ಆಡದೇ ಮಾಡುವವನು ರೂಢಿಯೊಳಗೆ ಉತ್ತಮನು !
ಪ್ರಸ್ತುತ ದಿನಗಳಲ್ಲಿ ಆಧುನಿಕತೆಯ ವ್ಯಾಪ್ತಿಯ ತಂತ್ರಜ್ಞಾನದ ಪ್ರಭಾವ ಮನುಷ್ಯ ಕೂತಲ್ಲಿಯೇ ತುದಿ ಬೆರಳಿನ ಸ್ಪರ್ಶದ ಮೂಲಕ ಇಡಿ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳನ್ನು ಕ್ಷಣಾರ್ಧದಲ್ಲಿ ತಿಳಿಯುವ, ಪರಸ್ಪರ ಮುಖಚರ್ಯದ ಮೂಲಕ ವ್ಯವಹರಿಸುವ ,ಕುಶಲೋಪರಿಯನ್ನು ವಿಚಾರಿಸುವ ವಿನೂತನ ಕಾಲಘಟ್ಟದಲ್ಲಿ ಜೀವಿಸುವಂತಾಗಿದೆ. ಇದರ ಪ್ರಭಾವದಿಂದ ವಿಸ್ತಾರವಾದ ಇಡೀ ಜಗತ್ತು ಸಂಕುಚಿತವಾಗಿ ಗೋಚರವಾಗುತ್ತದೆ. ಇದೆಲ್ಲದಕ್ಕೂ ಕಾರಣ ಮನುಷ್ಯನ ಬೌದ್ಧಿಕ ಮಟ್ಟದ ಬೆಳವಣಿಗೆ. ಇತರ ಜೀವಜಂತುಗಳಿಗೆ ಹೋಲಿಸಿಕೊಂಡರೆ, ಮಾನವನಲ್ಲಿರುವ ಚಿಂತನೆ, ವಿವೇಕವೆಂಬ ಅಮೂಲ್ಯ ರತ್ನಗಳು ತನ್ನ ಜ್ಞಾನಾತ್ಮಕವಲಯವನ್ನು ಉನ್ನತಿಕರಿಸಿಕೊಳ್ಳಲು ನೆರವಾಗುವುದರ ಜೊತೆಗೆ ಆಧುನಿಕ ಅವಿಷ್ಕಾರಕ್ಕೆ ಅಣಿಯಾಗಿದೆ.
ಚಿಂತೆಯು ಚಿತೆಯನ್ನು ತರುತ್ತದೆ. ಚಿಂತನೆಯು ವ್ಯಕ್ತಿಯ ವ್ಯಕ್ತಿತ್ವವನ್ನು ಉನ್ನತಿಕರಿಸಲು , ಅದರಲ್ಲೂ ಶಾಂತಿ, ದಾಂತಿ, ನಿರಪೇಕ್ಷ , ದಯೆ ಮೊದಲಾದ ಸದ್ಗಣಶೀಲ ಗುಣಗಳನ್ನು ರೂಢಿಸಿಕೊಳ್ಳುವಲ್ಲಿ ನೆರವಾಗುತ್ತದೆ. ಆದರೆ ವಾಸ್ತವದಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಚಿಂತೆಯ ಕೂಪದಲ್ಲಿ ಬಿದ್ದವರ ಸಂಖ್ಯೆ ಹೇರಳವಾಗಿದೆ. ಇದಕ್ಕೆ ಅರಿವಿನ ವಿವೇಕಕ್ಕೆ ಆದ್ಯತೆ ನೀಡದೆ, ಮನಸ್ಸಿಗೆ ಬಂದಂತೆ ವರ್ತಿಸುವ ಪರಿಯೇ ಕಾರಣವಾಗಿರ ಬಹುದಲ್ಲವೆ....
ಇತರ ಜೀವಜಂತುಗಳಿಗಿಂತ ವಿಭಿನ್ನವಾದ ಆಲೋಚನೆ, ವಿವೇಕ, ಚಿಂತನೆ ಮೊದಲಾದ ಗುಣಗಳು ನೆಲೆಗೊಂಡಿರುವುದರಿಂದ ವಿಭಿನ್ನವಾದ ಜೀವನ ಕ್ರಮ ನಡೆಸಲು ಅನುವಾಗಿದೆ. ಅದರಲ್ಲೂ ವಾಕ್ಚಾತುರ್ಯ, ಅಂದರೆ ಮಾತನಾಡುವ ಪ್ರಕ್ರಿಯೆ ಅಥವಾ ಸಂವಾಹನ ಕ್ರಿಯೆ ಯೋಚಿಸುವ, ವಿವೇಕಿಸುವ, ಚಿಂತಿಸುವ, ವಿಷಯಗಳಿಗೆ ಸಂಪರ್ಕ ಸೇತುವೆಯಾಗಿದೆ. ಈ ಮಾತೆಂಬ ಸಂಪರ್ಕ ಸೇತುವೆಗೆ ಅದಮ್ಯ ಶಕ್ತಿಯಿದೆ. ಇಷ್ಟ ಕಷ್ಟಗಳನ್ನು ಪೂರೈಸಿಕೊಳ್ಳಲು, ಪರಸ್ಪರ ಎಲ್ಲರ ಜೊತೆಗೂಡಿ ಬದುಕಲು ಇರುವ ಮುಖ್ಯವಾದ ಆಧಾರವೇ ಮಾತು. ಈ ಮಾತು ಅರಿವಿನಿಂದ ಕೂಡಿದ್ದರೆ ಭವ್ಯ ಜಗತ್ತನ್ನು ಬೆಳಗುವ ಹಾದಿಯಾಗುತ್ತದೆ. ತಿಳುವಳಿಯ ಪರಿಧಿಯನ್ನು ಕಳಚಿದರೆ, ಅದು ವಿವೇಕ ರಹಿತವಾಗಿ ಅಜ್ಞಾನವೆಂಬ ಅಂಧಕಾರದ ಗೂಡಾಗುತ್ತದೆ. ಅಲ್ಲದೆ ಸಮಸ್ಯಾತ್ಮಾಕ ಸುಳಿಯಲ್ಲಿ ನಲುಗುವ, ದುಃಖದ ಮಡುವಿನಲ್ಲಿ ಜೀವಿಸುವ, ಮಾನಸಿಕವಾಗಿ ಬಳಲುವ ಅನಾರೋಗ್ಯದಾಯಕ ವಾತಾವರಣ ಸೃಷ್ಟಿಯಾಗುತ್ತದೆ.
ವಿವೇಕ, ವಿವೇಚನೆ, ಚಿಂತನೆ ಈ ಮೂರು ಪದಗಳ ಒಳಾರ್ಥ ಬಹಳ ಮಹತ್ವವಾದುದು. ಈ ತ್ರಿವಳಿ ಸಾರಗಳು ಮಾತಿನಲ್ಲಿ ಅಡಕವಾದರೆ ಆ ಮಾತು ಜ್ಞಾನ ಜ್ಯೋತಿಯಾಗಿರುತ್ತದೆ. ಅಲ್ಲದೆ ಸರ್ವೋತ್ಕೃಷ್ಟವಾಗಿ, ಪರಮಾರ್ಥವನ್ನು ಸಾಧಿಸಲು, ಸ್ವಚ್ಚಂತಃಕರಣವನ್ನು ಹೊಂದಲು ಕಾರಣೀಯವಾಗುತ್ತದೆ.
ಮಾತು ಮಾತು.... ಮಾತು ಮಾತು.... ಪ್ರಸ್ತುತ ದಿನಗಳಲ್ಲಿ ಎಷ್ಟೆಲ್ಲ ಮಾತುಗಳು ಕೇಳಿ ಬರುತ್ತವೆ. ಸಾಧನೆಯ ಪಥದಲ್ಲಿ ನಡೆದವರ ಬಗ್ಗೆ, ಭವ್ಯ ಜಗದಲ್ಲಿ ಆತ್ಮ ಸಾಕ್ಷಾತ್ಕಾರ ಹೊಂದಿ ಜಗತ್ತಿನ ಬೆಳಕಾಗಿ, ಬಾಳಿ, ಬದುಕಿ, ಅವಿರತ ಕೊಡುಗೆ ನೀಡಿದವರ ಬಗ್ಗೆಯು ಮಾತು, ಕುಂತರು ಮಾತು, ನಿಂತರು ಮಾತು,ಬೆನ್ನ ಹಿಂದೆಯೊಂದು ಮಾತು, ಮುಂದೆಯೊಂದು ಮಾತು, ಕೆಲವರನ್ನು ಓಲೈಸುವ ಆಡಂಬರದ ಮಾತು, ಬರಿ ಮಾತಿನ ಪ್ರಪಂಚವೇ. ಈ ಮಾತು ಎಷ್ಟು ಸತ್ಯಾಸತ್ಯತೆಯನ್ನು ಒಳಗೊಂಡು ವಿಷಯ ಪೂರ್ಣವಾಗಿರುತ್ತದೆ........? ವಾಸ್ತವ ಸತ್ಯವನ್ನು ತಿರುಚಿ ಆಡುವ ಮಾತು ಜೀವನದ ಸಾಧನೆಗೆ ಸಂಪನ್ಮೂಲವಾಗಿ ಮೂಡಿ ಬರುತ್ತದೆಯೇ........?
'ಅರ್ಥವಿಲ್ಲದ ಮಾತು ಅನರ್ಥ' ಎಂಬಂತೆ ' ಹೊಳೆಯಲ್ಲಿ ಹುಣಸೆ ಹಣ್ಣು ತೇದಂತೆ ಕೂಡಿರುತ್ತದೆ ಅಲ್ಲವೆ.....?
ಆಡುವ ಮಾತುಗಳು ನೊಂದವರ ಪಾಲಿನ ಆಶಾಜ್ಯೋತಿಯಾಗಿ, ಅಧರ್ಮವನ್ನು ಜಯಿಸುವ ಧರ್ಮದ ಪಥವಾಗಿ, ನಿರಾಶ್ರಿತರಿಗೆ ಆಶ್ರಯವಾಗಿ, ದೀನ ದಲಿತರ ಏಳಿಗೆಯ ಕ್ರಾಂತಿಯಾಗಿ, ಭವ್ಯ ಜಗತ್ತನ್ನು ಬೆಳಗುವ ದಿವ್ಯ ದೀವಿಗೆಯಾಗಿ, ಅಸತ್ಯದ ಮುಖವಾಡವನ್ನು ಕಳಚುವ ಸತ್ಯವಾಗಿ, ಮೋಹ ಮುಸುಕಿದ ಬುದ್ಧಿಯನ್ನು ವಿನಾಶ ಮಾಡುವ ಸಿದ್ಧಿಯಾಗಿ, ಅಶಾಂತಿಯನ್ನು ತೊಲಗಿಸುವ ಶಾಂತಿಯಾಗಿ, ಅಸಮಾನತೆಯ ದೂಡಿ ಸಮತೆಯನ್ನು ಸಾಧಿಸಿದ ಸಾಧನವಾಗಿ, ದಾಸ್ಯವನ್ನು ಬಂಧಿಸಿ, ಸ್ವಾತಂತ್ರ್ಯವನ್ನು ನೀಡುವ ಪ್ರತಿನಿಧಿಯ ಸತ್ವ ಸಹಿತವಾಗಿ ಮೂಡಿ ಬಂದರೆ ಈ ಸಮಾಜ, ನಾಡು, ದೇಶ ಜಗತ್ತು ಹೇಗಿರುತ್ತದೆ ಅಲ್ಲವೆ...........?
ಪುರಾತನ ಕಾಲದಿಂದಲೂ ಪಾವಿತ್ರ್ಯ, ಜೀವನದ ಪ್ರತಿ ಹಂತದಲ್ಲೂ ನಿದರ್ಶನವಾಗಿ ನಿಲ್ಲುವ ಮಹಾಭಾರತ, ಭಗವದ್ಗೀತೆಯಲ್ಲಿನ ಮಾತುಗಳು ಔಚಿತ್ಯ ಪೂರ್ಣವಾಗಿವೆಯಲ್ಲವೇ.......?
ಕುರುಕ್ಷೇತ್ರಯುದ್ಧದಲ್ಲಿ ಅರ್ಜುನ ಕೃಷ್ಣನೊಡಗೂಡಿ ಯುದ್ಧರಂಗಭೂಮಿಯಲ್ಲಿ ಗುರು ದ್ರೋಣಚಾರ್ಯ, ಅಜ್ಜ ಭೀಷ್ಮ, ದೊಡ್ಡಪ್ಪನ ಮಕ್ಕಳಾದ ಕೌರವರು, ಸಂಬಂಧಿಕರು ಇವರೆ ಮೊದಲಾದವರನ್ನು ನೋಡಿ ಭಾವಪರವಶನಾಗಿ ಇವರೆಲ್ಲರ ಅಂತ್ಯಮಾಡಿ ಸಾಮ್ರಾಟನಾಗಿ, ಸಾಮ್ರಾಜ್ಯ ಆಳುವುದರಲ್ಲಿ ಏನು ಇಲ್ಲ ಎಂದು ಯುದ್ಧವನ್ನು ನಿರಾಕರಿಸುವ ಮಾತುಗಳನ್ನು ಆಡುತ್ತಾನೆ. ಅತಾಶನಾದ ಈ ಸಂದರ್ಭದಲ್ಲಿ ಕೃಷ್ಣ ' ಧರ್ಮವು ಅಧರ್ಮವನ್ನು ಜಯಿಸಬೇಕು, ಅದು ಈ ಸೃಷ್ಟಿಯ ನಿಯಮ, ಅಧರ್ಮವನ್ನು ಬೆಂಬಲಿಸುವ ಪ್ರತಿಯೊಬ್ಬರಿಗೂ ಶಿಕ್ಷೆ ತಪ್ಪಿದ್ದಲ್ಲ. ಹೃದಯ ದೌರ್ಬಲ್ಯವನ್ನು ಬಿಡು , ಧರ್ಮವನ್ನು ರಕ್ಷಣೆ ಮಾಡಲು, ಧರ್ಮಸಾಮ್ರಾಜ್ಯ ಸ್ಥಾಪಿಸುವ ಸಲುವಾಗಿ ಯುದ್ಧಮಾಡು ಎಂದು ಅರ್ಜುನನಲ್ಲಿ ಭಗವದ್ಗೀತೆಯನ್ನು ಬೋಧನೆ ಮಾಡಿದ ಆ ಮಾತಿನ ಸ್ವಾರಸ್ಯ ಅಂದಿಗೂ, ಇಂದಿಗೂ, ಎಂದೆಂದಿಗೂ ವಾಸ್ತವವಾದುದೂ, ಮೌಲ್ಯಾಧಾರಿತವಾದುದೂ ಎಂಬುದನ್ನು ಮರೆಯಲಾದೀತೆ..........?
ಯುವಶಕ್ತಿಗಳು ಈ ದೇಶದ ಆಧಾರಸ್ತಂಭ, ಅವರಲ್ಲಿರು ಸುಪ್ತ ಚೇತನವನ್ನು ಅರಿಯುವಂತೆ, ಈ ನೆಲದ ಆಧ್ಯಾತ್ಮಿಕಶಕ್ತಿ, ತಾತ್ವಿಕಶಕ್ತಿ, ಹಾಗೂ ಆತ್ಮಾಸಾಕ್ಷಾತ್ಕಾರದ ತತ್ವಗಳು ಹೇಗೆಲ್ಲ ಕಾರಣವಾಗುತ್ತವೆಂಬ ಮಹತ್ವಾಕಾಂಕ್ಷೆಯನ್ನು ಮನವರಿಕೆ ಮಾಡಿ ಕೊಟ್ಟ ಸಾವಿರದ ವಿವೇಕಾನಂದರು ಮಾತುಗಳನ್ನು ಮರೆಯಲಾದೀತೆ..........?
ವಿಶ್ವ ಧರ್ಮ ಚಿಕಾಗೊ ಸಮ್ಮೇಳನದಲ್ಲಿ ಪ್ರೀತಿಯ 'ಸಹೋದರ, ಸಹೋದರಿಯರೇ ಮಾತಿನ ಮೂಲಕ ಭಾರತಾಂಬೆಯ ಮಡಿಲಿನಲ್ಲಿರುವ ಅದಮ್ಯ, ಅದ್ವಿತೀಯ ಆತ್ಮಾಸಾಕ್ಷಾತ್ಕಾರದ ಮಾತುಗಳು, ಇಡೀ ಜಗತ್ತಿನಲ್ಲಿ ಭಾರತ ಮಾತೆಯ ಕಡೆಗೆ ಮುಖ ಮಾಡುವಂತೆ ಮಾಡಿತು.ಅಷ್ಟು ಶಕ್ತಿ ಮಾತಿಗೆ ಇದೆಯಲ್ಲವೆ......?
ಈ ರೀತಿಯಾಗಿ ಮಾತು ಪರಿಪೂರ್ಣ ವ್ಯಕ್ತಿತ್ವವನ್ನು ಸಾಧಿಸಲು ಅನುವಾಗಬೇಕೆ ಹೊರತು, ಸಮಾಜದಲ್ಲಿ ಅಶಾಂತಿಯನ್ನು, ಅನೈಕ್ಯತೆಯನ್ನು , ತಾರತಮ್ಯಗಳನ್ನು ಸೃಷ್ಟಿಸುವಂತೆ ಇರಬಾರದು. ಬದಲಿಗೆ ಉತ್ಸಾಹ, ಉತ್ತೇಜನ, ಆರೋಗ್ಯದಾಯಕ ಕಾರ್ಯಸಾಧನೆಯನ್ನು ವೃದ್ಧಿಸುವಂತೆ ಇರಬೇಕು.
ಮೊಹಮ್ಮದ್ ಬೀನ್ ತುಘಲಕ್ ಮಂಗೋಲಿಯನರ ದಾಳಿಯನ್ನು ತಡೆಯಲು ತನ್ನ ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ಬದಲಿಸಿದ್ದರೆ ಸಾಕಿತ್ತು. ಬದಲಿಗೆ ಇಡಿ ಸಾಮ್ರಾಜ್ಯದ ಜನರನ್ನು ದೇವಗಿರಿಗೆ ಬರುವಂತೆ ಆಜ್ಞೆ ಮಾಡಿದ ಮಾತು ಏನೆಲ್ಲ ಅವಾಂತರಗಳಿಗೆ ಕಾರಣವಾಗಿ, ಇತಿಹಾಸ ಪುಟಗಳಲ್ಲಿ ' ದ್ವಂದ್ವ ನಿಲುವಿನ ರಾಜ' ಎಂಬ ಪಟ್ಟವನ್ನು ತಂದು ಕೊಟ್ಟಿತು. ಈ ರೀತಿಯ ದ್ವಂದ್ವ ಮಾತುಗಳನ್ನು ಉನ್ನತ ಹಂತದಲ್ಲಿರುವವರು ಆಡುವುದರಿಂದ ಇಹಪರಗಳ ಅಭಿವೃದ್ಧಿಗೆ ತೊಡಕಾಗುತ್ತದೆ. ಇದನ್ನು ವರ್ತಮಾನದಲ್ಲಿ ಅರಿಯದಿರುವುದು ದುರಾದೃಷ್ಟಕರವಾಗಿದೆ.
ಸುಮಾರು ಎರಡು ಶತಮಾನಗಳ ಕಾಲ ಭಾರತವನ್ನು ಆಳಿದ ಬ್ರಿಟಿಷರ ವಿರುದ್ಧ ಹೋರಾಡಲು ಈ ದೇಶದ ಜನರಲ್ಲಿ ದೇಶಪ್ರೇಮ, ಸ್ವದೇಶಿ ಉತ್ಪನ್ನಗಳ ಉನ್ನತಿಗೆ ರಾಷ್ಟ್ರನಾಯಕರು ಆಡಿರುವ ಅತ್ಯಮೂಲ್ಯ ಮಾತುಗಳು ' ನುಡಿದರೆ ಮುತ್ತಿನ ಹಾರದಂತೆ ಇರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತೆ ಇರಬೇಕು ' ಎಂಬ ಅಣ್ಣನ ವಚನದ ತಾತ್ಪರ್ಯದಂತೆ ಕೂಡಿತ್ತು. ತಿಲಕರ ' ಸ್ವರಾಜ್ಯ ನನ್ನ ಆ ಜನ್ಮ ಸಿದ್ಧ ಹಕ್ಕು. ಅದನ್ನು ಪಡೆದೆ ತೀರುತ್ತೇನೆ' ನೇತಾಜಿಯವರ ' ಒಂದು ಹನಿ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ'. ಮಹಾತ್ಮಾ ಗಾಂಧಿಯವರ 'ಮಾಡು ಇಲ್ಲವೇ ಮಡಿ' ಇವೆ ಮುಂತಾದ ಮಾತುಗಳು ವಿವಿಧ ರೂಪಗಳಲ್ಲಿ ಕಂಡು ಬಂದರೂ ಮೂಲ ಮಂತ್ರ ಒಂದೆಯಾಗಿತ್ತು. ಪರಕೀಯರ ದಾಸ್ಯವನ್ನು ತೊಲಗಿಸಿ, ಭಾರತಾಂಬೆಯನ್ನು ಜನರನ್ನು, ಸಂಪತ್ತನ್ನು, ಸ್ವತಂತ್ರ ಗೊಳಿಸುವುದಾಗಿತ್ತು. ಇದಕ್ಕೆ ಪೂರಕವಾಗಿ ದೇಶ ಸ್ವಾತಂತ್ರ್ಯ ಹೊಂದುವಂತಾಗಿ ಲಕ್ಷಾಂತರ ದೇಶಭಕ್ತರ ಉಗಮಕ್ಕೂ ಮೌಲ್ಯಾಧಾರಿತ ಮಾತುಗಳು ಕಾರಣವಾಯಿತು.
ಆದರೆ ಪ್ರಸ್ತುತ ದಿನಗಳಲ್ಲಿ ನಾಡ , ದೇಶದ ಜನಪ್ರತಿನಿಧಿಗಳಿಂದ ಬರುವ ಮಾತುಗಳು ಸ್ವಾತಂತ್ರ್ಯೋತ್ತರ ಕಾಲದ ಅಭಿಮಾನವನ್ನು ಮೂಡಿಸುವಂತೆಯಿದೆಯೇ....?
ಭ್ರಷ್ಟಾಚಾರ ವನ್ನು ತಡೆಯುವ ನಿಷ್ಟಾವಂತ ಅಧಿಕಾರಿಗಳಿಗೆ ಸದಾ ಬೆನ್ನೆಲುಬಾಗಿ ನಿಂತು, ಪ್ರೋತ್ಸಾಹದ ನುಡಿಗಳೊಂದಿಗೆ ನೆರವಾಗುವುದನ್ನು ಬಿಟ್ಟು, ಭ್ರಷ್ಟರ ಪರ ಪ್ರಾಮಾಣಿಕ ವ್ಯಕ್ತಿಗಳ ಶಕ್ತಿ ಕುಂದಿಸುಲು ಒಟ್ಟಾಗಿ ಆಡುವ ಭ್ರಷ್ಟ ಮಾತುಗಳು ಸಮಾಜಕ್ಕೆ, ನಾಡಿಗೆ, ದೇಶಕ್ಕೆ ಕಪ್ಪು ಚುಕ್ಕೆ ತರುವುದರ ಜೊತೆಗೆ ಜನತೆಯಲ್ಲಿ ಹತಾಶೆ ಭಾವನೆಯನ್ನು ಉಂಟುಮಾಡುವ ವಾತಾವರಣವನ್ನು ಸೃಷ್ಟಿಸುತ್ತದೆ ಎಂಬ ಪರಿಜ್ಞಾನ ಇಂದು ಇಲ್ಲದಂತಾಗಿರುವುದು ಪ್ರಜಾರಾಜ್ಯಕ್ಕೆ ಕಳಂಕವಲ್ಲವೆ.
' ಒಬ್ಬ ನಾಯಕನಿಗೆ ಎಷ್ಟು ಮಂದಿ ಬೆಂಬಲಿಗರು ಇರುತ್ತಾರೆ ಎಂಬ ಕಾರಣಕ್ಕಾಗಿ ಆತನನ್ನು ಉತ್ತಮ ನಾಯಕನೆಂದು ಪರಿಗಣಿಸಲು ಆಗುವುದಿಲ್ಲ. ಆದರೆ ಎಷ್ಟು ಮಂದಿ ನಾಯಕರನ್ನು ಸೃಷ್ಟಿಸಿದ ಎಂಬುದರ ಮೇಲೆ ಆತನ ಸಾಮರ್ಥ್ಯವನ್ನು ಅಳೆಯ ಬಹುದು " ಎಂತಹ ಅದ್ಭುತವಾದ ಮಾತನ್ನು ಗಾಂಧೀಜಿಯವರು ' ನಾಯಕ' ಎನಿಸಿಕೊಂಡವರ ಬಗ್ಗೆ ಹೇಳಿದ್ದಾರೆ ಅಲ್ಲವೆ........
ಈ ರೀತಿಯ ಚಿಂತನೆಯಿಂದ ಕೂಡಿದ ಮಾತುಗಳಿಂದಲ್ಲೆ ಅಂದಿನ ಸ್ವಾತಂತ್ರ್ಯ ಹೋರಾಟದ ಚಳುವಳಿಗೆ ದೇಶಭಕ್ತರೂ ಸಾಗರದಂತೆ ಒಟ್ಟಾಗಿ ಬರುತ್ತಿದ್ದರು.
ಆದರೆ ಇಂದು ವೈಯಕ್ತಿಕ ಹಿತಾಶಕ್ತಿ, ಸ್ವ ಏಳಿಗೆ ಹೆಚ್ಚಾಗಿ ತಾಂಡವಾಡುತ್ತಿದೆ. ಇದರಿಂದ ಭವಿಷ್ಯದ ಉತ್ತಮ ರಾಷ್ಟ್ರ ಯುವ ನಾಯಕರ ನಿರ್ಮಾಣ ಎಷ್ಟರ ಮಟ್ಟಿಗೆ ಸಾಗಿದೆ.......?
' ಮಾತೇ ಮುತ್ತು, ಮಾತೇ ಮೃತ್ಯು ' ಎಂಬ ಜನಪದರ ಮೌಲ್ಯಾಧಾರಿತ ಸತ್ಯಾಂಶವನ್ನು ಅರಿಯದೆ ಎಲುಬಿಲ್ಲದ ನಾಲಿಗೆಯಲಿ ಮನ ಬಂದಂತೆ ಮಾತನಾಡುವ ಪರಿ ವ್ಯಕ್ತಿತ್ವಕ್ಕೆ ಮಸಿ ಬಳಿದು ಕೊಳ್ಳುವಂತೆ ಮಾಡಿದೆ.
ಅದರಲ್ಲೂ ಇತ್ತೀಚೆಗೆ ಕೆಲವು ದಿನಗಳ ಹಿಂದೆ ನಡೆದ ಜನಪ್ರತಿನಿಧಿಗಳ ವಾಕ್ ಸಮರ ಅಬ್ಬಾ......... ನಿಜಕ್ಕೂ ಜನರ ಹಿತವನ್ನು ಬಯಸುವ, ಅವರ ಏಳಿಗೆಗೆ ಅವಿರತವಾಗಿ ದುಡಿಯುವ, ಸಖಿರಾಜ್ಯವನ್ನು ನಿರ್ಮಿಸುವ ಪರಿಕಲ್ಪನೆಯ ' ಜನ ನಾಯಕನೆಂಬ' ಕಂಕಣ ಬದ್ಧ ಜನ ಪ್ರತಿನಿಧಿಗಳೇ ಎಂದು ಚಿಂತಿಸುವಂತೆ ಮಾಡಿದೆ.
ಭಾರತ ಇತಿಹಾಸದಲ್ಲಿ ಮೌರ್ಯ ಸಾಮ್ರಾಜ್ಯದ ಏಳಿಗೆ ಕತ್ತಲೆಯಿಂದ ಬೆಳಕಿನತ್ತ ಕಾಲಿಡುವ ಕಾಲವಾಗಿತ್ತು' ಎನ್ನುವ ವಿ ಎಸ್ ಸ್ಮಿತ್ ಅವರ ಮಾತುಗಳು ರಾಜಗುರು ಚಾಣಕ್ಯನ ನೀತಿ ಬೋಧನೆ, ಮಾರ್ಗದರ್ಶನ, ಆಡಳಿತಾತ್ಮಕ ಮಾತುಗಳ ಪ್ರಭಾವ ಈ ಸಾಮ್ರಾಜ್ಯದ ಸಾಮ್ರಾಟರ ಮೇಲೆ ಪರಿಣಾಮ ಬೀರಿತು ಎಂಬುದನ್ನು ಸಾರುವು ಅವಶ್ಯಕತೆಯಿಲ್ಲ. ಇಂದು ಇಂತಹ ಬೆಳಕಿನ ಪರಿಧಿಯನ್ನು ವಿಸ್ತರಿಸಿ, ಅಜ್ಞಾನವನ್ನು ತೊಲಗಿಸುವ ನುಡಿಗಳು ರಾಜಕೀಯ ಕ್ಷೇತ್ರದಲ್ಲಿ ಬರುತ್ತಿದಿಯೇ...........?
ಆಧುನಿಕ ಮೈಸೂರಿನ ನಿರ್ಮಾಪಕ ನಾಲ್ವಡಿ ಕೃಷ್ಣರಾಜ ಒಡೆಯರ ಕನಸಿನ ಕೂಸು 'ಕೃಷ್ಣ ರಾಜ ಸಾಗರ ಅಣೆಕಟ್ಟು ' ಇದರ ಕಾಮಗಾರಿಯ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆ ಉದ್ಭವವಾದಗ ರಾಜಮಾತೆ ಕೆಂಪನಂಜಮಣ್ಮಿಯವರು ತಾವು ಧರಿಸುತ್ತಿದ್ದ ವಜ್ರ ಬಂಗಾರ ಆಭರಣಗಳನ್ನು ಮಗನ ಕೈಯಲ್ಲಿತ್ತು ಜನರ ಉಪಯೋಗಕ್ಕೆ ಬಾರದ ಈ ಶೃಂಗಾರ ವ್ಯರ್ಥ, ಪ್ರಜೆಗಳ ಏಳಿಗೆಯೇ ನಮ್ಮ ಏಳಿಗೆ. ಅವರ ಕಷ್ಟಗಳನ್ನು ದೂರ ಮಾಡಿ, ರಾಜ್ಯದ ಕೃಷಿ ಚಟುವಟಿಕೆಗೆ ಅನುಕೂಲವಾಗುವ ಈ ಯೋಜನೆ ನಿಲ್ಲಬಾರದು ಎಂದು ಉತ್ತೇಜನ ನೀಡಿದ ಮಾತು 'ರಾಜ ಪ್ರತ್ಯಕ್ಷ ದೇವರು' ಎಂಬುದನ್ನು ಸಾರುತ್ತದೆ.
ಆದರೆ ' ಜನ ಸೇವೆಯೇ, ಜನಾರ್ಧನ ಸೇವೆ' ಎಂಬ ನುಡಿ ಇಂದು ಕೇವಲ ಬರವಣಿಗೆಯ ಮಾತಾಗಿದೆ. ಪ್ರಯೋಗಿಕವಾಗಿ ಕಾರ್ಯರೂಪಕ್ಕೆ ಬರುತ್ತಿದಿಯೇ...........
ಏಷ್ಯಾದ ಖಂಡದಲ್ಲಿ ಮೊದಲ ಜಲವಿದ್ಯುತ್ ಉತ್ಪಾದನೆಗೆ ಕಾರಣವಾದ, ಲಕ್ಷಾಂತರ ಜನರ ಕೃಷಿಗೆ ಆರಾಧ್ಯ ದೈವವಾದ, ಬೃಹತ್ ನಗರಗಳ ನೀರಿನ ಸೌಲಭ್ಯದ ಮೂಲವಾದ ಈ ಅಣೆಕಟ್ಟಿನ ರಕ್ಷಣೆಯಾರದು.........?
ಅಂದಿನ ಭವಿಷ್ಯತ್ತಿನ ಸದುದ್ಧೇಶದ ಚಿಂತನೆ ಇಂದು ಇಲ್ಲದಿರುವುದು. ಅದರ ವಿನಾಶಕ್ಕೆ ಕಾರಣವಾಗುವಂತಹ ಚಟುವಟಿಕೆ ನಡೆಯುತ್ತಿರುವುದು ಸರಿಯೇ........?
ಇದಕ್ಕೆ ಸರಿಯಾದ ನ್ಯಾಯ ಒದಗಿಸುವ, ರಕ್ಷಿಸುವ ಹೊಣೆ ಯಾರದೂ.........?
ಮಾತು ಮನಗಳನ್ನು ಬೆಸೆಯುವಂತೆ ಇರಬೇಕು, ಹೃದಯದೊಳಗಿನ ನೋವನ್ನು ದೂರಮಾಡುವಂತಿರ ಬೇಕು. ಮನಗಳಲ್ಲಿನ ದೌರ್ಬಲ್ಯವನ್ನು ದೂರ ಮಾಡಿ ಸಮರ್ಥನೀಯವಾದ ಜೀವನವನ್ನು ನಡೆಸುವಂತೆ ದೃಢವಾಗಿರ ಬೇಕು. 'ಮಾತಿನ ಗುದ್ದಾಟಕ್ಕಿಂತ ಕಾರ್ಯವೈಖರಿಯ ಶ್ರೇಷ್ಠ ಕಾಯಕದ ಮೂಲಕ ಟೀಕೆ, ವಿಮರ್ಶೆಗೆ ಉತ್ತಮವಾದ ಉತ್ತರವನ್ನು ನೀಡುವುದೇ ಆರೋಗ್ಯದಾಯಕವಾದ ಕಾರ್ಯವಾಗಿದೆ. ಜೆಳ್ಳು ಮಾತನ್ನು ಬಿಟ್ಟು, ಜನಪರ ಏಳಿಗೆಗಾಗಿ ದುಡಿಯುತ್ತಾ , ಸಮಾಜ, ನಾಡು, ದೇಶದ ಅಭಿವೃದ್ಧಿಗೆ ಅಣಿಯಾಗುವಂತ ಕಾಯಕಗಳನ್ನು ಮಾಡುವುದರ ಜೊತೆಗೆ, ಭವ್ಯ ಪರಂಪರೆಯ ನಿರ್ಮಾಣಕ್ಕೆ ಕಾರಣ ಕರ್ತರಾಗುವುದೇ ಶ್ರೇಷ್ಠ ಜನ ನಾಯಕರ ಮನೋಧರ್ಮವಾಗ ಬೇಕು. ಆಗ ಮಾತ್ರ ಸರ್ವ ಕ್ಷೇತ್ರದಲ್ಲಿ ಅಭ್ಯುದಯ ಸಾಧ್ಯ. ಇಲ್ಲವೆಂದರೆ 'ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು' ಎಂಬ ಗಾದೆಯ ಅಂತರಾತ್ಮದ ಸಾರದಂತಾಗುತ್ತದೆ.
'ಅರಿತ ನುಡಿ ಬೆರೆತ ನಡೆ ಪ್ರಜಾ ಏಳಿಗೆಗೆ ಮುನ್ನುಡಿ '
ಶಿಕ್ಷಕರು ಹವ್ಯಾಸಿ ಬರಹಗಾರರು
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ
ಮೈಸೂರು
9980989368.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
Super Sir
ಪ್ರತ್ಯುತ್ತರಅಳಿಸಿ