ಭೂಮಿಗೆ ತುಂತುರು ಮಳೆ ಹನಿಯ ನೀರಾವರಿ,
ಮಳೆಗಾಲ ಶುರುವಾಯಿತೆಂಬುದು ಖಾತರಿ,
ರೈತನ ಮುಖದಲ್ಲಿ ನಗುವನ್ನು ಕಾಣಿರಿ,
ಹೋಯ್ಯ್ ಗದ್ದೆ ಕೆಲಸ ಶುರು ಮಾಡುವ ಬರ್ರೀ....
ಮಳೆಗಾಲದ ಮೊದಲು/ಕೆಲ ದಿನಗಳ ನಂತರ ನಮ್ಕಡೆ ಗೊಬ್ರದ್ ಕಂಬ್ಳ,
ಗದ್ದೆಗೆ ಹಟ್ಟಿ ಗೊಬ್ರ ಹಾಕುವಾಗ ಬರುವ ಆಳುಗಳಿಗೆ ಕೊಡುದಿಲ್ಲ ಸಂಬಳ,
ಯಾಕಂದ್ರೇ ಮುರಿ ಆಳು ಪದ್ದತಿಯೇ ಹಳ್ಳಿ ಸೊಗಡಿನ ಜೀವಾಳ
ಈ ಪದ್ದತಿ ನಮ್ಮ ಹಳ್ಳೀಲಿ ಈಗಲೂ ಹಲವರಿಗೆ ಆಧಾರವಾಗಿರುವ ಹವಳ,
ಹೋಯ್ಯ್ ಯಂತಾ-ತಕಬರ್ರೀ ಮಾರಾಯ್ರೇ ಒಂದ್ ಕವ್ಳ್..(ತಾಂಬೂಲ, ಎಲೆ-ಅಡಿಕೆ-ಸುಣ್ಣ-ತಂಬಾಕು)
ನೇಗಿಲು ಹಿಡಿದು ಹೂಡುವಾಗ ಹಾಡನು ಹಾಡುವ ಆತನ ಧ್ವನಿ ಕೇಳಿಸುವುದು ನಮಗೆ ಸ್ಪಷ್ಟ,
ಗದ್ದೆಗಳ ಹಾಕೆ(ಮೊದಲು ಗದ್ದೆ ಹೂಡುವುದು) ತೆಗೆಯುವಿಕೆಯಲ್ಲಿ ರೈತನಿಗೆ ಬಲಗೈಯ್ಯಂತಿರುವ ರಗಡ್ ಎತ್ತುಗಳು-ಜಬ್ಬರದಸ್ತ್ ಕೋಣಗಳು ತುಂಬಾ ಬಲಿಷ್ಠ,
ಅದರ ಜೊತೆಯಿರುವ ಸಾಂಪ್ರದಾಯಿಕ ನೇಗಿಲು -ನೊಗ,ರಂಟೆ-ಕುಂಟೆಗಳು ಇಂದಿಗೂ ಕಾಣುತ್ತಿರುವುದು ನಮ್ಮ ಅದೃಷ್ಟ,
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವೂ ಜೊತೆಯಾಗಿ ಪವರ್ ಟಿಲ್ಲರ್ ಗಳು -ಟ್ಯಾಕ್ಟರ್ ಗಳು, ಇನ್ನೂ ಅನೇಕ ತುಂಬಾ ಫಾಸ್ಟಾಗಿ-ಅಳತೆ ಮೀರಿದ ವೇಗದ ಮಟ್ಟ..
ಗದ್ದೆಗಳ ಹದಮಾಡುವಲ್ಲಿ ಇವುಗಳೆಲ್ಲವೂ ರೈತನ ಜೊತೆ ನಿಲ್ಲುವ ಬಲಗೈ ಬಂಟ.
ಗದ್ದೆಯ ಹಾಳಿಯ ತೆಗೆಯುವಲ್ಲಿ ಆಳು-ಕಾಳುಗಳ ಜೋರು ಮಾತುಕತೆಯ ಆರ್ಭಟ..
ಜೂನ್ ಮಾಹೆಯಲ್ಲಿ ಮೊಳಕೆ ಬಂದಿರುವ ಬೀಜದ ಬಿತ್ತನೆ,
ನಂತರ ೩೦ ರಿಂದ ೪೫ ದಿನಗಳೊಳಗೆ ಬೆಳೆದಿರುವ ಭತ್ತದ ಅಗೆಯ ಸಸಿ ಕೀಳುವಿಕೆಯಲ್ಲಿ ಊರಿನ ಹೆಣ್ಣಾಳುಗಳ ಅವಲಂಬನೆ,
ಕಿತ್ತ ಅಗೆಯನ ಸಸಿಯನ್ನು ಹೂಡಿ-ರಂಟೆ-ಕುಂಟೆಯಿಂದ ಹದಮಾಡಿದ ಅರ್ಲು ಗದ್ದೆಯಲ್ಲಿ ಅಗೆಯ ಸಸಿಯ ನೆಡುವಲ್ಲಿನ ಕಾರ್ಯಸಾಧನೆ,
ನಂತರ ಹುಲ್ಕಿ( ಗದ್ದೆ ಕೆಲಸದ ಕೊನೆಯ ದಿನ) ಎಂದು ನಮ್ಮಲ್ಲಿ ಕರೆಯಲ್ಪಡುವ ಗದ್ದೆ ನಾಟಿಯ ಕೆಲಸ ಮುಗಿದ ದಿನ ಸಿಹಿಯ ಪದಾರ್ಥ ಮಾಡಿ ಎಲ್ಲಾ ಆಳಿಗೂ ವಿತರಣೆ - ಆಹಾ! ಎಲ್ಲರಲ್ಲೂ ಖುಷಿಯ ಭಾವನೆ- ಬೇಕಾದವರಿಗೆ ನೀಡುವೆವು ಸಂಭಾವನೆ, ಕೆಲವರದಂತೂ ಮುರಿಯಾಳು ಬಂದು ಕೊಡ್ರೀ ಅನ್ನೋ ಸೂಚನೆ..
ನಂತರ ಕೆಲವು ದಿನಗಳಲ್ಲಿ ಗದ್ದೆಯ ಕಳೆ ತೆಗೆಯುವಿಕೆ,
ರಸಗೊಬ್ಬರ-ಔಷಧಿಗಳ ಸಿಂಪಡಿಸುವಿಕೆ,
ಭೂಮಿ ಹುಣ್ಣಿಮೆಯ ದಿನ ಗದ್ದೆ ಸಸಿಯ ಬುಡಕ್ಕೆ ಜೊತೆಗೆ ಭತ್ತದ ಕದ್ರಿಗೆ ಆರಾಧಿಸಿ- ಪೂಜಿಸುವಿಕೆ,
ಈ ಭೂಮಿ ತಾಯಿಗೆ ನಮಿಸುವಿಕೆ..
ಸುಮಾರು ಮೂರ್ನಾಲ್ಕು ತಿಂಗಳಲ್ಲಿ ಭತ್ತದ ತೆನೆಯ ಪೈರು ಬೀಸುವ ಗಾಳಿಗೆ ಹಾಗೇ ತಲೆದೂಗುವದನ್ನು ನೋಡುವುದೇ ಕಣ್ಗಳಿಗಾನಂದ,
ಈಗ ಗದ್ದೆಯ ಕಟಾವಿನ ದಿನದ ಆಗಮನ ಮತ್ತೇ ಆಳುಗಳ ಜೊತೆ ಅವಿನಾಭಾವ ಸಂಬಂಧ,
ಕೊಯ್ದಾದ ಒಂದೆರಡು ದಿನದ ನಂತರ ಪೈರಿನ ಹೊರೆಯ ಕಟ್ಟಿ
ಗೊಣಬೆಯ ಕಣಕ್ಕೆ ತಲೆಯ ಮೇಲೆ ಸಾಗಾಟ ಮಾಡುವುದೇ ಒಂಥರಾ ಸಂಚಲನ..
ನಂತರ ಪೈರನ್ನು ಗೊಣಬೆ ಹಾಕುವುದೇ ಅಥವಾ ಹಾಗೇ ಸೆಳೆಯುವುದೋ,ಒಕ್ಕುವುದೋ ಅವರವರ ಇಷ್ಟ,
ನಂತರ ಒಟ್ಟಾದ ಭತ್ತವ ತೂರುವಿಕೆಯು ಗಾಳಿಯ ಜೊತೆಗೆ ಆಡುವ ಆಟ,
ಟ್ರಾಕ್ಟರ್/ಟಿಲ್ಲರ್ ನ ಗಾಳಿಯ ಪಂಕಗಳೂ ಈಗ ನೀಡುತ್ತಿವೇ ಭತ್ತ ತೂರುವಿಕೆಗೆ ಸಾಥ್-ಇದು ತಂತ್ರಜ್ಞಾನದ ಕೊಡುಗೆ ಬಹಳ ಇಷ್ಚ.
ಭತ್ತವನ್ನು ಪೂಜಿಸಿ ಚೀಲ ತುಂಬುವುದು/ಭತ್ತದ ಕಣಜಕ್ಕೆ ತುಂಬುವುದು-ದಾಸ್ತಾನು ಮಾಡುವುದು,
ಭತ್ತ ಕುಟ್ಟಿ ಅಕ್ಕಿ ಮಾಡುವ ವಿಧಾನ ಮರೆಯಾಗಿ ಕಾಣಸಿಗದು,
ಅಗತ್ಯವಾದಾಗ, ಅವಶ್ಯಕತೆಯಿದ್ದಾಗ ರೈಸ್ ಮಿಲ್ಲಿಗೆ ಸಾಗಿಸಿ ಅಕ್ಕಿ ಮಾಡಿಕೊಂಡು ನಮಗೆ ಬೇಕಾದಷ್ಟು ತರುವುದು ಮತ್ತು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು.
ಮನೆಗೆ ಅಕ್ಕಿಯ ಆಗಮನ,
ಪ್ರತೀವರ್ಷ ಹೊಸಪೈರಿನ ಅಕ್ಕಿಯನ್ನು ಪೂಜಿಸುವ ಹೊಸಕ್ಕಿ ಹಬ್ಬವನ್ನು ಆಚರಿಸುವುದು ಅಕ್ಕಿಯ ಅನ್ನಜೊತೆಗೆ ಅನ್ನದ ಸಿಹಿ ಪಾಯಸ ಮಾಡಿ ಭೂ ತಾಯಿಗೆ ದೇವರಿಗೆ ಅರ್ಪಿಸಿ ಸಲ್ಲಿಸುವೆವು ನಮನ.
ಇದರ ಹಿಂದೆ ರೈತನ ಬೆವರಿನ ಶ್ರಮ ಅಪಾರ,
ಅನ್ನವನು ನೀಡಿ ಹಸಿವು ನೀಗಿಸುವ ಸರದಾರ,
ತಂತ್ರಜ್ಞಾನವೂ ಸಹ ಕ್ರಮೇಣ ನೀಡುತ್ತಿವೆ ಆಧಾರ, ರೈತನಿಗೆ ನಮಿಸುತಿರು ನಿರಂತರ...
"ಅನ್ನೋ ಪ್ರಾಣ:
ಪ್ರಾಣತೋ ಪರಬ್ರಹ್ಮ"||
"ಅನ್ನದಾತೋ-ಸುಖೀಭವ" ನಿತ್ಯ-ಸತ್ಯ ಸಾರ.
- ಶಾಂತಾರಾಮ ಶಿರಸಿ,
ಉತ್ತರ ಕನ್ನಡ.
8762110543
7676106237.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ