ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ಗೌರವ ಸಲಹೆಗಾರರು.
ಡಾ ನಾಗಮಣಿ ಸಿ ಎಂ ಡಾ ಗಾಯಿತ್ರಿದೇವಿ ಡಾ. ಮಾಲ ಬಿ ಎಂ.
ಡಾ ನಾ ಮುನಿರಾಜು ಡಾ ಕೈಲಾಸ್ ಎಸ್ ಡೋಣಿ ಶ್ರೀ ದಯಾನಂದ ಪಾಟೀಲ್
ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.
ವೈಚಾರಿಕ ಹಾಗೂ ಸೃಜನಶೀಲ ಬರಹಗಳು , ಕಥೆ , ಕವನ , ಚುಟುಕು ಬರಹಗಳು, ಲೇಖನ , ಚಿತ್ರಕಲೆ, ಮುಂತಾದ ನಾನಾ ಮುಖದ ಕಲೆಗಳ ಅಭಿವ್ಯಕ್ತಿಗೆ ವೇದಿಕೆ.
ವಿಚಾರ ಮಂಟಪ ಸಾಹಿತ್ಯ ಬಳಗವು ಪ್ರಾರಂಭಿಕ ಕವಿ, ವಿಮರ್ಶಕರನ್ನು ಪ್ರೋತ್ಸಾಹಿಸುವ ಹಾಗೂ ಮಾರ್ಗದರ್ಶನ ಮಾಡುವ ಸದ್ದುದ್ದೇಶದಿಂದ ಈ ಆನ್ಲೈನ್ ಪಾಕ್ಷಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದು. ಸಾಹಿತ್ಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹಾ ಅನುಕೂಲ ಆಗಬಹುದೆಂಬ ಸದಾಶಯವನ್ನು ಸಂಪಾದಕ ಮಂಡಳಿ ಹೊಂದಿದೆ.
ಪತ್ರಿಕೆ ಪ್ರತಿ ೧೫ ದಿನಕ್ಕೊಮ್ಮೆ ಪಿ ಡಿ ಎಪ್ ರೂಪದಲ್ಲಿ ಪ್ರಕಟವಾಗಲ್ಲಿದ್ದು. ಪ್ರತಿ ತಿಂಗಳ ೫ ಮತ್ತು ೨೦ ನೇ ದಿನಾಂಕಗಳಲ್ಲಿ ಓದುಗರನ್ನು ತಲುಪಲಿದೆ.
• ತಮ್ಮ ಬರಹಗಳನ್ನು ಪತ್ರಿಕೆ ಪ್ರಕಟವಾಗುವ ೮ ದಿನಗಳ ಮುಂಚಿತವಾಗಿ ಅಂದರೆ ಪ್ರತಿ ತಿಂಗಳ ೨೭ ಮತ್ತು ಮತ್ತು ೧೨ ನೇ ದಿನಾಂಕಗಳ ಒಳಗಾಗಿ ನಮಗೆ ಕಳುಹಿಸಬೇಕು.
• ತಾವು ಕಳುಹಿಸುವ ಬರಹ ತಮ್ಮ ಸ್ವಂತದೇ ಆಗಿದ್ದು, ಹಿಂದೆ ಯಾವುದೇ ಪತ್ರಿಕೆಯಲ್ಲಿ ಪ್ರಕಟವಾಗಿರಬಾರದು.
• ಬರಹಗಳು ವೈಚಾರಿಕತೆ ಹಾಗೂ ವೈಜ್ಞಾನಿಕ ದೃಷ್ಠಿಕೋನದಿಂದ ರಚಿಸಲ್ಪಟ್ಟಿರಬೇಕು.
• ಯಾವುದೇ ರೀತಿಯ ದ್ವೇಷ, ನಿಂದನೆ, ಅಪಪ್ರಚಾರ, ಹಾಗೂ ಅಶ್ಲೀಲ ಬರಹಗಳಿಗೆ ಅವಕಾಶವಿಲ್ಲ.
• ನಿಮ್ಮ ಬರಹಗಳ ಪ್ರಕಟಣೆಗೆ ಸಂಭಂಧಿಸಿ ಸಂಪಾದಕ ಮಂಡಳಿಯ ತೀರ್ಮಾನವೇ ಅಂತಿಮವಾಗಿರುತ್ತೆ.
• ನಿಮ್ಮ ಬರಹಗಳನ್ನು ನಮಗೆ ತಲುಪಿಸಬೇಕಾದ ವಾಟ್ಸಪ್ ಸಂಖ್ಯೆ : ೯೪೪೮೨೪೧೪೫೦
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವರುಣ್‌ರಾಜ್ ಜೀ
ಸಂಪಾದಕರು
ವಿಚಾರ ಮಂಟಪ ಸಾಹಿತ್ಯ ಪತ್ರಿಕೆ
ಸಂ : 9448241450
ಮಿಂಚಂಚೆ : maharishivarunrajji@gmail.com
ಕವಿತೆಗಳು
ಗಾಂಧಿ ಸತ್ಯ
ಕೈಲಿ ಕೋಲು ಬಾಯಲ್ಲಿ ರಾಮಸತ್ಯ
ಶಾಂತಿ ಮಂತ್ರ ಪಠಿಸಲು ದಿನನಿತ್ಯ
ರಾಷ್ಟ್ರದ ಸ್ವಾತಂತ್ರಕ್ಕಾಗಿ ಅನ್ನುದ ಸತ್ಯ
ದೇಶಕ್ಕಾಗಿ ದುಡಿಯುತ್ತಿದ್ದರು ಪ್ರತಿನಿತ್ಯ
ರಾಷ್ಟ್ರಮಾತೆಯ ಪುತ್ರ ಛಲಗಾರ
ಸ್ವಾತಂತ್ರ್ಯ ಚಳುವಳಿ ಹೋರಾಟಗಾರ !
ಸರಳ ನಡೆ-ನುಡಿಯ ಮಾತುಗಾರ
ಸತ್ಯಾಗ್ರಹ ಮಾಡಿದ ಸಂಘಟನಾಕಾರ !!
ಸ್ವಾತಂತ್ರ್ಯ ದೊರೆತರೂ ಪ್ರಗತಿಕಾಣದ
ಭಾರತವ ಕಂಡು ಕಂಬನಿಗೆರೆದವರು !
ಎಲ್ಲರೂ ಒಂದೇ ಎಂದು ಕುಳಿತವರು
ಪ್ರಾರ್ಥನೆಯಲ್ಲಿ ಗುಂಡೇಟು ತಿಂದವರು !!
ದಲಿತೋದ್ದಾರಕ್ಕಾಗಿ ದಿನಾಲೂ ಶ್ರಮಿಸಿದರು
ಶ್ರೀ ಜನ ಸಾಮಾನ್ಯರಿಗೆ ಉಸಿರಾದವರು
ಭವಿಷ್ಯದ ಜನತೆಗೆ ದಾರಿದೀಪವಾದವರು
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು!!
- ಮಂಜುನಾಥ ಮಾಡ್ಲಿಗೇರಿ ಶಿಕ್ಷಕರು ಸಿಂಧನೂರು.
ವಿಶ್ವ ಮಹಾತ್ಮ
ಭಾರತ ಕಂಡ ವಿಶ್ವ ಜ್ಯೋತಿ
ಸತ್ಯ ಶಾಂತಿ ಅಹಿಂಸಾ ಮೂರ್ತಿ
ದಲಿತ್ತೋದಾರದ ಉದಾರ ನೀತಿ
ಮೂಲ ಶಿಕ್ಷಣದ ನಿರ್ಮಾಣ ಕೀರ್ತಿ|
ಭಾರತ ಮಾತೆಯ ವರಪುತ್ರ
ಗುಜರಾತ್ ರಾಜ್ಯದ ಸುಪುತ್ರ
ದೇಶದ ಒಕ್ಕೂಟಕ್ಕೆ ನೇತಾರ
ಸ್ವಾತಂತ್ರ್ಯ ಘೋಷಣೆಯ ಹರಿಕಾರ|
ವರ್ಣಭೇದ ನೀತಿ ವಿರುದ್ಧ ಹೋರಾಟ
ಮಾಡು ಇಲ್ಲವೇ ಮಡಿ ಎಂಬ ಕಾದಾಟ
ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ
ಸತ್ಯಾಗ್ರಹ ಎಂಬ ಮಂತ್ರದ ಯಾಚನೆ|
ಅಹಿಂಸೆಯಿಂದ ಬ್ರಿಟಿಷರ ಹೃದಯ ಗೆದ್ದೆ
ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟೆ
ರಾಮರಾಜ್ಯ ಕನಸಿನ ಗುರಿಕಾರ
ವಿಶ್ವ ಮಹಾತ್ಮನಾದ ಹೃದಯ ಸಾಹುಕಾರ|
ನಿನ್ನ ಜನ್ಮದಿನ ವಿಶ್ವ ಅಹಿಂಸಾ ದಿನ
ಗಾಂಧಿ ಆದರ್ಶ ಪಾಲನೆಯಾಗಲಿ ಅನುದಿನ
ಕ್ಷಮಿಸು ಮಹಾತ್ಮ ನಮ್ಮದು ಬರೀ ಧಿಮಾಕು
ಗಾಂಧಿ ಟೋಪಿಯ ಪೋಷಾಕು|
-ಮಲ್ಲಿಕಾರ್ಜುನ ಕಕಮರಿ ಶಿಕ್ಷಕರು.
ಚಿತ್ರ ಕಲೆ
- ಸಿರಿ ಎಂ ಎಂ ೮ ನೇ ತರಗತಿ ನಂಜನಗೂಡು
ಜಗತ್ತಿನ ಗಾಂಧಿ
ಗಾಂಧಿಯಂಬ ಬಂಡೆಗಲ್ಲಿನ
ಆದರ್ಶ ವಿಚಾರಗಳಿಗೆ
ಜಗತ್ತೆ ಮಂಡಿಯೂರಿದೆ .
ಜಾಗತೀಕರಣದ ಬಿರುಗಾಳಿಯಲ್ಲಿ ನರಳುವ
ಇಂದಿನ ಸಂದಿಸಮಯದಿ
ಸತ್ಯ ಶಾ0ತಿ ಅಹಿಂಸೆಯ ತಂದೆ
ಮತ್ತೆ ಮತ್ತೆ ನೆನಪಾಗುವರು
ಸತ್ಯದ ಸರದಾರರು ಶಾ0ತಿಯ ದೂತರು
ಅಹಿಂಸೆಯ ಪರಿಪಾಲಕರು
ಮಹಾತ್ಮ ಗಾಂಧಿಜಿಯವರು.
- ಸಂಜಯ.ಜಿ.ಕುರಣೆ ಶಿಕ್ಷಕರು ಬೆಳಗಾವಿ
ದೇಶದ ಹೆಮ್ಮೆಯ ಪುತ್ರ
ಭಾರತ ಮಾತೆಯ ಹೆಮ್ಮೆಯ ಪುತ್ರ
ಶ್ರೇಷ್ಠ ಗುಣಗಳೇ ನಿನ್ನಯ ಕಿರೀಟ
ಚರಿತ್ರೆಯ ಪುಟದಲಿ ನಿನ್ನಯ ಪಾತ್ರ
ಎಂದೂ ಅಳಿಯದ ವ್ಯಕ್ತಿತ್ವದ ಸೆಳೆತ |
ಪುಟ್ಟ ದೇಹದ ದಿಟ್ಟ ಮೂರ್ತಿಯೇ
ಸ್ವಾಭಿಮಾನಕೆ ಕಳಶ ಪ್ರಾಯವೇ
ದಣಿವನೇ ಅರಿಯದ ದೇಹವದು
ದೇಶದ ಅಮೂಲ್ಯ ಮಾಣಿಕ್ಯವದು|
ಬಡತನದಲ್ಲೇ ನೊಂದು ಬೆಂದರು
ಪ್ರಾಮಾಣಿಕತೆಯೇ ಶ್ರೇಷ್ಠ ಎಂದರು
ಆಸೆಯೆಂಬುದು ಅಳಿದು ಬಿಟ್ಟರು
ನಿಸ್ವಾರ್ಥದಲ್ಲಿಯೇ ಬದುಕ ಕಟ್ಟಿದರು|
ದೇಶ ಸೇವೆಯೇ ಈಶ ಸೇವೆಯು
ಸೈನಿಕರೇ ಜೀವಾಳ ಎಂದರು
ರೈತರ ಬದುಕಿಗೆ ಬೆಳಕಾದವರು
ಅವರೇ ನಮ್ಮ ಶಾಸ್ರ್ತಿಜೀಯವರು |
- ಪೂರ್ಣಿಮಾ ಯಲಿಗಾರ ಶಿಕ್ಷಕಿ
ಲೇಖನ ಬರಹ
ವಿಧ್ಯಾಗಮ : ಶಿಕ್ಷಕರು ವಿದ್ಯಾರ್ಥಿಗಳು ಪಾಲಕರು
ಶಿಕ್ಷಣ ವಾಹಿನಿಯಲ್ಲಿ ಉಕ್ಕಿ ಬಂದ ಮತ್ತೊಂದು ಅಲೆಯೆ ವಿದ್ಯಾಗಮ ಎಂಬ ನೂತನ ಯೋಜನೆ. ಇದು ಒಂದು ರೀತಿಯ ದೂರ ಸಂಪರ್ಕ ಶಿಕ್ಷಣ ವ್ಯವಸ್ಥೆ ಇದ್ದ ಹಾಗೆ. ವೃತ್ತಿನಿರತ ಶಿಕ್ಷಕ ಬಂಧುಗಳಿಗೆ ವಿಶ್ವ ವಿದ್ಯಾಲಯಗಳು, ತಮ್ಮ ವೃತ್ತಿಯ ಜೊತೆಗೆ ಓದನ್ನು ಮುಂದುವರೆಸಲು ಅವಕಾಶ ಮಾಡಿಕೊಡುತ್ತದೆ. ಅದನ್ನು ದೂರ ಸಂಪರ್ಕ ಶಿಕ್ಷಣ ಎನ್ನುತ್ತೇವೆ. ಹಾಗೆ ಈ ಹೊಸ ರೀತಿಯ ವಿದ್ಯಾಭ್ಯಾಸದ ರೀತಿಯು ಕೂಡ ಒಂದು ರೀತಿಯ ದೂರ ಸಂಪರ್ಕ ಶಿಕ್ಷಣ ಇದ್ದಂತೆ. ಈ ವಿದ್ಯಾ ಗಮ ಕಲಿಕಾ ಪ್ರಕ್ರಿಯೆಯು ಮೂರು ಹಂತಗಳಲ್ಲಿ ನಡೆಯುತ್ತದೆ.
೧) ಇಂಟಲಿಜೆಂಟ್ : ಈ ಕಲಿಕಾ ಪ್ರಕ್ರಿಯೆಯ ಮೂಲಕ ಯಾವ ಮಗು ಗಣಕಯಂತ್ರ, ಅಂತರ್ಜಾಲ ಸಹಿತ ದೂರವಾಣಿ, ದೂರದರ್ಶನ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ತನ್ನ ಓದನ್ನು ಮುಂದುವರೆಸಲು ಪ್ರಯತ್ನಿಸುತ್ತದೆಯೋ ಅಂತಹ ಮಗುವನ್ನು ಈ ಕಲಿಕಾ ಪ್ರಕ್ರಿಯೆಯ ಮೂಲಕ ಕಲಿಸಲು ಯತ್ನಿಸುವುದು.
೨) ಬ್ರೀಲಿಯಂಟ್: ಈ ಕಲಿಕಾ ಪ್ರಕ್ರಿಯೆಯ ಮೂಲಕ ಯಾವ ಮಗು ಯಾವುದೇ ಗಣಕಯಂತ್ರ,ಅಂತರ್ಜಾಲ ರಹಿತ ದೂರವಾಣಿಗಳ ಮೂಲಕ ಮತ್ತು ದೂರದರ್ಶನಗಳ ಮೂಲಕ ತನ್ನ ಓದನ್ನು ಮುಂದುವರೆಸಲು ಪ್ರಯತ್ನಿಸುತ್ತದೆಯೋ ಅಂತಹ ಮಗುವನ್ನು ಈ ಕಲಿಕಾ ಪ್ರಕ್ರಿಯೆಯ ಮೂಲಕ ಕಲಿಸಲು ಯತ್ನಿಸುವುದು.
೩) ಜೀನಿಯಸ್ : ಈ ಕಲಿಕಾ ಪ್ರಕ್ರಿಯೆಯ ಮೂಲಕ ಯಾವ ಮಗು ಗಣಕಯಂತ್ರ,ದೂರವಾಣಿ, ದೂರದರ್ಶನ ಇತ್ಯಾದಿಗಳ ಸಹಾಯವಿಲ್ಲದೆ ತನ್ನ ಓದನ್ನು ಮುಂದುವರೆಸಲು ಪ್ರಯತ್ನಿಸುತ್ತದೆಯೋ ಅಂತಹ ಮಗುವನ್ನು ಈ ಕಲಿಕಾ ಪ್ರಕ್ರಿಯೆಯು ಮೂಲಕ ಕಲಿಸಲು ಯತ್ನಿಸುವುದು.
ಇಲ್ಲಿ ಮಗುವಿನ ಜ್ಞಾನಕ್ಕೆ ಪೂರಕವಾದ ವಾತಾವರಣ ಕಲ್ಪಿಸಲು ಸಾದ್ಯವಿಲ್ಲ. ಏಕೆಂದರೆ ಇದು ಏಕ ಮುಖವಾದ ಶಿಕ್ಷಣ ಪದ್ದತಿಯಾಗುತ್ತದೆ.ಶಾಲೆಯಲ್ಲಾದರೆ ಮಗು ಮತ್ತು ಶಿಕ್ಷಕನ ಮಧ್ಯ ನೇರ ಸಂಪರ್ಕವಿರುತ್ತಿತ್ತು.ನಮ್ಮ ಶಿಕ್ಷಣ ಪದ್ದತಿಯಾದ ಮಗು ಕೇಂದ್ರಿತ ಅಥವಾ ಶಿಶು ಕೇಂದ್ರಿತ ಶಿಕ್ಷಣ ಪದ್ದತಿ,ಹೋಗಿ ಸಮೂಹ ಮಾಧ್ಯಮ ಕೇಂದ್ರಿತ ಶಿಕ್ಷಣವಾಗುತ್ತಿದೆ.ಇಲ್ಲಿ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಾಧ್ಯವಿಲ್ಲ. ಮಗು ತನ್ನ ಸ್ನೇಹಿತರೊಂದಿಗೆ, ಶಿಕ್ಷಕರೊಂದಿಗೆ ಬೆರೆತು ತನ್ನ ಶಿಕ್ಷಣವನ್ನು ಪೂರೈಸಿಕೊಳ್ಳುವುದಕ್ಕೂ,ಏಕಾಂಗಿಯಾಗಿ ತನ್ನ ಶಿಕ್ಷಣ ಪೂರೈಸಿಕೊಳ್ಳುವುದಕ್ಕೂ ತುಂಬ ವ್ಯತ್ಯಾಸವಿದೆ.ಮಗು ತನ್ನ ಕಲಿಕೆಯಲ್ಲಿ ಅಸಮರ್ಥತೆ ತೋರುವ ಸಾಧ್ಯತೆಗಳಿವೆ.ಶಾಲೆಯಲ್ಲಿ ಆಗಿದ್ದರೆ ಮಗು ತಾನು ಕಲಿಯುವ ವಿಷಯಕ್ಕೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳು ಬಂದಿದ್ದರೆ,ಅವುಗಳನ್ನು ಶಿಕ್ಷಕರ ಸಹಾಯದಿಂದ ತಕ್ಷಣ ಬಗೆಹರಿಸಿಕೊಳ್ಳುತ್ತಿತ್ತು.ಈ ಕಲಿಕಾ ಪ್ರಕ್ರಿಯೆಯ ಮೂಲಕ ಮಗು ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ.
ಮೊದಲ ಹಂತದ( Intelligent) ವಿದ್ಯಾರ್ಥಿಗಳಿಗೆ ದೃಶ್ಯ ಮಾಧ್ಯಮದ ಮೂಲಕ ಕಲಿಕೆಯನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತದೆ.ಆದರೆ ಇಲ್ಲಿಯೂ ಕೂಡ ಕೆಲವು ಸಮಸ್ಯೆಗಳಿವೆ.ಅಂತರ್ಜಾಲ ಮಾಹಿತಿ ಇರುವ ಎಷ್ಟು ಮಕ್ಕಳು ನಮ್ಮ ತರಗತಿ ಕೋಣೆಯಲ್ಲಿವೆ.ನಾವು ಕಳುಹಿಸಿ ಕೊಡುವ ಎಲ್ಲಾ ದೃಶ್ಯ ಮಾಧ್ಯಮಗಳನ್ನು ಅವೆಲ್ಲ ಮಕ್ಕಳು ನೋಡಿ ಅದಕ್ಕೆ ಸರಿಯಾಗಿ ಸ್ಪಂದಿಸುತ್ತವೆ,ಎನ್ನುವ ನಂಬಿಕೆ ಇಲ್ಲ. ಒಂದು ವೇಳೆ ಹಾಗಂತ ಈ ಕಲಿಕಾ ಪ್ರಕ್ರಿಯೆಯು ಹೆಚ್ಚು ಪರಿಣಾಮ ಬೀರುತ್ತದೆ. ಶಿಕ್ಷಕರು ಕಳುಹಿಸಿದ ದೃಶ್ಯ ಮಾಧ್ಯಮಗಳನ್ನು ಪದೇ ಪದೇ ನೋಡುವ ಮೂಲಕ ಕಲಿಯುತ್ತದೆ,ಎನ್ನುವ ಭರವಸೆ ಇದೆ.ಆದರೆ ಗುಡ್ಡಗಾಡು ಪ್ರದೇಶಗಳಲ್ಲಿ ಮಲೆನಾಡಿನ ಭಾಗಗಳಲ್ಲಿ ಯಾವಾಗಲೂ ವಿದ್ಯುತ್ ಪೂರೈಕೆ ಅಷ್ಟಾಗಿ ಇರುವುದಿಲ್ಲ.ಅಲ್ಲಿ ಜಾಲಬಂಧ (ನೆಟ್ವರ್ಕ್) ಸಮಸ್ಯೆ ಇದೆ.ಏಕೆಂದರೆ ಅಲ್ಲಿ ದೂರವಾಣಿ ವಿನಿಮಯ ಮಾಡಿಕೊಳ್ಳಬೇಕಾದರೆ ಎತ್ತರವಾದ ಜಾಗವನ್ನು ನೋಡಿಕೊಳ್ಳಬೇಕು. ಅಲ್ಲಿ ಈ ಕಲಿಕಾ ಪ್ರಕ್ರಿಯೆ ಸರಿಯಾಗಿ ತಲುಪಲು ಸಾಧ್ಯವಿಲ್ಲ.ಜೊತೆಗೆ ಎಲ್ಲ ಪಾಲಕರು ತಮ್ಮ ದೂರವಾಣಿಯನ್ನು ಆಗಾಗ ಪುನರ್ಭರ್ತಿ (Recharge) ಮಾಡುವುದಿಲ್ಲ. ನಾಳೆಗೆ, ನಾಡಿದ್ದಿಗೆ ನೋಡಿದರಾಯಿತು.ಎನ್ನುವ ಮನೋಭಾವ. ಜೊತೆಗೆ ಪುನರ್ಭರ್ತಿ ಮಾಡಲು ಎಲ್ಲ ಹಳ್ಳಿಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಮತ್ತು ಮಲೆನಾಡಿನ ಭಾಗದಲ್ಲಿ ಕೇಂದ್ರಗಳಿರುವುದಿಲ್ಲ.ಹತ್ತಿರದ ದೊಡ್ಡ ಹಳ್ಳಿ ಇಲ್ಲವೇ ನಗರ ಪ್ರದೇಶಗಳಲ್ಲಿ ಬರಬೇಕು.ಕೇವಲ ಇದೊಂದು ಕೆಲಸಕ್ಕೆ ಬರಲು ಸಾಧ್ಯವಿಲ್ಲ.ಗ್ರಾಮೀಣ ಭಾಗದ ಪಾಲಕರಿಗೆ ಒಂದು ದಿನದ ಕೂಲಿಯು ಕಳೆದು ಹೋಗುವ ಭಯವಿದೆ.
ಇನ್ನೂ ಎರಡನೇ ಹಂತದ(Brilliant) ವಿದ್ಯಾರ್ಥಿಗಳು ದೃಶ್ಯ ಮಾಧ್ಯಮ ರಹಿತ,ಗಣಕಯಂತ್ರ ರಹಿತ ಕಲಿಕಾ ಪ್ರಕ್ರಿಯೆ ಇದು.ಇಲ್ಲಿ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮಗು ತನ್ನ ಕಲಿಕೆಯನ್ನು ಮುಂದುವರೆಸುತ್ತಾ ಹೋಗುತ್ತದೆ.ಇಲ್ಲಿಯೂ ಕೂಡ ಮೊದಲ ಹಂತದ ವಿದ್ಯಾರ್ಥಿಗಳು ಮತ್ತು ಪಾಲಕರು ಅನುಭವಿಸುವ ನೋವನ್ನು ಈ ವಿದ್ಯಾರ್ಥಿಗಳು ಮತ್ತು ಪಾಲಕರು ಅನುಭವಿಸುತ್ತಾರೆ. ಶಿಕ್ಷಕರು ಕಳುಹಿಸಿದ ಸಂದೇಶವನ್ನು ಓದಿ ಪುನಃ ಉತ್ತರಿಸಲು ಎಲ್ಲ ಮಕ್ಕಳು ಶಕ್ತರಾಗಿರುವುದಿಲ್ಲ.ಶಿಕ್ಷಕರು ಕಳುಹಿಸಿದ ಎಲ್ಲ ಸಂದೇಶಗಳು ಏಕಕಾಲಕ್ಕೆ ವಿದ್ಯಾರ್ಥಿಗಳಿಗೆ ತಲುಪಲು ಸಾಧ್ಯವಿಲ್ಲ.ಒಂದು ವೇಳೆ ತಲುಪಿದರು,ಮಕ್ಕಳು ಅದನ್ನು ಓದಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ.
ಇನ್ನೂ ಮೂರನೇ ಹಂತದ (Jenius) ಈ ವಿದ್ಯಾರ್ಥಿಗಳು ಯಾವುದೇ ತಂತ್ರಜ್ಞಾನ ಬಳಸಿ ಓದದೆ ಎಂದರೆ ಈ ವಿದ್ಯಾರ್ಥಿಗಳು ಮೇಲಿನ ಯಾವುದೇ ಒಂದು ಸಾಧನಗಳು ಕೂಡ ಇರದ ವಿದ್ಯಾರ್ಥಿಗಳು. ಇವರು ಕೇವಲ ಪಠ್ಯವನ್ನು ಮಾತ್ರ ಓದಲು ಮತ್ತು ಬರೆಯಲು ಅರ್ಹರು.ಇವರಿಗೆ ತಂತ್ರಜ್ಞಾನದ ಯಾವುದೇ ತುದಿ ಮೊದಲು ಗೊತ್ತಿರದವರು.ಈ ಮಕ್ಕಳ ಪಾಲಕರ ಸ್ಥಿತಿ ಹೇಗಿರಬಹುದೆಂದು ಯೋಚನೆ ಮಾಡಬೇಕು.ಈ ಮಕ್ಕಳ ಪಾಲಕರು ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿರುತ್ತಾರೆ.ಈ ಮಕ್ಕಳಿಗೆ ಪಾಠ ಹೇಳಿಕೊಡುವ ವಿಧಾನ ವಾರಕ್ಕೊಮ್ಮೆ ಪಾಠ ಮಾಡಿ ಅದೂ ಅವರಿದ್ದಲ್ಲಿಗೆ ಹೋಗಿ ಮಾಡಬೇಕು. ಇಲ್ಲವೇ ಪಕ್ಕದಲ್ಲಿ ಇರುವ ಯಾರಾದರೂ ಮೊದಲ ಅಥವಾ ಎರಡನೇ ಹಂತದ ವಿದ್ಯಾರ್ಥಿಗಳ ಜೊತೆಗೆ ಕೂಡಿ ಕಲಿಯಲು ಅವಕಾಶ ಮಾಡಿಕೊಡಬೇಕು. ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ.
ಕೊನೆಯದಾಗಿ ಪಾಲಕರು. ಎಲ್ಲಾ ಪಾಲಕರು ತಮ್ಮ ಮಕ್ಕಳ ಓದಿನ ಕಡೆಗೆ ಗಮನ ಹರಿಸಲು ಸಾಧ್ಯವಿಲ್ಲ. ಏಕೆಂದರೆ ಅವರು ತಮ್ಮ ಮಕ್ಕಳ ತರಗತಿಯ ವಿಷಯ ಹಾಗೂ ಚಟುವಟಿಕೆಗಳನ್ನು ಮಾಡಲು ಸಮರ್ಥರಲ್ಲ.ಕೇವಲ ಯಾವುದಾದರೂ ಒಂದು ವಿಷಯವನ್ನು ಮಾಡಬಲ್ಲರು.ಇದು ಕೂಡ ಕೆಲವು ಮಕ್ಕಳ ಪಾಲಕರಿಗೆ ಮಾತ್ರ ಸಾಧ್ಯ.ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಕೃಷಿ ಅವಲಂಬಿತ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳು ಯಾರನ್ನು ಅವಲಂಬಿಸಬೇಕು.ದೃಶ್ಯ ಮಾಧ್ಯಮದ ಮೂಲಕ ಅಥವಾ ಶ್ರವ್ಯ ಮಾಧ್ಯಮದ ಮೂಲಕ ಪಾಠ ಹೇಳಿ ಕೊಡುವ ಮೂಲಕ ಈ ಪದ್ದತಿಯನ್ನು ಜಾರಿಗೆ ತರಲಾಗಿದೆ.ಇದು ಮಕ್ಕಳಿಗೆ,ಪಾಲಕರಿಗೆ ಇದನ್ನು ಅಳವಡಿಸಿ ಕೊಳ್ಳುವುದು ತುಂಬ ಕಷ್ಟದ ಕೆಲಸ. ಇನ್ನೂ ಶಿಕ್ಷಕರು ತಮ್ಮ ಪಾಠಗಳನ್ನು ದೃಶ್ಯ ಹಾಗೂ ಶ್ರವ್ಯ ಮಾಧ್ಯಮದ ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ.
ಆದರೆ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆ ಎಲ್ಲಿಗೆ ಬಂದಿದೆ. ನಾವು ನಮ್ಮ ವಿದ್ಯಾರ್ಥಿಗಳ ಕಲಿಕಾ ವೇಗಕ್ಕೆ ಅನುಗುಣವಾಗಿ ಯಾವ ವಿಧಾನವನ್ನು ಅಳವಡಿಸಿಕೊಂಡು ಹೊಸ ಪಾಠ ಮಾಡಬೇಕು ಎನ್ನುವುದು ಪ್ರಶ್ನೆ ಯಾಗಿದೆ. ಶಿಕ್ಷಕರಿಗೆ ತಮ್ಮ ವಿದ್ಯಾರ್ಥಿಗಳ ಕಲಿಕಾ ಹಿಮ್ಮಾಹಿತಿ ಸಿಗುವುದಿಲ್ಲ. ಕೇವಲ ದೃಶ್ಯ ಹಾಗೂ ಶ್ರವ್ಯ ಮಾಧ್ಯಮದ ಮೂಲಕ ಪಾಠ ಹೇಳಿ ಕೈ ತೊಳೆದುಕೊಂಡರೆ,ನಾಳೆ ನಮ್ಮ ಮಕ್ಕಳ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಕಲಿಕಾ ಪ್ರಕ್ರಿಯೆ ಯಾವಾಗಲೂ ವಿದ್ಯಾರ್ಥಿಗಳು, ಶಿಕ್ಷಕರು,ಪಠ್ಯ ಮೂರು ಏಕಕಾಲದಲ್ಲಿ ಇದ್ದಾಗ ಮಾತ್ರ ಶಿಕ್ಷಣ ಒಂದು ಪ್ರವಹಿಸುವ ವಾಹಿನಿ.ಇಲ್ಲದಿದ್ದರೆ ಅದೊಂದು ಬರಡು ಭೂಮಿಯಲ್ಲಿ ಭತ್ತ ಬೆಳೆದು ಅನ್ನವನುಂಡಂತೆ ಸರಿ.ಈ ಅಂತರದಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿದು ಪುನಃ ಕಲಿಕೆಯಲ್ಲಿ ಸರಿದೂಗಿಸಿಕೊಳ್ಳಲು ಹೆಣಗಾಡುವರು. ಆದರೆ ಜೀವನಕ್ಕಿಂತ ಜೀವ ಮುಖ್ಯ. ಆದ್ದರಿಂದ ಪಾಲಕರ ಜವಾಬ್ದಾರಿ ಹೆಚ್ಚಾಗಿ ಇದ್ದರೆ ಮಾತ್ರ ಮಗು ಸೋಮಾರಿಯಾಗದೆ ನಿರಂತರ ಕಲಿಕೆಯಲ್ಲಿ ಪಾಲ್ಗೊಳ್ಳುವುದರಲ್ಲಿ ಸಂಶಯವಿಲ್ಲ.ಶಿಕ್ಷಣ ತ್ರಿಕೋನ ಸರಣಿಯಿಂದ ಪರಿಪೂರ್ಣತೆ ಹೊಂದುವುದು.
- ಶ್ರೀ ಇಂಗಳಗಿ ದಾವಲಮಲೀಕ ಶಿಕ್ಷಕರು
ವ್ಯಕ್ತಿತ್ವ ನಿರ್ಮಾಣ
ಶಿಕ್ಷಣ ಎಂದರೆ ಮಗುವಿನ ಅಥವಾ ವ್ಯಕ್ತಿಯ ವರ್ತನೆಯಲ್ಲಾಗುವ ಬದಲಾವಣೆ. ಅದು ಧನಾತ್ಮಕವಾಗಿರಬಹುದು ಅಥವಾ ಋಣಾತ್ಮಕವಾಗಿರಬಹುದು. ಏಕೆಂದರೆ ಎಷ್ಟೋ ಸುಶಿಕ್ಷಿತರು ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ದೇಶದ ಪ್ರಗತಿಗೆ ಕಂಟಕರಾಗಿದ್ದಾರೆ. ಆದ್ದರಿಂದ ಶಿಕ್ಷಣವನ್ನು ನಾವು ಕೇವಲ ಧನಾತ್ಮಕ ಬದಲಾವಣೆ ಅಂತಾ ಹೇಳಲಾಗದು. ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣ ಕೇವಲ ಶಾಲಾ ಶಿಕ್ಷಣದಿಂದ ಮಾತ್ರ ಸಾಧ್ಯವಿಲ್ಲ. ಎಲ್ಲ ಅಂಶಗಳು ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಾಯಕವಾಗಿವೆ.
ಶಿಕ್ಷಣ ಒಂದು ತ್ರಿಮುಖ ಪ್ರಕ್ರಿಯೆ, ಶಿಕ್ಷಣದಲ್ಲಿ ಕೇವಲ ವಿದ್ಯಾರ್ಥಿ ಮತ್ತು ಶಿಕ್ಷಕರು ಮಾತ್ರವಲ್ಲ ಮೂರನೇ ಮುಖವಾದ ಸಮಾಜವು ಇದಕ್ಕೆ ಸೇರ್ಪಡೆಗೊಳ್ಳುತ್ತದೆ. ಮಗು ಕೇವಲ ತರಗತಿ ಅಥವಾ ಶಾಲೆಯಲ್ಲಿ ಕೇವಲ 6 ಗಂಟೆ ಮಾತ್ರವಿರುತ್ತದೆ. ಉಳಿದ 18 ಗಂಟೆ ಮನೆಯಲ್ಲೇ ಇರುವುದರಿಂದ ಮನೆಯ ಪ್ರಭಾವ ಮಗುವಿನ ವ್ಯಕ್ತಿತ್ವದ ಮೇಲೆ ಅತೀ ಹೆಚ್ಚಾಗಿರುವುದು ಕಂಡುಬರುತ್ತದೆ. ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಎಂಬಂತೆ ತಾಯಿಯು ಮಗುವಿನ ವ್ಯಕ್ತಿತ್ವ ನಿರ್ಮಾಣದಲ್ಲಿ ಅಗ್ರಗಣ್ಯಳು. ಲಲ್ಲೆಯಿಂದ ಮುದ್ದು ಮಾಡಿ ತಾಯಿ ಮಗುವಿನ ಜೀವನ ಪಥವನ್ನೇ ರೂಪಿಸುತ್ತಾಳೆ. ತಂದೆ ಮಗುವಿನ ಪಾಲಕನಾಗಿ ಪೋಷಕನಾಗಿ ಯಾವುದು ಸರಿ, ಯಾವುದು ತಪ್ಪು ತಿಳಿಸಿ ಒಬ್ಬ ಸ್ನೇಹಿತನಂತೆ ಮಾರ್ಗದರ್ಶನ ಮಾಡುತ್ತಾನೆ. ಜವಾಬ್ದಾರಿಯುತ ಪೋಷಕತನದಿಂದ ಮಾತ್ರ ಮಗುವಿನ ವ್ಯಕ್ತಿತ್ವ ನಿರ್ಮಾಣ ಸಾಧ್ಯ.
ಸ್ವಾಮೀ ವಿವೇಕಾನಂದರ ವ್ಯಕ್ತಿತ್ವ ರೂಪಿಸುವಲ್ಲಿ ಅವರ ತಾಯಿಯ ಪಾತ್ರ ಅಪಾರವಾಗಿದೆ. ಒಮ್ಮೆ ನರೇಂದ್ರ ಚಿಕ್ಕವಯಸ್ಸಿನವನಾಗಿದ್ದಾಗ ಬೀದಿಯಲ್ಲಿ ಟಾಂಗಾಗಾಡಿ ಓಡಿಸುವವನನ್ನು ನೋಡಿ, ತಂದೆಗೆ ನಾನು ದೊಡ್ಡವನಾದಾಗ ನಾನೂ ಟಾಂಗಾಗಾಡಿ ಓಡಿಸುವವನಾಗುತ್ತೇನೆ ಎಂದಾಗ ತಂದೆ ಗದರುತ್ತಾರೆ. ಆದರೆ ತಾಯಿ ಮಾತ್ರ ಅರ್ಜುನನ ರಥಕ್ಕೆ ಸಾರಥಿಯಾಗಿರುವ ಶ್ರೀಕೃಷ್ಣನ ಪೋಟೋ ತೋರಿಸುತ್ತಾ ನೀನು ಸಾರಥಿಯಾದರೆ ಶ್ರೀಕೃಷ್ಣನ ಥರಾನೇ ಆಗಬೇಕು ಎಂಬ ಬೀಜಮಂತ್ರ ಬಿತ್ತುತ್ತಾಳೆ. ಮುಂದೆ ನರೇಂದ್ರನೆ ಸ್ವಾಮೀ ವಿವೇಕಾನಂದ ಆಗುತ್ತಾರೆ. ಹಾಗೆಯೇ ಇನ್ನೊಂದು ಉದಾಹರಣೆ ಚಿಕ್ಕ ವಯಸ್ಸಿನಲ್ಲಿ ಒಬ್ಬ ಹುಡುಗ ತನ್ನ ಗೆಳೆಯನಿಂದ ಒಂದು ಪೆನ್ಸಿಲ್ ಕದ್ದು ತಂದಾಗ ಅವನ ತಾಯಿ ಅವನನ್ನು ತುಂಬಾ ಮುದ್ದು ಮಾಡುತ್ತಾಳೆ. ಮುಂದೆ ಅವನು ಕೊಲೆಗಾರನಾಗಿ ಗಲ್ಲು ಶಿಕ್ಷೆಗೆ ಗುರಿಯಾಗುತ್ತಾನೆ. ಆಗ ಅವನ ಕೊನೆಯ ಆಸೆ ಏನೆಂದು ಜೈಲರ್ ಕೇಳಿದಾಗ ತಾಯಿಯ ಮುಖ ನೋಡಬೇಕೆಂದು ತಿಳಿಸುತ್ತಾನೆ. ಅವನ ಆಸೆಯಂತೆ ಜೈಲರ್ ಅವನ ತಾಯಿಯನ್ನು ಕರೆಸುತ್ತಾರೆ, ಆಗ ಅವನು ತನ್ನ ತಾಯಿಯ ಕೆನ್ನೆಗೆ ಜೋರಾಗಿ ಹೊಡೆಯುತ್ತಾನೆ, ಈ ಶಿಕ್ಷೆ ನೀನು ಪ್ರಾರಂಭದಲ್ಲಿ ನನಗೆ ನೀಡಿದ್ದರೆ ನಾನು ಈ ರೀತಿ ಸಮಾಜದ್ರೋಹಿ ಆಗುತ್ತಿರಲಿಲ್ಲ ಎಂದು ಹೇಳುತ್ತಾನೆ.
*ಉಪಸಂಹಾರ*: ಈ ರೀತಿಯಾಗಿ ಮಗುವಿನ ಧನಾತ್ಮಕ ಅಥವಾ ಋಣಾತ್ಮಕ ವ್ಯಕ್ತಿತ್ವ ನಿರ್ಮಾಣದಲ್ಲಿ ಮನೆಯ ಪಾತ್ರ ಅತೀ ಮಹತ್ವದ್ದು. ಮನೆಯ ಪರಿಸರ ಮಗುವಿನ ಗುಣಾವಗುಣಗಳನ್ನು ರೂಪಿಸುವುದರಿಂದ ಪಾಲಕರು ಅಥವಾ ಪೋಷಕರು ತಮ್ಮ ನಡವಳಿಕೆಗಳನ್ನು ಸಮಾಜಕ್ಕೆ ಪೂರಕವಾಗುವ ರೀತಿಯಲ್ಲಿ ರೂಪಿಸಿಕೊಳ್ಳುವುದರ ಜೊತೆಗೆ ಮಕ್ಕಳನ್ನು ಚಿಕ್ಕ ವಯಸ್ಸಿನಿಂದ ಹಿಡಿದು ಅವರಿಗೆ ಜವಾಬ್ದಾರಿ ಬರುವವರೆಗೂ ಪ್ರತಿ ಹಂತದಲ್ಲೂ ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇರಬೇಕು. ಉತ್ತಮ ಶಿಕ್ಷಣ ಕೊಡಿಸುವದರ ಜೊತೆಗೆ ಸುಂದರ ಭವಿಷ್ಯ ನಿರ್ಮಾಣಕ್ಕೆ ಯೋಗ್ಯ ಪರಿಸರ ರೂಪಿಸಬೇಕು, ಆಗ ಮಾತ್ರ ಪೋಷಕತ್ವದ ಜವಾಬ್ದಾರಿ ಪೂರ್ಣಗೊಳ್ಳಲು ಸಾಧ್ಯ.
- ಮಲ್ಲಿಕಾರ್ಜುನ ಕೆ ಕಕಮರಿ ಶಿಕ್ಷಕರು ------------------------------------------------------------------------------------------------------------------
ಬದಲಾಗುತ್ತಿರುವ ಮಾನವೀಯ ಸಂಭಂಧಗಳು
ಪ್ರಸ್ತುತ ನಮ್ಮ ಸಮಾಜ ಯಾವ ರೀತಿ ಇದೆ ಎಂದು ಸಾಮಾನ್ಯವಾಗಿ ಹೇಳುವುದಾರೆ, ನಾಗರೀಕತೆ ಬೆಳೆಯುತ್ತ ಮನುಷ್ಯ ತನ್ನ ಮಾನವೀಯ ಗುಣಗಳನ್ನು ಗಾಳಿಗೆ ತೂರುತ್ತಿದ್ದಾನೆ, ಭಾವನೆಗಳು ನಶಿಸುತ್ತಿವೆ, ಕರ್ತವ್ಯವನ್ನು ಮರೆತು ಯಾಂತ್ರಿಕ ಜೀವನ ನಡೆಸುತ್ತಿದ್ದಾನೆ ಎಂದು. ಆದರೆ ನಮ್ಮ ಸುತ್ತಲೂ ನಡೆಯುವ ಸಂಗತಿಗಳನ್ನು ಗಮನಿಸಿದಾಗ ಮಾತ್ರ ನಮಗೆ ಸತ್ಯದ ಅರಿವಾಗುತ್ತದೆ. ನಾವು ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು ಜನರು ಬದಲಾಗುತ್ತಿರುವರೆಂಬುದು ಸರಿಯೇ?ನಾಗರೀಕತೆಯ ಕಾರಣದಿಂದಾಗಿ ನಮ್ಮ ಜೀವನ ರೀತಿ ಸುಲಭ ಹಾಗು ವೈಜ್ಞಾನಿಕವಾಗಿದೆ. ಜೊತೆಯಲ್ಲಿ ಇನ್ನೂ ಸುಲಭಸಾಧ್ಯ ಮಾಡುವ ಹಂಬಲವು ನಮ್ಮ ಜೀವನದ ಬಿಡುವನ್ನು ತನ್ನ ವಶವಾಗಿಸಿಕೊಂಡಿದೆ. ಆದರೆ ಜೀವನ ತಾನು ಇರುವಂತೆಯೇ ಇದೆ. ಬದಲಾಗಿರುವುದು ಮನಸ್ಸು.
ಮಾನವ ಇಂದು ವೈಜ್ಞಾನಿಕವಾಗಿ ಪ್ರಗತಿ ಹೊಂದಿದ್ದರೂ ಸುಖ-ಶಾಂತಿಗಳಿಲ್ಲದೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಡಾ.ರಾಧಾಕೃಷ್ಣನ್ ಹೇಳುವಂತೆ “ಮಾನವ ಹಕ್ಕಿಯಂತೆ ಹಾರಾಡುವುದನ್ನು ಮೀನಿನಂತೆ ಈಜುವುದನ್ನು ಕಲಿತ. ಆದರೆ, ಮಾನವನಾಗಿ ಬಾಳುವುದನ್ನು ಮಾತ್ರ ಕಲಿಯಲಿಲ್ಲ!”. ಅಂದರೆ, ಮಾನವನಾಗಿ ಬಾಳಲು ಇರಬೇಕಾದ ಮಾನವೀಯ ಮೌಲ್ಯಗಳು ಮಕ್ಕಳಲ್ಲಿ ಕ್ಷೀಣಿಸುತ್ತಿದ್ದು, ಈ ಅಂಶಕ್ಕೆ ಸಂಬಂಧಿಸಿದಂತೆ ಇಂದಿನ ಕೆಲವು ಶಿಕ್ಷಣ ಸಂಸ್ಥೆಗಳು ವಿಫಲಗೊಳ್ಳುತ್ತಿರುವುದು ಆತಂಕಕಾರಿ ಹಾಗೂ ವಿಷಾದನೀಯ ಸಂಗತಿ. ಮಾನವ ಇಂದು ವೈಜ್ಞಾನಿಕವಾಗಿ ಪ್ರಗತಿ ಹೊಂದಿದ್ದರೂ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಕುಟುಂಬ, ಶಾಲೆ ಸ್ನೇಹಿತರು, ಸಮಾಜ, ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದು. ಆದರೆ ಇಂದು ಕುಟುಂಬಗಳು ಬಡತನ, ದಾರಿದ್ರ್ಯ, ಅನಕ್ಷರತೆ ಹಾಗೂ ಅಂಧನಂಬಿಕೆಗಳಿಂದಾಗಿ ತನ್ನ ನೈಜ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಲ್ಲಿ ವಿಫಲಗೊಂಡಿವೆ.
ಜಗತ್ತು ಬದಲಾಗುತ್ತದೆ. ಬದಲಾಯಿಸಿದ್ದು ದೇವರೆಂಬ ಅಗೋಚರ ಶಕ್ತಿ. ಆಡಂಬರ, ಪಾಪದ ಹಣ, ಢಾಂಬಿಕತೆ, ಧರ್ಮದ ಅಮಲು, ನಾನು ನನ್ನದೆಂಬ ಭಾವನೆ, ಸಿರಿತನದ ಸೊಕ್ಕು, ಮಾನವೀಯತೆಯ ಅಂತ್ಯವಾಗುತ್ತಿರುವ ಈ ಕಲಿಯುಗದಲ್ಲಿ ನೀನು ಬರಿಯ ಸೊನ್ನೆ ಎಲ್ಲ ಅವನ ಇಚ್ಛೆ ಎಂದು ಕಾಣದ ವೈರಾಣುನ ಒಂದಾಗಿ ಸುನಾಮಿಯಂತೆ ಅಪ್ಪಳಿಸಿದಾಗ ಮಾನವ ಸಂಕುಲ ಪರದಾಡುತ್ತಿದೆ.ಇವತ್ತಿನ ಆಧುನಿಕ ಯುಗದಲ್ಲಿ ಮಕ್ಕಳು ತನ್ನ ತಂದೆ - ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಜವಾಬ್ದಾರಿಯನ್ನು ಕಡಿಮೆಗೊಳಿಸಿಬಿಡುತ್ತಾರೆ. ಇದರ ಪ್ರತಿಫಲವಾಗಿ ಸಮಾಜದಲ್ಲಿ ಅನಾಥಾಶ್ರಮಗಳು, ವೃದ್ಧಾಶ್ರಮಗಳು ಹಲವಾರು ಸಂಖ್ಯೆಯಲ್ಲಿ ನಿರ್ಮಾಣವಾಗಿರುದನ್ನು ಗಮನಿಸಬಹುದು.
- ಅರುಣ್ ಕುಮಾರ್ ವಿದ್ಯಾರ್ಥಿ ಮಂಗಳೂರು
ಕವಿತೆಗಳು
ಮೌನಲಹರಿ
ನಿರ್ಲಿಪ್ತ ವೇದನೆಯ ಸುಳಿವು
ಅಗಮ್ಯ ಭಾವನೆಗಳ ಅರಿವು
ಕಾರಿರುಳ ಕಗ್ಗತ್ತಲ ಮಧ್ಯೆ
ಮಿಂಚುವ ಕೋಲ್ಮಿಂಚು
ನವನೂತನ ರಾಗದ ಒಲವು||
ಅಂತರ್ಮುಖಿಯಾದ ಲಾಸ್ಯ
ಅಭೇದ್ಯ ರಚನೆಯ ರಹಸ್ಯ
ಸುದೀರ್ಘ ಕಠೋರತೆಯ ನಡುವೆ
ಅರಳುವ ನಾಜೂಕು ಕಲ್ಪನೆ
ಭವ ಸ್ಪರ್ಶದ ನವೀನ ಚಿಂತನೆ.||
ಉದಯಿಸುವ ಸುಂದರ ಚಿತ್ತಾರ
ನಿಶ್ಚಲ ನಿಶ್ಯಬ್ದ ವೇದಿಕೆ
ನಿಗೂಢ ನಿರೀಕ್ಷೆಯ ಗುಪ್ತ ಕನವರಿಕೆ
ಭಾವಾವೇಶ ದ ವಿಜೃಂಭಿಸುವಿಕೆ
ಮುಗ್ಧ ಸ್ನಿಗ್ಧ ಹೃದಯದ ಮಾತು
ನಿರಂತರ ಚಲನಶೀಲತೆಯ ತಂತು....
ಭಾವ ಮಂದಿರ ಭೂಷಿತೆ
ಮೌನ ಮಂದಿರ ಸುಶೋಭಿತೆ||.
- ಹಂಸರಾಗ ಶೆಟ್ಟಿ ಗೋಳಿ ತೊಟ್ಟು,
ದಕ್ಷಿಣ ಕನ್ನಡ ಜಿಲ್ಲೆ
ಹೀಗೊಂದು ಮನವಿ
ಸಾಕು ಬಿಡು ಕೈ ಮುಗಿಯುತ್ತೇನೆ
ನೆನಪಾಗಬೇಡ ಮತ್ತೆ ಮತ್ತೆ.
ನೀನು ಲೂಟಿ ಮಾಡಿದೆ ಎನ್ನುವದಿಲ್ಲ.
ಕೊಳ್ಳೆ ಹೋದ ಕೋಟೆಯಿದು, ಕ್ಷಮಿಸಿಬಿಡು
ನೆನಪುಗಳ ಖಜಾನೆಯನ್ನೇ ಬಿಟ್ಟು ಹೋದವಳೇ
ನನ್ನ ಕನಸುಗಳಿಗೂ ಬೆಂಕಿ ಬಿದ್ದಿದೆ ಈಗ ಸಾಧ್ಯವಾದರೆ ಕನಸಿಗೆ ಬರುವದನೂ ಬಿಟ್ಟು ಬಿಡು.|
ಇಲ್ಲಿ ಯಾರು ಯಾರನ್ನೂ ಕ್ಷಮಿಸಬೇಕಿಲ್ಲ.
ಪ್ರೀತಿಸಿದಂತೆ ನಟಿಸಿ ಈ ಪಾಪಿಯ ಹೃದಯ ಕೊಳ್ಳೆ
ಹೊಡೆದಿದ್ದಿ ಎನ್ನುವದಿಲ್ಲ ನಾನು.
ಬಿರಿದ ಎದೆಗೆ ಬೆಲೆ ಆದರೂ ಎಲ್ಲಿದೆ ಬಿಡು|
ದೂರುವದಿಲ್ಲ ನಾನು ಈ ಜಗದ ಯಾರನ್ನೂ.
ಖಾಲಿ ಜೋಳಿಗೆಯ ಫಕೀರಗೆ
ಒಲವನ್ನೆ ಭಿಕ್ಷೆಯಾಗಿ ಮೊಗೆ ಮೊಗೆದು
ಕೊಟ್ಟವಳು ನೀನು, ಸಾಕು ಬಿಡು|
ಸತ್ಯ ಹೇಳುತ್ತೇನೆ ಸಾಕ್ಷೀಗಳಿಲ್ಲ ನನ್ನ ಹತ್ತಿರ.
ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಅಷ್ಟೇ..
|ಯೋಚಿಸಬೇಡ ಸಖಿ ನಾನು ಭಗ್ನ ಪ್ರೇಮಿ ಎಂದು
ನಿನಗೆ ನನ್ನ ವಿನಂತಿ ಇಷ್ಟೇ ನಾನು ನಿನ್ನ ಹಿಂದೆ ಬಿದ್ದು
ಹಾಳಾದವನೆಂದು ಮತ್ಯಾರಿಗೋ ಹೇಳದಿರು.
- ದೀಪಕ ಶಿಂಧೇ
ನಗುವೇ ಸ್ವರ್ಗ ಅಳುವೇ ನರಕ
ನಗುವೇ ಜೀವನ ಬಾಳಿನ ಸಮತೋಲನ
ಸಂತೋಷದ ಸಂಕಲನ ಕಷ್ಟದ ವ್ಯವಕಲನ
ಆಧಾಯದ ಪ್ರತಿಫಲನ ಸುಖದ ವಕ್ರೀಭವನ
ಸುಪ್ಪತ್ತಿಗೆಯ ಆರೋಹಣ|
- ಕ.ನ.ನರ್ಮದಾನಾರಾಯಣ್ ಚಿಂತಾಮಣಿ
ನೀನಾದೆ
ದುಃಖವಾದರೆ ನೀರಾದೆ ಕಣ್ಣಲಿ
ಖುಷಿಯಾದರೆ ನಗುವಾದೆ ಮೊಗದಲಿ
ಆಸೆಯಾದರೆ ಕನಸಾದೆ ಮನದಲಿ|
ಮರೆಯದ ನೆನಪಾದೆ ಬದುಕಲಿ
ಅಳಿಸಿದರು ಅಳಿಯದ ಬರಹವಾದೆ
ಕುಂಚದಿ ಬರೆದ ಬಣ್ಣವಾದೆ|
ನೋಡುವ ಸುಂದರ ದೃಶ್ಯವಾದೆ
ಸವಿದರು ಸವಿಯದ ಸಿಹಿಯಾದೆ
ಕೇಳಿದರು ಮುಗಿಯದ ಸಂಗೀತವಾದೆ|
ಬೆಳಗಿನ ಬೆಳ್ಳಿಯ ಬೆಳಕಾದೆ
ಸಂಜೆಯ ಮರಿ ಸೂರ್ಯನಾದೆ
ಮಲಗುವ ಸಿಹಿ ನಿದ್ರೆಯಾದೆ
ನಾನಾಗುವ ಮುನ್ನ ಸಕಲವು ನೀನಾದೆ........
- ಸ್ಮಿತಾ ಮಾಲಗತ್ತಿ ಬೆಳಗಾವಿ
ಆ ದಿನಗಳು
ನೆನೆಗುದಿಗೆ ಬಿದ್ದ ದಿನಗಳನು
ನೆನದರೇನು ಫಲ....
ಬರಡಾದ ವೃಕ್ಷದಿಂದ ಫಲ
ನಿರೀಕ್ಷೆಸಿದಂತೆ...
ಒಲ್ಲದ ಮನಸಿಗೆ ಮೆಲ್ಲಗೆ ನೆನಪು ಮಾಡದಿರು
ಬೇಡದ ದಿನಗಳವು ಮುಚ್ಚಿರುವೆ
ಮರೆವುಗಳಿಂದ...
ಕಹಿ ದಿನಗಳನು ನೆನೆದು
ಬದುಕಲು ನಾನೊಲ್ಲೆ
ಬರುವ ದಿನಗಳನು ಬಯಸಿ
ಹರುಷವ ತರಬಲ್ಲೆ...
ತಿಳಿದಿದೆ ನನಗೆ ಹರುಷದಾ ಎಳೆಯು...
ಬಂದಿದ್ದು ಬರಲಿ ಎದೆಗುಂದದೆ
ಮುನ್ನೆಡೆಯಲಿ...
ಈ ದಿನವೂ ನನ್ನದು...
ಪ್ರತಿಕ್ಷಣವೂ ನನ್ನದು....
ಎನ್ನುವ ಮಂತ್ರವ ನೆನೆಯುತಾ
ಸಾಗಲಿ ಜೀವನದಾ ಪಯಣ...
- ವೀರೇಶ್. ಎಮ್. ಎಸ್. . ಸಿಂಧನೂರು
ಕುರುಡು ಕಾಂಚಾಣ
ಝಣಝಣ ಕುಣಿತದ ಹಣಪಣ ಕುಣಿ
ಕುಣಿದು ತುಳಿಯುವ ಮಾನವೀಯ ಗುಣ
ಸದ್ಗುಣದ ಮನುಜ ತೆರೆಮರೆಯಾಟದ
ಕುಯುಕ್ತಿಗೆ ಬಲಿಯಾಗುವ ಜೀವಂತ ಹೆಣ |
ಹಸಿವೆಯ ಮರೆಸುವ ಗಳಿಕೆಯ ಅಬ್ಬರ
ಮಿಥ್ಯದ ಹೊಳೆಯಲ್ಲಿ ಸತ್ಯವ ಮುಳುಗಿಸಿ
ಕುತಂತ್ರದ ಯುವನಿಕೆ ಎಳೆದು ಕುರುಡು
ಕಾಂಚಾಣದ ಗೆಜ್ಜೆ ನಾದಕ್ಕೆ ಕುಣಿಯುವರು |
ಬದುಕಿನ ಅನಿವಾರ್ಯಕ್ಕೆ ರೊಕ್ಕ ದೇಹದಲ್ಲಿ
ರಕ್ತ ಇತಿಮಿತಿಯಲಿದ್ದರೆ ಆರೋಗ್ಯ ಭಾಗ್ಯ
ಗಮ್ಮನೆ ಸಿರಿಮೆಟ್ಟಲೆರುವ ಚಂಚಲ ಮನದ
ಕಾಮನೆಗಳಲ್ಲಿ ನೆಮ್ಮದಿ ಕಾಣಲಾರದ ಬಾಳು|
ದುಡ್ಡೆ ದೊಡ್ಡಪ್ಪನೆಂದು ಕುರಿ ಮಂದೆಗಳಂತೆ
ಸಿರಿವಂತರ ಹಿಂದು ಮುಂದು ಸಾಲುಸಾಲು
ನೀತಿ ನಿಯಮ ರೀತಿ ರಿವಾಜುಗಳಿಗೆ ಮಣೆ
ಹಾಕದ ಧನಿಕನ ಕಾಸಿಗಾಗಿ ಜೀತದಾಳು|
ಕಾಸುಕಾಸಿನ ಕೋಶದ ಆಸೆಗೆ ಕಣ್ಣಿದ್ದು
ಕುರುಡನಾಗಿ ಮೇಳೈಸುವ ಸಿರಿ ಸಂಪತ್ತಿನ
ಓಲೈಕೆಯಲ್ಲಿ ಸದ್ಭಾವದ ಪ್ರೀತಿ ಮಮತೆ ಐಸಿ
ರಿಯ ಅಸೂಯೆ ಮತ್ಸರದಲ್ಲಿ ನಲಗುತ್ತಿದೆ
- ಪೊಡನೋಲನ ಈಶ್ವರ ತಮ್ಮಯ್ಯ
ನನ್ನಪ್ಪ
ಬಡತನದ ಬದುಕು ಉಣಿಸಿದ ನೋವಿನ ನಂಜು ನುಂಗಿ ಮಾಸದ ಒಲವ ಎದೆಗವಚಿಕೊಂಡು ನಲಿವಿನ ಸಮೃದ್ಧ ಬೆಳೆಸ ತೆಗೆದು ಕಳ್ಳುಬಳ್ಳಿಗೆ ಆಸರೆಯಾಗಿ ನಿಂತ ಮುಗ್ಧ ಮನಸ್ಸಿನ ನೀಳಕಾಯದವ ನನ್ನಪ್ಪ|
ತನ್ನಪ್ಪ ಮಣ್ಣಾದ ಮೇಲೆ ತುಂಬು ಹಟ್ಟಿಗೆ ತಾನೇ ಒಡೆಯನಾಗಿ ಅಕಾಲ ಬಂದೆರಗಿದ ಕಷ್ಟಗಳ ದುಷ್ಟಕೂಟಕೆ ಎದೆಕೊಟ್ಟು ನಂಬಿ ಕೈ ಹಿಡಿದು ಬಂದವರಿಗೆಲ್ಲ ಸುಭದ್ರ ನೆಲೆಗಟ್ಟನ್ನು ಕಲ್ಪಿಸಿದಾತ ನನ್ನಪ್ಪ|
ತುಂಡುಭೂಮಿಗೆ ಒಡೆಯನಾದರೂ ತಾನೇ ನೇಗಿಲು ನೊಗವಾಗಿ ಒಡಲ ಬಸಿದು ಉತ್ತು ಬಿತ್ತು ಬೊಗಸೆ ತುಂಬ ರಾಶಿಯಾದ ಫಸಲು ಕಂಡು ಹನಿಗಣ್ಣಾಗಿ ಹಿರಿಹಿರಿ ಹಿಗ್ಗಿದಾತ ನನ್ನಪ್ಪ|
ವಯಸ್ಸು ಅರವತ್ತಾಗಿ ಕಾಯ ಬಾಗಿದರೂ ಮಾಗಿದ ಮನದೊಳಗೆ ಬತ್ತದ ಕನಸುಗಳ ಒರತೆಯಿಟ್ಟುಕೊಂಡು ಮಗಾ....ಪಾಪ, ಪುಟ್ಟ ....ಎಂದು ಕರೆದಾಗಲೆಲ್ಲ ನನ್ನ ಎದೆಯಲ್ಲಿ ಮಗುವಾಗಿ ನಗುತ್ತಾ ಚೈತನ್ಯದಿ ಪಲ್ಲವಿಸುವ ನದಿಯಂಥವನು ನನ್ನಪ್ಪ,,,,,
- ಪಿ,ಕೆ ಮುದ್ದು ಪಾಪಣ್ಣ ಕೆಲ್ಲೂರು . . ಪಿರಿಯಾಪಟ್ಟಣ
ನೀನಾದೆ ಸ್ಪೂರ್ತಿ ನನ್ನ ಕವನಗಳಿಗೆ
ಹೊತ್ತು ಹೆತ್ತು ಸಾಕಿ ಸಲುಹಿದ
ಬೇಕು ಬೇಡಗಳ ಪೂರೈಸಿದ
ತಂದೆ ತಾಯಿ ಎಂಬ ದೇವರು ನೀವು
ನೀವಾದಿರಿ ಸ್ಪೂರ್ತಿ ನನ್ನ ಕವನಗಳಿಗೆ|
ನನ್ನ ಒಡಹುಟ್ಟಿದ ಕಾರಣಕೆ
ತುಂಬಿದೆ ಧೈರ್ಯವ ಪ್ರತಿ ಕಷ್ಟಕೆ
ತಮ್ಮ ಎಂದರೂ ತಂದೆಯಂತೆ ನೀನು
ನೀನಾದೆ ಸ್ಪೂರ್ತಿ ನನ್ನ ಕವನಗಳಿಗೆ|
ಜೀವನಕೆ ಹಿತವಾದ ಪತಿಯು
ನಲ್ಮೆಯ ಮುದ್ದಿನ ಸಿರಿಯು
ಅತ್ತೆಯಾದರೂ ಅಮ್ಮನ ಪ್ರೀತಿಯು
ನೀವಾದಿರಿ ಸ್ಪೂರ್ತಿ ನನ್ನ ಕವನಗಳಿಗೆ|
ನೀಲಾಕಾಶವು, ಕಾರ್ಮೋಡಗಳು
ಧುಮ್ಮಿಕ್ಕುವ ಜಲಪಾತಗಳು
ಹಚ್ಚಹಸಿರ ಉಟ್ಟ ತಾಯಿ ಪ್ರಕೃತಿ
ನೀನಾದೆ ಸ್ಪೂರ್ತಿ ನನ್ನ ಕವನಗಳಿಗೆ|
ಮುಂಜಾನೆ ಮಂಜಿನ ಹನಿ
ಮುಸ್ಸಂಜೆಯ ಗೋಧೂಳಿ
ಕಾಮನಬಿಲ್ಲು, ಅರಳುವ ಹೂಗಳು
ನೀವಾದಿರಿ ಸ್ಪೂರ್ತಿ ನನ್ನ ಕವನಗಳಿಗೆ.|
- ಸುಸ್ಮಿತ. ಕೆ ಕನ್ನಡ ಪ್ರಾಧ್ಯಾಪಕರು . ಬೆಂಗಳೂರು.
ಜೊತೆ ಜೊತೆಯಲಿ
ನೆಲವ ತಪ್ಪುತಿದೆ ನನ್ನದೆ ಹೆಜ್ಜೆ
ಮುಸ್ಸಂಜೆಯ ನೇಸರನ ಲಜ್ಜೆ
ಮೌನವಾದವು ಆ ಕಡಲೆಗಳು
ದಾಳಿ ನಡೆಸಿರಲು ನಿನ್ನ ನೆನವುಗಳು.|
ತಿರುಗಿ ನೋಡಲಾರೆ ಕಳೆದ ಕ್ಷಣಗಳ
ನಗುತಲಿದೆ ನಡೆದ ದಾರಿ
ಹೋಯಿತೆ ಸಮಯ ಕೈಯಮೀರಿ
ತಪ್ಪಿತೆಲ್ಲಿ ಹೃದಯದ ಆ ಲಹರಿ|
ನೆರಳ ನಡುವೆ ಮೂಡಿತೆ ಅಂತರ
ಒಂಟಿ ಪಯಣ ನನಗೆ ನಿರಂತರ
ಬರದೆ ಹೋಯಿತೆ ಬಯಸಿದ ನಿಲ್ದಾಣ
ದಿಕ್ಕು ತೋಚದೆ ಮನಸೀಗ ಹೈರಾಣ.|
ಒಲವಿನ ಕಥೆಯಲಿ ಮೂಡೀತೆ ವ್ಯಥೆ
ಮರೆವಿನ ನೆನಪಲಿ ನೆಪವೊಂದು ಕಥೆ
ಹೇಳಿದೆ ಕನಸಿಗೆ ಕಂಡಂತೆ ಅಲ್ಲಿ ನೀನು
ಜೊತೆ ಜೊತೆಯಲಿ ಕಾಣುವೆನೇನು ನಾನು.|
ಕರಗುವ ಮುನ್ನ ಬಾನು ಕರದಂತೆ ಭುಮಿ
ಮೂಡುವುದು ಕಾಮನಬಿಲ್ಲು ತಾನು
ಎಲ್ಲಿದ್ದರೇನು ನಾನು ಕೂಗೊಮ್ಮೆ ನೀನು
ತಡಮಾಡದೆ ಸೇರುವೆ ನಿನ್ನನ್ನು ನಾನು|
- ರಾಘವೇಂದ್ರ ಎಂ ಎಲ್ . ಹೊಂಬರಡಿ ,ಹಾವೇರಿ.
ನನ್ನ ಮೇಲೆ ಮಲಗಿದಾಗ
ಆ ನಾಲ್ಕೂ ಮೃಗಗಳಿಗೂ
ನೆನಪು ಬರಲಿಲ್ಲ ಅನ್ಸುತ್ತೆ ಪಾಪ;
ಅವರ ತಾಯಂದಿರಿಗೂ ಯೋನಿ ಇತ್ತೆಂಬುದು..
ಅವರಿಗೆ ಗೊತ್ತಿರಲಿಲ್ಲ ಅನ್ಸುತ್ತೆ-
ಅವರುಗಳ ಅಕ್ಕ-ತಂಗಿಯರು- ಹೆಣ್ಣು ಮಕ್ಕಳೆಂಬುದು..!
ನನ್ನ ನಾಲಿಗೆಯ ಕತ್ತರಿಸಿ, ಕಾಲುಗಳನು ಮುರಿದಿಕ್ಕಿ..
ಕಾಮವೇರಿದ ಹುಚ್ಚುನಾಯಿಯಂತೆ;
ನನ್ನ ಮೇಲೆ ದೊಪ್ಪನೆ ಬಿದ್ದಾಗ-
ಅಯ್ಯೋ ನಾನನುಭವಿಸಿದ ನೋವನು,
ಅಕ್ಷರದಲ್ಲಿ ಹಿಡಿದಿಡಲು ಸಾಧ್ಯವಾಗುತ್ತಿಲ್ಲ.
ಹೇಗೆ ಹೇಳಲಿ ನಾ..?! ನನ್ನನು ಹಂಚಿ ಹರಿದು ತಿನ್ನುತಿರುವಾಗ;
ಅವರಿಗೆ ಅನ್ನಬೇಕೆಂದೆನಿಸಿತು..
ನೀವುಗಳು ಗಂಡಸರೇ ಆಗಿದ್ದರೆ;
ನಿಮ್ಮ ತಾಯಿ, ಅಕ್ಕ-ತಂಗಿಯರ-
ಮೇಲೆ ಬಿದ್ದು ತೀಟೆ ತೀರಿಸಿಕೊಳ್ಳಲೆಂದು.
ಆದರೆ; ಅಂದು ನನ್ನ ನೋವೇ ನನಗೆ ಸಾಕಾಗಿತ್ತು.
ಒಂದು ವೇಳೆ ಇದು ತಪ್ಪೆಂದಾದರೆ;
ನಾನೂ ಒಬ್ಬ ತಂಗಿಯಂತೆ- ಅವರಿಗೇಕೆ ಕಾಣಲಿಲ್ಲ..?!
ಈಗ ನಾನು ವಿಲಿವಿಲಿ ಒದ್ದಾಡಿ ಸತ್ತುಹೋದೇನು..
ನೂರೆಂಟು ಕನಸುಗಳಿದ್ದವು ನನಗೆ,
ನಾನೇನೊ ಅಲ್ಪ-ಸ್ವಲ್ಪ ಮಾತನಾಡುತ್ತಿದ್ದೆ..
ಶಾಶ್ವತ ಮೂಖಿಯನ್ನಾಗಿಸಿದರು.
ನನ್ನ ಪರವಾಗಿ ಮೊದಲೇ ಸತ್ತ- ಸರ್ಕಾರವಂತೂ ನಿಲ್ಲಲಿಲ್ಲ.. ಬಹುಶಃ ಅತ್ಯಾಚಾರಿಗಳನ್ನ-
ದೇವರಾಗಿಸುವ ಯೋಜನೆಯಿರಬಹುದು..
ನಾನೇನು ಕೆಳವರ್ಗದವಳಲ್ಲವೆ?!!
ಹೀಗಾಗಿ- ರಾತ್ರೋರಾತ್ರಿ ಸುಟ್ಟುಹಾಕಿದರು,
ಸಾಕ್ಷಿಯೂ ಬೂದಿಯಾಯಿತು ನನ್ನೊಂದಿಗೆ!
ಮುಕ್ಕೋಟಿ ದೇವರುಗಳಿವೆಯೆಂದು;
ಹೇಳುತ್ತಿದ್ದರು ಯಾರೊ... ಆದರೆ;
ಒಂದು ದೇವರನ್ನೂ ನಾ ಕಾಣಲಿಲ್ಲ..
ಆ ನಾಲ್ಕು ಮೃಗಗಳೂ ನನ್ನ ಮೇಲೆ ಮಲಗಿದ್ದಾಗ,
ನನ್ನ ಎಳೆಯ ದೇಹವನ್ನು ಹಿಂಡಿ-
ಮೂಲೆಗುಂಪು ಮಾಡಿದಾಗ..!
-ಶರಣಪ್ಪ ಗೊಲ್ಲರ. ಧಾರವಾಡ.
ಚಿತ್ರ ಕಲೆ : ಯಶಸ್ವಿನಿ ಶ್ರೀನಿವಾಸ್ ಆನೇಕಲ್.
ರಾಮನ ರಾಜ್ಯದಲ್ಲಿ
ನನ್ನ ಕಣ್ಣೀರ ಹನಿ
ಅಯೋಧ್ಯೆಯ ಗೋಡೆಯ ಮೇಲೆ ಚಿತ್ತಾರವಾಗಿದೆ ರಾಮ
"ನನ್ನ ರಕ್ಷಿಸದ ನೀನು ಗುಡಿಯಲ್ಲಿದ್ದರೇನೂ ಗೂಡಲ್ಲಿದ್ದರೇನೂ
ಗಡಿ ದಾಟಿದ
ನಿನ್ನ ಭಕ್ತರ ಮನದಲೊಮ್ಮೆ ನೆಲೆಸು
ನಿನ್ನ ಹೆಸರಿಂಲ್ಲೆ ಅಲ್ವೆ
ಅವರು ನುಸುಳಿಕೊಳ್ಳುವುದು
ವಿಕೃತ ನಗೆ ಬೀರಿ ಬೀಗುವುದು... |
ನನ್ನ ನಾಲಿಗೆಯ ಕೆಂಪು ರಕ್ತದ ಒಂದೊಂದು ಕಣದಲ್ಲೂ
ನಿನಗೆ ಅಮೃತವನ್ನಿಕ್ಕುವೆ ರಾಮ
ನಿನ್ನ ರಾಮರಾಜ್ಯದ
ಬೀದಿ ಬೀದಿಗೂ ರಕ್ಷಣೆಯ ಪರದೆ ಕಟ್ಟಿ ಹೇಳು
ನಿನ್ನ ವಾರಸುದಾರರಿಗೆ
ನನ್ನ ನಾಲಿಗೆ ಕತ್ತರಿಸಿದ
ಆ ಹರಿತವಾದ ಚಾಕುವಿಗೆ ನಾನು ಮುತ್ತಿಕ್ಕಬೇಕೆಂದು.|
ನ್ಯಾಯದ ಮನೆಯೋಳಗೆ
ಮೌನದ ಮನಗಳಿವೆ ರಾಮ.
ನನ್ನೊಡಲಿಗೆ ಬೆಂಕಿಯಿಟ್ಟು ಚಳಿ ಕಾಯಿಸಿಕೊಂಡವರಿಗೂ
ತಣ್ಣೀರ ಎರೆಚಿದೆ.
ನನ್ನೊಡಲ ಬೆಂಕಿಗೆ ನೀ ಬೇಯಲಿಲ್ಲ
ಕಣ್ಣೀರೂ ಇಡಲಿಲ್ಲ, ಮರುಗಲಿಲ್ಲ.
ಕಣ್ಮುಂದೆ ಕಾಡುವ ಪ್ರಶ್ನೆಗಳಿಗೆ ಉತ್ತರಿಸದೆ ತತ್ತರಿಸವ ನಿನ್ನ
ಪುರಿಷೋತ್ತಮನರಂದು ಹೇಗೆ ಕರಿಯಲಿ ಹೇಳು ರಾಮ.
ನಿನ್ನಿಂದಲೆ ಸೃಷ್ಟಿಸಲ್ಪಟ್ಟ
ನಿನ್ನ ರಾಜ್ಯದಲ್ಲಿ ನ್ಯಾಯಕ್ಕೆ ನೆಲೆಯಿಲ್ಲ
ನ್ಯಾಯಕ್ಕೂ ಉಸಿರುಗಟ್ಟಿಸುವ
ವಿಷದ ಕುಡಿಗಳನ್ನೆ ಬಿತ್ತುತ್ತಿರುವ
ಬೀಜಗಳಿಗೂ ನಿನ್ನದೆ ಬ್ರಾಂಡ್
"ರಾಮ್ ಕೆ ನಾಮ್ ಸಬ್ ನಿರ್ನಾಮ್"
- ಪ್ರಿಯಾಂಕ ಮಾವಿನಕರ್.
ಚಿತ್ರಕಲೆ : ಹರ್ಷ ನರೇಂದ್ರ ಸರ್ಜಾಪುರ.
ಗಜಲ್
ನೀವು ಕಂಡ ಕನಸಿನ ಭಾರತ ರಾಮರಾಜ್ಯ ಆಗಲಿಲ್ಲ ಗಾಂಧೀಜಿ
ದುಷ್ಟ ಮೃಗಗಳಿಗಿಂತ ಭಯಂಕರ ಜನರಿದ್ದಾರಲ್ಲ ಗಾಂಧೀಜಿ
ಅತ್ಯಾಚಾರಿಗಳ ಅಟ್ಟಹಾಸಕ್ಕೆ ಕೊನೆ ಯಾವಾಗ
ಅಮಾಯಕ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರಲ್ಲ ಗಾಂಧೀಜಿ
ಕಾಮುಕರ ರುಂಡ ಚಂಡಾಡಲು
ರಣಚಂಡಿ ಆಗು ನೀನು
ನೊಂದ ಮಹಿಳೆಗೆ ನ್ಯಾಯ ಸಿಗುತ್ತಿಲ್ಲ ಗಾಂಧೀಜಿ
ಸಂತ್ರಸ್ತೆ ನ್ಯಾಯಕ್ಕಾಗಿ ಕೋರ್ಟು-ಕಚೇರಿ ಅಲಿಯುತ್ತಿದ್ದಾಳೆ
ಹಣವಂತರ ಕಾರುಬಾರು ನಡೆಯುತ್ತಿದೆಯಲ್ಲ ಗಾಂಧೀಜಿ
ದೇಶದ ಭವಿಷ್ಯ ಯುವಜನತೆಯ ಕೈಯಲ್ಲಿದೆ
ವಿಜ್ಞಾನ ಮುಂದುವರೆದರು ಅಜ್ಞಾನಿಗಳಂತೆ ವರ್ತಿಸುತ್ತಿದ್ದಾರಲ್ಲ ಗಾಂಧೀಜಿ
- ಡಾ. ಗೌತಮ್ ಬಕ್ಕಪ್ಪ
ಚುಕ್ಕಿ ಚಿತ್ರ : ವೀರಣ್ಣ ಗೌಡ ಪಾಟೀಲ್ ಹಾವೇರಿ.
ಜೀವನ ಜಟಕಾ ಗಾಡಿ
ಜಟಕಾ ಗಾಡಿಯ ಜೀವನ
ಮೇಲೆ ಕೆಳಗೆ ಪಯಣ
ಏಳು ಬೀಳುಗಳ ತಾಣ
ಅಳುಕದೆ ಹೋದವನೆ ಜಾಣ|
ಬಡಕಲು ಕುದುರೆಗಳಾದರೇನು?
ತೇಲ ಲೇಪಿಸಿದ ಗಾಲಿಗಳಿಹವು
ಮೇಲೆ ಮಹಲ್ ಇರದರೇನಾಯಿತು?
ಒಳಗೆ ಕೂರಲು ತಾಣವಿಹುದು|
ಬೀಗದಿರು ಸಕಲವೂ ಇದೆಯೆನಲೂ
ಬಿರುಸಾಗಿ ಓಡಿಸದಿರು ಗಾಡಿಯನು
ಗಾಲಿಯ ಕೀಲು ಹರದೀತು
ಒಳಗೆ ತೋಪು ಹಿಡಿದ ಕೀಲುಗಳಿವು|
ಸಾವಕಾಶವಾಗಿ ಸಾಗಿದರೇನು ?
ಸೇರಿದರಾಯಿತು ಆ ನೆನಪಿನ ಜಾಗವ
ಮರೆಯದಿರು ಕಾಡಿನ ಹಾದಿಯಿದು
ಪಯಣಿಗನ ಅವಸರದಲಿ
ತಾರದಿರು ಲಯ ಕುದುರೆಯ ಜೀವನಕೆ|
ಬರೀ ಗಾಡಿ ಸಾಲದು
ಜೀವಕೆ ಬೇಕು ಸರಿಗಮ
ಅರಿತುಕೋ ಬಾಳಲಿ ಜೀವಿಸುವ ಜಟಕಾ ಗಾಡಿಯ ಜೀವನ.
- ವೀರಂತರೆಡ್ಡಿ ಜಂಪಾ
. ಹುಮನಾಬಾದ
ಬಾಳೊಂದು ಬಣ್ಣದ ಬುಗುರಿ
ಜೀವಿಸುವ ಪ್ರತಿಯೊಂದು ಕ್ಷಣಗಳು ಸದಾ ಜೀವಂತವಾಗಿರಲಿ
ಭೋಗಿಸುವ ಪ್ರತಿಯೊಂದು ಭಾವನೆಯು ಭಾವುಕವಾಗಿರಲಿ
ಕಾರಣ ಜೀವನವು ನಮ್ಮ ಆಶೆ ಕನಸುಗಳನ್ನು ಹೊತ್ತ ಬೃಹತ್ ಬಂಡಿಯೂ|
ಎಲ್ಲರೂ ಹೇಳುವ ಹಾಗೆ ಜೀವನ ನಾನೂ ಅಂದುಕೊಂಡಂತೆ ನಡೀತಿಲ್ಲವೆಂದು,
ಒಂದು ಮಾತು ಜೀವನ ನಡೆಸಿದಂತೆ ನಡೆಯುವ ಒಬ್ಬ ವ್ಯಕ್ತಿಯು ನಮ್ಮಲ್ಲಿ ಕಾಣಸಿಗುವದಿಲ್ಲ,,
ಜೀವನ ನಮಗೆಲ್ಲವನ್ನು ಕೊಟ್ಟಿದೆ ಆದರೆ ಅದನ್ನು ನಾವು ಸರಿಯಾಗಿ ಬಳಸಿಕೊಳ್ಳುತ್ತಿಲ್ಲವಷ್ಟೆ.|
ಕತ್ತಲೆಯಲ್ಲಿ ಬೆಳಕನ್ನು ಅರಸಿ ಹೋಗುವ ಹಾಗೆ
ನೋವಿರುವ ಮನಸು
ಸಂತೋಷ ಹುಡುಕುವ ಹಾಗೆ
ಕಷ್ಟಗಳಿರುವ ಬದುಕಲ್ಲಿ
ಸಂತೋಷವನ್ನೇಕೆ ಅರಸಿ ಹೋಗುವದಿಲ್ಲ.|
ದೃಷ್ಟಿಯಂತೆ ಸೃಷ್ಟಿ ಎಂಬಂತೆ ನಾವು ಜೀವನವನ್ನು ಸುಂದರವಾಗಿ ನೋಡಿದರೆ ಮಾತ್ರ ಬದುಕು ನಮ್ಮನ್ನು ಸುಂದರವಾಗಿ ನೋಡುತ್ತೆ
ಜೀವನ ಸುಂದರ ಮಾಯವಾದದ್ದು ಅದಕ್ಕೆ ತಿಳಿದವರು ಹೇಳಿದ್ದು ಜೀವನ ಬಣ್ಣದ ಬುಗುರಿಯಂತೇ ಎಂದು ಸತ್ಯವಾದ ಮಾತು.|
- ಸಿದ್ದು ಆರ್ ಕೆ ಬೆಳಗಾವಿ.
ಪ್ರೀತಿಯ ಸ್ಪಂದನೆ
ಕರೆದೇ ಹೆಸರನೂ....ಮೌನದಿ ನಿಂತಿಹನು...
ಬರೆದೇ ಹೆಸರನೂ... ಹೃದಯದಿ ಬರೆದಿಹೆನು...
ಸುರಿದೇ ನನ್ನ ಮನದ ಮೇಲೆ….. ಸುರಿಮಳೆಯಂತೆ ...
ಮೆಲ್ಲನೆ ನಡೆದಿಹೆ ನಾ ನಿನ್ನ ಬಳಿಗೆ.... ನನ್ನ ಕನಸಿನಲ್ಲಿ ನಾನು (ಕರೆದೇ)
ಕದ್ದು ಮುಚ್ಚಿ ನೋಡಲು ನಾ,
ಲೋಕವನೇ ಮರೆತಿರುವೆ
ಮೌನವಾಗಿ ಮನಸೇಳೆದು ಏಕೋ ಹೀಗೆ ಕಾಡಿರುವೇ?
ನಡೆವೆ ಜೊತೆಯಲ್ಲಿ..ನನ್ನಯಾ ಕನಸಲ್ಲಿ
ಕಾಡುವೆ ಮನದಲಿ... ನಿನ್ನದೇ ನೆನಪಲ್ಲಿ
ನಿನ್ನ ಮೋಡಿ ಅಲೆಯಲಿ ನಾಚಿ ನಿಂತಿಹೆ
ಪ್ರಣಯದ ಸಂವೇದ..
ಮತ್ತೆ ಮತ್ತೆ ಕಾಡಲು ನೀ..
ಮನವು ನಾಚಿ ಹಾಡುತ್ತಿದೆ..
ಹಾಡಿದಂತೆ ಗಾನವಾ ನಾ
ತಂಪು ಗಾಳಿಯು ಬೀಸುತ್ತಿದೆ ಪ್ರೀತಿಯಾ ಸ್ಪಂದನೆ
ವಿರಹಾ ವೇದನೆ
ಮಿಡಿಯುವಾ ತನುಮನ ಸೆಳೆಯುವೇ ಅನುದಿನ
ನನ್ನ ರಾಗ ತಾಳದಲ್ಲಿ ಮಧುರ ಗೀತೆಯಲಿ
ಪ್ರೇಮದ ಸಂಗೀತಾ
- ಸಪ್ನ ದಿನಕರ್
ನಮ್ಮ ಹಿರಿಯರು
ಹುಡುಗಾಟದಿಂದ ಇದ್ದೆ
ಎಲ್ಲರನ್ನು ಹಿಯಾಳಿಸುತ್ತಿದ್ದೆ
ನೋವ ಕೊಟ್ಟು ಅಳಿಸುತ್ತಿದ್ದೆ
ಹಿರಿಯರ ಮಾತಿಂದ ಎಲ್ಲವನ್ನು
ಬಿಟ್ಟು ಒಳ್ಳೆಯವನಾದೆ..!!
ದೇವರ ಹಾಗೆ ಕಾಣುವರು
ಸಲಹೆಗಳ ನೀಡುತಿರುವರು
ಒಳ್ಳೆಯ ವಿಚಾರಗಳನ್ನ ಹೇಳುತ್ತಿದ್ದರು
ಒಳ್ಳೆರಾಗಿಎಂದೆನ್ನುವರು ನಮ್ಮ ಹಿರಿಯರು....!!
ತಾತ ಹೇಳಿದ ಕಥೆ ಉಂಟು
ಅಜ್ಜಿ ಹೇಳಿದಳು ಒಂದು ಗುಟ್ಟು
ಇದು ದೇವರು ಹಾಕಿದ ಅಂಟು
ನಮ್ಮ ಹಿರಿಯರ ಸಂಬಂಧದ ನಂಟು..!!
ಹೇ ಅವಿವೇಕಿ ಅಂತ ಬೈಯುವರು
ನಾನು ತಲೆಕೆಡಿಸಿಕೊಳ್ಳದೆ
ಹೇ ಇವರ್ಯಾರು ಒಳ್ಳೇದನ್ನ ಹೇಳುವರವರು
ನಮ್ಮ ಪ್ರೀತಿಯ ಹಿರಿಯರು...!!
ವಿಚಾರ ಎಂದರೆ ಆಟಪಾಠ ಅಲ್ಲ
ಒಳ್ಳೆಯ ಗುಣ ಇದ್ದರೆ
ಏನು ಬೇಕಾದ್ರೂ ಗೆಲ್ಲಲು ಅಸಾಧ್ಯವಲ್ಲ
ನಮ್ಮ ಹಿರಿಯರ ಮಾತು ಎಂದು ಸುಳಲ್ಲ...!!
- ವಿಕಾಸ್ ವಿಷ್ಣು ರಂಗಭೂಮಿ ಕಲಾವಿದರು.
ನಮ್ಮ ಸ್ನೇಹ ಲೋಕ
ಬಾಳಿನ ಪ್ರತಿ ಹಂತ ಹಂತಗಳಲ್ಲೂ ಸಮಕಾಲಿನ
ಸಹಪಾಠಿಗಳ ಜೊತೆ ಒಂದಾಗಿ ಕಲೆತು ಬೆರೆಯುವ
ಮನುಜ ಸಹಕಾರ ಸಹಚಿಂತನೆ ಸಮನ್ವತೆಯ
ಸ್ನೇಹತ್ವದ ಹರಿಕಾರನ ಅಮೂಲ್ಯ ಸ್ನೇಹಲೋಕ|
ಕಲಿಕೆ ವೃತ್ತಿ ಪ್ರವೃತ್ತಿಗಳ ಸಹಚರರ ಜೊತೆಯಾಗಿ
ಊರು ನೆರೆಕೆರೆ ಪರಿಸರದ ಸಂಯೋಗದ ಸಹವರ್ತಿ
ಮಾನವೀಯ ಧರ್ಮದ ಹುಟ್ಟುಗುಣಗಳ ಪ್ರವರ್ತಕ
ಸಹಮತ ಹೊಂದಾಣಿಕೆಯ ಬೆಸುಗೆಯ ಸ್ನೇಹಪರ್ವ|
ಕೃತ, ತ್ರೇತಾ, ದ್ವಾಪರ ಯುಗಾಂತರದ ಕಲಿಯುಗದಲ್ಲಿ
ಅಂತರ ನಿರಂತರ ಕಲಿಕೆಯ ಸೋಪಾನದ ಮೋಜು
ಗೌಜಿನ ಭಾವ ಪರಿಕಲ್ಪನೆಯ ವಿಶೃತ ರಾಗತಾಳದ
ಅಭೂತಪೂರ್ವ ಸಾಹಿತ್ಯದಲ್ಲಿ ನಮ್ಮ ಸ್ನೇಹಲೋಕ|
- ಪೊಡನೋಲನ ಈಶ್ವರ ತಮ್ಮಯ್ಯ ಬೆಂಗಳೂರು.
ಚಿತ್ರ ಕಲೆ : ಹರ್ಷ ನರೇಂದ್ರ ಸರ್ಜಾಪುರ
ಚಿತ್ರಕಲೆ : ಮೀನಾಕ್ಷಿ ರಾಜಣ್ಣ, ರಾಮಸಂದ್ರ.
ನಾ ಕಂಡ ಅಂಬೇಡ್ಕರ್
ಎಪ್ರಿಲ್ ಹದಿನಾಲ್ಕು, ಅಂಬೇವಾಡ!
ಸೈನ್ಯದ ತುಕಡಿಯಲ್ಲಿ ಉದ್ಬವಿಸಿತು
ಭಾರತ ರತ್ನ .ಅದೇ ನೀಲಿ ನಕ್ಷತ್ರ !
ಅಸ್ಪೃಶ್ಯತೆ , ಬಹಿಷ್ಕರಣೆ ಎಂಬ
ಪಿಡುಗುಗಳು ಆಗಿದವು ನೀಲಿ
ಬಾನಿನಲ್ಲಿ ಮೋಡಗಳು
ಜಗ್ಗದೆ ಬೆಳಗಿತು, ಪದವಿಯ ಪಡೆಯಿತು
ಆ ನೀಲಿ ನಕ್ಷತ್ರ!
ಒಮ್ಮೆ ತಲುಪಿತು ತೇಜೋ ಕಿರಣ
ಚೌಡಾರ್ ಕೆರೆಯ ಮೇಲೆ!
ಮಾಯವಾಯಿತು ಅಸ್ಪೃಶ್ಯತೆಯೆಂಬ
ಮೈಲಿಗೆ, ಸೂತಕದ ನೆರಳು!
ಸುಟಲ್ಪಟ್ಟಿತು ಕೇಸರಿ ಮನೆಯ
ಕಲ್ಪಿತ ಕಾನೂನು ತೇಜೊಕಿರಣದಿಂದ
ಆ ಕಿರಣ ಬಂದದ್ದು ಈ ನೀಲಿ ನಕ್ಷತ್ರದಿಂದ.
ಸಂವಿಧಾನ ವೆಂಬ ಗಿಡ
ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಗಳೆಂಬ
ಮೂಲ ಬೇರುಗಳು !
ಕ್ರಾಂತಿಯೆಂಬ ಚಿಗುರುನಲ್ಲಿ
ರಾಜಕೀಯ, ಸಾಮಾಜಿಕ, ಆರ್ಥಿಕ
ಪ್ರಜಾಪ್ರಭುತ್ವ ವೆಂಬ ಪುಷ್ಪಗಳು
ಆ ಗಿಡದ ಸೃಷ್ಟಿ ಈ ನೀಲಿ ನಕ್ಷತ್ರ.
ತಿಳಿ ಆಕಾಶದಿಂದ ಬೀಳುತಿತ್ತು
ನೀಲಿ ಚುಕ್ಕಿ! ಸಮಾನತೆ ಚಿಗುರು
ಸಾಧ್ಯವಾದರೆ ಬೆಳೆಸಿ ಸಾಕಾದರೇ ನಿಲ್ಲಿಸಿ
ಆದರೇ ನಾಶ ಮಾಡಬೇಡವೆಂಬ ಸಂದೇಶಹೊತ್ತು
- ಹರೀಶ ಪಿ ಎ ಪಾಳ್ಯಕೆರೆ.
ನಲ್ಲೇ ಎಲ್ಲಿರುವೆ……
ನೀ ನನ್ನ ಜೀವ ಕಾಯುತ್ತಿರುವೆ ಜನ್ಮ ಜನ್ಮದ ಅನುಬಂಧ, ನಿನ್ನಾಸೆ ಯ ಹೂವಾಗಿ ಅರಳಿ ಪರಿಮಳ ಸೂಸುವ ಸುಂದರ ಸವಿ ನೆನಪುಗಳ ಸರಮಾಲೆ|
ಭವದ ತಿಮಿರ ಕಳೆಬಾನು ಆಕಾಶದ ನಕ್ಷತ್ರಗಳ ಮಿನುಗುವ ನಿನ್ನ ಉಸಿರು ಹಸಿರಲಿ ಸವಿಯೋಣ ಜನ್ಮಜನ್ಮದ ಅನುರಾಗ ಸಂಗಮ|
ಹುಣ್ಣಿಮೆಯ ಚಂದ್ರಮನ ಬೆಳಕಲ್ಲಿ ತುಂತುರು ಮಳೆಹನಿ ಇಬ್ಬರ ಮೀಲನ ಸನ್ನಿಹಿತ ಪ್ರೀತಿತುಂಬಿದ ನೋಟ ಆಸೆಯ ಕಂಗಳು ಪ್ರೀತಿಯ ಆಸರೆ.|.
ನಿಸರ್ಗ ನಿರ್ಮಿತ ಭೂರಮೆಯ ಸಿಂಗಾರ ಇಬ್ಬರ ಮಿಲನ ಸೃಷ್ಟಿಯ ನಿಯಮ ಜಗದ ಕಳೆ ಸವಿ-ಸವಿ-ನೆನಪು ಸುಂದರ ಬದುಕು..|
ನೀನಿಲ್ಲದೆ ನಾನಿರಲಾರೆ ನಿನಗಾಗಿ ಕಾಯುತ್ತಿರುವೆ ಹಗಲಿರುಳು ಆಕಾಶದ ನಕ್ಷತ್ರಗಳಂತೆ ಆಕಾಶದ ಅನುರಾಗದಲ್ಲಿ ಸೇರಿಸೋ ಒಲವೇ ಬಾಳಬಂಗಾರ ಜೀವನದ ಬಾಳ ಬುತ್ತಿಯಲಿ ಪ್ರೀತಿಯ ಪ್ರೇಮ ಸ್ವರ...|
- ಶ್ರೀಮತಿ ಕುಸುಮಾ ಹತ್ಯಾಳ ಬೀದರ್
ಕನಸುಗಾರ
ಬಯಲು ನಾಡಿನ ಕಲ್ಲು ಮುಳ್ಳುಗಳ
ನಡುವೆ ಅಲೆ ಅಲೆಯಾಗಿ ಹರಿಯುವ
ನಾಡಿನ ಚಂದ್ರ ವಿದ್ಯಾರ್ಥಿಗಳ
ಪಾಲಿಗೆ ಗುರುವಾದರೆ
ಅಭಿಮಾನಿಗಳ ಪಾಲಿಗೆ ಚಂದ್ರಶೇಖರ.
ಗಡಿನಾಡ ಕನ್ನಡಿಗರ ಮನ ಮಿಡಿಯುವ
ಹೃದಯವಂತ.
ಕನ್ನಡಮ್ಮನ ಮುದ್ದಿನ ಕುವರನಾಗಿ
ಕನ್ನಡವೇ ಉಸಿರು, ಕನ್ನಡವೇ ಹಸಿರು ಎಂದ
ಗಡಿನಾಡಿನ ಕನಸುಗಾರ.
ಸರಕಾರ ಮಾಡಬೇಕಾಗಿದೆ
ಗಡಿನಾಡು ಕನ್ನಡಿಗರ
ಸಮಸ್ಯೆಗಳ ಪರಿಹಾರಕೆ
ಕನ್ನಡವೇ ದೇವರು ಕನ್ನಡವೇ ಹೃದಯವು
ಎಂದ ಗಡಿನಾಡಿನ ಕನ್ನಡಿಗರು.
ಮರಾಠಿಗರ ಸರಕಾರದ
ನಡುವೆ ಹೋರಾಟ ಮಾಡುವ ಗಡಿನಾಡಿನ
ಕನ್ನಡಿಗರು. ಗಡಿನಾಡಿನ ಚಂದ್ರನಂಥವವರು
ನೂರು ಸಾವಿರಾರು ಹೋರಾಟಗಾರರು
ಹುಟ್ಟಿ ಬರಲಿ.
- ದಯಾನಂದ್ ಪಾಟೀಲ ಅಧ್ಯಕ್ಷರು
ಮಹಾರಾಷ್ಟ್ರ ಹಣತೆ ಕವಿ ಬಳಗ
ಚುಟುಕು ಬರಹಗಳು
ಮನುಜನ ಒಳ್ಳೆ ಗುಣ
ಸಾಧಿಸುವ ಮುನ್ನ ಮಾತನಾಡಬೇಡ
ಸಾಧಿಸುವ ಹಠ ಬಿಡಬೇಡ
ಸಾಧಿಸಿದ ನಂತರ ಹೆಮ್ಮೆ ಪಡಬೇಡ
ಹೆಮ್ಮೆ ಪಟ್ಟರು ಇನ್ನೊಬ್ಬರನ್ನು ನೋಡಿ
ಹಗುರವಾಗಿ ಮಾತನಾಡಬೇಡ
ಇದೆ ಮನುಜನ ಒಳ್ಳೆ ಗುಣ
- ಶ್ರೀ.ಎಚ್.ವ್ಹಿ.ಈಟಿ
ಓ ದೇವರೇ
ನನ್ನಲ್ಲಿ....
ಅನ್ಯಾಯ ಅಳಿಸು
ನ್ಯಾಯ ಉಳಿಸು
ಅಸತ್ಯ ಅಳಿಸು
ಸತ್ಯ ಉಳಿಸು
ನಾನು ಅಳಿಸು
ನಾವು ಉಳಿಸು
- ಶ್ರೀ.ಎಚ್.ವ್ಹಿ.ಈಟಿ
ಬುಡ್ಡಿ
ಗಾಜಿನ ಸೀಸಾಯಿಗೊಂದು
ಸಾರಾಯಿ ಸೀಸಾಯಿ ಬಿರುಟಾಕಿ
ಲುಂಗಿಯ ಒಂದು ಎಳೆ ಬತ್ತಿಯಾಕಿ
ಕಗ್ಗತ್ತಿಲಿನ ಗುಡಿಸಿಲಿಗೆ ಬೆಳಕಾಯಿತು
ಅಜ್ಞಾನದ ಮನೆಗೆ ಜ್ಞಾನದ ಹಣತೆಯಾಗಿತು.
- ಹರೀಶಬಾಬು.ಬಿ ಬಿ. ಡಿ. ಹಳ್ಳಿ.
ಲೇಖನಿ
ಶಾಲೆಯೊಳಗೆ ಪ್ರವೇಶವಿಲ್ಲವೆಂದು ಸುಮ್ಮನೆ ಇರಲಿಲ್ಲ
ತಾನೊಬ್ಬ ಕೀಳುಜಾತಿಯವೆಂದು ಸಮಾಜಕ್ಕೆ ದೂರಗಲಿಲ್ಲ
ಲೆಡ್ಡು ಕಡ್ಡಿ ಹಿಡಿದು ಅಕ್ಷರ ಬರೆದು ವಿದ್ಯಾವೆಂಬ ಜ್ಞಾನ ಸಂಪಾದಿಸಿ
ಭಾರತದ ಇತಿಹಾಸದ ಪುಟಗಳಲ್ಲಿ ತನ್ನ ಜೀವನ ಚರಿತ್ರೆ ಸೃಷ್ಟಿಸಿದೆ.
- ಹರೀಶಬಾಬು.ಬಿ ಬಿ. ಡಿ. ಹಳ್ಳಿ.
ಸಾಹಿತ್ಯ ಸಂಚಯ
ಶರಣರ ಸೂಳ್ನುಡಿ
ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲ
ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲ
ನಾದವ ಮಾಡಿದ ರಾವಣಂಗೆ ಅರೆಯಾಯುಷವಾಯ್ತು
ವೇದವನೋದಿದ ಬ್ರಹ್ಮನ ಶಿರಹೋಯ್ತು
ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ!
ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡಲಿ ಬಡವನಯ್ಯ?
ಎನ್ನ ಕಾಲೇ ಕಂಬ ದೇಹವೆ ದೇಗುಲ
ಶಿರವೇ ಹೊನ್ನ ಕಳಸವಯ್ಯ!
ಕೂಡಲಸಂಗಮ ದೇವ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ!
ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ
ಅಂಬುಜಕೆ ಭಾನುವಿನ ಉದಯದ ಚಿಂತೆ
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ
ಎನಗೆ ಎನ್ನ ಕೂಡಲಸಂಗಮದೇವನ ನೆನೆವುದೆ ಚಿಂತೆ!
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ.
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ
ಪ್ರಾಚೀನ ಕವಿ ಪರಿಚಯ
ಪಂಪ
• ಪಂಪನ ಜನನ : ಕ್ರಿ.ಶ. ೯೦೨, ದುಂದುಭಿ ಸಂವತ್ಸರ
• ತಂದೆ : ಭೀಮಪ್ಪಯ್ಯ.
• ತಾಯಿ: ಅಬ್ಬಣಬ್ಬೆ (ಬೆಳ್ವೊಲದಣ್ಣಿಗೆರೆಯ ಜೋಯಿಸ ಸಿಂಘನಮೊಮ್ಮಗಳು)
• ಜನ್ಮಸ್ಥಳ : ವೆಂಗಿ ಪುಳುಪು, ವೆಂಗಿ ಮಂಡಳ (ಆಂಧ್ರ), ವೇಮಲವಾಡ,ರಾಜಮಂಡ್ರಿಜಿಲ್ಲೆ (ವೆಂಗಿಪಳು ಎಂಬ ಅಗ್ರಹಾರ)
• ಗುರು : ದೇವೇಂದ್ರಮುನಿ
• ವಿದ್ಯಾಭ್ಯಾಸ :ಗಣಿತ, ವ್ಯಾಕರಣ,ಅಲಂಕಾರ, ಸಂಗೀತ, ನಾಟ್ಯ, ಶಿಲ್ಪ, ವೈದ್ಯ, ವೇದಶಾಸ್ತ್ರವನ್ನು ಗುರುಕುಲದಲ್ಲಿ ಅಭ್ಯಾಸ ಮಾಡಿದ್ದನು. ದೇವೇಂದ್ರ ಮುನೀಂದ್ರಈತನ ಗುರುಗಳು.
ಸಾಹಿತ್ಯ ಕೃತಿಗಳು
• ಆದಿಪುರಾಣ-ಮೊದಲನೆಯ ತೀರ್ಥಂಕರನಾದ ಪುರದೇವ/ವೃಷಭದೇವನ ಬಗ್ಗೆ ರಚಿತವಾದ ಜೈನಕಾವ್ಯ. ಜಿನಸೇನಾಚಾರ್ಯರಸಂಸ್ಕೃತಕಾವ್ಯ ಪೂರ್ವಪುರಾಣ ಇದರ ಆಕರ ಗ್ರಂಥ. ಇದರಲ್ಲಿ ೧೬ಆಶ್ವಾಸಗಳು ಮತ್ತು ೧೫೫೫ ಪದ್ಯಗಳೂ ಇವೆ. ಇದರಲ್ಲಿ ಪ್ರಮುಖವಾಗಿ ಆದಿತೀರ್ಥಂಕರನಾದ ವೃಷಭದೇವ ಮತ್ತು ಅವನ ಮಕ್ಕಳಾದ ಭರತ ಮತ್ತು ಬಾಹುಬಲಿಗಳ ಪ್ರಸಂಗವು ಚಿತ್ರಿತವಾಗಿದೆ ಹಾಗೂ ಜೈನಧರ್ಮದ ವರ್ಣನೆಯ ಜೊತೆಗೆ ಸರ್ವಧರ್ಮದ ಸಮನ್ವಯವನ್ನು ಮೆರೆದಿದ್ದಾನೆ.
• ವಿಕ್ರಮಾರ್ಜುನ ವಿಜಯ - ಪಂಪಭಾರತವೆಂದೇ ಪ್ರಸಿದ್ಧಿ. ಇದರಲ್ಲಿವ್ಯಾಸರಚಿತವಾದ ಮಹಾಭಾರತವನ್ನು ಕನ್ನಡಕ್ಕೆ ತಂದ ಕೀರ್ತಿ ಪಂಪನಿಗೆ ಸಲ್ಲುತ್ತದೆ. ಪಂಪ ಭಾರತದಲ್ಲಿ ಅರ್ಜುನನನ್ನು ಪ್ರಧಾನ ಭೂಮಿಕೆಯಲ್ಲಿ ನಿಲ್ಲಿಸಿ ತನ್ನ ದೊರೆ ಅರಿಕೇಸರಿಗೆ ಹೋಲಿಸಿದ್ದಾನೆ. ಮಹಾಭಾರತದ ಕಾವ್ಯದ ವರ್ಣನೆಯ ಜೊತೆಗೆ ಪಂಪ ತನ್ನ ಕಾಲದ ಸಮಾಜದ ನಾಗರೀಕತೆ, ಸಂಪ್ರದಾಯ, ಸಂಸ್ಕೃತಿ ಹಾಗೂ ಜನ ಸಾಮನ್ಯರ ಜೀವನದ ಪೂರ್ಣ ಚಿತ್ರಣನೀಡಿದ್ದಾನೆ. ಅಂದಿನ ಕಾಲದ ಆಟಗಳು, ವಿದ್ಯಾಭ್ಯಾಸ ಪದ್ಧತಿ, ಜನರ ವಿಲಾಸಿಜೀವನ, ಪ್ರಕೃತಿ ಸೌಂದರ್ಯವನ್ನು ಸೊಗಸಾಗಿ ಚಿತ್ರಿಸಿದ್ದಾನೆ.
ಪ್ರಶಸ್ತಿ, ಪುರಸ್ಕಾರ, ಬಿರುದು:
• ಸಂಸಾರ ಸಾರೋದಯ, ಸರಸ್ವತೀ ಮಣಿಹಾರ, ಕವಿತಾಗುಣಾರ್ಣವ, ಆದಿಕವಿ, ಕನ್ನಡ ಕಾವ್ಯಗಳ ಜನಕ, ನಾಡೋಜ, ನೂತನ ಯುಗ ಪ್ರವರ್ತಕ.
• "ಏಂ ಕಲಿಯೋ, ಸತ್ಕವಿಯೋ ಕವಿತಾಗುಣಾರ್ಣಭವಂ"ಎಂದು ಪಂಪನನ್ನು ಹೊಗಳಿದ್ದಾರೆ. "ಪಸರಿಪ ಕನ್ನಡಕ್ಕೋರ್ವನೇ ಸತ್ಕವಿ ಪಂಪನಾವಗಂ" ಎಂದು ನಾಗರಾಜ ಕವಿಯು ಪಂಪನನ್ನು ಹೊಗಳಿದ್ದಾನೆ ಪ೦ಪ ಪ್ರಶಸ್ತಿ
ಕವಿ ಸಂದೇಶ:
• 'ಧರ್ಮಂ ಪ್ರಧಾನಂ ಅರ್ಥಂ ಧರ್ಮಾಂಘ್ರಿಪಫಳಂ ಅದರ್ಕ್ಕೆರಸಮದುಕಾಮಂ'- ಇದು ಪಂಪನ ಜೀವನ ದೃಷ್ಟಿ.
• ಪದ ವಿಭಾಗ: ಧರ್ಮಂ ಪ್ರಧಾನಂ, ಅರ್ಥಂ ಧರ್ಮ ಅಂಘ್ರಿಪ ಫಳಂ, ಅದರ್ಕ್ಕೆ ರಸಮದು ಕಾಮಂ
• ಅರ್ಥ:ಜೀವನಕ್ಕೆ ಮುಖ್ಯವಾದ ಧರ್ಮ, ಅರ್ಥ,ಕಾಮ, ಇವುಗಳಲ್ಲಿ ಧರ್ಮವು ಎಲ್ಲಕ್ಕೂ ಪ್ರಧಾನವು ಎಂದರೆ ಮುಖ್ಯವು, ಅರ್ಥವು ಎಂದರೆ ಸಂಪತ್ತು ಅಥವಾ ಧನವು, ಅದು ಧರ್ಮವೆಂಬ ಮರದ ಫಲವು/ ಹಣ್ಣು; ಆ ಫಲದ ರಸ ಅಥವಾ ಸಾರವೇ ಕಾಮವು ಎಂದರೆ ಅಗತ್ಯ ಬಯಕೆಗಳ ಈಡೇರಿಕೆ. ಧರ್ಮದಿಂದ ಬಯಕೆಗಳನ್ನು ಈಡೇರಿಸಿಕೊಳ್ಳಬೇಕು ಎಂಬುದು ಭಾವ.
ಬನವಾಸಿಯ ವರ್ಣನೆ:
• ಕವಿಯ ಭಾಷಾಶೈಲಿಯ ಪರಿಚಯಕ್ಕಾಗಿ ಕೆಲವು ಪದ್ಯಗಳನ್ನು ಕೊಟ್ಟಿದೆ. (ಶ್ರೀ.ಡಿ.ಎಲ್ ನರಸಿಂಹಾಚಾರ್ಯರು ಪಂಪಭಾರತ ದೀಪಿಕೆಯಲ್ಲಿ ಈ ಸಾಲುಗಳು ಭಾವಗೀತೆಯಂತಿದೆ ಎಂದಿದ್ದಾರೆ.)
• ಕನ್ನಡನಾಡಿನ ಬಗ್ಗೆ ಅಪಾರ ಹೆಮ್ಮೆಯಿಂದ ತನ್ನ ಕಾವ್ಯದಲ್ಲಿ ಹೊಗಳಿದ್ದಾನೆ.
ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತಜಾತಿ ಸಂ
ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಂ
ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋಳ್ಪೊಡಾವ ಬೆ
ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್|| ೪- ೨೮||
ಪದವಿಭಾಗ: ಸೊಗಸಾಗಿ ಬಂದ ಮಾಮರನೆ ತಲ್ತ ಎಲೆವಳ್ಳಿಯೆ ಪೂತಜಾತಿ ಸಂಪಗೆಯೆ ಕುಕಿಲ್ವ ಕೋಗಿಲೆಯೆ ಪಾಂಡುವ ತುಂಬಿಯೆ ನಲ್ಲರೊಳ್ ಮೊಗಂ ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋಳ್ಪೊಡೆ ಆವ ಬೆಟ್ಟುಗಳೊಳ ಮಾವ ನಂದನಂಗಳು ಒಳಂ ಬನವಾಸಿ ದೇಶದೊಳ್
ಪದ ಅನ್ವಯ:ಬನವಾಸಿ ದೇಶದೊಳ್ ಒಳಂ, ಆವ ಬೆಟ್ಟುಗಳ ಒಳಮ ಆವ ನಂದನಂಗಳು ಒಳಂ ನೋಳ್ಪೊಡೆ, ಸೊಗಸಾಗಿ ಬಂದ ಮಾಮರನೆ, ತಲ್ತ ಎಲೆವಳ್ಳಿಯೆ, ಪೂತಜಾತಿ ಸಂಪಗೆಯೆ, ಕುಕಿಲ್ವ ಕೋಗಿಲೆಯೆ, ಪಾಂಡುವ ತುಂಬಿಯೆ, ನಲ್ಲರೊಳ್ ಮೊಗಂ ನಗೆ ಮೊಗದೊಳ್ ಪಳಂಚಲೆಯೆ (ಪಳಂಚು:ತಾಗು, ಬಡಿ) ಕೂಡುವ ನಲ್ಲರೆ.
ಅರ್ಥ:
ಆ ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ ಉದ್ಯಾನವನಗಳಲ್ಲಿಯೂ ನೋಡುವುದಾದರೆ
ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಳೆಯದೆಲೆಯ
ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ,
ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪ್ರತಿಭಟಿಸಿ ಕೂಡುವ ನಲ್ಲರೇ.
ತ್ಯಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೪-೨೯||
ಪದ ವಿಭಾಗ:ತ್ಯಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನ ಇಂಪುಗಳ್ಗೆ ಆಗರವಾದ ಮಾನಸರೆ ಮಾನಸರು; ಅಂತವರಾಗಿ ಪುಟ್ಟಲು ಏನಾಗಿಯುಂ ಏನೊ ತೀರ್ದಪುದೆ? ತೀರದೊಡಂ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್
ಪದ-ಅನ್ವಯನುಸಾರ: ವನವಾಸಿ ದೇಶದೊಳ್ ತ್ಯಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನ ಇಂಪುಗಳ್ಗೆ ಆಗರವಾದ ಮಾನಸರೆ ಮಾನಸರು; ಅಂತವರಾಗಿ ಪುಟ್ಟಲು ಏನಾಗಿಯುಂ ಏನೊ ತೀರ್ದಪುದೆ? ತೀರದೊಡಂ; (ವನವಾಸಿ ದೇಶದೊಳ್) ನಂದನದೊಳ್ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು
• ಅರ್ಥ:
ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ
ಅರ್ಹರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು
ಏನಾದರೂ ತಾನೇ ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ
ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು.
ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆ ನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೪-೩೦||
ಪದವಿಭಾಗ:ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿ (ಗೇ)ಕೇಳ್ದೊಡಂ ಮಿಂಪನು ಆಳ್ದ ಗೇಯಂ ಕಿವಿ (ವೊ)ಹೊಕ್ಕೊಡಂ ಬಿರಿದ ಮಲ್ಲಿಗೆ (ಗ )ಕಂಡೊಡಂ ಆದ ಕೆಂದು ಅಲಂಪಂಗೆ ಎಡೆಗೊಂಡೊಡಂ ಮಧುಮಹೋತ್ಸವಂ ಆದೊಡಂ ಏನನೆಂಬೆನು ಆರಂಕುಸಂ (ವಿ)ಇಟ್ಟೊಡಂ ನೆನೆವುದು ಎನ್ನ ಮನಂ ವನವಾಸಿ ದೇಶಮಂ.
ಪದ-ಅನ್ವಯನುಸಾರ: ತೆಂಕಣಗಾಳಿ ಸೋಂಕಿದೊಡಂ, ಒಳ್ನುಡಿ (ಗೇ)ಕೇಳ್ದೊಡಂ, (ಮಿ) ಇಂಪನು ಆಳ್ದ ಗೇಯಂ ಕಿವಿ (ವೊ)ಹೊಕ್ಕೊಡಂ, ಬಿರಿದ ಮಲ್ಲಿಗೆ (ಗ )ಕಂಡೊಡಂ, ಆದ ಕೆಂದು (ನಿದ್ದೆ) ಅಲಂಪಂಗೆ (ಸುಖ) ಎಡೆಗೊಂಡೊಡಂ (ಆದರೂ) ಮಧುಮಹೋತ್ಸವಂ ಆದೊಡಂ, ಏನನೆಂಬೆನು ಆರುಂ ಅಂಕುಸಂ (ಅಂಕುಶ)(ವಿ)ಇಟ್ಟೊಡಂ ನೆನೆವುದು ಎನ್ನ ಮನಂ ವನವಾಸಿ ದೇಶಮಂ.
*ಅರ್ಥ:
ಅತಿಸುಖಹೇತುಗಳಾದ) ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ, ಒಳ್ಳೆಯ ಮಾತನ್ನು ಕೇಳಿದರೂ,
ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ, ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ,
ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ, ವಸಂತೋತ್ಸವ ಪ್ರಾಪ್ತವಾದರೂ, ಏನು ಹೇಳಲಿ
(ಯಾರು ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ, ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುವುದು.
- ಅಂತರ್ಜಾಲ ಮಾಹಿತಿ
ಕವಿ ವಾಣಿ
ಅವ್ವ
ನನ್ನವ್ವ ಫಲವತ್ತಾದ ಕಪ್ಪು ನೆಲ ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ; ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ; ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ,
ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳ ಬಂದಿಯ ಗೆದ್ದು, ಹೆಂಟೆಗೊಂಡು ಮೊಗೆ ನೀರು ಹಿಗ್ಗಿ ; ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು, ಹೂವಲ್ಲಿ ಹೂವಾಗಿ, ಕಾಯಲ್ಲಿ ಕಾಯಾಗಿ ಹಸುರು ಗದ್ದೆಯ ನೋಡಿಕೊಂಡು, ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.
ಸತ್ತಳು ಈಕೆ : ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ? ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ? ಎಷ್ಟು ಸಲ ಈ ಮುದುಕಿ ಅತ್ತಳು ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ ; ಎಷ್ಟು ಸಲ ಹುಡುಕುತ್ತ ಊರೂರು ಅಲೆದಳು ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?
ಸತಿಸಾವಿತ್ರಿ, ಜಾನಕಿ, ಊರ್ಮಿಳೆಯಲ್ಲ ; ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ; ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ ; ದೇವರ ಪೂಜಿಸಲಿಲ್ಲ ; ಹರಿಕತೆ ಕೇಳಲಿಲ್ಲ; ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.
ಬನದ ಕರಡಿಯ ಹಾಗೆ ಚಿಕ್ಕಮಕ್ಕಳ ಹೊತ್ತು ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳುನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ;ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ. ಈಕೆ ಉರಿದೆದ್ದಾಳು ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ.
ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ ; ನನ್ನವ್ವ ಬದುಕಿದ್ದು ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ ; ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ ; ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.
ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು; ಹೆತ್ತದ್ದಕ್ಕೆ, ಸಾಕಿದ್ದಕ್ಕೆ : ಮಣ್ಣಲ್ಲಿ ಬದುಕಿ,ಮನೆಯಿಂದ ಹೊಲಕ್ಕೆ ಹೋದಂತೆ ತಣ್ಣಗೆ ಮಾತಾಡುತ್ತಲೇ ಹೊರಟು ಹೋದುದಕ್ಕೆ
- ಪಿ ಲಂಕೇಶ್
ಬೇಡದವರ ಸ್ವಪ್ನ
ಸೂರ್ಯ ನಿನ್ನ ಹನಿಯ ಬಿಂದು ಕಪ್ಪು ಮೋಡದೊಡಲ ಕಡಲು ದೋಣಿ ಹೊತ್ತು ಮುಂದೆ ಸಾಗಿ ಬಿರುಗಾಳಿಗಿಂದು ದೋಣಿ ಸಿಕ್ಕಿಕೊಂತಲ್ಲೋ ನಮ್ಮ ಬಾಬಾ ಸಾಹೇಬ॥
ಸ್ವಾಭಿಮಾನಿ ದೋಣಿ ಎನಲು ಧೀನನೆದೆಯ ಭಾಗ್ಯವಿಲ್ಲಿ ಮುಗಿಚಿಕೊಳುವ ಸ್ಥಿತಿಗೆ ಬಂತಲ್ಲೋ ನಮ್ಮ ಬಾಬಾ ಸಾಹೇಬ॥
ಬುದ್ಧ ಮತದ ಹಣತೆಯಾಗಿ ಧೀನರೆದೆಯ ಜ್ಯೋತಿಯಾಗಿ ನಡೆದು ಬಾಳಿರೆಂದೆ ನೀನು ನಮ್ಮ ಬಾಬಾ ಸಾಹೇಬ॥
ಬುದ್ಧ ಮತವ ನೆನೆಯಲಿಲ್ಲ ಧೀನರೊಡನೆ ನಡೆಯಲಿಲ್ಲ ದೋಣಿ ಮುಗಿಚಿಕೊಳುವ ಸ್ಥಿತಿಗೆ ತಂತಲ್ಲೋ ನಮ್ಮ ಬಾಬಾ ಸಾಹೇಬ॥
ಮಣ್ಣಿನೊಡಲ ಸೊತ್ತಿನವರು ಬೇಡದವರ ಸ್ವಪ್ನದವರು ಜಾತಿ ಕುಲವ ತೊರೆಯಿರಿ ಎಂದೆ ನೀನು ನಮ್ಮ ಬಾಬಾ ಸಾಹೇಬ॥
ಮಣ್ಣಿನೊಡಲ ಮಾತು ಉಂಟು ಬೇಡದವರ ಸ್ವಪ್ನಕುಂಟು ಜಾತಿ ಕುಲವ ತೊರೆಯದಾದರೋ ನಮ್ಮ ಬಾಬಾ ಸಾಹೇಬ॥
ಗುಡಿಸಲೊಡಲ ಕರುಳಿನವರು ಮುತ್ತಿನವರ ಸೊತ್ತಿನವರು ಕರುಳತನವ ಮರೆಯದಿರಿ ಎಂದೆ ನೀನು ನಮ್ಮ ಬಾಬಾ ಸಾಹೇಬ||
ಆತ್ಮಬಲದ ಶಕ್ತಿಯವರು ಮನುಜ ಮತದ ತತ್ವದವರು ದೈವಭಕ್ತಿ ಬಿಡಿರಿ ಎಂದೆ ನೀನು ನಮ್ಮ ಬಾಬಾ ಸಾಹೇಬ॥
ಆತ್ಮಬಲವು ಅರಿಯಲಿಲ್ಲ ದೈವ ಬಲವ ತೊರೆಯಲಿಲ್ಲ ಮನುಜ ಮತವು ಉಳಿಯದಾಗಿ ಗುಡಿಯ ಭಕ್ತಿ ಹರಸಿ ನಡೆದೆರಲ್ಲೋ ನಮ್ಮ ಬಾಬಾ ಸಾಹೇಬ॥
ಗೀತೆಯನೋದಿ ಗಲ್ಲಿಗೆಸೆದು ವೇದವನರಿತು ಬೀದಿಗೆಸೆದು ಪುರಾಣದಾಟದ ಗೋಣು ಮುರಿಯಿರಿ ಎಂದೆ ನೀನು ನಮ್ಮ ಬಾಬಾ ಸಾಹೇಬ॥
ಧಮ್ಮ ದಾರಿ ನಿಮ್ಮ ದಾರಿ ನನ್ನ ಮಾರ್ಗ ನಿಮ್ಮದೆಂದು ಧಮ್ಮ ರಥವ ಎಳೆದು ಸಾಗಿರಿಯೆಂದೆ ನೀನು ನಮ್ಮ ಬಾಬಾ ಸಾಹೇಬ॥
ಧಮ್ಮ ಮಾರ್ಗ ತೊರೆದು ನಿಂತು ನಿನ್ನ ಮಾರ್ಗದಲಿ ನಡೆಯದಾಗಿ ಧಮ್ಮ ರಥವು ನಿಂತು ಹೋಯ್ತಲ್ಲೋ ನಮ್ಮ ಬಾಬಾ ಸಾಹೇಬ ಧೀನನ ಬದುಕು ವಿಧಿಯ ಆಟವಾಯ್ತಲ್ಲೋ ನಮ್ಮ ಬಾಬಾ ಸಾಹೇಬ॥
- ಡಾ.ವಿ.ನಾಗರಾಜ ಕೋಲಾರ
ರಸಪ್ರಶ್ನೆಗಳು
೧) ಪಂಪನ ತಂದೆಯ ಹೇಸರೇನು ?
೨) ಬೋಮ್ಮಲಗುಡ್ಡ ಶಾಸನದ ಲಿಪಿಕಾರ ಯಾರು ?
೩) ಪಿ ಲಂಕೇಶರ ಆತ್ಮ ಕಥನದ ಹೆಸರು ?
೪) ವಿಕ್ರಮಾರ್ಜುನ ವಿಜಯ ಕೃತಿಯ ಕಥಾನಾಯಕ ಯಾರು ?
೫) ಬಸವಣ್ಣನವರು ತಮ್ಮ ವಚನದಲ್ಲಿ ಅಂಬುಜಕ್ಕೆ ಯಾವುದರ ಚಿಂತೆ ಎಂದು ಹೇಳಿದ್ದಾರೆ? ---------------------------------------------------------------------------------------------------------
ಮೇಲಿನ ಪ್ರಶ್ನೆಗಳಿಗೆ ಸರಿ ಉತ್ರಗಳನ್ನು ಮೊದಲು ಕಳುಹಿಸಿದ ಐದು ಜನರ ಹೆಸರುಗಳೊಂದಿಗೆ ಸರಿಯಾದ ಉತ್ತರಗಳನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. (ಸರಿ ಉತ್ತರಗಳನ್ನು ೯೪೪೮೨೪೧೪೫೦ ಸಂಖ್ಯೆಗೆ ವಾಟ್ಸಪ್ ಮಾಡಬೇಕು )
ರಸಪ್ರಶ್ನೆ ನಿರ್ವಹಣೆ : ಸುಮಿತ್ರ ಎನ್ ಕೋಲಾರ ------------------------------------------------------------------------------------------------------------------
ವಿಶೇಷ ಸೂಚನೆಗಳು :
• ಪತ್ರಿಕೆಯಲ್ಲಿ ಪ್ರಕಟವಾಗುವ ಬರಹಗಳಿಗೆ ಪತ್ರಿಕೆ ಹೊಣೆಯಲ್ಲ , ಪ್ರತಿ ಬರಹಕ್ಕೂ ಆಯಾ ಲೇಖಕರೇ ಹೊಣೆಯಾಗಿರುತ್ತಾರೆ.
• ನಮ್ಮ ಪತ್ರಿಕೆಯು ಉಚಿತ ಪತ್ರಿಕೆ ಆಗಿದ್ದು, ಕೇವಲ ಆನ್ ಲೈನ್ ಮಾತ್ರ ಪ್ರಕಟವಾಗುತ್ತದೆ.
• ಪ್ರತಿ ತಿಂಗಳ ೦೫ ಮತ್ತು ೨೦ ನೇ ದಿನಾಂಕಗಳಲ್ಲಿ ಪತ್ರಿಕೆ ಪ್ರಕಟವಾಗುವುದು.
------------------------------------------------------------------------------------------------------------------
ಪ್ರಕಟಣೆ : ವಾಟ್ಸಪ್ ಸಾಹಿತ್ಯ ಪತ್ರಿಕೆಯ ಮುಖಪುಟಕ್ಕಾಗಿ ತಾವೇ ಸೆರೆ ಹಿಡಿದ ಪ್ರಕೃತಿಯ , ಪ್ರಾಣಿ ಪಕ್ಷಿಗಳ, ಹಾಗೂ ಇತರೆ ಸುಂದರವಾದ, ಭಾವನಾತ್ಮಕವಾದ ಛಾಯಾಚಿತ್ರಗಳನ್ನು ಅಥವಾ ತಾವೇ ರಚಿಸಿರುವ ಚಿತ್ರಗಳನ್ನು ನಮಗೆ ಕಳುಹಿಸಬಹುದು...ಸೂಕ್ತವಾದ ಚಿತ್ರವನ್ನು ಸೂಕ್ತ ಸಮಯದಲ್ಲಿ ನಿಮ್ಮ ಹೆಸರಿನೊಂದಿಗೆ ಪತ್ರಿಕೆಯಲ್ಲ ಪ್ರಕಟಿಸಲಾಗುವುದು... ------------------------------------------------------------------------------------------------------------------ಪತ್ರಿಕೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಲಹೆ ಸೂಚನೆಗಳನ್ನು,ವಿಷಯ ವಿಮರ್ಶೆಯನ್ನು ಮುಕ್ತವಾಗಿ ನಮಗೆ ಬರೆಯಬಹುದು. ಅದನ್ನು ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ. ------------------------------------------------------------------------------------------------------------------
ಪ್ರಕಟಣೆ : ನಮ್ಮ ಪತ್ರಿಕೆಗೆ ಸಾಹಿತ್ಯ ಸೇವೆಗೆ ಮುಂದಾಗುವ ಸಂಪಾದರು ಬೇಕಾಗಿದ್ದಾರೆ.
ಆಸಕ್ತರು ಸಂಪಾದಕರನ್ನು ಸಂಪರ್ಕಿಸಿ. ------------------------------------------------------------------------------------------------------------------
ಪ್ರಕಟಣೆ
ವಿಚಾರ ಮಂಟಪ ಸಾಹಿತ್ಯ ಬಳಗವು ವೆಬಿನಾರ್ ಕಾರ್ಯಕ್ರಮಕ್ಕೆ ನಿಮ್ಮನ್ನು ಪ್ರೀತಿಯಿಂದ ಸ್ವಾಗತಿಸುತ್ತಿದೆ.
ವಿಷಯ : ಸ್ವಾತಂತ್ರ್ಯೋತ್ತರ ಕರ್ನಾಟಕ ಜಾನಪದ ಅಧ್ಯಯನಗಳು ಭಾಗ -೦೨
ಮಾತನಾಡುವವರು : ಡಾ. ಸುಮಂಗಲ ಅತ್ತಿಗೇರಿ, ಪೋಸ್ಟ್ ಡಾಕ್ಟರಲ್ ಫೆಲೋ, ಎಸ್ ಆರ್ ಜೆ ವ್ಹಿ ಮಹಾವಿದ್ಯಾಲಯ. ಶಿಗ್ಗಾಂವ.
ದಿನಾಂಕ : ೦೯/೧೦/೨೦೨೦ ಶುಕ್ರವಾರ. ಮಧ್ಯಾಹ್ನ ೦೩:೦೦ ಘಂಟೆಗೆ.
ಜೂಂ ಮೀಟಿಂಗ್ ನಲ್ಲಿ ( ಹೆಚ್ಚಿನ ವಿವರಗಳಿಗೆ ಸಂಪಾದಕರನ್ನು ಸಂಪರ್ಕಿಸಿ )
ಸರ್ವರಿಗೂ ಸುಸ್ವಾಗತ
ವಿಚಾರ ಮಂಟಪ ಸಾಹಿತ್ಯ ಬಳಗವೂ ಸರಣಿ ಆನ್ಲೈನ್ ವೆಬಿನಾರ್ಗಳನ್ನು ನಡೆಸುತ್ತಿದ್ದು, ಅದರ ಭಾಗವಾಗಿ ನಡೆಯಲಿರುವ “ಸ್ವಾತಂತ್ರ್ಯೋತ್ತರ ಕರ್ನಾಟಕ ಜಾನಪದ ಅಧ್ಯಯನಗಳು ಭಾಗ -೦೨” ಎಂಬ ವಿಷಯದ ಮೇಲಿನ ವಿಶೇಷ ವಿಬಿನಾರ್ಗೆ ಓದುಗರನ್ನು ನಮ್ಮ ಬಳಗದ ಪರವಾಗಿ ಪ್ರೀತಿಯಿಂದ ಆಮಂತ್ರಿಸುತ್ತಿದ್ದೇವೆ.
---------------------- -------------------------------------------------------------------------------------------
ಪ್ರಕಟಣೆ : ವಿಚಾರ ಮಂಟಪ ಸಾಹಿತ್ಯ ಪತ್ರಿಕೆ ಪ್ರಾರಂಭಿಕ ಕವಿ ಲೇಖಕ ವಿಮರ್ಶಕ ರನ್ನು ಪ್ರೂತ್ಸಾಹಿಸುವ ಹಾಗೂ ಮಾರ್ಗದರ್ಶನ ನೀಡುವ ಸದ್ದುದ್ದೇಶದಿಂದ ಆನ್ ಲೈನ್ ಪಾಕ್ಷಿಕ ಪತ್ರಿಕೆಯನ್ನು ಪ್ರಾರಂಭಿಸುತ್ತಿದ್ದೇವೆ.
ಕವಿತೆಗಳು, ಚುಟುಕು ಬರಹಗಳು, ನಗೆಹನಿಗಳು, ಲೇಖನಗಳು, ಪ್ರಭಂಧಗಳು, ವಿಮರ್ಶೆ, ಹಾಗೂ ಅನುಭವ ಕಥನಗಳು , ಚಿತ್ರಕಲೆ, ವೈಚಾರಿಕ ಬರಹಗಳು , ಪ್ರಚಲಿತ ಘಟನೆಗಳ ಕುರಿತಾದ ಪ್ರತಿಕ್ರಿಯೆಗಳನ್ನು ಹಾಗೂ ಇನ್ನಿತರೇ ಸೃಜನಾತ್ಮಕ ಬರಹಗಳನ್ನು ದೇಶದ ಯಾವುದೇ ಮೂಲೆಯಿಂದಲಾದರೂ ಬರೆದು ತಪ್ಪಿಲ್ಲದಂತೆ ಟೈಪಿಸಿ ನಮಗೆ ಕಳುಹಿಸಬಹುದು... ಸಂಪಾದಕ ಮಂಡಳಿಯಿಂದ ಮೆಚ್ಚುಗೆ ಪಡೆದ ಬರಹಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ. ಪ್ರತಿ ತಿಂಗಳ ೫ ಮತ್ತು ೨೦ ನೇ ದಿನಾಂಕಗಳಲ್ಲಿ ಪತ್ರಿಕೆ ಪಿ ಡಿ ಎಪ್ ರೂಪದಲ್ಲಿ ತಮ್ಮ ಕೈ ಸೇರುವುದು. ನಿಮ್ಮ ಬರಹಗಳು ೧ ಮತ್ತು ೧೫ ನೇ ತಾರೀಕಿನ ಒಳಗೆ ನಮಗೆ ತಲುಪಬೇಕು.
ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಹಾಗೂ ಹೆಚ್ಚಿನ ಮಾಹಿತಿಗೆ ನಮ್ಮನ್ನು ಸಂಪರ್ಕಿಸಿ :
ವರುಣ್‌ರಾಜ್ ಜೀ ಸಂಪಾದಕರು ವಿಚಾರ ಮಂಟಪ ಸಾಹಿತ್ರ ಪತ್ರಿಕೆ 9448241450. (ವಾಟ್ಸಪ್ ಸಂದೇಶ ಕಳುಹಿಸಿ ತಕ್ಷಣ ಪ್ರತಿಕ್ರಿಯೆ ಪಡೆಯಬಹುದು) ------------------------------------------------------------------------------------------------------------------ ಓದುಗ ಮಹಾಶಯರಿಗೆ ಅನಂತ ಧನ್ಯವಾದಗಳು ----------------------------------------------------------------------------------------------------------------
ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ಸಂಪಾದಕ ಮಂಡಳಿ.
ಲಕ್ಷ್ಮೀ ಕೆ ಬಿ
ಹರೀಶ ಪಿ ಎ - ೮೮೮೪೮೭೮೦೬೯
ರಾಜ್ ಕುಮಾರ್ ವಿ - ೯೦೭೧೧೪೬೪೨೧
ಮುತ್ಯಾಲಪ್ಪ ಎಂ ಎನ್ - ೯೧೪೧೮೦೭೦೪೩
ಧನಶೇಖರ ವಿ ಎನ್ – ೯೮೪೪೩೯೬೬೯೨
ಸುಮಿತ್ರ ಎನ್
ಮೀನಾಕ್ಷಿ ರಾಜಣ್ಣ
ಸುಧಾಮ ಎಸ್ - ೯೯೧೬೭೯೪೩೩೭
ವಿಘ್ನೇಶ್ ಎಂ – ೯೦೦೮೮೯೯೦೬೯
ಗಂಗಾಧರ ಎಂ ಎ – ೭೮೨೯೭೭೧೫೦೮
ಯಶ್ವಂತ್ ಪಾಲ್ ಎ ಎನ್ - ೮೧೨೩೩೬೩೦೨೮
ಮುನಿರಾಜು ಟಿ ವಿ – ೮೧೯೭೯೭೭೩೭೧
ಮಹೇಶ ಎ - ೯೯೧೬೪೧೬೮೮೨
ದೇವರಾಜ ಹೆಚ್ ಎಂ – ೯೮೮೦೫೯೬೨೮೦
ತೇಜಸ್ ಬಿ ಎಂ – ೯೭೪೩೦೫೮೬೫೯
ಹೇಮಂತ್ ಹೆಚ್ ಎಂ – ೮೯೫೧೬೪೧೭೫೭
ಪವಿ ವಿ
ರಾಜು ಎಂ - ೯೫೯೧೫೨೦೨೮೨

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ