ಮಂಗಳವಾರ, ಜೂನ್ 15, 2021

ವಿಚಾರ ಮಂಟಪ ಸಾಹಿತ್ಯ ಪತ್ರಿಕೆ ೦೫


 

               ಮುಖ ಪುಟದ ಚಿತ್ರಗಳು : ಮೀನಾಕ್ಷಿ ರಾಜಣ್ಣ.

ಸಂಪಾದಕರ ಮಾತು

ಓದುಗ ಮಿತ್ರರೆಲ್ಲರಿಗೂ ಪ್ರೀತಿಯ  ನಮಸ್ಕಾರಗಳು,

ವಿಚಾರ ಮಂಟಪ ಸಾಹಿತ್ಯ ಬಳಗದ  ಪಾಕ್ಷಿಕ ಸಾಹಿತ್ಯ ಪತ್ರಿಕೆಯ ೫  ನೇ ಸಂಚಿಕೆ ಇಂದು ಬಿಡುಗಡೆಯಾಗುತ್ತಿದೆ, ಪ್ರಾರಂಭಿಕ ಯುವ ಕವಿ ವಿಮರ್ಶಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಈ ಪತ್ರಿಕೆಯನ್ನು ಪ್ರಾರಂಭ ಮಾಡಿದ್ದೇವೆ. ಹಲವಾರು ಯುವ ಕವಿ ಮನಸ್ಸುಗಳಿಗೆ ತಮ್ಮ ಕಲೆಯನ್ನು ಅಭಿವ್ಯಕ್ತಿಸುವ ಒಂದು ಸ್ಥಳೀಯ ವೇದಿಕೆಯ ಅವಶ್ಯಕತೆ ಖಂಡಿತಾ ಇರುತ್ತದೆ. ಇಂತಹಾ ವೇದಿಕೆಯ ಮೂಲಕ ಹಲವರು ಹೊಸ ರೀತಿಯ ಬರಹಗಳ ಪ್ರಯೋಗಗಳನ್ನು ಮಾಡಬಹುದಾಗಿದೆ ಎಂಬುದು ನಮ್ಮ ನಂಬಿಕೆ. ಬೇರೆಯವರಿಗೆ ಅನುಕೂಲವಾಗುವ ಉದ್ದೇಶ ಒಂದು ಕಡೆಯಾದರೇ, ಕಲಿಯುವ ಅವಕಾಶಗಳನ್ನು ನಮಗೆ ನಾವೇ ಸೃಷ್ಟಿಸಿಕೊಳ್ಳುವ ಒಂದು ಸಣ್ಣ ಪ್ರಯತ್ನವಾಗಿಯೂ ಸಹಾ ಈ ಪತ್ರಿಕೆ ನಮಗೆ ಉಪಯೋಗಿ ಆಗಿದೆ.

ನಮ್ಮ ಪ್ರಯತ್ನಕ್ಕೆ ಫಲವಾಗಿ ಕರ್ನಾಟಕದ ನಾನಾ ಭಾಗಗಳಿಂದ ಹಲವಾರು ಯುವ ಕವಿಗಳು ಕವಿತೆ ಹಾಗೂ ಲೇಖನಗಳನ್ನು ಪ್ರಕಟಣೆಗಾಗಿ ಕಳುಹಿಸುತ್ತಿರುವುದು ತುಂಬಾ ಸಂತೋಷದ ವಿಚಾರ. ಹೆಚ್ಚು ಕವಿತೆಗಳು ಹಾಗೂ ಲೇಖನಗಳು ವಿಚಾರವಂತಿಕೆ, ಹೊಸ ಆಲೋಚನಾ ವಿಧಾನ, ವೈಜ್ಞಾನಿಕ ದೃಷ್ಟಿಕೋನ ದಿಂದ ಕೂಡಿದ್ದು ಇದು ನಮ್ಮ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿದೆ.  ನಮಗೆ ತಲುಪಿರುವ ಬರಹಗಳಲ್ಲಿ ಆಯ್ದ ಬರಹಗಳನ್ನು ಮಾತ್ರ ಈ ಸಂಚಿಕೆಯಲ್ಲಿ ಪ್ರಕಟಿಸಿದ್ದು, ಉಳಿದವನ್ನು ಸೂಕ್ತ ಬದಲಾವಣೆಗಳ ನಂತರ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು. ತಮ್ಮ ಬರಹಗಳನ್ನು ಕಳುಹಿಸಿಕೊಟ್ಟ ಎಲ್ಲಾ ಬರಹಗಾರರಿಗೆ ವಿಚಾರ ಮಂಟಪ ಬಳಗವು ಅಭಿನಂದನೆಗಳನ್ನು ಹಾಗೂ ಧನ್ಯವಾದಗಳನ್ನು ತಿಳಿಸುತ್ತದೆ.

ನಮ್ಮ ಪತ್ರಿಕೆಗೆ  ಓದುಗರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವರು ಮೆಸೇಜ್‌, ಕರೆಗಳ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ತಿಳಿಸಿದ್ದು ತುಂಬಾ ಸಂತೋಷದ ವಿಷಯವಾಗಿದೆ, ತಮ್ಮ ಸಹಕಾರ ಇದೇ ರೀತಿ ಮುಂದುವರೆಯಲಿ ಎಂದು ಆಶಿಸುತ್ತೇವೆ. ಯಾವುದೇ ರೀತಿಯ ಸಲಹೆ ಸೂಚನೆ ವಿಮರ್ಶೆಗಳಿಗೆ  ಸದಾ ಸ್ವಾಗತವನ್ನು ಕೊರುತ್ತೇವೆ.

ನಮ್ಮ ಪ್ರಯತ್ನಕ್ಕೆ ಸಹಕಾರಿಯಾಗಿರುವ ಗೌರವ ಸಲಹೆಗಾರರಾದ  ಡಾ. ದು ಸರಸ್ವತಿ , ಡಾ ಕೆ ವಿ ನೇತ್ರಾವತಿ, ಶ್ರೀ ದಯಾನಂದ ಪಾಟೀಲ್‌  ಸೇರಿದಂತೆ ಎಲ್ಲಾ ಗೌರವ ಸಲಹೆಗಾರರು ಹಾಗೂ ನಮ್ಮ ಜೊತೆ ಸಹಕರಿಸುತ್ತಿರುವ ಶ್ರೀ ಸಂಶೋಧನಾ ಮತ್ತು ಶಿಕ್ಷಣ ಸಂಸ್ಥೆ, ಎಸ್‌ ಎನ್‌ ಪ್ರಮೀಳಾದೇವಿ, ಮೀನಾಕ್ಷಿ ರಾಜಣ್ಣ ಮುಂತಾದವರಿಗೆ ನಮ್ಮ ಅನಂತ ಧನ್ಯವಾದಗಳು. ನಮ್ಮ ಪತ್ರಿಕೆಯನ್ನು ಹೆಚ್ಚು ಹೆಚ್ಚು ಜನರಿಗೆ ಹಂಚುವುದರ ಮೂಲಕ ನಮ್ಮ ಪ್ರಯತ್ನಕ್ಕೆ ಮತ್ತಷ್ಟು ಬೆಂಬಲ ನೀಡಬೇಕಾಗಿ ಕೊರುವೆ. ಅದೇ ರೀತಿ  ನಮ್ಮ ಬಳಗದ ವತಿಯಿಂದ ನಡೆಯುವ ವಿವಿಧ ರೀತಿಯ ವೆಬಿನಾರ್ಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದರೊಂದಿಗೆ ನಿಮಗೆ ತಿಳಿದವರನ್ನು ಸಹಾ ಭಾಗವಹಿಸಿ ಇವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರೋತ್ಸಾಹಿಸ ಬೇಕಾಗಿ ಓದುಗ ಮಿತ್ರರನ್ನು ಕೋರುತ್ತಾ… …..ಸಹಕರಿಸಿದ ಎಲ್ಲರಿಗೂ ಮತ್ತೊಮ್ಮೆ ಅನಂತ ಧನ್ಯವಾದಗಳನ್ನು ತಿಳಿಸುವೆ.

ನಮಸ್ಕಾರಗಳು

ವರುಣ್‌ರಾಜ್‌ ಜೀ                                                                                                                                              ಸಂಪಾದಕರು                                                                                                                                                              ವಿಚಾರ ಮಂಟಪ ಸಾಹಿತ್ಯ ಪತ್ರಿಕೆ                                                                                                                                               ಸಂ : 9448241450                                                                                                                                                            ಮಿಂಚಂಚೆ : maharishivarunrajji@gmail.com

ಪರಿವಿಡಿ

·         ಸಂಪಾದಕರ ಮಾತು

·         ಅರಿವಿನ ಪಯಣದ ವರದಿ.

·         ಲೇಖನ ಬರಹ.

·         ಬುದ್ಧನ ಶಾಂತಿಯ ಸಂದೇಶ

·         ಹೆಣ್ಣು, ಮದುವೆ ಮತ್ತು ವಲಸೆ

·         ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮಹಿಳೆಯರ ಪಾತ್ರ

·         ಕವಿತೆಗಳು

·         ತವರುಮನೆ

·         ರೈತಣ್ಣನಿಗೆ ನಮನ

·         ಅಮ್ಮನ ಪ್ರೀತಿ ಎಂದೆಂದಿಗೂ ಬದಲಾಗದು

·         ಗಝಲ್

·         ಸಾಧಕರ ಪರಿಚಯ

·         ಕಗ್ಗತ್ತಲಲ್ಲಿ ಮಿಂಚಿದ ಮಂಜಮ್ಮ ಜೋಗತಿ

·         ಗಡಿಭಾಗದ ಗ್ರಾಮೀಣ ಮಕ್ಕಳ ಅಶಾಕಿರಣ ಶ್ರೀ ಟ್ರಸ್ಟ್‌

·         ಸಾಧನೆಯ ಹಾದಿಯಲ್ಲಿ……… ರಾಜು ಎಸ್‌ ಸೂಲೇನಹಳ್ಳಿ

·         ಷಕೀಬ್‌ ಎಸ್‌ ಕಣದ್ಮನೆ ನವಿಲೇಹಾಳ್‌

·          ಪೋಟೋಗ್ರಫಿ

·         ಹನಿಗವನಗಳು

·         ಸಣ್ಣಕಥೆಗಳು

·         ಬಯಲಾದ ಮನೆಯ ಗುಟ್ಟು

·         ಬೀಷ್ಮಾಂತರಂಗ

·         ರಾಕ್ಷಸಮರ್ಧಿನಿ

·         ಸಾಹಿತ್ಯ ಸಂಚಯ

·         ಶರಣರ ಸೂಳ್ನುಡಿ

·         ಪ್ರಾಚೀನ ಕವಿ ಪರಿಚಯ : ಚಾವುಂಡರಾಯ

·         ಕವಿವಾಣಿ

·         ನೀವು ಮಾತನಾಡುತ್ತೀರಿ.

·         ಪ್ರಕಟಣೆಗಳು.

·         ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಬಿತ್ತಿ ಪತ್ರ

·         ಮುಕ್ತಾಯ

 

 

 

ಅರಿವಿನ ಪಯಣದ ವರದಿ

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ.

           

ಕೋಲಾರದ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ೩ ದಿನಗಳ ಅರಿವಿನ ಪಯಣ ಕಾರ್ಯಕ್ರಮವನ್ನು ಜಿಲ್ಲೆಯ ವಿವಿಧ ಕಲೇಜುಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ೧೬-೧೨-೨೦೨೦ ರಂದು ಮಾನಸ ಪದವಿ ಕಾಲೇಜು ಮಾಲೂರು ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಹಾಗೂ ೧೭-೧೨-೨೦೨೦ ರಂದು ಸರ್ಕಾರಿ ಪದವಿ ಕಾಲೇಜು ಮುಳಬಾಗಿಲಿನಲ್ಲಿ ಹಾಗೂ ೧೮-೧೨-೨೦೨೦ ರಂದು ಸರ್ಕಾರಿ ಪದವಿ ಕಾಲೇಜು ಬಂಗಾರಪೇಟೆ ಮತ್ತು ಕೆ ಜಿ ಎಪ್‌ ಕಾಲೇಜುಗಳಲ್ಲಿ ಅರಿವಿನ ಪಯಣ ನಡೆಯಿತು. ಇದಕ್ಕೆ ಸಂಭಂಧಿಸಿದ ಸಂಕ್ಷಿಪ್ತ ವರದಿ.

16-12-2020 ಮಾಲೂರಿನಲ್ಲಿ ಮಾನಸ ಪದವಿ ಕಾಲೇಜಿನಲ್ಲಿ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಅರಿವಿನ ಪಯಣ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಇಲ್ಲಿ ಕಾರ್ಯಕ್ರಮವು 11:20  ಶುರುವಾಯಿತು. ತರಗತಿಯಲ್ಲಿ ಒಟ್ಟು 40 ಜನ ವಿದ್ಯಾರ್ಥಿಗಳು ಇದ್ದರು .ಒಕ್ಕೂಟದ ಪರಿಚಯವನ್ನು ನೇತ್ರಾವತಿ ಮಾಡಿಕೊಟ್ಟರು. ಮಹಿಳಾಪರ ವಾದಂತಹ ಹಾಡುಗಳನ್ನು ಹಾಡುವುದರ ಮೂಲಕ ಅದನ್ನು ವಿವರಿಸುವಂತಹ ಮಾತುಗಳನ್ನು ಚಂದ್ರಶೇಖರ್ ಅವರು ಮಾತಾಡಿದರು. ನೀಲಿ ರಿಬ್ಬನ್ ನಾಟಕವನ್ನು ನೇತ್ರಾ ಅವರು ಮಾಡಿದರು .ನಾಟಕದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವು ತುಂಬಾ ಅರ್ಥಪೂರ್ಣವಾಗಿ ನಡೆಯಿತು.

ವಿದ್ಯಾರ್ಥಿಗಳು ಕೇಳಿದ ಬಣ್ಣ ,ಲಿಂಗ ತಾರತಮ್ಯ ,ಯಜಮಾನಿಕೆ, ಅತ್ಯಾಚಾರ ಕುರಿತಂತೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ನೇತ್ರಾ ತ್ರೇಜೋವತಮ್ಮ ಮತ್ತು ಸೌಮ್ಯ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದ್ದರು. ಕಾಲೇಜಿನ ಪ್ರಾಚಾರ್ಯರಾದ ಕೊಂಡಪ್ಪ ಅವರು, ಅಶ್ವತ್ತ ರೆಡ್ಡಿ ಅವರು ಅರಿವಿನ ಪಯಣದ ಪ್ರಾಮುಕ್ಯತೆಯನ್ನು ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದರು. ಕೊಂಡಪ್ಪ ಅವರು ಎಲ್ಲರಿಗೂ ವಂದಿಸಿದರು. ಅರಿವಿನ ಪಯಣದೊಂದಿಗೆ ಇವತ್ತು ಒಟ್ಟಿಗಿದ್ದರು - ನಳಿನಿ ಗೌಡ (ರೈತರ ಸಂಘಟನೆ ಕೋಲಾರ) ವೆಂಕಟರಾಜಮ್ಮ( ಚಿಗುರು ಸಂಸ್ಥೆ ಬಂಗಾರಪೇಟೆ) ಸೌಮ್ಯ ಮತ್ತು ವಿನೋದ (ವಿಮೋಚನ ಕೋಲಾರ) ತ್ರೇಜೋವತಮ್ಮ ( ವಿಜ್ಞಾನ ಶಿಕ್ಷಕಿ ಬಂಗಾರಪೇಟೆ)  ಪದ್ಮ(ಡ್ರೀಮ್ ಲೈಟ್ ಮಾಲೂರು)  ವೀಣಾ( ಹೊಂಬೆಳಕು ಮಾಲೂರು) ಅಶ್ವತ್ಥ ರೆಡ್ಡಿ( ಸಿ ಜಿ ಕೆ ಟ್ರಸ್ಟ್ ಮಾಲೂರು) ಚಂದ್ರಶೇಖರ ( ಬೇರು ಬೆವರು ಕಲಾ ಬಳಗ ಚಿಂತಾಮಣಿ) ನೇತ್ರಾ( ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಕೋಲಾರ).

17-12-2020 ಮುಳಬಾಗಿಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಅರಿವಿನ ಪಯಣ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮವು ಬೆಳಗ್ಗೆ 11:30 ರಿಂದ ಶುರುವಾಗಿ 1 ಗಂಟೆಯವರೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಒಟ್ಟು ನೂರಕ್ಕಿಂತ ಹೆಚ್ಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಸ್ವಾಗತವನ್ನು ಕಾಲೇಜಿನ ಪ್ರಾಚಾರ್ಯರಾಗಿರುವಂತಹ ಮುನಿವೆಂಕಟಪ್ಪ ಸರ್ ಅವರು ಮಾಡಿದರು.  ಒಕ್ಕೂಟದ ಪರಿಚಯವನ್ನು ನೇತ್ರ ಮಾಡಿಕೊಟ್ಟರು. ಮಹಿಳಾಪರವಾದ ಹಾಡುಗಳನ್ನು ಒಕ್ಕೂಟದ ಸಂಗಾತಿಗಳಾದ ಪದ್ಮ ,ವೀಣಾ ಲಕ್ಷ್ಮಿ ,ವಿನೋದ, ಸೌಮ್ಯ, ಸುಶೀಲಾ ಅವರು ಹಾಡಿದರು.

 ದುರ್ಗಾನಾಟಕವನ್ನು ವಿನೋದ ಅಭಿನಯಿಸಿದರು. ಮೊದಲ ಬಾರಿಗೆ ವಿನೋದ ಅಭಿನಯ ಮಾಡಿದರೂ ನಾಟಕ ತುಂಬಾ ಚನ್ನಾಗಿ ಬಂತು. ನೀಲಿ ರಿಬ್ಬನ್ ನಾಟಕವನ್ನು ನೇತ್ರಾ ಮಾಡಿದರು. ಲಿಂಗ ತಾರತಮ್ಯ ನೆಲೆಗಳ ಹುಟ್ಟು ಮತ್ತು ಪರಿಣಾಮಗಳ ಕುರಿತು ಅದೇ ಕಾಲೇಜಿನ ಉಪನ್ಯಾಸಕರಾದ ಶಿವರಾಮೇಗೌಡ ಸರ್ ಅವರು ತುಂಬಾ ಅರ್ಥಪೂರ್ಣವಾಗಿ ಮಾತಾಡಿದರು. ಲಿಂಗ ತಾರತಮ್ಯದ ವಿವಿಧ ನೆಲೆಗಳ ಕುರಿತು ನೇತ್ರಾ ಮಾತಾಡಿದರು....ತೂರಬೇಡಿ ಗಾಳಿಗೆ ಹೆಣ್ತನದ ಘನತೆಯ ಹಾಡು ಹೇಳುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯ ಮಾಡಿದೆವು....ಈ ದಿನ  ಒಕ್ಕೂಟದ ಅರಿವಿನ ಪಯಣದಲ್ಲಿ ಜೊತೆಗೆ ಇದ್ದವರು ನೇತ್ರಾ,ಸುಶೀಲ,ಪದ್ಮ,ವೀಣಾ,ಲಕ್ಷ್ಮೀ,ಸೌಮ್ಯ, ವಿನೋದ.

18-12-2020 ರಂದು ಕೆಜಿಎಫ್ ನ ಸರಕಾರಿ ಪದವಿ ಕಾಲೇಜಿನಲ್ಲಿ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಅರಿವಿನ ಪಯಣ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮವು ಮದ್ಯಾನ್ಹ 12 ಗಂಟೆಗೆ ಶುರುವಾಗಿ 2 ಗಂಟೆಯವರೆಗೂ ನಡೆಯಿತು. 50 ಜನ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಇದ್ದರು. ಕಾಲೇಜಿನ ಪ್ರಾಚಾರ್ಯರಾಗಿರುವ ಕೃಷ್ಣಮೂರ್ತಿ ಸರ್ ಅವರು ತುಂಬಾ ಪ್ರೀತಿಯಿಂದ ನಮ್ಮನ್ನು  ಬರಮಾಡಿಕೊಂಡರು. ಒಕ್ಕೂಟದ ಪರಿಚಯವನ್ನು ತ್ರೇಜೋವತಮ್ಮ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ನೇತ್ರಾ ಮಾಡಿದರು. ಮಹಿಳಾಪರವಾದ ಹಾಡುಗಳನ್ನು ಶಿಲ್ಪ, ವಿನೋದ,ತ್ರೇಜೋವತಮ್ಮ, ಲಕ್ಷ್ಮಿ, ಸೌಮ್ಯ , ನೇತ್ರಾ ಎಲ್ಲರೂ ಸೇರಿ ಹಾಡಿದರು.

ದುರ್ಗಾನಾಟಕವನ್ನು ತ್ರೇಜೋವತಮ್ಮ ತುಂಬಾ ಚನ್ನಾಗಿ ಮಾಡಿದರು. ನೀಲಿ ರಿಬ್ಬನ್ ನಾಟಕವನ್ನು ವಿನೋದ ಮಾಡಿದರು. ಪೋಕ್ಸೋ ಕಾಯ್ದೆ ಕುರಿತು ಶಿಲ್ಪ ಅವರು ಮಾತನಾಡಿದರು. ಲಿಂಗ ತಾರತಮ್ಯದ ನೆಲೆಗಳಿಗೆ ಸಂಬಂಧಿಸಿದಂತೆ ನೇತ್ರಾ ಮಾತಾಡಿದರು. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳೊಂದಿಗೆ ಸಂವಾದವನ್ನು ತ್ರೇಜೋವತಮ್ಮ, ಶಿಲ್ಪ  ಅವರು ಮಾಡಿದರು....ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು....ಪ್ರಾಚಾರ್ಯರು ಮತ್ತೆ ನಮ್ಮ ಕಾಲೇಜಿಗೆ ಬಂದು ಅರಿವಿನ ಕಾರ್ಯಕ್ರಮಗಳನ್ನು ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ಮಾಡಿ ಎಂದು ಕೇಳಿದರು....ಒಕ್ಕೂಟದ ಕರಪತ್ರ, ಅರಿವಿನ ಪಯಣ ಪುಸ್ತಕವನ್ನು ಕೊಟ್ಟೆವು. ನಮ್ಮೂರ ಭೂಮಿ ನಮಗಿರಲಿ ಹೋರಾಟದ ಗುಂಪಿನವರು ಹೊರಡಿಸಿರುವ ಪಂಚಾಯಿತಿ ವ್ಯವಸ್ಥೆಯ ಬಗ್ಗೆ ತಿಳಿದು  ಮತ ನೀಡೋಣ ಮತ್ತು  ಗ್ರಾಮ ಪಂಚಾಯಿತಿಗಳು  ರೈತರ  ಭೂ ಹೀನರ  ಮತ್ತು  ಮಹಿಳಾ ರೈತರ ಪರವಾಗಿ  ಕೆಲಸ ಮಾಡುವಂತೆ ಗ್ರಾಮ ಪಂಚಾಯಿತಿಯಲ್ಲಿ  ಸದಸ್ಯರಾಗುವವರ  ಕುರಿತು  ಜಾಗೃತಿ ಮೂಡಿಸುವಂತಹ ಮುಖ್ಯವಾದ ಕರಪತ್ರವನ್ನು ಕುರಿತು ತಿಳಿಸಿ ಜಾಗೃತಿ ಮೂಡಿಸುವಂತೆ ಪ್ರಾಚಾರ್ಯರಿಗೆ ಇತರ ಸಿಬ್ಬಂದಿಗೆ ವಿತರಿಸಿದೆವು.

ಲೇಖನ ಬರಹ

ಬುದ್ಧನ ಶಾಂತಿಯ ಸಂದೇಶ

ಮನೆ ಕಟ್ಟಲು ಹಣ ಬೇಕು  ಮನಸ್ಸು ಕಟ್ಟಲು ಗುಣಬೇಕು

ಹಣದಿಂದ ಕಟ್ಟಿದ ಮನೆಯಲ್ಲಿ  ಎಲ್ಲರು ಇರುತ್ತಾರೆ ಆದರೆ

ಗುಣದಿಂದ ಕಟ್ಟಿದ ಮನೆಯಲ್ಲಿ  ಯೋಗ್ಯರಷ್ಟೆ ನೆಲೆಸಿರುತ್ತಾರೆ.

 ದೇಶ ಸುತ್ತಬೇಕು ಕೋಶ ಓದಬೇಕು ಎನ್ನುವ ಹಾಗೆ ನಮ್ಮ ನೆರೆಯ ರಾಜ್ಯವಾದ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ಜನರ ಜೀವನಾಡಿಯಾದ ಕೃಷ್ಣಾ    ನದಿಯ ದಡದ ಅಲಾಸವೆಂಬ ಪುಟ್ಟಗ್ರಾಮದ ಬುದ್ದವಿಹಾರವು ನೋಡುಗರನ್ನು ಮಂತ್ರಮುಗ್ದವಾಗಿಸುವದರೊಂದಿಗೆ  ಶಾಂತಿಯ ಸರೋವರವಾಗಿರುವುದು.  

            ವಿಜಯಪುರದ ಜ್ಞಾನಯೋಗಾಶ್ರಮದ ಪರಮ ಪೂಜ್ಯರಾದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ವಾಣಿಯಂತೆ    ' ನಮ್ಮ ಅಂತರಂಗದಲ್ಲಿದ್ದ ಆಸೆಯ ಕಸಗುಡಿಸಲೆಂದು ಬುದ್ದ ಬಂದ. ಅಜ್ಞಾನದ ಅಂಧಕಾರ ಕಳೆಯಲೆಂದು ಶಂಕರ್ ಬಂದ,ಅಸ್ಷ್ರಶ್ಯತೆಯ ಮೈಲಿಗೆಯನ್ನು ತೊಳೆಯಲೆಂದು ಬಸವ ಬಂದ. ಮೋಹದ ರಾಡಿ  ಕಳೆಯಲೆಂದು ಮಹಾವೀರ ಬಂದ, ಒಬ್ಬರೆ ಇಬ್ಬರೇ‌ ನೂರಾರು ಜನ ಶರಣರು ಸಂತರು‌ ಈ ಭೂಮಿಯಲ್ಲಿ ಅವತರಿಸಿ ಬಂದರು ಆದರೂ ‌ನಮ್ಮ ಅಂತರಂಗ ಹಸನಾಗಲಿಲ್ಲ. ಸರ್ವರನ್ನು ಕೈಬೀಸಿ ಕರೆಯುವ ಈ ಬುದ್ದ ವಿಹಾರವು ಪೂರ್ವಾಭಿಮುಖವಾಗಿ ಪ್ರವೇಶ ದ್ವಾರದಿಂದ ಶಾಂತಿಯ ಸಂದೇಶ ಮೈಗೂಡಿಸಿಕೊಳ್ಳಲು.

 ಕರ್ನಾಟಕ ಮಹಾರಾಷ್ಟ್ರದ ಗಡಿ ರೇಖೆಯ ನದಿ ದಡದ ಊರು ಆಗಿರುವುದರಿಂದ ಹಚ್ಚಹಸಿರಿನ‌ ಬೆಳೆಗಳು ‌ನೋಡುಗರ ಕಣ್ಣುಗಳಿಗೆ ಹೃದಯಕ್ಕೆ ಒಂದೇ ಬಾರಿ ತೃಪ್ತಿ ನೀಡುವ ಸಂಪೂರ್ಣ ಸಂಪದ್ಭರಿತ ಗ್ರಾಮವಾಗಿವೆ.  ಗಡಿನಾಡಿನ ಗ್ರಾಮಗಳ ಬೇರೆ ಭಾಷೆಯಾದರು ಕರುಳ ಬಳ್ಳಿಯ ರಕ್ತ ಸಂಬಂಧದ ಬಂಧನ ಗಟ್ಟಿಗೊಳಿಸುತ್ತಲೇ ನಿತ್ಯ ಸಂತೋಷವಾಗಿವೆ.  ಬುದ್ದವಿಹಾರದ ಒಳಗೆ ಪ್ರವೇಶವಾದರೆ ಸಾಕು ಇಂಥಹ ಮಲೀನ ಮನಸ್ಸಿನ ಭಾವನೆಗಳು ಬದಲಾಗುತ್ತವೆ. ನೆರಳನ್ನು ನೀಡುವ ಹಳೆ ಮರಗಳಿಗೆ ಜನರು ಭೂಮಿ ತಾಯಿ ಮಡಿಲಿನಲ್ಲಿ ದುಡಿದು ಆಯಾಸಗೂಂಡು ವಿಶ್ರಾಂತಿಯ ಪಡೆಯಲು ಕಟ್ಟೆಗಳನ್ನು ಕಟ್ಟಿರುವರು ಸದಾಕಾಲ ಹಕ್ಕಿಗಳ ಚಿಲಿಪಿಲಿ ನಾದದೊಂದಿಗೆ ಸತತ ಸಂಗೀತದ ಸ್ವರವೇ ಮರಗಳಲ್ಲಿ.

            ಮನುಷ್ಯ ಮನೆ ಬದಲಾಯಿಸುತ್ತಾನೆ. ಊರು ಬದಲಾಯಿಸುತ್ತಾನೆ‌. ಬಟ್ಟೆ ಬದಲಾಯಿಸುತ್ತಾನೆ ಸಂಬಂಧಗಳನ್ನು ಬದಲಾಯಿಸುತ್ತಾನೆ. ಸ್ನೇಹಿತರನ್ನು ಬದಲಾಯಿಸುತ್ತಾನೆ .ಆದರೂ ಅವನಿಗೆ ನೆಮ್ಮದಿ ಇಲ್ಲ ಏಕೆ ? ಏಕೆಂದರೆ ಅವನು ತನ್ನನ್ನು ಬದಲಾಯಿಸಿಕೊಳ್ಳವದಿಲ್ಲ.  ಜ್ಞಾನ ಸೂರ್ಯ ಸಂವಿಧಾನ ಶಿಲ್ಪಿಗಳಾದಂದಹ ಡಾ.ಬಾಬಾ ಸಾಹೇಬ್ ಅಂಬೇಡ್ಕರರು ಹಲವಾರು ಧರ್ಮಗಳ ಕುರಿತು ಸಾಕಷ್ಟು ಅದ್ಯಯನ ಮಾಡಿ ಜಗತ್ತಿಗೆ ಶಾಂತಿ ನೀಡುವಂತಹ ಧರ್ಮವೇ ಬೌದ್ಧ ಧರ್ಮವೆಂದು ತಿಳಿದು ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಹಿಂದೂವಾಗಿ ಸಾಯುವದಿಲ್ಲವೆಂದು ಬೌದ್ಧ ಧರ್ಮವನ್ನು ಸ್ವೀಕರಿಸಿರುವರು.

ಹಕ್ಕಿಗಳ ಚಿಲಿಪಿಲಿನಾದದೂಂದಿಗೆ  ವಿಹಾರದೊಳಗಡೆ ಹೋದರೆ ಮಂದಸ್ಮಿತನಾದ ಬುದ್ದನ ಮೂರ್ತಿಯು ‌ಅದರ ಪಕ್ಕದಲ್ಲಿ ವಿರಾಜಮಾನರಾದ ಶಾಹು ಮಹಾರಾಜರ ಪುತ್ಥಳಿಯು ನಮ್ಮನ್ನೆಲ್ಲಿಯೂ ಹರಿಗೋಡದೆ ಶಾಂತಿಯ ಸಂಭ್ರಮದಲ್ಲಿ ಎರಡು ಮೂರ್ತಿಗಳು ಸಂಪೂರ್ಣ ತಲ್ಲಿನತೆ ಭಾವನೆಯಲ್ಲಿ ನಮ್ಮನ್ನು ನಾವು ಮರೆತು ಬಿಡುತ್ತೆವೆ. ಮಾನವ ಜನ್ಮ ದೊಡ್ದದಲ್ಲ ಮಾನವಿಯತೆ ದೊಡ್ಡದು ಧರ್ಮ ದೊಡ್ಡದಲ್ಲ ದಯೇ ದೊಡ್ಡದು ಕೈಲಾಸ ದೊಡ್ಡದಲ್ಲ ಕಾಯಕ ದೊಡ್ಡದು ವಿದ್ಯೆ ದೊಡ್ಡದಲ್ಲ ಅನುಭವ ದೊಡ್ಡದು ತನ್ನನ್ನು ತಾನು ಅರಿಯುವ ಹೃದಯವೇ ದೊಡ್ಡದು. ಶಾಂತ ಚಿತ್ತದೊಂದಿಗೆ ಬುದ್ದನ ಮಂತ್ರದೊಂದಿಗೆ ತನ್ಮಯಗೊಂಡು‌ ಮೂರ್ತಿಗಳ ಮುಂದೆ ಆಸೀನರಾದರೆ ಜಗತ್ತಿನ ಅರಿವು ಮರೆಸುತ್ತದೆ .ಬುದ್ದನ ಶಾಂತಿಯು ಆವರಿಸುತ್ತದೆ.

ಮೌನ ಮನಸ್ಸು ಶುದ್ಧ ಮಾಡುತ್ತದೆ , ಧಾನ್ಯ ಬುದ್ಧಿ ಶುದ್ಧ ಮಾಡುತ್ತದೆ. ಧ್ಯಾನಸ್ಧರಾಗಿ ಹೊರಬಂದು ಬಲ ತಿರುಗಿದರೆ ಸಾಕು ಹತ್ತಾರು ಪತ್ರಿಕೆಗಳನ್ನೊಳಗೊಂಡ ಜಗತ್ತಿನ ಜ್ಞಾನವನ್ನು ಅರಿಯಲು  ಗ್ರಂಥಾಲಯವು ಸ್ವಾಗತಿಸುವದು. ಡಾ.ಅಂಬೇಡ್ಕರರು ಹೇಳುವಂತೆ ಯಾವ ದೇಶದಲ್ಲಿ ಶಾಲೆಗಳಿಗಿಂತ ದೇವಾಲಯಗಳ ಗಂಟೆ ಹೆಚ್ಚು ಬಾರಿಸುತ್ತದೆಯೋ ಆ ದೇಶದಲ್ಲಿ ಅಜ್ಞಾನ ಮತ್ತು ಬಡತನವಿರುತ್ತದೆ. ಯಾವ ದೇಶದಲ್ಲಿ ದೇವಾಲಯಗಳಿಗಿಂತ ಶಾಲೆಗಳ ಗಂಟೆ ಹೆಚ್ಚು ಬಾರಿಸುತ್ತದೆಯೋ ಆ ದೇಶದಲ್ಲಿ ಶ್ರೀಮಂತಿಕೆ ಇರುವದು.ದೈಹಿಕ ‌ಶ್ರಮದ ದೇಶಿ ಆಟಗಳೆ  ಹೋರಟು ಹೋಗಿ ಆರೋಗ್ಯ ಭಾಗ್ಯ ಕಣ್ಮರೆಯಾಗುತ್ತಿರುವ ಸಂದಿ ಸಮಯದಲ್ಲಿ ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಇರುತ್ತದೆ. ಎಂಬುವದರೊಂದಿಗೆ ಆರೋಗ್ಯದ ಗುಟ್ಟನ್ನು ಗಟ್ಟಿಯಾಗಿಟ್ಟುಕೊಳ್ಳವದಕ್ಕಾಗಿ  ಪಕ್ಕದಲ್ಲಿ ಯುವಕರ‌ ಸದೃಢ ಶರೀರಕ್ಕಾಗಿ ಜಿಮ್ ವ್ಯವಸ್ಥೆ ನೋಡಿದರೆ ದೇಹ  ಜುಮ್ಮು ಎನ್ನುವುದು. ಗಡಿನಾಡಿನ ಮೂಲೆಯೊಳಗೆ ಹತ್ತಾರು ಗ್ರಾಮಗಳಿಗೆ ಮಾದರಿಯಾಗಬಲ್ಲಂಥಹ ಆಲೋಚನೆ ಮಾಡಿರುವ ‌ಅಲ್ಲಿಯ ಯುವ ಪಡೆಯನ್ನು ಹಾಗೂ ಮಾರ್ಗದರ್ಶಕರಾಗಿರುವ ಹಿರಿಯರು ಸಂಕಲ್ಪ ಸಿದ್ದಿ‌ ಮಾಡಿಕೊಂಡು ಬುದ್ದವಿಹಾರ ನಿರ್ಮಿಸಿರುವ ಪುಟ್ಟ ಗ್ರಾಮದ ದಿಟ್ಟತನದ ಮನಸ್ಸುಗಳಿಗೆ ಬುದ್ದನ ಶಾಂತಿಯ ಸಂದೇಶ ಇಂಥಹ ಹಳ್ಳಿಗಳ ನಾಡಿಬಡಿತವಾದ ಜಗತ್ತಿನ ಶಾಂತಿ ಸಿಗಲು ಸಾಧ್ಯವಲ್ಲವೆ.     ಬುದ್ದಂ, ಶರಣಂ, ಗಚ್ಛಾಮಿ                                                                     -   ಸಂಜಯ ಜಿ ಕುರಣೆ  ಶಿಕ್ಷಕರು, ಐನಾಪೂರ.

ಹೆಣ್ಣು, ಮದುವೆ ಮತ್ತು ವಲಸೆ

ನನಗೆ ಮದುವೆಯಾಗಿ ಹದಿನಾಲ್ಕು ವರ್ಷಗಳಾಗಿದೆ. ನಾನು ಈಗ ನನ್ನ ಗಂಡನ ಊರು ಕುಂಬಾರಹಳ್ಳಿಯಲ್ಲಿರುವೆ. ನನ್ನ ಬಾಲ್ಯದ ಸವಿ ನೆನೆಪುಗಳ ಊರು ನನ್ನ ತಾಯಿ ಮನೆ ಕಾಮದೇನುಹಳ್ಳಿ. ಆದರೆ ಈಗ ಯಾರಾದರು ನನ್ನನ್ನು ನಿಮ್ಮ ಊರು ಯಾವುದು? ಎಂದು ಕೇಳಿದರೆ ನನಗೆ ಗೊಂದಲ ಶುರುವಾಗುತ್ತದೆ. ನಾನು ಯಾವ ಊರಿನ ಹೆಸರು ಹೇಳಬೇಕು? ನನ್ನ ಊರು ಯಾವುದು? ನನಗೆ ನನ್ನದೇ ಆದ ‘ಸ್ವಂತ ಊರು’ ಇದೆಯೇ? ಸ್ವಂತ ಊರು ಅಂದ್ರೆ ನಾನು ಹುಟ್ಟಿ ಬೆಳೆದ ಊರು. ತಾಯಿ ಊರನ್ನು ಹೆಣ್ಣು ಮಕ್ಕಳ ತವರೂರು ಅಂತಾರೆ. ತವರೂರು ಅಂದರೆ ಮೂಲ ಊರು. ಸ್ವಂತ ಊರು ಎಂದರ್ಥ. ನನ್ನ ಊರನ್ನು ಹೇಳುವಾಗ ನನ್ನ ಊರನ್ನು ಹೇಳಬೇಕೆ? ಅಥವಾ ಈಗ ಬದುಕುತ್ತಿರುವ ನನ್ನ ಗಂಡನ ಊರನ್ನು ಹೇಳಬೇಕೇ? ಈಗ ಹೇಳುವಾಗಲೂ ಗಂಡನ ಊರು ಎಂದೇ ಹೇಳಬೇಕು. ನಾನು ಹುಟ್ಟಿದ ಊರನ್ನು ತಾಯಿ ಊರು ಎಂದೇ ಹೇಳಬೇಕು. ಆಗಾದರೆ ನನ್ನ ಊರು ಯಾವುದು? ನನಗೆ ‘ನನ್ನ ಊರು’ ಎನ್ನುವುದು ಇಲ್ಲ. ಹಾಗೆಯೇ ನನಗೆ ‘ನನ್ನ ಮನೆ’ ಎನ್ನುವುದು ಇಲ್ಲ ಎಂದು ಯಾವಾಗಲೂ ನನಗೆ ಅನಿಸುತ್ತಲೇ ಇರುತ್ತದೆ.

ಹೆಣ್ಣಿಗೆ ಅವಳು ನಡೆಯುವ ನಡತೆಯಿಂದ, ಹಾಕುವ ಬಟ್ಟೆಯಿಂದ, ಮಾತಾಡುವ ಮಾತಿಂದ, ಮಾಡೋ ಕೆಲಸದಿಂದ ಎಳೆ ಎಳೆಯನ್ನು ಹಿಡಿದು ಜಾಲಾಡಿ ‘ಇಲ್ಲಿ ಚನ್ನಾಗಿ ಕಲಿತರೇನೇ ಗಂಡನ ಮನೆಯಲ್ಲಿ ಚನ್ನಾಗಿ ಬದುಕೋಕಾಗೋದು, ಇಲ್ಲಂದ್ರೆ ಅವರು ನಿನ್ನನ್ನು ಮೂರು ದಿನ ಇಟ್ಟುಕೊಳ್ಳದೀರ ಓಡಿಸಾಕ್ತಾರೆ. ಆಮೇಲೆ ‘ಯಾರು ನಿನಗೆ ಬುದ್ದಿ ಕಲಿಸಿದ್ದು’ ಅಂತ ನಮ್ಮನ್ನೇ ಬೈತಾರೆ. ಈವಾಗಿಂದಾನೆ ಕೆಲಸಾನ ಚನ್ನಾಗಿ ಕಲಿಬೇಕು. ಅವಾಗೇನೆ ಹೋದಕಡೆ ನೀನು ಸೈ ಅಂತ ಅನಿಸಿಕೊಳ್ಳೋದು, ‘ಪರವಾಗಿಲ್ಲಪ್ಪ ಚನ್ನಾಗಿ ಬೆಳೆಸವರೆ’ ಅಂತ ಅನಿಸ್ಕೊಳ್ಳೋದು’, ಎಂದು ಪದೇ ಪದೇ ದಿನಾ ದಿನಾ ಹೇಳಿ, ನಿನ್ನದು ಈ ಮನೆ ಅಲ್ಲ, ನಿನ್ನ ಮನೆ ಬೇರೆ ಎನ್ನುವ ಮನಸ್ಥಿತಿಯನ್ನು ಹುಟ್ಟಿನೊಟ್ಟಿಗೆ ಬೆಳೆಸುವುದರಿಂದ ಹೆಣ್ಣು ಮಕ್ಕಳಿಗೆ ಅಮ್ಮನ ಮನೆ ಸ್ವಂತ ಮನೆ ಅನಿಸುವುದಿಲ್ಲ. ಅಲ್ಲಿ ಹೆಣ್ಣಿನ ಅತಂತ್ರದ ನಡುಗೆರೆ ಕಾಯ್ದು ಕುಳಿತು ಇದು ನಿನ್ನ ಸ್ವಂತ ಮನೆ ಅಂತ ತಿಳಿಯಬೇಡ ಎಂದು ದೂರ ತಳ್ಳುವ, ಅಂತರ ಕಾಯ್ದುಕೊಳ್ಳುವ ಸ್ಥಿತಿ ಏರ್ಪಾಡಾಗುತ್ತದೆ. ಇಂತಹ ಸ್ಥಿತಿಯ ನಡೆಯಲ್ಲಿ ನಾನು ಹುಟ್ಟಿದ ಮನೆ ನನ್ನ ಸ್ವಂತ ಮನೆ, ಆ ಊರು ನನ್ನ ಸ್ವಂತ ಊರು ಎಂದು ತಿಳಿಯುವುದಾದರೂ ಹೇಗೆ?

ಮದುವೆಯಾದ ಮೇಲೆ ‘ನಿಮ್ಮ ಮಗಳನ್ನು ಯಾವ ಊರಿಗೆ ಕೊಟ್ಟಿರಿ’ ಎಂದು ಕೇಳಿದರೆ, ನನ್ನ ಅಪ್ಪ, ಅಮ್ಮ ‘ನಮ್ಮ ಮಗಳನ್ನು ಇಂತ ಊರಿಗೆ ಕೊಟ್ಟೆವು ಅಂತ ಹೇಳುತ್ತಾರೆ. ಬೇರೆಯವರು ತಂದೆ ತಾಯಿಗಳಿಗೆ ‘ಮದುವೆ ಮಾಡಿ ಕೈ ತೊಳಕೊಂಡ್ರಿ’ ಅಂತ ಹೇಳುವಾಗ, ಆ ತರಹದ ಮಾತುಗಳನ್ನು ಕೇಳಿಸಿಕೊಂಡಾಗ ನನಗೆ ಎಲ್ಲಿಲ್ಲದ ದುಃಖ ಆಗಿದೆ.  ನಾನು ಮನುಷ್ಯಳಾ? ವಸ್ತುವಾ? ‘ಕೊಟ್ಟೆವು’, ‘ಕೊಡುತ್ತೇವೆʼ ‘ತಗೊಂಡು ಬಂದೆವು’ ಎನ್ನುವ ಮಾತುಗಳನ್ನು ಬಳಸುವುದು ವಸ್ತುವಿಗೆ. ಹಾಗಾದರೆ ಈ ಸಮಾಜ ಹೆಣ್ಣನನ್ನು ‘ವಸ್ತು’ ವಾಗಿ ನೋಡುತ್ತೆ. ಮನುಷ್ಯಳ ಹಾಗೆ ನೋಡುವುದಿಲ್ಲ ಎಂಬುದು ಹಲವು ವಿಚಾರಗಳಲ್ಲಿ ಸಾಬೀತಾಗಿದೆ. ‘ಹೆಣ್ಣಿನ ಗೋಳಟ್ಟಿ ಬನ್ನೀಯ ಮರಬೆಂದೋ’ ಎಂಬಂತೆ ಅವಳ ಬದುಕಿನ ಇಡೀ ನಡೆ ವಲಸೆಯ ಗೋಳು.

ಪ್ರಪಂಚದಾದ್ಯಂತ ವಿವಾಹದ ಕಾರಣಕ್ಕೆ ಹೆಚ್ಚು ವಲಸೆಗೆ ಒಳಗಾಗುವವರೆಂದರೆ ಮಹಿಳೆಯರು. 2001 ರ ಜನಗಣತಿ ಪ್ರಕಾರ ಮದುವೆಯ ಕಾರಣಕ್ಕೆ ವಲಸೆ ಹೋದ ಮಹಿಳೆಯರ ಸಂಖ್ಯೆ 98.6% ಇದ್ದರೆ, 2011 ರ ಜನಗಣತಿ ಪ್ರಕಾರ 97% ರಷ್ಟು ಇದ್ದಾರೆ. ಮದುವೆಯ ಕಾರಣದಿಂದ ಮಹಿಳೆಯರು ತಾಯಿ ಮನೆಯಿಂದ ಗಂಡನ ಮನೆಗೆ ವಲಸೆ ಹೋಗಿ ಮತ್ತೆ ಗಂಡನು ಕೆಲಸ ಮಾಡುವ ಸ್ಥಳಕ್ಕೆ ವಲಸೆ ಹೋಗುವ ಮೂಲಕ ವಲಸೆಯೊಳಗಿನ ವಲಸೆಯ ಸ್ಥಿತಿಯಲ್ಲಿ ಮಹಿಳೆಯರಿದ್ದಾರೆ.

ಮದುವೆಯಿಂದ ಆಗುವ ವಲಸೆ ಭಾರತದಲ್ಲಿ ಅತಿ ದೊಡ್ಡ ಸ್ವರೂಪದಲ್ಲಿದೆ. ಇದು ಗ್ರಾಮೀಣ ನಗರ ಎನ್ನುವ ಯಾವ ತಾರತಮ್ಯವೂ ಇಲ್ಲದೇ ಎಲ್ಲಾ ಮಹಿಳೆಯರು ಈ ವಲಸೆಯ ಬಲೆಗೆ ಬಲಿಯಾಗುತ್ತಾರೆ. ಮಹಿಳೆಯರಿಗೆ  ವಲಸೆ ಎಂಬುದು ದೊಡ್ಡ ಸಾಂಸ್ಕೃತಿಕ ಆಘಾತವಾಗಿದೆ. ಅತ್ತೆಯ ಮನೆಗೆ ಹೋಗಿ ಅಲ್ಲಿ ಅತ್ತೆ ಮಾವ, ಗಂಡ ಎಲ್ಲರನ್ನೂ ಪ್ರೀತಿಸಿದರೂ ತನ್ನ ಅಪ್ಪ, ಅಮ್ಮನ ಪ್ರೀತಿಯಿಂದ ವಂಚಿತರಾಗುತ್ತಾರೆ. ಅಂತಹ ಒತ್ತಡವನ್ನು ಅವರು ನಿಭಾಯಿಸಲು ಶ್ರಮ ಪಡುತ್ತಾರೆ.

ಭಾರತದೇಶದ ಬಹುಪಾಲು ಹೆಣ್ಣುಮಕ್ಕಳನ್ನು ಪಿತೃಪ್ರಧಾನ ಮನಸ್ಥಿತಿಯನ್ನು ಒಪ್ಪಿಕೊಳ್ಳುವ ಹಾಗೆ ಬೆಳೆಸುವುದರಿಂದ ಮದುವೆ ಎನ್ನುವುದು ಹೆಣ್ಣಿನ ವಲಸೆ ಎಂದರೂ  ಅದನ್ನು ಅವರು ಒಪ್ಪಿಕೊಳ್ಳಲು ತಯಾರಿಲ್ಲದಷ್ಟು ಪಿತೃಪ್ರಧಾನ ಮೌಲ್ಯಗಳನ್ನು ತಮ್ಮಲ್ಲಿ ಲೀನವಾಗಿಸಿಕೊಂಡಿದ್ದಾರೆ. ಪಿತೃಪ್ರಧಾನ ಮೌಲ್ಯದ ವಿವಾಹ ವಲಸೆಯು ತನ್ನ ತಾಯಿ ಮನೆಯ ವಾಸಸ್ಥಳದಿಂದ  ಗಂಡನ ಮನೆಗೆ ಸ್ಥಳಾಂತರಗೊಳ್ಳುವ ಪ್ರಜ್ಞೆಯನ್ನು ಪ್ರಚೋದಿಸುತ್ತದೆ. ಮತ್ತು ನಿನ್ನ ಸ್ವಂತ ಮನೆ ತಾಯಿ ಮನೆಯಿಂದ ಗಂಡನ ಮನೆಗೆ ಬದಲಾಗಿದೆ ಎಂದು ಹೇಳುತ್ತದೆ. ಮನೆ ಅಷ್ಟೇ ಅಲ್ಲದೇ ತನಗೆ ಮೊದಲಿದ್ದ ಎಲ್ಲಾ ಗುರುತುಗಳು ಬದಲಾಗಿ ಆ ಬದಲಿ ಜಾಗಕ್ಕೆ ಗಂಡನ ಕುಲ, ಜಾತಿ, ಗೋತ್ರ, ಧರ್ಮ, ಪ್ರದೇಶ, ಭಾಷೆ ಎಲ್ಲವೂ ಹೊಸದಾಗಿ ಬಂದು ಸೇರಿಕೊಳ್ಳುತ್ತವೆ.

 ಅವುಗಳನ್ನು ಹೆಣ್ಣು ತನ್ನ ಹೊಸ ಗುರುತುಗಳಾಗಿ ಮಾಡಿಕೊಳ್ಳಬೇಕಾಗುತ್ತದೆ. ಹೊಸ ಗುರುತುಗಳಾಗಿ ಸೇರಿಸಿಕೊಳ್ಳಬೇಕಾಗುತ್ತದೆ. ಅವಳಿಗೆ ಅದು ಒಪ್ಪಿಗೆ ಇರಲಿ ಇಲ್ಲದಿರಲಿ, ಒಪ್ಪೊಕೊಳ್ಳಬೇಕೆಂದು ಸಮಾಜ ಅವಳನ್ನು ಒತ್ತಾಯಿಸುತ್ತದೆ. ಮದುವೆಯ ಕಾರಣಕ್ಕೆ ಅವೆಲ್ಲವೂ ಅವಳಿಗೆ ಬೋನಸ್ ಆಗಿ ಮಾರ್ಪಡುತ್ತದೆ.  ಇದಕ್ಕೆ ಮಹಿಳೆ ತನ್ನ ಬದುಕನ್ನೇ ತೇಯ್ದು ಹೊಂದಾಣಿಕೆ ಮಾಡಿಕೊಳ್ಳುತ್ತಾಳೆ. ಹೊಂದಾಣಿಕೆಯಾಗದ ಹೆಣ್ಣನ್ನು ಸಮಾಜ ‘ಗಡಿಮೀರಿದವಳು’, ‘ಕೆಟ್ಟವಳು’, ‘ಗಂಡುಬೀರಿ’  ಎಂಬ ವಿಶ್ಲೇಷಣೆಗಳಿಂದ ನಿಂದಿಸುತ್ತದೆ.

ಭಾರತದಲ್ಲಿರುವ ವಿವಾಹದ ವಲಸೆಗೆ ಬಹು ಮುಖ್ಯಕಾರಣವೆಂದರೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಂಶಗಳಾಗಿವೆ. ಸಮಾಜಕ್ಕೆ ಸಾಂಪ್ರದಾಯಿಕತೆಗೆ ಭಯಪಡುವ ಮನಸ್ಥಿತಿ ಇರುವ ಭಾರತೀಯ ಕುಟುಂಬಗಳು ಮದುವೆಮಾಡುವ ಸಲುವಾಗಿ ಉದ್ಯೋಗಮಾಡುವ ಮಹಿಳೆಯರನ್ನು ಕೆಲಸದಿಂದ ಬಿಡಿಸಿ ಮದುವೆ ಮಾಡುತ್ತಾರೆ. ಓದುವುದನ್ನು ನಿಲ್ಲಿಸಿ ಮದುವೆ ಮಾಡುತ್ತಾರೆ.( ಹೆಣ್ಣು ಓದಿದರೆ ಮುಸುರೆ ತಿಕ್ಕುವುದು ತಪ್ಪುವುದಿಲ್ಲ ಎಂಬ ಮನಸ್ಥಿತಿ) ಮದುವೆಯ ನಂತರ ಅವಳು ಉದ್ಯೋಗಕ್ಕೆ ಹೋಗದೆ ಮನೆಕೆಲಸ ಮಾಡಿಕೊಂಡು ಇರುವಂತೆ ಮಾಡುತ್ತದೆ. ಕೂಲಿರಹಿತ ದುಡಿಮೆ ಅವಳನ್ನು ಮಾನಸಿಕವಾಗಿ ಹಿಂಸಿಸುತ್ತದೆ. ಹೊಟ್ಟೆಪಾಡಿಗಾಗಿ ವಲಸೆ ಹೋದ ಕಾರ್ಮಿಕರಿಗೂ, ಮದುವೆಯಿಂದ ವಲಸೆ ಹೋದ ಮಹಿಳೆಯರಿಗೂ ಇಲ್ಲಿ ಯಾವುದೇ ವ್ಯತ್ಯಾಸ ಕಾಣಿಸುವುದಿಲ್ಲ.

ಮಹಿಳೆಗೆ ನಿಸರ್ಗ ನೀಡಿದ ವಿಶಿಷ್ಟ ಕೊಡುಗೆ ಎಂದರೆ ಅದು ಫಲವಂತಿಕೆ. ಆಕೆಗೆ ಸಮಾಜದಲ್ಲಿ ಸ್ಥಾನಮಾನವೇನಾದರೂ ದೊರೆತಿದ್ದರೆ ಅದು ಈ ಕಾರಣದಿಂದಾಗಿಯೇ ಎಂಬುದು ವಿದಿತ. ಅನೇಕ ಹೆಣ್ಣುಮಕ್ಕಳು ಚಿಕ್ಕ ವಯಸ್ಸಿಗೇನೆ ಮದುವೆಯಾಗುವುದರಿಂದ ಅವರು ಬೇಗನೆ ತಾಯಂದಿರಾಗುವುದರಿಂದ ಆರೋಗ್ಯದ ವಿಷಯದಲ್ಲಿ ಅನೇಕ ಸಂಕಷ್ಟಗಳನ್ನು ಅವರು ಎದುರಿಸಬೇಕಾಗುತ್ತದೆ. ಹೆಣ್ಣಿಗೆ ಮಕ್ಕಳಾಗದ ಸಂದರ್ಭಗಳಲ್ಲಿ ಅವಳನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ. ಅಂತಹ ಹೆಣ್ಣನ್ನು ಮನೆಯ ಒಬ್ಬ ಸದಸ್ಯಳೆಂದು ಕೂಡ ಪರಿಗಣಿಸದಿರುವ ಮನಸ್ಥಿತಿ ಭಾರತೀಯರದು. ಭಾರತೀಯರಲ್ಲಿ ಮದುವೆಯ ಉದ್ದೇಶ ಲೈಂಗಿಕ ತೃಪ್ತಿಗಿಂತ ಮುಖ್ಯವಾಗಿ ಸಂತಾನ ಮುಂದುವರಿಕೆಯಾಗಿದೆ. ‘ಉತ್ತಲ್ಲದೆ ಮಣ್ಣಲ್ಲ ಎತ್ತಲ್ಲದೆ ತಾಯಲ್ಲ’ ಎನ್ನುವ ನುಡಿಗಟ್ಟುಗಳು ಮದುವೆಯ ಸಾರ್ಥಕತೆ ಮಕ್ಕಳನ್ನು ಹೆರುವುದರಲ್ಲಿದೆ ಎಂದು  ಹೇಳುತ್ತದೆ.

ಬಾಲಕರಿಲ್ಲದ ಬಾಲ್ಯದ್ಯಾತರ ಜನ್ಮ                                                                                                                                                        ಬಾಡೀಗಿ ಎತ್ತು ದುಡಿದಂಗ ಬಾಳೆಲೆಯ                                                                                                           ಹಾಸ್ಯುಂಡು ಬೀಸಿ ಒಗೆದಂಗ

ಇಂತಹ ಅನೇಕ ಜನಪದ ತ್ರಿಪದಿಗಳು ಹೆಣ್ಣಿನ ಮದುವೆಯ ವಲಸೆಯ ಸ್ಥಿತಿಯನ್ನು ಸಮರ್ಥವಾಗಿ ದ್ವನಿಸುತ್ತವೆ. ಮಕ್ಕಳಿಲ್ಲದ ಮಹಿಳೆ, ಅದರಲ್ಲೂ ಗಂಡು ಮಕ್ಕಳನ್ನು ಹೆರದ ಮಹಿಳೆ ಸಮಾಜದ ಕ್ರೂರ ವ್ಯವಸ್ಥೆಗೆ ಬೀಳಬೇಕಾಗುತ್ತದೆ. ಸಂತಾನ ಹೀನತೆಗೆ ಗಂಡಿನ ದೋಷವಿದ್ದ ಸಂದರ್ಭದಲ್ಲಿಯೂ ಪುರುಷ ಪ್ರಧಾನ ಸಮಾಜ ಅದನ್ನು ಮುಚ್ಚಿಹಾಕಿ ಆ ದೋಷವನ್ನು ಹೆಣ್ಣಿನ ತಲೆಗೆ  ಕಟ್ಟಿ ಆಕೆಯನ್ನು ಬಂಜೆ, ಗೊಡ್ಡಿ ಎಂದು ಕರೆದು ನಿಕೃಷ್ಟವಾಗಿ ಕಾಣುತ್ತದೆ. ‘ಪುಣ್ಯವಂತರಿಗೆ ಫಲಗೋಲೆ ಎಲೆ ಹೆಣ್ಣೆ ಪಾಪಗೆಟ್ಟವರಿಗೆ ಫಲವಿಲ್ಲ’ ಎಂದು ಹೇಳುವ ಮೂಲಕ ಫಲವಂತಿಕೆಯ ಕೊರತೆಯನ್ನು ಪಾಪಪುಣ್ಯಗಳ ಪರಿಕಲ್ಪನೆಯೊಂದಿಗೆ ಜೋಡಿಸಿ ತನ್ನ ಪೌರುಷದ ನೀಚತನವನ್ನು ಮೆರೆಯುವ ಸಮಾಜದ ಮಾನಗೇಡಿ ಮುಖವನ್ನು ಮೌಖಿಕ ಚರಿತ್ರೆ ಮನಮಿಡಿಯುವಂತೆ ಚಿತ್ರಿಸುತ್ತದೆ.

ಪ್ರಧಾನ ಸಂಸ್ಕೃತಿಯು ಹೇರಿರುವ ಮೌಲ್ಯವನ್ನು ಒಪ್ಪಿಕೊಂಡಂತೆ  ಕಾಣುವ ಈ ಮಹಿಳೆಯರು ಅದರ ಪೂರೈಕೆಗಾಗಿ ಅದೇ ಸಂಸ್ಕೃತಿಯು ಪ್ರತಿಪಾದಿಸುವ ಪಾತಿವ್ರತ್ಯದ ಮೌಲ್ಯವನ್ನು ತಿರಸ್ಕರಿಸಿ, ತನ್ನ ಗಂಡನನ್ನು ಬಿಟ್ಟು ಇನ್ನೊಬ್ಬ ಗಂಡಸಿಂದ ಮಗುವನ್ನು ಪಡೆದು ಪ್ರತಿಭಟನೆ ತೋರಿದ್ದಾರೆ. ದೇವರಿಗೆ ಹರಕೆ ತೀರಿಸುವ ಹೆಸರಲ್ಲಿ ಒಂದು ರೀತಿಯ ನಿಯೋಗವನ್ನು ಮಾಡುವ ಸಂಪ್ರದಾಯ ರೂಡಿಯಲ್ಲಿದೆ. ಸಿರಿಜಾತ್ರೆ, ನಂಜನಗೂಡು ತೇರಡಿ ಸೇವೆ, ಪೂಜಾರಿ ಸೇವೆ ಎಂಬಂತಹ ಆರಾಧನೆಗಳು ನಿಯೋಗವನ್ನು ಕುರಿತು ಮಾತಾಡುತ್ತವೆ. ಗಂಡು ತನ್ನ ದೈಹಿಕ ದೋಷವನ್ನು ರಹಸ್ಯವಾಗಿಡಲು ಈ ಬಗೆಯ ಮಿಲನಕ್ಕೆ ಒಪ್ಪಿಗೆ ನೀಡಿರುವ ಕುರಿತು ಇವು ಮಾತಾಡುತ್ತವೆ. ಮಹಿಳೆಯರು ವಿದ್ಯಾವಂತರಾದಂತೆ, ಆರ್ಥಿಕ ಸ್ವಾವಲಂಬಿಗಳಾದಂತೆ, ಅಧಿಕಾರ ಪಡೆದಂತೆ  ಮಾತೃತ್ವದ ಹಕ್ಕು ಮಹಿಳೆಯರದು ಎನ್ನುವುದನ್ನು ನಿರಾಕರಿಸಿ ತಾಯ್ತನದ ಆಯ್ಕೆ ಮಹಿಳೆಯರದು ಎನ್ನುವ ನೋಟ ಸ್ತ್ರೀ ಚಳುವಳಿ ಬಲಗೊಂಡಂತೆಲ್ಲಾ ಬಲಗೊಂಡಿತು. ಮಾತೃತ್ವದ ಅನಿವಾರ್ಯತೆಯನ್ನು ನಿರಾಕರಿಸಿದ ಹೆಣ್ಣು ಮಕ್ಕಳು ಈಗಲೂ ನಮ್ಮೊಂದಿಗಿದ್ದಾರೆ. ಆದರೆ ಇವರ ಸಂಖ್ಯೆ ಬಹಳವಿಲ್ಲವೆಂಬುದು ಇಲ್ಲಿನ ಫಲವಂತಿಕೆಗೆ ಸಂಬಂಧಿಸಿದ ವಸ್ತುಸ್ಥಿತಿಯನ್ನು ವಿವರಿಸುತ್ತದೆ.

 ಮದುವೆಗಾಗಿ ಹೆಣ್ಣನ್ನು ಖರೀದಿಸುವ  ಅತಿರೇಕದ ಸಾಂಸ್ಕೃತಿಕ ವಿದ್ಯಮಾನದಲ್ಲಿ ಮಹಿಳೆಯರು ಕೊರತೆ ಇರುವ ಸ್ಥಳಗಳಲ್ಲಿ  ಪುರುಷರನ್ನು ಮದುವೆಯಾಗಲು ಮಹಿಳೆಯರನ್ನು ಇತರ ಪ್ರದೇಶಗಳಿಂದ ಖರೀದಿಸುವುದರಿಂದ ಇದು ಮಹಿಳೆಯ ವಲಸೆಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇಂತಹ ಮಹಿಳೆಯರನ್ನು ದೂರದ ಪ್ರದೇಶಗಳಿಂದ ಖರೀದಿಸಿ ಕರೆ ತರಲಾಗುತ್ತದೆ. ಇವರು ಹೆಚ್ಚಾಗಿ ಅನಕ್ಷರಸ್ತರಾಗಿರುವುದರಿಂದ, ಭಿನ್ನವಾಗಿ ಯೋಚಿಸಲಾರದವರಾಗಿ ಲೈಂಗಿಕವಾಗಿ ಹೆಚ್ಚು ಶೋಷಣೆಗೆ ಒಳಗಾಗುತ್ತಾರೆ. ಒಬ್ಬನಿಗಾಗಿ ಖರೀದಿಸಿದರೂ ಅವಳನ್ನು ಲೈಂಗಿಕವಾಗಿ ಬಳಸುವವರು ಅಣ್ಣತಮ್ಮಂದಿರೆಲ್ಲರೂ ಆಗುತ್ತಾರೆ. ಇದು ವಿವಾಹ ವಲಸೆಯ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಇಂತಹ ಮಹಿಳೆಯರು ಅನಿವಾರ್ಯವಾಗಿ ಬಲವಂತದ ವಲಸೆಗೆ ಒಳಗಾಗುತ್ತಾರೆ.

ಮದುವೆಯ ವಲಸೆಯಿಂದ ಉಂಟಾಗುವ ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ನೀತಿಗಳು ಈಗ ಜಾರಿಯಲಿಲ್ಲ ಎನ್ನುವುದು ದುರಂತ. 2005 ರ ಕೌಟುಂಬಿಕ ದೌರ್ಜನ್ಯ ಕಾಯಿದೆಯಲ್ಲಿ ಗಂಡನ ಮನೆಯಿಂದ ಮಹಿಳೆಗೆ ಯಾವುದೇ ಅನ್ಯಾಯ ಆದರೂ ಅವಳು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದೆಂದು ಹೇಳುತ್ತದೆ. ಗಂಡನ ಆಸ್ತಿಯಲ್ಲಿ ಭಾಗ ತೆಗೆದುಕೊಳ್ಳಬಹುದೆಂದು, ಜೀವನಾಧಾರಕ್ಕೆ ಮನವಿ ಸಲ್ಲಿಸಬಹುದೆಂದು ಹೇಳುತ್ತದೆ. ಆದರೆ ಇಲ್ಲಿ ಒಂದು ಸಮಸ್ಯೆ ಇದೆ. ಭಾರತೀಯ ಸಾಂಪ್ರದಾಯಿಕತೆಯಲ್ಲಿ ಹೆಣ್ಣನ್ನು ವಿವಾಹ ಮಾಡಿಕೊಡುವುದು ಗಂಡನಿಗೆ ಮಾತ್ರವಲ್ಲ. ಅವಳನ್ನು ಅವನ ಇಡೀ ಕುಟುಂಬಕ್ಕೆ ವಿವಾಹ ಮಾಡಿಕೊಡಲಾಗುತ್ತದೆ. ಗಂಡನ ಹೆಸರಿನಲ್ಲಿ ಆಸ್ತಿ ಇಲ್ಲದೆ, ಅತ್ತೆಮಾವನ ಹೆಸರಿನಲ್ಲಿ ಆಸ್ತಿ ಇದ್ದಾಗ ಆ ಮಹಿಳೆ 2005 ರ ಕಾಯ್ದೆ ಪ್ರಕಾರ ಅವಳು ಆಸ್ತಿಯನ್ನು ಕೇಳುವಹಾಗಿಲ್ಲ.

 ಆದರೆ ಮದುವೆ ವಿಷಯಕ್ಕೆ ಅವಳಿಗೆ ಆದ ಅನ್ಯಾಯವನ್ನು ಸರಿಪಡಿಸುವುದಾದರೂ ಹೇಗೆ? ಹೆಣ್ಣು ನೋಡಲು ಬಂದಾಗ ಹೆಣ್ಣಿಗೆ ಹೆಣ್ಣಿನ ಮನೆಯವರಿಗೆ ನಮಗೆ ಇಷ್ಟು ಮನೆ ಇದೆ, ಇಷ್ಟು ಆಸ್ತಿ ಇದೆ ಎಂದು ಹೇಳಿ ತೋರಿಸಿಯೇ ಮದುವೆ ಮಾಡಿಕೊಂಡು ಹೋಗುತ್ತಾರೆ. ಆದರೆ ಮದುವೆಯಾದ ಮೇಲೆ ಸಮಸ್ಯೆಯಾದಾಗ ನಿನ್ನ ಗಂಡನ ಹೆಸರಿನಲ್ಲಿ ಆಸ್ತಿ ಇಲ್ಲ ಅದಕ್ಕಾಗಿ ನಿನಗೆ ಆಸ್ತಿ ಕೇಳುವ ಹಕ್ಕಿಲ್ಲ ಎಂದು ಹೇಳುತ್ತಾರೆ. ಕಾಯಿದೆಯೂ ಇದಕ್ಕೆ ಪುಷ್ಟಿಕೊಡುತ್ತದೆ. ಇಂತಹ ಸಂದರ್ಭದಲ್ಲಿ ಮಹಿಳೆ ಏನು ಮಾಡಬೇಕು? ತನಗೆ ಪರಿಹಾರ ಕೇಳಲು ಎಲ್ಲಿಗೆ ಹೋಗಬೇಕು? ಹೇಗೆ ಕೇಳಬೇಕು? ಗಂಡನೂ ಕೂಡ ಉದ್ಯೋಗದಲ್ಲಿದ್ದೇನೆಂದು ಸುಳ್ಳು ಹೇಳಿ ಮದುವೆ ಮಾಡಿಕೊಂಡು ಹೋಗಿರುತ್ತಾನೆ. ಆಗ ಮಹಿಳೆ ಪರಿಹಾರವನ್ನು ಎಲ್ಲಿ ಹೇಗೆ ತೆಗೆದುಕೊಳ್ಳುವುದು? ಇದು ಮದುವೆಯಿಂದ ವಲಸೆಗೆ ಒಳಗಾದ ಮಹಿಳೆಗೆ ದೊಡ್ಡ ತೊಡಕಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ 2005 ರ ಕೌಟುಂಬಿಕ ದೌರ್ಜನ್ಯ ವಿರೋಧಿ ಕಾಯಿದೆಯನ್ನು ತಿದ್ದುಪಡಿಮಾಡಬೇಕಾಗಿದೆ. ಹೆಣ್ಣಿನ ವಲಸೆಗೆ ಸಂಬಂಧಿಸಿದಂತೆ “ವಿಶೇಷ ಮಹಿಳಾ ವಲಸೆ ಕಾಯ್ದೆ” ಯನ್ನು ಜಾರಿಗೊಳಿಸುವ ಅಗತ್ಯವಿದೆ.

ಮದುವೆಯ ವಲಸೆಯಿಂದ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡ ಮಹಿಳೆಯರು ತಮಗೆ  ದುಪ್ಪಟ್ಟಾಗಿ ಮಾರ್ಪಟ್ಟ ಇವನ್ನು  ಜವಾಬ್ದಾರಿ ಎಂದು ತಿಳಿದು ಮಹತ್ತರವಾಗಿ ನಿಭಾಯಿಸುತ್ತಾರೆ. ಗಂಡನಿಂದ ವಿಚ್ಚೇದನ ಪಡೆದರೂ, ಗಂಡ ಓಡಿಹೋದರೂ, ಆತ್ಮಹತ್ಯೆ ಮಾಡಿಕೊಂಡರೂ , ಅವನಿಂದ ಆಸ್ತಿ ಸಿಗಲಿ ಬಿಡಲಿ ಅವಳು ಯಾವುದಕ್ಕೂ ಎದೆಗುಂದದೆ ಕಚೇರಿ ಕೆಲಸ, ಮನೆಕೆಲಸ, ಕೂಲಿ ಕೆಲಸಮಾಡಿ, ಹಣ್ಣು ಮಾರಿ ತಮ್ಮ ಮಕ್ಕಳನ್ನು ಸ್ವಾಭಿಮಾನದಿಂದ, ಆತ್ಮವಿಶ್ವಾಸದಿಂದ ಬೆಳಸಿ ಘನತೆಯ ಬದುಕನ್ನು ತನ್ನದಾಗಿಸಿಕೊಳ್ಳುವತ್ತ ದುಡಿಯುತ್ತಾಳೆ.

                                                                                               - ಡಾ ಕೆ ವಿ ನೇತ್ರಾವತಿ, ಚಿಂತಕರು ಕೋಲಾರ.

--------------------------------------------------------------------------------------------------------------------------


ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮಹಿಳೆಯರ ಪಾತ್ರ

ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಅನೇಕ ಮಹನೀಯರ ಕೊಡುಗೆ ದೊಡ್ಡದು. ಈ ಏಕೀಕರಣದ ಚಳುವಳಿಯಲ್ಲಿ ಹೋರಾಡಿದ ಮಹಿಳೆಯರ ಸಾಧನೆ ಮಿಗಿಲಾದದ್ದು. ಕರ್ನಾಟಕ ಏಕೀಕರಣದಲ್ಲಿ ಜಯ ದೇವಿ ತಾಯಿ ಲೀಗಾಡೆ,  ಬಳ್ಳಾರಿಯ ಸಿದ್ದಮ್ಮ, ಶಾಂತಾದೇವಿ ಮಾಳವಾಡ, ಬಳ್ಳಾರಿಯ ಮಲ್ಲಮ್ಮ, ಬಳ್ಳಾರಿಯ ಯಶೋದಮ್ಮ,  ರುದ್ರಮ್ಮಾ, ಕಾಸರಗೋಡು ಸುಹಾಸಿನಿ ಭಂಡಾರಿ, ಕಮಲ ಶೆಟ್ಟಿ, ದಾದಾ ಕಾಮತ್ ಬೆಳಗಾವಿ, ತಾಯಿ ಮಂದಾಕಿನಿ ಪಟ್ಟಣ, ಸಾವಿತ್ರಿದೇವಿ ಹಳ್ಳಿಕೇರಿ ವೀರಮ್ಮ ಪಾಟೀಲ, ಭಾಗೀರಥಿ ಪಾಟೀಲ, ಹಳ್ಳಿಕೇರಿ ಪ್ರಮೀಳಾ ತಾಯಿ ಕಾಮತ  ಉಪ್ಪಿನ ಬಸಮ್ಮ, ಚಂಪಾ ತಾಯಿ ಜೋಗ್ಲಿ, ಲೀಲಾವತಿ,  ಮಾಗಡಿ ಗಂಗಮ್ಮ ದಪ್ಪ ಗುಡ್ಡಪ್ಪ, ಸರಸ್ವತಿ ಗೌಡರ ದೇವಕ್ಕ ಚೆನ್ನಪ್ಪ, ಚಂದ್ರಬಾಯಿ ಚೆನ್ನಪ್ಪ ವಾಲಿ ಚೆನ್ನಮ್ಮ ವಾಲಿ, ಪದ್ಮಾವತಿ ದೇಸಾಯಿ, ವೇದಮೂರ್ತಿ, ಸಾವಳಗಿಶಾಂತಾಬಾಯಿ ಮಠದ, ಪಾರ್ವತಿ ದೇಶಪಾಂಡೆ, ಬಳ್ಳಿಗಾವಿ ಅಬ್ಬಕ್ಕ, ಲಕ್ಷ್ಮೀದೇವಿ ಪಾಟೀಲ, ಕನ್ನಡಮ್ಮ ಉಮಾದೇವಿ, ಟೋಪನ್ನವಾರ ಉಮಾದೇವಿ, ಕುಂದಾಪುರದ ಕೃಷ್ಣಾ ಬಾಯಿ, ಕಣಜಿ ಕರಂಜಿ ಪಣಜಿಕರ ಹೀಗೆ ನೂರಾರು, ಸಾವಿರಾರು ಮಹಿಳೆಯರು ಕರ್ನಾಟಕದ ಏಕೀಕರಣದ ಚಳುವಳಿಯಲ್ಲಿ ಭಾಗವಹಿಸಿರುವುದು ನಿಜಕ್ಕೂ ಶ್ಲಾಘ ನಿಯವಾದದ್ದು.

ಈ ಹೋರಾಟದಲ್ಲಿ ರಾಜಕಾರಣಿಗಳು, ಸಾಹಿತಿಗಳು, ಹೋರಾಟಗಾರರು,  ಸಮಾಜ ಸೇವಕರು, ತನು, ಮನ, ಧನದಿಂದ ಹೋರಾಟ ಮಾಡಿದ ಹೋರಾಟದ ಕಲಿಗಳು. ಅದರಲ್ಲಿಯೂ ಜಯದೇವಿ  ತಾಯಿ ಲೀಗಾಡೆ ಅವರು ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಾಯಿ ಲೀಗಾಡೆ ಅವರು ಮಹಾರಾಷ್ಟ್ರಕ್ಕೆ ಸೇರಿದ ಸೊಲ್ಲಾಪೂರದವರು. ಅವರ ಮನೆ ಮಾತು ಮರಾಠಿ ಆದರೂ ಕನ್ನಡ ಭಾಷಿಕರನ್ನು ಒಂದುಗೂಡಿಸಿ ಹಗಲಿರುಳು ಶ್ರಮಿಸಿದರು. ಶ್ರೀಮಂತರ ಮನೆತನದಲ್ಲಿ ಹುಟ್ಟಿ ಬೆಳೆದಿರುವ ತಾಯಿ ಲೀಗಾಡೆ ಅವರು ಹೊಟ್ಟೆಯ ಕಿಚ್ಚಿಗೆ ಕಣ್ಣೀರು ಹಾಕಿದವರು. ಕರ್ನಾಟಕ ಏಕೀಕರಣದ ಇತಿಹಾಸದಲ್ಲಿ ಜಯದೇವಿ ತಾಯಿ ಲೀಗಾಡೆ ಅವರ ಹೆಸರು ಅಜರಾಮರ. ಅವರು ನಾಲ್ಕನೆಯ  ತರಗತಿಯವರಿಗೆ ಓದಿದರೂ ಜ್ಞಾನ ಸಂಪನ್ನರು. ಒಬ್ಬ ಮಹಿಳೆಯಾಗಿ ಸಮಾಜ ಸೇವೆ, ಸಾಹಿತ್ಯ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡವರು.

 ಮರಾಠಿಯಲ್ಲಿ ಶಿಕ್ಷಣ ಪಡೆದರೂ ಕನ್ನಡ ಕೂಡಾ ಕಲಿತು ಮರಾಠಿ ಮತ್ತು ಕನ್ನಡ ಭಾಷೆಯಲ್ಲಿ ಅನೇಕ ಕೃತಿಗಳನ್ನು ಬರೆದು ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಸಾಂಸ್ಕೃತಿಕ   ರಾಯಭಾರಿಯಾಗಿ ಬೆಳಗಿದ್ದಾರೆ. ಮೂರು ಮಕ್ಕಳ ತಾಯಿಯಾದರೂ ಮಹಿಳೆಯರ ಶಿಕ್ಷಣ ಸಲುವಾಗಿ ಕನ್ಯಾ ಶಾಲೆ ಆರಂಭಿಸಿ ಅಕ್ಷರ ದೀಪ ಬೆಳಗಿದಳು. ಅಷ್ಟೇ ಅಲ್ಲದೇ ಅಕ್ಕನ ಬಳಗ ಕಟ್ಟಿ ಮಹಿಳೆಯರಿಗೆ ಸ್ಫೂರ್ತಿ ತುಂಬಿದವಳು. ಕನ್ನಡ ವಿಷಯ ಬಂದಾಗ ಮಹಿಳೆಯರ ಜೊತೆಗೂಡಿ ಏಕೀಕರಣದ ಚಳುವಳಿಯಲ್ಲಿ ದುಮುಕಿದವಳು. ಅದು ಅವರ ಸಾಹಿತ್ಯದಲ್ಲಿ ಕಾಣ ಬಹುದು.

"ಕನ್ನಡ ನಮ್ಮ ನುಡಿ ಸಣ್ಣಾಗಿ ಸೂರಗಿತ್ತಿ

ಅಣ್ಣ ಬಸವಣ್ಣ ನಡೆಸಲು ಬಾ ಬೇಗ

ಕಣ್ಣ ತೆರೆ ಬಾ ಕುರುಡರ||

ಎಂದು ಹೇಳುತ್ತಾ' ಉದಯ ವಾಗಲಿ ನಮ್ಮ ಚೆಲುವ ಕನ್ನಡ ನಾಡು' ಎಂದು

ಹಾಡುವುದು ಕನ್ನಡಿಗರ ಪ್ರೀತಿ.

ನಿಸ್ವಾರ್ಥ ಸೇವೆಗೈದಂಥವರು. ಕನ್ನಡಕ್ಕಾಗಿ ಹೋರಾಡುವ ಧೈರ್ಯ ಇದೀಯಾ? ನಾಡಿನವರು ಮನೆಯಲ್ಲಿರುವವರು, ನೀವು ಗಡಿನಾಡು ಕನ್ನಡತಿ ನಾನು, ಗಡಿನಾಡಿನಲ್ಲಿರುವ ತಳಮಳ ನಿಮಗೆ  ಗೊತ್ತಿಲ್ಲ ಸೋಲಾಪುರ ಗಡಿ  ನಾಳೆ ಬೇಲೂರಿಗೆ ಬರಬಹುದು. ಕರ್ನಾಟಕ ಏಕೀಕರಣಕ್ಕೆ ನಾನಂತು ಜೀವ ಕೊಡಲು ಸಿದ್ದ ಎಂದು ಎಚ್ಚರಿಕೆ ನೀಡಿದ ಮಹಾ ತಾಯಿ ಲೀಗಾಡೆ ಅವರು, ಮುಂದೆ ಸೊಲ್ಲಾಪುರಕ್ಕೆ ಕನ್ನಡ ಕೋಟೆ ಸಂಸ್ಥೆಯನ್ನು ಕಟ್ಟಿ ಕರ್ನಾಟಕ ಏಕೀಕರಣಕ್ಕೆ ಗಡಿನಾಡು ಕನ್ನಡಿಗರನ್ನು ಎಚ್ಚರಿಸುವ ವೀರ ಕನ್ನಡ ಮಾತೆ. ಜಯ ದೇವಿ ಲೀಗಾಡೆ ಅವರು ಅನಾರೋಗ್ಯ ನಿಮಿತ್ಯ ಮುಂಬೈ ಆಸ್ಪತ್ರೆಯಲ್ಲಿ ಇದ್ದರು. ಅಲ್ಲಿಂದಲೇ ರಕ್ತದಲ್ಲಿ ಪತ್ರಕ್ಕೆ ಸಹಿ ಮಾಡಿ ಹೋರಾಟಕ್ಕೆ ಬೆಂಬಲ ನೀಡಿದರು.1955 ರಲ್ಲಿ ಹುಬ್ಬಳ್ಳಿಗೆ ಬಂದಿದ್ದ ಮಾಜಿ ಪ್ರಧಾನಿ ಶ್ರೀಮತಿ ಇಂದ್ರಾ ಗಾಂಧಿ ಅವರನ್ನು ಕಂಡು ತಾಯಿಯವರು ಅಕ್ಕಲಕೋಟೆ, ಸೊಲ್ಲಾಪುರ, ಗಡಿಂಗ್ಲಿಜ, ಮಡಕಶಿರಾ, ಕಾಸರಗೋಡು, ನೀಲಿಗಿರಿ ಮೊದಲಾದ ಕನ್ನಡ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಒತ್ತಾಯಿಸುವ ಮನವಿ ಪತ್ರ  ಬರೆದು ಸಲ್ಲಿಕೆ ಮಾಡಿದ್ದರು. ಇಂಥ ತಾಯಿ ನಮ್ಮೆಲ್ಲರ ಪ್ರೀತಿಯ ತಾಯಿಯ ಹೆಸರು ಅವಿಸ್ಮರಣೀಯ. ಅವರ ನೆನಪು ಅಜರಾಮರ.

-      ದಯಾನಂದ ಪಾಟೀಲ್

----------------------------------------------------------------------------------------------------------------

ಪೋಟೋಗ್ರಫಿ

ಮೀನಾಕ್ಷಿ ರಾಜಣ್ಣ ರಾಮಸಂದ್ರ

 


ಕವಿತೆಗಳು


ತವರುಮನೆ

ಅಮ್ಮನ ಮಡಿಲಲ್ಲಿ ಹಾಯಾಗಿ ಮಲಗುತ್ತ |

ಕಳೆದೊಯ್ತು ಎಷ್ಟೋ ವಸಂತ | ಮುದ್ದು ಮಾಡಿ

ನೀ ಉಣಿಸುತ್ತಿದ್ದೆ ಪ್ರೀತಿ ತುತ್ತ  ||೧||

 

ತವರಿನಲಿ ಅದೇನು ಸುಖವೋ ನಾಕಾಣೆ |

ಮರೆಯುವುದು ಎಲ್ಲಾ ಬವಣೆ | ಮನದಲ್ಲಿ

ಹಸುರಾಯ್ತು ನಿನ್ನ ಸ್ಮರಣೆ ||೨||

 

ನಿನ್ನ ಮಡಿಲಲಿದೆ ಸುಖದುಃಖದ ಸಾಗರ |

ಮಮತೆ ತುಂಬಿದ ಸಂಸ್ಕಾರ | ನೀನಾದೆ

ಮರೆಯದ ಸ್ಪೂರ್ತಿಯ ಆಗರ ||೩||

 

 ನಿನ್ನ ಮಡಿಲಲಿದೆ ಅಗಣಿತ ಸಾಂತ್ವನ |

ಕಳೆಯುವುದು ದುಃಖ ದುಮ್ಮಾನ |ದಕ್ಕಿದರೆ

ನಿನ್ನ ಮಡಿಲು ಸಾಕೆಂಬೆನ ||೪||

 

ತವರಿಲ್ಲದೆ ನಮಗೆ ಸ್ವರ್ಗವು ಸಾಮಾನ್ಯ |

ಅಮ್ಮನಿದ್ದರೆ ತವರು ಅಸಾಮಾನ್ಯ |ತಿಳಿಯಮ್ಮ

ಅವಳಿಲ್ಲದೆ ಈ ಜಗವೇ ಶೂನ್ಯ ||೫||                                   

- ಶ್ರೀಮತಿ ದೀಪಾಲಿ ಸಾಮಂತ, ದಾಂಡೇಲಿ, ಉ ಕ

ರೈತಣ್ಣನಿಗೆ ನಮನ

ನನ್ನ ದೇಶದ  ಬೆನ್ನಲುಬು

ಎನ್ನ ದೇಶದಾ ಅನ್ನದಾತನೆ|೧/

ಹೊನ್ನಾರವ ಮಾಡಿ||

ಭೂಮಿಯನ್ನು ಸಿದ್ಧಿಸಿ|

ಬೀಜವನು ಉತ್ತಿ ಕಳೆಯನ್ನಾ ಕಿತ್ತಿ|

ಫಸಲನು ಕಾಯ್ತಾ|

ಕೊಯ್ಲನು ಮಾಡಿದ||೨/

ಕಣವನು ಸಾರಿಸಿ|

ಒಕ್ಕಲು ಕಟ್ಟಿ ಫಸಲನ್ನು ತುಳಿಸಿ|

ರಾಶಿಯ ಮಾಡಿದ||೩/

ಹಗಲು ಇರುಳು ಎನ್ನದೆ|

ದೇಶಕ್ಕಾಗಿ ಶ್ರಮಿಸಿದಾತ|

ದೇಶದ ಜನಕ್ಕೆ ಅನ್ನದಾತ|

ಎಂತಹ ಸಾಹುಕಾರ ಈ ರೈತನು||೪/

ನೀ ಇಲ್ಲದೇ ನಾನಿಲ್ಲಾ ನೀ ನಿಲ್ಲದೆ ಅನ್ನವಿಲ್ಲಾ|

ಅನ್ನವಿಲ್ಲದೆ  ಉಸಿರೇ ಇಲ್ಲಾ||೫

ಜಗಕೆ ಅನ್ನವನಿಕ್ಕುವನೇ|

ಅನ್ನದಾತನು  ಆತನೇ ನಮಗೆ ಪ್ರಾಣದಾತನು|

ನಿಮಗಿದೊ ಕೋಟಿ ನಮನ||೬/

                    ಓಬಳೇಶ್ ಎಂ. ಚಿಕ್ಕೋಬನಹಳ್ಳಿ.

 ಅಮ್ಮನ ಪ್ರೀತಿ ಎಂದಿಗೂ ಬದಲಾಗದು....

ತನಗಾಗಿ ಏನನ್ನೂ ಬಯಸದವಳು

 ನಮ್ಮ ನಗುವಲ್ಲೆ ಖುಷಿ ಕಂಡವಳು

 ಎಲ್ಲವನ್ನೂ ಸಹಿಸಿ ಸಲಹುವಳು

 ಅವಳೇ ಪ್ರೀತಿಯ ನಲ್ಮೆಯ ಅಮ್ಮ

 

 ಕಾಲ ಬದಲಾಗುವುದು ನಿಜ

 ಜನ ಬದಲಾಗುವುದು ಕೂಡ ನಿಜ

 ಸಮಯ ಬದಲಾಗುವುದು ನಿಜ

 ಆದರೆ ಅಮ್ಮನ ಪ್ರೀತಿ ಬದಲಾಗದು

 

 ಎಲ್ಲಾ ಸಮಯದಲ್ಲೂ ಸಹ ಈಕೆ ನಗುವಳು

 ಕನಸಿನಲ್ಲೂ ನಮ್ಮನ್ನು ಕಾಣುವವಳು

 ಬದುಕಿನ ಅರ್ಥವನ್ನು ತಿಳಿಸುವಳು

 ಅವಳೇ ಪ್ರೀತಿಯ ನಲುಮೆಯ ಅಮ್ಮ

 

 ಬಡತನ ಬಂದರೆ ತೊರಿಸದವಳು

 ಗೆದ್ದಾಗ ನಮ್ಮನ್ನು ಮುದ್ದಾಡುವಳು

 ಸೋತಾಗ ಬೈಯದೆ ಹುರಿದುಂಬಿಸುವಳು

 ಆದರೇ ಮಕ್ಕಳನ್ನು ಎಂದೂ ನೋಯಿಸದವಳು

   

       ಸೌಂದರ್ಯ S ಅಣ್ವೇಕರ್   ಮರಾಠಿಕೊಪ್ಪ ಶಿರಸಿ.

ಗಝಲ್

ಚಾರುಹಾಸದ ರಾಣಿಗಾಗಿ ಬೀದಿಯಲ್ಲಿ

ಸುಮವನ್ನು ಹಾಸುವೆನು ಸಖಿ

ಜಾರುತಿರುವ ಹಿಮಮಣಿಯ ಪೋಣಿಸಿ

ಕೊರಳಿಗೆ ಹಾಕುವೆನು ಸಖಿ/೧/

ಅರಳಿದ ಪುಷ್ಪಗಳ ಸುಗಂಧವನು

ಅರಸಿ ಆರಿಸಿ ತರುವೆನು

ಹರಳಿನ ಬೆಟ್ಟದಲಿ ಚೆಂಬವಳವನು

ಶೋಧಿಸಿ ತರುವೆನು ಸಖಿ/೨/

ಕನ್ನಿಕೆಯ ಚುಬುಕಕ್ಕೆ ಢಾಳಕಾಂತಿಯ

ಗೌರವರ್ಣವು ನೀಡುತಿದೆ

ಚೆನ್ನಿಕೆಯ ಹೆರಳಿಗೆ ಮುಡಿಸಲು ಮಲ್ಲಿಗೆ

ಮಾಲೆಯ ಇಡುವೆನು ಸಖಿ/೩/

ದ್ಯುಮಣಿಯ ಬೆಳಕನ್ನು ಗೊತ್ತಿಲ್ಲದೆ

ಕದ್ದಿರುವ ಸಾದ್ವಿಶಿರೋಮಣಿ

ರಮಣನನು ನೋಟದಲ್ಲಿ ಗೆದ್ದಿರುವ

ಚೆಲುವೆಯ ಅಪ್ಪುವೆನು ಸಖಿ/೪/

ತೋಳಿನಲಿ ಬಲವಾಗಿ ಹಿಡಿದಿಟ್ಟು

ಕೋಮಲೆಯ ಚುಂಬಿಸುವೆ

ಪೌಳಿಯಲಿ ಅಭಿನವನ ಆಗಮನಕೆ

ಅಹರ್ನಿಶಿ ಕಾಯುವೆನು ಸಖಿ/೫/

                              ಶಂಕರಾನಂದ ಹೆಬ್ಬಾಳ


ಸಾಧಕರ ಪರಿಚಯ

ಕಗ್ಗತ್ತಲಲ್ಲಿ ಮಿಂಚಿದ ಮಂಜಮ್ಮ ಜೋಗತಿ

 ನಮ್ಮದು ಶತಮಾನದ ಹಿಂದಿನಿಂದಲೂ ಪುರುಷ ಪ್ರಧಾನ ಸಮಾಜ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಸಬಲರಾಗಿ ಉನ್ನತ ಸ್ಥಾನಮಾನವನ್ನು ಹೊಂದಿದ್ದಾರೆ ಹಾಗೂ ತೊಟ್ಟಿಲು ತೂಗುವ ಕೈಗಳು ಕೂಡ ದೇಶ ಆಳಿ ಬಿಟ್ಟವು.. ಈ ಎರಡು ವರ್ಗಕ್ಕೂ ಸೇರದೆ ಕೆಸರಿನಲ್ಲಿ ಅರಳಿದ ಕಮಲವೇ ತೃತೀಯ ಲಿಂಗಿ ಮಂಜಮ್ಮ ಜೋಗತಿ ! ಮಂಗಳಮುಖಿ ಎಂದರೆ ಹೆಂಗಸರಿಗೆ ನಾಚಿಕೆ ಮತ್ತು ಗಂಡಸರಿಗೆ ಅಸಹ್ಯ ಆದರೆ ದೈತ್ಯ ಪ್ರತಿಭೆ ಮಂಜಮ್ಮ ಜೋಗತಿ ಎಲ್ಲರೂ ಬಾಯಿ ಮುಚ್ಚಿಕೊಳ್ಳುವಂತಹ ಸಾಧನೆಯನ್ನು ತೋರಿರುವುದಂತೂ ಕಟು ಸತ್ಯ! ಮಂಗಳಮುಖಿಯರು ಶುಭದ ಸಂಕೇತವೆಂದು ತಿಳಿದಿದ್ದರೂ ಅವರಿಂದ ನೂರು ಅಡಿ ಅಂತರವನ್ನು ಕಾಯ್ದುಕೊಳ್ಳುತ್ತೇವೆ ಕಾರಣ ಅವರ ಹಾವಭಾವ ಮಾತು ಮತ್ತು ಅಸಭ್ಯ ವರ್ತನೆ ಆದರೆ ನೋವು ಅವಮಾನಗಳನ್ನು ಸಹಿಸಿ ಇಂದು ಸಿಂಹಾಸನದ ಮೇಲೆ ಕುಳಿತಿರುವ ಮಂಜಮ್ಮ ಜೋಗತಿಯವರದು ಅಪ್ಪಟ ಹೆಂಗರಳು..

ಅದು 1964 ಎಪ್ರಿಲ್ 18 ಬಳ್ಳಾರಿ ಜಿಲ್ಲೆಯ ಕಲ್ಲು ಕಂಬದ ತಗ್ಗಿನಮಠ ಎಂಬ ಊರಿನ ಓಣಿಯಲ್ಲಿ ಹುಟ್ಟಿದವನೇ ಮಂಜುನಾಥ ಶಾಲಾ ದಾಖಲಾತಿಗಳಲ್ಲಿ ಕುಮಾರ ಬಿ ಮಂಜುನಾಥ ಶೆಟ್ಟಿ ಎಂದು ದಾಖಲಾಗಿದೆ.. ವಿದ್ಯಾಭ್ಯಾಸ ಹೆಚ್ಚೆಂದರೆ ಅಂದಿನ ಕಾಲಕ್ಕೆ ಎಸ್.ಎಸ್.ಎಲ್.ಸಿ ವಿಶೇಷವೆಂದರೆ ಇವರ ಸಮುದಾಯದ ಮಕ್ಕಳು ಶಾಲೆ ಸೇರುತ್ತಾರೆಂದರೆ ಅದೇನೋ ಸಂಭ್ರಮ ! ಕೃಷ್ಣನ ವೇಷ ಹಾಕಿ ಜುಟ್ಟು ಕಟ್ಟಿ ಕೊರಳಿಗೆ ಮಂಡಕ್ಕಿ ಸರ ಕಲ್ಲಂಗಡಿ ಮತ್ತು ಕರಬೂಜ ಹಣ್ಣಿನ ಬೀಜದ ಮಾಲೆ ಹಾಕಿ ಶಾಲೆಯಲ್ಲಿ ಪೂಜೆ ಮಾಡಿ ತೆಂಗಿನ ಕಾಯಿ ಕೊಬ್ಬರಿ ಬೆಲ್ಲ ಮಂಡಕ್ಕಿ ಮಿಶ್ರಣ ಮಾಡಿ ಮಕ್ಕಳಿಗೆಲ್ಲ ಹಂಚುತ್ತಿದ್ದರು..

ಮಂಜುನಾಥ ಏಳನೇ ತರಗತಿ ಓದುವಾಗಲೇ ತನ್ನ ಶರೀರದಲ್ಲಿ ಏನೋ ಬದಲಾವಣೆಯಾಗುತ್ತಿರುವಂತೆ ಭಾಸವಾಗಿ ಯಾರ ಮುಂದೆಯೂ ತೋಡಿಕೊಳ್ಳಲಾಗದ ನೋವು ಸಂಕಟ ಕಾಡತೊಡಗಿದವು.. ಇತ್ತ ಹುಡುಗರೊಂದಿಗೂ ಹೊಂದಿಕೊಳ್ಳುತ್ತಿಲ್ಲ ಅತ್ತ ಹುಡುಗಿಯರೊಂದಿಗೆ ಹೊಂದಿ ಕೊಳ್ಳಲಾಗುತ್ತಿಲ್ಲ ಆ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಹಾಗೆ ಇರಬೇಕು ಮತ್ತು ಬದುಕಬೇಕು ಎಂಬ ಭಾವನೆಗಳನ್ನು ಹತ್ತಿಕ್ಕಿ ಕೊಳ್ಳಲಾರದೇ ಶಾಲೆಯ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನು ಮಾಡುತ್ತಿದ್ದರು.. ಹತ್ತನೇ ತರಗತಿ ಓದುವಷ್ಟರೊತ್ತಿಗೆ ಎಲ್ಲರಿಗೂ ಕಾಣುವಂತೆ ಶರೀರದಲ್ಲಿ ಹಲವಾರು ಮಾರ್ಪಾಡುಗಳಾದವು ಮಂಜುನಾಥನ ಇಡೀ ನಡವಳಿಕೆ ಹೆಣ್ಣಿನಂತಾಗಿತ್ತು.. ಪೋಷಕರು ಅವಮಾನ ತಾಳಲಾರದೆ ಶಾಲೆ ಬಿಡಿಸಿ ಬಿಟ್ಟರು ಅವರ ಹೆಣ್ಣಿನ ವರ್ತನೆ ನೋಡಿ ಕಟ್ಟಿಗೆಯಿಂದ ಬಡಿಯತೊಡಗಿದರು.. ಮಂಜುನಾಥನ ಮೇಲೆ ಹುಲಿಗೆಮ್ಮ ದೇವರು ಬರುವುದೆಂದು ಪುಕಾರೆಬ್ಬಿಸಿ ಮಾನ ಮರ್ಯಾದೆ ಉಳಿಸಿಕೊಳ್ಳುವ ಸಲುವಾಗಿ ಅವರನ್ನು ಹುಲಿಗೆಮ್ಮ ದೇವತೆಗೆ ಮುಡಿಪಾಗಿಡಲು ನಿರ್ಧರಿಸಿದರು.. ಆದರೂ ಅತೀವವಾದ ಅವಮಾನ ತಾಳಲಾರದೆ ಮನೆಯಿಂದ ಚಪ್ಪಲಿಯಲ್ಲಿ ಹೊಡೆದು ಹೊರ ನೂಕಿದರು.. ಆಗ ಅವರಿಗೆ ಗುರುವಾಗಿ ಮತ್ತು ಆಶ್ರಯದಾತೆಯಾಗಿ ಬಂದವರೆ ಕಾಳಮ್ಮ ಜೋಗತಿ ! ಮನೆ ಮಗಳಾಗಿ ಕಂಡು ತನ್ನ ಸಕಲ ವಿದ್ಯೆಯನ್ನು ಧಾರೆ ಎರೆದು ತಮ್ಮ ಕಲಾ ತಂಡದಲ್ಲಿಯೇ ಇರಿಸಿಕೊಂಡಿರುತ್ತಾರೆ...

ಹಾಗೆ ತುಂಗಭದ್ರಾ ನದಿಯಲ್ಲಿ ಹಿರಿಯ ಜೋಗತಿಯೊಬ್ಬರು ಅವರ ಉಡದಾರ ಹರಿದು ಹೆಣ್ಣು ಮಕ್ಕಳ ಉಡುಪು ತೊಡಿಸಿ ದೀಕ್ಷೆ ನೀಡಿಬಿಟ್ಟರು. ಹೀಗೊಮ್ಮೆ ದೇವರನ್ನು ತಲೆಯಲ್ಲಿರಿಸಿ ಒಂದಿಷ್ಟು ಹಣ ಗಳಿಸಿ ರಾತ್ರಿ ತಮ್ಮ ಜಾಗಕ್ಕೆ ಮರಳುತ್ತಿರುವಾಗ ಮದ್ಯದಂಗಡಿಯ ಗಿರಾಕಿಗಳು ಅವರನ್ನು ಕರೆದು ಸಿಗರೇಟ್ ಸೇದ್ತಿಯಾ ? ಅಂದ್ರು ಇಲ್ಲಣ್ಣ ನನಗೆ ಅಭ್ಯಾಸವಿಲ್ಲವೆಂದರು  ನೀನು ಹೆಣ್ಣೋ ಅಥವಾ ಗಂಡೋ ಎಂದು ಕೇಳಿದರು ನಾನು ಜೋಗತಿಯಾಗಿದ್ದೀನಣ್ಣಾ ಎಂದು ಗದ್ಗದಿತರಾಗಿ ಉತ್ತರಿಸಿದರು.. ಹೇ!.. ನೀ ಜೋಗತಿ ಮತ್ತೆ ಯಾರನ್ನು ತಬ್ಬಿಕೋತಿ ಬಾ ಇಲ್ಲಿ ಎಂದು ಐದು ಜನ ಗಂಡಸರು ಇವರ ಮೇಲೆ ವ್ಯಾಘ್ರಗಳಂತೆ ಬಿದ್ದರು..ಮೂಲದಲ್ಲಿ ಇವರು ಒಬ್ಬ ಗಂಡು ಎಂದು ತಿಳಿದಿದ್ದರೂ ಅತ್ಯಾಚಾರ ಮಾಡಿ ಹೀನಾಯವಾಗಿ ಘಾಸಿಗೊಳಿಸಿದ್ದರು.

ಇಂದು ಅತ್ಯಾಚಾರವಾದರೆ ಕ್ಯಾಂಡಲ್ ಹಿಡಿದು ಚಳುವಳಿ ಮಾಡುವ ನಾವುಗಳು ಒಂದು ಕಡೆ.. ಆದರೆ ಅಂದು ಚೀರಾಡಿದರು ಬಿಡಿಸಿಕೊಳ್ಳಲು ಯಾರೂ ಬರದೇ ಇರುವ ಸ್ಥಿತಿಯನ್ನು ಎದುರಿಸಿದ ಮಂಜಮ್ಮನವರು ಒಂದು ಕಡೆ.. ಮುಂದೆ ನಡೆದದ್ದೆಲ್ಲ ಕೆಟ್ಟ ಕನಸೆಂದು ಮರೆತು ಬಿಟ್ಟರು.. ಚೌಕಿ ಪದ ಹಾಗೂ ನಾಟಕಗಳಲ್ಲಿ ಹಲವಾರು ಪಾತ್ರ ಮಾಡಿ ಜನಮಾನಸದಲ್ಲಿ ಉಳಿದರು ಭೀಮ,ಕೀಚಕ ದುಶ್ಯಾಸನ ಹಲವಾರು ಪಾತ್ರಗಳು ಇವರಿಗೆ ಹೆಸರು ತಂದು ಕೊಟ್ಟಿತ್ತು. ಆದರೆ ಇವರನ್ನು ಎತ್ತರಕ್ಕೆ ಕೊಂಡೊಯ್ದದ್ದು ಜೋಗತಿ ಪಾತ್ರ ಆದ್ದರಿಂದಲೇ ಅವರು ಇಂದಿಗೂ ಮಂಜಮ್ಮ ಜೋಗತಿ ಎಂದು ಹೆಸರಾಗಿದ್ದಾರೆ..

ಈ ಮಹಿಳಾ ಸಾಧಕಿಗೆ 2006ರ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2007ರ ಜಾನಪದ ಶ್ರೀ ಪ್ರಶಸ್ತಿ, 2008ರ ಜಾನಪದ ಲೋಕ ಪ್ರಶಸ್ತಿ, 2010ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2014ರ ಸಮಾಜ ಸಖಿ ಪ್ರಶಸ್ತಿ ಮತ್ತು ಸಂದೇಶ ಪ್ರಶಸ್ತಿ ದೊರೆತಿದೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಇತರ ಮಂಗಳಮುಖಿಯರಿಗೂ ಸ್ಫೂರ್ತಿಯಾಗಿದ್ದಾರೆ.. ಹಾಗೂ ದೇಶದಲ್ಲಿಯೇ ಮೊದಲ ಬಾರಿಗೆ ಉನ್ನತ ಸ್ಥಾನವನ್ನೇರಿದ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.. ಸಾಧನೆ ಸಾಧಕನ ಸ್ವತ್ತು ಎಂಬುದಕ್ಕೆ ಮಂಜಮ್ಮ ಜೋಗತಿ ಅವರ ನೈಜ ಬದುಕೇ ಬಹುದೊಡ್ಡ  ಉದಾಹರಣೆ.

                                                                                     ದೀಕ್ಷಿತ್ ಕುಮಾರ್ ಕೆ.ಎಂ ವಿದ್ಯಾರ್ಥಿ ಮಂಡ್ಯ.

ಗಡಿಭಾಗದ ಗ್ರಾಮೀಣ ಮಕ್ಕಳ ಆಶಾಕಿರಣವಾದ ಶ್ರೀ ಟ್ರಸ್ಟ್‌

ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ಗಡಿ ಭಾಗವಾದ ಗೌರಿಬಿದನೂರಿನ ನಗರಗೆರೆ ಗ್ರಾಮದಲ್ಲಿ ಬೆಂಗಳೂರಿನ ಶ್ರೀ ಸಂಶೋಧನೆ ಮತ್ತು ಶಿಕ್ಷಣ ಸಂಸ್ಥೆಯು ಬಡ ಮಕ್ಕಳ ಅದರಲ್ಲಿಯೋ ಗ್ರಾಮೀಣ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮಹದ್ದುದ್ದೇಶದಿಂದ ಶ್ರೀ ಪದವಿ ಪೂರ್ವ ಕಾಲೇಜನ್ನು ಸ್ಥಾಪಿಸಿದೆ. ೨೦೧೩-೧೪ ನೇ ಶೈಕ್ಷಣಿಕ ವರ್ಷದಿಂದ ಕಾಲೇಜನ್ನು ಪ್ರಾರಂಭ ಮಾಡಲಾಗಿದ್ದು ಇದುವರೆಗೆ ಸು ೫೦೦ ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳ ಜೀವನ ಹಾಗೂ ಭವಿಷ್ಯವನ್ನು ಹಸನಾಗಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ. ಗಡಿ ಭಾಗವಾದ ಚಿಕ್ಕಬಳ್ಳಾಪುರ ಹಾಗೂ ಆಂದ್ರದ ಅನಂತಪುರಂ ಜಿಲ್ಲೆಗಳ ವ್ಯಾಪ್ತಿಯ ಹಲವಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ.

ಅತ್ಯಂತ ಕಡಿಮೆ ವೆಚ್ಚದಲ್ಲಿ ಉತ್ತಮ ದರ್ಜೆಯ ಶಿಕ್ಷಣ ಹಾಗೂ ಕೌಶಲ್ಯಗಳನ್ನು ನೀಡುತ್ತಾ ಬರಲಾಗುತ್ತಿದೆ. ಮಹಿಳಾ ಶಿಕ್ಷಣ ಆ ಮೂಲಕ ಸ್ತ್ರೀ ಸಭಲೀಕರಣವನ್ನೇ ಮುಖ್ಯ ಧೇಯವಾಗಿಸಿಕೊಂಡಿರುವ ಶ್ರೀ ಟ್ರಸ್ಟ್ ಮಹಿಳಾ ಸಭಲೀಕರಣಕ್ಕೆ ಪೂರಕವಾದ ವಿವಿಧ ಕೌಶಲ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಅದರ ಜೊತೆಗೆ ಸ್ತ್ರೀ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮತ್ತು ಮುಖ್ಯವಾಗಿ ಗ್ರಾಮೀಣ ಜನರ ಮುಖ್ಯ ಕಸುಬಾದ ಕೃಷಿ ಹಾಗೂ ಹೈನುಗಾರಿಕೆಯನ್ನು ಪ್ರೊತ್ಸಾಹಿಸುವ ಸ್ಮಾರ್ಟ್ ಪಾರ್ಮಿಂಗ್ ತರಬೇತಿ ನೀಡುವ ಕಾರ್ಯಕ್ರಮವನ್ನು ಸಹಾ ಹಮ್ಮಿಕೊಂಡಿದೆ.

 ಗ್ರಾಮೀಣ ಪ್ರದೇಶದ ಮಕ್ಕಳು ಸಹಾ ನಗರ ಪ್ರದೇಶದ ಮಕ್ಕಳಂತೆ ಎಲ್ಲಾ ರೀತಿಯ ಭೋದನಾ ಸೌಲಭ್ಯಗಳನ್ನು ಪಡೆಯಬೇಕೆಂಬ ಸದ್ದುದ್ದೇಶದಿಂದ ಮಕ್ಕಳಿಗಾಗಿ ಕಂಪ್ಯೂಟರ್ ತರಬೇತಿ, ವ್ಯಕ್ತಿತ್ವ ವಿಕಸನ ತರಬೇತಿ, ಹಾಗೂ ಆಂಗ್ಲ ಭಾಷಾ ಕಲಿಕೆ ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ತರಬೇತಿ ಮುಂತಾದವನ್ನು ಸಹಾ ಸಂಸ್ಥೆ ವಿದ್ಯಾರ್ಥಿ ಹಾಗೂ ಯುವಜನರಿಗೆ ಉಚಿತವಾಗಿ ನೀಡುತ್ತಾ ಬಂದಿದೆ. ಲಭ್ಯವಿರುವ ಬಹಳ ಸೀಮಿತ ಸಂಪನ್ಮೂಲಗಳನ್ನೇ ಬಳಸಿಕೊಂಡು ಹಲವರ ಸಲಹೆ ಸಹಕಾರಗಳ ಜೊತೆಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಹೇಮ ಶ್ರೀನಿವಾಸಮೂರ್ತಿ ರವರು  ಟ್ರಸ್ಟ್ ನ ಎಲ್ಲಾ ಸದಸ್ಯರು ಮತ್ತು ಪ್ರಾಂಶುಪಾಲರಾದ ಶ್ರೀ ಉಮೇಶ್ ರವರ ಅವಿರತ ಪರಿಶ್ರಮದಕಾರಣದಿಂದ ಸಂಸ್ಥೆ ತನ್ನ ಸೇವಾ ಕಾರ್ಯಗಳನ್ನು ನಿರಂತರವಾಗಿ ಮುಂದುವರೆಸಿಕೊಂಡು ಬರುತ್ತಿದೆ.

ಎಂಥಹಾ ಸಂಕಷ್ಟ ದ ಕಾಲದಲ್ಲಿಯೊ ಸಹಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಸೇರಿದಂತೆ ಎಲ್ಲಾ ರೀತಿಯ ಸೌಲಬ್ಯಗಳನ್ನು  ಒದಗಿಸಿ ಪಾಠ ಪ್ರವಚನಗಳನ್ನು ತಪ್ಪದೇ ನಡೆಸಿಕೊಂಡು ಬರಲಾಗುತ್ತಿದೆ.  ಕರೋನ ನಂತರದ ಕಾಲಕ್ಕೆ ತಕ್ಕಂತೆ ಆನ್ ಲೈನ್ ಹಾಗೂ ಆಪ್ ಲೈನ್ ತರಗತಿಗಳನ್ನು ಪ್ರಾರಂಭ  ಮಾಡಲಾಗುತ್ತಿದ್ದು‌ ತರಗತಿಗಳ ಜೊತೆಗೆ  ಎಲ್ಲಾ ರೀತಿಯ ಕೌಶಲ ಅಭಿವೃದ್ಧಿ ತರಬೇತಿಗಳನ್ನು  ಸಹಾ ಪ್ರಾರಂಭಿಸುವ ಕಾರ್ಯಯೋಜನೆ ಸಿದ್ಧವಾಗಿದ್ದು‌. ಮುಂದಿನ ದಿನಗಳಲ್ಲಿ ಹೋಸ ಸ್ಪರ್ಶ ದೊಂದಿಗೆ ಸಂಸ್ಥೆಯನ್ನು ಮತ್ತಷ್ಟು ಬೆಳೆಸಿ ಮತ್ತಷ್ಟು ಮಗದಷ್ಟು ಬಡ ವಿದ್ಯಾರ್ಥಿಗಳ ಹಾಗೂ ಗ್ರಾಮೀಣ ಜನರ ಮಹಿಳೆಯರ ಕೃಷಿಕರ ಹಾಗೂ ವೃದ್ಧರ ಸೇವೆ ಯನ್ನು ಮುಂದುವರೆಸುವ ಶಿಕ್ಷಣ ಮತ್ತು ಸಂಘಟನೆಗೆ ಆದ್ಯತೆ ನೀಡುವ ಕೆಲಸವನ್ನು ಸಂಸ್ಥೆ ಮಾಡುವತ್ತ ಮುಂದೆ ಸಾಗುತ್ತಿದೆ.

 ಶಿಕ್ಷಣವೊಂದೆ ನಮ್ಮ ಮುಂದಿರುವ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಎಂಬುದನ್ನು  ಅರಿತಿರುವ ಸಂಸ್ಥೆ  ಶಿಕ್ಷಣದಿಂದ ಮಾತ್ರ ಯುವಕರ, ವಿದ್ಯಾರ್ಥಿಗಳ, ಮಹಿಳೆಯರ ಅಭಿವೃದ್ಧಿ ಮತ್ತು ಸಭಲೀಕರಣ ಸಾಧ್ಯ ಎಂಬುದನ್ನು ಮನಗಂಡು  ಸರ್ವರಿಗೂ ಶಿಕ್ಷಣ ನೀಡುವ, ಶಿಕ್ಷಣಕ್ಕೆ ಪ್ರೋತ್ಸಾಹಿಸುವದರ ಜೊತೆಗೆ ಅರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೋ ಸಹಾ ಮಹಿಳೆಯರು ಹಾಗೂ ಯುವಕರು ಮುಂದುವರೆಯಬೇಕೆಂಬ ಹಂಬಲದಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತದ್ದು ಹಲವಾರು ಮಹಿಳಾ ಪರ ರೈತಪರ ಚಟುವಟಿಕೆಗಳನ್ನು ಎಂದಿನಂತೆ ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಶ್ರೀ ಟ್ರಸ್ಟ್‌ ನಿಜಕ್ಕೂ ಗ್ರಾಮೀಣ ಬಡ ಮಕ್ಕಳ ಆಶಾಕಿರಣವಾಗಿದೆ.

ಸಾಧನೆಯ ಹಾದಿಯಲ್ಲಿ ಗ್ರಾಮೀಣ ಯುವ ಪ್ರತಿಭೆ ಮತ್ತು ಕಾದಂಬರಿಕಾರ ಎಸ್.ರಾಜು ಸೂಲೇನಹಳ್ಳಿ

ಕನ್ನಡದ ಪ್ರಾಚೀನತೆಯನ್ನು ಅರ್ದಾಬೇನದಿಂದ ಎತ್ತಿಕೊಂಡಾಗ ಹಲವಾರು ಮಹಾನ್ ಸಾಧಕರು ಪರಿಚಯಕ್ಕೆ ಬರುತ್ತಾರೆ. ಅವರ ಹಲವಾರು ಮಾತುಗಳು, ನಡೆ, ಸಂಪ್ರದಾಯ, ಆಚಾರ-ವಿಚಾರ, ಪದ್ದತಿ, ಸಿದ್ದಾಂತಗಳು ಸಾಹಿತ್ಯ ಆಸಕ್ತರನ್ನು ಹತ್ತಿರಕ್ಕೆ ತರುವ ಕೆಲಸ ಮಾಡುತ್ತದೆ. ಓದು, ಬರಹ, ಸೃಜನಶೀಲತೆ ಎನ್ನುವ ವಿಚಾರ ಮತ್ತು ಪ್ರತಿಭೆಯನ್ನುವ ಗುಣ ಅಳವಡಿಕೆಯಿಂದ ಅದನ್ನು ಎಲ್ಲರಲ್ಲಿಯೂ ನೋಡಲಾಗುವುದಿಲ್ಲ. ಅಂತಹ ಗುಣಗಳನ್ನು ಪ್ರತಿಭೆಯನ್ನು ಹೊಂದಿರುವ ಯುವ ಕಾದಂಬರಿಕಾರ ಶ್ರೀಯುತ ದುರ್ಗದ ನಾಡಿನ ಕನ್ನಡಿಗನನ್ನು ಇಂದು ಪರಿಚಯಿಸಲಿದ್ದೇನೆ.

1980ರ ಸುಮಾರಿಗೆ ಚಿತ್ರದುರ್ಗ ಹಳ್ಳಿಯ ಬಡ ಕುಟುಂಬದಲ್ಲಿ ಚಾಕರಿ(ವ್ಯವಸಾಯ) ಮಾಡುವವರ ಮಗನಾಗಿ ರಾಜುಸೂಲೇನಹಳ್ಳಿ ಎನ್ನುವ ಯುವ ಬರಹಗಾರ, ಬಡತನ, ಹಸಿವು, ಸಣ್ಣ ಸಮಾಜದ ದೊಡ್ಡ ದೊಡ್ಡ ಸಂಪ್ರದಾಯಗಳನ್ನು ವಿಚಿತ್ರವಾಗಿ ಪ್ರಶ್ನಿಸುತ್ತಾ ಬೆಳೆದು ಬಂದವನು. ಬಾಲ ಪ್ರತಿಭೆ ಏನನ್ನಾದರೂ ಸಾಧಿಸಬಹುದು ಎನ್ನುವ ಛಲವಂತಿಕೆ. ಎಡಬಿಡದೆ ಮಾಡುವ ಕೆಲಸಗಳ ಮಧ್ಯೆ ಅಪ್ಪನೊ ಅವ್ವಳೊ ಹೋಗುವಾಗ ಎನ್ ಕೆಲಸ ಮಾಡ್ತಿಯಾ ಓದಿ ನೌಕರಿ ಹಿಡಿ ಕಷ್ಟ ತಪ್ಪುತ್ತೆ. ನಮ್ಮ ಹಾಗೆ ದುಡಿಯುವ ಬಯಲಿಗೆ ಬೀಳದಿರುವ ಎಂದು ಕೆಲಸ ಬಿಡಿಸಿ ಬೇರೆಡೆಗೆ ಮನಸ್ಸು ಕೇಂದ್ರಿಕರಿಸಿ ಓದಿ ಅರಗಿಸಿಕೊಂಡು ಅರಗಿಸಿಕೊಂಡು ಹಳ್ಳಿಯಲ್ಲಿ ಹುಲುಸಾಗಿ ಬೆಳೆದಿರುವದನ್ನು ಸ್ಮರಿಸಿಕೊಳ್ಳುತ್ತಾರೆ.

            ಅಂದು ತಾಯಿಯೊ ತಂದೆಯೊ ಈ ಮಾತನ್ನು ಹೇಳದಿದ್ದರೆ ಗಾರೆ ಕೆಲಸಕ್ಕೊ, ವ್ಯವಸಾಯದ ಪ್ರತಿಪಾದಕನೊ ಆಗುತ್ತಿದ್ದ ರಾಜು ಸೂಲೇನಹಳ್ಳಿ ಅಂದಿನ ಓದು, ಬಡತನ, ಹಸಿವು, ಶಿಕ್ಷಣ, ಸಾಮಾಜಿಕ ಸಂಪರ್ಕ ಅವನನ್ನು ಕಾದಂಬರಿಕಾರನನ್ನಾಗಿ, ವಿಮರ್ಶಕನನ್ನಾಗಿ, ಸಂಘಟಕನನ್ನಾಗಿ ಅಲ್ಲಿಯ ಜನಮಾನಸದ ಮಧ್ಯೆ ವಿಶೇಷ ವ್ಯಕ್ತಿಯನ್ನಾಗಿ ಮಾಡಿದೆ ಎನ್ನುವ ಪರಿಕಲ್ಪನೆಯೊಂದಿಗೆ ಈ ಬರಹ ತಮ್ಮ ಮುಂದಿಡುತ್ತಿದ್ದೇನೆ.

ಕೋಟೆ ನಾಡಿನ ಬಯಲು ವಾತಾವರಣದಲ್ಲಿ ತನ್ನ ಕಾವ್ಯದ ಜೀವಾಳವನ್ನಾಗಿ ಮಾಡಿಕೊಂಡು ಕಥೆ, ಕಾದಂಬರಿ, ಕವನ ಸಂಕಲನ, ವಿಮರ್ಶೆ, ಚುಟುಕು ಹೀಗೆ ಸಾಹಿತ್ಯದ ವಿವಿಧ ಮಾದರಿಗಳನ್ನು ಏನೋಲೈಜ್ ಮಾಡುತ್ತಾ ಬರುತ್ತಿದ್ದಾರೆ. ಅವರ ಕಥೆ, ಕಾದಂಬರಿ ಮತ್ತು ಚುಟುಕು ಸಂಕಲನದ ವಿಶೇಷಣೆಯೊಂದಿಗೆ ಅವರ ಸಾಹಿತ್ಯಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡುತ್ತೇನೆ. 2012ರಲ್ಲಿ ಪ್ರಕಟಗೊಂಡಿರುವ ‘ಒಲವೆ’ ಎನ್ನುವ ಕವನ ಸಂಕಲನ ಓದುಗರನ್ನು ಹೊಸ ದಿಕ್ಕು, ದೆಸೆ ತೋರಿಸುವುದರೊಂದಿಗೆ ಹೊಸ ದಿಕ್ಕಿನತ್ತ ಅವರನ್ನು ಸೆಳೆಯುವ ಯತ್ನ ಮಾಡುತ್ತದೆ. ಸಾಮಾಜಿಕ ನ್ಯಾಯವೇ ಒಲವು ಪರಸ್ಪರರನ್ನು ಗೌರವಿಸುವುದೇ ಒಲವು, ಸಮಾಜ ಒಪ್ಪಿತ ಕಾರ್ಯಗಳು ಮಾಡುವುದೇ ಒಲವು ಎನ್ನುವ ತಾತ್ಪರ್ಯದಡಿಯಲ್ಲಿ ‘ಒಲವೇ’ ಕವನ ಸಂಕಲನ ಮಾತನಾಡುತ್ತದೆ.

            2012ರಲ್ಲಿಯೇ ಪ್ರಕಟಗೊಂಡು ‘ಸ್ಪಂದನಾ’ ಎನ್ನುವ ಗೃಹಿಣಿಯ ಸುತ್ತ ಹೆಣೆದುಕೊಂಡಿರುವ ಕಾದಂಬರಿ ಅವಳ ದೈನಂದಿನ ಜೀವನದಲ್ಲಿ ನಡೆಯುವ ಆಗು-ಹೋಗುಗಳನ್ನು ಕಟ್ಟಿಕೊಂಡಿರುವ ಪ್ರಯತ್ನದಲ್ಲಿ ಸಾಪಲ್ಯ ಕಂಡಿದ್ದಾರೆ. 2014ರಲ್ಲಿ ಪ್ರಕಟಗೊಂಡಿರುವ ‘ಅವಳ ಪ್ರೇಮದ ಅಲೆಗಳು’ಎನ್ನುವ ಕಾದಂಬರಿ ಇವರನ್ನು ಬೆಳಕಿಗೆ ತಂದು ತರಾಸು, ಪೂರ್ಣಚಂದ್ರ ತೇಜಸ್ವಿ, ಕಾದಂಬರಿಕಾರ, ಕುವಿಯವರ ಪ್ರಭಾವ ಎದ್ದು ಕಾಣುವಂತೆ ಮಾಡಿತು. ಪ್ರೇಮದ ಎಳೆಯನ್ನು ಅಲೆಯ ರೂಪದಲ್ಲಿ ಪ್ರಚೂರಪಡಿಸುವ ಬಗ್ಗೆಯನ್ನು ಹಳ್ಳಿ ಸಾಲಿನಲ್ಲಿ ನಿಂತು ಭಾಷೆ ಬಿತ್ತುವ ಪರಿ ಮಹೋನ್ನತವೆನಿಸುತ್ತದೆ.

            ಈ ಕಾದಂಬರಿಯಲ್ಲಿ ಶಹರದ ಚಹರೆಯ ಮುಖವು ಪ್ರಚಾರ ಪಡಿಸಿ ಹಳ್ಳಿ ಮತ್ತು ಪಟ್ಟಣದ ದ್ವಿಮುಖ ಭಾಷೆಯ ಸೊಗಡನ್ನು ಎತ್ತಿ ತೋರಿಸುವ ವಿಶೇಷವಾದ ಪ್ರಯತ್ನ ಮಾಡಿದ್ದಾರೆ ಎಂಬುವುದನ್ನು ಸ್ಮರಿಸಬಹುದಾಗಿದೆ. ಹೀಗೆ ಹಲವಾರು ಕಾದಂಬರಿ, ಕವನ ಸಂಕಲನ ಮತ್ತು ವಿಮರ್ಶೆಯಲ್ಲಿ ತೊಡಗಿಕೊಂಡಿರುವ ಇವರಿಗೆ ಹಲವಾರು ಪುರಸ್ಕಾರ, ಬಹುಮಾನ, ಪ್ರಶಸ್ತಿಗಳು ಮತ್ತಷ್ಟು ಬರೆಯುವ ಬೆಂಬಲಿಸುವ ಜವಾಬ್ದಾರಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿವೆ ಎಂಬುದನ್ನು ಸ್ಮರಿಸಬಹುದಾಗಿದೆ.

ಇವರಿಗೆ ಸಂದ ಪ್ರಶಸ್ತಿಗಳು:

1)         ಸಿರಿಗನ್ನಡ ಸಾಹಿತ್ಯ ರತ್ನ-2018         ಸಾಹಿತ್ಯಕ್ಕೆ ಸಂದ ಪ್ರಶಸ್ತಿ

2)         ಕರುನಾಡ ಸಿರಿರತ್ನ ರಾಜ್ಯ ಪ್ರಶಸ್ತಿ- 2019 ಸಾಹಿತ್ಯ ಸೇವೆ

3)         ಕರ್ನಾಟಕ ಶಿಕ್ಷಣ ಸೇವಾರತ್ನ-2019 ಶಿಕ್ಷಣಕ್ಕೆ ಸಂದ ಪ್ರಶಸ್ತಿ.

4)         ಕನ್ನಡ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ-2019. ಶಿಕ್ಷಣ ಸೇವೆ

5)         ಸಾಹಿತ್ಯ ವಿಭೂಷಣ ಪ್ರಶಸ್ತಿ 2019: ಸಂಘಟನಾ ಸೇವೆ

ಹಲವಾರು ವರ್ಷಗಳಿಂದ ಚಿತ್ರದುರ್ಗದ ಶಾಲೆಯಲ್ಲಿ ಅತಿಥಿ ಉಪನ್ಯಾಸ ಮತ್ತು ಮುಖ್ಯ ಗುರುಗಳಾಗಿ ಸೇವೆ ಮಾಡಿ, ಮಕ್ಕಳ ದಾಖಲಾತಿ ಮತ್ತು ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಿ ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಜಿಲ್ಲಾಮಟ್ಟ- ಸಾಹಿತ್ಯ ಕೃತಿಯನ್ನಾಧರಿಸಿ ಕನ್ನಡ ಸಾಹಿತ್ಯ ಪರಿಷತ್ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಅಪ್ರಕಟಿತ ಕೃತಿಗಳು:

1)         ಬುದ್ದ ಕಾಣದ ನಗೆ- ಕವನ ಸಂಕಲನ,

2)         ಗದ್ದುಗೆಯ ಸರದಾರ- ಕಾದಂಬರಿ

3)         ಮುಗಿಲ ಮಲ್ಲಿಗೆ- ಚುಟುಕು ಕವನ ಸಂಕಲನ

4)         ಅಜ್ಜಿ ಕೊಡಿಸಿದ ಅಂಗಿ- ಕಥಾ ಸಂಕಲನ

5)         ಅಮ್ಮನ ಒಡಲು- ಕಾದಂಬರಿ

6)         ಪ್ರೇಮ ಸ್ಪರ್ಶ- ಸ್ವರಚಿತ ಲೇಖನಗಳು

ಹೀಗೆ ಶಿಕ್ಷಣ, ಸಂಘಟನೆ, ಸಾಹಿತ್ಯದ ಮೂಲಕ ಜನರ ಮನಸ್ಸಿನಲ್ಲಿ ಹೆಸರು ಉಳಿಸಿಕೊಂಡಿರುವ ರಾಜು ಸೂಲೇನಹಳ್ಳಿಯವರು ಪ್ರಸ್ತುತ ಕರುನಾಡ ಹಣತೆ ಕವಿ ಬಳಗದ ರಾಜ್ಯ ಅಧ್ಯಕ್ಷರಾಗಿ ಕಳೆದ ಮೂರು ವರ್ಷಗಳಿಂದ ಹೊಸ ಪ್ರತಿಭೆಗಳನ್ನು ಮುನ್ನಲೆಗೆ ತರುವ ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಅವರ ಸಾಹಿತ್ಯ ಕೃಷಿ ಮುಂದೆ ಕನ್ನಡ ನಾಡಿನಾದ್ಯಂತ ಪಸರಿಸಿ ಸರ್ವೋತ್ತಮರ ಸಾಲಿನಲ್ಲಿ ನಿಲ್ಲುವಂತಾಗಲಿ ಎಂಬ ಮಹದಾಸೆಯ ಶುಭ ಹಾರೈಕೆಯೊಂದಿಗೆ ಅವರನ್ನು ಮಾಧ್ಯಮಕ್ಕೆ ತರುವ ಪ್ರಯತ್ನ ಮಾಡುತ್ತೇನೆ.

                                                                                                                      ವಾಯ್ ಜೆ. ಮೆಹಿಬೂಬ ಸಿಂದಗಿ

 

 

 

ಷಕೀಬ್ ಎಸ್‌ ಕಣದ್ಮನೆ ನವಿಲೇಹಾಳ್‌

ಸಾಹಿತ್ಯ ಎನ್ನುವುದು ಸಮಾಜದ ಪ್ರತಿಬಿಂಬ ಎನ್ನಲಾಗುತ್ತಿದೆ. ಸಮಾಜದಲ್ಲಿ ಕಂಡುಂಡ ಅನುಭವಗಳನ್ನೇ ಒಬ್ಬ ಬರಹಗಾರ ತನ್ನ ಬರಹದಲ್ಲಿ ಒಡಮೂಡಿಸುತ್ತಾನೆ. ರಮ್ಯ ಸಾಹಿತ್ಯದಲ್ಲಿ ಕಾಲ್ಪನಿಕತೆಗೆ ಹೆಚ್ಚು ಒತ್ತು ನೀಡಲಾಗಿದ್ದರೂ ಅಲ್ಲಿಯೂ ಸಮಾಜವನ್ನು ಬಿಟ್ಟು ಬರಹಗಾರ ಬೇರೆ ಏನನ್ನೂ ಬರೆಯಲಾರ. ಯುವ ಕವಿಗಳ ಕವಿತೆಗಳಲ್ಲಿ ಕಾಲ್ಪನಿಕತೆಗೆ ಹೆಚ್ಚು ಅವಕಾಶ ಇರುವುದನ್ನು ನೋಡಬಹುದು. ವಾಸ್ತವಕ್ಕಿಂತ ಕಲ್ಪನೆಗೆ ಹೆಚ್ಚು ಮೊರೆ ಹೋಗುತ್ತಾರೆ. ಆ ವಯಸ್ಸೇ ಅಂಥದ್ದು. ಯುವಕವಿಗಳ ಮನಸ್ಸಿನಲ್ಲಿ ವಿಶೇಷವಾಗಿ ಪ್ರೀತಿ-ಪ್ರೇಮದ ಕಲ್ಪನೆಗಳು ಹೆಚ್ಚು. ಸಮಾಜದ ಸಮಸ್ಯೆಗಳ ಬಗ್ಗೆ ಅವರ ಗಮನ ಇದ್ದರೂ ಅದು ಅಷ್ಟೊಂದು ಪ್ರಾಮುಖ್ಯತೆ ಪಡೆದುಕೊಳ್ಳುವುದಿಲ್ಲ. ಒಂದು ಸಂಕಲನದಲ್ಲಿ ಕೇವಲ ಒಂದೆರಡು ಕವಿತೆಗಳನ್ನು ಸಮಾಜದ ಕುರಿತಾಗಿ ಇದ್ದು, ಉಳಿದ ಕವಿತೆಗಳು ಪ್ರೀತಿ-ಪ್ರೇಮದ ಉಯ್ಯಾಲೆಯಲ್ಲಿ ತೇಲಾಡುತ್ತ ಇರುತ್ತವೆ.

ದಾವಣಗೆರೆಯ ಷಕೀಬ್ ಕಣದ್ಮನೆ... ನನಗೆ ಗುರುತು-ಪರಿಚಯವಿಲ್ಲದ ಹುಡುಗ. ತನ್ನ ಕವನ ಸಂಕಲನಕ್ಕೆ ಮುನ್ನುಡಿ ಬೇಕೆಂದು ಗೆಳೆಯನ ಮೂಲಕ ಕೇಳಿಕೊಂಡಾಗ ನನಗೆ ಇಲ್ಲವೆನ್ನಲಾಗಲಿಲ್ಲ. ನಾನು ಮೊದಲಿನಿಂದಲೂ ಯುವ ಬರಹಗಾರರನ್ನು ಪ್ರೋತ್ಸಾಹಿಸುತ್ತ ಬಂದವನು. ಏನಾದರೂ ಬರೆಯಿರಿ ; ಮೊದಲು ಬರೆಯುವುದನ್ನು ರೂಢಿ ಮಾಡಿಕೊಳ್ಳಿ ಎಂದು ಹೇಳುತ್ತ ಬಂದವನು ನಾನು. ಹೀಗಾಗಿ ಸಹಜವಾಗಿಯೇ ಷಕೀಬ್ ಕಣದ್ಮನೆಯವರ ಕವಿತೆಗಳ ಕಟ್ಟನ್ನು ಕೈಗೆ ತೆಗೆದುಕೊಂಡೆ. ಯುವ ಮನಸ್ಸಿನ ಷಕೀಬ್ ಕಣದ್ಮನೆ ತುಂಬ ಉತ್ಸಾಹಿ ಯುವಕ ಎನ್ನುವುದು ಅವರ ಕವಿತೆಗಳ ಓದಿನಿಂದ ತಿಳಿಯಿತು.

ಸಹಜವಾಗಿಯೇ ಇಲ್ಲಿಯ ಬಹುತೇಕ ಕವಿತೆಗಳು ಪ್ರೀತಿ-ಪ್ರೇಮದ ಸುತ್ತಲೇ ಸುತ್ತಿದರೂ ಸಮಾಜದ ವಾಸ್ತವವನ್ನು ಕಂಡುಂಡ ಅನುಭವಗಳೂ ಆದ್ಯತೆ ಪಡೆದುಕೊಂಡಿವೆ. ರೈತ, ಕನ್ನಡತನ, ನಾಡು-ನುಡಿ, ವೀರ ಯೋಧರು, ಭಾರತೀಯತೆ, ಧರ್ಮ ಮೊದಲಾದ ವಿಷಯಗಳ ಮೇಲೂ ಕವಿತೆಗಳು ಪ್ರಸ್ತುತ ಸಂಕಲನದಲ್ಲಿ ಎಡೆ ಪಡೆದುಕೊಂಡಿವೆ. ಆದರೆ ಯಾವುದರ ಬಗ್ಗೆಯೂ ಹುಚ್ಚು ಆವೇಶವಿಲ್ಲ. ಎಲ್ಲವನ್ನೂ ಸಹಜವಾಗಿ ತೆಗೆದುಕೊಳ್ಳುವ ಮನೋಭಾವ ಎದ್ದು ಕಾಣುತ್ತದೆ. ಅಂದರೆ ಬಂಡಾಯದ ಆಶಯಗಳು ತುಂಬ ವಿರಳ ಎನ್ನಬಹುದು. ನವೋದಯ ಸಂಪ್ರದಾಯದಲ್ಲಿ ಇಲ್ಲಿಯ ಕವಿತೆಗಳು ಸ್ಥಾನ ಪಡೆದುಕೊಂಡಿವೆ.

ಧರ್ಮ ಧರ್ಮವೆಂದು ಹೊಡೆದಾಡುವರು

ಧರ್ಮದ ತತ್ವ ತಿಳಿಯದವರು

ಧರ್ಮದ ಸಾರವನ್ನು ಸಾರಿದರು

ಧರ್ಮವನ್ನು ಸ್ಥಾಪಿಸಿದವರು (ಮೋಹ-ದಾಹ)

ಎನ್ನುವ ಮೂಲಕ ಭಾರತ ದೇಶದಲ್ಲಿ ಧರ್ಮ-ಧರ್ಮಗಳ ನಡುವೆ ದ್ವೇಷದ ವಾತಾವರಣ ಕಂಡುಬರುವುದನ್ನು ಗುರುತಿಸಿರುವ ಕವಿ ಧರ್ಮದ ಬಗ್ಗೆ ಹೊಡೆದಾಡುವುದು ವ್ಯರ್ಥ ಎಂಬ ಭಾವವನ್ನು ಹೊರ ಹಾಕುತ್ತಾರೆ. ಬುದ್ಧ, ಬಸವಣ್ಣನ ನಾಡಿನಲ್ಲಿ ಈ ರೀತಿಯ ಹಿಂಸಾಚಾರ ಸರಿಯಲ್ಲ ಎನ್ನುವುದು ಕವಿಯ ಆಶಯವಾಗಿದೆ. ಯಾಕೆಂದರೆ ಭಾರತ            ವೆಂದರೆ ಸಾಮರಸ್ಯದ ನಾಡೆಂದು ಹೆಸರು ಪಡೆದುಕೊಂಡಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾರಿದ ಪುಣ್ಯಸ್ಥಳವಾಗಿದೆ ಎಂದು ಹೇಳಲಾಗುತ್ತದೆ.

ಪ್ರೀತಿ ವಿಶ್ವಾಸಕ್ಕೆ ಪ್ರಾಣ ಕೊಡುವವರಿದ್ದಾರಿಂದು

ತಿಳಿಯಿರೆಲ್ಲರೂ ಭಾರತ ಹೃದಯವಂತರ ನಾಡೆಂದು

ಹೆಮ್ಮೆಯಿಂದ ಹೇಳುವೆ ನಾ

ಹಿಂದೂಸ್ಥಾನಿನ ಕಂದನೆಂದು (ಹಿಂದೂಸ್ಥಾನಿನ ಕಂದ)

ಎನ್ನುವ ಮೂಲಕ ಭಾರತದ ಪರಂಪರೆ ಎಂಥದ್ದು ಎಂಬ ಪರಿಚಯವನ್ನು ಇಲ್ಲಿ ಕವಿಮನ ನೆನೆದಿದೆ.

ದಯಮಾಡಿ ನೀ ಒಪ್ಪು

ಒಬ್ಬ ದೇಶಪ್ರೇಮಿ ಟಿಪ್ಪು

ಮತಾಂಧನೆಂದು ಮಾಡಬೇಡಿ ತಪ್ಪು

ಮೈಸೂರಿನ ಸುಲ್ತಾನ

ಬ್ರಿಟಿಷರಿಗೆ ಸೈತಾನ (ಕರುನಾಡಿನ ವೀರ)

ಎಂದುಕೊಳ್ಳುತ್ತ ಎಲ್ಲವನ್ನು ಸಮರಸದಿಂದ ನೋಡುವ ಕವಿ ಇಲ್ಲಿ ಟಿಪ್ಪು ಸುಲ್ತಾನನನ್ನೂ ನೆನಪಿಸಿಕೊಂಡಿದ್ದಾರೆ. ಟಿಪ್ಪುವನ್ನು ಕೆಲವರು ಮತಾಂಧನೆಂದು ಹೇಳುತ್ತಾರೆ. ಆದರೆ ಟಿಪ್ಪು ನಿಜವಾಗಿಯೂ ದೇಶಪ್ರೇಮಿ ಎನ್ನುವ ಭಾವ ಇಲ್ಲಿ ಕಂಡುಬರುತ್ತದೆ ; ಇದು ನಿಜವೂ ಹೌದು.

ಬುದ್ಧಿಜೀವಿಗಳೇ ಬುದ್ಧಿಗೇಡಿತನ ತೋರುವಾಗ

ಮೌಢ್ಯ ಮಾರಕ ಅರಿಯದಾಗಿದೆ

ಹುಳುಕು ಕೊಳಕು ಕೊಚ್ಚೆ ಮನಗಳ

ಮನುಜರಾಗಿ ಮನುಷ್ಯತ್ವ ಸಾರಿ

ಜಾತಿಮತದ ಗೀಳು ಮರೆತು

ದಯಮಾಡಿ ಬಾಳಲು ಬಿಡಿ ಎಲ್ಲರೊಳಗೊಂದಾಗಿ (ಹೀಗೇಕೆ...?)

ಅಂದರೆ ಕೆಲವು ಬುದ್ಧಿಜೀವಿಗಳು ಎನಿಸಿಕೊಂಡವರು ಜಾತಿಮತದ ಹೆಸರಿನಲ್ಲಿ ಕೆಸರೆರಚಾಟ ನಡೆಸುತ್ತಿದ್ದು ; ಇದು ಸಲ್ಲದು. ನಾವೆಲ್ಲರೂ ಒಂದು, ಮನುಷ್ಯತ್ವದ ಮನುಜರಾಗೋಣ ಎನ್ನುವ ಮೂಲಕ ಕವಿ ಮನ ಇಲ್ಲಿ ಸಾಮರಸ್ಯದ ಬದುಕಿಗೆ ಹಾರೈಸಿದೆ.

ಪ್ರೀತಿ-ಪ್ರೇಮದ ಬಗ್ಗೆಯೂ ಕವಿ ಹೆಚ್ಚಿನ ಆಸ್ಥೆಯನ್ನು ಹೊಂದಿದ್ದಾರೆ. ತಾನು ಪ್ರೀತಿಸುವ ಹುಡುಗಿ ಎಂಥವಳೆಂದು ಹೇಳುತ್ತ,

ಮುತ್ತಿನಂಥ ನಮ್ ಕನ್ನಡಾನೇ ಮಾತಾಡ್ತಾಳೆ

ಬಣ್ಣಲಿ ಸ್ವಲ್ಪ ಕಪ್ಪು ಆದ್ರ ಮನ್ಸಲ್ಲಿ ಮಾತಲ್ಲಿ ಗುಣದಲ್ಲಿ ಬೆಳ್ಳಿ

ಇವಳೇ ನನ್ನ ಹೃದಯ ಕದ್ದ ಕಳ್ಳಿ

ಕನಸಲ್ಲಿ ಬಂದೋದಾಗ ನಾಗವಲ್ಲಿ

ಕಣ್ಮುಂದೆ ಕಂಡಾಗ ಮಿಂಚುಳ್ಳಿ (ಮಿಂಚುಳ್ಳಿ)

ಎನ್ನುವ ಮೂಲಕ ತಮ್ಮ ಕನಸಿನ ರಾಣಿಯನ್ನು ವರ್ಣಿಸುತ್ತಾರೆ. ಇದ್ದುದ್ದನ್ನು ಇದ್ದಂತೆ ಹೇಳುವ ಈ ಪರಿ ನಿಜಕ್ಕೂ ಶ್ಲಾಘನೀಯ. ಅವರು ಪ್ರೀತಿಸಿದ ಹುಡುಗಿ ಅವರಿಗೆ ದೊರೆಯಲಿ ಎಂದು ಹಾರೈಸುವೆ. ಯಾಕೆಂದರೆ ಕವಿ ಆಕೆಯನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಾರೆ.

ಹ್ಯಾಂಗ ಮರೆಯಲಿ ಗೆಳತಿ

ನಿನ್ನ ನಾ ಹ್ಯಾಂಗ ಮರೆಯಲಿ

ಕುಂತರೂ ನಿಂದೆ ನೆನಪು

ನಿಂತರೂ ನಿಂದೆ ನೆನಪು

ನನ್ನ ಮನಸೂರೆ ಮಾಡಿತು

ಆ ನಿನ್ನ ಕಣ್ಣ ಹೊಳಪು

ಹ್ಯಾಂಗ ಮರೆಯಲಿ ಗೆಳತಿ

ನಿನ್ನ ನಾ ಹ್ಯಾಂಗ ಮರೆಯಲಿ

ಎಂದು ಕವಿ ಅಲವತ್ತುಕೊಂಡಿದ್ದಾರೆ. ಆದರೆ ತನಗೆ ಕವಿತೆ ಬರೆಯಲು ಪ್ರೇರಣೆ ನೀಡಿದ್ದು ಮಾತ್ರ ತನ್ನ ತಂಗಿಯೇ ಎಂಬುದನ್ನು ಕವಿ ಇಲ್ಲಿ ಸ್ಪಷ್ಟಪಡಿಸುತ್ತಾರೆ.

ಕಾವ್ಯ ರಚಿಸು ಎಂದು ಹೇಳಿ

ನಾ ಕವಿಯಾಗಲು ಸ್ಫೂರ್ತಿಯಾದವಳು

ಇಂಪಾದ ಸಂಗೀತಕ್ಕೆ ಶೃತಿಯಾದವಳು

ಚಂದ್ರನ ಬೆಳದಿಂಗಳಂತೆ ಮಿಂಚುವಳಿವಳು

ಅವಳೇ ನನ್ನ ಪ್ರೀತಿಯ ತಂಗಿ ತಂಜುಮ್ (ತಂಜುಮ್)

ಎನ್ನುವ ಮೂಲಕ ತನ್ನ ತಂಗಿ ತಂಜುಮ್‍ಳೇ ತನ್ನ ಕಾವ್ಯ ಬರವಣಿಗೆಗೆ ಸ್ಫೂರ್ತಿ ಎಂದು ಕವಿ ಹೇಳಿಕೊಂಡಿದ್ದಾರೆ. ಹೀಗೆ ಕವಿ ತನ್ನ ಮನದಾಳವನ್ನು ಬೇರೆ ಬೇರೆ ಭಾವಗಳಲ್ಲಿ ಕವಿತೆಯಾಗಿಸಿ ಈ ಸಂಕಲನವನ್ನು ಹೊರತರುತ್ತಿದ್ದಾರೆ. ಇಲ್ಲಿರುವ ಹಲವಾರು ಕವಿತೆಗಳು ಭಿನ್ನ ಭಿನ್ನ ನಿಲುವಿನಲ್ಲಿ ಮೂಡಿನಿಂತಿವೆ. ಜ್ಞಾನಪೀಠಗಳ ಹೃದಯ, ಸೈನಿಕರಿಗೆ ನಮನ, ಭಾರತೀಯ, ಬರ, ಅನ್ನದಾತರಿಗೊಂದು ಸಲಾಂ, ಕಲಿಕೆಗೆ ಕೊನೆ ಇಲ್ಲ, ಕಡಕ್ ನೈನ್ ಟೀ, ಮುಗ್ಧ ಮನಸು, ನನ್ನೂರು ನವಿಲೂರು, ಮಮತೆಯ ಮಡಿಲು, ಬೆತ್ತಲು, ಕೊನೆ ನಿರ್ಣಯ, ಮೌನ ರಾಗ ಮೊದಲಾದ ಕವಿತೆಗಳು ಗಮನ ಸೆಳೆಯುತ್ತವೆ.

ಉದಯೋನ್ಮುಖ ಕವಿಯಾಗಿ ಹೊರಹೊಮ್ಮುತ್ತಿರುವ ಷಕೀಬ್ ಕಣದ್ಮನೆ ಇನ್ನೂ ಹೆಚ್ಚು ಹೆಚ್ಚು ಓದಿನ ಮೂಲಕ ವಾಸ್ತವವನ್ನು ಗ್ರಹಿಸಿ ಇನ್ನೂ ಹೆಚ್ಚೆಚ್ಚು ಕವಿತೆಗಳನ್ನು ರಚಿಸಲಿ, ಪದಗಳ ಲಾಲಿತ್ಯವನ್ನು ಮೈಗೂಡಿಸಿಕೊಂಡು ಒಳ್ಳೆಯ ಕವಿಯಾಗಲಿ, ಕನ್ನಡ ಸಾಹಿತ್ಯ ಲೋಕದಲ್ಲಿ ಅವರ ಹೆಸರು ಮುನ್ನೆಲೆಗೆ ಬರಲಿ ಎಂದು ಹಾರೈಸುತ್ತೇನೆ.

                                                                                    ಡಾ. ಸಿದ್ರಾಮ ಕಾರಣಿಕ  ಬರಹಗಾರರು, ಧಾರವಾಡ.

ಪೋಟೋಗ್ರಫಿ


ಮೀನಾಕ್ಷಿ ರಾಜಣ್ಣ ರಾಮಸಂದ್ರ

ಹನಿಗವನಗಳು


*ನೆನಪಿನ ಧ್ಯಾನ*

ನಿನ್ನ ನೆನಪುಗಳದೇ ಧ್ಯಾನ

ಹೃದಯದಿ ಬರೀ ಮೌನ

ಹೊರಟಿದೆ ಮೌನ ಮೆರವಣಿಗೆ

ಮುಗಿಯದು ಕೊನೆವರೆಗೆ

ಓ ಒಲವೇ ಕಾಡದಿರು

ಎಂದೆಂದೂ ಜೊತೆಯಲಿರು....

*ತುಂಟನಗೆ*

ತುಂಟನಗೆ ಬೀರಿ ಸೆಳೆದೆ ನೀನು ನನ್ನ

ನಿನ್ನೊಲವ ಮಧುರ ಭಾವವು ಚೆನ್ನ

ನನ್ನ ಹೃದಯಕೆ ತಿಳಿಯದೆ ಹಾಕಿದೆ ನೀ ಕನ್ನ

ನಿನಗಾಗಿ ಕಾದಿರುವ ಒಲವ ರಾಧೆ

ಎಷ್ಟು ಸೊಗವು ನಿನ್ನೊಲವ ಸುಧೆ

ಈ ರಾಧೆಯ ಜೀವ ಜೀವನವೂ ನಿನಾದ

*ಮದುವೆಯ ಬಂಧ*

ಮದುಮಗಳ ಕಾಲಲ್ಲಿ ಮೆಹಂದಿಯ ಚಿತ್ತಾರ

ಮದುವೆಯೆಂಬ ಬಂಧದಲಿ ಮನಗಳು ಹತ್ತಿರ

ಅಕ್ಷತೆಯ ರಂಗು ಮನಗಳ ತುಂಬಾ ಬಿತ್ತರ

ಈ ಬಂಧವು ಬೆಸೆದಿರಲಿ ಜನ್ಮ ಜನ್ಮಾಂತರ

ಪ್ರಾರಂಭವು ಬದುಕಿನ ಹೊಸ ಮನ್ವಂತರ

ದೂರವಾಗಲಿ ಮನದ ನಡುವಿನ ಅಂತರ

 

*ಒಲವು*

ನಿನ್ನೊಲವ ಮಧುರ ಭಾವವು ಚೆನ್ನ

ಕಳೆದು ಹೋಗಿರುವೆನು ನಾನು ಚಿನ್ನ

ತಿಳಿಯದೇ ಹೃದಯಕೆ ಹಾಕಿರುವೆ ಕನ್ನ

ಮಾಯಾ ಜಾಲದಲಿ ಸಿಲುಕಿರುವೆ ನನ್ನ

ನಿನ್ನಿಂದಲೇ ಈ ಜೀವನವು ಸಂಪನ್ನ

ಬಿಡಲಾರೆ ಎಂದೆಂದಿಗೂ ಪ್ರೀತಿ ನಿನ್ನ

*ಅಮ್ಮನ ಮಡಿಲು*

ನವ ಮಾಸ ಅಮ್ಮನ ಗರ್ಭದಲಿ ಬೆಚ್ಚಗೆ

ಕಳೆದು ಅಮ್ಮನ ವಾತ್ಸಲ್ಯದ ಮಡಿಲೊಳಗೆ

ಅಮ್ಮನ ಬಿಸಿಯುಸಿರ ಹಿತ ಸ್ಪರ್ಶದೊಳಗೆ

ಕಣ್ಣು ರೆಪ್ಪೆಯಂತಹ ಕಾಳಜಿಯೊಳಗೆ

ಅಮ್ಮನ ತೋಳಿನ ಆಸರೆಯ ಒಳಗೆ

ಮಗುವಾಗುವಾಸೆ ಮಗದೊಮ್ಮೆ ನನಗೆ

                                  *ವೇದಾವತಿ ಭಟ್ಟ*

*ಚಳಿ*

ಚಿಮ್ಮು ಚಿಮ್ಮು ಚಳಿಗಾಲ

ಇನಿಯಾ  ಬಾ ಬಾರೋ,ಸ್ನೇಹ

ಓಲವಿನ ಹಂದರ,;ಬಲು  ಸುಂದರ

ಇದುವೇ  ಹೃದಯ  ದೇವ ಮಂದಿರ

ಭಾವ ಬಂಧು ಬೇಡ  ಕಂದರ.

                    *ಪ್ರೀತಿ ಭರತ್*


ಸಣ್ಣ ಕಥೆಗಳು

ಬಯಲಾದ  ಮನೆಯ  ಗುಟ್ಟು

ಒಂದಾನೊಂದು  ಕಾಲದಲ್ಲಿ ಬಳ್ಳಹಳ್ಳಿ ಎಂಬ ಊರು. ಆ ಊರು ಕೆರೆ ,ಬೆಟ್ಟ, ಮರ, ಹೊಲ, ಗದ್ದೆ, ತೋಟಗಳಿಂದ ಪ್ರಕೃತಿ ಸೌಂಧಯ೯ದಿಂದ  ಕೂಡಿ ಸುಂದರವಾಗಿತ್ತು. ಅಲ್ಲಿನ ಜನ ಕಾಯಕವೇ ಕೈಲಾಸವೆಂಬಂತೆ  ಪ್ರತಿಯೊಬ್ಬರೂ ಚೆನ್ನಾಗಿ ದುಡಿಯುತ್ತಿದ್ದರು ಅದರಲ್ಲೂ ಮಹಿಳೆಯರು  ತನ್ನ ಕುಟುಂಬಕ್ಕೆ ಆಸರೆಯಾಗಿ ದುಡಿಯುತ್ತಿದ್ದರು. ಹೀಗಿರಲು ಒಂದು ಕುಟುಂಬ, ಗಂಡ, ಹೆಂಡತಿ  ಮಾತ್ರ ವಾಸವಾಗಿದ್ದರು .ಅವರಿಗೆ ಮಕ್ಕಳಿರಲಿಲ್ಲ, ಹಾಗಾಗಿ ಎಲ್ಲಾ ಕೆಲಸಗಳೂ  ಅವರೇ ಮಾಡಿಕೊಳ್ಳಬೇಕಾಗಿತ್ತು. ಕಾಲ ಕಳೆಯುತ್ತಿದ್ದಂತೆ ಅವರಿಗೆ ವಯಸ್ಸಾಗುತ್ತಾ ಬರುತ್ತಿತ್ತು ಆದರೂ ಅವರ ಜೀವನ ಅವರ ದುಡಿಮೆಯಿಂದಲೇ ಸಾಗಬೇಕಿತ್ತು. ಅಜ್ಜಿ, ಮನೆಯಲ್ಲಿ  ಬೀಸಿ , ಕುಟ್ಟಿ,ಕೇರಿ ರುಬ್ಬಿ ,ಕಷ್ಟಪಟ್ಟು ಅಡಿಗೆ ಮಾಡಿ ವಯಸ್ಸಾದ ತನ್ನ ಗಂಡನಿಗೆ  ಬಡಿಸಿ ತಾನೂ ಒಟ್ಟೆಗೆ ಊಟ ಮಾಡುತ್ತಿದ್ದರು.

            ಏಕೆಂದರೆ ಯಾವುದೇ ಯಂತ್ರಗಳು ಇರಲಿಲ್ಲ. ಒಮ್ಮೆ ವಯಸ್ಸಾದ ಇವರನ್ನು ಮೋಸ ಮಾಡಿ ,ಅವರು ದುಡಿದು ಇಟ್ಟಿರುವ ಹಣ ,ಒಡವೆ ದೋಚಿ ಹೋಗಬೇಕೆಂದು ಕಳ್ಳರು ಹೊಂಚು ಹಾಕುತ್ತಿದ್ದರು. ಅಜ್ಜ ಪ್ರತಿದಿನ ಕುರಿಕಾಯಲು ಹೋಗುತ್ತಿದ್ದನು. ಅದೂ ನಿಂತೇ ಮೇಯಿಸುತ್ತಿದ್ದನು. ಕಳ್ಳರು  ಕುರಿ ಕಳ್ಳತನ ಮಾಡಲು ಹೋದರೆ, ಅಲ್ಲಿ ಆಗಲಿಲ್ಲ .ಮನೆಯಲ್ಲಿ ಕಳ್ಳತನ ಮಾಡಲು ಹೋದರೆ ಅಜ್ಜಿ ಬೀಸುವ  ಕಲ್ಲಿನ  ಮುಂದೆ , ಒಲೆಯ ಅಥವಾ  ಒರಳು  ಕಲ್ಲಿನ ಮುಂದೆ  ಕುಳಿತೇ ಇರುತ್ತಿದ್ದಳು ಹೇಗಾದರೂ ಉಪಾಯ ಮಾಡಿ ದೋಚಿ ಕೊಳ್ಳಬೇಕು ಎಂಬುದಾಗಿ ನಿಧ೯ರಿಸಿ, ಮನಸ್ಸು ಮಾಡಿ ಅಜ್ಜಿಯನ್ನು ಮಾತನಾಡಿಸಿದರು ಅಜ್ಜಿ  ಊರಿನ ಹೊರಗೆ ಹೊಲದಲ್ಲಿ  ಕುರಿ ಮೇಯುಸುತ್ತಿರುವ ಅಜ್ಜ ನಿಮ್ಮ ಯಜಮಾನರಂತೆ ಹೌದಾ?, ಎಂದು ಕೇಳಿದರಂತೆ

ಅಜ್ಜಿ ಹೌದು ಯಾಕಪ್ಪ? ಏನಾಯಿತು? ಎಂದು ಕೇಳಿದಳು

ಏನೂ ಇಲ್ಲ ಅಜ್ಜಿ, ಕುರಿ ಮಂದೆಯಿಂದ ಯಾರೋ ಕಳ್ಳರು ಕುರಿಗಳನ್ನು ಕಳ್ಳತನ

ಮಾಡಿದರಂತೆ , ಅವರು ನಿಂತೇ ಇರುತ್ತಾರಲ್ಲ?, ಎಂದು ಕಳ್ಳರು.

ಅದಕ್ಕೆ ಅಜ್ಜಿ ಹೌದಾ

ಅಯ್ಯೋ! ಆ ಮುದುಕ ನಿಂತೇ

ನಿದ್ದೆ ಮಾಡ್ತಾನೆ ಇನ್ನು ಕಳ್ಳತನ

ಮಾಡುವುದಿಲ್ಲವೇ ಎನ್ನುತ್ತಾ

ಎದ್ದು ಬಿದ್ದು ಕುರಿ ಮಂದೆಯ ಕಡೆ ಓಡಿದಳು.

ಒಂದೆರಡು ದಿನ  ಬಿಟ್ಟು  ಈ ಕಳ್ಳರು

ಕುರಿಗಾಹಿ ಅಜ್ಜನ ಬಳಿಗೆ

ಹೋಗಿ ,ತಾತ ಆ ಕೊನೆ ಮನೆಯಲ್ಲಿನ  ಅಜ್ಜಿ ನಿಮ್ಮ ಹೆಂಡತಿಯಂತೆ ಹೌದಾ?ಎಂದು ಕೇಳಿದರು . ಅಜ್ಜ ಹೌದು ಏನು ಈಗ? ಎಂದ ತಾತ. ಅದಕ್ಕೆ ಆ ಕಳ್ಳರು ತಾತ  ಅಜ್ಜಿ ಇದ್ದರೂ ಆ ಮನೆಯಲ್ಲಿ ಯಾರೋ ಕಳ್ಳತನ  ಮಾಡಿಕೊಂಡು ಹೋದರಂತೆ ಗೊತ್ತಿಲ್ಲವೇ? ಎಂದರು. ಆ ಅಜ್ಜ, ಅಯ್ಯೋ  !ರಾಗಿ  ಬೀಸಿಕೊಂಡೇ ನಿದ್ದೆ ಮಾಡ್ತಾಳೆ, ಕಳ್ಳತನ ಮಾಡದೇ ಇರುತ್ತಾರೆಯೇ ಎಂದು ಕುರಿಗಳನ್ನು ಅಲ್ಲೇ ಬಿಟ್ಟು ಮನೆಕಡೆ ಓಡಿದ. ಇದೇ ಸಮಯ ಕಾಯುತ್ತಿದ್ದ ಕಳ್ಳರು ಕುರಿಗಳನ್ನು ಓಡಿಸಿಕೊಂಡು  ಹೋದರು. ಕೆಲವು ದಿನಗಳ ನಂತರ ಮನೆಗೆ ನುಗ್ಗಿ ಸಿಕ್ಕಿದ್ದನ್ನೆಲ್ಲಾ ದೋಚಿಕೊಂಡು  ಹೊದರು  ಅಜ್ಜ, ಅಜ್ಜಿ  ದಡ್ಡತನದಿಂದ ಆಸ್ತಿಯನ್ನೆಲ್ಲಾ  ಕಳೆದುಕೊಂಡು  ಜೀವನ ನಡೆಸಲು ಕಷ್ಟವಾಯಿತು.  ಬಿಕ್ಷೆ ಬೇಡಿ   ಬದುಕಬೇಕಾಯಿತು. ಮನೆಯ ಗುಟ್ಟನ್ನು ಅಪರಿಚಿತರಿಗೆ ,ಕಂಡ ಕಂಡವರಿಗೆ ಹೇಳಬಾರದು ಎಂದು  ತಿಳಿದುಕೊಂಡರು ಅನುಭವವನ್ನು ಬೇರೆಯವರಿಗೂ ಹೇಳತೊಡಗಿದರು .

                                                                                                                      ಶಾಂತಮ್ಮ ಸಿ  ಬಂಗಾರಪೇಟೆ

ಭಿಷ್ಮಾಂತರಂಗ

ಈ ರಾತ್ರಿ ಕಳೆದರೆ ಉತ್ತರಾಯಣ ಪ್ರಾರಂಭ ಅಂದರೆ ನಾನು ಇಚ್ಚಿಸಿದಂತೆ ಈ ಶರಪಂಜರದ ಮೇಲಿರುವ ಭೀಷ್ಮನೆಂಬ ಅಶಾಶ್ವತ ಕಾಯದಿಂದ ಮುಕ್ತಿ ಪಡೆದು ನನ್ನೇಳು ಸಹೋದರರೋಡಗೂಡಿ ಅಷ್ಟ ವಸುಗಳಲೊಬ್ಬನಾಗುತ್ತೇನೆ.!

ಅವತ್ತು ತಂದೆ ಶಂತನು ಮಹಾರಾಜ ತಾಯಿ ಗಂಗೆಯನು ತಡೆಯದಿದ್ದರೆˌಇವತ್ತು ಈ ಶರಪಂಜರದ ಮೇಲೆ ಮಲಗುವ ಪರಸ್ಥಿತಿ ಬರುತ್ತಿರಲಿಲ್ಲˌ ಆದರೆ ತಂದೆಯ ಪುತ್ರವ್ಯಾಮೋಹದ ಫಲವಾಗಿ ನಾನುಳಿದುಕೊಂಡೆ. ಪತ್ನಿಯ ವಿರಹದಲ್ಲಿದ್ದ ತಂದೆಯ ಕಣ್ಣುಹೊರಳಿದ್ದು ಒಬ್ಬಮಗನಿದ್ದ ಸತ್ಯವತಿಯಡಗೆ!!. ಹೆಣ್ಣಿನ ಮನಸು ಗಂಡಿನಷ್ಟು ವಿಚಲಿತವಲ್ಲˌ ಅಷ್ಟು ಸುಲಭವಾಗಿ ಯಾರನ್ನೋ ತನ್ನ ಪತಿಯಂದು ಒಪ್ಪಿಕೊಳ್ಳಲಾರರು. ತನ್ನದೆಯಾದ ಷರತ್ತುಗಳಿಲ್ಲದೆ ಯಾವ ಕಾರ್ಯಮಾಡುವದಿಲ್ಲವೆಂಬ ಸತ್ಯ ತಾಯಿ ಗಂಗೆಯ ಮದುವೆ ಸಂಧರ್ಭದಲ್ಲಿನೇ ಗೋತ್ತಿದ್ದರು ತಂದೆ ಮತ್ತದೆ ತಪ್ಪು ನಿರ್ದಾರದಿಂದಾಗಿ ದೇವವ್ರತನಾದ ನಾನು ಭೀಷ್ಮನಾದೆ!!.                                                                                                                                                                                           

ಅಲ್ಲಿಗೆ ಎಲ್ಲ ಮುಗಿಯಿತು ಇನ್ನಾದರು ನಾನು ನೆಮ್ಮದಿಯಿಂದರಬಹುದು ಎಂದುಕೊಂಡರೆˌ ವಿಧಿಯ ನಿಯಮ ಬೇರೆಯಿತ್ತು? ಕಾಲ ಸರಿದಂತೆ ಒಂದಾದಮೆಲೆ ಒಂದರಂತೆ ಕುರು ಸಿಂಹಾಸನದ ಜವಬ್ದಾರಿ ಹೆಗಲೆರತೋಡಗಿತು. ವಿಚಿತ್ರ ವಿರ್ಯನ ವಿವಾಹಕೊಸ್ಕರ ಆಮಂತ್ರಣ ವಿಲ್ಲದೆ ಕಾಶಿರಾಜನ ಹೆಣ್ಣುಮಕ್ಕಳ ಸ್ವಯಂವರದಲ್ಲಿ ಮೂವರನ್ನು ಗೆದ್ದರೂˌಅಂಬೆಯ ದ್ರುಡ ನಿರ್ಧಾರದಿಂದ ನನ್ನನ್ನು ಒಂದು ಕ್ಷಣ ಅಧೈರ್ಯ ನೆನಸಿತುˌ ನನ್ನ ಪ್ರತಿಜ್ಞಾವಿಧಿಯಿಂದ ಅವಳ ಆಸೆಯನ್ನ ತ್ಯಾಜಿಸಬೆಕಾಯಿತು.  ಅತ್ತ ಪ್ರಿಯಕರನು ಸಿಗದೆ ಇತ್ತನನ್ನಿಂದ ತಿರಸ್ಕ್ರತಳಾದ ಅಂಬೆ  ಘೊರ ಪ್ರತಿಜ್ಞೆಗೈದು ಬೆಂಕಿಗಾಹುತಿಯಾದಳು!!!

ನನ್ನಿಂದಾಗಿ ಒಂದು ಹೆಣ್ಣು ಅನ್ಯಾಯವಾಗಿ ಪ್ರಾಣ ಬಿಟ್ಟಿದ್ದು ತುಂಬಾ ನೋವಾಯಿತು. ಕಾಲ ಎಲ್ಲ ಮರೆಸಿತು ದ್ರುತರಾಷ್ಟ್ರ ಹುಟ್ಟು ಕುರುಡನಾಗಿದ್ದˌ ನೂರು ಗಂಡುಮಕ್ಕಳಿಗೆ ಜನ್ಮನಿಡುವಳು ಎಂಬ ಕಾರಣಕೆ  ಸತ್ಯವತಿಯ ಬಯಕೆಯಂತೆ  ತಿಳಿದು ತಿಳಿಯದೆ ಶಕುನಿಯ ತಂಗಿಯಾದ ಗಾಂಧಾರಿಯನ್ನ ವಿವಾಹಮಾಡಿದೆ!. ಅವಳೋ ಮಾಹಾಪತಿವ್ರತೆ ಗಂಡನಿಗಿಲ್ಲದ ದ್ರುಷ್ಟಿಭಾಗ್ಯ ತನಗೂ ಬೆಡವೆಂದು ನೆತ್ರಗಳನ್ನು ವಸ್ತ್ರದಿಂದ ಬಂಧಿಸಿದಳು!!.

 ಲಕ್ಷ್ಮಿ ಜೊತೆಗೆ ಶನಿಯು ವಕ್ಕರಿಸುವಂತೆ ಶಕುನಿಯು ಸೇಡನೊತ್ತಿಕೊಂಡು ಬಂದˌ  ಅದನ್ನು ತಡೆಯುವನನ್ನ ಪ್ರಯತ್ನ ವ್ಯರ್ಥವಾಯಿತು. ಅಂದು ಅಂಬೆ ಹೇಳಿದ ಪ್ರತಿ ಮಾತು"ಭಿಷ್ಮ ನಿನ್ನ ಕಣ್ಣೆದುರೆ ನಿನ್ನ ಕುರು ಸಾಮ್ರಾಟ ನಾಶವಾಗುವದು ಎನ್ನ ಕಣ್ಣಿರ ಹನಿಯಂತೆ ನಿನ್ನ ಸಾಮ್ರಾಜ್ಯದಲ್ಲಿ ರಕ್ತದ ಹೊಳೆ ಹರಿಯುವದು! ಪ್ರತಿ ಹೆಣ್ಣಿನ ಗೋಳಾಟ ತಪ್ಪುವದಿಲ್ಲ ˌನಿನ್ನ ಸೋಲು ನನ್ನ ಕಣ್ಣಮುಂದೆ"ಎಂದು ಹೆಳಿದ್ದು ಎಲ್ಲಿ ಸತ್ಯವಾಗುತ್ತದೆ ಎಂಬ ಭಯವಾಗುತಿತ್ತು ??..

               ಅಂಬೆಯ ಶಾಪದ ಫಲವೆಂಬಂತೆ  ಕುಲದ ಟಿಸುಲುಗಳಾದ ದ್ರುತರಾಷ್ಟ್ರಮತ್ತು ಪಾಂಡುವಿನ ಮಕ್ಕಳು ಕುರು ಪಾಂಡವರೆಂಬ ಪಕ್ಷಗಳಾದರು! ಪಾಂಡುವಿನ ಮಕ್ಕಳಿಗಾದ ಪ್ರತಿ ಅನ್ಯಾಯ ಕಂಡರು ಕೈಲಾಗದವನಾಗಿಬಿಟ್ಟೆˌ ಶಕುನಿಯ ಕುತಂತ್ರಕೆ ತುಂಬಿದ ಸಭೆಯಲಿ ದ್ರೌಪದಿಗಾದ ಅನ್ಯಾಯ ಕಂಡರು ಕುರುಡನಾದೆ! ಕುಂತಿ ಗುಪ್ತವಾಗಿ ಕರ್ಣ ಅವಳ ಮಗನೆಂದು ಹೇಳಿದರು ಸಮಾಜದ ಕಟ್ಟಳೆಗೆ ಮಣಿದು ಕಿವುಡನಾದೆ!ˌ ಪಾಂಡವರೆಡೆಗೆ ನ್ಯಾಯಯುತವಾದ ಪ್ರೀತಿ ವಾತ್ಸಲ್ಯವಿದ್ದರು ದ್ರುತರಾಷ್ಟ್ರನ ಕೊರಿಕೆಯಿಂದ ಮೂಕನಾದೆ! ಯುದ್ದದಲ್ಲಾದರು ಸತ್ಯದ ಪರವಾಗೋಣ  ಎಂದರೆ ಮತ್ತದೆ ದ್ರುತರಾಷ್ಟ್ರನ ಕುರುಡು ಪುತ್ರವ್ಯಾಮೋಹ ಬಂದಿಯಾಗಿ"ನಮ್ಮ ಕೈಬಿಟ್ಟರೆ ಸಾವೆ ಗತಿ" ಎಂಬನುಡಿಗೆ ಸಿಂಹಾಸಣದ ಉಪ್ಪಿಣ ಋಣಕ್ಕೆ ಬದ್ದವಾಗಿ ಮುದ್ದು ಪಾಂಡವರ ವಿರುದ್ದ ಧನಸ್ಸು ಎತ್ತಿದೆ ˌಅಭಿಮನ್ನ್ಯುವಿನವಧೆ ಮಾಡಿದ ಪಾಪಿ ನಾನಾದೆ!

ಅಲ್ಲಿ ಒಂದು ಸಮಾಧಾನವಿತ್ತು  ಕೃಷ್ಣ ಕಳುಹಿಸಿದ ಅಷ್ಠ ಅಕ್ಷೋಣಿಗಳ ಸೈನ್ಯ ದ್ರೊಣˌ ಕರ್ಣˌ ಶಲ್ಯರಂತ ನಾವೆಲ್ಲ ದುರ್ಯೋಧನನೆಡೆಗಿದ್ದರೂ ಸಾಕ್ಷಾತ ವಿಶ್ವ ಸೃಷ್ಟಿ ಕರ್ತನಾದ ಶ್ರೀಕೃಷ್ಣನೆ ಪಾಂಡವರೊಂದಿಗಿರಬೆಕಾದರೆ ನಾನೋಂದು ಹುಳ ಅವರೆಡಗಿರದಿದ್ದರೆನು? ವಿಜಯ ಯಾವಾಗಲು ಧರ್ಮದೆಡೆಗೆ ಎಂಬ ಸತ್ಯ ಗೊತ್ತಾಗಿತ್ತು........... ಇದೀಗ ಎಲ್ಲ ಮುಗಿದಿದೆ ಅಂಬೆಯ ಕೊಪದ ಧಳ್ಳ್ನುಡಿಯಂತೆ ಪಂಚ ಪಾಂಡವರುˌ ದ್ರೌಪದಿ  ˌಉತ್ತರೆಯ ಗರ್ಭದಲ್ಲಿ ಮರುಹುಟ್ಟುಪಡೆದ ವಂಶದ ಕುಡಿ ಬಿಟ್ಟರೆ  ಎಲ್ಲವೂ ಸರ್ವ ನಾಶವಾಗಿದೆ ಇದೆಲ್ಲವೂ ಒಂದು ಹೆಣ್ಣಿಗಾಗಿ, ಹೋನ್ನಿಗಾಗಿ, ಮಣ್ಣಿಗಾಗಿ, ಎಂದು ಜಗತ್ತೆಲ್ಲ ಹೆಳುತಿದ್ದರೂˌ ಇದೆಲ್ಲವೂ ಗಂಡಿನ ಸ್ಥಿಮಿತದಲ್ಲಿರದ ಅವನ ಚಂಚಲ ಮನಸ್ಸಿನ ಮಿತಿಯಿಲ್ಲದ ಮತಿಯಿಲ್ಲದ ಮೋಹಕ್ಕಾಗಿ ಸರ್ವನಾಶವಾಯಿತು.

 ಎನ್ನ ಮನ ಕೂಗಿ ಕೂಗಿ ಹೇಳುತಿದೆ. ಇದೆಲ್ಲ ಈಗ ಹೆಳಬೇಂಕೆಂದರು ಕೇಳುವವರು ಯಾರಿಲ್ಲ ನಾನೀಗ ಒಂಟಿ ˌ ನನ್ನ ಮೈಯಲ್ಲೀಗ ಮುದ್ದಿನ ಮೊಮ್ಮಗನ ಬತ್ತಳಿಕೆಯ ಬಾಣಗಳು ಅವೇ ನನ್ನ ಸಾಂಗಾತಿಗಳು!!!!!!!.

ಅಗೋ ಅಲ್ಲಿ ಮೂಡಣದಲಿ ಉತ್ತರಾಯಣದ ಶುಭ ಹೋಂಗಿರಣಗಳು ಗೋಚರಿಸುತಿವೆ ಎನ್ನ ಕಾಲ ಸಮಿಪಿಸುತಿದೆ.ˌ ಕೊನೆಯದಾಗಿ ಒಂದು ಮಾತು ಹೆಣ್ಣನ್ನು ಅವಳಿಷ್ಟಕ್ಕೆ  ವಿರುದ್ದವಾಗಿ ಬಯೋಸೋದು ತಪ್ಪು ಹಾಗೆ ತಿರಸ್ಕರಿಸೋದುಕೂಡಾ!!!!.............                                                                                           .     .                                                                                                                           

                                                                                                              ಶ್ರೀಮತಿ ವೈಶಾಲಿ ಬೀಳೂರ.

 

 

 

ರಾಕ್ಷಸಮರ್ದಿನಿ

         ಒಬ್ಬ ಅಂದ-ಚೆಂದವಾದ ಹುಡುಗಿ, ಹೆಸರು ಸ್ವಾತಿ ಅಂತ. ತುಂಬಾ ಚುರುಕು. ನೇರ ನಡೆ-ನುಡಿ. ಅಣ್ಣ-ತಮ್ಮಂದಿರು 2 ಅದೆ ಅವಳ ಪ್ರಪಂಚವಾಗಿತ್ತು. ಆಕೆ ಯಾವುದೇ ಕಷ್ಟದಲ್ಲಿರಲಿ ಯಾರ ಸಲಹೆಯನ್ನು ಸ್ವೀಕರಿಸಲ್ಲ ಕಾರಣ, ಅವರ ಮಾತು ಕೇಳಿ ಹಾಗಾದೆ, ಇವರ ಮಾತು ಕೇಳಿ ಹೀಗಾದೆ, ಎಂಬ ಬೇಜಾರು ತನಗುಂಟಾಗಬಾರದೆಂದು. ಇನ್ನು ಓದಿನಲ್ಲಿ ಡಿಗ್ರಿ ಫೇಲ್. ಆಗಂತ ಅವಿಧ್ಯಾವಂತಳಲ್ಲ, ಪರೀಕ್ಷೆಗಳು ಆಕೆಗೆ ಹಿಡಿಸಲಿಲ್ಲ ಅಷ್ಟೇ. ವೈಜ್ಞಾನಿಕ ಪ್ರಾಯೋಗಿಕಗಳಲ್ಲಿ ತಾನು   ಮಾಡಿದೆ ಇರುವ ಪ್ರಯೋಗಗಳೆ ಇಲ್ಲ, ಅವು ವಿಫಲವಾದದ್ದೆ ಇಲ್ಲ. ಅಣ್ಣ ತಮ್ಮಂದಿರ ಜೊತೆ ಸಂತೋಷವಾಗಿರುವುದು ಮಾತ್ರ ಆಕೆಗೆ ಗೊತ್ತು. 

 ಒಂದು ದಿನ ಆಕೆಯ  ಚಿಕ್ಕ ತಮ್ಮ 500000 ರೂಪಾಯಗಳನ್ನು ಕದ್ದು ಊರು ಬಿಟ್ಟು ಹೋದ. ನಂತರ ಅವರ ಅಣ್ಣ ಒಬ್ಬ ವೈದ್ಯನನ್ನು ಕೊಂದು ಓಡಿ ಹೋದ. ಇದನ್ನು ಸಹಿಸಲಾಗದೆ ಆಕೆ, ಕಷ್ಟಪಟ್ಟು ತನ್ನ ತಮ್ಮನನ್ನು ಸಾಕಿಸಲುಹಿದಳು. ಕೆಲವು ದಿನಗಳ ನಂತರ ಅವನು ತನ್ನ ಅಕ್ಕನ ಕಷ್ಟ ನೋಡಲಾಗದೆ ಮನೆ ಬಿಟ್ಟು ಓಡಿ ಹೋದ. ಒಂದೇ ಸಮಯದಲ್ಲಿ ಎಲ್ಲಾ ಕಷ್ಟಗಳು ಬಂದಂತೆ ಆಕೆಯೂ ದಿಗ್ಬ್ರಮೆಗೊಂಡು ಮತಿ ಕಳೆದುಕೊಂಡಳು. ಹುಚ್ಚಿ ಯಾದಳು.   ಆಕೆಯನ್ನು ಎಲ್ಲರೂ ತುಂಬಾ ಹೀನವಾಗಿ ನೋಡುತ್ತಿದ್ದರು. 

ಅದೇ ಸಮಯಕ್ಕೆ ಆ ಪ್ರಾಂತ್ಯದಲ್ಲಿ ಕೊಲೆ- ಸುಲಿಗೆಗಳು, ಅಪಹರಣಗಳು ಬೆಳೆಯುತ್ತಾ ಬಂದವು. ಅವುಗಳಲ್ಲಿ ಹುಚ್ಚಿಯಾದ  ಸ್ವಾತಿಯನ್ನು ಹಾಳುಮಾಡಿ ಸುಟ್ಟು ಬೂದಿಮಾಡಿರುವುದು ಒಂದು. ಇವುಗಳನ್ನು ತಡೆಯಲು ಒಬ್ಬ ಮಹಿಳಾ ಪೋಲಿಸಧಿಕಾರಿ ಆ ಪ್ರಾಂತ್ಯಕ್ಕೆ ನೇಮಕಳಾದಳು. ಆಕೆ ನಾನಾ ಕಷ್ಟಪಟ್ಟು ಎಲ್ಲವನ್ನೂ ಕಂಡುಹಿಡಿಯಲು ಪ್ರಯತ್ನಿಸಿದಳು ಆದರೆ ಆಕೆಗೆ ಯಾವ ಸುಳಿವೂ ಸಿಕ್ಕಲಿಲ್ಲ. 

            ಒಂದು ದಿನ ಆಕೆಗೆ ಒಂದು ಕರೆ ಬಂತು :" ತುಂಬಾ ಕಷ್ಟ ಪಟ್ಟಿದೀರ ಇನ್ನೂ ಸುಮ್ಮನಿದ್ದುಬಿಡಿ ನಮ್ಮನ್ನ ಹಿಡಿಯುವುದು ನಿಮಿಂದಾಗಲ್ಲ". ಆ ಕರೆ ಮಾಡಿದ್ದು ಆ ಕೊಲೆಗಾರರೆ. ಆ ಪೋಲೀಸಧಿಕಾರಿ ತುಂಬಾ ಯೋಚಿಸಿ ತನಿಖೆ ಮಾಡಿ ಆ ಕೊಲೆಗಾರರು ಇರುವ ಸ್ಥಳ ಕಂಡುಹಿಡಿದಳು. ಅವರಿರುವ  ಸ್ಥಳಕ್ಕೆ ಹೋದಳು, ಆದರೆ ಅವರು ಇರಲಿಲ್ಲ. ಆಕೆ ನಿರುತ್ಸಾಹಗೊಳ್ಳದೆ  ಯಾವುದಾದರು ಸುಳಿವು ಸಿಗುವುದೆಂದು ಆ ಪ್ರದೇಶದ ಎಲ್ಲಾ ಕಡೆ ತಿರುಗಿ ನೋಡಿದಳು.  ಆಗ ಆಕೆಗೆ ಒಂದು ಹೂ ಕಾಣಿಸಿತು ಅದನ್ನ ಅದನ್ನು ಮುಟ್ಟಿದ ಕೂಡಲೇ ನೆಲ ಬಾಯಿಬಿಚ್ಚಿತು ನೋಡಿದ್ರೆ ಅದೊಂದು ಸುರಂಗದ ಮಾರ್ಗ. ಆಕೆ  ಆ ದಾರಿಯಲ್ಲಿ ಹೋಗುತ್ತಿದ್ದಾಗ ದೂರದಲ್ಲಿ ಒಂದು ಗುಂಪು ಒಬ್ಬ ವ್ಯಕ್ತಿಯ ಕತ್ತನ್ನು ಕತ್ತರಿಸುತ್ತಿದ್ದರು, ಆಕೆ ತಡೆಯಲು ಪ್ರಯತ್ನಿಸುವ ಮುಂಚೆಯೇ ಕತ್ತು ಕಡಿದರು. ಪೋಲಿಸ್ ಗನ್ ಹಿಡಿದು ಅವರತ್ತ ಹೆಜ್ಜೆ ಹಾಕಿದಳು. ಆಕೆ ಅವರ ಹತ್ತಿರ ಹೋಗಿ ನೋಡಿದರೆ ಅಲ್ಲಿರುವುದು ಸ್ವಾತಿ ಮತ್ತು ಅವಳ ಅಣ್ಣತಮ್ಮಂದಿರು.  ಅವರು ತಪ್ಪಿಸಿ ಕೊಳ್ಳುವಷ್ಟರಲ್ಲೆ , ಪೋಲಿಸ್ರು ಸುತ್ತಲೂ ಆವರಿಸಿಕೊಂಡ್ಡಿದ್ದರು.

ಪೋಲೀಸಧಿಕಾರಿ ಈ ಕೊಲೆಗಳು, ಸುಲಿಗೆಗಳು ನೀವೆ ಮಾಡಿದ್ದು ಹೌದ ? ಸ್ವಾತಿ  ಹೌದು ಏಕೆಂದರೆ ನಮ್ಮ ಸಮಾಜ ತುಂಬಾ ಕೊಳಕಾಗಿದೆ. ಅದನ್ನು ಶುದ್ಧಿ ಮಾಡಲು ಎಂದಳು. ಮಾಡೋಕೆ ನಾವಿಲ್ವ ? ನಿಮ್ದು ಉದ್ಯೋಗ, ನಮ್ದು ಕರ್ತವ್ಯ ! ಇದನೆಲ್ಲ ಏನಕ್ಕೆ ಮಾಡ್ತರೊದು ? ಉತ್ತಮ ಸಮಾಜಕ್ಕೆ. ಉತ್ತಮ ಸಮಾಜಕ್ಕೆ ನಿರ್ದಾಕ್ಷಿಣ್ಯವಾಗಿ ಸಾಯ್ಸೋದ ಪ್ರತಿಯೊಂದಕ್ಕೂ ಜನ್ಮ ಕೊಡ್ತಿವಿ, ತಪ್ಪು ಮಾಡಿದ್ರೆ ಕ್ಷಮಿಸ್ತಿವಿ ಆದ್ರೂ ಬದಲಾಗಿಲ್ಲ ಅಂದ್ರೆ ಆಗ ನಾವು ಕೊಡೊ ಪ್ರಾಣ ನಾವೇ ತಗೊಳೊದು. 

ನಿನ್ನ ತಮ್ಮಂದಿರ್ಗೆ ಉಜ್ವಲ ಭವಿಷ್ಯವಿದೆ ಅದನ್ನೆಕೆ ಆಳು ಮಾಡ್ದೆ

ಆ ಉಜ್ವಲ ಭವಿಷ್ಯ  ಓಳ್ಳೆ ಸಮಾಜಕ್ಕೆ ಅದೆ ಈಗ ಮಾಡ್ತಿರೋದು 

  ಇನ್ನೇನು ಕೇಳ್ಬೇಡಿ.

ಹೆಣ್ಣನ್ನು ಹೀನವಾಗಿ ನೋಡೊರ್ಗ ತಲೆ ಕಡಿಯುತ್ತೆವೆ

ಅಕ್ರಮ ವ್ಯವಹಾರಗಳನ್ನು ಮಾಡೋರಿಗೆ ಕೈ ಕಡಿಯುತ್ತೆವೆ.

ನನ್ನನ್ನು ಅಪಹರಿಸಲು ಬಂದವರನ್ನು ಬೂದಿ ಮಾಡ್ದೆ ನಾನು ತಪ್ಪಿಸಿಕೊಂಡೆ‌

ಹೀಗೆ ಮಾಡಿದ ತಪ್ಪಿಗೆ ಶಿಕ್ಷೆ ವಿಧಿಸುತ್ತೇವೆ.  ಪಕ್ಕಾ ಪ್ಲಾನ್ ಮಾಡಿ ನಾವು ಈ ಲೋಕದಲ್ಲಿ ಇಲ್ಲ ಅಂತ ಎಲ್ಲರನ್ನೂ ನಂಬಿಸಿ ನಮ್ಮ ಕೆಲಸ ಪ್ರಶಾಂತವಾಗಿ ಮಾಡ್ಕೋತ್ತಿದ್ದೀವಿ, ಕದ್ದ ಹಣ ಹೊಸ ಜೀವನ ಪ್ರಾರಂಬಿಸೋ ಬಡವರಿಗೆ ಕೊಟ್ಟು, ಅಕ್ರಮ ವ್ಯವಹಾರಗಳನ್ನು ಮಾಡೋರಿಗೆ ಶಿಕ್ಷೆ ಕೊಟ್ಟು ದೇಶದ ಋಣ ತೀರಿಸಿಕೋಳುತ್ತಿದ್ದೇವೆ. ಈಗ ನೀವು ನಮ್ಮನ್ನು ಸಾಯಿಸಿದ್ರೂ ನಮ್ಮಂಥವೊರು ಹುಟ್ಟುತ್ತಾ ಇರ್ತವಿ.

ಇದನ್ನು ಕೇಳಿ ತನ್ನ ಮನ ಒಪ್ಪದಿದ್ದರೂ ಪೋಲಿಸಧಿಕಾರಿ ತನ್ನ ಕರ್ತವ್ಯವನ್ನು ನಿರ್ವಯಿಸಿದಳು, 4 ಜನರಿಗೂ ಶಿಕ್ಷೆಯಾಯಿತು.  ಹೆಣ್ಣು ಕಡಿಮೆ ಅಂತ ನೊಡ್ಬೇಡಿ ಜನ್ಮ ಕೊಡೊರಿಗೆ ಪ್ರಾಣ ತೆಗೆಯೋದೂ ಬರುತ್ತೆ. ಅಕ್ರಮ  ಕೆಲಸಗಳನ್ನು ತಡೆಯಲು ನಾಂದಿ ಹಾಡಿದ್ದೆ ಮಹಿಳೆಯರು. ಕೆಲವು ದಿನಗಳ ನಂತರ ಆ ಪೋಲಿಸಧಿಕಾರಿ ತನಗೆ ಮನ ಒಪ್ಪದೆ ಉದ್ಯೋಗವನ್ನು ಬಿಟ್ಟು ಗುಂಪು ಕಟ್ಟಿಕೊಂಡು ಸ್ವಾತಿಯ ಕೆಲಸಗಳನ್ನು ಮುಂದುವರಿಸಿದಳು.   

                                                                    - ತಾರಕೇಶ್ವರ್. ಕೆ .ಜಿ   ಕೊಡಿಚೆರವು ಕೋಲಾರ ಜಿಲ್ಲೆ


ಪೋಟೋಗ್ರಫಿ : ವರುಣ್‌ ರಾಜ್‌ ಜೀ

ಸಾಹಿತ್ಯ ಸಂಚಯ

ಶರಣರ ಸೂಳ್ನುಡಿ


ಅಂಗಲಿಂಗದ ಒಳಗೆ ಲಿಂಗಕಂಗಳು ಬೆಳಗು,
ಹಿಂಗಲಾಪುದೆ ಹೇಳು ಅಜ್ಞಾನವ!
ಸಂಗಸುಖಮಥನದ ಅಸಂಗದಿಂದದನರಿದು
ಹಿಂಗಲಿಕೆ ಹೆಸರೇನು? ರಾಮನಾಥ

 

 

ಅಂತರಂಗ ಬಹಿರಂಗದಲ್ಲಿ
ಸರ್ವಾಚಾರ ಸಂಪತ್ತಿನ ಆಚರಣೆಯನರಿಯದ
ಮೂಢಾತ್ಮಂಗೆ ಲಿಂಗಾಂಗ ಸಮರಸವ ಹೇಳಿ
ಸರ್ವಾಂಗ ಸ್ನಾನಧೂಳನ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣ
ಕ್ರಿಯಾಭಸಿತವ ಧರಿಸುವ ನಿರ್ಣಯವ ಹೇಳಿ
ಅಂಬಲಿ ಅಲೆಯಾಗಿ, ತುಂಬೆಯ ಮೇಲೋಗರವಾಗಿ,
ಉಂಬ ಸದುಭಕ್ತನ ಮನೆಯಾಗಿ,
ಲೋಕದ ಡಂಭಕರ ಮನೆ ಬೇಡ, ರಾಮನಾಥ

 

 

ಅಡಗಿನೊಳಗಣ ಹಾಲು ಅಡಗಿಪ್ಪ ಭೇದವನು
ಬೆಡಗಪ್ಪ ತುಪ್ಪದ ಕಂಪಿನ ಪರಿಯಂತೆ.
ಎಲೆ ಮೃಡನೆ! ನೀನು ಪ್ರಾಣ ಪ್ರಕೃತಿಗಳೊಳಗೆ
ಅಡಗಿಹ ಭೇದವ ಲೋಕದ ಜಡರೆತ್ತ ಬಲ್ಲರೈ! ರಾಮನಾಥ.

ಅಗ್ನಿ ಸುಡಲಲ್ಲದೆ ಸುಳಿಯಲರಿಯದು
ವಾಯು ಸುಳಿವುದಲ್ಲದೆ ಸುಡಲರಿಯದು
ಆ ಆಗ್ನಿ ವಾಯುವ ಕೂಡಿದಲ್ಲದೆ ಅಡಿಯಿಡಲರಿಯದು
ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನಭೇದವ? ರಾಮನಾಥ

 

 

ಅಚ್ಚ ಶಿವೈಕ್ಯಂಗೆ ಹೊತ್ತಾರೆ ಅಮವಾಸೆ;
ಮಟ್ಟ ಮಧ್ಯಾಹ್ನ ಸಂಕ್ರಾಂತಿ;
ಮತ್ತೆ ಅಸ್ತಮಾನ ಪೌರ್ನಮಿ ಹುಣ್ಣಿಮೆ;
ಭಕ್ತನ ಮನೆಯ ಅಂಗಳವೆ ವಾರಣಾಸಿ ಕಾಣಾ! ರಾಮನಾಥ

 

 

ಅಡಗ ತಿಂಬರು; ಕಣಿಕದ ಅಡಿಗೆಯಿರಲಿಕೆ.
ಕುಡಿವರು ಸುರೆಯ! ಹಾಲಿರಲಿಕೆ.
ಹಡದುಂಬ ವೇಶಿಯನೊಲ್ಲದೆ ಹೆರರ ಮಡದಿಗಳುಪುವ
ಸತ್ತ ನಾಯ ತಿಂಬ ಹಡ್ಡಿಗರನೇನೆಂಬೆನೈ! ರಾಮನಾಥ


 

 


 

 

ಪ್ರಾಚೀನ ಕವಿ ಪರಿಚಯ

ಚಾವುಂಡರಾಯ

ಸು. 978. ಶ್ರವಣಬೆಳಗೊಳದ ಪ್ರಸಿದ್ಧ ಗೊಮ್ಮಟ ವಿಗ್ರಹವನ್ನು ಪ್ರತಿಷ್ಠಾಪಿಸಿ ಕೀರ್ತಿಪಡೆದವ; ಚಾವುಂಡರಾಯಪುರಾಣವೆಂದು ಹೆಸರಾಗಿರುವ ತ್ರಿಷಪ್ಟಿಲಕ್ಷಣಮಹಾಪುರಾಣವೆಂಬ ಮಹಾಪುರಾಣವನ್ನು ಗದ್ಯದಲ್ಲಿ ರಚಿಸಿದವ. ಈತ ಪಶ್ಚಿಮ ಗಂಗವಂಶದ ರಾಜರಾದ ಮಾರಸಿಂಹ II (961-74) ಮತ್ತು ರಾಚಮಲ್ಲ ೪ನೇ (974-77) ಇವರಲ್ಲಿ ಯೋಧಾಗ್ರಣಿಯೂ ಮಂತ್ರಿಯೂ ಆಗಿದ್ದವ. ಈತನನ್ನು ಚಾಮುಂಡರಾಯ (ನಮಿ ತೀರ್ಥಂಕರನ ಯಕ್ಷಿಯಾದ ಚಾಮುಂಡಿ ಎಂಬುದರಿಂದ ಬಂದಿರಬೇಕು) ಎಂದೂ ಕರೆಯಲಾಗಿದೆ. ಗೊಮ್ಮಟ ಈತನ ಇನ್ನೊಂದು ಹೆಸರು. ಇದರಿಂದಾಗಿಯೇ ಈತ ಕಡೆಸಿದ ಬಾಹುಬಲಿ ಮೂರ್ತಿಯನ್ನು ಗೊಮ್ಮಟೇಶ್ವರ (ನೋಡಿ- ಗೊಮ್ಮಟೇಶ್ವರ) ಎಂದು ಕರೆಯಲಾಗಿದೆ.

ಈತ ಜೈನ, ಬ್ರಹ್ಮ ಕ್ಷತ್ರಕುಲೋತ್ಪನ್ನನೆಂದು ತಾನೇ ಹೇಳಿಕೊಂಡಿದ್ದಾನೆ. ತಂದೆತಾಯಿಗಳ ವಿಚಾರ ತಿಳಿಯದು. ಈತನಿಗೆ ಜಿನದೇವಣ ಎಂಬ ಮಗನಿದ್ದನೆಂಬ ಅಂಶಕ್ಕೆ ಶಾಸನಾಧಾರವಿದೆ. ಅಜಿತಸೇನಾಚಾರ್ಯ ಮತ್ತು ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿ ಈತನ ಗುರುಗಳು. ಈತ ಇಮ್ಮಡಿ ಮಾರಸಿಂಹನ ಸಹಪಾಠಿಯಾಗಿ ಮುಂದೆ ಆತನ ನೆಚ್ಚಿನ ಸೇನಾನಿಯಾಗಿ ಅವನ ಪರವಾಗಿ ಅನೇಕ ಯುದ್ಧಗಳಲ್ಲಿ ಭಾಗವಹಿಸಿದ ವಿಷಯ ಚಾವುಂಡರಾಯಪುರಾಣದಲ್ಲಿ ಬರುವ ಉಲ್ಲೇಖಗಳಿಂದಲೂ ಶ್ರವಣಬೆಳ್ಗೊಳದ ಒಂದು ಶಾಸನದಿಂದಲೂ ಅನಂತರ ಪಟ್ಟಕ್ಕೆ ಬಂದ ನಾಲ್ವಡಿ ರಾಚಮಲ್ಲನಲ್ಲಿ ಮಂತ್ರಿಯಾಗಿದ್ದನೆಂದು 'ಸ್ಥಿರ ಜಿನಶಾಸನೋದ್ಧರಣರಾದಿಯೊಳಾರನೆ ರಾಚಮಲ್ಲ ಭೂವರ ವರಮಂತ್ರಿ ರಾಯನೆ...' ಎಂಬ ಶಾಸನವಾಕ್ಯದಿಂದಲೂ ತಿಳಿದುಬರುತ್ತದೆ. ಈತನಿಗೆ ಗುಣರತ್ನಭೂಷಣಂ, ಕವಿಜನಶೇಖರಂ ಎಂಬ ಬಿರುದುಗಳಲ್ಲದೆ ಸಮರಧುರಂಧರ, ವೀರಮಾರ್ತಾಂಡ, ರಣರಂಗಸಿಂಗ, ವೈರಿಕುಲಕಾಲ ದಂಡ, ಭುಜವಿಕ್ರಮ, ಚಲದಂಕರಂಗ, ಸಮರ ಪರಶುರಾಮ, ಪ್ರತಿಪಕ್ಷರಾಕ್ಷಸ, ಭಟಮಾರಿ, ಸುಭಟಚೂಡಾಮಣಿ-ಎಂಬ ಶೌರ್ಯಮೂಲವಾದ ಬಿರುದುಗಳಿದ್ದಂತೆ ತಿಳಿದುಬರುತ್ತದೆ. ಇವು ಈತನ ಕಲಿತನಕ್ಕೆ ಸಾಕ್ಷಿಯಾಗಿವೆ.

ತ್ರಿಷಷ್ಟಿಲಕ್ಷಣ ಮಹಾಪುರಾಣ ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟಸ್ಥಾನ ಪಡೆದಿದೆ. ಪ್ರಾಚೀನ ಗದ್ಯಗ್ರಂಥಗಳಲ್ಲಿ ಒಂದು ಎಂಬುದರ ಮೇಲೂ ಇದರ ಹಿರಿಮೆ ನಿಂತಿದೆ. ವಡ್ಡಾರಾಧನೆ ದೊರೆತು ಪ್ರಕಟವಾಗುವ ಮೊದಲು ಕನ್ನಡ ಸಾಹಿತ್ಯದ ಪ್ರಥಮ ಗದ್ಯಕೃತಿ ಎಂದು ಇದು ಮನ್ನಣೆ ಪಡೆದಿತ್ತು. ಇದರ ಕರ್ತೃತ್ವದ ಬಗ್ಗೆ ಸಂದೇಹವೂ ಇದೆ. ಇದರಲ್ಲಿ ರನ್ನನ ಕೈವಾಡವಿದೆಯೆಂದು ಕೆಲವಿದ್ವಾಂಸರ ಅಭಿಪ್ರಾಯ. ಜೈನಧರ್ಮಕ್ಕೆ ಸಂಬಂಧಿಸಿದ ಈ ಮಹಾಪುರಾಣ ರಚನೆಯಲ್ಲಿ ಜಿನಸೇನಾಚಾರ್ಯ, ಗುಣಭದ್ರಾಚಾರ್ಯರ ಮಹಾಪುರಾಣವನ್ನು ಅವಲಂಬಿಸಿ ಅನುಸರಿಸಲಾಗಿದೆ. ಶಲಾಕಪುರಷರಾದ ತೀರ್ಥಂಕರರು 24, ಚಕ್ರವರ್ತಿಗಳು 12, ಬಲದೇವರು 9, ವಾಸುದೇವರು 9, ಪ್ರತಿವಾಸುದೇವರು 9-ಹೀಗೆ 63 ಜನರ ಚರಿತ್ರೆಯೇ ಮಹಾಪುರಾಣದ ವಸ್ತು. ಈತರ ಮೂಲವನ್ನು ಬಳಸಿಕೊಳ್ಳುವಾಗ ಅತ್ಯಾವಶ್ಯಕವಾದ ತೀರ್ಥಂಕರಾದಿ ಮಹಾಪುರುಷ ಸಂಬಂಧವಾದ ಕಥಾಸಾರವನ್ನು ಉಳಿಸಿಕೊಂಡು ಅನುಪಯುಕ್ತವಾದ ಕಥಾವಿವರಣೆಗಳನ್ನೂ ವರ್ಣನೆಗಳನ್ನೂ ವ್ಯಕ್ತಿ-ಗುಣ-ವಸ್ತು ವಿಶೇಷಣಾದಿಗಳನ್ನೂ ಅಲಂಕಾರ ವೈಚಿತ್ರ್ಯಗಳನ್ನೂ ನೀತಿಪರವಾಕ್ಯಗಳನ್ನೂ ಧಾರ್ಮಿಕ ಪ್ರಕ್ರಿಯಾವಿವರಗಳನ್ನೂ ಪಾರಿಭಾಷಿಕ ಪದಸಮುಚ್ಚಯಗಳನ್ನೂ ಬಹುಮಟ್ಟಿಗೆ ಬಿಟ್ಟಿದ್ದಾನೆ.

 ಈತನ ಸಂಗ್ರಾಹಕತೆ ಎಷ್ಟೆಂದರೆ ಆದಿಪುರಾಣದ ಚಕ್ರವರ್ತಿಚರಿತದಲ್ಲಿ ಪ್ರಸಿದ್ಧರಾಗಿರುವ ಭರತ ಬಾಹುಬಲಿಗಳ ವ್ಯಾಯೋಗ ಪ್ರಸಂಗವನ್ನು ಜಿನಸೇನರು ಪೂರ್ಣಪುರಾಣದಲ್ಲಿ ಎರಡೂವರೆ ಪರ್ವಗಳಷ್ಟು ವಿಸ್ತಾರದಲ್ಲೂ ಪಂಪಕವಿ 133 ಪದ್ಯಗಳಲ್ಲೂ ಹೇಳಿದ್ದರೆ ಚಾವುಂಡರಾಯ ಕೇವಲ 27 ಸಾಲುಗಳಲ್ಲಿ ಸಂಕ್ಷಿಪ್ತವಾಗಿ ಅಡಕಗೊಳಿಸಿದ್ದಾನೆ. ಇಂಥ ನಿದರ್ಶನಗಳಿಂದ ಚಾವುಂಡರಾಯ ಕುಶಲಸಂಗ್ರಾಹಕನೆಂದು ಒಪ್ಪಿಕೊಳ್ಳದಿದ್ದರೂ ನಿಷ್ಠುರ ಸಂಗ್ರಾಹಕನೆನ್ನದೆ ವಿಧಿಯಿಲ್ಲ. ಈ ಸಂಗ್ರಾಹಕತೆಯಿಂದಾಗಿ ತೀರ್ಥಂಕರ ಚರಿತ್ರೆಗಳಲ್ಲಿ ಮನ ಸೆಳೆಯುವ ಕಥಾಂಶ, ವಿವರಗಳು ಇಲ್ಲ. ತೀರ್ಥಂಕರ ಚರಿತ್ರೆಯ ಮುಖ್ಯಾಂಶಗಳನ್ನು ಮೂಲಕ್ಕೆ ಚ್ಯುತಿಬಾರದಂತೆ ಸಂಕ್ಷೇಪಿಸಿ ಜೈನಧರ್ಮದ ಬಗ್ಗೆ ಜೈನರಲ್ಲಿ ಶ್ರದ್ಧಾಸಕ್ತಿ ಬೆಳೆಯುವಂತೆ ಮಾಡಿರುವುದು ಇಲ್ಲಿನ ಒಂದು ಸಾಧನೆ.

ಭಾರತದಲ್ಲಿ ಮಹಾಪುರಾಣ ತುಂಬ ಪುರಾತನವಾದುದಾದರೂ ಕನ್ನಡಕ್ಕೆ ಮೊದಲ ಬಾರಿಗೆ ಅದನ್ನು ತಂದವ ಚಾವುಂಡರಾಯನೇ. ಕನ್ನಡದಲ್ಲಿ ತ್ರಿಷಷ್ಟಿ ಶಲಾಕಾಪುರುಷರ ಚರಿತ್ರೆಯನ್ನು ಕುರಿತು ಮಹಾಪುರಾಣ ಇದೇ ಎನ್ನುವುದರಿಂದಲೂ ಕನ್ನಡದಲ್ಲಿ ಜೈನಪರಂಪರೆಯ ರಾಮಾಯಣ, ಭಾರತ, ಭಾಗವತ ಕಥೆಗಳಿಗೆ ಪ್ರಥಮ ಆಕರಗ್ರಂಥವಾಗಿರುವುದರಿಂದಲೂ ಈ ಗ್ರಂಥಕ್ಕೆ ಪ್ರಾಶಸ್ತ್ಯ ಬಂದಿದೆ. ಸಾಮಾನ್ಯವಾಗಿ ಬೇರೆ ಗ್ರಂಥಗಳಲ್ಲಿ ದೊರಕದ, ಸಂಸ್ಕøತ ಮಹಾಪುರಾಣಗಳ ಕವಿ ಪರಂಪರೆಯನ್ನು ಚಾವುಂಡರಾಯ ಸ್ಪಷ್ಟವಾಗಿ ಹೇಳಿದ್ದಾನೆ, ಈ ದೃಷ್ಟಿಯಿಂದಲೂ ಜೈನಸಾಹಿತ್ಯದಲ್ಲಿ ಚಾವುಂಡರಾಯಪುರಾಣ ಅಧಿಕೃತ ದಾಖಲೆಯಾಗಿ ನಿಲ್ಲುತ್ತದೆ. ತ್ರಿಷಷ್ಟಿಲಕ್ಷಣಮಹಾಪುರಾಣವನ್ನು 978ರಲ್ಲಿ ರಚಿಸಿದುದಾಗಿ ಕವಿಯೇ ಹೇಳಿಕೊಂಡಿದ್ದಾನೆ. ಗದ್ಯದಲ್ಲಿಯೇ ರಚಿತವಾದ ಈ ಗ್ರಂಥದ ಆದಿ, ಅಂತ್ಯ ಹಾಗೂ ಕಥೆಗಳ ಮಧ್ಯದಲ್ಲಿ ಅಲ್ಲಲ್ಲಿ ಪದ್ಯಗಳೂ ಉಂಟು.

ಜಿನಸೇನಾಚಾರ್ಯ, ಗುಣ ಭದ್ರಾಚಾರ್ಯರ ಮಹಾಪುರಾಣವನ್ನೇ ಅನುಸರಿಸಿ ಈತ ತನ್ನ ಗ್ರಂಥವನ್ನು ರಚಿಸಿದ್ದರೂ ಈತ ಸಂಸ್ಕøತ ಪ್ರಾಕೃತ ಭಾಷೆಗಳಲ್ಲಿ ಹಿಂದೆ ರಚಿತವಾದ ಇತರ ಮಹಾಪುರಾಣಗಳಿಂದಲೂ ಪ್ರಭಾವಿತನಾಗಿರುವುದಕ್ಕೆ ಇಲ್ಲಿ ಕಂಡುಬರುವ ಅನೇಕ ಬದಲಾವಣೆಗಳು ಸಾಕ್ಷಿಯಾಗಿವೆ. ಇದಲ್ಲದೆ ಈತ ತನ್ನ ಗುರು ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿ ಬರೆದ ಗೊಮ್ಮಟಸಾರಕ್ಕೆ ವೀರಮತ್ತಂಡೀ (ವೀರಮಾರ್ತಂಡೀ) ಎಂಬ ದೇಸೀವೃತ್ತಿಯನ್ನೂ (ಬಹುಶಃ ಕನ್ನಡ) ಬರೆದಂತೆ ಹೇಳಲಾಗಿದೆ. ಆದರೆ ಆ ಗ್ರಂಥ ಉಪಲಬ್ಧವಿಲ್ಲ. ಚಾವುಂಡರಾಯನ ಹೆಸರು ಶಾಶ್ವತವಾಗಿ ನಿಂತಿರುವುದು ಆತ ಶ್ರವಣಬೆಳಗೊಳದ ಇಂದ್ರಗಿರಿಯ ಮೇಲೆ ಕೆತ್ತಿಸಿದ ಬಾಹುಬಲಿ ವಿಗ್ರಹದಿಂದ. ಬಾಹುಬಲಿಮೂರ್ತಿಯ ಬಲಭಾಗದ ಪಾದಗಳ ಬಳಿಯ 'ಶ್ರೀ ಚಾಮುಣ್ಡರಾಜಂ ಮಾಡಿಸಿದಂ' ಎನ್ನುವ ಶಾಸನದಿಂದಲೂ ತಮಿಳು ಮತ್ತು ಮರಾಠಿ ಭಾಷೆಯ ಅದೇ ಅರ್ಥದ ವಾಕ್ಯಗಳು ಬರುವುದರಿಂದಲೂ ವಿಗ್ರಹವನ್ನು ಕಡೆದಿದ್ದು ಈತನೇ ಎನ್ನುವುದು ಖಚಿತವಾಗುತ್ತದೆ. ಈ ಮೂರ್ತಿಯ ಸ್ಥಾಪನೆ ಬಹುಶಃ 983ರಲ್ಲಿ ಆಯಿತೆಂದು ಹೇಳಲಾಗಿದೆ. ಬೊಪ್ಪಣಪಂಡಿತನ ಗೊಮ್ಮಟ ಜಿನೇಂದ್ರ ಗುಣಸ್ತವ ಶಾಸನದಲ್ಲಿ ಚಾವುಂಡರಾಯ ಈ ಮೂರ್ತಿಯನ್ನು ಸ್ಥಾಪಿಸಿದ ವಿವರ ಬಂದಿದೆ.

ಭರತ ಪೌದನಪುರದಲ್ಲಿ ಬಾಹುಬಲಿಯ 525 ಬಿಲ್ಲುಗಳಷ್ಟು ಎತ್ತರದ ಮೂರ್ತಿಯನ್ನು ಮಾಡಿ ನಿಲ್ಲಿಸಿದನಷ್ಟೆ. ಆ ಮೂರ್ತಿಯ ಮಹಾತಿಶಯವನ್ನು ಕೇಳಿದ ಚಾವುಂಡರಾಯ ಅದರ ದರ್ಶನ ಪಡೆಯಲು ಹಂಬಲಿಸಿದನಂತೆ. ಆ ಮೂರ್ತಿಯಿದ್ದ ಸ್ಥಳ ದೂರವೂ ದುರ್ಗಮವೂ ಆಗಿದೆಯೆಂದು ಬಲ್ಲವರು ಹೇಳಿದಾಗ ಅಂಥದೇ ಇನ್ನೊಂದು ಮೂರ್ತಿಯನ್ನು ತಾನು ಕಡೆಸುವುದಾಗಿ ನಿಶ್ಚಯಿಸಿ ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹವನ್ನು ಪ್ರತಿಷ್ಠಾಪಿಸಿದನಂತೆ, ಚಾವುಂಡರಾಯನ ಈ ಅಸಾಧಾರಣ ಕಾರ್ಯ ಜನರೂಢಿಯಲ್ಲಿ ಪೌರಾಣಿಕ ಕಲ್ಪನೆಯ ಹಂತವನ್ನು ಮುಟ್ಟುವಷ್ಟು ಪ್ರಭಾವಶಾಲಿಯಾಯಿತು. ಇದರ ಬಗ್ಗೆ ಅನೇಕ ರೀತಿಯ ಕಥೆಗಳು ಬೆಳೆದುಬಂದಿದೆ. ಈ ಪವಾಡಸದೃಶಕಾರ್ಯ ಮಾಡಿದ ಚಾವುಂಡರಾಯನಿಗೆ ರಾಯ ಎಂಬ ಬಿರುದು ಕೊಟ್ಟು ರಾಚಮಲ್ಲ ಗೌರವಿಸಿದ. ಚಾವುಂಡರಾಯನ ಈ ಧಾರ್ಮಿಕ ವ್ಯಕ್ತಿತ್ವದಿಂದಾಗಿಯೇ ಬಹುಶಃ ಇತರರು ಆತನನ್ನು ಅಣ್ಣ ಎಂದು ಸಂಬೋಧಿಸಿರಬೇಕು. ಅಜಿತಸೇನಾಚಾರ್ಯರಲ್ಲಿ ಶಿಷ್ಯವೃತ್ತಿಯಲ್ಲಿದ್ದಾಗ ಕವಿ ರನ್ನ ಈತನ ಸಹಪಾಠಿಯಾಗಿದ್ದಿರಬೇಕು. ಅನಂತರವೂ ಈತ ರನ್ನನಿಗೆ ಸಾಕಷ್ಟು ಸಹಾಯ ಮಾಡಿರಬೇಕು. ಬಹುಶಃ ಆ ಕೃತಜ್ಞತೆಯಿಂದಲೇ ರನ್ನ ತನ್ನ ಮಗನಿಗೆ ರಾಯನೆಂದು ಹೆಸರಿಟ್ಟಂತೆ ತೋರುತ್ತದೆ. ಒಂದನೆಯ ನಾಗವರ್ಮನೂ ಚಾವುಂಡರಾಯನ ಆಶ್ರಯ ಪಡೆದಂತೆ ತನ್ನ ಛಂದೋಂಬುಧಿಯಲ್ಲಿ ಹೇಳಿಕೊಂಡಿದ್ದಾನೆ.

                                                         ಅಂತರ್ಜಾಲ ಸಂಗ್ರಹ

ಕವಿವಾಣಿ


ನೀವು ಮಾತನಾಡುತ್ತೀರಿ.

ಹೌದು!

ನೀವು ಮಾತನಾಡುತ್ತೀರಿ

ಯಾವಾಗಲೂ ಎಲ್ಲರೊಳಗೂ

ಪೂರ್ಣವಿರಾಮದ ಹಂಗುತೊರೆದು

ಪರಂಪರೆ ಜಾಡಿನ ಆಧ್ಯಾತ್ಮ ವನ್ನೇ

ಕಾವ್ಯವಾಗಿ, ಬೊಗಸೆ ತುಂಬ ಕುಡಿದು

ಜಗದ ನಾಡಿ ಮಿಡಿತ ಹೆಚ್ಚಿಸಿದ

ಗಂಭೀರ ಮೌನಿ./೧/

ಎಷ್ಟು ಓಡಾಡಿದಿರಿ; ಕಳೆದೆಲ್ಲಾ ಇರುಳುಗಳಲ್ಲಿ

ಬಕಾಲ, ದಕ್ಲಾದೇವಿ, ಅನಾತ್ಮಗಳನ್ನು

ಗಲ್ಲೇಬಾನಿಯಲ್ಲಿ ಹಿಡಿದು

ಅಮ್ಮನ ಮಾಸಲು ಸೀರೆಯ ಸೆರಗು ಚೀಪುತ್ತಾ

ನಾಲ್ಕಾಣೆ ಬಿಕ್ಷೆಗೆ ಹೋಗಿ

ಆಳದಲ್ಲೆಲ್ಲೊ ಬಿಕ್ಕಳಿಸಿ

ತೆರೆಯಲಾಗದ ತುಟಿ

ಪಾದಗಳ ಬಿಗಿ ಹಿಡಿದು ನೆಲಕ್ಕೆ

ತಾಯಿ ಮುಟ್ಟಲಾಗದ ಅಕ್ಷರವ ಮುಟ್ಟಿ

ಕುಣಿಸಿದ ಗಾರುಡಿಗ

ನೀವು ಮಾತನಾಡುತ್ತಲೇ ಇರುತ್ತೀರಿ./೨/

ನೀವು ಮುಟ್ಟಿದ 'ಅಕ್ಷರ'

ಬಿಡುಗಡೆಯಾಯಿತು

ಸಂಭ್ರಮಿಸಿತು

ಬುಡಬುಡುಕೆ ತಿರುಗಿ

ಡಣ್ ಡಣಕ್ ಡಣ್ ಡಣಕ್

ಡಡಕ್ ಡಡಕ್ ಡಡಕ್

'ಅಕ್ಷರ' ಸದ್ದು

ಲೋಕ ಲೋಕಗಳ ಸುತ್ತಿ ವಿಹರಿಸುತ್ತಿದೆ.

ಕಾಣುವ ಹಾಗೆ, ದಕ್ಕುವ ಹಾಗೆ

ಸಿಗಲೆಂದೇ ನೀಡಬೇಕು.

ನಿಮ್ಮ ಒಡಲಾಳದ ತಳಮಳ

'ದನಿ'ಯಾಗಿ ಬಯಲಿಗೆ ಆತೊರೆದು

ಸಮ್ಮೋಹಗೊಳ್ಳುತ್ತಿದೆ/೩/.

ಬಿಳಿಗಡ್ಡ, ಬಿಳಿಮೀಸೆ ನೆಚ್ಚಿ

ಹುಸಿ ಪೋಷಾಕುಗಳ ಕಿತ್ತೊಗೆದು

ಅಜ್ಜಂದಿರ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ

ಹನಿ ಹನಿಯ ಜೋಡಿಸಿ, ಶೋದಿಸಿ

ಬುದ್ದ ಅಲ್ಲಮರ 'ಆಲಯ'  ಬೀಜಗಳ ಅಂಗೈಯಲ್ಲಿಡಿದು

ಮಿಶ್ರ ಬೆಳೆ ಬಿತ್ತುವ

ಹೊಲದ ಜೋಡೆತ್ತಿನ ಹೆಜ್ಜೆಯಾಗಿ

ಕೂರಿಗೆ ರಾಗದ ಹಣತೆಯಾಗಿ

ನೀವು ಮಾತನಾಡುತ್ತಲೇ ಇರುತ್ತೀರಿ./೪/

ಮೆಟ್ಟು ಬಿಡುವ ಜಾಗದಲ್ಲಿ

ಜಂಗಮವಾದ ನಿಮ್ಮ ದೇಹ

ಮೆಟ್ಟು ಹೊಲೆದು ಹೊಲೆದು

ದಣಿವರಿಯದೆ ಜೋಡಿಸುತ್ತಿದೆ.

ಮುಖ ಮಾತ್ರ ಯಾರಿಗೂ ಕಾಣುತ್ತಿಲ್ಲ

ಬೇಸರ ಬೇಡ ನಿಮಗೆ

ತಟ್ಟಿ ತಟ್ಟಿ ಚಪ್ಪಟೆಯಾದ ಚರ್ಮ

ಕೋಯ್ಸಿಕೊಂಡು ದುಂಡಾದಾಗಲೇ

ಮೆಟ್ಟಾಗುವುದು

ನಿಮ್ಮ ದನಿ ಕೇಳುತ್ತಿದೆ

ನೀವು ಮಾತನಾಡುತ್ತಲೇ ಇರುತ್ತೀರಿ./೫/

ನಿಮ್ಮ ಪದಗಳು ಕೊಲ್ಲುತ್ತಿವೆ

ಇಂಚ್ಛಿಂಚೆ ಎದೆಸೀಳಿ ನೋಡುತ್ತಲೇ

ಕಣ್ಣೆದುರಲ್ಲೇ ಸೋರಿ ಹೋಗುವ ಉಸಿರುಗಳು

ಕೇರಿ, ಏರಿ, ನಗರ, ನಿಲ್ದಾಣಗಳಲ್ಲಿ ನಿಂತು

ನಿಟ್ಟುಸಿರು ಬಿಟ್ಟು ಅನಾತ್ಮನ ದ್ಯಾನಿಸುತ್ತವೆ

ಯಾರಾದರೂ ಬಂದು ಸಂತೈಸುವರೆಂದು,

ತೊಡೆ ಮೇಲೆ ಮಲಗಿಸಿಕೊಂಡು

 ಭುಜತಟ್ಟಿ ಅಪ್ಪಿಕೊಳ್ಳುವರೆಂದು

ಕನಸು ಕಾಣುತ್ತವೆ...

'ನಮಸ್ಕಾರ' ಮಾತ್ರವೇ ಉಳಿದ

ಈ ನೆಲದಲ್ಲಿ ಸ್ಪಶ್ಯ ದಕ್ಕೀತು ಯಾರಿಗೆ/೬/

ದಕ್ಲನ ಪ್ರಾರ್ಥನೆ ನೆರವೆರುತ್ತದೆಯೇ?

ಕೇರಿಯಲ್ಲೆಲ್ಲಾ ಮಾಂಸಖಂಡಗಳು ತುಣುಕುತ್ತವೆಯೇ?

ನೀರೆಲ್ಲಾ ಹೆಂಡವಾಗಿ ಹರಿಯುತ್ತದೆ ಯೇ?

ಹಸಿದ ಜಗದ ಹೊಟ್ಟೆಗಳೆಲ್ಲಾ ಬಿರಿದು

ನಗುಚೆಲ್ಲುತ್ತದೆಯೇ?

ನೀವು ಮಾತನಾಡುತ್ತಲೇ ಇರುತ್ತೀರಿ............... /೭/

       ಡಾ.  ಕೆ.ವಿ.ನೇತ್ರಾವತಿ ಕೋಲಾರ.


ಡಾ ಕೆ ವಿ ನೇತ್ರಾವತಿ ಕೋಲಾರ.

ಪ್ರಕಟಣೆ : ವಾಟ್ಸಪ್ ಸಾಹಿತ್ಯ ಪತ್ರಿಕೆಯ ಮುಖಪುಟಕ್ಕಾಗಿ ತಾವೇ ಸೆರೆ ಹಿಡಿದ ಪ್ರಕೃತಿಯ , ಪ್ರಾಣಿ ಪಕ್ಷಿಗಳ, ಹಾಗೂ ಇತರೆ ಸುಂದರವಾದ, ಭಾವನಾತ್ಮಕವಾದ ಛಾಯಾಚಿತ್ರಗಳನ್ನು ಅಥವಾ ತಾವೇ ರಚಿಸಿರುವ ಚಿತ್ರಗಳನ್ನು ನಮಗೆ ಕಳುಹಿಸಬಹುದು...ಸೂಕ್ತವಾದ ಚಿತ್ರವನ್ನು ಸೂಕ್ತ ಸಮಯದಲ್ಲಿ ನಿಮ್ಮ ಹೆಸರಿನೊಂದಿಗೆ ಪತ್ರಿಕೆಯಲ್ಲ ಪ್ರಕಟಿಸಲಾಗುವುದು...       

ಪತ್ರಿಕೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಲಹೆ ಸೂಚನೆಗಳನ್ನು,ವಿಷಯ ವಿಮರ್ಶೆಯನ್ನು  ಮುಕ್ತವಾಗಿ ನಮಗೆ ಬರೆಯಬಹುದು. ಅದನ್ನು ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ.                                                                                                                 

ಪ್ರಕಟಣೆ : ವಿಚಾರ ಮಂಟಪ ಸಾಹಿತ್ಯ ಪತ್ರಿಕೆ

ಪ್ರಾರಂಭಿಕ ಕವಿ ಲೇಖಕ ವಿಮರ್ಶಕ ರನ್ನು ಪ್ರೂತ್ಸಾಹಿಸುವ ಹಾಗೂ ಮಾರ್ಗದರ್ಶನ ನೀಡುವ ಸದ್ದುದ್ದೇಶದಿಂದ ಆನ್ ಲೈನ್‌ ಪಾಕ್ಷಿಕ ಪತ್ರಿಕೆಯನ್ನು ಪ್ರಾರಂಭಿಸುತ್ತಿದ್ದು, ಕವಿತೆಗಳು, ಚುಟುಕು ಬರಹಗಳು, ನಗೆಹನಿಗಳು, ಲೇಖನಗಳು, ಪ್ರಭಂಧಗಳು, ವಿಮರ್ಶೆ, ಹಾಗೂ ಅನುಭವ ಕಥನಗಳು , ಚಿತ್ರಕಲೆ, ವೈಚಾರಿಕ ಬರಹಗಳು , ಪ್ರಚಲಿತ ಘಟನೆಗಳ ಕುರಿತಾದ ಪ್ರತಿಕ್ರಿಯೆಗಳನ್ನು ಹಾಗೂ ಇನ್ನಿತರೇ ಸೃಜನಾತ್ಮಕ ಬರಹಗಳನ್ನು ದೇಶದ ಯಾವುದೇ ಮೂಲೆಯಿಂದಲಾದರೂ  ಬರೆದು ತಪ್ಪಿಲ್ಲದಂತೆ ಟೈಪಿಸಿ ನಮಗೆ ಕಳುಹಿಸಬಹುದು... ಸಂಪಾದಕ ಮಂಡಳಿಯಿಂದ ಮೆಚ್ಚುಗೆ ಪಡೆದ ಬರಹಗಳನ್ನು   ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ. ಪ್ರತಿ ತಿಂಗಳ  ೫-೧೦ ಮತ್ತು ೨೦-೨೫ ನೇ ದಿನಾಂಕಗಳಲ್ಲಿ ಪತ್ರಿಕೆ ಪಿ ಡಿ ಎಪ್ ರೂಪದಲ್ಲಿ ತಮ್ಮ ಕೈ ಸೇರುವುದು. ನಿಮ್ಮ ಬರಹಗಳು ೧ ಮತ್ತು ೧೫ ನೇ ತಾರೀಕಿನ ಒಳಗೆ ನಮಗೆ ತಲುಪಬೇಕು. ತಮ್ಮ ಬರಹಗಳನ್ನು ಕಡ್ಡಾಯವಾಗಿ ೮೨೧೭೭೪೪೮೮೬ ಈ ನಂಬರಿಗೆ ವಾಟ್ಸಪ್‌ ಮೂಲಕ ಕಳುಹಿಸಿಕೊಡಬೇಕು, ಬೇರೆ ಯಾವುದೇ ನಂಬರಿಗೆ ಕಳುಹಿಸಲಾಗುವ ಬರಹಗಳನ್ನು ಪ್ರಕಟಣೆಗೆ ಪರಿಗಣಿಸಲಾಗುವುದಿಲ್ಲ.

ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಹಾಗೂ ಹೆಚ್ಚಿನ ಮಾಹಿತಿಗೆ ಸಂಪಾದಕರನ್ನು ಸಂಪರ್ಕಿಸಿ :

ವರುಣ್‌ರಾಜ್‌ ಜೀ                                                                                                                                      ಸಂಪಾದಕರು                                                                                                                                                     ವಿಚಾರ ಮಂಟಪ ಸಾಹಿತ್ರ ಪತ್ರಿಕೆ                                                                                                               9448241450. (ವಾಟ್ಸಪ್ ಸಂದೇಶ ಕಳುಹಿಸಿ ತಕ್ಷಣ ಪ್ರತಿಕ್ರಿಯೆ ಪಡೆಯಬಹುದು)

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ – ಕೋಲಾರ

ಬಿತ್ತಿ ಪತ್ರ

ಆತ್ಮೀಯರೆ

ಬನ್ನಿ..ಹಿಂಸೆ ದೌರ್ಜನ್ಯಗಳಿಲ್ಲದ ನೆಮ್ಮದಿಯ ಸಮಾಜವನ್ನು ಕಟ್ಟುವ ಪ್ರಯತ್ನಕ್ಕೆ ಕೈ ಜೋಡಿಸೋಣ.

ಹತ್ರಾಸ್‍ನಲ್ಲಿ ಗುಂಪು ಅತ್ಯಾಚಾರವೆಸಗಿ, ಸಾಕ್ಷಿ ಹೇಳದಂತೆ ಸಂತ್ರಸ್ತಳ ನಾಲಿಗೆ ಕತ್ತರಿಸಲಾಯಿತು.

ಕೋಲಾರ ಜಿಲ್ಲೆ ಬೇತಮಂಗಲ ತಾಲೂಕಿನಲ್ಲಿ  ಬಾಲಕಿಯ ಮೇಲೆ ಯುವಕರು ಗುಂಪು ಅತ್ಯಾಚಾರವೆಸಗಿದ್ದಾರೆ. 

ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅವಳ ಶ್ವಾಸಕೋಶವನ್ನು ಬಗೆದು ಕೊಲೆ ಮಾಡಲಾಗಿದೆ. ಇದೇ ರಾಜ್ಯದ ಫತೇಪುರ ಜಿಲ್ಲೆಯಲ್ಲಿ ಇಬ್ಬರು ದಲಿತ ಸೋದರಿಯರ ಹತ್ಯೆ ಮಾಡಲಾಗಿದೆ.

ಬಿಹಾರದಲ್ಲಿ ಮಹಿಳೆಯೊಬ್ಬರನ್ನು ಬಹಿರಂಗವಾಗಿ ಸಜೀವ ದಹನ ಮಾಡಲಾಗಿದೆ. 

ಹೀಗೆ ಹಸುಳೆ-ವೃದ್ಧೆ, ಅಕ್ಷರಸ್ಥೆ-ಅನಕ್ಷರಸ್ಥೆ, ಉದ್ಯೋಗಸ್ಥೆ-ಗೃಹಿಣಿ ಮುಂತಾದ ಭೇದಗಳಿಲ್ಲದೆ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಲೇ ಇವೆ. ಇವುಗಳಲ್ಲಿ ಅತಿ ಹೆಚ್ಚಿನ ದೌರ್ಜನ್ಯಕ್ಕೆ ದಲಿತ ಮಹಿಳೆಯರು ಒಳಗಾಗುತ್ತಿದ್ದಾರೆ. ದಲಿತ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆಂದೋ, ಹೊಸದೊಂದು ಮನೆ ಕಟ್ಟಿಸಿಕೊಂಡರೆಂದೋ, ಉತ್ತಮ ಬಟ್ಟೆ ಹಾಕಿಕೊಂಡರೆಂದೋ, ಚುನಾವಣೆಯಲ್ಲಿ ಗೆದ್ದರೆಂದೊ ಮಟ್ಟ ಹಾಕುವ ಸಲುವಾಗಿ ಅವರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ.

ನ್ಯಾಷನಲ್ ಕ್ರೈಮ್ ರೆಕಾಡ್೯ ಬ್ಯೂರೋ ಪ್ರಕಾರ 2019 ರ ವರ್ಷದಲ್ಲಿ ಮಹಿಳೆಯರ ಮೇಲೆ 4,05,861 ರಷ್ಟು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ದಾಖಲಾಗದೆ ಉಳಿದ ಪ್ರಕರಣಗಳೆಷ್ಟೋ?ಪ್ರತಿ ದಿನ 87 ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. ದಲಿತ ಮಹಿಳೆ ಎನ್ನುವ ಕಾರಣಕ್ಕಾಗಿಯೇ ಪ್ರತಿದಿನ 8 ದಲಿತ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಇಂತಹ ದೌರ್ಜನ್ಯ ಎಸಗುತ್ತಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮುಂದಿದೆ.ಮಹಿಳೆ ಮೇಲೆ ನಡೆಯುವ ದೌರ್ಜನ್ಯಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ  ಶೇ 7.3 ರಷ್ಟು ಹೆಚ್ಚಾಗಿದೆ...ಇದೆಲ್ಲಾ ಏನನ್ನು ಹೇಳುತ್ತದೆ????

ಸಹ ಜೀವಿಯಾಗಿ, ಸಹಪಯಣಿಗಳಾಗಿ ತನ್ನ ದುಡಿಮೆ ಮತ್ತು ಅರಿವಿನ ಮೂಲಕ ಅಪಾರವಾದ ಕೊಡುಗೆಯನ್ನು ನೀಡಿ ಸಮಾಜವನ್ನು ಪೋಷಿಸುತ್ತಿರುವ ಹೆಣ್ಣಿನ ಮೇಲೆ ದೌರ್ಜನ್ಯಗಳು ನಿತ್ಯವೂ ನಡೆಯುತ್ತಿವೆ. ಯಾವುದೇ ಅಪರಾಧದಲ್ಲಿ ಆರೋಪಿ ಶಿಕ್ಷೆ/ಪಶ್ಚಾತಾಪಕ್ಕೆ ಒಳಪಡುವುದು ನ್ಯಾಯಸಮ್ಮತ. ಆದರೆ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಸಂದರ್ಭದಲ್ಲಿ ಆರೋಪಿಗಿಂತ ಸಂತ್ರಸ್ತೆಯೇ ಶಿಕ್ಷೆಗೆ ಒಳಪಡುವಂತಹ ಊಹಾತೀತ, ದುರ್ಬರ ಪರಿಸ್ಥಿತಿಯು ನಮ್ಮ ಸಮಾಜದಲ್ಲಿದೆ. ದೌರ್ಜನ್ಯಕ್ಕೆ ಈಡಾಗುವುದರ ಜೊತೆಗೆ ದೌರ್ಜನ್ಯ ಎಸಗುವುದಕ್ಕೆ ಮಹಿಳೆಯರೇ ಕಾರಣರೆಂದು ಕಲ್ಪಿಸುವ ಹಲವಾರು ಮಿಥ್ಯೆಗಳು ಕೂಡ ನಮ್ಮ ಸಮಾಜದಲ್ಲಿ ಕಾನೂನಿಗಿಂತ ಪ್ರಬಲವಾಗಿ ಜಾರಿಯಲ್ಲಿವೆ. ‘ಅವಳು ಉಡುಪು ಸರಿಯಾಗಿ ಧರಿಸಿರಲಿಲ್ಲ, ಅವಳ ನಡತೆ ಸರಿ ಇಲ್ಲ, ಅವಳ್ಯಾಕೆ ಅಷ್ಟು ಹೊತ್ತಿನಲ್ಲಿ ಒಬ್ಬಳೇ ಓಡಾಡಬೇಕು’ ಎಂಬ ಮಾತುಗಳು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ಸಂದರ್ಭಗಳಲ್ಲಿ ಹರಿದಾಡುತ್ತವೆ.

ಸಂತ್ರಸ್ತೆಯ ನಾಲಿಗೆ ಕತ್ತರಿಸುವುದು, ಮೊಲೆಗಳನ್ನು ಕತ್ತರಿಸುವುದು, ಯೋನಿ ಹರಿಯುವುದು, ಶ್ವಾಸಕೋಶ ಬಗೆಯುವುದು, ಜೀವಂತ ಸುಟ್ಟು ಹಾಕುವುದು... ಹೀಗೆ ಗಂಡಿನ ಸ್ವೇಚ್ಛೆಗೆ ಹೆಣ್ಣು ಬಂಧಿಯಾಗಬೇಕು ಇಲ್ಲವೇ ಬಲಿಯಾಗಬೇಕು. ಅವಳ ಪರಿಸ್ಥಿತಿ  ಯಾಕೆ ಹೀಗೆ?

ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಮತ್ತು ದೌರ್ಜನ್ಯಗಳಿಗೆ ಅವಳು ದ್ವಿತೀಯ ದರ್ಜೆಯವಳು, ಕಾಮದ ಗೊಂಬೆ, ಕೀಳು ಎಂಬ ಭಾವನೆಗಳ ಜೊತೆಗೆ ಅವಳ ಪರವಾಗಿ ದನಿ ಎತ್ತುವವರು ಯಾರು ಇಲ್ಲ ಎಂಬ ನಿಲುವುಗಳು  ಕಾರಣವಾಗಿವೆ. ದುಡಿಯುವ, ಬಳಸುವ ಮತ್ತು ಭೋಗಿಸುವ ದೇಹವಾಗಷ್ಟೇ ಸಾಮಾಜಿಕರು ಹೆಣ್ಣನ್ನು ಪರಿಗಣಿಸಿರುವುದೂ ಕಾರಣವಾಗಿದೆ. ಹಾಗಾಗಿಯೇ ಹೆಣ್ಣು - ಬೇಲಿ ಹಾಕಬೇಕಾದ ಆಸ್ತಿ, ಕಾವಲಿಟ್ಟು ಕಾಯಬೇಕಾದ ಸಂಪತ್ತು, ವಶಪಡಿಸಿಕೊಳ್ಳಬೇಕಾದ ಚಂಚಲೆ, ಗೆಲ್ಲಬೇಕಾದ ಮಾಯೆ ಎನಿಸಿದ್ದಾಳೆ. ದೇಹ-ಮನಸ್ಸು-ಆತ್ಮಗಳಿರುವ ಸಹಜ ಮನುಷ್ಯಳಾಗಿಲ್ಲ. ಗಂಡಸು ಸಹ ಸಹಜಜೀವಿಯಾಗದೆ ಮಾಲಿಕ, ಕಾವಲುಗಾರ, ಆಕ್ರಮಣಕಾರನಾಗಿ ರೂಪಾಂತರಗೊಂಡಿದ್ದಾನೆ;  ದಮನ ಮಾಡಿಯೇ ತನ್ನ ಅಸ್ತಿತ್ವವನ್ನು ಆತ ಸಾಬೀತು ಪಡಿಸಿಕೊಳ್ಳಬೇಕಾದ ವ್ಯಕ್ತಿಯಾಗಿದ್ದಾನೆ. ಇದರ ಮೂಲವಿರುವುದು ಮನುಷ್ಯ ಕುಲವನ್ನು ಒಡೆದು ಹಾಕಿರುವ, ಸಮಾಜದಲ್ಲಿ ಬಲವಾಗಿ ಬೇರುಬಿಟ್ಟಿರುವ ಲಿಂಗ, ಜಾತಿ, ಮತ, ಧರ್ಮ ಇತ್ಯಾದಿ ತಾರತಮ್ಯಗಳು. ಈ ಒಡಕನ್ನೇ ಬಳಸಿಕೊಂಡು ಹಸಿವು, ನಿಟ್ಟುಸಿರು, ರಟ್ಟೆಬಲ ಎಲ್ಲವನೂ ಮಾರಾಟದ ಸರಕಾಗಿಸಿ ಲಾಭ ದೋಚುವ ಮಾರುಕಟ್ಟೆ ಆರ್ಥಿಕತೆಯು ಮನುಷ್ಯರನ್ನು ಸಹಜ ಜೀವಿಗಳಾಗಿ ಬದುಕಲು ಬಿಟ್ಟಿಲ್ಲ. ಲಾಭಾಧಾರಿತ ಮಾರುಕಟ್ಟೆ ವಿದ್ಯಮಾನಗಳೇ ಕೇಂದ್ರವಾಗಿರುವ ಶಿಕ್ಷಣ ವ್ಯವಸ್ಥೆ; ಹಿಂಸೆ ಮತ್ತು ಕ್ರೌರ್ಯವನ್ನೇ ವಿಜೃಂಭಿಸಿ ಟಿಆರ್‍ಪಿ ರೇಟ್ ಹೆಚ್ಚಿಸಿಕೊಳ್ಳುವ ಮಾಧ್ಯಮ ಉದ್ದಿಮೆಗಳು ಈ ಕೇಡನ್ನು ಉದ್ದೀಪಿಸಿವೆ. ಲಾಭಕೋರ ಆರ್ಥಿಕತೆ, ಅಸಮಾನತೆ, ತಾರತಮ್ಯಗಳನ್ನೇ ತಳಪಾಯವಾಗಿಸಿಕೊಂಡಿರುವ ಸಮಾಜ ಮನುಷ್ಯರನ್ನು ಲಾಭದ ಸರಕುಗಳಾಗಿಯೂ, ಸರಕುಗಳ ಮಾಲಿಕರಾಗಿಯೂ ಮಾಡಿದೆ. ಇದು ಬದಲಾಗದೆ ಸ್ವಸ್ಥ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ.

ಸಹಜ ಜೀವಿಗಳಾಗಿ ಮತ್ತು ಸಹ ಜೀವಿಗಳಾಗಿ ಬದುಕುವಂತಹ ಸ್ವಸ್ಥ ಸಮಾಜವನ್ನು ಕಟ್ಟಲು ಸರ್ವರಿಗೂ ಸಮಾನತೆ, ಸಮಪಾಲು ಮತ್ತು ಸಮಬಾಳನ್ನು ಖಾತ್ರಿಪಡಿಸುವ ಸಂವಿಧಾನದ ಆಶಯಗಳನ್ನು ಬಿತ್ತಿ ಬೆಳಸುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಹೆಣ್ಣಿನ ಮೇಲಾಗುತ್ತಿರುವ ಅತ್ಯಾಚಾರ, ದೌರ್ಜನ್ಯಗಳನ್ನು ತಡೆಯುವ ಪ್ರಯತ್ನಗಳನ್ನು ನಾವೆಲ್ಲ ಮಾಡುವ ಜರೂರಿದೆ. ಸಂತ್ರಸ್ತೆಗೆ ಸ್ಥೈರ್ಯ ತುಂಬುವುದರ ಜೊತೆಗೆ ನ್ಯಾಯಕ್ಕಾಗಿ ಅವರು ನಡೆಸುವ ಹೋರಾಟದಲ್ಲಿ ಕೈ ಜೋಡಿಸಬೇಕಾಗಿದೆ. 

      ಇಂತಹ ಕೆಲಸವನ್ನು ಮಥುರಾದ ಅತ್ಯಾಚಾರ ಪ್ರಕರಣದಿಂದ ಹಿಡಿದು ಮಹಿಳೆಯರ ಘನತೆಯನ್ನು ಎತ್ತಿ ಹಿಡಿದ ನ್ಯಾಯಮೂರ್ತಿ ವರ್ಮಾ ಸಮಿತಿ ವರದಿಯವರೆಗೂ, ನಂತರವೂ ಮಹಿಳಾ ಚಳುವಳಿ ಸತತವಾಗಿ ಮಾಡುತ್ತಲೇ ಬಂದಿದೆ. ಸಮಾನಮನಸ್ಕ ಪುರುಷರು ನಿರಂತರವಾಗಿ ಇಂಥ ಹೋರಾಟವನ್ನು ಬೆಂಬಲಿಸಿಕೊಂಡು ಬರುತ್ತಿದ್ದಾರೆ. ಈ ಹೋರಾಟಕ್ಕೆ ಕೈ ಜೋಡಿಸೋಣ. 

ಪ್ರೀತಿ, ಕರುಣೆ ಬೆಳಗಲಿ; ದ್ವೇಷ ಹಿಂಸೆ ಅಳಿಯಲಿ.

ಅಸಮಾನತೆ, ತಾರತಮ್ಯ ಕೊನೆಯಾಗಲಿ. ಮೈತ್ರಿ, ಸಮತೆ ಅರಳಲಿ.

ಗಂಡಿನ ಅಹಂ ಅನ್ನು ತೊಲಗಿಸುವ, ಹೆಣ್ಣಿನ ಕೀಳರಿಮೆಯನ್ನು ಅಳಿಸುವ ಅರಿವು ಎಲ್ಲರಿಗೂ ಸಿಗಲಿ.

ಸತ್ಯದ ನಾಲಿಗೆಯನ್ನೆಂದೂ ಕತ್ತರಿಸಲಾಗದು,

ನಿರ್ಭಯದ ಬೆನ್ನೆಲುಬನ್ನೆಂದೂ ಮುರಿಯಲಾಗದು,

ಘನತೆ-ಸಮತೆಯ ಬದುಕೇ ಗುರಿ.

ಅಹಿಂಸೆಯೇ ದಾರಿ, ಪ್ರೀತಿಯೇ ದಾರಿ ದೀಪ !             

ನಿಮಗೆ ದೌರ್ಜನ್ಯವಾಗಿದ್ದರೆ ಸರ್ಕಾರದ 1091 ಹಾಗೂ 181 ಮಹಿಳಾ ಸಹಾಯವಾಣಿಗೆ ಕರೆ ಮಾಡಿ..ಹಾಗೆಯೇ ನಮ್ಮ ಒಕ್ಕೂಟದ ಗೆಳತಿಯರಿಗೂ ಕರೆ ಮಾಡಿ ಸಹಾಯ/ ಸಲಹೆ ಕೇಳಬಹುದು.                     

 ಶಾಂತಮ್ಮ- 9448249371.                     

 ಗೀತ- 9448446659.                   

  ಗೌರಮ್ಮ- 9880852772,

  ಪಾಪಮ್ಮ- 9880020039


ಓದುಗ ಮಹಾಶಯರಿಗೆ ಅನಂತ ಧನ್ಯವಾದಗಳು

           ಮುಕ್ತಾಯ

         ಮುಕ್ತಾಯ

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...