ಮರೀಚಿಕೆಯಾದ ಮಾನವೀಯತೆ
"ಮಾನವೀಯತೆ ಏನಾಗಿದೆ ನಿನಗೆ? ಹೀಗೇಕೆ ನಡುಬೀದಿಯಲ್ಲಿ ಮೌನವಾಗಿ ಮಲಗಿರುವೆ?
ಕವಯತ್ರಿ ಎಂ.ಕೆ ಶರೀಫರವರು ಬರೆದಿರುವ ಸಾಲುಗಳು ಇಂದಿನ ದಿನಗಳಲ್ಲಿ ನಮ್ಮ ಮನದೊಳಗೆ ಮತ್ತೆ ಮತ್ತೆ ಪ್ರತಿಧ್ವನಿಯಂತೆ ಕೇಳುತ್ತಿವೆ.ಕಾರಣ ಇಷ್ಟೇ! ಜಗತ್ತಿನ ಎಲ್ಲಾ ಜೀವರಾಶಿ ಗಳಿಗಿಂತಲೂ, ಬಹು ಶ್ರೇಷ್ಠವಾದ ಜನ್ಮ ಮಾನವಜನ್ಮ ,ಏಕೆಂದರೆ ಭೂಮಿಯ ಮೇಲಿರುವ ಅಸಂಖ್ಯಾತ ಜೀವಿಗಳಿಗಿಂತ ಮನುಷ್ಯನನ್ನು ಅತ್ಯಂತ ಬುದ್ಧಿವಂತ ಜೀವಿ ಎನ್ನುತ್ತಾರೆ.ಕಾರಣವಿಷ್ಟೇ ಅವನಿಗೆ ಎಲ್ಲವನ್ನು ಆಲೋಚಿಸುವಂತಹ ಶಕ್ತಿ, ಯಾವುದು ಸರಿ,ಯಾವುದು ತಪ್ಪು ಎಂಬುದನ್ನು ತಿಳಿಯುವಂತಹ ಅರಿವು ಅವನಿಗಿದೆ.ಆದರೆ ಅವನು ಇದನ್ನೆಲ್ಲಾ ಮರೆತು ಆಧುನಿಕ ಜೀವನದ ಗುಂಗಿನಲ್ಲಿ ತೇಲುತ್ತಾ, ಕ್ರೂರಿಯಂತೆ ವರ್ತಿಸುತ್ತಿರುವುದು ಎಷ್ಟು ಸರಿ?
*ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ**ಎಂದು ದಾಸ ಶ್ರೇಷ್ಠರಾದ ಪುರಂದರದಾಸರು ಹೇಳಿದ್ದಾರೆ.ಆದರೆ ನಾವು ಮಾಡುತ್ತಿರುವುದಾದರೂ ಏನನ್ನು? ನಮ್ಮ ರಾಷ್ಟ್ರದ ಅನೇಕ ರಾಜಕೀಯ ನೇತಾರರು ಸುಮಾರು ವರ್ಷಗಳಿಂದ ತಮ್ಮ ಭಾಷಣಗಳಲ್ಲಿ ಮನುಷ್ಯ ಮತ್ತು ಮಾನವೀಯತೆಯನ್ನು ಕುರಿತಂತೆ ಆದರ್ಶದ ಮಾತುಗಳನ್ನು ಆಡುತ್ತಲೇ ಇದ್ದಾರೆ. ಆದರೆ ಅದಕ್ಕೆ ಅವರು ಅರ್ಥ ತುಂಬಲು ಸಾಧ್ಯವಾಗಿದೆಯೇ? ಅವರಷ್ಟೇ ಅಲ್ಲ! ಮಾನವೀಯತೆಯ ಬಗ್ಗೆ ತಿಳಿದು ಬಾಳಬೇಕಾಗಿರುವ ವಿದ್ಯಾವಂತ ಸಮಾಜವೂ ಮಾನವೀಯತೆ ಎಂಬ ಪರಿಕಲ್ಪನೆಯನ್ನು ಮೈಗೂಡಿಸಿಕೊಂ ಡಿದೆಯೇ?ಎಂಬ ಅನುಮಾನಗಳ ಜೊತೆ,ಅನುಸಂಧಾನವನ್ನು ನಡೆಸುತ್ತಲೇ ಇರಬೇಕಾಗಿದೆ.
ಮೊದಲು ನಾವು ತಿಳಿಯಬೇಕಾದದ್ದು "ಮಾನವನಿಗೂ ಮಾನವೀಯತೆಗೂ ಇರುವ ಸಂಬಂಧ"ವನ್ನು! ಅಂದರೆ ಭೂಮಿಯ ಮೇಲಿರುವ ಮನುಜರೆಲ್ಲರೂ ಮಾನವೀಯತೆಯ ಮೌಲ್ಯದ ಬಗ್ಗೆ ತಿಳಿದುಕೊಂಡಿದ್ದರೇ, ಇಂದು ಮಾನವೀಯತೆ ಎಂಬುದು ಒಂದು ಶ್ರೇಷ್ಠ ಆದರ್ಶ ಮೌಲ್ಯವಾಗಿ ಕಾಣಿಸುತ್ತಿರಲಿಲ್ಲ,ಅಲ್ಲದೆ ಮನುಷ್ಯರಿಗಲ್ಲ ಮಾನವೀಯತೆ ಇದ್ದಿದ್ದರೆ ಅದೊಂದು ಮೌಲ್ಯ ವಾಗಿರುವ ಅಗತ್ಯವೇ ಇರಲಿಲ್ಲ. ಆದ್ದರಿಂದ ಇಂದಿನ ದಿನಗಳಲ್ಲಿ ಮಾನವೀಯತೆ ಎಂಬುದು ತನ್ನದೇ ಆದ ನೆಲೆ ಬೆಲೆಯನ್ನು ಹೊಂದಿದೆ.
ಮಾನವೀಯತೆಯನ್ನು ಇಡೀ ಜಗತ್ತಿಗೆ ಸಾರಿದ ದೇಶದಲ್ಲಿ ಇಂದು ಮಾನವೀಯತೆಯನ್ನು ಟಾರ್ಚ್ ಹಾಕಿಕೊಂಡು ಹುಡುಕಬೇಕಾದ ಪರಿಸ್ಥಿತಿ ಉಂಟಾಗಿದೆ.ಮನುಷ್ಯ ಎಲ್ಲವನ್ನು ಕಲಿತ."ಆಕಾಶದಲ್ಲಿ ಹಕ್ಕಿಯಂತೆ ಹಾರುವುದನ್ನು ಕಲಿತ, ನೀರಿನಲ್ಲಿ ಮೀನಿನಂತೆ ಈಜುವುದನ್ನು ಕಲಿತ", ಆದರೆ ಭೂಮಿಯ ಮೇಲೆ ಮಾನವನಾಗಿ ಮಾತ್ರ ಬದುಕುವುದನ್ನು ಕಲಿಯಲಿಲ್ಲ.
ನಾವು ಇತ್ತೀಚಿನ ದಿನಗಳಲ್ಲಿ ಕಂಡು, ಕೇಳಿ,ಅನುಭವಿಸಿದ ಕರೋನ ಒಂದನೇ ಮತ್ತು ಎರಡನೇ ಅಲೆ ಎಂಬ ಅತ್ಯಂತ ಭೀಕರವಾದ ಪರಿಸ್ಥಿತಿಗೆ ಒಳಗಾಗಿದ್ದವು ಆ ದಿನಗಳಲ್ಲಿ ಎಷ್ಟೋ ಜನ ತಮ್ಮ ಅಸಹಾಯಕತೆಯಿಂದ ಕುಟುಂಬದವರನ್ನು ಕಳೆದುಕೊಂಡು, ಅವರ ಕಳೇಬರಗಳನ್ನು ತಾವೇ ಹೊತ್ತುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿರುವುದನ್ನು ಕಣ್ಣಾರೆ ನೋಡಿದ್ದೇವೆ! ಇಂತಹ ವಿಷಮ ಪರಿಸ್ಥಿತಿಯಲ್ಲಿ ಎಷ್ಟು ಜನ ಅವರ ಸಹಾಯಕ್ಕೆ ಬಂದರು? ಅಂದರೆ ಇಂದು ಮಾನವೀಯತೆ ಏನಾಗಿದೆ! ಎಂಬುದನ್ನು ನೀವೇ ಯೋಚಿಸಿ! ಹಾಗಂತ ಸಂಪೂರ್ಣವಾಗಿ ಮಾನವೀಯತೆ ಮಾಯವಾಗಿಲ್ಲ,ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಎಷ್ಟೋ ಜನರು ಕೊರೋನಾ ವಾರಿಯರ್ಸ್ ಗಳಾಗಿ ದುಡಿದು ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದ್ದಾರೆ. ಅವರಿಗೆ ನಮ್ಮ ಕಡೆಯಿಂದ ಒಂದು ಸಲಾಂ.
ಆದರೆ ಇಂತಹವರು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ.ಇನ್ನೂ ಕೆಲವು ಘಟನೆಗಳನ್ನು ಗಮನಿಸುವುದಾದರೆ,ಯಾರಿಗಾದರು ರಸ್ತೆಯಲ್ಲಿ ಅಪಘಾತವಾಗಿ ನರಳಾಡುತ್ತಿದ್ದರೆ ಎಷ್ಟು ಜನ ಅವರ ಸಹಾಯಕ್ಕೆ ಧಾವಿಸಿ ಬರುತ್ತಾರೆ? ಪೋಲಿಸು,ಕೇಸು ,ನಮಗ್ಯಾಕೆ ಅದರ ಉಸಾಬರಿ ಎಂದು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಾರೆ.ಆ ದೇವರು ನಮಗೆ ವಿಶೇಷವಾದ ಶಕ್ತಿಯನ್ನು ನೀಡಿದ್ದಾನೆ ಪರರ ಕಷ್ಟಗಳಿಗೆ ಸ್ಪಂದಿಸುವ, ಅನ್ಯರ ದುಃಖದಲ್ಲಿ ಭಾಗಿಯಾಗುವ ಅವರಿಗೆ ಧೈರ್ಯ ಹೇಳುವ ಶಕ್ತಿ ನಮಗೆಲ್ಲ ಇದೆ. ಆದರೂ ನಾವು ಆ ಮಾರ್ಗದಲ್ಲಿ ನಡೆಯುತ್ತಿದ್ದೇವೆಯೇ? ಎಂಬುದನ್ನು ಯೋಚಿಸಬೇಕಾಗಿದೆ. ಎಷ್ಟೋ ಜನರಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆಂಬ ಮನಸ್ಸಿದ್ದರೂ ಕೂಡ, ಅದರಿಂದ ತಮಗೇನಾದರೂ ತೊಂದರೆ ಉಂಟಾಗಬಹುದೆಂಬ ಭಯದಿಂದ ಅನೇಕರು ಹಿಂಜರಿಯುತ್ತಿದ್ದಾರೆ.ನಮ್ಮ ಘನ ಸರ್ಕಾರವು ಹಾಗೂ ಅನೇಕ ಸಂಘ-ಸಂಸ್ಥೆಗಳು ಇದರ ನಿಟ್ಟಿನಲ್ಲಿ ಗಮನಹರಿಸಿ, ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ.ಉದಾಹರಣೆಗೆ ಯಾರಿಗಾದರೂ ರಸ್ತೆಯಲ್ಲಿ ಅಪಘಾತವಾದಾಗ ಮೊದಲು ನೋಡಿದವರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಹಾಗೂ ಅಂತಹವರ ವಿರುದ್ಧ ಯಾವುದೇ ವಿಚಾರಣೆ ಮಾಡದ ಹಾಗೆ ಕಾನೂನು ಜಾರಿಗೊಳಿಸಿದರೆ ಎಷ್ಟೋ ಜನ ಸಹಾಯ ಮಾಡಲು ಮುಂದಾಗುತ್ತಾರೆ.
ಅಂತಿಮವಾಗಿ "ಮಾನವೀಯತೆ ಎಂಬುದು ಅಂತಃಕರಣ ಮೂಲದ ಒಂದು ಹುಡುಕಾಟ. ಈ ಹುಡುಕಾಟವೇ ಒಂದು ಹೋರಾಟ" ಮನುಷ್ಯ ಮಾರೀಚನಾಗದೇ, ಮಾನವೀಯತೆ ಮರಿಚಿಕೆಯಾಗದೇ, ದರ್ಶನತ್ಮಕವಾಗುವುದೇ ಒಂದು ಸೋಜಿಗದ ಪಯಣವಾಗುತ್ತದೆ. "ಮುಂದೆ ಮುಗಿಯದ ಹಾದಿ, ನಿಲ್ಲದ ಪಯಣ"ಈ ನಿಲ್ಲದ ಪಯಣದಲ್ಲಿ ನಾವು ಮಾನವೀಯತೆಯನ್ನು ಮನುಷ್ಯನಲ್ಲಿ ತುಂಬಲು,ಅವನು ಮಗುವಾಗಿದ್ದಾಗಲೇ ಶಿಕ್ಷಣದ ಮೂಲಕ ಅವನಲ್ಲಿ ಮಾನವೀಯ ಗುಣಗಳನ್ನು ಬೆಳೆಸುವುದು ಶಿಕ್ಷಕರ ಹಾಗೂ ಪೋಷಕರ ಜವಾಬ್ದಾರಿ. ಆಗ ಆ ಮಗು ಮುಂದೆ ಬೆಳೆದು ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುತ್ತಾನೆ.ಇಲ್ಲದಿದ್ದರೆ ಶಿಕ್ಷಕರು ಹಾಗೂ ಪೋಷಕರು ಈ ಜವಾಬ್ದಾರಿ ಮರೆತರೆ,ಮುಂದೊಂದು ದಿನ ಅಮಾನವೀಯತೆ ಸಮಾಜದ ತುಂಬಾ ತಾಂಡವವಾಡುತ್ತದೆ. ಆಗ ಇಡೀ ಜಗತ್ತೆ ನಾಶವಾಗುವುದು ಖಂಡಿತ ಆದ್ದರಿಂದ ನಾವೆಲ್ಲ ಮನುಷ್ಯರಾಗಿ, ಮನುಷ್ಯತ್ವವನ್ನು, ಮಾನವೀಯತೆಯನ್ನು ಉಳಿಸಿ-ಬೆಳೆಸಿ ಬಾಳೋಣ......
- ಮಹದೇವಪ್ರಸಾದ್. ಜಿ ಕೆಸ್ತೂರು, ಶಿಕ್ಷಕರು ಸಹಕಾರ್ಯದರ್ಶಿ, ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ, ಮೈಸೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ