ಪುಸ್ತಕ ವಿಮರ್ಶೆ.
ಪುಸ್ತಕದ ಹೆಸರು : ಬದರ್
(ನೂರು ಅಬಾಬಿಗಳು)
ತೆಲುಗು ಮೂಲ: ಷೇಕ್ ಕರೀಮುಲ್ಲಾ.
ಕನ್ನಡಕ್ಕೆ : ಧನಪಾಲ ನಾಗರಾಜಪ್ಪ.
ಪುಟಗಳ : ೧೨೮ (ಡೆಮಿ ೧/೧೬)
ಮುಖ ಬೆಲೆ : ೧೦೦ ರೂ
ಆಕರ್ಷಕ ಮುಖಪುಟ ಹೊಸದಾದ ಹೆಸರು ವಿಶೇಷವಾದ ರಚನಾ ಪ್ರಕಾರ ಒಂದೇ ವಾಕ್ಯದಲ್ಲಿ ಬಹಳ ಘನವಾದ ಪ್ರಶ್ನೆಗಳನ್ನ ಕೇಳುತ್ತಾ ಸಮಾಜಕ್ಕೆ ಹಾಗೂ ಓದುಗನಿಗೆ ಮುಖಾ ಮುಖಿಯಾಗುವುದು ಈ ಪುಸ್ತಕದ ವೈಶಿಷ್ಟ್ಯ.
ಪುಸ್ತಕದ ಹೆಸರು ಬದರ್. ಇದೊಂದು ಹೊಸ ಸಾಹಿತ್ಯ ಪ್ರಕಾರ ಎನಿಸಿಕೊಂಡಿರುವ ೧೦೦ ಅಬಾಬಿಗಳ ಸಂಕಲನ. ಇದನ್ನು ಒಂದು ಶತಕ ಕೃತಿ ಎನ್ನಬಹುದು.
ಮೂಲ ಲೇಖಕರಾದ ತೆಲುಗಿನ ಷೇಕ್ ಕರೀಮುಲ್ಲಾ ಅವರೇ ಈ ಸಾಹಿತ್ಯ ಪ್ರಕಾರವನ್ನ ಹೊಸದಾಗಿ ಆವಿಷ್ಕರಿಸಿ ಅದೇ ಪ್ರಕಾರದಲ್ಲಿ ಕೃತಿ ರಚನೆ ಮಾಡಿರುವುದು ವಿಶೇಷ. ಮುಂದಿನ ಪೀಳಿಗೆಯ ಯುವ ಸಾಹಿತಿಗಳಿಗೆ ಅಬಾಬಿ ಸಾಹಿತ್ಯ ಪ್ರಕಾರವು ಒಂದು ಹೊಸದಾದ ಹಾಗೂ ಬಹಳ ಸರಳವೂ ಅಷ್ಟೇ ಪರಿಣಾಮಕಾರಿಯೋ ಆಗಬಹುದಾದ ಸಾಹಿತ್ಯಾಭಿವ್ಯಕ್ತಿಯ ದಾರಿಯನ್ನು ತೋರಿಸಿದೆ.
ಕೃತಿಯನ್ನ " ಮತೀಯ ಫ್ಯಾಸಿಸ್ಟರ ಆಕ್ರಮಣದಲ್ಲಿ, ಐ ಎಸ್ ಐ, ಐಸಿಸ್ ಉಗ್ರವಾದಿಗಳ ದಾಳಿಯಲ್ಲಿ , ಅಮೇರಿಕದ ಸಾಮ್ರಾಜ್ಯಶಾಹಿ ಅಧಿಪತ್ಯದ ದಾಳಿಯಲ್ಲಿ ಕೊಲೆಯಾವದವರಿಗೆ ಅರ್ಪಣೆ ಮಾಡಿರುವುದು ಒಂದು ಕ್ಷಣ
ಓದುಗನನ್ನು ಭಾವುಕಗೊಳಿಸುತ್ತದೆ.
ಅಬಾಬಿಲ್ ಪಕ್ಷಿಗಳ ಕುರಿತು ಅವುಗಳ ಶಕ್ತಿ ಸಾಮರ್ಥ್ಯದ ಕುರಿತು ಹೇಳುತ್ತಾ ಕವಿಗಳು ''ಹಕ್ಕಿಗಳೇ ಅಲ್ಲವೇ ಅಂತ
ಬಾಣಗಳ ಬಿಡಬೇಡ
ಅಬಾಬಿಲ್ ಪಕ್ಷಿಗಳಾಗಿ ದಂಡು ಕಟ್ಟುತ್ತವೆ
ಕರೀಮ್!
ಅಬ್ರಹಾ ಸೇನೆಯ ಗತಿ ಹೇಳು"
(೦೭ನೇ ಅಬಾಬಿ) ಎಂದು ಬರೆಯುತ್ತಾರೆ. ಕೃತಿಯ ಪ್ರಸ್ತಾವನೆಯಲ್ಲಿ ತಮ್ಮ ಸಾಹಿತ್ಯ ಪ್ರಕಾರಕ್ಕೆ 'ಅಬಾಬಿ'ಗಳು ಎಂಬ ಹೆಸರಿಡಲು ಹಿನ್ನೆಲೆಯಾದ ಅಬಾಬಿಲ್ ಪಕ್ಷಿಗಳ ಕುರಿತು ವಿವರಿಸುತ್ತಾರೆ. ಹೇಗೆ ಅಬಾಬಿಲ್ ಪಕ್ಷಿಗಳು ಅಬ್ರಾಹನ ಸೇನೆಯನ್ನು ಧ್ವಂಸ ಮಾಡಿದವೋ ಹಾಗೇ ಪಕ್ಷಿಗಳು ಅಂತ ಬಾಣಗಳ ಬಿಡಬೇಡ ಆ ಪಕ್ಷಿಗಳು ಅಬಾಬಿಲ್ ಗಳಾಗಿ ದಂಡು ಕಟ್ಟುತ್ತವೆ ಎಂಬ ಈ ಅಬಾಬಿಯು ಒಟ್ಟು ಶೋಷಣೆಗೆ ತುಳಿತಕ್ಕೆ ಒಳಗಾದವರೆಲ್ಲರ ಪರವಾಗಿ ಧ್ವನಿಯೆತ್ತುವ ಕೆಲಸವನ್ನು ಯಶಸ್ವಿಯಾಗಿ ಮಾಡಿದೆ.
"ಎದೆಯಲ್ಲಿ ಧಮನಿಗಳು
ಮುದುಡಿಕೊಳ್ಳುತ್ತಿವೆ
ಭಯದಿಂದಲೋ, ಉದ್ವೇಗದಿಂದಲೋ
ಕರೀಮ್!
ಈ ರಾಜ್ಯ ಎಷ್ಟು ಮಂದಿಯ ಉಸಿರು ಕಸಿದಿದೆಯೋ !"
(೦೬ನೇ ಅಬಾಬಿ) ಈ ಅಬಾಬಿಯ ಕಡೆಯ ಸಾಲು 'ಈ ರಾಜ್ಯ ಎಷ್ಟು ಮಂದಿಯ ಉಸಿರ ಕಸಿದಿದಿಯೋ!' ಎಂಬುದು ಬಹಳ ಅರ್ಥಪೂರ್ಣವಾದ ಧ್ವನಿ. ಯಾವುದೇ ಸಾಮ್ರಾಜ್ಯಗಳ ನಿರ್ಮಾಣದ ಹಿಂದೆ ಅದೆಷ್ಟೋ ಜನರ ಪ್ರಾಣತ್ಯಾಗ ಇರುತ್ತದೆ. ಆಧುನಿಕ ಕಾಲದಲ್ಲಿಯೂ ಸಹ ಸಾಮ್ರಾಜ್ಯ ಸ್ಥಾಪನೆ, ವಿಸ್ತರಣೆ, ಮತ್ತೊಂದು ದೇಶದ ಮೇಲೆ ಹಿಡಿತ ಸಾಧಿಸುವ ಮುಂತಾದ ಪ್ರಯತ್ನಗಳ ಕಾರಣದಿಂದ ಹಲವಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿರುವ ದಾರುಣ ಚಿತ್ರಣವನ್ನು ಈ ಒಂದೇ ವಾಕ್ಯದ ಮೂಲಕ ಕವಿ ವಿವರಿಸಿದ್ದಾರೆ.
ಮುಂದೆ ೧೧ನೇ ಅಬಾಬಿಯಲ್ಲಿ
"ನನ್ನ ವರ್ಣ ಮಾಲೆಯ ಮೇಲೆ
ಅವರ ಸಂಕೋಲೆಗಳ ಬಲೆ ಬೀಸಿದ್ದಾರೆ.
ಅವು ಪಾರಿವಾಳಗಳಾಗಿ ಅಂಬರಕ್ಕೆ ಹಾರಿದವು
ಕರೀಮ್!
ಹುರಿಯನ್ನು ಕತ್ತರಿಸುವ ಇಲಿ ಎಲ್ಲಿ?!"
ಈ ಅಬಾಬಿ ಇಲಿ ಮತ್ತು ಪಾರಿವಾಳಗಳ ಕತೆಯನ್ನು ನೆನಪಿಸುತ್ತಲೇ ಅಕ್ಷರದ ಮೇಲೆ ಸಂಕೋಲೆಗಳ ಬಲೆ ಬೀಸುವ ಹಾಗೂ ಅಕ್ಷರಗಳು ಪಾರಿವಾಳಗಳಾಗಿ ಅಂಬರಕ್ಕೆ ಹಾರಿದವು ಎಂಬ ಪದಗಳು ಅಕ್ಷರದ ಮೇಲೆ ಅದಿಪತ್ಯ ಸಾಧಿಸಿ ಉಳಿದವರಿಗೆ ಅಕ್ಷರ ಕಲಿಯದಂತೆ ನಿರ್ಬಂಧಿಸಿದ ವ್ಯವಸ್ಥೆ ಹಾಗೂ ಇಂದಿನ ಕವಿ/ ಲೇಖಕರ ಮೇಲೆ ಸರ್ಕಾರ ಹಿಡಿತ ಸಾಧಿಸಲು ಹೊರಟಿರುವುದು ಮುಂತಾದವನ್ನು ಪ್ರಶ್ನಿಸುತ್ತಾರೆ. ಇಲ್ಲಿ ಅಕ್ಷರವನ್ನ ಬಂಧಮುಕ್ತಗೊಳಿಸಿದೆ ನಾನೂ ಬಿಡುಗಡೆ ಪಡೆದೆ ಎಂದು ಹೇಳಿದ ಕೆ ಬಿ ಸಿದ್ಧಯ್ಯನವರು ನೆನಪಾಗುವರು.
ಮುಂದುವರೆದು ೧೭ನೇ ಅಬಾಬಿಯಲ್ಲಿ
"ಜಿಹಾದ್ ಅಂದರೆ
ಜಿಂದಗಿಯನ್ನು ಚಿವುಟುವುದೆಂದು ಯಾರು ಹೇಳಿದ್ದು ?
ಸಸಿಗೆ ನೀರು ಉಣಿಸುವುದು ಕೂಡಾ ಜಿಹಾದೇ
ಕರೀಮ್!
ಉಗ್ರವಾದದ ಮತಿ ಕೆಟ್ಟಿದೆ ನೋಡು."
ಎಂಬ ಅಬಾಬಿಯಲ್ಲಿ ಮುಸ್ಲಿಂ ಅಲ್ಪ ಸಂಖ್ಯಾತರ ಮೇಲೆ ಮಾಡಲಾಗುವ ಜಿಹಾದ್ ಆರೋಪವನ್ನು ವ್ಯಂಗ್ಯವಾಗಿ ಕವಿ ಚಿತ್ರಿಸುತ್ತಾರೆ. ಪ್ರತಿಯೊಂದು ಕಾರ್ಯದಲ್ಲಿಯೋ ತಪ್ಪನ್ನು ಹುಡುಕುತ್ತಾ ಹೋಗುವ ಕೋಮುವಾದಿ ಸಮಾಜದ ಧೋರಣೆ ಇಲ್ಲಿ ಅನಾವರಣಗೊಂಡಿದೆ.
೨೦ನೇ ಅಬಾಬಿಯಲ್ಲಿ
"ಸ್ವರ್ಗವನ್ನು ಪರಿಹಾಸ ಮಾಡಬೇಡ
ಸ್ವೇದ (ಬೆವರ) ನದಿಗಳ ಸಂಗಮವದು
ಆನಂದಗಳ ಅಂಚುಗಳೆಲ್ಲಾ ಅಲ್ಲೇ
ಕರೀಮ್!
ಮೈಗಳ್ಳ ಮುಸಲ್ಮಾನನಾಗುವನೆ!"
ಈ ಅಬಾಬಿಯು ಸ್ವರ್ಗದ ಕಲ್ಪನೆಯನ್ನು ಹೊಸ ರೀತಿಯಾಗಿ ವ್ಯಾಖ್ಯಾನಿಸುವ ಕೆಲಸ ಮಾಡುತ್ತದೆ. 'ಸ್ವರ್ಗವೆಂದರೆ ಅದು ಬೆವರಿನ ನದಿಗಳ ಸಂಗಮವಲ್ಲದೇ ಬೇರೆನೂ ಅಲ್ಲ. ಎಲ್ಲಾ ಆನಂದಗಳ ಅಂಚು ಅದು' ಎನ್ನುವ ಮೂಲಕ ಕಾಯಕದ ಮಹತ್ವ ಮತ್ತು ಅದರಿಂದ ಸಿಗುವ ಆನಂದವನ್ನು ಬಹಳ ಅರ್ಥಪೂರ್ಣವಾಗಿ ವಿವರಿಸಿರುವರು. ಇದು ಬಸವಣ್ಣನವರ ಕಾಯಕ ಸಿದ್ಧಾಂತ ಹಾಗೂ ಸ್ವರ್ಗ ನರ್ಕಗಳ ಕಲ್ಪನೆಯನ್ನು ಇಲ್ಲಿ ನೆನಪಿಸುತ್ತೆ.
ಮುಂದೆ ೨೩ನೇ ಅಬಾಬಿಯಲ್ಲಿ 'ಅಕ್ಷರಗಳೆಂದರೆ ಅಕ್ಷರಶಃ ಹೋರಾಟವೇ ಅಲ್ಲವೆ' ಎಂಬ ವಾಕ್ಯ ಅಕ್ಷರವನ್ನ ಪ್ರಶ್ನಿಸುವ, ಎದುರಿಸುವ, ವಿರೋಧಿಸುವ, ತಪ್ಪನ್ನು ಖಂಡಿಸುವ ಹೋರಾಟದ ಮಾಧ್ಯಮವಾಗಿ ಕವಿ ಗುರ್ತಿಸುತ್ತಾರೆ. ಇಲ್ಲಿ ಅಕ್ಷರ ನಮ್ಮ ವಿರುಧ್ದದ ಸಂಚುಗಳ, ಮೋಸ, ದೌರ್ಜನ್ಯಗಳ ವಿರುದ್ಧದ ಹೇಗೆ ಹೋರಾಟದ ಸಾಧನಾವಾಗಬಹುದು ಎಂಬುದನ್ನು ಕವಿ ವಿವರಿಸುವರು. ಅದಕ್ಕೆ ಉತ್ತಮ ನಿದರ್ಶನವಾಗಿ ಈ ಪುಸ್ತಕವನ್ನೇ ನೋಡಬಹುದಾಗಿದೆ.
'ನನ್ನ ಕವನದ ಮೇಲೆ
ಅವರು ಕತ್ತಿ ಮಸೆಯುತ್ತಿದ್ದಾರೆ
ಯಾವುದೋ ನಕ್ಷತ್ರ ಮಿಲಮಿಲ ಮಿರುಗುತ್ತಿದೆ!
ಕರೀಮ್
ಅಕ್ಕರೆಯಿಂದ ಅಪ್ಪಿಕೊಳ್ಳುವ ಆಕಾಶವೆಲ್ಲಿ?'
(೨೯ನೇ ಅಬಾಬಿ)
'ಭಯೋತ್ಪಾದನೆ ಒಂದು ಭೂತ
ಖಂಡ ಖಂಡಾಂತರಗಳ ಪ್ರಶ್ನೆ
ಶವಗಳು ಬದುಕುತ್ತಿವೆ!
ಕರೀಮ್!
ಯಾಕೋ ಮನುಷ್ಯರೇ ಮರಣಿಸುತ್ತಿದ್ದಾರೆ',
(೩೦ನೇ ಅಬಾಬಿ)
'ನನ್ನ ಮಸೀದಿಯಲ್ಲಿ
ನಿನ್ನ ದೇವರು ಹುಟ್ಟಿದ್ದಾನೆ ಎಂದೆ
ಮಸೀದಿ ಏನು ಕರ್ಮ ಮನಸನ್ನೇ ಬರೆದುಕೋ ಕರೀಮ್!
ಭೂಗೋಳವೆಲ್ಲಾ ನಿನ್ನ ಮಸೀದಿಯೇ ಅಂತ ಹೇಳು'
(೩೫ನೇ ಅಬಾಬಿ)
'ಪೇಷಿಯಲ್ ಪೆರಾಲಿಸಿಸ್
ಅಪರೂಪದ ಸಾಮೂಹಿಕ ರೋಗ
ನೋಟಗಳನ್ನಾಗಲಿ ಮೂತಿಯನ್ನಾಗಲಿ ತಿರುಗಿಸಲಾಗದು
ಕರೀಮ್
ನಮಗೆ ಪೇಸ್ ಬುಕ್ ಅಗತ್ಯವೆ?'
(೩೯ನೇ ಅಬಾಬಿ)
ಟೋಪಿ ಗಡ್ಡ
ಭಯೋತ್ಪಾದನೆಗೆ ಗುರುತುಗಳಂತೆ
ಬೊಟ್ಟು, ಕಟ್ಟು ಭಕ್ತಿಗೆ ರಾಜಮಾರ್ಗವಂತೆ
ಕರೀಮ್!
ಗಡ್ಡಗಳಿರದ ಋಷಿಗಳಿದ್ದಾರೆಯೇ?'
(೪೦ನೇ ಅಬಾಬಿ)
'ಕೈಗಳನ್ನು ಎಲ್ಲಿ ಕಟ್ಟಿದರೇನು?
ಹೃದಯ ಇರಬೇಕು ಅಷ್ಟೇ
ಎದೆಯ ಕವಾಟುಗಳಲ್ಲಿ ಕೊಬ್ಬು ಬೆಳೆಯುತ್ತಿದೆ
ಕರೀಮ್ !
ಇರುಕು ಇರುಕಾದ ಸಂದಿಗಳಲ್ಲಿ ನಾವು !'
(೪೬ನೇ ಅಬಾಬಿ)
'ಅಲ್ಲಾಹನು ಮನುಷ್ಯನನ್ನು ಸೃಷ್ಠಿಸಿದ
ಮನುಷ್ಯ ಮತವನ್ನು ಹುಟ್ಟಿಸಿದ
ಮತ ಮಾರಣಹೋಮವ ಮಾಡುತ್ತಿದೆ
ಕರೀಮ್!
ನಿಜವಾದ ಮುಸಲ್ಮಾನರಿಗೆ ಮತವಿದೆಯೆ?'
(೪೮ನೇ ಅಬಾಬಿ)
'ಕಲಿಮಾ ಒಂದೇ
ಕರುಣೆಗೆ ಆಧಾರ
ಕಾರುಣ್ಯ ಒಂದೇ ಜಗಕ್ಕೆ ಜೀವಾಧಾರ
ಕರೀಮ್!
ಪ್ರೀತಿಸುವವರಿಗೆ ಮತವಿಲ್ಲ ಅಂತ ಹೇಳು'
(೪೯ನೇ ಅಬಾಬಿ)
'ದಶಕಗಳಿಂದ ಕೆನ್ನೆಗಳಿಗೆ ಬಾರಿಸುತ್ತಲೇ ಇದ್ದಾರೆ ಎರಡನೇ ಕೆನ್ನೆಯನ್ನು ತೋರಿದವರು ಯಾರು? ಸಾಮ್ರಾಜ್ಯಶಾಹಿಗೆ ಲಕ್ಷಾಂತರ ರೂಪಗಳು
ಕರೀಮ್!
ಕಾನಾದಜ್ಜಾಲ್ ನ ಜಾಡು ನೋಡು.'
(೫೭ನೇ ಅಬಾಬಿ)
'ಪ್ರಾಪಂಚೀಕರಣ
ಪಾತ್ರಗಳು ಬದಲಾಗುತ್ತಿವೆ
ಮನಸು ಮನಸಿಗೂ ಬೇಲಿ
ಕರೀಮ್!
ಹಕ್ಕಿಗಳ ಚಿಲಿಪಿಲಿ ಎಲ್ಲಿ?'
(೬೦ನೇ ಅಬಾಬಿ)
'ಲೇಖನಿಗಳೆಲ್ಲಾ ನೇಗಿಲುಗಳಲ್ಲ
ನೇಗಿಲುಗಳೆಲ್ಲ ಮಧುರ ಫಲಗಳು ಕೊಡುವುದಿಲ್ಲ ಅಕ್ಷರ ಬೇಸಾಯ ಅಂತ್ಯಜರಿಗೆ ಅಂಕಿತ
ಕರೀಮ್!
ಚಾಟಿಕೋಲು ತೆಗೆದುಕೋ'
(೬೪ನೇ ಅಬಾಬಿ)
'ಬಾಲ್ಯ ಅಂದರೆ ಕೆಲವರಿಗೆ
ನಕ್ಷತ್ರಗಳ ತೋರಣದ ಚೆಂದಮಾಮ
ಮುಗ್ಧ ಮನೋಹರವಾಗಿ ಘಮಘಮಿಸುವ ಸುಮ
ಕರೀಮ್!
ಮೆಕಾನಿಕ್ ಶೆಡ್ಡು ನೆನಪಾಗುವುದೆ?'
(೭೦ನೇ ಅಬಾಬಿ)
'ನನ್ನ ಕವಿತೆ
ಹಿಚ್ ಕಾಕ್ ನಾಯಿ ಮರಿಯಂತಲ್ಲ
ಪ್ರಶಸ್ತಿಗಳಿಗಾಗಿ ಬಾಲ ಆಡಿಸಲು
ಕರೀಮ್!
ಸೂರ್ಯ ತಲೆ ತಗ್ಗಿಸುವುದಿಲ್ಲ ಅಂತ ಹೇಳು.'
(೭೬ನೇ ಅಬಾಬಿ)
ಹೀಗೆ ಹಲವು ಹಲವು ಅಬಾಬಿಗಳು ಬಹಳ ತೀಕ್ಷ್ಣ ಸಂವೇದನೆಗಳನ್ನು , ಹೊಸತನವನ್ನು, ಸ್ವಾಭಿಮಾನವನ್ನು ಹಾಗೂ ಬಂಡಾಯದ ಮನೋಧರ್ಮವನ್ನು ಒಳಗೊಂಡಿವೆ.
ಸರ್ವಜ್ಞನ ವಚನಗಳು, ತೆಲುಗಿನ ವೇಮನರ ವಚನಗಳು ಹಾಗೂ ಡಿ ವಿ ಜಿ ರವರ ಕಗ್ಗ ಮುಂತಾದ ಅಮೂಲ್ಯ ಕೃತಿಗಳ ಸಾಲಿಗೆ ಬದರ್ ಕೃತಿಯೂ ಕೂಡಾ ಸೇರುತ್ತದೆ ಎಂದು ಯಾವುದೇ ಸಂಕೋಚ ಹಾಗೂ ಅತಿಶಯೋಕ್ತಿ ಇಲ್ಲದೇ ಹೇಳಬಹುದು.
ಇನ್ನು ಇಷ್ಟು ಸುಂದರವಾದ ಪುಸ್ತಕವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅನುವಾದಿಸಿ ಮಹದುಪಕಾರವೆಸಗಿರುವ ಶ್ರೀ ಧನಪಾಲ ನಾಗರಾಜಪ್ಪನವರ ಸಾಹಿತ್ಯ ಕೃಷಿ ಬಹಳ ವಿಶಿಷ್ಟವಾದದ್ದು ಈ ಹೊಸ ಪ್ರಯತ್ನ ಹಾಗೂ ಶ್ರಮ ನಿಜಕ್ಕೂ ಸಾರ್ಥಕವಾಗಿದೆ. ಕಠಿಣ ಭಾಷೆಯನ್ನು ಬಳಸದೆ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಈ ಕೃತಿಯನ್ನು ಅನುವಾದಿಸಿದ್ದಾರೆ. ಹಲವು ಕಡೆ ಓದುಗರಿಗೆ ಒದಗಬಹುದಾದ ಅನುಮಾನಗಳನ್ನು ಮೊದಲೇ ಊಹಿಸಿ ಅಲ್ಲಿಯೇ ಅವರ ಅನುಮಾನ ತೀರಿಸುವ ಸಲುವಾಗಿ ಪದಗಳ, ಪರಿಭಾಷೆಗಳ ಅರ್ಥಗಳನ್ನು ವಿವರಿಸುವ ಕೆಲಸ ಮಾಡಿದ್ದಾರೆ. ಕನ್ನಡ ಸಾಹಿತ್ಯ ಸಹೃದಯರು ಈ ಪುಸ್ತಕವನ್ನು ತಪ್ಪದೇ ಗಮನಿಸಬೇಕಾಗಿದೆ.
✏️ ವರುಣ್ ರಾಜ್ ಜೀ
ಸಂಪಾದಕರು
ವಿಚಾರ ಮಂಟಪ ಅಂತರ್ಜಾಲ ಸಾಹಿತ್ಯ ಪತ್ರಿಕೆ.
ಮೊ : 9448241350.
(ಪ್ರತಿಗಳಿಗಾಗಿ ಸಂಪರ್ಕಿಸಿ :
ಶ್ರೀ ಧನಪಾಲ ನಾಗರಾಜಪ್ಪ
ದೂ : 7892546523)
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ