ಉತ್ತರಭಾರತದ ನೆನಪಿನಂಗಳದಲ್ಲಿ ......
ಅಂದು ೧೭-೯-೨೦೦೦ ರವಿವಾರ ನಾನು ನನ್ನ ಪತಿ ಕೃಷ್ಣ, ಭಾವ ವೆಂಕಟೇಶ್, ಅವರ ಶ್ರೀಮತಿ ಲಲಿತಾ ಮತ್ತು ಮಗಳು ಅನುಪಮಾ ೫ ಜನ ಬೆಳಿಗ್ಗೆ ೧೦-೩೫ ಕೆ ಉತ್ತರ ಭಾರತದ ಪ್ರವಾಸ ಕ್ಕಾಗಿ ಹೊರಡಲು ಸಿದ್ಧರಾದೆವು. ಮಂಗಳೂರಿನ ವಿಕ್ರಂ ಟ್ರಾವೆಲ್ಸ್ ಏಜೆನ್ಸಿಯವರು ಆಯೋಜಿಸಿದ ಹದಿನೈದು ದಿನದ ಪ್ರವಾಸ.ನಮ್ಮನ್ನು ಬೀಳ್ಕೊಡಲು ತವರು ಮನೆಯಿಂದ ನನ್ನ ಹಿರಿಯ ಸಹೋದರ ಹನುಮಂತಗೌಡ ಪುಟ್ಟ ತಂಗಿ ವಿನೋದ ಬಂದಿದ್ದರು.೧೮-೯-೨೦೦೦ ಬೆಳಿಗ್ಗೆ ಮಂಗಳೂರು ತಲುಪಿ ಗಣೇಶಪ್ರಸಾದ್ ಲಾಡ್ಜ್ ನಂ೩೩ಮತ್ತು ೩೪ ರೂಂಗಳಲ್ಲಿ ತಂಗಿದೆವು. ಸಾಯಂಕಾಲ ೪ಗಂಟೆಗೆ ಮಂಗಳೂರು ಬೀಚ್ ನ ಅರಬ್ಬಿ ಸಮುದ್ರದ ರಮಣೀಯ ಸೊಬಗು ನಮಗೆಲ್ಲಾ ಮುದ ನೀಡಿತು.ರಾತ್ರಿ ಯಾತ್ರಿಕರೆಲ್ಲರನ್ನು ಕಂಕನಾಡಿ ರೈಲ್ವೇ ಸ್ಟೇಷನ್ನಿಗೆ ಕರೆದುಕೊಂಡು ಹೋದರು .ಅಲ್ಲಿಂದ ೧೧-೦೫ ಕೆ ‘ಎರ್ನಾಕುಲಂ ಹಜರತ್ ನಿಜಾಮುದ್ದೀನ್ ಮಂಗಲಾ ಲಕ್ಷದ್ವೀಪ ಎಕ್ಸ್‌ಪ್ರೆಸ್.’ (ಟ್ರೇನ್ ನಂಬರ್ ೨೬೧೭.) ರೈಲಿನಲ್ಲಿ ಆಗ್ರಾದತ್ತ ಪ್ರಯಾಣ ಬೆಳೆಸಿದೆವು.(S ೮ ಬೋಗಿ ೪೩,೪೪,೪೫,೪೬,೪೮ ನಮ್ಮ ಸೀಟುಗಳು )ಬೆಳಿಗ್ಗೆ ನನಗೆ ಎಚ್ಚರವಾದಾಗ ನಮ್ಮ ಮುಂದಿನ ಸ್ಟೇಷನ್ ರತ್ನಗಿರಿ ಅಂತ ತಿಳಿಯಿತು .ಬಿಸಿ ಬಿಸಿ ಕಾಫಿ ಕುಡಿದು ಸೈಡ್ ಸೀನ್ ನೋಡಲು ಉತ್ಸುಕರಾದೆವು.ರತ್ನಗಿರಿ ತಲುಪುವಷ್ಟರಲ್ಲಿ ನಾನು ಎಣಿಸಿದ( ಟನಲ್) ಕೊಳವೆಮಾರ್ಗಗಳು ೨೬ ಅಂದರೆ ರೈಲು ಮಾರ್ಗದ ಮಧ್ಯ ಬಂದ ಗುಡ್ಡ ಕೊರೆದು ನಿರ್ಮಿಸಿದ ಕೊಳವೆ ಮಾರ್ಗ.ರತ್ನಗಿರಿಯಿಂದ ಮುಂದೆ ಬರುವ ೨ಕೊಳವೆ ಮಾರ್ಗ ಗಳಂತೂ ೪ಕಿಲೋ ಮೀಟರ್ ಉದ್ದದವರೆಗೂ ಇದ್ದು ರಾತ್ರಿಯ ಅನುಭವ ನೀಡುತ್ತಾ ಬೆಳಕು ಕಂಡೊಡನೆ ಕ್ಷಣಿಕವೆಂದು ಅನುಭವ ನೀಡುತ್ತಿದ್ದವು .”ರೈಲಿನಿಂದ ಅನೇಕರಿಗೆ ಅನೇಕ ರೀತಿಯ ಉದ್ಯೋಗ ದೊರೆತಿದ್ದರೆ ಅನೇಕರು ತಮ್ಮ ನಿತ್ಯ ಜೀವನಕ್ಕಾಗಿ ರೈಲನ್ನು ಅವಲಂಬಿಸಿದ್ದರು ”ಎನ್ನುವುದು ಸತ್ಯವಾಗಿತ್ತು.ಮುಂಬೈ ನಂತರ ಇಗತಪುರಿ ಸ್ಟೇಶನ್ ನಲ್ಲಿ ಹದಿನೈದು ನಿಮಿಷ ರೈಲು ನಿಂತಿತ್ತು. ಅಲ್ಲಿಂದ ರೈಲಿಗೆ ಎಲೆಕ್ಟ್ರಿಕ್ ಎಂಜಿನ್ ಜೋಡಿಸಿದರು. ರೈಲಿನ ವೇಗದ ಮಿತಿ ಹೆಚ್ಚಾಯಿತು. ರಾತ್ರಿ ೭-೩೦ಕೆ ಊಟದ ತಟ್ಟೆ ಬಂತು.(೨ ಚಪಾತಿ ನುಗ್ಗೇಕಾಯಿ ಹಾಕಿದ ಬೇಳೆ ಪಲ್ಯ, ಕ್ಯಾಬೇಜ್, ಚಿತ್ರಾನ್ನ ಮತ್ತು ಊಟದ ನಂತರ ೧ಸೇಬು ಹಣ್ಣು )ಸಂತೃಪ್ತ ಊಟದ ನಂತರ ನಿದ್ರಾದೇವತೆ ಹಾಗೆಯೇ ನಿದ್ರೆಗೆ ಜಾರಿಸಿದಳು .ಬೆಳಿಗ್ಗೆ ೫-೩೦ಕೆ ನಿದ್ರೆಯ ಮಂಪರಿನಲಿ ಕೇಳಿಸಿಕೊಂಡಿದ್ದು, ಒಬ್ಬ ಹುಡುಗ ತಾಜಾ ತಾಜಾ ಖಬರ್ ವೀರಪ್ಪನ್ ಅರೆಷ್ಟ್ ಹೋಗಯಾ! ಡಾಕ್ಟರ್ ರಾಜಕುಮಾರ್ ಕೋ ರಿಲೀಜ್ ಕಿಯಾಗಯಾ ಎಂದು ಹಿಂದಿ ಭಾಷೆಯಲ್ಲಿ ಹೇಳುತ್ತಾ ಒಳ ಬಂದಾಗ ಎಲ್ಲರೂ ಕಾತರದಿಂದ ಪೇಪರ್ ಕೊಂಡುಕೊಂಡರು.ಹುಡುಗ ನಗುನಗುತ್ತಲೇ ಸಂತಸದಿಂದ ಮುಂದಿನ ಬೋಗಿಗೆ ತೆರಳಿದ್ದ . ಆದರೆ ಎಲ್ಲರೂ ಇಡೀ ಪೇಪರ್ ತಿರುವಿ ಹಾಕಿದರೂ ಎಲ್ಲೂ ವೀರಪ್ಪನ್ನನ್ನ ಸುದ್ದಿಯೇ ಇರಲಿಲ್ಲ. ಚಾಲಾಕಿ ಹುಡುಗನು ತನ್ನ ಉದ್ಯೋಗಕ್ಕಾಗಿ ಎಲ್ಲರನ್ನು ಬಕರಾ ಮಾಡಿದ್ದ .ಎಲ್ಲರೂ ಒಂದುಕ್ಷಣ ಎಲ್ಲರೂ ಮುಸಿ ಮುಸಿ ನಕ್ಕರು.
೨೦ನೆ ತಾರೀಕು ಬುದವಾರ ೧೨-೩೦ಕೆ ಆಗ್ರಾ ತಲುಪಿದೆವು. ಸ್ಟೇಷನ್ಗೆ ವಿಕ್ರಂ ಟ್ರಾವೆಲ್ಸ್ ನವರು ಆಯೋಜಿಸಿದ್ದ ಟೂರ್ ಬಸ್ ‘ಸ್ವರ್ಣ ಟ್ರಾವೆಲ್ಸ್ನ’DL-IP 6320 ಬಸ್ಸಿನ ಮೂಲಕ ಹೋಟೆಲ್ Sanoy ಗೆ ಕರೆದುಕೊಂಡು ಬಂದರು.ರೂಂ ನಂ.207 ರಲ್ಲಿ ನಮ್ಮ ನಿತ್ಯದ ಕರ್ಮಗಳನ್ನು ಪೂರ್ಣಗೊಳಿಸಿ ಜಗತ್ಪ್ರಸಿದ್ಧ ತಾಜ್ ಮಹಲ್ ನೋಡಲು ಹೋದೆವು. ಆ ವೇಳೆಗಾಗಲೇ ನಮ್ಮ ಜೊತೆ ಬಂದಿದ್ದ ಉಳಿದ ಹದಿನೈದು ಜನ ಯಾತ್ರಿಕರೊಂದಿಗೆ ಆತ್ಮೀಯತೆ ಬೆಳೆದಿತ್ತು .ಮೈಸೂರು,ಗುಲ್ಬರ್ಗ, ಬೆಂಗಳೂರು ,ಶಿವಮೊಗ್ಗದಿಂದ ದಂಪತಿಗಳು ಮತ್ತು ಅವರ ಮಕ್ಕಳು ಬಂದಿದ್ದರು.ವಿಶ್ವದ 7ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ನ ಸೌಂದರ್ಯ ವನ್ನು ಎಲ್ಲರೂ ಸವಿದೆವು .ಮೊಗಲ್ ಚಕ್ರವರ್ತಿ ಶಹಜಹಾನ್ ಪ್ರೀತಿಯ ಮಡದಿ ಮಮ್ತಾಜಳ ಸವಿ ನೆನಪಿಗಾಗಿ ನಿರ್ಮಿಸಿದ ಮಹಲ್ ಪ್ರೇಮಸೌಧದ ಪ್ರತೀಕವಾಗಿತ್ತು .ಎರಡನೇ ಬಾರಿ ತಾಜ್ ಮಹಲ್ ನೋಡುವ ಅವಕಾಶ ನನ್ನದಾಗಿತ್ತು. ನನ್ನ ತಂದೆ ತಾಯಿಯೊಂದಿಗೆ ಈ ಮೊದಲೇ ನೋಡಿದ್ದೆ, ಈಗ ಪತಿಯೊಂದಿಗೆ ನೋಡುವ ಮತ್ತೊಂದು ಅವಕಾಶ ದೊರೆತಿತ್ತು. ಅಲ್ಲಿಂದ ನಮ್ಮ ಪ್ರಯಾಣ ಮಥುರಾದತ್ತ .ಮೊದಲು ಬೃಂದಾವನ (ಬೃಂದಾ -ತುಳಸಿ ವನ -ಕಾಡು) ನೋಡಲು ಹೋದೆವು.ಸಾವಿರಾರು ಜನ ವಿಧವೆಯರು ಬ್ರಾಹ್ಮಣರು ನಿರ್ಗತಿಕರಿಗೆ ಜೀವನಪರ್ಯಂತ ಸಹಾಯವನ್ನು ಇಲ್ಲಿ ಮಾಡಲಾಗುತ್ತದೆ. ಅದಕ್ಕಾಗಿ ದಾನ ಮಾಡಿದವರನ್ನು ತಮ್ಮ ಭಜನೆಯಮೂಲಕ ಹರಸುತ್ತಾರೆ. ಮಥುರಾದಲ್ಲಿ ದಯಾಲ್ಬಾಗ್, ಈದ್ ಮಿಲಾದ್ ನೋಡಿಕೊಂಡು ರಾಧಾಸ್ವಾಮಿ ಮಂದಿರಕ್ಕೆ ಬಂದೆವು.ತಾಜ್ ಮಹಲ್ ಗಿಂತಲೂ ಭವ್ಯವಾಗಿ ನಿರ್ಮಿಸುವ ಕನಸನ್ನೊತ್ತು ೧೯೦೨ರಲಿ ಈ ಮಂದಿರ ನಿರ್ಮಿಸಲು ಆರಂಭಿಸಿದ್ದಾರೆ ಅನ್ನುವ ವಿಷಯ ಅಲ್ಲಿರುವ ಗೈಡ್ಸ್ ಗಳಿಂದ ತಿಳಿಯಿತು.೫೦% ರಷ್ಟು ಮಾತ್ರ ಕೆಲಸವಾಗಿತ್ತು ಅದು ಪೂರ್ಣಗೊಂಡ ಮೇಲೆ ಮತ್ತೊಮ್ಮೆ ನೋಡುವ ಭಾಗ್ಯ ದೊರೆಯಲಿ ಎಂದು ಮನದಲ್ಲಿ ಅಂದುಕೊಂಡು ಆಗ್ರಾ ಕೋಟೆ ನೋಡಿ ರಾತ್ರಿ ಎಲ್ಲರೂ ಮರಳಿ ಹೋಟೆಲ್ಗೆ ಬಂದು ಸಂತೃಪ್ತ ಊಟ ಮಾಡಿ ನಿದ್ರೆಗೆ ಜಾರಿದೆವು.
ಮಾರನೇ ದಿನ ಶುಕ್ರವಾರ ಫತೇಪುರ್ ಸಿಕ್ರಿಯಲ್ಲಿ ಬರುವ ಅಕ್ಬರ್ ಮತ್ತು ಅವನ ರಾಣಿಯರ ವಾಸಗೃಹ ಮತ್ತು ಏಷ್ಯಾದಲ್ಲಿಯೇ ಅತಿ ದೊಡ್ಡದಾದ ಬುಲಂದ ದರ್ವಾಜ್ ನೋಡಿ ನಮ್ಮ ಪ್ರಯಾಣವನ್ನು ಜೈಪುರದತ್ತ ಬೆಳೆಸಿದೆವು.ಮಾರ್ಗ ಮಧ್ಯದಲ್ಲಿ ಬಸ್ ಮ್ಯಾನೇಜರ್ ಗಳು ಪ್ರಯಾಣದ ಆಯಾಸ ಕಳೆಯಲು ಅಂತ್ಯಾಕ್ಷರಿ ಜೋಕ್ಸ್ ಹೇಳುವ ಮೂಲಕ ಪ್ರಯಾಣದ ಮುದವನ್ನು ಹೆಚ್ಚಿಸುತ್ತಿದ್ದರು .ಜೈಪುರದಲ್ಲಿ ರಜಪೂತ ದೊರೆ ಮಾನ್ ಸಿಂಗ್ ಮತ್ತು ಅವನ ಪತ್ನಿ ಚಂದ್ರಮುಖಿ ಮತ್ತು ಉಪಪತ್ನಿ ಮೃಗನಯನೆಯರು ಅರಮನೆಗಳ ವೈಭವ ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದೆವು.ಇಷ್ಟೊಂದು ವೈಭವಯುತವಾದ ಅರಮನೆ ಕಟ್ಟಿಸಿದ ರಾಜರು ಮತ್ತು ಅವನ ಪರಿವಾರ ಮಾತ್ರ ಚರಿತ್ರೆಯ ಪುಟಗಳಲ್ಲಿ ಅಜರಾಮರ ಆದರೆ ಕಟ್ಟಿದ ಶಿಲ್ಪಿಗಳಾಗಲೀ ಸಹಾಯಕ ವರ್ಗವಾಗಲಿ ನೆನಪಿಸಿಕೊಳ್ಳುವ ಸಾಲಿನಲ್ಲಿ ಇಲ್ಲದಿರುವುದು ನೋವಿನ ಸಂಗತಿ ಅನ್ನಿಸಿತು.ಜೈಪುರದ ಸಿಟಿ ಪ್ಯಾಲೇಸ್ ಹವಾಮಹಲ್ ಮ್ಯೂಜಿಯಂ ನೋಡಿ ಗ್ರಂಥಾಲಯಕ್ಕೆ ಬಂದಾಗ ಕಡ್ಡಿಪೆಟ್ಟಿಗೆ ಎಷ್ಟು ಚಿಕ್ಕ ಗಾತ್ರದ ಧರ್ಮಗ್ರಂಥಗಳು ಎಲ್ಲರನ್ನು ಆಕರ್ಷಿಸಿದವು .ರಜಪೂತ ಮಹಿಳೆಯರ ಕಲಾನೈಪುಣ್ಯತೆ ಅವರ ಉಡುಗೆಗಳಲ್ಲಿ ಎದ್ದುಕಾಣುತ್ತಿತ್ತು ಹಾಗೆಯೇ ಖಗೋಳಶಾಸ್ತ್ರದ ವಿಷಯಕ್ಕೆ ಸಂಬಂಧಿಸಿದ ಜಂತರ್ ಮಂತರ್ ಕಟ್ಟಡಗಳ ವೈಶಿಷ್ಟ್ಯದಿಂದ ಆಗಿನ ಕಾಲದ ಜ್ಞಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಹಾಗೆಯೇ ನಮ್ಮ ಪ್ರಯಾಣ ದೆಹಲಿಯತ್ತ ಬೆಳಸಿದೆವು.ದೆಹಲಿಯಲ್ಲಿ ಕೆಂಪುಕೋಟೆ, ಕಮಲ್ ಮಹಲ್, ಕುತುಬ್ ಮಿನಾರ್`, ರಾಜ್ಘಾಟ್, ಇಂದಿರಾ ಗಾಂಧಿಭವನ, ತೀನ್ ಮೂರ್ತಿ ಭವನ, ದ ಬಿರ್ಲಾ ಮಂದಿರ ನೋಡಿಕೊಂಡು ನೋಡಿದ ಆನಂದದ ಸವಿಯನು ತವರಿನ ಎಲ್ಲರೊಂದಿಗೆ ಹಂಚಿಕೊಂಡು ನಕ್ಕು ನಲಿದೆ.
‘ಪಟ್ಟಣ ನೋಡೋಕೆ ಚೆಂದ; ಹಳ್ಳಿ ಇರೋಕೆ ಚಂದ’ಎನ್ನುವ ಅನುಭವ ದೆಹಲಿಗೆ ಹೋದಮೇಲೆ ತಿಳಿಯಿತು. ಜಗಮಗಿಸುವ ಬೆಳಕು ಮತ್ತೆ ಮತ್ತೆ ನೋಡಬೇಕು ಅನಿಸುತ್ತೆ ಆದರೆ ಅಲ್ಲಿಯ ಜನದಟ್ಟಣೆ ವಾಹನಗಳ ಕಿವಿ ಗಡಚಿಕ್ಕುವ ಶಬ್ದ, ಒಂದೊತ್ತಿನ ಊಟಕ್ಕೂ ಪರದಾಡುವ ಜನ ಇದನ್ನೆಲ್ಲಾ ಗಮನಿಸಿದರೆ ಹಳ್ಳಿಯ ಸೊಗಡು ಹಿತವೆನಿಸಿತು.ದೆಹಲಿಯಿಂದ ಹರಿದ್ವಾರದತ್ತ ನಮ್ಮ ಪ್ರಯಾಣ ಸಾಗಿತು.೨೬ ನೇ ತಾರೀಕು ಮಂಗಳವಾರ ಹನ್ನೆರಡು ಗಂಟೆಗೆ ಹರಿದ್ವಾರ ತಲುಪಿದೆವು.ಸಂಗರೂರ್ ಭವನ ಎಂಬ ಧಾರ್ಮಿಕ ಛತ್ರದಲ್ಲಿ ಎಲ್ಲರೂ ತಂಗಿದೆವು.ಬದರಿ ಮತ್ತು ಕೇದಾರದಲ್ಲಿರುವ ಹರಿಯದರ್ಶನಕ್ಕೆ ಇದೇ ಮಾರ್ಗದ ಮೂಲಕ ಹೋಗಬೇಕಾಗಿದ್ದರಿಂದ ಇದಕ್ಕೆ “ಹರಿದ್ವಾರ” ಎಂದೂ ಹೆಸರಿದೆ.ಗಂಗೆಯನ್ನು ಧರೆಗಿಳಿಸಿದ ಭಗೀರಥನ ಕಥೆ ಕೇಳುತ್ತಾ ಮಧ್ಯಾಹ್ನ ವೇದವ್ಯಾಸ ಮಂದಿರ ,ಸಪ್ತ ಋಷಿಗಳ ಆಶ್ರಮ, ಭಾರತ ಮಾತಾಮಂದಿರ ನೋಡಿದೆವು.ಇದು ೭ಅಂತಸ್ತಿನ ಕಟ್ಟಡ ೧.ದುರ್ಗಾದೇವಿ ೨.ವೀರ ವನಿತೆಯರು ೩.ಸ್ವಾತಂತ್ರ್ಯ ಹೋರಾಟಗಾರರು ೪.ಮಹಾಸತಿಯರು ೫.ಮಹಾಮಾತೆಯರು ೬.ದೇವತೆಯರು ಮತ್ತು ಕೊನೆಯದಾಗಿ ಶಿವನ ಕೈಲಾಸವನ್ನು ಈ ಮಂದಿರದಲ್ಲಿ ಕಾಣಬಹುದು.
೨೭ ನೇ ತಾರೀಕು ಬುಧುವಾರ ಡೆಹರಾಡೂನಿಗೆ ಬಂದೆವು. ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುವ ವನಸಿರಿಯ ನಡುವೆ ಗಂಗೆಯು ಹಲವಾರು ಕಡೆ ಭೋರ್ಗರೆಯುತ್ತಾ ಧುಮ್ಮಿಕ್ಕುವ ಆ ಸ್ಥಳ “ಸಹಸ್ರಧಾರ” ಎಂಬ ಹೆಸರು ಪಡೆದಿದೆ.ಅಲ್ಲಿಂದ ಮಸ್ಸೂರಿಗೆ ಬಂದಾಗ ಸ್ವರ್ಗ ಮೂರೇ ಗೇಣು ಎನ್ನುವಂತೆ ಹರ್ಷ ಗೊಂಡೆವು. ಅಂಕು ಡೊಂಕಾದ ರಸ್ತೆ ಏರುತ್ತಾ ಬೆಟ್ಟದ ಮೇಲ್ತುದಿಗೆ ಬಂದು ಪ್ರಕೃತಿ ಸೌಂದರ್ಯದ ಸವಿಯುಣ್ಣುವ ಆ ಘಳಿಗೆ ಅಮೃತ ಗಳಿಗೆಯಾಗಿತ್ತು .ಅಲ್ಲಿ ಎಲ್ಲ ಪ್ರವಾಸಿಗರೂ ಮಸ್ಸೂರಿಯ ಉಡುಗೆ ಧರಿಸಿಕೊಂಡು ಫೋಟೋ ತೆಗೆಸಿಕೊಳ್ಳುತ್ತಿದ್ದದ್ದನು ನೋಡಿ ನನಗೂ ಆಶೆಯಾಯಿತು. ಮನದ ಬಯಕೆ ಮನದಲ್ಲಿ ಉಳಿಸಿಕೊಳ್ಳದೆ ನಮ್ಮ ಮನೆಯವರನ್ನು ಕೇಳಿದಾಗ ಹೂಂ.....ಅಂದರು .ನನ್ನ ಅಕ್ಕನ ಮಗಳು ಅನುಪಮಾ ಮತ್ತು ನಾನು ಮಸ್ಸೂರಿ ಉಡುಗೆಯ ಸಂಭ್ರಮದಲ್ಲಿ ಹಿರಿಹಿರಿ ಹಿಗ್ಗಿದೆವು .ಅಲ್ಲಿಂದ ಹಿಂತಿರುಗಿ ಬರುವಾಗ ಯಾಕೋ ಒಂದಸಾರಿ ತಲೆ ಸುತ್ತಿದಂತಾಗಿ ವಾಂತಿಯಾಯಿತು. ಘಾಟ್ ಪ್ರದೇಶವಾಗಿದ್ದರಿಂದ ಇದು ಸಹಜ ಎಂದು ಎಲ್ಲರೂ ಧೈರ್ಯಹೇಳಿದರು.೨೮ ನೇ ತಾರೀಕು ಗುರುವಾರ ತುಂಬಾ ಚಳಿ ಇತ್ತು. ಹರಿದ್ವಾರದಿಂದ ಋಷಿಕೇಶಕ್ಕೆ ನಮ್ಮ ಪ್ರಯಾಣ ಸಾಗಿತ್ತು.೨೪ ಕಿಲೋ ಮೀಟರ್ ದೂರದ ಈ ಸ್ಥಳ ಋಷಿಮುನಿಗಳು ತಪಸ್ಸು ಮಾಡಿದ ತಾಣ .ಅಲ್ಲಿರುವ ಲಕ್ಷ್ಮಣ್ ಜೂಲಾ, ಗಂಗೆಯು ಶಾಂತವಾಗಿ ಹರಿಯಲು ಕಾರಣವಾದ ಕಥೆ ಕೇಳುತ್ತಾ ಸ್ವರ್ಗಾಶ್ರಮಕ್ಕೆ ಬಂದೆವು.ಇದು ಒಬ್ಬ ಯಾತ್ರಿಕ ತಂದೆ ತಾಯಿಯೊಂದಿಗೆ ತೀರ್ಥಯಾತ್ರೆಗೆ ಬಂದಾಗ ಗಲಾಟೆಯಲ್ಲಿ ತಂದೆತಾಯಿಯರು ಕಳೆದು ಹೋಗುತ್ತಾರೆ. ಮತ್ತೆ ಮರಳಿ ಸಿಗಲೇ ಇಲ್ಲ. ಅವರ ನೆನಪಿಗಾಗಿ ಆ ಯಾತ್ರಿಕ ಅದೇ ಸ್ಥಳದಲ್ಲಿ ಆಶ್ರಮ ನಿರ್ಮಿಸಿ ಇಂತಹ ಪುಣ್ಯಕ್ಷೇತ್ರ ಸ್ವರ್ಗಾಶ್ರಮವಾಗಲಿ ಎಂದು ಬಯಸಿದನಂತೆ.
ಮುಂದೆ ನಾವೆಲ್ಲರೂ ಮಾನಸ ದೇವಿ ಮಂದಿರಕ್ಕೆ’ ರೋಪ್ ವೇ’ ಮೂಲಕ ಹೋಗಿ ದರ್ಶನ ಪಡೆದೆವು.ಬೆಟ್ಟದ ಮೇಲಿರುವ ಈ ದೇವಿಯ ದರ್ಶನದ ರೋಪ್ ವೇ ಅನುಭವ ವಿಭಿನ್ನವಾಗಿತ್ತು .ವಿಕ್ರಂ ಟ್ರಾವೆಲ್ಸ್ ನವರು ಪ್ರವಾಸದುದ್ದಕ್ಕೂ ಬಗೆಬಗೆಯ ಉಪಾಹಾರ, ಊಟ, ಕರಿದ ತಿನಿಸುಗಳು, ಜ್ಯೂಸ್, ಹಣ್ಣುಗಳನ್ನು ಕೊಡುತ್ತಾ ಮತ್ತೆಮತ್ತೆ ಪ್ರವಾಸಕ್ಕೆ ಬರುವಂತಹ ಪ್ರೇರಣೆಯಿಂದ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದರು .ಐಷಾರಾಮಿ ತಂಗುದಾಣ ಗಳಿಂದ ಯಾರೊಬ್ಬರ ಮನಸ್ಸಿಗೂ ನೋವಾಗದಂತೆ ನಮ್ಮನ್ನೆಲ್ಲಾ ಕರೆದುಕೊಂಡು ಮುಂದೆ ಚಂಡಿಗಢ, ಕುರುಕ್ಷೇತ್ರ ನೋಡಿ ಪುನಃ ದೆಹಲಿಯಿಂದ ಅದೇ ರೈಲಿಗೆ ಅಂದ್ರೆ ಲಕ್ಷದ್ವೀಪ ಎಕ್ಸ್ಪ್ರೆಸ್ ಮಂಗಳೂರಿನತ್ತ ನಮ್ಮ ಪ್ರಯಾಣ ಸಾಗಿತ್ತು.ಮಲೆನಾಡಿನ ಸೌಂದರ್ಯದ ಸೊಗಡಿನ ಸವಿಯುಣ್ಣುಲು ಚಲಿಸುವ ರೈಲಿನ ಬಾಗಿಲಲ್ಲಿ ಕುಳಿತು ಹಸಿರಿನ ರಮಣೀಯ ಸೊಬಗನ್ನು ಸವಿಯುವ ಅವಕಾಶವನ್ನು ನನ್ನ ಪತಿ ನನಗೆ ಕಲ್ಪಿಸಿದರು. ಅದು ಅಪಾಯವಾಗದಿದ್ದರೂ ಅತ್ಯಂತ ಎಚ್ಚರಿಕೆಯಿಂದ ಅವರು ನನಗೆ ಸಹಾಯ ಮಾಡಿದರು.ಅಕ್ಟೋಬರ್ ಎರಡನೇ ತಾರೀಕು ಮಂಗಳೂರಿನ ಕಂಕನಾಡಿ ಸ್ಟೇಶನ್ನಿಗೆ ಬೆಳಗಿನ ಜಾವ ತಲುಪಿದೆವು. ಮನದಲ್ಲಿಯೇ ಮಹಾತ್ಮಾ ಗಾಂಧೀಜಿಯವರ ಜನ್ಮ ದಿನಾಚರಣೆಗೆ ನಮನವನ್ನುಸಲ್ಲಿಸುವುದರ ಜೊತೆಗೆ ನನ್ನ ಪತಿಯ ಹುಟ್ಟುಹಬ್ಬವೂ ಅದೇ ದಿನವಿದ್ದುದರಿಂದ ಅವರಿಗೆ ಶಭಾಶಯ ತಿಳಿಸಿದೆ. ಅನಂತರ ಅಲ್ಲಿಂದ ಬಸ್ಸಿನ ಮೂಲಕ ನಮ್ಮ ಇಲ್ಕಲ್ ನಗರವನ್ನು ಮೂರನೆಯ ಅಕ್ಟೋಬರ್ ಬುಧವಾರ ರಾತ್ರಿ ೧೦ ಗಂಟೆಗೆ ಯಾವುದೇ ತೊಂದರೆಯಿಲ್ಲದೆ ತಲುಪಿದೆವು .ಉತ್ತರ ಭಾರತದ ಪ್ರವಾಸ ಬೆಳೆಸಿ ಇಪ್ಪತ್ತು ವರ್ಷಗಳೇ ಗತಿಸಿದರೂ ನೆನಪಿನಂಗಳದಲ್ಲಿ ಅಲ್ಲಿ ಕಳೆದ ಸುಮಧುರ ನೆನಪುಗಳು ಪದೇಪದೇ ಸುಳಿದಾಡುತ್ತಿವೆ ............
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ
ಶಿಕ್ಷಕಿ ಎ.ಸಿ.ಒ ಕನ್ನಡ ಮಾಧ್ಯಮ ಪ್ರೌಢ ಶಾಲೆ ಇಲಕಲ್ .
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ