ಶುಕ್ರವಾರ, ಜುಲೈ 9, 2021

ಮಹಾಭಾರತ ಮತ್ತು ಸ್ತ್ರೀ-ವಾದ : ಒಂದು ವಿಶ್ಲೇಷಣೆ (ಲೇಖನ) - ಡಾ. ಯಲ್ಲಮ್ಮ. ಕೆ.

  ಮಹಾಭಾರತ ಮತ್ತು ಸ್ತ್ರೀ-ವಾದ  : ಒಂದು ವಿಶ್ಲೇಷಣೆ.

ವಿಸ್ತೃತ ಓದು ಅಥವ ಆಳವಾದ ಅಧ್ಯಯನವೆಂದರೆ..? ‘ವರ್ತಮಾನದಿಂದ ಭೂತದೆಡೆಗಿನ ಪಯಣವಾಗಿರುತ್ತದೆ’. ಓದಿಗೆ ಯಾವುದೇ ವಸ್ತು-ವಿಷಯವನ್ನು ಆಯ್ದುಕೊಂಡಾಗ ವೇದೋಪನಿಷತ್ತು, ಪುರಾಣದ-ಪುಣ್ಯಕಥೆಗಳು, ರಾಮಾಯಣ ಮತ್ತು ಮಹಾಭಾರತದಂಥ ಮಹಾ ಕಾವ್ಯಗಳನ್ನು ಮೂಲ ಆಧಾರಗಳಾಗಿ ಪರಿಗಣಿಸಲ್ಪಡುತ್ತವೆ. ಈ ನೆಲದ ಭಾಷೆ ಮತ್ತು ಭಾಷಾ ಸಾಹಿತ್ಯ ಸಂದರ್ಭಕ್ಕೆ ಬಂದರೆ.., ಅಧ್ಯಯನದ ಅನುಕೂಲಕ್ಕಾಗಿ ಭಾಷಾ ಚರಿತ್ರೆಯನ್ನು ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡ ಮತ್ತು ನವಗನ್ನಡ ಕಾಲವೆಂದು ಸ್ಥೂಲವಾಗಿ ವರ್ಗೀಕರಿಸಲಾಗಿದೆ. 

ಪೂರ್ವದ ಹಳಗನ್ನಡ ಮತ್ತು ಹಳಗನ್ನಡ ಕಾಲಘಟ್ಟದಲ್ಲಿ ಚಂಪೂ ಸಾಹಿತ್ಯ ಪ್ರಕಾರಗಳನ್ನು, ನಡುಗನ್ನಡದ ಸಂದರ್ಭದಲ್ಲಿ ವಚನ, ರಗಳೆ, ಷಟ್ಪದಿ, ಕೀರ್ತನೆ, ಸುಳಾದಿ, ಸಾಂಗತ್ಯ, ಶತಕ ಹಾಗೂ ತ್ರಿಪದಿಗಳನ್ನು, ಹೊಸಗನ್ನಡ ಮತ್ತು ನವಗನ್ನಡ ಕಾಲದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ತದನಂತರದಲ್ಲಿ ಅಂದರೆ ತೊಂಬತ್ತರ ದಶಕದಲ್ಲಿ ಸ್ತ್ರೀ-ವಾದ ದ ಹುಟ್ಟನ್ನು ಗುರುತಿಸಲಾಗಿದೆ. 

ಸ್ತ್ರೀ-ವಾದ ಎಂಬ ಪರಿಕಲ್ಪನೆಯ ಹುಟ್ಟು-ಬೆಳವಣಿಗೆ, ಪ್ರೇರಣೆ ಮತ್ತು ಪ್ರಭಾವ ಪಾಶ್ಚಾತ್ಯರಿಂದಲೇ ಪಡೆದುದಾಗಿ ನಂಬಿಸಿಕೊಂಡು ಬರಲಾಗಿದೆ. ಎಲ್ಲ ಜೀವಿಗಳಲ್ಲಿಯೂ ಈ ಪ್ರತಿರೋಧ ಎಂಬುದು ಹುಟ್ಟು ಗುಣವಾಗಿದೆ. ಚಾಲ್ರ್ಸ್ ಡಾರ್ವಿನ್‍ನ ವಿಕಾಸವಾದವನ್ನು ನೋಡಿದಾಗ ‘ಉಳಿವಿಗಾಗಿ ಹೋರಾಟ ನಡೆಸಿದ ಪ್ರಬಲ ಜೀವಿಗಳು ಉಳಿದುಕೊಂಡಿವೆ ಅಬಲ ಎನಿಸಿದವುಗಳು ಕಾಲಗರ್ಭದಲ್ಲಿ ನಶಿಸಿಹೋಗಿವೆ’ ಅಂತೆಯೇ ಪ್ರಾಚೀನ ಕಾಲದಿಂದಲೂ ಹೆಣ್ಣು ತೋರುತ್ತ ಬಂದಿರುವ ಪ್ರತಿರೋಧವನ್ನು ಪುರುಷ ಪ್ರಧಾನ ಸಮಾಜವು ಹತ್ತಿಕ್ಕಿಕೊಂಡೇ ಬಂದಿದೆ. ‘ಸಮಾಜ. ಉದ್ಯೋಗ ಮತ್ತು ಕೌಟುಂಬಿಕ ವ್ಯವಸ್ಥೆಗಳಲ್ಲಿ ಮಹಿಳೆಯರ ತುಳಿತ ಹಾಗೂ ಶೋಷಣೆಯ ಬಗ್ಗೆ ಅರಿವು ಮೂಡಿಸಿ, ಈ ಪರಿಸ್ಥಿತಿಯನ್ನು ಸುಧಾರಿಸಲು ಪುರುಷರು ಮತ್ತು ಸ್ತ್ರೀಯರು ಸೇರಿ ನಡೆಸುವ ಪ್ರಜ್ಞಾ ಪೂರ್ವಕ ಪ್ರಯತ್ನವನ್ನು ಸ್ತ್ರೀವಾದ’ ಎಂದು ಸ್ತ್ರೀವಾದಿ ನೆಲೆಯನ್ನು ವ್ಯಾಖ್ಯಾನಿಸುವುದರೊಂದಿಗೆ ಎಂಬತ್ತರ ದಶಕದಲ್ಲಿ ಈ ಚಿಂತನೆಯು ಮತ್ತಷ್ಟು ಪ್ರಖರವಾಯಿತು. 

ದಲಿತ ಬಂಡಾಯದ ಜೊತೆ-ಜೊತೆಗೆ ಸಾಗಿದ ಮತ್ತೊಂದು ಚಳುವಳಿ ಎಂದರೆ..? ಸ್ತ್ರೀಯರ ಜಾಗೃತ ಪ್ರಜ್ಞೆಯ ಮತ್ತು ಗಂಭೀರ ಚಿಂತನೆಗಳನ್ನು ಒಳಗೊಂಡ ಸ್ತ್ರೀವಾದಿ ಚಳುವಳಿಯು 1975 ರ ಅಂತರ್ ರಾಷ್ಟ್ರಿಯ ಮಹಿಳಾ ವರ್ಷದಿಂದ ಪ್ರಾರಂಭಗೊಂಡಿತು. ಈ ಹಿನ್ನಲೆಯಲ್ಲಿ ಕನ್ನಡ ಸಾರಸ್ವತ ಲೋಕದಲ್ಲಿ ಅನೇಕ ಸಾಹಿತಿಗಳು ಸ್ತ್ರೀವಾದಕ್ಕೆ ತೆರೆದುಕೊಳ್ಳತೊಡಗಿದರು. 

ವೀಣಾಶಾಂತೇಶ್ವರ ಮತ್ತು ರಾಜಲಕ್ಷ್ಮೀ.ಎನ್.ರಾವ್ ತಮ್ಮ ಕಥೆಗಳಲ್ಲಿ, ಸ.ಉಷಾ, ಚ.ಸರ್ವಮಂಗಳ, ಶಶಿಕಲಾ ವಸ್ತ್ರದ, ಜಯಭಾಗ್ಯಸುದರ್ಶನ, ಎನ್.ವಿ.ಭಾಗ್ಯಲಕ್ಷ್ಮೀ, ಶೈಲಜಾ ಉಡಚಣ, ಎಚ್.ಎಲ್.ಪುಷ್ಪ, ಸರಸ್ವತಿಗೌಡ ಮುಂತಾದ ಕವಯಿತ್ರಿಯರು ತಮ್ಮ ವ್ಯಕ್ತಿ ವೈಶಿಷ್ಟ್ಯತೆಯನ್ನು ಕಾವ್ಯದಲ್ಲಿ ಅತ್ಯಂತ ಶಕ್ತಿಯುತವಾಗಿ ಅಭಿವ್ಯಕ್ತಪಡಿಸಿದ್ದಾರೆ. ಮುಂದುವರೆದು ಸ.ಉಷಾ ರವರು ತಮ್ಮ ‘ತೊಗಲು ಗೊಂಬೆಯ’ (1973) ಆತ್ಮಕಥೆ, ವಿಜಯಾ ದಬ್ಬೆರವರ ‘ಇರುತ್ತದೆ’ (1975) ಆತ್ಮಕಥೆಗಳ ಮೂಲಕ ಸಂಚಲನ ಮೂಡಿಸಿದ್ದಾರೆ. ಪ್ರಸ್ತುತ ಪ್ರತಿಭಾ ನಂದಕುಮಾರ, ಹೇಮಾ ಪಟ್ಟಣಶೆಟ್ಟಿ, ಮಾಲತಿ, ಮಮತಾ ಜಿ.ಸಾಗರ, ಸವಿತಾ ನಾಗಭೂಷಣ, ಎಚ್.ಎಸ್,ಮುಕ್ತಾಯಕ್ಕ, ಆರ್.ಸುನಂದಮ್ಮ, ಮೊದಲಾದವರು ಸ್ತ್ರೀವಾದಿ ಹಿನ್ನಲೆಯಲ್ಲಿ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 

ಮಹಾಭಾರತ ಮತ್ತು ಸ್ತ್ರೀ-ವಾದ :
 
ಸ್ತ್ರೀ-ವಾದವು ತ್ತೊಂಬತ್ತರ ದಶಕದಲ್ಲಿ ಪಾಶ್ಚಾತ್ಯರ ಪ್ರೇರಣೆ-ಪ್ರಭಾವಕ್ಕೆ ಸಿಲುಕಿ ಹೆಚ್ಚು ಪ್ರಚುರತೆಯನ್ನು ಪಡೆದಿರಬಹುದೇ ಹೊರತು ಅದರ ಮೂಲವನ್ನು ಹುಡುಕಿದರೆ.., ಅದು ನಮ್ಮದೇ ಎಂಬುದಕ್ಕೆ ಹಲವಾರು ನಿದರ್ಶನಗಳನ್ನು ಕೊಡಬಹುದು. ಮಹಾಭಾರತವನ್ನು ಒಂದು ಕಥಾನಕ ಎಂದು ಪರಿಭಾವಿಸುವುದಾದರೆ.., ಅಲ್ಲಿಯ ಕಥಾನಕವು ಕಳೆಗಟ್ಟುವ ನಿಟ್ಟಿನಲ್ಲಿ ಕವಿಭಾವವು ಕಟ್ಟಿಕೊಟ್ಟ ಕಥಾಸಂವಿಧಾನವು ಎಲ್ಲರಿಗೂ ಒಪ್ಪಿತವಾಗುವ ಸಂಗತಿ. ಅದೊಂದು ನೈಜ ಘಟನೆಯೆಂದು ; ಧರ್ಮಾಧರ್ಮ-ಕರ್ಮಗಳ ನೆಲೆಗಳಲ್ಲಿ ನೋಡುವುದಾದರೆ.., ಇಲ್ಲಿ ಹೆಣ್ಣು-ಗಂಡೆಂಬ ತರತಮವನ್ನು ಗುರುತಿಸಬಹುದಾಗಿದೆ. ಈ ಹಿನ್ನಲೆಯಲ್ಲಿ ಮಹಾಭಾರತದ ಸ್ತ್ರೀ-ಪಾತ್ರಗಳನ್ನು ಒಂದೊಂದಾಗಿ ವಿಶ್ಲೇಷಿಸಬಹುದಾಗಿದೆ. 

ಮಹಾಭಾರತದ ಬಹುಮುಖ್ಯ ಸ್ತ್ರೀ-ಪಾತ್ರಗಳು : 
ಮತ್ಸ್ಯಗಂಧಿ, ಅಂಬೆ ಮತ್ತು ಅಂಬಾಲಿಕೆ, ಅಂಬಿಕಾ, ಗಂಗಾಮಾತೆ, ಕುಂತಿ, ಮಾದ್ರಿ, ದ್ರೌಪದಿ, ಸುಭದ್ರೆ, ಚಿತ್ರಾಂಗದೆ, ಊಲುಚಿ, ಹಿಡಂಬಿ, ಉತ್ತರೆ, ಪ್ರಮಿಳ, ಗಾಂಧಾರಿ, ಭಾನುಮತಿ, ದುಶ್ಯೀಲೆ, ದಮ ಯಂತಿ, ದೇವಕಿ, ರೋಹಿಣಿ, ಶಕುಂತಲೆ, ಶಿಖಂಡಿ, ಶುಭಾಂಗಿ, ಸತ್ಯವತಿ, ಸತ್ಯಭಾಮೆ, ಸಾವಿತ್ರಿ, ರುಕ್ಮೀಣಿ ಇತರ.., 
ಸ್ವಯಂವರ : ಪ್ರಾಚೀನ ಕಾಲದಲ್ಲಿ ರಾಜವಂಶಸ್ಥರಲ್ಲಿ ರಾಜನಾದವನು ತನ್ನ ಬೆಳೆದ ಮಗಳು, ಯುವರಾಣಿ ಮದುವೆ ಸಂದರ್ಭದಿ ಸ್ವಯಂವರವನ್ನು ಏರ್ಪಡಿಸಿ ಪಂದ್ಯವನ್ನು ನೀಡಿ ಅದರಲ್ಲಿ ಗೆದ್ದವರು ಕನ್ಯೆಯನ್ನು ವರಿಸಬಹುದು ಅಥವ ರಾಜಮಹಾರಾಜರ - ವರರ ಸಮಾವೇಶ ನಡೆಸಿ ತನಗೆ ಇಷ್ಟ ಬಂದವರ ಕೊರಳಿಗೆ ಹಾರವನ್ನು ಹಾಕಿ ವರಿಸುವುದು. ಈ ಎರಡು ಮಾದರಿಯಲ್ಲಿ ಹೆಣ್ಣಿಗೆ ಆಯ್ಕೆ ಎಲ್ಲಿತ್ತು..? ಎಂಬುದು ಪ್ರಶ್ನೆ. ಗೆದ್ದವರಿಗೆ ನೀಡುವ ಬೆಲೆಬಾಳುವ ಬಹುಮಾನದ ವಸ್ತುವಾಗಿಬಿಟ್ಟಳು. ಅವಳ ಆತ್ಮಸಮ್ಮಾನಕ್ಕೆ ನೆಲೆ-ಬೆಲೆ ಎಲ್ಲಿ..? 
ಮತ್ಸ್ಯಗಂಧಿ : ಉಪರಿಚರ ವಸುವಿನ ಮಗಳು, ಈತನ ವೀರ್ಯವನ್ನು ನುಂಗಿದ ಮೀನಿನ ಹೊಟ್ಟೆಯಲ್ಲಿ ಹುಟ್ಟಿದವಳು. ಮತ್ಸ್ಯಗಂಧಿ, ಗಂಧವತಿ, ಯೋಜನಾಗಂಧಿ, ಕಾಳಿ ಎಂಬ ಹೆಸರುಗಳಿದ್ದು ಪೂರ್ವ ಜನ್ಮದಲ್ಲಿ ಗಂಧರ್ವ ಕನ್ಯೆಯಾಗಿದ್ದು ಅಚ್ಛೋದೆ ಎಂಬ ಹೆಸರಿತ್ತು. ಮೀನಿನ ವಾಸನೆಯುಳ್ಳ ಈಕೆ ಪರಾಶರ ಮುನಿಗಳ ಅನುಗ್ರಹದಿಂದ ಗಂಧವತಿ ; ಯೋಜನಾಗಂಧಿ ಎನಿಸಿ ; ವೇದ ವ್ಯಾಸ ಮುನಿಯು ಈಕೆಯ ಗರ್ಭದಲ್ಲಿ ಯಮುನಾ ನದಿಯ ನಡುಗಡ್ಡೆಯಲ್ಲಿ ಜನಿಸಿದನು. ಪರಾಶರ ಮುನಿಗಳು ಈಕೆಯ ಕನ್ಯಾಧರ್ಮವು ಲೋಪ-ವಾಗದಂತೆ ವರವಿತ್ತನು. ನಿಜಕ್ಕೂ ಅದು ಎಂಥ ವರವಾಗಿತ್ತು ಎನ್ನುವುದು ಪ್ರಶ್ನೆ..? ಈ ಮುನಿಗಳಿಗೆ ಹೆಣ್ಣನ್ನು ಬೇಕಾದಾಗ ಬೇಕಾದಂತೆ ಅನುಭವಿಸಿ ; ಮತ್ತೆ ವರವಿತ್ತು ಕನ್ಯಾಧರ್ಮ ಕಾಪಾಡಿದ್ದು ಅಚ್ಚರಿಯ ಸಂಗತಿ. ಕಲಿಯುಗದಲ್ಲಿ ಈ ರೀತಿಯಾದ ವರನೀಡುವ ಮುನಿವರ್ಯರಿದ್ದೂ ; ವರ ಪಡೆದ ಹೆಣ್ಣನ್ನು ಕನ್ಯೆವಎಂದು ಮನ್ನಿಸಿ ಮದುವೆಯಾಗಲು ಯಾರು ಮುಂದೆ ಬರುತ್ತಾರೆ..? ಎನ್ನುವುದು ಯಕ್ಷಪ್ರಶ್ನೆಯಾಗಿ ಉಳಿದುಬಿಡುತ್ತದೆ. 

ಈಕೆಯನ್ನು ಶಂತನು ಮಹಾರಾಜ ಷರತ್ತುಬದ್ಧವಾಗಿ ಮಗ ಭೀಷ್ಮಾಚಾರ್ಯನ ಉಪಸ್ಥಿತಿಯಲ್ಲಿ ಮದುವೆ ಯಾಗುತ್ತಾನೆ. ಇಲ್ಲಿ ಮುಖ್ಯವಾಗಿ ಆಕೆಯ ವಿಧಿಸಿದ ಷರತ್ತನ್ನು ಗಮನಿಸಬೇಕು : ತನಗೆ ಹುಟ್ಟುವ ಮಗನೇ ಮುಂದೆ ಯುವರಾಜನಾಗಬೇಕು ಎಂಬುದು..! ಕಾಮಿ-ಮೋಹಿಯಾದ ಶಂತನು ಮಹಾರಾಜ ಎಲ್ಲಕ್ಕೂ ಒಪ್ಪುತ್ತಾನೆ. ಮುಂದೆ ತಮಗೆ ಹುಟ್ಟಲಿರುವ ಮಗನ ಶ್ರೇಯಸ್ಸನ್ನು ಬಯಸಿದ ಸತ್ಯವತಿಯ ನಡೆಯು ಆದರ್ಶ ವ್ಯಕ್ತಿತ್ವ ಎನಿಸುವುದಿಲ್ಲ ಏಕೆ..? ತಂದೆಯಾಗುವವನಿಗೆ ಆ ಬಗ್ಗೆ ಕಿಂಚಿತ್ತಾದರೂ ಲಕ್ಷ್ಯವಿತ್ತೇ..? ತನ್ನ ಚಪಲ ತೀರಿದರೆ ಸಾಕು ಎಂದು.., ಮತ್ತೊಬ್ಬ ಮಗನ ಜೀವನವನ್ನು ಬಲಿ ತೆಗೆದುಕೊಂಡ ಶಂತನು ಆದರ್ಶಪ್ರಾಯನೆನಿಸಿ, ಮಹಾಭಾರತದ ಮೂಲಪುರುಷನೆನಿಸುತ್ತಾನೆ. ಸತ್ಯದಿ ನಡೆದ ಸತ್ಯವತಿ ನಮಗೆ ಖಳನಾಯಕಿಯನ್ನಾಗಿ ಬಿಂಬಿಸಲಾಗಿದೆ. ‘ದೃಷ್ಟಿ ಬದಲಾದರೆ ಸೃಷ್ಟಿಯೂ ಬದಲಾದೀತು’ ಎನ್ನುತ್ತದೆ ಕವಿವಾಣಿ. ಇದಕ್ಕೆಂದೇ..? ಮತ್ತೆ ಮತ್ತೆ ಮಹಾಭಾರತ ಮರು ಓದಿಗೆ ತೆರೆದುಕೊಳ್ಳುತ್ತ, ತನ್ನ ಹರವನ್ನು ವಿಸ್ತರಿಸಿಕೊಳ್ಳುತ್ತ.., ಪ್ರಸ್ತುತೆಯನ್ನು ಕಾಯ್ದುಕೊಂಡಿದೆ. 

ಅಂಬೆ : ಕಾಶೀರಾಜನ ಹಿರಿಯ ಮಗಳು ಅಂಬಾ, ಅಂಬಿಕೆ ಮತ್ತು ಅಂಬಾಲಿಕೆ ಮೂವರು ಸಹೋದರಿ ಯರು. ಸ್ವಯಂವರದ ಸಂದರ್ಭದಿ ತಮ್ಮ ವಿಚಿತ್ರವೀರ್ಯನಿಗಾಗಿ ಮಹಾರಥಿ ಭೀಷ್ಮನು ಈ ಮೂವರು ರಾಜ ಕುಮಾರಿಯರನ್ನು ಸೆಳೆದೊಯ್ಯುತ್ತಾನೆ. ಇವನನ್ನು ತಡೆಯುವ ಶಕ್ತಿ-ಸಾಮಥ್ರ್ಯ ನೆರೆದ ಯಾವ ರಾಜರಲ್ಲಿ ಇರಲಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ..? ಅಂಬೆಯನ್ನು ಹೊರತು ಪಡಿಸಿ ಉಳಿದಬ್ಬರನ್ನು ತಮ್ಮನಿಗೆ ಮದುವೆಮಾಡಿಕೊಡುತ್ತಾನೆ. ಕಾರಣ ಇಷ್ಟೇ..! ‘ಹೆಣ್ಣೆಂದರೆ..? ಪೆರರ್ ಒಡವೆ’ ಎಂಬ ಮಾತು ರಾಮಾಯಣ ಮಹಾಕಾವ್ಯದಲ್ಲಿ ಉಲ್ಲೇಖವಿದೆ. ಇಲ್ಲಿ ಹೆಣ್ಣು ಗೆದ್ದು ತಂದವರ ಸೊತ್ತು. ಅವನೇ ಅವಳನ್ನು ವರಿಸುವುದು ಉಚಿತ, ನೀನು ನನ್ನನ್ನು ಮದುವೆಯಾಗಬೇಕೆಂದು ಹಠ ತೊಡುತ್ತಾಳೆ. ಭಿಷ್ಮನು ಇದಕ್ಕೆ ಒಪ್ಪದಿದ್ದಾಗ ಬುದ್ಧಿವಾದ ಹೇಳಲು ಪರಶುರಾಮರನ್ನು ಕರೆತಂದಳು, ಗುರುಗಳೊಂದಿಗೆ ಮಹಾಕದನವೇ ನಡೆದು ಪರಶುರಾಮರು ಪರಾಭವಗೊಂಡರು, ಇದರಿಂದ ಮನನೊಂದು ಅಂಬೆಯು ಗಂಗಾ ನದಿಯ ತಡದಿ ಅಗ್ನಿಕುಂಡವನ್ನು ಮಾಡಿ ಅದರಲ್ಲಿ ಹಾರಿ ಆತ್ಮಹತ್ಯೆಮಾಡಿಕೊಳ್ಳುತ್ತಾಳೆ. ಅಂಬೆ ಪುನರ್ಜನ್ಮದಲ್ಲಿ ಶಿಖಂಡಿಯಾಗಿ ಹುಟ್ಟಿ ಭೀಷ್ಮನ ಮರಣಕ್ಕೆ ಕಾರಣವಾಗುತ್ತಾಳೆ ಇದು ಮಹಾ ಭಾರತ. ಇಲ್ಲಿ ಹೆಣ್ಣು ತನ್ನ ಅಸ್ತಿತ್ವಕ್ಕೆ ಧಕ್ಕೆ ಒದಗಿ ಬಂದಾಗ ಒಡ್ಡಿದ ಪ್ರತಿರೋಧವು ನಿಷ್ಫಲಗೊಂಡ ಹಿನ್ನಲೆಯಲ್ಲಿ ಅದನ್ನು ಮುಂದಿನ ಜನ್ಮಾಂತರಗಳಲ್ಲಿಯೂ ತೀರಿಸಿಕೊಳ್ಳುತ್ತಾಳೆ ಎಂಬುದನ್ನು ಗಮನಿಸಬೇಕು. 

ಮಾದ್ರಿ : ಪಾಂಡುರಾಜನು ಮೋಹಿಸಿ ಪಡೆದ ಎರಡನೆಯ ಹೆಂಡತಿ, ಮದ್ರಾಧಿಪನಾದ ಋತಾಯನನ ಮಗಳು, ಧೃತಿದೇವಿಯ ಅಂಶದಿಂದ ಜನಿಸಿದವಳು, ಶಲ್ಯನ ಸಹೋದರಿ, ಈಕೆಯ ಉದರದಲ್ಲಿ ಅಶ್ವಿನಿ ದೇವತೆಗಳ ಮಂತ್ರಬಲದಿಂದ ನಕುಲ-ಸಹದೇವರು ಜನಿಸಿದರು, ಸದ್ಗತಿಯನ್ನು ಹೊಂದಲು ಗಂಡನೊಂದಿಗೆ ಸಹಗಮನವಾದಳು. ಈ ಸದ್ಗತಿ ಎನ್ನುವುದು ಕೇವಲ ಹೆಣ್ಣು ಹೊಂದುವಂತದ್ದೇ..? ಗಂಡಿಗೆ ಅದು ಬೇಡದ ವಿಷಯವೇ..? ಸತ್ತ ಗಂಡನೊಂದಿಗೆ ಚಿತೆ ಏರಿದರೆ ಮಾತ್ರವೇ ಸದ್ಗತಿಯು ದೊರೆಯುತ್ತದೆಯೇ..? ಅವಳು ಮನಸಾ ಚಿತೆಗೆ ಹಾರಿದಳೇ..? ಅವಳ ದನಿಯನ್ನು ಅಡಗಿಸಿದರಲ್ಲವೇ..? ಪುರಾಣೇತಿಹಾಸಗಳಲ್ಲಿ ಸತ್ತ ಹೆಂಡತಿಯೊಂದಿಗೆ ಗಂಡ ಸಹಗಮನ ಮಾಡಿಕೊಂಡ ನಿದರ್ಶನಗಳು ನಮಗೆಲ್ಲಿಯಾದರೂ ಸಿಕ್ಕುತ್ತವೆಯೇ..? 

ದ್ರೌಪದಿ : ದ್ರುಪದರಾಜನ ಪುತ್ರಿ ದ್ರೌಪದಿ ; ಕೃಷ್ಣೆ ; ಪಾಂಚಾಲಿ ; ಮುಖಜೆ ; ಮಾಲಿನಿ - ಅಜ್ಞಾತವಾಸ ಕಾಲದಲ್ಲಿನ ಗುಪ್ತನಾಮ ; ಸೈರಂಧ್ರಿ - ವಿರಾಟ ನಗರದ ರಾಣಿ ಸುದೇಷ್ಣೆ ಬಳಿ ದಾಸಿಯಾಗಿದ್ದಾಗಿನ ಹೆಸರು. ದ್ರೌಪದಿ ಸ್ವಯಂವರದಲ್ಲಿ ಅರ್ಜುನನು ಮತ್ಸ್ಯಯಂತ್ರವನ್ನು ಭೇದಿಸಿ ವಿವಾಹವಾದನು. ಕುಂತಿ ಮತ್ತು ವ್ಯಾಸರ ಅಪ್ಪಣೆಯಂತೆ ಐವರು ಪಾಂಡವರನ್ನು ದಿನಕ್ಕೊಬ್ಬರಂತೆ ಕ್ರಮವಾಗಿ ಮದುವೆಯಾದಳು. ಒಬ್ಬೊಬ್ಬರೊಂದಿಗೆ ಒಂದು ವರ್ಷ ಎನ್ನುವ ಕರಾರಿನೊಂದಿಗೆ : ಧರ್ಮರಾಯನಲ್ಲಿ - ಪ್ರತಿವಿಂದ್ಯ, ಭೀಮನಲ್ಲಿ - ಶ್ರುತಸೋಮ, ಅರ್ಜುನನಲ್ಲಿ - ಶ್ರುತಕೀರ್ತಿ, ನಕುಲ - ಶತಾನೀಕ ಮತ್ತು ಸಹದೇವರಲ್ಲಿ - ಶ್ರುತಸೇನರೆಂಬ ಐವರು ಮಕ್ಕಳನ್ನು ಪಡೆದಳು. ತನಗೆ ಎದುರಾದ ಎಲ್ಲ ಕಷ್ಟ-ಕೋಟಲೆಗಳನ್ನು ಸಹಿಸಿ ಸಹಿಸಿ ಮನದೊಳಗೆ ದಹಿಸಿ ಕೊಂಡು ಕೊನೆಯಲ್ಲಿ ಪಾಂಡವರ ಪ್ರಸ್ಥಾನಕಾಲದಲ್ಲಿ ಅವರನ್ನು ಅನುಸರಿಸಿ ಮಾರ್ಗ ಮಧ್ಯದಲ್ಲೇ ಅಸುವನ್ನು ನೀಗಿದಳು ಇದು ಕಥಾನಕ ; ಇಲ್ಲಿ ಈ ಹಿಂದೆ ಅಂಬೆಯು ಎತ್ತಿದ ದನಿಯನ್ನು ದ್ರೌಪದಿಯು ಅನುಸರಿಸದೇ ಕೋಲೆ ಬಸವನಂತೆ ತಲೆಯಾಡಿಸಿದ್ದು ಅವಳ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ಕೃಷ್ಣನು ತನ್ನ ತಂಗಿಯೇ ಎನಿಸಿದ ದ್ರೌಪದಿಯ ವಿಷಯದಲ್ಲಿ ಒಂದು ಸ್ವಾರಸ್ಯಕರವಾದ ನೇರಳೆ ಹಣ್ಣಿನ ಘಟನೆಯೊಂದನ್ನು ಸೃಷ್ಟಿಸಿ ಹೆಣ್ಣಿನ ಪಾತಿವ್ರತ್ಯದ ಕುರಿತಾಗಿ ಎತ್ತಿದ ಪ್ರಶ್ನೆ..? ಬಹುಮುಖ್ಯವಾದದ್ದು. ಅವಳು ಮಾಡಿದ ತಪ್ಪಾದರೂ ಎಂಥದ್ದು..? ಕರ್ಣನ ಜನ್ಮವೃತ್ತಾಂತವನ್ನು ತಿಳಿದು.., ಅವನು ಪಾಂಡವರ ಹಿರಿಯ ಅಣ್ಣನೆಂದು ತಿಳಿದು.., ನನಗವನ ಸಂಗವು ದೊರೆತಿದ್ದರೆ ಎಷ್ಟು ಚೆನ್ನವೆಂದು ಮನದಲ್ಲಿ ಎಣಿಸಿದ್ದು ಮಹಾಪರಾಧವಾಯಿತು..! ಈ ಶೀಲ ಮತ್ತು ಚಾರಿತ್ಯ್ರವೆನ್ನುವುದು ಬರೀ ಹೆಣ್ಣಿಗೆ ಸಂಬಂಧಿಸಿದ್ದು ಎನ್ನಬಹುದೇ..? ಆದರೂ ಆಕೆಯನ್ನು ಪತಿವ್ರತಾ ಶಿರೋಮಣಿ ಎಂದು ಕರೆದ ಈ ಪುರುಷ ಪ್ರಧಾನ ಸಮಾಜ ; ಪ್ರಸ್ತುತ ಸಂದರ್ಭ ; ಪ್ರಜಾಪ್ರಭ್ರುತ್ವ ವ್ಯವಸ್ಥೆಯಲ್ಲಿ - ಹೆಣ್ಣಿನ ಶೀಲವನ್ನು ಶಂಕಿಸಿ ಅದೆಷ್ಟೋ ಕೊಲೆ-ಸುಲಿಗೆಗಳು, ವಿವಾಹ ವಿಚ್ಛೇಧನಗಳಾಗಿದ್ದು ಕಾಣಬಹುದಾಗಿದೆ. ತೀವ್ರತೆ ಎಷ್ಟೆಂದರೆ..? ಹೆಣ್ಣು ಪರಪುರುಷನೊಂದಿಗೆ ಕೂತರೆ ತಪ್ಪು, ನಿಂತರೆ ತಪ್ಪು, ಮಾತನಾಡಿದರೂ ತಪ್ಪು..! ಹೇಳದೇ-ಕೇಳದೇ ಎಲ್ಲಿಗೂ ಹೋಗುವಂತಿಲ್ಲ ಬರುವಂತಿಲ್ಲ, ಹೆಣ್ಣನ್ನು ಇಂದಿಗೂ ಅಕ್ಷರಶಃ ಗೃಹಬಂಧನದಲ್ಲಿರಿಸಲಾಗಿದೆ ಎಂದೇ ಹೇಳಬಹುದು. 

ಸಾವಿತ್ರಿ : ಮದ್ರದೇಶಾಧಿಪತಿಯಾದ ಅಶ್ವಪತಿಯ-ಮಾಳವಿಯ ಮಗಳು. ಸಾಲ್ವರಾಜನಾದ ದ್ಯುಮತ್ಸೇನನ ಮಗ ಸತ್ಯವಂತನು ಈಕೆಯ ಪತಿ. ತನ್ನ ಪತಿಯ ಆಯುಷ್ಯ ಮತ್ತು ಒದಗಿ ಮುಂದೊದಗಿ ಬರುವ ವಿಪತ್ತನ್ನು ತಿಳಿದು ಸೌದೆ ತರಲು ಹೊರಟ ಗಂಡನನ್ನು ಅನುಸರಿಸಿ ನಡೆದಳು. ಮೃತ್ಯುವಶನಾದ ಗಂಡನನ್ನು ಯಮನನ್ನು ಜಯಿಸಿ ವರವ ಪಡೆದು ತನ್ನ ಗಂಡನನ್ನು ಪುನಃ ಪಡೆದು ಸತ್ಯವಾನ ಸಾವಿತ್ರಿ ಎಂದೇ ಖ್ಯಾತಳಾದವಳು. ಭಾರತೀಯರಿಗೆ ಆದರ್ಶಳೆನಿಸಿದಳು..! ಆದರೆ ಅಂಥ ಸತ್ಯವುಳ್ಳ ಗಂಡನು ಮತ್ತೊಬ್ಬರು ಇರಬೇಕಲ್ಲ..! ಇರುವುದಾದರೆ.., ಅವನೇ ರಾಜಾ ಸತ್ಯ ಹರಿಶ್ಚಂದ್ರ. ಸತ್ಯವೇ ಮಿಗಿಲೆಂದು ಹೆಂಡತಿ ಮಕ್ಕಳನ್ನು ಮಾರಿದಾತ..! ಧರ್ಮ ದಿಂದಲೇ ನಡೆದ ಧರ್ಮರಾಯ ಹೆಂಡತಿಯನ್ನೇ ಪಣಕ್ಕಿಟ್ಟು ಸೋತಾತ..! ತನ್ನ ಪಾದ ಸ್ಪರ್ಶ ಮಾತ್ರದಿಂದಲೇ ಅಹಲ್ಯೆಯ ಪಾಪ-ಕರ್ಮಾದಿಗಳನ್ನು ತೊಡೆದಾತ ; ಅಗಸನ ಮಾತಿಗೆ ಬೆಲೆ ನೀಡಿ ಮರ್ಯಾದಾ ಪುರುಷೋತ್ತಮ ರಾಮ ತುಂಬು ಬಸುರಿಯಾದ ಸೀತಾಮಾತೆಯನ್ನು ಗೊಂಡಾರಣ್ಯಕ್ಕೆ ಕಳುಹಿ ಸಿದಾತ..! ಈ ಪುರುಷ - ಸ್ತ್ರೀಯರ ಕುರಿತಾದ ಮನೋಧೋರಣೆಗಳನ್ನು ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.  

ಕೃಷ್ಣ ಮತ್ತು ಭಾನುಮತಿಯ ನದಿಯ ತಟದಲ್ಲಿ ಭೇಟಿ ಮತ್ತು ಸಂಭಾಷಣೆ :

ಒಂದೆಡೆ.., ಮಹಾಭಾರತ ಯುದ್ಧ ಮುಗಿದಿದೆ ಹತರಾದ ವೀರಾಧಿ ವೀರರೆಲ್ಲರ ಚಿತೆಗಳು ಅನತಿ ದೂರದಲ್ಲಿ ಉರಿಯುತ್ತಿವೆ..! ಅರಮನೆಯ ಊಳಿಗದವರು ಅಲ್ಲಲ್ಲಿ ಚಿತೆಯ ಕಟ್ಟಿಗೆಗಳನ್ನು ಮುಂದಕ್ಕೆ ಚಾಚುತ್ತ ನಿಂತಿದ್ದಾರೆ. 

ಮತ್ತೊಂದಡೆ.., ಕೃಷ್ಣ ಗಂಗೆಯಲ್ಲಿ ಮಿಂದು-ಮಡಿಯುಟ್ಟು ಸತ್ತವರೊಗಾಗಿ ಜಲಾಂಜಲಿ ಕೊಡುತ್ತಿದ್ದಾನೆ. ಅನತಿ ದೂರದಲ್ಲಿ ಒಬ್ಬ ಸ್ತ್ರೀಯು ಸ್ನಾನ ಮಾಡಿ ದಡದ ಮೇಲೆ ನಿಂತಿದ್ದಾಳೆ. ಮಧ್ಯವಯಸ್ಸಿನ ಚೆಲುವೆ, ನವವೈಧವ್ಯ ಪ್ರಾಪ್ತಿಯಾದದ್ದು ಅವಳ ಮೈ ಒಪ್ಪಿದಂತಿಲ್ಲ. ದೂರದ ದಡದ ಮೇಲೆ ಅವಳ ಬರವಿಗಾಗಿ ಪಲ್ಲಕ್ಕಿಯೊಂದಿಗೆ ಆಳುಗಳು ಕಾದು ನಿಂತಿದ್ದಾರೆ. 

ಕೃಷ್ಣನನ್ನು ಕಂಡು ಒಂದು ಕ್ಷಣ ಅವಾಕ್ಕಾಗಿ ನಿಂತಳು. ಈ ಚೆಲುವ ಚೆನ್ನಿಗರಾಯ ಇಂಥ ಘನಘೋರ ರಾಜಕಾರಣವನ್ನು ನಡೆಸಿ. ಕೋಟ್ಯಾವಧಿ ವೀರರ ಹೆಣಗಳ ರಾಶಿ ಬೀಳಿಸಿದ್ದಲ್ಲದೇ ಅವರ ಹೆಣಗಳನ್ನು ಸುಡುವುದರಲ್ಲೂ ಅಷ್ಟೇ ವಿಚಕ್ಷಣ ಎಂಬುದನ್ನು ಅವಳು ಇನ್ನೂ ನಂಬುತ್ತಿಲ್ಲ..! ಇತ್ತ ಕೃಷ್ಣನಿಗೂ ನಂಬಿಕೆ ಬರುತ್ತಿಲ್ಲ, ಸ್ತ್ರೀಯರ ವಯಸ್ಸು, ಚೆಲುವು, ಗುಣ, ಬುದ್ಧಿಮತ್ತತೆ, ನಿರಪರಾಧಿತ್ವಗಳನ್ನು ಪರಿಗಣಿಸದಯೇ ಇಂಥ ಕೋಟ್ಯಾಂತರ ಸ್ತ್ರೀಯರ ಬಾಳನ್ನು ಒಂದು ಯುದ್ಧ ಹಾಳುಮಾಡಬಹುದು ಎಂದು..! 

ಅಷ್ಟು ದೂರದಲ್ಲಿರುವ ಸ್ತ್ರೀಯು ಯಾರೆಂದು ಸರಿಯಾಗಿ ಕಾಣದೇ ಇದ್ದರೂ, ಇವನೇ ಕೃಷ್ಣನೆಂದು ಅವಳು ಮಾತ್ರ ಗುರುತು ಹಿಡಿದಿದ್ದಾಳೆ. ಸೂರ್ಯ-ಚಂದ್ರರ ಗುರುತು ಯಾರಿಗಿಲ್ಲ ಹೇಳಿ..? ಹಾಗೆ ಅವಳು ನಿಂತದ್ದನ್ನು ಕಂಡು ಕೃಷ್ಣ ಅವಳ ಬಳಿ ಸಮೀಪಿಸಿ ಬರುತ್ತಾನೆ. ಅವಳೊಡನೆ ಎಂದೂ ಹಾಗೆ ಏಕಾಂತದಲ್ಲಿ ಮಾತನಾಡಿದವನಲ್ಲ. ಇಂದು ಆಪತ್ತಿನ ಕಾಲದಲ್ಲಿ ತನ್ನ ಸಾಂತ್ವಾನ ಬಯಸಿ ಬಂದಳೇ..? ಅಥವ ನನ್ನನ್ನು ಬೈಯ್ಯಲು ನಿಂತಿದ್ದಾಳೆಯೇ..? ಅಥವ ದಾರಿ ತಿಳಿಯಲಿಲ್ಲವೇ..? ಎಂದು ಮನದೊಳಗೆ ಎಣಿಸುತ್ತ ಸಮೀಪಿಸಿದ. 

ಭಾನುಮತಿ ದುರ್ಯೋಧನನ ಪತ್ನಿ ; 

ಕೃಷ್ಣ : ನೀ ಭಾನುಮತಿ..! ಅಲ್ಲವೇ..? ಈ ಯುದ್ಧದ ನಿಮಿತ್ತ ನಾನೇ ಕಾರಣನೆಂದು ಬೈದವರು, ಬೈಯ್ಯುತ್ತಿರು ವವರು, ಬೈಯ್ಯಲಿರುವವರು ಎಷ್ಟೋ ಜನ..! ಅದಕ್ಕಾಗಿ ನೀನಿಲ್ಲಿ ನಿಂತಿದ್ದರೆ.., ಮನಸಾರೆ ಬೈಯ್ಯಬಹುದು. ಶಾಪವನ್ನು ಬೇಕಾದರೂ ಹಾಕಬಹುದು ; ನಿನ್ನ ಅತ್ತೆ – ಗಾಂಧಾರಿ ಶಪಿಸಿದಳಲ್ಲ ಹಾಗೆ..! ನಾನೇ ಕೃಷ್ಣ..! ದೇವಕಿ-ವಾಸುದೇವನ ಮಗ..! ಗುರುತು ಹತ್ತಿತೇ..? 

ಭಾನುಮತಿ : ಪ್ರಭು ನಿನ್ನನ್ನು ಅರಿಯದವರಾರು..? ನನ್ನ ಕರ್ಮಫಲ ನನಗೆ..! ವೃತಃ ನಿನ್ನನ್ನೇಕೆ ಬೈಯಲಿ..? ಯಾರನ್ನು ಬೈದು ಈಗ ಪ್ರಯೋಜನವಾದರೂ ಏನು..? ನೀನು ಯುದ್ಧವನ್ನು ತಡೆಯಲು ಎಷ್ಟು ಯತ್ನಿಸಿದೆ ಎಂಬುದು ನನಗೆ ಗೊತ್ತು..! ನನ್ನ ಅತ್ತೆಯ ಶಾಪಕ್ಕಾಗಿ.., ನಿನ್ನಲ್ಲಿ ಕ್ಷಮೆ ಯಾಚಿಸಲು ಇಲ್ಲಿ ನಿಂತೆ..! ದಡದಲ್ಲಿರುವವರು ತಪ್ಪು ಕಲ್ಪನೆ ಮಾಡಬಾರದು. 

ಕೃಷ್ಣ : ಅವಕ್ಕಾಗಿ ಅವಳ ವಿವೇಕಕ್ಕೆ ಮೆಚ್ಚಿ ಅನಿವಾರ್ಯವಾಗಿ ಒಸರಿದ ಆನಂದಾಶ್ರುಗಳನ್ನು ಒರೆಸಿಕೊಳ್ಳದೇ ಕೌರವನ ಪತ್ನಿ ಒಬ್ಬ ದುಷ್ಟ ರಾಜನ ಹೆಂಡತಿ ಇಷ್ಟು ವಿವೇಕಿ ಇರಬಹುದೆಂದು ನಾನು ಭಾವಿಸರಿಲಿಲ್ಲ..! ದೇವಿ ನಿನ್ನ ಪರಿಚಯ ನನಗೆ ಮೊದಲೇ ಆಗದದ್ದು ನನ್ನ ದೌರ್ಭಾಗ್ಯವೇ ಸರಿ..! ನಿನ್ನ ಮೂಲಕವೇ ಸಂಧಾನ ನಡೆಸಿದ್ದರೆ, ನಿನ್ನ ಪತಿ ದಾರಿಗೆ ಬರುತ್ತಿದ್ದನೇನೋ..? 

ಭಾನುಮತಿ : ಅಳುತ್ತ.., ಪ್ರಭು ನೀನು ಸರ್ವೇಶ್ವರ ನಿನ್ನನ್ನೇ ಕೇಳುತ್ತೇನೆ.., ರಾಮಾಯಣ ತಾರೆ, ಮಂಡೋದಿಯರ ಸಂಧಾನದಿಂದ ವಾಲಿ, ರಾವಣರು ತಿದ್ದಿಕೊಂಡರೆ..? ಇವಳ ವಾಕ್ಚಾತುರ್ಯಕ್ಕೆ, ಇತಿಹಾಸ ಪ್ರಜ್ಞೆಗೆ, ದಿಟ್ಟತನಕ್ಕೆ ಕೃಷ್ಣ ಅಪ್ರತಿಭನಾಗುತ್ತಾನೆ. ಆನಂದಾಶ್ರುಗಳು ಸುಮ್ಮನೇ ಒಸರುತ್ತಿವೆ..! ಆ ಗತಕಾಲದ ಇತಿಹಾಸ ಪ್ರಸಂಗಗಳು ಕೃಷ್ಣನ ಕಣ್ಣಿಗೆ ಈಗ ಕಟ್ಟುತ್ತವೆ..! ಇವಳೇ ತಾರೆಯೋ..? ಇವಳೇ ಮಂಡೋದರಿಯೋ..? ಎಂದು ಕ್ಷಣಮಾತ್ರ ಭ್ರಮೆಯೂ ಅದಂತಿದೆ..! ಮೆಲ್ಲನೆ ಕೃಷ್ಣನು ಮುಂದುವರೆದು ಕೇಳುತ್ತಾನೆ.., 

ಕೃಷ್ಣ : ನಿನ್ನ ಪತಿಗೆ ನೀನೇ ವಿವೇಕ ಹೇಳಲಿಲ್ಲವೇಕೆ..? 

ಭಾನುಮತಿ : ಹೇಳಲಿಲ್ಲವೆಂದು ನಿಮಗೆ ಯಾರು ಹೇಳಿದರು..? ಅದನ್ನೆಲ್ಲ ಸಂಜಯ ನನ್ನ ಮಾವನಿಗೆ ಹೇಳಲಿಲ್ಲವಷ್ಟೇ..! ಅವನಿಗೆ ಯುದ್ಧಭೂಮಿಯತ್ತ ಕಣ್ಣಿತ್ತೇ ಒರತು.., ರಾಣೀವಾಸದಲ್ಲಿನ ಯಃಕಶ್ಚಿತ್ತ ಸ್ತ್ರೀಯರ ಕಷ್ಟವನ್ನು ಅವನೇನು ವರ್ಣಿಸಿಯಾನು..? ಯಾರು ವರ್ಣಿಸಿದರೂ ಬಿಟ್ಟರೂ ಈಗ ಫಲವೇನು..? 

ಕೃಷ್ಣ : ನೀನು ಧನ್ಯೆ ರಾಜಪುತ್ರಿ..! ನೀನು ಸಹಗಮನ ಮಾಡದೇ ಉಳಿದದ್ದು ವಿವೇಕ..! ಮುಂದಿನವರಿಗೆ ನಿನ್ನ ವಿವೇಕ ಬರಲಿ..! 
ಭಾನುಮತಿ : ಬದುಕಿರುವಾಗಲೇ ಪತಿಯ ದಾರಿಯಲ್ಲಿ ಹೋಗದವಳಿಗೆ ; ಪತಿ ಹೋದಮೇಲೆ ಆ ದಾರಿಯಲ್ಲಿ ಹೋಗಿ ಸಾಧಿಸುವುದೇನಿದೆ ಪ್ರಭು..? ನಾನು ವಾನಪ್ರಸ್ಥಕ್ಕೆ ಹೊರಟೆ..! ಮುಂದಿನವರ ವಿವೇಕಾವಿವೇಕ ಅವರಿಗೆ, ನನ್ನ ದಾರಿ ನನಗೆ..! ಈ ದೇಶದಲ್ಲಿ ಸ್ತ್ರೀಯರ ಬುದ್ಧಿವಾದ ಯಾರಿಗೆ ಬೇಕು..? 

ಕೃಷ್ಣ : ರಾಜಕುಮಾರಿ..! ನಿನ್ನ ಒಂದೊಂದು ಅಣಿಮುತ್ತಿನಂಥ ವಿವೇಕದ ಮಾತುಗಳಿಗೆ ಮೆಚ್ಚಿದ್ದೇನೆ..! ನಿನಗೊಂದು ವರ ಕೊಡುತ್ತೇನೆ ಕೇಳಿಕೋ.., 

ಭಾನುಮತಿ : ಪ್ರಭು..! ವಾನಪ್ರಸ್ಥಳಾಗಿ ಹೊರಟು ನೊಂತವಳಿಗೆ ಯಾವ ವರದಿಂದೇನು ಪ್ರಯೋಜನ..? ದ್ರೌಪದಿದೇವಿಯನ್ನು, ಸುಭದ್ರೆಯನ್ನು, ಉತ್ತರೆಯನ್ನು, ಅತ್ತೆ ಕುಂತಿದೇವಿಯರನ್ನು ಕಂಡು - ನನ್ನ ಪತಿ ನನ್ನ ಕುಲದವರ ಅಪರಾಧಕ್ಕಾಗಿ ಕ್ಷಮೆ ಕೇಳಿ ನಾಳೆಯೋ ನಾಡಿದ್ದೋ ಹೊರಟು ನಿಂತಿದ್ದೇನೆ..! ನಿನ್ನನ್ನು ಈಗ ಸಂದರ್ಶಿಸಿದ್ದೇ ನನಗೆ ಮಹಾವರ ಪ್ರಾಪ್ತಿ..! ನನ್ನ ವೈಫಲ್ಯಗಳನ್ನು ಕ್ಷಮಿಸು.., ನನ್ನ ಗಂಡ ನನ್ನ ಬುದ್ಧಿವಾದಗಳನ್ನು ಕೇಳಲಿಲ್ಲ..! ಅಥವ ನೀನೇ ಅವನಿಗೆ ಸದ್ಬುದ್ಧಿಯನ್ನು ಕೊಡದೇ.., ಅವನನ್ನು ನಿಮಿತ್ತವಾಗಿಸಿಕೊಂಡು ಭೂ-ಭಾರವ ಇಳುಹಿದೆ..! ಮಾನುಷ ಭಾವದಲ್ಲಿ ನಾನು ಕರ್ತವ್ಯ ವಿಫಲಳು..! ಗಂಡನಿಗೆ ಹೆಂಡತಿಯು ಮಂತ್ರಿಯಾಗಬೇಕೆಂದು ಶಾಸ್ತ್ರ ಹೇಳುತ್ತದೆ, ನನ್ನ ಪತಿಗೆ ಮಂತ್ರಿಗಳು, ದುರ್ಮಂತ್ರಿಗಳು ಬೇರೆಯವರೇ ಇದ್ದರು.., ಮುಂದಿನ ಇತಿಹಾಸಕ್ಕೆ ಇದರಲ್ಲಿ ನನ್ನ ಪಾತ್ರಾಪಾತ್ರಾ ತಿಳಿದಿರಲಿ..! ನನ್ನನ್ನು ಕ್ಷಮಿಸು.
ಕೃಷ್ಣ : ಇವಳ ವಿವೇಕಕ್ಕೆ, ಸಮಚಿತ್ತಕ್ಕೆ ಕೃಷ್ಣನ ಮನ ಕರಗುತ್ತದೆ. ಸ್ತ್ರೀಯರೆಲ್ಲರೂ ನಿನ್ನಂತೆಯೇ ಇದ್ದರೆ..!

ಭಾನುಮತಿ : ಪುರುಷೋತ್ತಮ..! ಪುರುಷರೆಲ್ಲರೂ ನಿನ್ನಂತೆಯೇ ಇದ್ದರೆ..! ಎಂದು ಆಶಿಸಲೇ..? ಸ್ತ್ರೀಯರ ಕಷ್ಟಗಳಿಗೆ ಮರುಗುವವನು ಒಬ್ಬನಾದರೂ ಈ ಲೋಕದಲ್ಲಿ ಇದ್ದೀಯಲ್ಲ..! ಅದು ಸ್ತ್ರೀಕುಲದ ಸೌಭಾಗ್ಯ..! ನರಕಾಸುರನ ಅಂತಃಪುರದಲ್ಲಿದ್ದ ಗತಿಗೆಟ್ಟ ಸ್ತ್ರೀಯರಿಗೆ ಗತಿ ತೋರಿದವನು ನೀನೇ ಅಲ್ಲವೇ..? ದ್ರೌಪದಿ ದೇವಿಗೆ ಮಾನ ಮುಚ್ಚಿದವನೂ ನೀನೇ ಅಲ್ಲವೇ..? 

ಕೃಷ್ಣ : ನಿನ್ನನ್ನೊಂದು ಕೇಳಲೇ..? 

ಭಾನುಮತಿ : ಸರ್ವೇಶ್ವರನಿಗೆ ನನ್ನ ಅನುಮತಿ ಬೇಕೆ..? 

ಕೃಷ್ಣ : ದ್ರೌಪದಿಗೆ ಅಪಮಾನವಾಗುತ್ತಿದ್ದಾಗಲೇ.., ಆ ಸಭೆಯಲ್ಲೇ ಅಂದೇ ನೀನು ಕಾಣಿಸಿಕೊಂಡು ಇದು ತಪ್ಪು ಈ ಗತಿ ನನಗೆ ಒದಗಿ ಬಂದಿದ್ದರೆ ಏನು ಮಾಡುತ್ತಿದ್ದಿರಿ..? ಎಂದು ನಿನ್ನ ಪತಿಯನ್ನೇಕೆ ಕೇಳಲಿಲ್ಲ..? ನಿನ್ನ ಮಾವನವರನ್ನೇಕೆ ಕೇಳಲಿಲ್ಲ..? 

ಭಾನುಮತಿ : ಅಳುತ್ತ.., ಆ ಘಟನಾವಳಿಗಳೆಲ್ಲ ಸರಸರನೇ ಒಂದರಮೇಲೊಂದರಂತೆ ನಡೆದ ಮೇಲೆಯೇ ನನಗದು ತಿಳಿದದ್ದು..! ಈ ಸಂಚಿನ ಸುಳಿವೂ ನನಗಿರಲಿಲ್ಲ. ಪ್ರಭು..! ನೀನಾದರೂ ನನಗೆ ಅಷ್ಟು ಸೂಚನೆ ಇತ್ತಿದ್ದರೆ ಆಗಿತ್ತು ತಾನೇ..?

ಕೃಷ್ಣ : ಆಮೇಲಾದರೂ ಕೇಳಿದೆಯಾ..? 
ಭಾನುಮತಿ : ಕೇಳಿದೆ..! ಪ್ರಯೋಜನವೇನು..? ‘ಬಾಯಿ ಮುಚ್ಚು’ ಎಂಬ ಉತ್ತರ ಪತಿಯಿಂದ ಬಂದಿತು. ಅದು ಈ ದೇಶದ ಸ್ತ್ರೀಯರ ಸ್ಥಿತಿ..! ಬಾಯಿ ಮುಚ್ಚಿ ಮುಚ್ಚಿ ಈ ಸ್ಥಿತಿಗೆ ಬಂದೆವು.

ಕೃಷ್ಣ : ನನ್ನನ್ನು ಸರ್ವೇಶ್ವರ ಅಂದೆಯಲ್ಲ..! ವರ ಕೊಡುತ್ತೇನೆ ಎಂದರೂ ಕೇಳಲಿಲ್ಲ. ಇಗೋ ನಾನಾರು ನೋಡು.., ಎನ್ನತ್ತ ಕೃಷ್ಣ ಶಂಖಚಕ್ರಗದಾಪದ್ಮಧಾರಿಯಾಗಿ ಬ್ರಹ್ಮಾಂಡವನ್ನೆಲ್ಲ ತನ್ನ ಶರೀರದಲ್ಲಿಟ್ಟು ದಿವ್ಯರೂಪವನ್ನು ಅವಳಿಗೆ ತೋರಿ ಹರಸಿ, ಈ ದೇಶದ ಭವಿಷ್ಯ ನಿನ್ನಂಥ ಉತ್ತಮ ಸ್ತ್ರೀಯರ ಕೈಯಲ್ಲಿದೆ..! ನಿನಗಾಗಿ, ದ್ರೌಪದಿಯಾಗಿ, ಕುಂತಿಗಾಗಿ, ಸುಭದ್ರೆಗಾಗಿ ನಿನ್ನಂಥ ಸ್ತ್ರೀಯರ ಸಲುವಾಗಿ ನಾನು ಶತಸಹಸ್ರ ಅವತಾರಗಳನ್ನಾದರೂ ಎತ್ತಿ ಮತ್ತೆ ಮತ್ತೆ ಬರುತ್ತೇನೆ..!  

ಭಾನುಮತಿ : ಆದರೆ ನನ್ನ ಪತಿಯಂತಹವರೂ ಪದೇ ಪದೇ ಹುಟ್ಟಿ ಬಂದರೆ..? 

ಕೃಷ್ಣ : ಅದು ಕಾಲ ಪ್ರವಾಹದ ಗುಟ್ಟು..! ಸೂರ್ಯ ಮುಳುಗುತ್ತಿದ್ದಾನೆ, ಪಲ್ಲಕ್ಕಿ ಕಾಯುತ್ತಿದೆ ಹೊರಡು ಎಂದು ಹೇಳುತ್ತಾನೆ.

ರಾತ್ರಿ ಕಳೆದು ಹಗಲು ಮೂಡುವ ಹೊತ್ತು ನಾಟಕ ನೋಡಿ..! ಬೆಳಗಾದಮೇಲೆ ರಾಮನಿಗೆ ಸೀತೆ ಏನಾಗಬೇಕು ಎಂದರೆ..? ತಂಗಿ ಅಂದಿನ್ನಂತೆ ಯಾವನೋ..? ಹಾಗಾಯ್ತು ಕಥೆ. ಕಾಲ ಪ್ರವಾಹದ ಹುಟ್ಟು ಏನಿರನಹುದು..? ಕೃಷ್ಣ ಹೇಳದೇ ಮುಚ್ಚಿ ಇಟ್ಟುದರ ಹಿಂದಿನ ಘನ ಉದ್ದೇಶವಾದರೂ ಏನು..? ಹೆಣ್ಣಿನ ಮನಸ್ಸಿನಲ್ಲಿ ಗುಟ್ಟು ನಿಲ್ಲುವುದಿಲ್ಲ ಎಂದೆಣಿಸಿದನೋ..? ಅಥವ ‘ಹೆಣ್ಣು ಮಕ್ಕಳ ಬುದ್ಧಿ ಮೊಣಕಾಲ ಕೆಳಗೆ’ ಎಂದು ಎಲ್ಲ ಗಂಡಸರಂತೆ ಬಗೆದನೋ..? ಈ ಸಂಭಾಷಣೆಯಲ್ಲಿ ಗಮನಿಸಬೇಕಾದ ಬಹುಮುಖ್ಯವಾದ ಸಂಗತಿ ಎಂದರೆ..? ಕೃಷ್ಣನ ಈ ಮಾತು ಕೇಳಿ ‘ಕೌರವನ ಪತ್ನಿ ; ಒಬ್ಬ ದುಷ್ಟ ರಾಜನ ಹೆಂಡತಿ ಇಷ್ಟು ವಿವೇಕಿ ಇರಬಹುದೆಂದು ನಾನು ಭಾವಿಸರಿಲಿಲ್ಲ..! ಎಂಬ ಮನೋಧೋರಣೆಯೇ ಯುದ್ಧದ ಅಂತ್ಯದವರೆಗೂ ಅವಳ ಭೇಟಿಯಾಗದಿರುವುದ. ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಹೆಣ್ಣನ್ನು ಗೌರವಿಸದ, ಅವಳ ವಿಚಾರಗಳಿಗೆ ಕಿವಿಗೊಡದ ಮನಸ್ಸುಗಳಿಗೆ, ಸ್ತ್ರೀವಾದಿ ಸಾಹಿತ್ಯ ಎಂದರೆ..? ಬರೀ ಟೊಳ್ಳು, ಅದು ಅಡುಗೆ ಮನೆಯ ಸಾಹಿತ್ಯ, ಸ್ತ್ರೀವಾದಿ ಬರಹಗಳಿಗೆ ಕಾಲುಗಳಿವೆ ಹೊರತು ತಲೆಗಳಿಲ್ಲ ಎಂಬಂಥ ವಿಮರ್ಶಕರ ಹಿತನುಡಿಗಳಿಗೆ ; ಈ ಹಿನ್ನಲೆಯ ವಿಚಾರವಾದಿ-ಬುದ್ಧಿಜೀವಿಗಳೆನಿಸಿದವರ ಮತಿಗೆ ಸಾಣೆ ಹಿಡಿಯುವಂತಾದರೆ..! ಅದರಲ್ಲಿಯೇ ಈ ಲೇಖನದ ಸಾರ್ಥಕ್ಯ ಅಡಗಿದೆ. 
                                                    - ಡಾ.ಯಲ್ಲಮ್ಮ.ಕೆ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...