ಬುಧವಾರ, ಜುಲೈ 14, 2021

ನಮ್ಮ ಬಾಲ್ಯದಲ್ಲಿ ಯುಗಾದಿ ಸಂಭ್ರಮ (ಕವಿತೆ) - ಶ್ರೀಮತಿ ಸುಮಂಗಲ ಕೃಷ್ಣ ಕೊಪ್ಪರದ, ಶಿಕ್ಷಕಿ.

ನಮ್ಮ ಬಾಲ್ಯದಲ್ಲಿ ಯುಗಾದಿ ಸಂಭ್ರಮ 

ಬ್ರಹ್ಮಾಂಡದ ಸೃಷ್ಟಿಯ ಮೊದಲ ರವಿಯ ಕಿರಣ ।
ಯುಗಾದಿಯ ಹೊಸ ವರುಷದ ಆರಂಭದ ಕ್ಷಣ ।

ಕೊಪ್ಪಳ ಜಿಲ್ಲೆಯ ಪುಟ್ಟ ಗ್ರಾಮ ಅಳವಂಡಿ ।
ಬಾಲ್ಯವ ಕಳೆದೆನಿಲ್ಲಿ  ಅಮ್ಮನ ಮಡಿಲಲ್ಲಾಡಿ ।

ಎಳ್ಳೆಣ್ಣೆ ಸ್ನಾನ ಮಾಡಿ ಹೊಸ ಲಂಗ ರವಿಕೆ ಧರಿಸಿ ।
ಮಾರುದ್ದ ಜಡೆ ಹೆಣೆದು ರಿಬ್ಬನ್ನಿನಿಂದ ಸಿಂಗರಿಸಿ। 

ಕಾಲ್ಗೆಜ್ಜೆ ಹಾಕಿ ಹೆಜ್ಜೆಯ ಸದ್ದು ಮಾಡುತ।  
ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟುತ । 

ಸಗಣಿ ಗೋಮೂತ್ರದಿ ಸಾರಣೆಯ ಮಾಡಿದೆವು ।
ರಂಗೋಲಿಯ ಚಿತ್ತಾರ ಬಿಡಿಸಿ ನಕ್ಕು ನಲಿದೆವು.।

ಹೂವು ಹಣ್ಣು ಕಾಯಿ ಕರ್ಪೂರದಿ ದೇವರ ಆರಾಧನೆ।
ಹೋಳಿಗೆ ಪಾಯಸ ಬೇವು ಬೆಲ್ಲದ ಸಮರ್ಪಣೆ ।

ಹಣ್ಣೆಲೆಗಳುದುರಿ ಗಿಡದಿ ಚಿಗುರೆಲೆಗಳು ನಾಚಿನಿಂತವು ।
ಹಸಿರಸಿರಿಗೆ ನಸು ನಾಚುತಲಿ ಗೆಳತಿಯರೆಲ್ಲಾ ಕೂಡಿ ನಲಿದೆವು।
 
ಬೇವು ಬೆಲ್ಲ ಸವಿಯುವ ನಮ್ಮ ತಲೆ ನೇವರಿಸಿದಳಮ್ಮ ।
ಕಷ್ಟ-ಸುಖಗಳೇನೇ ಬರಲಿ ಎದೆಗುಂದದಿರಿಯಂದನಪ್ಪ।

ಶಾಲೆಯ ಮೇಷ್ಟ್ರುಗಳ ಮನೆ ಮನೆಗೆ ತೆರಳಿದೆವು ।
ಬೇವು-ಬೆಲ್ಲವ ನೀಡುತ ಹೊಸವರುಷದ ಶುಭ ಕೋರಿದೆವು।

ವರುಷಕೊಂದು ಹೊಸತು ದಿನ ಸವಿನೆನಪಿನ ಕಂಪನ। 
ಯುಗ ಯುಗಾದಿ ಕಳೆದರೂ ಬಾಲ್ಯದ ಸಂಭ್ರಮದಾಲಿಂಗನ। 
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ. ಶಿಕ್ಷಕರು ಎಸಿಒ ಪ್ರೌಡ ಶಾಲಾ ವಿಭಾಗ ಇಳಕಲ್ಲ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...