ಮುಂಗಾರಿನ ಆರಂಭದ ರೈತರ ಹಬ್ಬ “ಮಣ್ಣೆತ್ತಿನ ಅಮವಾಸ್ಯೆ
(ದಿನಾಂಕ 09-07-2021 ರ ಮಣ್ಣೆತ್ತಿನ ಅಮವಾಸ್ಯೆ ನಿಮಿತ್ಯ ಲೇಖನ)
ಕನ್ನಡ ನಾಡು ಹಲವು ಹಬ್ಬ ಆಚರಣೆಗಳ ಬೀಡಾಗಿದೆ. ನಮ್ಮ ಕರುನಾಡು ಹಬ್ಬಗಳ ತವರೂರು ಎಂದರೆ ತಪ್ಪಾಗಲಾರದು.ಅದರಲ್ಲೂ ನಮ್ಮ ಹಳ್ಳಿಗಳಲ್ಲಿ ವಿಶೇಷವಾಗಿ ಹಬ್ಬ ಹರಿದಿನಗಳನ್ನು ತುಂಬಾ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.
ಕೃಷಿ ಪ್ರಧಾನವಾದ ನಮ್ಮ ಕನ್ನಡ ನಾಡಲ್ಲಿ ಮುಂಗಾರು ಮಳೆ ಪ್ರಾರಂಭದ ಜೊತೆಗೆ ಹಬ್ಬಗಳು ಬರುವುದುಂಟು. ಹಬ್ಬ ಬಂತೆಂದರೆ ಮನೆಯ ಹೆಣ್ಣುಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ. ಮನೆಯನ್ನು ಸ್ವಚ್ಛವಾಗಿಡುವುದು, ಅಲಂಕಾರ ಮಾಡುವವುದು ಅವರ ಕಾಯಕವಾಗಿರುತ್ತದೆ.ಹಲವು ವಿಶೇಷ ಹಬ್ಬಗಳನ್ನು ಆಚರಿಸುತ್ತೇವೆ. ಅದರಲ್ಲೂ ರೈತರ ಹಬ್ಬವೆಂದೇ ಹೆಸರಾಗಿರುವದು “ಮಣ್ಣೆತ್ತಿನ ಅಮವಾಸ್ಯೆ”. ಮುಂಗಾರಿನ ಹಂಗಾಮ ಮುಗಿದ ನಂತರ ರೈತರು ಹಬ್ಬಗಳ ಆಚರಣೆಯಲ್ಲಿ ತೋಡಗಿಕೊಳ್ಳುವದು ವಾಡಿಕೆ ಇದೆ.
ಕಾರ ಹುಣ್ಣಿಮೆಯ ನಂತರ ಬರುವ ರೈತರ ವಿಶೇಷ ಹಬ್ಬವೇ ಮಣ್ಣೆತ್ತಿನ ಅಮವಾಸ್ಯೆ ಇದು ಆಷಾಡ ಮಾಸದಲ್ಲಿ ಬರುವ ಹಬ್ಬವಾಗಿದೆ. ಈ ಹಬ್ಬವನ್ನು ರೈತಾಪಿ ಜನಗಳ ಜೀವನಾಡಿಯಾದ ಎತ್ತುಗಳನ್ನು ಪೂಜಿಸುವ ಹಬ್ಬವಾಗಿದೆ. ರೈತರಿಗೆ ಭೂತಾಯಿಯ ಮಣ್ಣು ಪವಿತ್ರವಾಗಿದೆ. ಆದ್ದರಿಂದ ಮಣ್ಣಿನಿಂದ ಮಾಡಿದ ಎತ್ತುಗಳನ್ನು ತಯಾರಿಸಿ ಆ ಎತ್ತುಗಳನ್ನು ವಿಶೇಷವಾಗಿ ಪೂಜಿಸುತ್ತಾರೆ.
ವರ್ಷದ ಆರಂಭದಿಂದ ಐದು ಪ್ರಮುಖ ಮಣ್ಣಿನಿಂದ ತಯಾರಿಸಿ ಮೂರ್ತಿಗಳನ್ನು ಪೂಜಿಸುವ ಹಬ್ಬಗಳು ಇವೆ. ಆಷಾಡದಿಂದ ಶ್ರಾವಣ ಹಾಗೂ ಬಾದ್ರಪದ ವರೆಗೆ ಮಣ್ಣಿನ ಪೂಜೆ ನಡೆಯುತ್ತದೆ. ಅದರಲ್ಲಿ ಮಣ್ಣೆತ್ತು, ಗುಳ್ಳವ್ವ, ಹುತ್ತಪ್ಪ, ಗಣಪ್ಪ ಹಾಗೂ ಜೊಕಮಾರ ಇವು ಐದು ಮಣ್ಣಿನಿಂದಮಾಡಿದ ದೇವರುಗಳನ್ನು ಈ ಮೂರು ಮಾಸಗಳಲ್ಲಿ ಪೂಜಿಸುತ್ತಾರೆ.
“ಹಾಗಾದರೆ ಮಣ್ಣೆತ್ತಿನ ಅಮವಾಸ್ಯೆ ವಿಶೇಷತೆಯನ್ನು ತಿಳಿಯೋಣ”
ಕರುನಾದಿನ್ಯಾಗ ಕೊರೊನಾ ಬಂದೈತಿ ಇದರ ಬೆನ್ನಲ್ಲೆ ಮಣ್ಣೆತ್ತಿನ ಅಮವಾಸ್ಯೆ ಬಂದೈತಿ. ಹಬ್ಬ ಆಚರಿಸುವುದು ನಮ್ಮ ಧರ್ಮ ಆಗೇತಿ ಆದರೂ ಸರಳವಾಗಿ ಹಬ್ಬವನ್ನು ಆಚರಿಸೋಣ.
ಎತ್ತುಗಳ ಹಬ್ಬ ಕಾರಹುಣ್ಣಿಮೆ ಈ ಹಬ್ಬ ಮುಗಿದ ನಂತರ ಬರುವ ಹಬ್ಬವೇ ಮಣ್ಣೆತ್ತಿನ ಅಮವಾಸ್ಯೆ ರೈತರು ಈ ಹಬ್ಬಕ್ಕೆ ವಿಶೇಷವಾಗಿ ಕೆರೆ ಅಥವಾ ಹೊಲಗಳಿಗೆ ಹೋಗಿ ಜಿಗಟು ಮಣ್ಣನ್ನು ತೆಗೆದುಕೊಂಡು ಬಂದು ರೈತರ ಜೀವನಾಡಿಯಾದ ಭೂಮಿಯನ್ನು ಉಳುವ ಸಂಕೇತವಾಗಿ ಜೊಡೆತ್ತುಗಳನ್ನು ತಯಾರಿಸುತ್ತಾರೆ. ಕೆವರು ಕುಂಬಾರರು ತಯಾರಿಸಿದ ಎತ್ತುಗಳನ್ನು ಮಾರಟಕ್ಕೆ ತರುತ್ತಾರೆ ಇಲ್ಲವೆ ಜೋಳ ಇಲ್ಲವೆ ಕಾಳು ಕಡಿಗಳನ್ನು ಹಾಕಿ ಮಣ್ಣೆತ್ತಿನ ಜೊಡೆತ್ತುಗಳನ್ನು ತರುತ್ತಾರೆ.ಇಲ್ಲವೆ ತಾವೆ ತಯಾರಿಸದ ಎತ್ತುಗಳನ್ನು ಪೂಜಿಸುತ್ತಾರೆ.
ಮನಗೆ ತಂದ ಎತ್ತುಗಳಿಗೆ ಮಣ್ಣಿನಲ್ಲಿ ಗ್ವಾದಲಿ ಮಾಡುತ್ತಾರೆ ಅದರಲ್ಲಿ ಹುಲ್ಲು ಇಲ್ಲವೆ ಕಾಳುಗಳನ್ನು ಹಾಕುತ್ತಾರೆ. ನಂತರ ಅವುಗಳಿಗೆ ಬಣ್ಣ ಬಳಿದು ಸಿಂಗಾರ ಮಾಡಿ ಗೆಜ್ಜೆ ಕಟ್ಟುತ್ತಾರೆ. ಇಂತಹ ಎತ್ತುಗಳನ್ನು ನೋಡುವುದೇ ಒಂದು ಸೊಬಗು. ಸಿಂಗಾರ ಮಾಡಿದ ಎತ್ತುಗಳನ್ನು ತಮ್ಮ ದೇವರ ಜಗುಲಿಯ ಮೇಲೆ ಇಟ್ಟು ಪೂಜಿಸುತ್ತಾರೆ. ನೈವಿದ್ಯಕ್ಕಾಗಿ ರುಚಿಯಾದ ಸಿಹಿ ಅಡುಗೆಯನ್ನು ತಯಾರಿಸುತ್ತಾರೆ. ಇದರ ಜೊತೆಯಲ್ಲೆ ಮನೆಯ ಎತ್ತುಗಳನ್ನು ಮೈ ತೊಳೆದು ಸಿಂಗಾರ ಮಾಡುತ್ತಾರೆ,
ನಂತರ ಮಣ್ಣೆತ್ತುಗಳಿಗೆ ಕಾಯಿ, ಕರ್ಪೂರ ಹಾಗೂ ಸಿಹಿ ಪ್ರಸಾದ ನೈವಿದ್ಯ ನೀಡಿ ಪೂಜೆ ಸಲ್ಲಿಸುತ್ತಾರೆ ಅದರ ಜೊತೆ ಮನೆ ಎತ್ತುಗಳನ್ನು ಹಾಗೂ ಜಗದ ಜೀವರಾಶಿಗಳಿಗೆ ಅನ್ನ ನೀಡುವ ಭೂತಾಯಿಯನ್ನು ಸಹ ಪೂಜಿಸುತ್ತಾರೆ.
ಇಷ್ಟೇ ಅಲ್ಲದೆ ಮನೆಯ ಎಲ್ಲರೂ ಹೊಸ ಬಟ್ಟೆ ಧರಿಸಿ ಊರಿನಲ್ಲಿರುವ ದೇವರುಗಳಿಗೆ ಹೆಣ್ಣು ಮಕ್ಕಳು ಪೂಜೆ ಸಲ್ಲಿಸುತ್ತಾರೆ. ನಂತರ ದೇವರ ಕಾರ್ಯ ಮುಗಿದ ನಂತರ ಮನೆಯವರೆಲ್ಲರೂ ಕೂಡಿ ಊಟ ಮಾಡುತ್ತಾರೆ. ಸಂಜೆ ಹೆಣ್ಣು ಮಕ್ಕಳು ಮನೆ ಮನೆಗೆ ತೆರಳಿ ಪೂಜಿತವಾದ ಮಣ್ಣೆತ್ತುಗಳನ್ನು ಆರತಿಮಾಡಿ ಭಕ್ತಿಯಿಂದ ಪೂಜಿಸಿ ಸಂಭ್ರಮಿಸುತ್ತಾರೆ.
ಮರುದಿನ ಮಕ್ಕಳು ಮಣ್ಣೆತ್ತುಗಳನ್ನು ತೆಗೆದುಕೊಂಡು ಆ ಎತ್ತುಗಳಲ್ಲಿ ಒಂದು ಎತ್ತಿನ ಕಾಲು ಮುರಿದು ಗಂಗಾಳದಲ್ಲಿ ಇಟ್ಟುಕೊಂಡು ಮನೆ ಮನೆಗೆ ತೆರಳಿ “ಎಂಟತ್ತಿನ್ಯಾಗ ಒಂದು ಕುಂಟೆತ್ತು ಬಂದೈತಿ ಜೋಳ ನೀಡಿರಿ” ಎಂಬು ಜೋಳ, ಕಾಳು ಕಡಿ ನೀಡಿಸಿಕೊಂಡು ಬಂದು ಆ ಕಾಳುಗಳನ್ನ ಮಾರಿ ಅದಲ್ಲಿ ಕಾಯಿ , ಕರ್ಪೂರ ಊದಭತ್ತಿ ಹಾಗೂ ಪಂಚಪಳಾರ ಹೀಗೆ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಹೊಳಿ, ಕೆರೆ ಇಲ್ಲವೆ ಹಳ್ಳಗಳಿಗೆ ಹೋಗಿ ಆ ಎತ್ತುಗಳ ಮುಖ ತೋಳಿದು ಪೋಜೆ ಮಾಡಿ ಪಂಚಪಳಾರ ಹಾಕಿ ಭಕ್ತಿಯಿಂದ ಕೈಮುಗಿದು ಪಳಾರವನ್ನು ದಾರಿಯಲ್ಲಿ ಎಲ್ಲರಿಗೂ ಹಂಚುತ್ತಾರೆ ಹೀಗೆ ಮಕ್ಕಳು ಮಣ್ಣೆತ್ತಿನ ಅಮವಾಸ್ಯೆ ಆಚರಿಸುತ್ತಾರೆ. ಹಿರಿಯರು ನಾಡಿನ ಸಮೃದ್ಧಿಗಾಗಿ ಮಳೆ, ಬೆಳೆ ಚನ್ನಾಗಿ ಬರಲಿ ಎಂದು ಬಸವಣ್ಣ ದೇವರಲ್ಲಿ ಬೇಡಿಕೊಳ್ಳುತ್ತಾರೆ.
ಆದರೆ 2020 ರಿಂದ ಕೊರೋನಾ ಮಹಾಮಾರಿ ನಾಡಿನ್ಯಾಗ ಒಕ್ಕರಿಸಿಕೊಂಡು ಹಬ್ಬದ ಕಳೆಯನ್ನು ಕಳೆದಿದೆ.ಇಷ್ಟೆ ಅಲ್ಲದೆ ಮುಂಗಾರು ಮಳೆ ಸರಿಯಾಗಿ ಆಗದೆ ರೈತ ಕಂಗಾಲಾಗಿದ್ದಾನೆ. ಇದರಲ್ಲಿ ನಾವುಗಳು ಈ ಹಬ್ಬವನ್ನು ಸರಳವಾಗಿ ಆಚರಿಸೋಣ. ಹಾಗೂ ಈ ಮಹಾಮಾರಿ ಕೊರೊನಾ ಬೇಗ ತೊಲಗಲಿ ಹಾಗೂ ಮಳೆ ಬೆಳೆ ಚನ್ನಾಗಿ ಬರಲಿ ಎಂದು ಆ ಬಸವಣ್ಣ ದೇವರಲ್ಲಿ ಪ್ರಾರ್ಥಿಸೋಣ.
- ಶ್ರೀ ಎಸ್.ಕೆ.ಆಡಿನ ರಾಜ್ಯ ತಾಂತ್ರಿಕ ಮುಖ್ಯಸ್ಥರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ
ಪೊ.ನಂ:900866250.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ