ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ರಾಯಭಾಗ ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿದ್ದ ಸ್ವರಚಿತ ಜಾನಪದ ಶೈಲಿಯ ತ್ರಿಪದಿ ವಾಚನ ಸ್ಪರ್ಧೆಯ ವರದಿ.
ದಿನಾಂಕ 22 ರವಿವಾರದಂದು ಮಧ್ಯಾಹ್ನ 3:30ಕ್ಕೆ ಪ್ರಾರಂಭವಾದ ಸ್ವರಚಿತ ಜಾನಪದ ಶೈಲಿಯ ತ್ರಿಪದಿ ವಾಚನ ಸ್ಪರ್ಧೆಗೆ ಯುವ ವಾಗ್ಮಿಗಳು ಹಾಗೂ ಹಾರೂಗೇರಿ ಪಟ್ಟಣದ ಪತ್ರಕರ್ತರಾದ ಸುನೀಲ ಕಬ್ಬೂರ ಅವರ
ಹುಮ್ಮಸ್ಸಿನ ಸ್ವಾಗತದೊಂದಿಗೆ ಕಾರ್ಯಕ್ರಮಕ್ಕೆ ನಾಂದಿ ಹೇಳಲಾಯಿತು.
ನಂತರ ಸಹೋದರಿ ಶ್ರೀಮತಿ ರೇಖಾ ಕಲ್ಲಪ್ಪ ಗುಪ್ತೆ ಅವರು ತಮ್ಮ ಸುಮಧುರ ಕಂಠದಿಂದ ಪ್ರಾರ್ಥನೆ ಗೀತೆಯನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ಮುಖ್ಯ ಘಟ್ಟವಾದ ಉದ್ಘಾಟನೆಯನ್ನು ಹಾರೂಗೇರಿ ಪಟ್ಟಣದ ಹೆಸರಾಂತ ಖ್ಯಾತ ಹೃದಯ ರೋಗ ತಜ್ಞರು ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರೂ ಆದ ಡಾಕ್ಟರ್ ಎಲ್ ಎಸ್ ಜಂಬಗಿಯವರು ಜ್ಯೋತಿ ಪ್ರಜ್ವಲನೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ತ್ರಿಪದಿ ಸಾಹಿತ್ಯ, ಜಾನಪದ ಕಲೆಯ 1 ಅವಿಭಾಜ್ಯ ಅಂಗವಿದ್ದಂತೆ, ಸ್ವರಚಿತ ಜಾನಪದ ಶೈಲಿಯ ತ್ರಿಪದಿ ವಾಚನ ಸ್ಪರ್ಧೆಯನ್ನು ಆಯ್ಕೆ ಮಾಡಿಕೊಂಡಿರುವುದು ನನಗೆ ಸಂತಸ ತಂದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಚಿಲುಮೆಗಳ ಚಿಗುರೊಡೆಯಲು ಇದು 1ವಿನೂತನವಾದ ಪ್ರಯೋಗ ಎಂದುತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾಕ್ಟರ್ ಪಿ ಜಿ ಕೆಂಪಣ್ಣವರ ವಹಿಸಿಕೊಂಡಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ತಾಲ್ಲೂಕು ಅಧ್ಯಕ್ಷೆ ಶ್ರೀಮತಿ ಲತಾ ಹುದ್ದಾರ-ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯನ್ನು ರಾಜ್ಯಮಟ್ಟದಲ್ಲಿ ಸ್ಥಾಪನೆ ಮಾಡುವುದರೊಂದಿಗೆ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ವಿಶೇಷವಾದ ಆಸಕ್ತಿಯನ್ನು ಉಳ್ಳಂಥ ಯುವ ಪ್ರತಿಭೆಗಳಿಗೆ ಅದರಲ್ಲೂ ವಿಶೇಷವಾಗಿ ಮಹಿಳಾ ಬರಹಗಾರರಿಗೆ ಹೊಸದೊಂದು ವೇದಿಕೆಯನ್ನು ಕಲ್ಪಿಸಿಕೊಡುವುದರೊಂದಿಗೆ ಈ ದಿನ ರಾಯಬಾಗ ತಾಲ್ಲೂಕಿನ ಘಟಕದ ವತಿಯಿಂದ ಸ್ವರಚಿತ ಜಾನಪದ ಶೈಲಿಯ ತ್ರಿಪದಿ ವಚನ ಸ್ಪರ್ಧೆಯನ್ನು ಏರ್ಪಡಿಸಲು ಅವಕಾಶ ಮಾಡಿಕೊಟ್ಟಂತಹ ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಅವರಿಗೆ ತುಂಬು ಹೃದಯದ ಪೂರ್ವಕವಾದ ಅಭಿನಂದನೆಗಳನ್ನು ಹೇಳಿದರು.
ಮುಖ್ಯ ಅತಿಥಿಗಳ ಸ್ಥಾನದಲ್ಲಿ ವಿರಾಜಮಾನರಾಗಿದ್ದ ಶಿಕ್ಷಕರು ಬಿ ಎಲ್ ಘಂಟಿ ಗುರುಗಳು ಮಾತನಾಡಿ ತ್ರಿಪದಿ ಸಾಹಿತ್ಯ ಜಾನಪದ ಸಾಹಿತ್ಯದಲ್ಲಿ ಹಾಸು ಹೊಕ್ಕಾಗಿದೆ. ಲಯಬದ್ಧವಾದ ರಾಗದೊಂದಿಗೆ ಸುಲಲಿತವಾಗಿ ಸುಶ್ರಾವ್ಯವಾಗಿ ಮೂಡಿ ಬಂದ ನಮ್ಮ ಪೂರ್ವಜರ ನುಡಿಗಟ್ಟುಗಳೇ ಇಂದಿನ ತ್ರಿಪದಿ ಸಾಹಿತ್ಯವಾಗಿ ಉಳಿದುಕೊಂಡು ಬೆಳೆದುಕೊಂಡು ಬಂದಿವೆ ಎಂದರು.
ವಿಶೇಷ ಉಪನ್ಯಾಸಕ ಸ್ಥಾನವನ್ನು ಅಲಂಕರಿಸಿದ್ದ ರೇವತಿ ಮಠದ ಅವರು ಮಾತನಾಡಿ, ಎಲ್ಲ ಸಾಹಿತ್ಯದ ಮೂಲ ತಾಯಿ ಬೇರು ಎಂದರೆ ಅದು ಜಾನಪದ ಸಾಹಿತ್ಯ, ಅನಕ್ಷರಸ್ಥರಾಗಿದ್ದ ನಮ್ಮ ಪೂರ್ವಜರು ಆಡಿದ, ಹಾಡಿದ ರಸವತ್ತಾದ ನುಡಿಗಳೇ ಜಾನಪದ ಶೈಲಿಯ ತ್ರಿಪದಿ ಕವನಗಳಾಗಿ ಹೊರಹೊಮ್ಮಿವೆ. ಹೆಣ್ಣು ಮಕ್ಕಳಿಗೂ ಜಾನಪದ ಸಾಹಿತ್ಯಕ್ಕೂ 1ಅವಿನಾಭಾವ ಸಂಬಂಧವಿದೆ ಎಂದರು. ಕುರುಹೇ ಇಲ್ಲದ ಜಾನಪದ ಸಾಹಿತ್ಯ ಅತ್ಯದ್ಭುತವಾದದ್ದು ಎಂದು ಹೇಳುತ್ತಾ ಆಶಾ ಮೇಡಂ ಅವರು ಇನ್ನೂ ಅತ್ಯುನ್ನತವಾದ ಸಾಧನೆಯ ಶಿಖರವನ್ನು ಏರಲಿ ಎಂದು ತಮ್ಮ ಗದ್ಗದಿತ ಧ್ವನಿಯಿಂದ ಭಾವುಕರಾಗಿ ಹೇಳುವಾಗ ಕಣ್ಣಿನಿಂದ ಸಣ್ಣದೊಂದು ಹನಿ ಜಾರಿದಂತಿತ್ತು. "ಹೆಣ್ಣಿನ ಜನ್ಮಕ್ಕೂ ಅಣ್ಣ ತಮ್ಮರು ಬೇಕ " ಎಂಬ ತ್ರಿಪದಿ ವಾಚನದೊಂದಿಗೆ ತಮ್ಮ ವಿಶೇಷ ಉಪನ್ಯಾಸಕ್ಕೆ ಮಂಗಲ ಹೇಳಿದರು.
ತ್ರಿಪದಿ ಜಾನಪದ ಶೈಲಿಯ ಸ್ವರಚಿತ ಕವನ ವಾಚನ ಸ್ಪರ್ಧೆಯು ಪ್ರಾರಂಭವಾದಾಗ ಸ್ಪರ್ಧಾಳುಗಳಾಗಿ ಒಟ್ಟು 44 ಕವಿ ಮತ್ತು ಕವಿಯತ್ರಿಯರ ಹೆಸರುಗಳು ನೋಂದಣಿಯಾಗಿದ್ದವು. ಆದರೆ ಕವನವಾಚನ ಮಾಡಲು ಹಾಜರಾಗಿದ್ದ ಕವಿ ಮತ್ತು ಕವಿಯತ್ರಿಯರ ಸಂಖ್ಯೆ 35 ಆಗಿತ್ತು . ಉಳಿದ 27 ಜನರು ಗೈರುಹಾಜರಿಯಲ್ಲಿ ಕಂಡುಬಂದರು.
ತ್ರಿಪದಿ ಕವನ ವಾಚನ ಆಯೋಜಕರ ಅಪ್ಪಣೆಯ ಮೇರೆಗೆ ಕೊನೆಯ ಕ್ಷಣದಲ್ಲಿ ಸರತಿಯಲ್ಲಿ ಇರದ 5 ಕವಿ ಮತ್ತು ಕವಿಯತ್ರಿಯರಿಗೆ ಕವನವಾಚನ ಮಾಡಲು ಅವಕಾಶ ಕಲ್ಪಿಸಿಕೊಡಲಾಯಿತು. ಇದರಿಂದ ಒಟ್ಟು ಕವನ ವಾಚನ ಮಾಡಿದವರ ಸಂಖ್ಯೆ 40ಕೆ ಏರುವುದರೊಂದಿಗೆ ಸ್ಪರ್ಧೆಯು ಮುಕ್ತಾಯವಾಯಿತು.
ಕಾರ್ಯಕ್ರಮದ ಕೇಂದ್ರ ಬಿಂದುಗಳು, ಎಲ್ಲ ಗಣ್ಯಮಾನ್ಯರ ಹಾಗೂ ಸ್ಪರ್ಧಾಳುಗಳ ಗಮನ ಸೆಳೆಯುವ ನಿರ್ಣಾಯಕ ಸ್ಥಾನವನ್ನು ಅಲಂಕರಿಸಿದ ಶ್ರೀಯುತ ಶಂಕರ್ ಬಿ ಕ್ಯಾಸ್ತೆ ಸರ್ ಮಾತನಾಡಿ, ಕಾವ್ಯದ ಮೂಲ ಬೇರು ಜನಪದ, ಸಾಹಿತ್ಯದ ಮೂಲ ಬೇರು ತ್ರಿಪದಿ. ಅಂತಹ ಜನಪದ ಶೈಲಿಯ ತ್ರಿಪದಿ ಕವನ ವಾಚನ ಸ್ಪರ್ಧೆಯನ್ನು ಆಯ್ಕೆ ಮಾಡಿದ್ದು ತುಂಬಾ ಸಂತಸ ತಂದಿದೆ. ಆದರೆ ಕೆಲವರು ಜನಪದ ಸಾಹಿತ್ಯವನ್ನು ಹೊರತುಪಡಿಸಿ ತ್ರಿಪದಿ ಕವನಗಳನ್ನು ವಾಚನ ಮಾಡಿದರು. ಈ ಸ್ಪರ್ಧೆಯಲ್ಲಿ ಕನ್ನಡ ಛಂದಸ್ಸನ್ನು ಆಯ್ಕೆ ಮಾಡಿಕೊಂಡಿ ರುವುದು ಶ್ಲಾಘನೀಯ. ಲಯಬದ್ಧವಾದ ಛಂದಸ್ಸು ಎಂದರೆ ಅದು ತ್ರಿಪದಿ. ಸರ್ವಜ್ಞ ಮೂರ್ತಿ ಗಳು ಸಹ ತಮ್ಮ ವಚನಗಳನ್ನು ತ್ರಿಪದಿ ಸಾಹಿತ್ಯದ ಮೂಲಕವೇ ಹೇಳಿಕೊಂಡು ಬಂದಿದ್ದಾರೆ, ಛಂದಸ್ಸಿನಲ್ಲಿ ಅಂಶ ಛಂದಸ್ಸು ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಹಲಸಂಗಿ ಗೆಳೆಯರನ್ನು ಸೇರಿದಂತೆ ಇತರೆ ತ್ರಿಪದಿ ವಾಚಕರನ್ನು ಸ್ಮರಿಸಿದರು. " ಅಣ್ಣ ಬಂದಾನಂತ ಬಡಿವಾರ ಮಾಡಬ್ಯಾಡ "ಎಂಬ ಸ್ವರಚಿತ ಜಾನಪದ ಶೈಲಿಯ ತ್ರಿಪದಿ ವಾಚನದೊಂದಿಗೆ ತಮ್ಮ ಮಾತುಗಳಿಗೆ ವಿದಾಯ ಹೇಳಿದರು.
ಕಾರ್ಯಕ್ರಮವನ್ನು ತಮ್ಮ ಸುಲಲಿತವಾದ ನಿರೂಪಣೆಯೊಂದಿಗೆ ಸೋಮು ಹೊರಟ್ಟಿ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಎಲ್ಲರ ಅಂತರ್ಜಾಲದ ಸೂತ್ರಗಳನ್ನು ಸರಿಯಾದ ರೀತಿಯಲ್ಲಿ ಭರಮು ತೇಲಿ ಇವರು ನಿರ್ವಹಣೆ ಮಾಡಿದರು. ಇವೆಲ್ಲವನ್ನೂ ತಾಳ್ಮೆಯಿಂದ ನೋಡುತ್ತ ಕುಳಿತಿದ್ದ ನಾನು ಅಂದರೆ ಚಿದಾನಂದ ಐಹೊಳೆ ಕಾರ್ಯಕ್ರಮಕ್ಕೆ ಹಾಜರಾದ ಮತ್ತು ಕವನ ಸ್ಪರ್ಧೆಯಲ್ಲಿ ಭಾಗಿಗಳಾದ ಎಲ್ಲ ಗಣ್ಯ ಮಾನ್ಯರಿಗೆ ವಂದಿಸುವ 1ಅವಕಾಶ ನನ್ನದಾಯಿತು. ಎಲ್ಲ ಕವಿ ಕವಿಯತ್ರಿಯರ ಕವನ ವಾಚನದ ಪ್ರೇರಣೆಯಿಂದ ಸ್ಥಳದಲ್ಲಿಯೇ " ಕದ್ದು ಕಲೆಹಾಕಿದ ಪ್ರೀತಿ, ಸದ್ದಿಲ್ಲದೆ ಕೊಟ್ಟಾಕಿ, ಮುದ್ದು ಮಾತುಗಳಲ್ಲಿ ನಕ್ಕು ನೀ ನಲಿವಾಕಿ॥ನನ್ನ ಗೆಳತಿ ॥ ರಸಮಯದ ಜೀವನದಿ ಬೆರೆತಾಕಿ " ಎಂಬ ಸ್ವರಚಿತ ಜಾನಪದ ಶೈಲಿಯ ಕವನ ವಾಚನದೊಂದಿಗೆ ನನ್ನ ವಂದನಾರ್ಪಣೆಯೊಂದಿಗೆ ತ್ರಿಪದಿ ಕವನ ವಾಚನ ಸ್ಪರ್ಧೆ ಮುಕ್ತಾಯವಾಯಿತು .
- ವರದಿ ಚಿದಾನಂದ ಎಂ ಐಹೊಳೆ,
ಪತ್ರಕರ್ತರು ಮುಗಳಖೋಡ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ