ಶುಕ್ರವಾರ, ಜುಲೈ 9, 2021

ಭೂತ ಅಥವಾ ದೆವ್ವ (ಲೇಖನ) - ಶ್ರಿಮತಿ ಸುಮಂಗಲಾ ಕೃ. ಕೊಪ್ಪರದ.

ಭೂತ ಅಥವಾ ದೆವ್ವ

 ‘ಭೂತ’ ಅಥವಾ ‘ದೆವ್ವ’ ಎಂಬ ಎರಡಕ್ಷರದ ಕಾಲ್ಪನಿಕ ಪದವೇ ದುಷ್ಟ ಗುಣಗಳ ಆಗರ.ದೇವರು ಮತ್ತು ದೆವ್ವ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ದೇವರು ಎನ್ನುವ ಅದ್ಭುತಶಕ್ತಿ ನಂಬಿದವರು ದೆವ್ವ ಎನ್ನುವ ದುಷ್ಟಶಕ್ತಿಯನ್ನು ನಂಬುತ್ತಾರೆ.ಒಳಿತಿನ ಸಂಕೇತ ದೇವರು ಎಂದು ಭಕ್ತಿಭಾವದಿಂದ ನಂಬಿದರೆ ದುಷ್ಟ ಸಂಕೇತವಾಗಿ ದೆವ್ವವನ್ನು ನಂಬುತ್ತೇವೆ.
                ಭೂತ ಅಥವಾ ದೆವ್ವ ಎಂಬ ಪದ ಒಂದೇ ಶಬ್ದಕ್ಕೆ ಸೀಮಿತವಲ್ಲ. ಸೈತಾನ, ಯಕ್ಷ, ಯಕ್ಷಿ, ಮೋಹಿನಿ, ಭ್ರಮೆ, ಭ್ರಾಂತಿ, ಗುಮ್ಮ, ಭಯೋತ್ಪಾದಕ ವಸ್ತು ಹೀಗೆ ಹಲವಾರು ವಿಭಿನ್ನ ಗೂಡಾರ್ಥಗಳಿಂದ ಎರಡಕ್ಷರದ ಈ ಪದ ಬಿಂಬಿತವಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ವ್ಯಕ್ತಿಗಳ ಗುಣವನ್ನು ಆಧರಿಸಿ ದೆವ್ವದ ಪದ ಬಳಕೆಯಾಗುತ್ತದೆ .
                ಹುಟ್ಟಿದ ಪ್ರತಿಯೊಂದು ಜೀವಿ ಮರಣಿಸಲೇಬೇಕು.ಈ ಜೀವನ್ಮರಣದ ಹೋರಾಟದಲ್ಲಿ ಆತ್ಮಹತ್ಯೆ, ಅಸಹಜ, ರೋಗ ರುಜಿನಗಳಿಂದ, ವೃದ್ಧಾಪ್ಯದ, ಅಂಗವೈಕಲ್ಯ, ಚಿಂತೆ ,ಹೀಗೆ ಅನೇಕ ಸ್ಥಿತಿಗಳಲ್ಲಿ ಮರಣಿಸಿದರೆ ಸತ್ತ ವ್ಯಕ್ತಿಯ ಆತ್ಮ ಅಂತರ್ರ್ಪಿಶಾಚಿಯಾಗಿ ಅಲೆಯುತ್ತದೆ ಎಂಬ ಒಂದು ಬಲವಾದ ನಂಬಿಕೆ ಹಲವರ ಮನದ ಮೂಲೆಯಲ್ಲಿ ಅಡಕವಾಗಿದೆ. ಹೀಗಾಗಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಸಹಜ ಸಾವನ್ನು ಬಯಸುತ್ತಾನೆ.  ಅಸಹಜ ಸಾವುಗಳಿಂದ ಅಂತರಾತ್ಮವು ತಾವು ಪಡೆಯದೇ ಇರುವ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು  ಬದುಕಿರುವವರನ್ನು ತೊಂದರೆಗೊಳಪಡಿಸಿ ಸಂತೋಷ ಪಡುತ್ತಾರೆಂಬ ಅಂತೆ ಕಂತೆಗಳ ಕಥಾ ಸರಣಿಗಳನ್ನು ಚಲನಚಿತ್ರಗಳನ್ನು ನೋಡಿ ತಿಳಿಯುತ್ತೇವೆ.
             ಯಾರಾದರೂ ಒಬ್ಬ ವ್ಯಕ್ತಿ ಅಥವಾ ಮಹಿಳೆ ಒಂದು ವಿಷಯವಾಗಿ ಅತಿಯಾಗಿ ಪೀಡಿಸಿದಾಗ ಸಹಜವಾಗಿ ‘ಏನು ದೆವ್ವ ಕಾಡಿದಂತೆ ಕಾಡುತ್ತೀಯಾ? ಎಂಬ ಮಾತು ಜನಜನಿತ.ರಾತ್ರಿಯ ವೇಳೆಯಲ್ಲಿ ಗೆಜ್ಜೆಯ ಶಬ್ದ ಧ್ವನಿ ‘ಭ್ರಮೆ’ ಎಂಬ’ ಮೋಹಿನಿ’ಯನ್ನು ನೆನಪಿಸುತ್ತದೆ.   ಮಕ್ಕಳು ಅಳುವಾಗ ಅವರನ್ನು ಸುಮ್ಮನಿರಿಸಲು” ಗುಮ್ಮ ಬಂತು ಗುಮ್ಮ” ಎಂದು ಹೇಳುವುದನ್ನು ಕೇಳಿದ್ದೇವೆ.ಅತಿಯಾಗಿ ಕಾಡಿಸಿದಾಗ ಸೈತಾನನಿಗೆ ಹೋಲಿಸುತ್ತಾರೆ.ಆಕಾಶದಿಂದ ಧ್ವನಿ ಬಂದಂತೆ ಭ್ರಮೆಯಲ್ಲಿದ್ದಾಗ ಯಕ್ಷ- ಯಕ್ಷಿಣಿಯರ  ಕಲ್ಪನೆಯಿಂದ ಬಿಂಬಿಸುತ್ತಾರೆ.ಅಪಾಯಕಾರಿ ವಸ್ತುಗಳನ್ನು ಮನೆಗೊಯ್ದು ಅನುಭವಿಸಿದ ತೊಂದರೆಗಳಿಂದ ಬೇಸತ್ತು  “ದಾರಿಯಲ್ಲಿದ್ದ ಮಾರಿಯನ್ನು ಮನೆಯೊಳಗೊಯ್ಯದಂತೆ”ಎಂದು ಭೂತವನ್ನು ಕುರಿತು ಹೇಳುವುದು ಸರ್ವೇ ಸಾಮಾನ್ಯ .
                    ಹೀಗೆ ‘ಭೂತ ‘ಅನ್ನುವ ಕಾಲ್ಪನಿಕ ಪದವು ಪುರುಷ ಮತ್ತು ಸ್ತ್ರೀ ಸೂಚಕವಾಗಿ ಗುರುತಿಸಲ್ಪಟ್ಟು, ವಿವಿಧ ಗೂಡಾರ್ಥ ಗಳಿಂದ ತನ್ನದೇ ಒಂದು ಸ್ಥಾನವನ್ನು ಜನರ ಮನದಲ್ಲಿ ಬೇರು ಬಿಟ್ಟಿದೆ. ಸಾಕಷ್ಟು ಉದಾಹರಣೆಗಳು ನಮಗೆ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಸಿಗುತ್ತವೆ.ಒಬ್ಬ ಪುರುಷ ಮಹಿಳೆ ಅಥವಾ ಯಾವುದೋ ವಯೋಮಾನದವರು ಅಸಹಜವಾಗಿ ವರ್ತಿಸುತ್ತಿದ್ದಾಗ ಇವರಿಗೆ ದೆವ್ವ ಹಿಡಿದಿದೆ ಎಂದು ಹೇಳಿ ದೆವ್ವ ಬಿಡಿಸುವವರ ಬಳಿ ಕರೆದುಕೊಂಡು ಹೋಗಿ ದೈಹಿಕ ಮತ್ತು ಮಾನಸಿಕ ಚಿತ್ರ ಹಿಂಸೆಗಳಿಂದ ಅವರಲ್ಲಿರುವ ಅಂತರಾತ್ಮ ಅಥವಾ ಅಂತರರ್ಪಿಶಾಚಿ ಎಂಬ ಭ್ರಮೆಯಿಂದ ಅವರನ್ನು ಗುಣಮುಖರನ್ನಾಗಿ ಮಾಡುವಂತಹ ಮನೋವೈದ್ಯ ವೃತ್ತಿಯನ್ನು ಹಲವಾರು ತಜ್ಞರು ಮಾಡುತ್ತಾರೆ .ಹೆಚ್ಚಾಗಿ ಮಸೀದಿಗಳಲ್ಲಿ ಇಂತಹ ಒಂದು ದೆವ್ವ ಬಿಡಿಸುವ ಕೆಲಸ ಮಾಡುವ ಹಲವು ಚಿತ್ರಣಗಳನ್ನು ನೈಜ ಜೀವನದಲ್ಲಿ ನೋಡುತ್ತೇವೆ .ಅಲ್ಲದೆ ವೈಜ್ಞಾನಿಕವಾಗಿ ಮಾನಸಿಕ ಆಸ್ಪತ್ರೆಗಳಲ್ಲಿ ಬುದ್ಧಿ ಭ್ರಮಣೆಯಿಂದ ಕೂಡಿರುವವರು ಎಂದು ಚಿಕಿತ್ಸೆ ಕೊಡುವುದನ್ನು ಗಮನಿಸುತ್ತೇವೆ.
                ದೇವರು ಇರುವುದು ಎಷ್ಟು ಸತ್ಯವೋ ದೆವ್ವವೂ ಇರುವುದು ಅಷ್ಟೇ ಸತ್ಯ ಎಂದು ವಾದಿಸುವವರೂ ಇದ್ದಾರೆ .”ಕೊಲೢುವವನಿಗಿಂತ ಕಾಯುವವನು ಮೇಲು” ಎಂದು ಭೂತವನ್ನು ನಂಬದೆ ದೇವರನ್ನು ನಂಬುವವರು ಇದ್ದಾರೆ.ಆದ್ದರಿಂದ ಹಲವು ಗೂಡಾರ್ಥ ವಿಚಾರಗಳಿಂದ ಬಿಂಬಿತವಾದ ಈ ಭೂತ ಅಥವಾ ದೆವ್ವ ಎನ್ನುವ ಪದ ಕೆಟ್ಟದ್ದನ್ನು ಮಾಡುವ ಒಂದು ದುಷ್ಟ ಶಕ್ತಿ ಎಂಬುದು ಹಲವರ ವಾದ .ಭೂತ ಅಥವಾ ದೆವ್ವ ಗಳಿಂದ ಭಯಭೀತರಾಗಿ ಮರಣ ಹೊಂದಿದವರ ಸಂಖ್ಯೆಯೂ ಅಪಾರ .ಸಾಕಷ್ಟು ಜನರು ದೆವ್ವವನ್ನು ನಾವು ಕಂಡಿದ್ದೇವೆ ಎಂದು ವಾದಿಸುವವರೂ ಇದ್ದಾರೆ .ಅವುಗಳಿಂದ ಅನುಭವಿಸಿದ ತೊಂದರೆಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾರೆ .ಒಟ್ಟಾರೆಯಾಗಿ ಭೂತದ ಬಗ್ಗೆ ಇರುವ ಕಲ್ಪನೆಯು ಪ್ರತಿಯೊಬ್ಬರ ವೈಯಕ್ತಿಕ ವಿಚಾರಕ್ಕೆ ಸಂಬಂಧಪಟ್ಟಂತಹ ವಿಷಯ. ನಂಬಿಕೆ ಮತ್ತು ಅಪನಂಬಿಕೆಗಳ ನಡುವೆ ಬದುಕು ಸಾಗುತ್ತಿದೆಯಂದರೊ ತಪ್ಪಾಗಲಾರದು .ವೈಯಕ್ತಿಕವಾಗಿ ಭೂತದ ಬಗ್ಗೆ ನನ್ನ ಕಲ್ಪನೆ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳು ಅಡಕವಾಗಿದ್ದರೆ ದೇವರು ಕಾಣಿಸುತ್ತಾನೆ. ದುಷ್ಟ ಗುಣಗಳು ಅಡಕವಾಗಿದ್ದರೆ ಭೂತ ಕಾಣಿಸುತ್ತದೆ .ಇಲ್ಲಿ ಅನುಭವವೇ ಮುಖ್ಯವಾದಂತ ತಿಳಿವಳಿಕೆ ಎನ್ನಬಹುದು.
               -   ಶ್ರೀಮತಿ ಸುಮಂಗಲಾ ಕೃ. ಕೊಪ್ಪರದ
                   ಶಿಕ್ಷಕಿ ಎ.ಸಿ.ಓ ಇಳಕಲ್ 
     (ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಇಲಕಲ್ಲ ).



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...