಲ ಸಮಯವನ್ನು ತಮ್ಮ ವೈವಾಹಿಕ ಜೀವನಕ್ಕೆ ನೀಡುತ್ತಾರೆ. (1998) ಮನೆ ಭಾರವನ್ನು ಹೆಗಲಿಗೆ ಹಾಕಿಕೊಳ್ಳುವರು. ಜೋತೆಗೆ ಸಂಸಾರದ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗುತ್ತಾರೆ. 1999ರಿಂದ 2009ರವರೆಗೆ ಶ್ರೀ ಮಾರಿಕಾಂಬಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (  NSS) ಅಧಿಕಾರಿಯಾಗಿ ಸಾಂಸ್ಕೃತಿಕ ಸಂಚಾಲಕನಾಗಿ ಶಿರಸಿಯಲ್ಲಿರುವ  ಹಳ್ಳಿಗಳಲ್ಲಿ (NSS) ಹಲವು ಶಿಬಿರ ನಡೆಸಿದ್ದಾರೆ. 
           ನಮಗೆಲ್ಲ ಇವರು  ಮಾದರಿಯಾಗಿದ್ದಾರೆ. ಇವರಿಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಗೌರವ ದೊರಕಿದೆ. ಇದನ್ನೆಲ್ಲ ಗಮನಿಸಿದರೆ ಇವರು ಒಬ್ಬ ಸತ್ಪುರುಷ ಸದ್ಗುಣಗಳನ್ನು ಪಡೆದ  ವ್ಯಕ್ತಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. 2010 ರಲ್ಲಿ ಇವರು ಶಿರಸಿ ತಾಲೂಕಿನ  ಬಾಳೂರಿನಲ್ಲಿ ಹೊಸದಾಗಿ  ಪ್ರಾರಂಭವಾದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರಾಚಾರ್ಯರಾಗಿ ನೇಮಕಾತಿ ನಿಯೋಜನೆಯಾಯಿತು. 2010- 2011ರವರೆಗೆ ಒಂದು ವರ್ಷ ಸಂಪೂರ್ಣ ಆಸಕ್ತಿಯಿಂದ  ಕಾರ್ಯನಿರ್ವಾಹಿಸಿದರು. ಬಿಳೂರಿನಿಂದ  ನಿಲೇಕಣಿ ಕಾಲೇಜಿಗೆ 2011 ರಲ್ಲಿ ನಿಲೇಕಣಿ ಪದವಿ ಪೂರ್ವ ಕಾಲೇಜಿಗೆ  ಉಪನ್ಯಾಸಕರಾಗಿ ವರ್ಗಾವಣೆಯಾಯಿತು. ನಮ್ಮ ಸೌಭಾಗ್ಯವೋ ಎನೋ ಅಂದೆ ನಾವು ಕೂಡಾ ಮೊದಲ ಪದವಿ ಪೂರ್ವ ಶಿಕ್ಷಣಕ್ಕೆ ಕಾಲಿಟ್ಟೆವು. ನಾನು ಮೊದಲು ಈ ಕಾಲೇಜ್ ಗೆ ಬಂದಾಗ ಏನೂ ಬದಲಾವಣೆ  ಆಗಿರಲಿಲ್ಲ. ಅದೇ ಹಳೆ ಕಟ್ಟಡ, ಇತ್ತು. ನಾವು ಕೇವಲ ಹೈಸ್ಕೂಲ್ನ ಒಂದು ಭಾಗವಾಗಿದ್ದೇವು. ಆದರೆ ನಂತರ ಕಟ್ಟಡಗಳ ನಿರ್ಮಾಣ ಆಯಿತು. ತುಂಬಾ ಬದಲಾವಣೆಗಳನ್ನು ಜಾರಿಗೆ ತಂದರು.ನನ್ನ ಗುರುವಾದ ನಾಗರಾಜ್ ಗಾಂವಕರ್ರವರು ನಮ್ಮ ಕಾಲೇಜಿನಲ್ಲಿ ಯಾವಾಗ  ಉಪನ್ಯಾಸಕರಿಂದ- ಪ್ರಾಂಶುಪಾಲರರಾಗಿ ಭಡ್ತಿ ಹೊಂದಿದರೋ ಅಂದಿನಿಂದ ಅವರಿಂದಲೂ ತುಂಬಾ ಬದಲಾವಣೆಗಳು ಆಯಿತು. 2011ರಿಂದ 2016ರವರೆಗೆ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಶಿರಸಿ, ಅಂಡಗಿ, ಸುಗಾವಿ, ಇಳಸೂರು, ಕೋರಲ  ಕಟ್ಟ ಹೀಗೆ ಹಲವಾರು  ಹಳ್ಳಿಗಳ ವಿರುದ್ಧ ಶಿಬಿರ ಯೋಜನೆಯಲ್ಲಿ ಭಾಗವಹಿಸಿದ್ದಾರೆ. ಅದರಲ್ಲೂ ಯಶಸ್ಸು ಕಂಡಿದ್ದಾರೆ. ತಮ್ಮ  ಕೈಲಾದಷ್ಟು ಹಣದ ರೂಪದಲ್ಲಿ ಸಹಾಯ ಮಾಡಲು ಮುಂದಾಗಿದ್ದಾರೆ. ಹಲವಾರು ಕ್ರಿಯಾತ್ಮಕ  ಕಾರ್ಯಗಳಲ್ಲಿ ನಿರೂಪಕರಾಗಿ  ಸೃಜನಶೀಲರಾಗಿ ಪಡೆದುಕೊಂಡಿದ್ದಾರೆ. ಇದಕ್ಕಾಗಿ ಅವರಿಗೆ ಹಲವಾರು ಕಡೆ ಪುರಸ್ಕಾರಗಳು  ದೊರಕಿದೆ. ಇನ್ನು ನಿಲೇಕಣಿ ಕಾಲೇಜಿನಲ್ಲಿ ಕೂಡಾ ವಿದ್ಯಾರ್ಥಿಗಳ ಪರವಾಗಿ ವಾದ ವಿವಾದ ನಡೆಸಿದ್ದಾರೆ. ಮಕ್ಕಳ  ಉಜ್ವಲ ಭವಿಷ್ಯದ ಕಡೆ ಗಮನ ಹರಿಸಿ ತಮ್ಮ ವಿದ್ಯಾರ್ಥಿಗಳಿಗೂ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅನುವು ಮಾಡಿ ಕೋಡಿ ಎಂದು ಮೇಲಧಿಕಾರಿಗಳ ಬಳಿ ಮನವಿ ಮಾಡಿದರು. ಇದರಿಂದಾಗಿ ಮಕ್ಕಳು ತಮ್ಮ ಕಲೆ, ಸಂಸ್ಕೃತಿಯನ್ನು ಜಿಲ್ಲಾ ಮಟ್ಟದವರೆಗೆ, ರಾಜ್ಯ ಮಟ್ಟದವರೆಗೆ  ಹೋಗಲು ಅವಕಾಶ ಸಿಕ್ಕಿದೆ. ಇದಕ್ಕಾಗಿ ನಾವು ನಿಮ್ಮ ವಿದ್ಯಾರ್ಥಿಗಳು ನಿಮಗೆ ಒಳ್ಳೆಯ ಗೆಳಯ ಗೆಳತಿಯರಂತೆ ಇರುತ್ತೇವೆ,. ನಾವು ನಿಮ್ಮ ಮಕ್ಕಳು ಕೂಡಾ ಹೌದು. 2018 ರಲ್ಲಿ ಉಪನ್ಯಾಸಕರ ವೃತ್ತಿಯಿಂದ ಪ್ರಾಂಶುಪಾಲರಾಗಿ ಭಡ್ತಿ ಹೊಂದುತ್ತಾರೆ. ಅವರು ಭಡ್ತಿ ಹೊಂದಿದಾಗ ನಾವು ಇರಲಿಲ್ಲ. ಆದರೆ ನಮ್ಮಂತಹ ಅದೆಷ್ಟೋ ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸಿದ ಮಹಾನ್ ವ್ಯಕ್ತಿ ನೀವು. 
       ಹಹಹಹಹ!!! ಹೇಳೋದು ಮರೆತೆ ನಾವು ಇರುವಾಗ ಕಾಲೇಜಿನ ವತಿಯಿಂದ ಪ್ರವಾಸಕ್ಕೆ ತೆರಳಿದೇವು. ಆಗ ನನ್ನ ಗೆಳತಿ ಒಬ್ಬಳು ನನಗೆ ಇಷ್ಟ ಇಲ್ಲ ಅಂದರೂ ಒತ್ತಾಯದ ಮೆರೆಗೆ ಕರೆದುಕೊಂಡು ಹೋದಳು. ಆದರೆ ನನಗೆ ಹೋಗುವಷ್ಟು ಹಣ ಇರದ ಕಾರಣ ನಿಮ್ಮ ಬಳಿ ತುಸು ಸಂಕೋಚದಿಂದ ಕೇಳಿದೆ ಆದರೆ ನೀವು ಒಂದು ಮಾತು ಹೇಳಿದಿರಿ. ಹಣದ   ಚಿಂತೆ ಬಿಡು, ನಿನಗೆ ಆಸಕ್ತಿ ಇದೆ ಅಲ್ಲವಾ, ನೀವು ಹೊರಟು ಬಾ... ಹಣದ  ವ್ಯವ ಸ್ಥೆ ನಾನು ನೋಡಿಕೊಳ್ಳುವೆ ಎಂದು ಸುಲಭವಾಗಿ ಹೇಳಿದ ಮಾತು ಇನ್ನೂ ನೆನಪಿದೆ ಧನ್ಯವಾದಗಳು ಸರ್ ನಾನೆಂದೂ ನಿಮ್ಮಂತಹ ಎಷ್ಟೋ ಗುರುಗಳ ಆಜ್ಞೆಯನ್ನು ಪಾಲಿಸೋ  ಮನಸ್ಸು ನನ್ನದಾಗಲಿ. ನಿಮಗೆ ನನ್ನ ಕಡೆಯಿಂದ  ಕೃತಜ್ಞಗಳು  ತಿಳಿಸುವೆನು.
            


- ಸೌಮ್ಯ ಗಣಪತಿ  ನಾಯ್ಕ.( ಕಾನಸೂರು). ಉತ್ತರ ಕನ್ನಡ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಅಶೋಕ ವಿಜಯ ದಶಮಿಯ ಮಹತ್ವ (ಲೇಖನ) - ನಂದಾದೀಪ ಬೋರಳೆ.

ಇಂದು ಜಗತ್ತಿನ ಪ್ರಸಿದ್ಧ ಮಹಾನ್ ಯೋಧ ಮತ್ತು ದಯೇ,ಕರುಣೆ,ಮೈತ್ರಿಯ ಉಪಾಸಕ, ಬೋಧಿಸತ್ವ ಚಕ್ರವರ್ತಿ ಸಮ್ರಾಟ ಅಶೋಕನ ಧಮ್ಮ ವಿಜಯ ದಶಮಿಯಂದು ಸಮಸ್ತ ನಾಡಿನ ಬಹುಜನ ಮೂಲನಿವಾಸಿಗಳಿಗೆ ಹಾದಿ೯ಕ ಶುಭಾಶಯಗಳು.

ಅಶೋಕನ 13 ನೇ ಶಾಸನದಲ್ಲಿ ಉಲ್ಲೇಖಿಸಿದ ಹಾಗೆ ಅಶೋಕನು ತನ್ನ ರಾಜ್ಯಾಭಿಷೇಕದ ಎಂಟು ವರ್ಷಗಳ ನಂತರ ಅಂದರೆ ಕ್ರಿಸ್ತಪೂರ್ವ 261 ರಲ್ಲಿ ಕಳಿಂಗ ರಾಜ್ಯದ ಮೇಲೆ ದಾಳಿ ಮಾಡಿದ. ಈ ಯುದ್ಧದಲ್ಲಿ ಲಕ್ಷಾಂತರ ಜನ ಸತ್ತರು, ಲಕ್ಷಗಟ್ಟಲೆ ಜನ ಗಾಯಗೊಂಡರು, ಸಾವಿರಾರು ಜನರಿಗೆ ಬಂಧಿಸಲಾಯಿತು ಮತ್ತು ಎಷ್ಟೋ ಜನರಿಗೆ ಗಡಿಪಾರು ಮಾಡಲಾಯಿತು. ಆ ಭೀಕರ ಯುದ್ಧದಲ್ಲಿ ಹರಿದ ರಕ್ತದ ಭಯಾನಕತೆಯನ್ನು ಕಂಡು ಅಶೋಕನ ಹೃದಯ ಕಂಪಿಸಿತು ಮತ್ತು ಅವನ ಆಲೋಚನೆಗಳಲ್ಲಿ ಬದಲಾದಣೆಯಾಯಿತು.

ಈ ಘಟನೆಯ ನಂತರ ಅಶೋಕನು ಬೌದ್ಧ ಭಿಕ್ಖು ನಿಗ್ರೋಧ ಮತ್ತು ಮೊಗ್ಗಲಿಪುತ್ತರೊಂದಿಗೆ ಸಂವಾದ ನಡೆಸಿ ಅವರ ಮಾಗ೯ದಶ೯ನದಲ್ಲಿ ಅಶ್ವಿನ್ ತಿಂಗಳ ಶುಕ್ಲ ಪಕ್ಷದ ಹತ್ತನೇ ದಿನದಂದು ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದನು. ಅಂದಿನಿಂದ ಪ್ರತಿವರ್ಷ 'ಧಮ್ಮ ವಿಜಯ ದಶಮಿ ದಿನ' ಎಂದು ಅಶೋಕನಿಂದ ಹಿಡಿದು ಇಡೀ ಮಗಧನ ಎಲ್ಲಾ ಮೌರ್ಯ ಚಕ್ರವರ್ತಿಗಳು ಆಚರಿಸಲು ಆರಂಭಿಸಿದರು. ಬೌದ್ಧ ಧರ್ಮವನ್ನು ಸ್ವಿಕಾರ ಮಾಡಿದ ನಂತರ, ಅಶೋಕನು ಈ ರೀತಿ ಘೋಷಣೆ ಮಾಡಿದನು.
1.ನಾನು ಇನ್ನು ಮುಂದೆ ಯುದ್ಧ ಮಾಡುವುದಿಲ್ಲ
2. "ಯುದ್ಧ-ಭೇರಿ" (ಭೇರಿ ಘೋಷ್) ಬದಲಿಗೆ "ಧಮ್ಮ-ಭೇರಿ" (ಧಮ್ಮ ಘೋಷ) ಅನ್ನು ಅಳವಡಿಸಿಕೊಂಡನು.
3. ತಥಾಗತನ ಬೌದ್ಧ ಧಮ್ಮ ಮತ್ತು "ಬಹುಜನ ಹಿತಾಯ- ಬಹುಜನ್ ಸುಖಾಯ್" ಗಳನ್ನು ತನ್ನ ಅಧಿಕೃತ ಧರ್ಮವೆಂದು ಘೋಷಿಸಿದನು.
4.ಎಲ್ಲಾ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದನು ಮತ್ತು ಗಾಯಗೊಂಡವರಿಗೆ ವೈದ್ಯಕೀಯ ಸೇವೆ ಒದಗಿಸಲು ಆದೇಶಿಸಿದರು.
5.ಇಂದಿನಿಂದ ನನ್ನ ಸಾಮ್ರಾಜ್ಯದಲ್ಲಿ ನೆಲೆಸಿರುವ ಎಲ್ಲ ಜನರು ನನ್ನ ಮಕ್ಕಳು ಮತ್ತು ಅವರ ಕಲ್ಯಣಕ್ಕಾಗಿ ಹಗಲಿರುಳು ಪ್ರಯತ್ನಿಸುವುದಾಗಿ ಆತ ಘೋಷಿಸಿದ್ದ.

ಅಶೋಕ್ ತನ್ನ ರಾಜ್ಯ ಧರ್ಮ ಮತ್ತು ಆಡಳಿತ ನೀತಿಗಳನ್ನು ಸುಮಾರು 20 ಸಣ್ಣ ಮತ್ತು ದೊಡ್ಡ ಸ್ತಂಭ ಶಾಸನಗಳಲ್ಲಿ ಬರೆದು ಇಡೀ ಸಾಮ್ರಾಜ್ಯದಲ್ಲಿ ಹೂತಿಟ್ಟನು. ಬೌದ್ಧ ಧರ್ಮದ ಸಂಪೂರ್ಣ ಸಾರವನ್ನು ಓದಿದ ಅಶೋಕನು ತಮ್ಮ ಎರಡನೇ ಶಾಸನದಲ್ಲಿ ಧಮ್ಮ (ಧರ್ಮ) ಎಂದರೇನು? ಎಂದು ವಿವರಿಸುವಾಗ ಅಶೋಕನು ಈ ರೀತಿ ಹೇಳುತ್ತಾನೆ - "ತಪ್ಪು ಕೆಲಸಗಳನ್ನು ಮಾಡದಿರುವುದು, ಗರಿಷ್ಠ ಒಳ್ಳೆಯ ಕಾರ್ಯಗಳನ್ನು ಮಾಡುವುದು, ಎಲ್ಲಾ ಜೀವಿಗಳನ್ನು ದಯೆ, ಸಹಾನುಭೂತಿ ಮತ್ತು ಪ್ರೀತಿಯಿಂದ ನೋಡಿಕೊಳ್ಳುವುದು, ಸತ್ಯಕ್ಕೆ ಬದ್ಧವಾಗಿರುವುದು ಮತ್ತು ಶುದ್ಧತೆಯನ್ನು ಅನುಸರಿಸುವುದೇ ಧಮ್ಮ ಅಥವಾ ಧರ್ಮ." ಎಂದು ಅಶೋಕ್ ವಿವರಿಸುತ್ತಾನೆ.

ಧಮ್ಮದ ಬಗ್ಗೆ ಇನ್ನೂ ಮುಂದೆ ಹೇಳುತ್ತಾ- "ಪ್ರಾಣಿ-ಪಕ್ಷಿಗಳ ಹತ್ಯ ಮಾಡಬಾರದು, ಬೌದ್ಧ ಸನ್ಯಾಸಿಗಳ ಸೇವೆ ಮಾಡುವುದು, ತಂದೆ ತಾಯಿಗಳ ಸೇವೆ ಮಾಡುವುದು ಮತ್ತು ಗೌರವಿಸುವುದು, ಶಿಕ್ಷಕರನ್ನು ಗೌರವಿಸುವುದು, ಸ್ನೇಹಿತರು, ಸಂಬಂಧಿಕರು ಮತ್ತು ಶ್ರಮಣರನ್ನು ಗೌರವಿಸುವುದು, ಗುಲಾಮರು ಮತ್ತು ಸೇವಕರೊಂದಿಗೆ ಸರಿಯಾಗಿ ವರ್ತಿಸುವುದು ಮತ್ತು ಸ್ವಲ್ಪ ಹಣವನ್ನು ಖರ್ಚು ಮಾಡುವುದು. ಇತ್ಯಾದಿ ಧಮ್ಮ (ಧಾರ್ಮಿಕ) ನಡವಳಿಕೆಗಳ ಬಗ್ಗೆ ಹೇಳುತ್ತಾರೆ.

ಅಶೋಕ ರಾಜ ಬಹುಜನ 'ಹಿತಾಯ ಬಹುಜನ ಸುಖಾಯ' ವನ್ನು ತನ್ನ ಜೀವನ ಮತ್ತು ಆಡಳಿತದ ಗುರಿಯನ್ನಾಗಿಸುವ ಕೆಲಸ ಮಾಡಿದನು. ತನ್ನ ಏಳನೆಯ ಶಾಸನದಲ್ಲಿ - "ನನ್ನ ರಾಜ್ಯ ಸೇರಿದಂತೆ ಎಲ್ಲಾ ನೆರೆಹೊರೆಯ ದೇಶಗಳಲ್ಲಿ ನಾನು ರಸ್ತೆಯ ಪಕ್ಕದಲ್ಲಿ ಆಲದ ಮರಗಳನ್ನು ನೆಟ್ಟಿದ್ದೇನೆ. ಎಲ್ಲ ಮನುಷ್ಯರು ಮತ್ತು ಪ್ರಾಣಿಗಳು ಆ ಮರಗಳಿಂದ ನೆರಳು ಪಡೆಯುತ್ತಿವೆ. ಬಾವಿಗಳನ್ನು  ನಿಮಿ೯ಸಿದೆನೆ, ಪ್ರಯಾಣಿಕರಿಗಾಗಿ ವಿಶ್ರಾಂತಿ ಕೊಣೆಗಳನ್ನು ನಿರ್ಮಿಸಿದ್ದೇನೆ. ಹಾಗೂ ಆಸ್ಪತ್ರೆಗಳು ಮತ್ತು ಔಷಧಿಗಳ ವ್ಯವಸ್ಥೆ ಮಾಡಿದ್ದೇನೆ ಎಂದು ಹೇಳುತ್ತಾನೆ.

ಅಶೋಕ 84 ಸಾವಿರ ಚೈತ್ಯಗಳು, ಸ್ತೂಪಗಳು, ಬೌದ್ಧ ವಿಹಾರಗಳು ಮತ್ತು ಬೌದ್ಧ ಸ್ಥಳಗಳನ್ನು ನಿರ್ಮಿಸಿದನು. ಮತ್ತು ಕ್ರಿಸ್ತಪೂರ್ವ 258 ರಲ್ಲಿ ತನ್ನ ರಾಜ್ಯದ್ಯಂತ ರಾಜ್ಯೋತ್ಸವದ ಅಂಗವಾಗಿ ದೀಪಗಳನ್ನು ಹಚ್ಚಿ ದೀಪೋತ್ಸವವನ್ನು ಆಚರಿಸಿದನು. ಅಂದಿನಿಂದ ಈ ದೀಪಗಳ ಹಬ್ಬವನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ.

ಮಹಾನ್ ಚಕ್ರವರ್ತಿ ಅಶೋಕನು ಭಾರತದಲ್ಲಿ ಸಮಾನತೆ ಮತ್ತು ಸಹೋದರತ್ವವನ್ನು ಆಧರಿಸಿದ ಸಾರ್ವಜನಿಕ ಕಲ್ಯಾಣ ರಾಜ್ಯ ವ್ಯವಸ್ಥೆಯ ಅಡಿಪಾಯವನ್ನು ಹಾಕಿದ್ದನ್ನು ನಾವು ನೋಡುತ್ತೇವೆ. ಬುದ್ಧನ ವಿಚಾರಗಳನ್ನು ಪ್ರಚಾರ ಮಾಡಲು ತನ್ನ ಮಗ ಮಹೇಂದ್ರ ಮತ್ತು ಮಗಳು ಸಂಘಮಿತ್ರರನ್ನು ಶ್ರಿಲಂಕಾ ಮತ್ತು ಚೀನಾಕ್ಕೆ ಕಳುಹಿಸುವ ಮೂಲಕ ಬೌದ್ಧ ಧರ್ಮವನ್ನು ಹರಡುವ ಪ್ರಮುಖ ಐತಿಹಾಸಿಕ ಕೆಲಸವನ್ನು ಅಶೋಕ ಮಾಡಿದನು. ಬೌದ್ಧ ಭಿಕ್ಖುಗಳನ್ನು ಬರ್ಮಾ, ಟಿಬೆಟ್, ಜಪಾನ್ ಸೇರಿದಂತೆ ಹಲವು ದೇಶಗಳಿಗೆ ಪ್ರಚಾರ ಮಾಡಲು ಕಳುಹಿಸಿದ.ಅಶೋಕನ ಈ ಪ್ರಯತ್ನದಿಂದಾಗಿ ಜಗತ್ತಿಗೆ ಭಾರತವು 'ವಿಶ್ವಗುರು' ಆಗಲು ಸಾಧ್ಯವಾಯಿತು.

ಆದರೆ ಕ್ರಿಸ್ತಪೂರ್ವ 185 ರಲ್ಲಿ ಕೊನೆಯ ಮೌರ್ಯ ಚಕ್ರವರ್ತಿ ಬೃಹದೃತ್ತನನ್ನು ಬ್ರಾಹ್ಮಣ ಸೇನಾಧಿಪತಿಯಾದ ಪುಷ್ಯಮಿತ್ರ ಶುಂಗ ಹತ್ಯೆಗೈದು ಮೌರ್ಯ ಸಾಮ್ರಾಜ್ಯವನ್ನುಮುಗಿಸಿದನು. ಇತಿಹಾಸದಲ್ಲಿ ಈ ಘಟನೆ ಬೌದ್ಧ ಧಮ೯ ನಶಿಸಲು ಒಂದು ಕಾರಣವಾಯಿತು. ಪುಶ್ಯಮಿತ್ರ ಶುಂಗನು ಮಗಧ ರಾಜ್ಯವನ್ನು ವಶಪಡಿಸಿಕೊಂಡು ಶುಂಗ ಮನೆತನ ಸ್ಥಾಪಿಸಿದನು. ಆನಂತರ ಆತನು ಲಕ್ಷಾಂತರ ಬೌದ್ಧ ಭಿಕ್ಖುಗಳ ಹತ್ಯೆ ಮಾಡಿದನು. ಚಕ್ರವರ್ತಿ ಅಶೋಕ ನಿರ್ಮಿಸಿದ 84 ಸಾವಿರ ಬೌದ್ಧ ವಿಹಾರಗಳು ಮತ್ತು ಸ್ತೂಪಗಳನ್ನು ನಾಶಮಾಡಿದನು. ನಂತರ ಬ್ರಾಹ್ಮಣ ಪುರೋಹಿತರು ಕ್ರಿ.ಶ. 300 ರಿಂದ 1200 ರವರೆಗಿನ ಅವಧಿಯಲ್ಲಿ  ಧಮ್ಮ ವಿಜಯ ದಶಮಿಯನ್ನು ರಾಮ-ರಾವಣ ಯುದ್ಧ ಮತ್ತು ದುರ್ಗಾ-ಮಹಿಷಾಸುರ ಯುದ್ಧಗಳೆಂದು ಬರೆದು ಪ್ರಚಾರ ಮಾಡಿದರು. ಹಿಗೆ ಮುಂದೆ ಇದು  'ಬಹುಜನ ಹಿತಾಯ ಬಹುಜನ ಸುಖಾಯ' ಹೋಗಿ 'ಬಹುಜನ್ ಅಹಿತಾಯ್ ಮತ್ತು ಬಹುಜನ್ ದುಃಖಾಯ್' ಆಯಿತು.

ಆದ್ದರಿಂದ, ಬಾಬಾಸಾಹೇಬ್ ಡಾ.ಅಂಬೇಡ್ಕರ್, ಭಾರತದ ಸಂವಿಧಾನದ ಅನುರೂಪ ಒಂದು ಸಮತಾವಾದಿ-ಪ್ರಜಾಪ್ರಭುತ್ವ ಭಾರತದ ಸೃಷ್ಟಿಗಾಗಿ ಮತ್ತು ಭಾರತೀಯ ಬಹುಜನ ಸಮಾಜದ ಅಭಿವೃದ್ಧಿ ಮತ್ತು ಪ್ರಗತಿಗಾಗಿ ವಿಜಯ ದಶಮಿಯ ದಿನ (ಅಕ್ಟೋಬರ್ 14, 1956)  ನಾಗವಂಶಿಗಳ ನಾಡು ನಾಗಪುರದಲ್ಲಿ 5 ಲಕ್ಷ ಜನರ ಸಮ್ಮುಖದಲ್ಲಿ ಅವರು ಬೌದ್ಧಧರ್ಮವನ್ನು ಸ್ವಿಕಾರ ಮಾಡುವ ಮೂಲಕ ಬ್ರಾಹ್ಮಣ ವ್ಯವಸ್ಥೆಯ ಮೇಲೆ ದಾಳಿ ಮಾಡಿದರು ಮತ್ತು ಅವರು ಬೌದ್ಧ ಧಮ್ಮ ಚಕ್ರಕ್ಕೆ ಅಗ್ರಗತಿಯನ್ನು ನಿಡಿದರು. ಅಂದಿನಿಂದ ಈ ಧಾರ್ಮಿಕ-ಸಾಂಸ್ಕೃತಿಕ ಅಭಿಯಾನವು ನಿರಂತರವಾಗಿ ನಡೆಯುತ್ತಿದೆ ಮತ್ತು ನಡೆಯುತ್ತದೆ.
 ✍️ ನಂದಾದೀಪ ಬೋರಳೆ
 #BAMCEF
 #Buddhist international Network.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನಮ್ಮ ಕೃಷಿ - ನಮಗೆ ಖುಷಿ (ಗದ್ಯ ಕವಿತೆ) - ಶಾಂತಾರಾಮ ಶಿರಸಿ, ಉತ್ತರ ಕನ್ನಡ.

ಭೂಮಿಗೆ ತುಂತುರು ಮಳೆ ಹನಿಯ ನೀರಾವರಿ, 
ಮಳೆಗಾಲ ಶುರುವಾಯಿತೆಂಬುದು ಖಾತರಿ, 
ರೈತನ ಮುಖದಲ್ಲಿ ನಗುವನ್ನು ಕಾಣಿರಿ,
ಹೋಯ್ಯ್ ಗದ್ದೆ ಕೆಲಸ ಶುರು ಮಾಡುವ ಬರ್ರೀ.... 

ಮಳೆಗಾಲದ ಮೊದಲು/ಕೆಲ ದಿನಗಳ ನಂತರ ನಮ್ಕಡೆ ಗೊಬ್ರದ್ ಕಂಬ್ಳ,
ಗದ್ದೆಗೆ ಹಟ್ಟಿ ಗೊಬ್ರ ಹಾಕುವಾಗ ಬರುವ ಆಳುಗಳಿಗೆ ಕೊಡುದಿಲ್ಲ ಸಂಬಳ, 
ಯಾಕಂದ್ರೇ ಮುರಿ ಆಳು ಪದ್ದತಿಯೇ ಹಳ್ಳಿ ಸೊಗಡಿನ ಜೀವಾಳ
ಈ ಪದ್ದತಿ ನಮ್ಮ ಹಳ್ಳೀಲಿ ಈಗಲೂ ಹಲವರಿಗೆ ಆಧಾರವಾಗಿರುವ ಹವಳ, 
ಹೋಯ್ಯ್ ಯಂತಾ-ತಕಬರ್ರೀ ಮಾರಾಯ್ರೇ ಒಂದ್ ಕವ್ಳ್..(ತಾಂಬೂಲ, ಎಲೆ-ಅಡಿಕೆ-ಸುಣ್ಣ-ತಂಬಾಕು) 

ನೇಗಿಲು ಹಿಡಿದು ಹೂಡುವಾಗ ಹಾಡನು ಹಾಡುವ ಆತನ ಧ್ವನಿ ಕೇಳಿಸುವುದು ನಮಗೆ ಸ್ಪಷ್ಟ,
ಗದ್ದೆಗಳ ಹಾಕೆ(ಮೊದಲು ಗದ್ದೆ ಹೂಡುವುದು) ತೆಗೆಯುವಿಕೆಯಲ್ಲಿ ರೈತನಿಗೆ ಬಲಗೈಯ್ಯಂತಿರುವ ರಗಡ್ ಎತ್ತುಗಳು-ಜಬ್ಬರದಸ್ತ್ ಕೋಣಗಳು ತುಂಬಾ ಬಲಿಷ್ಠ, 
ಅದರ ಜೊತೆಯಿರುವ ಸಾಂಪ್ರದಾಯಿಕ ನೇಗಿಲು -ನೊಗ,ರಂಟೆ-ಕುಂಟೆಗಳು ಇಂದಿಗೂ ಕಾಣುತ್ತಿರುವುದು ನಮ್ಮ ಅದೃಷ್ಟ, 
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವೂ ಜೊತೆಯಾಗಿ ಪವರ್ ಟಿಲ್ಲರ್ ಗಳು -ಟ್ಯಾಕ್ಟರ್ ಗಳು, ಇನ್ನೂ ಅನೇಕ ತುಂಬಾ ಫಾಸ್ಟಾಗಿ-ಅಳತೆ ಮೀರಿದ ವೇಗದ ಮಟ್ಟ.. 
ಗದ್ದೆಗಳ ಹದಮಾಡುವಲ್ಲಿ ಇವುಗಳೆಲ್ಲವೂ ರೈತನ ಜೊತೆ ನಿಲ್ಲುವ ಬಲಗೈ ಬಂಟ.
ಗದ್ದೆಯ ಹಾಳಿಯ ತೆಗೆಯುವಲ್ಲಿ ಆಳು-ಕಾಳುಗಳ ಜೋರು ಮಾತುಕತೆಯ ಆರ್ಭಟ.. 

ಜೂನ್ ಮಾಹೆಯಲ್ಲಿ ಮೊಳಕೆ ಬಂದಿರುವ ಬೀಜದ ಬಿತ್ತನೆ, 
ನಂತರ ೩೦ ರಿಂದ ೪೫ ದಿನಗಳೊಳಗೆ ಬೆಳೆದಿರುವ ಭತ್ತದ ಅಗೆಯ ಸಸಿ ಕೀಳುವಿಕೆಯಲ್ಲಿ ಊರಿನ ಹೆಣ್ಣಾಳುಗಳ ಅವಲಂಬನೆ,
ಕಿತ್ತ ಅಗೆಯನ ಸಸಿಯನ್ನು ಹೂಡಿ-ರಂಟೆ-ಕುಂಟೆಯಿಂದ ಹದಮಾಡಿದ ಅರ್ಲು ಗದ್ದೆಯಲ್ಲಿ ಅಗೆಯ ಸಸಿಯ  ನೆಡುವಲ್ಲಿನ ಕಾರ್ಯಸಾಧನೆ, 
ನಂತರ ಹುಲ್ಕಿ( ಗದ್ದೆ ಕೆಲಸದ ಕೊನೆಯ ದಿನ) ಎಂದು ನಮ್ಮಲ್ಲಿ ಕರೆಯಲ್ಪಡುವ ಗದ್ದೆ ನಾಟಿಯ ಕೆಲಸ ಮುಗಿದ  ದಿನ ಸಿಹಿಯ ಪದಾರ್ಥ ಮಾಡಿ ಎಲ್ಲಾ ಆಳಿಗೂ ವಿತರಣೆ - ಆಹಾ! ಎಲ್ಲರಲ್ಲೂ ಖುಷಿಯ ಭಾವನೆ- ಬೇಕಾದವರಿಗೆ ನೀಡುವೆವು ಸಂಭಾವನೆ, ಕೆಲವರದಂತೂ  ಮುರಿಯಾಳು ಬಂದು ಕೊಡ್ರೀ ಅನ್ನೋ ಸೂಚನೆ..

ನಂತರ ಕೆಲವು ದಿನಗಳಲ್ಲಿ ಗದ್ದೆಯ ಕಳೆ ತೆಗೆಯುವಿಕೆ, 
ರಸಗೊಬ್ಬರ-ಔಷಧಿಗಳ ಸಿಂಪಡಿಸುವಿಕೆ, 
ಭೂಮಿ ಹುಣ್ಣಿಮೆಯ ದಿನ  ಗದ್ದೆ ಸಸಿಯ ಬುಡಕ್ಕೆ ಜೊತೆಗೆ ಭತ್ತದ ಕದ್ರಿಗೆ ಆರಾಧಿಸಿ- ಪೂಜಿಸುವಿಕೆ,
ಈ ಭೂಮಿ ತಾಯಿಗೆ ನಮಿಸುವಿಕೆ..

ಸುಮಾರು ಮೂರ್ನಾಲ್ಕು ತಿಂಗಳಲ್ಲಿ ಭತ್ತದ ತೆನೆಯ ಪೈರು ಬೀಸುವ ಗಾಳಿಗೆ ಹಾಗೇ ತಲೆದೂಗುವದನ್ನು ನೋಡುವುದೇ ಕಣ್ಗಳಿಗಾನಂದ,
ಈಗ ಗದ್ದೆಯ ಕಟಾವಿನ ದಿನದ ಆಗಮನ ಮತ್ತೇ ಆಳುಗಳ ಜೊತೆ ಅವಿನಾಭಾವ ಸಂಬಂಧ, 
ಕೊಯ್ದಾದ ಒಂದೆರಡು ದಿನದ ನಂತರ ಪೈರಿನ ಹೊರೆಯ ಕಟ್ಟಿ 
ಗೊಣಬೆಯ ಕಣಕ್ಕೆ ತಲೆಯ ಮೇಲೆ ಸಾಗಾಟ ಮಾಡುವುದೇ ಒಂಥರಾ ಸಂಚಲನ..

ನಂತರ ಪೈರನ್ನು ಗೊಣಬೆ ಹಾಕುವುದೇ ಅಥವಾ ಹಾಗೇ ಸೆಳೆಯುವುದೋ,ಒಕ್ಕುವುದೋ ಅವರವರ ಇಷ್ಟ, 
ನಂತರ ಒಟ್ಟಾದ ಭತ್ತವ ತೂರುವಿಕೆಯು ಗಾಳಿಯ ಜೊತೆಗೆ ಆಡುವ ಆಟ, 
ಟ್ರಾಕ್ಟರ್/ಟಿಲ್ಲರ್ ನ ಗಾಳಿಯ ಪಂಕಗಳೂ ಈಗ ನೀಡುತ್ತಿವೇ ಭತ್ತ ತೂರುವಿಕೆಗೆ ಸಾಥ್-ಇದು ತಂತ್ರಜ್ಞಾನದ ಕೊಡುಗೆ ಬಹಳ ಇಷ್ಚ. 

ಭತ್ತವನ್ನು ಪೂಜಿಸಿ ಚೀಲ ತುಂಬುವುದು/ಭತ್ತದ ಕಣಜಕ್ಕೆ ತುಂಬುವುದು-ದಾಸ್ತಾನು ಮಾಡುವುದು,
ಭತ್ತ ಕುಟ್ಟಿ ಅಕ್ಕಿ ಮಾಡುವ ವಿಧಾನ ಮರೆಯಾಗಿ ಕಾಣಸಿಗದು,
ಅಗತ್ಯವಾದಾಗ, ಅವಶ್ಯಕತೆಯಿದ್ದಾಗ ರೈಸ್ ಮಿಲ್ಲಿಗೆ ಸಾಗಿಸಿ ಅಕ್ಕಿ ಮಾಡಿಕೊಂಡು ನಮಗೆ ಬೇಕಾದಷ್ಟು ತರುವುದು ಮತ್ತು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು.

ಮನೆಗೆ ಅಕ್ಕಿಯ ಆಗಮನ, 
ಪ್ರತೀವರ್ಷ ಹೊಸಪೈರಿನ ಅಕ್ಕಿಯನ್ನು ಪೂಜಿಸುವ ಹೊಸಕ್ಕಿ ಹಬ್ಬವನ್ನು ಆಚರಿಸುವುದು ಅಕ್ಕಿಯ ಅನ್ನಜೊತೆಗೆ  ಅನ್ನದ ಸಿಹಿ ಪಾಯಸ ಮಾಡಿ ಭೂ ತಾಯಿಗೆ ದೇವರಿಗೆ ಅರ್ಪಿಸಿ ಸಲ್ಲಿಸುವೆವು ನಮನ.

ಇದರ ಹಿಂದೆ ರೈತನ ಬೆವರಿನ ಶ್ರಮ ಅಪಾರ, 
ಅನ್ನವನು ನೀಡಿ ಹಸಿವು ನೀಗಿಸುವ ಸರದಾರ, 
ತಂತ್ರಜ್ಞಾನವೂ ಸಹ ಕ್ರಮೇಣ ನೀಡುತ್ತಿವೆ ಆಧಾರ, ರೈತನಿಗೆ ನಮಿಸುತಿರು ನಿರಂತರ... 

"ಅನ್ನೋ ಪ್ರಾಣ:
ಪ್ರಾಣತೋ ಪರಬ್ರಹ್ಮ"||
"ಅನ್ನದಾತೋ-ಸುಖೀಭವ" ನಿತ್ಯ-ಸತ್ಯ ಸಾರ.
- ಶಾಂತಾರಾಮ ಶಿರಸಿ, 
ಉತ್ತರ ಕನ್ನಡ.
8762110543
7676106237.

ಸಾಧನೆಯ ಹಾದಿಯಲ್ಲಿ (ಕವಿತೆ) - ಸಂಧ್ಯಾ ಭಟ್ ಶಿರಸಿ.

ಸದ್ದಿಲ್ಲದೆ ನಡೆದಿದೆ ಸಾಧನೆಗಾಗಿ 
 ಈ ಒಂದು ಕಾಯಕ
 ಬಿಡದೆ ಸಾಗಬೇಕು ಪ್ರತಿಕ್ಷಣ
 ಏರುಪೇರುಗಳ ದಾಟಿದ ಜೀವನ
 ನಿಲ್ಲದೆ ಮಾಡು ನಿನ್ನ ಯಾನ
 ಅಳುಕದೆ ಅಂಜದೆ ಮುನ್ನಡೆಯಬೇಕು ಇಲ್ಲಿ
 ಸಹನೆ ತಾಳ್ಮೆ ಇರಬೇಕು ಸದಾ ನಿನ್ನಲ್ಲಿ
 ನಿನ್ನ ಕಾರ್ಯ ಉತ್ತಮವಾಗಿರಬೇಕು ಎಂದು ಸದಾ ಹೇಳಿಕೊ ನಿನ್ನಲ್ಲಿ
 ಶ್ರಮಿಸಬೇಕು ನಿರಂತರ ನೀ ಇಲ್ಲಿ
 ಧೈರ್ಯದಿಂದಲೇ ಮುನ್ನಡೆ ಮುನ್ನಡೆ ನೀ ಇಲ್ಲ
 ನಿನ್ನ ಮೇಲಿನ ನಂಬಿಕೆಯಲ್ಲಿ
 ಸದಾ ನೀ ಮುಂದೆ ಸಾಗು ಜ್ಞಾನದ ಅನ್ವೇಷಣೆಯಲ್ಲಿ
  ಹಿಂದೆಳೆಯುವ ಕೈ ಸಾವಿರಾರು
 ಸಕಾರಾತ್ಮಕವಾಗಿ ನೀ ಎಂದಿಗೂ ಇರು
  ಅನಿವಾರ್ಯವೆಂದಾಗ  ಬಂದವನು ಬಿಡು
 ಸಾಧನೆಗಾಗಿ ನಿನ್ನ ಸಮಯ ಇಡು 
 ಸಾಧಿಸಿದಾಗ ಬರುವುದು ಬೆಳದಿಂಗಳು ನೋಡು
- ಸಂಧ್ಯಾ ಭಟ್ ಶಿರಸಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...