ಭಾರತದ ಅದ್ಭುತ ವಾಸ್ತುಶಿಲ್ಪಗಳು: ಮಧುರೈಯ ಮೀನಾಕ್ಷಿ ಸುಂದರೇಶ್ವರ ದೇಗುಲ.
ಪ್ರವಾಸದ ಸವಿ ನೆನಪುಗಳ ಮೆಲುಕು ಹಾಕುವುದೆಂದರೆ ಎಲ್ಲಿಲ್ಲದ ಸಂತೋಷ.ಕಳೆದ 7ವರ್ಷದ ಹಿಂದೆ ನನ್ನ ಕುಟುಂಬದವರ ಜೊತೆ ತಮಿಳುನಾಡಿನ ಪ್ರಸಿದ್ಧವಾದ ಪುಣ್ಯಕ್ಷೇತ್ರಗಳಾದ ಮಧುರೈ 'ಪಳನಿ, ರಾಮೇಶ್ವರಂ, ಕನ್ಯಾಕುಮಾರಿ ಇತ್ಯಾದಿ ಸ್ಥಳಗಳನ್ನುಸದಾವಕಾಶ ಒದಗಿ ಬಂದಿತ್ತು . ಅಂದಿನ ಮಧುರವಾದ ನೆನಪಿನ ಬುತ್ತಿಯಿಂದ ಹಾಗೆಯೇ ಘಟನೆಗಳು ಕಣ್ಮುಂದೆ ಸುಳಿದಾಡುತ್ತಾ ಮತ್ತೊಮ್ಮೆ ಆ ಸ್ಥಳಗಳು ನಮ್ಮನ್ನು ಕೈಬೀಸಿ ಕರೆಯುತ್ತಿರುವಂತೆ ಭಾಸವಾಗುತ್ತದೆ .2014 ರ ಅವಧಿ ಹುಬ್ಬಳ್ಳಿಯಿಂದ ರೈಲು ಪ್ರಯಾಣದ ಮೂಲಕ ನಮ್ಮ ಪ್ರವಾಸ ಸಾಗಿತ್ತು ಪ್ರಯಾಣದಲ್ಲಿರುವ ಸದಸ್ಯರು ನನ್ನ ಪತಿ ಕೃಷ್ಣ, ಮಧುಗೌಡ 'ಸಂತೋಷ್' ಜಯಸುಧಾ ,ಸವಿತಾ, ಅನಿತಾ, ಆಕಾಶ್ ಮತ್ತು ಶಶಾಂಕ್ ಎಂಬ ಹನ್ನೆರಡು ವರ್ಷದ ಮಕ್ಕಳು ಹಾಗೂ ನಾನು .ಹುಬ್ಬಳ್ಳಿಯಿಂದ ಮುಂಬೈ ಎಕ್ಸ್‌ಪ್ರೆಸ್ ಟ್ರೈನಿನಲ್ಲಿ ನಮ್ಮ ಪ್ರಯಾಣ ಸಾಗಿತ್ತು. ಮನೆಯಲ್ಲಿಯೇ ಅಡುಗೆ ಮಾಡಿಕೊಂಡು ಹೋಗಿದ್ದರಿಂದ ಮಧ್ಯಾಹ್ನದ ಊಟ ರೈಲಿನಲ್ಲಿ ಆಯಿತು.ಆಕಾಶ್ ಮತ್ತು ಶಶಾಂಕನಿಗೆ ಮೊದಲ ಬಾರಿ ರೈಲು ಪ್ರಯಾಣದ ಅನುಭವ ಮುದನೀಡಿತ್ತು ಸಾಕಷ್ಟು ಜನ ವ್ಯಾಪಾರಿಗಳು ಪ್ರತಿ ಸ್ಟೇಷನ್ ಬಂದಾಗ ವಸ್ತುಗಳನ್ನು ಮಾರಾಟ ಮಾಡುತ್ತಿರುವ ದೃಶ್ಯ ನೆನಪಿಸಿಕೊಂಡರೆ ದೇಶದಲ್ಲಿಯೇ ಅತಿ ಹೆಚ್ಚು ಜನರಿಗೆ ವೃತ್ತಿಯನ್ನು ಕಲ್ಪಿಸಿದ ಉದ್ಯಮವೆಂದರೆ ರೈಲು ಸಾರಿಗೆ ಎಂಬುದು ಸ್ಪಷ್ಟವಾಗುತ್ತದೆ.
ಚಾಯ್ ,ಚಾಯ್, ಕಾಫಿ ,ಕಾಫಿ, ಎಂದು ಕೂಗುತ್ತಾ ಬರುವ ವೃತ್ತಿ ಜೀವಿಗಳ ಧ್ವನಿ ಇನ್ನೂ ಹಾಗೇ ಕಿವಿಯಲ್ಲಿ ಗುಂಯ್ ಗುಡುತ್ತಿದೆ.ಮನೆಯ ಚಹಾದ ಸವಿಯೇ ಬೇರೆ ರೈಲಿನ ಚಹಾದ ಸವಿಯೇ ಬೇರೆ ಎನ್ನಿಸಿತು .ಬೆಳಿಗ್ಗೆ 8 ಗಂಟೆಗೆ ಮಧುರೈ ತಲುಪಿ, ಅಲ್ಲಿಯೇ 2 ದಿನ ತಂಗಿದೆವು .2 ದಿನದ ಮಧುರೈಯಲ್ಲಿನ ವಾಸ್ತು ಶಿಲ್ಪವನ್ನು ನೋಡಿದ ಅನುಭವಗಳು ಅವಿಸ್ಮರಣೀಯ. ಮಧುರೈ ನಗರಕ್ಕೆ ಮಧುರಾಪುರಿ, ಅಮೃತ ನಗರಿ ಎಂದು ಕರೆಯುತ್ತಾರೆ .ಮಧುರೈ ಪುಣ್ಯಕ್ಷೇತ್ರವೆಂದು ಕರೆಸಿಕೊಂಡಿದ್ದೇ ಇಲ್ಲಿಯ **ಮೀನಾಕ್ಷಿ ಸುಂದರೇಶ್ವರರ್* ದೇಗುಲದಿಂದ.ದಿನನಿತ್ಯ ಹದಿನೈದು ಸಾವಿರಕ್ಕೂ ಅಧಿಕ ಭಕ್ತರು ದೇಶ ವಿದೇಶಗಳಿಂದ ಇಲ್ಲಿಗೆ ಆಗಮಿಸುತ್ತಾರೆ .ಮೀನಾಕ್ಷಿ ಅಮ್ಮನ ದೇವಾಲಯದ ಎದುರು ನಿಂತು ತಲೆ ಎತ್ತಿ ಗೋಪುರವನ್ನು ಒಮ್ಮೆ ನೋಡಿದಾಗ ಮೈ ರೋಮಾಂಚನವಾಗುತ್ತದೆ ಕಣ್ಣು ಹಾಯಿಸಿದಷ್ಟು ದೂರ ವೈವಿಧ್ಯಮಯವಾದ ಪೌರಾಣಿಕ ಕೆತ್ತನೆಗಳ ಶಿಲ್ಪಕಲಾಕೃತಿಗಳು,ಶಿವ ಪಾರ್ವತಿಯರ ಕಲ್ಯಾಣೋತ್ಸವದ ಶಿಲ್ಪಕಲಾಕೃತಿ ದುರ್ಗಾಮಾತೆಯ ವಿವಿಧ ಅವತಾರಗಳನ್ನುಗಳನ್ನು ನೋಡಲು ಕಣ್ಣುಗಳೆರಡು ಸಾಲದು .ಇಷ್ಟೊಂದು ಭವ್ಯವಾದ ಶಿಲ್ಪಕಲಾಕೃತಿಗಳನ್ನು ನಿರ್ಮಿಸಿದಂತಹ ಆ ಕಲಾ ನೈಪುಣ್ಯ ದೇವರುಗಳಿಗೆ ನನ್ನ ನಮನಗಳು. 45ಎಕರೆ ಪ್ರದೇಶದಲ್ಲಿ ಹರಡಿರುವ ಮೀನಾಕ್ಷಿ ಅಮ್ಮನ ದೇವಾಲಯದ ಆವರಣದ ಉದ್ದ 254 ಮೀಟರ್ 237ಮೀಟರ್ ಅಗಲವಿದೆ .ಈ ದೇವಾಲಯಕೆ 14 ಭವ್ಯವಾದ ಗೋಪುರಗಳಿವೆ. ದಕ್ಷಿಣದ ಗೋಪುರ ಎತ್ತರವಾದುದು 170 ಫೀಟ್ . ದೇವಾಲಯದ 4 ದಿಕ್ಕಿಗೂ 4 ಮಹಾದ್ವಾರಗಳಿವೆ. ನಾವು ಪಶ್ಚಿಮ ದ್ವಾರದ ಮೂಲಕ ದೇವಾಲಯ ಪ್ರವೇಶಿಸಿದೆವು.
ಮಧುರೈ ತಮಿಳುನಾಡಿನ ಪ್ರಾಚೀನ ನಗರ ಮತ್ತು ಎರಡನೇ ದೊಡ್ಡ ನಗರ. ದಕ್ಷಿಣ ಭಾರತದಲ್ಲೇ ಅತ್ಯಂತ ಹಳೆಯ ನಗರವಾಗಿದ್ದು, *ವೈಗೈ* ಎಂಬ ಪವಿತ್ರ ನದಿಯ ದಡದಲ್ಲಿ ನೆಲೆಗೊಂಡಿದೆ. ಈ ಮಧುರೈ ನಗರವನ್ನು 'ಎಂದಿಗೂ ನಿದ್ರಿಸದ ನಗರ' 'ಸಾಂಸ್ಕೃತಿಕ ನಗರ' 'ಮಲ್ಲಿಗೆ ನಗರ' 'ದೇವಾಲಯಗಳ ನಗರ' ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ .ಕ್ರಿಸ್ತಪೂರ್ವ 3ನೇ ಶತಮಾನಕ್ಕಿಂತ ಹಳೆಯ ಇತಿಹಾಸ ಹೊಂದಿದೆ. ಇದು ಪಾಂಡ್ಯ ರಾಜರ ರಾಜಧಾನಿಯಾಗಿತ್ತು. ಈ ನಗರದಲ್ಲಿರುವ ಮೀನಾಕ್ಷಿ ಅಮ್ಮನ ದೇವಾಲಯ ತಮಿಳುನಾಡಿನಲ್ಲಿ ಅತ್ಯಂತ ಸುಂದರ ದೇವಾಲಯ.ಶ್ರೀ ಆದಿಶಂಕರಾಚಾರ್ಯರು ಉಗ್ರ ಸ್ವರೂಪಿಯಾದ ದೇವಿಯನ್ನು ಸೌಮ್ಯಸ್ವರೂಪದವಳಾಗಿ, ಹಸನ್ಮುಖಿಯಾಗಿ ಪರಿವರ್ತಿಸಿದ ರೋಚಕ ಕಥೆಯನ್ನು ಈ ದೇವಾಲಯ ಹೊಂದಿದೆ .ಮಧುರೈ ಪಟ್ಟಣದ ಹೃದಯ ಭಾಗದಲ್ಲಿರುವ ಪ್ರಾಚೀನ ಕಾಲದ ಶಿಲ್ಪಕಲಾ ವೈಭವಕ್ಕೆ ಸಾಕ್ಷಿಯಾದ ಈ ದೇವಾಲಯ ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ .ಮಧುರೆ ಮೀನಾಕ್ಷಿ ದೇವಾಲಯದಲ್ಲಿ ಶಿವ ಮತ್ತು ಪಾರ್ವತಿಯನ್ನು ಆರಾಧಿಸಲಾಗುತ್ತದೆ.ಪಾರ್ವತಿದೇವಿಯ ಅಂಶವೇ ಮೀನಾಕ್ಷಿ ಅಮ್ಮ. ಮೀನಾಕ್ಷಿ ಎಂಬುದು ಮೀನು ಮತ್ತು ಅಕ್ಷಿ ಎಂಬ 2ಪದಗಳ ಸಮಾಗಮದಿಂದ ಆಗಿದೆ .ಅಂದರೆ ಮೀನಿನಂತೆ ಕಣ್ಣುಗಳನ್ನು ಹೊಂದಿ ಸುಂದರವಾಗಿ ಕಂಗೊಳಿಸುವವಳು.
ಇಲ್ಲಿಯ ಸ್ಥಳ ಪುರಾಣದ ಪ್ರಕಾರ ಹಿಂದೆ ಮಲಯದ್ವಜ ಎಂಬ ಪಾಂಡ್ಯರಾಜನಿಗೆ ಮಕ್ಕಳಾಗಿರುವುದಿಲ್ಲ. ಮಕ್ಕಳ ಭಾಗ್ಯಕ್ಕಾಗಿ ದೇವರಲ್ಲಿ ಹರಕೆಯನ್ನು ಹೊತ್ತು ಯಜ್ಞಯಾಗಾದಿಗಳನ್ನು ಮಾಡುತ್ತಾನೆ. ನಂತರ ಇಳಿಯವಯಸ್ಸಿನಲ್ಲಿ ಪುತ್ರಕಾಮೇಷ್ಟಿಯಾಗವನ್ನು ಕೈಗೊಂಡಾಗ, ಪಾರ್ವತೀ ದೇವಿ ಪ್ರಸನ್ನಳಾಗಿ ತಾನೇ ಪುತ್ರಿಯಾಗಿ ಅಗ್ನಿಕುಂಡದಿಂದ ಬಾಲಕಿಯ ರೂಪದಲ್ಲಿ ಬರುತ್ತಾಳೆ . ಈಕೆಗೆ *ತಡತ್ತಗೈ* ಎಂದು ಹೆಸರನ್ನು ಇಡುತ್ತಾರೆ .ಪಾರ್ವತಿದೇವಿಯ ಅಂಶವಾದ ಬಾಲಕಿ ತಡತ್ತಗೈ ಅಸಹಜ ದೈಹಿಕ ರಚನೆಯಿಂದ ಕೂಡಿರುತ್ತಾಳೆ. ಈ ಬಾಲಕಿ ಸಹಜವಲ್ಲದ 3 ಸ್ತನಗಳನ್ನು ಹೊಂದಿ ಅಸಹಜವಾದ ದೈಹಿಕ ಸ್ವರೂಪ ಪಡೆದಿರುತಾಳೆ . ಇದರಿಂದ ಮಲಯದ್ವಜ ರಾಜನು ಚಿಂತಾಕ್ರಾಂತನಾಗುತ್ತಾನೆ .ಆಗ ಅಶರೀರ ವಾಣಿಯೊಂದು ಕೇಳಿಸುತ್ತದೆ. ತಡತ್ತಗೈ ತನ್ನ ಬಾಳಸಂಗಾತಿಯನ್ನು ನೋಡಿದೊಡನೆಯೇ ಅವಳ ಅಸಹಜ ಶರೀರ ತಾನಾಗಿಯೇ ಸರಿಯಾಗಿ ಸುಂದರ ರೂಪವನ್ನು ಪಡೆಯುತ್ತದೆ ಎಂದು ತಿಳಿಸಿತು.
ಮಹಾಸುಂದರಿ, ಮಹಾವೀರಳೂ ಆದ ಈಕೆ 4 ಲೋಕಗಳಾದ ಬ್ರಹ್ಮಲೋಕ, ವೈಕುಂಠ ,ಕೈಲಾಸ, ಮತ್ತು ಅಮರಾವತಿ ಗಳನ್ನು ವಶಪಡಿಸಿಕೊಳ್ಳಲು ಮುಂದಾಗುತ್ತಾಳೆ. 3ಲೋಕಗಳನ್ನು ಸೋಲಿಸಿ, ಶಿವನ ಕೈಲಾಸ ಪರ್ವತದ ಕಡೆ ಹೋದಾಗ ಶಿವನ ಭೂತಗಣಾದಿಗಳನ್ನು ಮತ್ತು ನಂದಿಯನ್ನು ಸೋಲಿಸುತ್ತಾಳೆ. ಕೊನೆಯದಾಗಿ ಶಿವನ ಹತ್ತಿರ ಬಂದಾಗ ಶಿವನನ್ನು ನೋಡಿ ಆಕೆಗೆ ಪ್ರೇಮಾಂಕುರವಾಗುತ್ತದೆ. ಆ ಕ್ಷಣವೇ ಅವಳ ಅಸಹಜ ದೇಹದಲ್ಲಿ ಇರುವ ಮೂರನೇ ಸ್ಥನ ಮಾಯವಾಗುತ್ತದೆ. ಇದರಿಂದ ಶಿವನೇ ತನ್ನ ಪತಿ ಎಂದು ತಿಳಿದು ನಾಚಿಕೊಂಡು ಯುದ್ಧವನ್ನು ಬಿಟ್ಟು ಅರಮನೆಗೆ ಹಿಂತಿರುಗುತ್ತಾಳೆ .
ತಡತ್ತಗೈ ಅಥವಾ ಮೀನಾಕ್ಷಿ ಮತ್ತು ಶಿವನ ವಿವಾಹ ಮಧುರೆಯಲ್ಲಿ ನಿಶ್ಚಿತವಾಗುತ್ತದೆ. ಪಾರ್ವತಿದೇವಿಯ ಸಹೋದರ ಸ್ಥಾನದಲ್ಲಿ ಮಹಾವಿಷ್ಣುವೇ ಮದುವೆಯನ್ನು ನಡೆಸಿಕೊಡುತ್ತಾನೆ. ನಂತರ ಶಿವನೇ ಸುಂದರೇಶ್ವರನಾಗಿ ನೆಲೆಸುತ್ತಾನೆ. ಪ್ರತಿವರ್ಷವೂ ಮೀನಾಕ್ಷಿ ಅಮ್ಮನ ಮಂದಿರದಲ್ಲಿ ಏಪ್ರಿಲ್ /ಮೇ ತಿಂಗಳಲ್ಲಿ ಕಲ್ಯಾಣೋತ್ಸವ ವನ್ನು ಅತಿ ವಿಜೃಂಭಣೆಯಿಂದ ಆಚರಿಸುತ್ತಾರೆ.
ಆದಿ ಶಂಕರಾಚಾರ್ಯರು ಭಾರತದಲ್ಲಿರುವ ಶಕ್ತಿಪೀಠ ಸ್ಥಳಗಳಲ್ಲಿ ಶ್ರೀಚಕ್ರವನ್ನು ಪ್ರತಿಷ್ಠಾಪಿಸಿದ್ದಾರೆ. ಆದರೆ ಮೊಟ್ಟ ಮೊದಲು ಶ್ರೀ ಚಕ್ರವನ್ನು ಮಧುರೆಯ ಮೀನಾಕ್ಷಿ ಅಮ್ಮನ್ ದೇವಾಲಯದಲ್ಲಿ ಪ್ರತಿಷ್ಠಾಪಿಸಿದರು .ಉಗ್ರ ರೂಪದಲ್ಲಿದ್ದ ದೇವಿಯನ್ನು ಶಾಂತಗೊಳಿಸಬೇಕೆಂದು ಬಾಲಕ ಆದಿಶಂಕರಾಚಾರ್ಯರು ನಿರ್ಧರಿಸಿ ಯೋಜನೆಯೊಂದನ್ನು ಹಾಕುತ್ತಾರೆ. ದೇವಿಯನ್ನು ಪಗಡೆಯಾಟಕ್ಕೆ ಕರೆಯುತ್ತಾರೆ. ಪಗಡೆಯಾಟ ಆಡಬೇಕಾದರೆ ತಮ್ಮ ಮಂತ್ರಶಕ್ತಿಯಿಂದ ಗೆರೆಗಳನ್ನು ಹಾಕುತ್ತಾ, ಶ್ರೀಚಕ್ರದಲ್ಲಿ ದೇವಿಯನ್ನು ಬಂಧಿಸುತ್ತಾರೆ.ಅದು ದೇವಿಗೆ ತಿಳಿಯುವುದಿಲ್ಲ . ಬಂಧನದಲ್ಲಿದ್ದ ದೇವಿ ಹೊರ ಬರಲು ಸಾಧ್ಯವಾಗದಿದ್ದಾಗ, ಬಂಧನದಿಂದ ಮುಕ್ತಗೊಳಿಸು ಎನ್ನುತ್ತಾಳೆ. ಆಗ ಆದಿಶಂಕರಾಚಾರ್ಯರು ಮಾತೆ ನಿನ್ನ ಈ ಉಗ್ರಸ್ವರೂಪವನ್ನು ಬಿಟ್ಟು ,ಶಾಂತ ಸ್ವರೂಪಳಾಗಿ ನೀನು ಇಲ್ಲೇ ನೆಲೆಸುವುದಾದರೆ ಬಂಧನದಿಂದ ಮುಕ್ತಗೊಳಿಸುತ್ತೇನೆ ಎಂದು ಹೇಳಿದಾಗ ,ದೇವಿಯು ತನ್ನ ಉಗ್ರ ಸ್ವರೂಪವನ್ನು ಬಿಟ್ಟು ಶಾಂತಸ್ವರೂಪದ, ಮಾತೃಸ್ವರೂಪಿಯಾಗಿ ಅಲ್ಲಿಯೇ ನೆಲೆಸುತ್ತಾಳೆ .ಅಂದಿನಿಂದ ಇಂದಿನವರೆಗೂ ಬೇಡಿ ಬಂದ ಭಕ್ತರ ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಅಲ್ಲಿಯೇ ನೆಲೆ ನಿಂತಿದ್ದಾಳೆ .ಕೈಯಲ್ಲಿ ಗಿಳಿ,' ವಜ್ರ ಖಚಿತ ಕಿರೀಟ, ಪಚ್ಚೆಯಹಾರ, ಧರಿಸಿದ ದಿವ್ಯ ತೇಜಸ್ಸಿನ ಮೀನಾಕ್ಷಿ ಅಮ್ಮನನ್ನು ಎಷ್ಟು ನೋಡಿದರೂ ನೋಡುತ್ತಲೇ ಇರಬೇಕು ಎನ್ನಿಸುತ್ತದೆ. ಭಕ್ತಿಯಿಂದ ಬೇಡಿಕೊಂಡರೆ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಅಮ್ಮನನ್ನು ಕಾಣಲು ಪ್ರತಿನಿತ್ಯವೂ ಸಾವಿರಾರು ಜನ ದೇಗುಲಕ್ಕೆ ಆಗಮಿಸುತ್ತಾರೆ. ಇತಿಹಾಸದ ಪ್ರಕಾರ ಈ ದೇವಾಲಯ ಏಳನೆಯ ಶತಮಾನಕ್ಕೆ ಸೇರಿದ್ದಾಗಿದೆ .ಅಲ್ಲದೆ ಪಾಂಡ್ಯ ಅರಸರು ನಿರ್ಮಿಸಿದ ಭವ್ಯ ದೇವಾಲಯ ,ದೆಹಲಿಯ ಖಿಲ್ಜಿ ವಂಶದ ಮಲ್ಲಿಕಾಫರನದಾಳಿಗೆ ಒಳಗಾಗಿದೆ.14 ನೇಶತಮಾನದಲಿ ದಾಳಿಗೆ ಒಳಪಟ್ಟ ನಂತರ ಇತ್ತೀಚೆಗೆ ಇದನ್ನು ಜೀರ್ಣೋದ್ಧಾರ ಮಾಡಲಾಗಿದೆ. ಈ ಭವ್ಯ ದೇವಾಲಯದ ಒಳಾಂಗಣದಲ್ಲಿ 33 ಸಾವಿರ ಶಿಲ್ಪಕಲಾಕೃತಿಗಳಿವೆ. ಮುಖ್ಯ ಗರ್ಭಗೃಹದ ಮೇಲೆ ಚಿನ್ನದ ಗೋಪುರವಿದೆ.ಶಿವನ ದೇಗುಲದ ಎಡಭಾಗದಲ್ಲಿ ಮೀನಾಕ್ಷಿ ಅಮ್ಮನ ದೇವಾಲಯವಿದೆ .ಅಲ್ಲದೆ ಸಾವಿರ ಸ್ತಂಭಗಳ ಸಭಾಂಗಣ ಎಂದು ಕರೆಯುವ ಸ್ಥಳವಿದೆ. ಒಂದೇ ಸರಳರೇಖೆಯಲ್ಲಿ ಬರುವಂತೆ ಕಟ್ಟಿರುವಂತಹ ಸ್ತಂಭಗಳ ರಚನಾ ಶೈಲಿ ಅತ್ಯದ್ಭುತ.ಪ್ರತಿಯೊಂದು ಸ್ತಂಭವೂ ವೈಶಿಷ್ಟ್ಯಪೂರ್ಣವಾದ ಶಿಲ್ಪಕಲಾ ಕೆತ್ತನೆಯನ್ನು ಒಳಗೊಂಡಿದೆ .ದೇವಾಲಯದ ಪ್ರಾಂಗಣದಲ್ಲಿ ಅತಿ ದೊಡ್ಡ ಕೆರೆ ಇದೆ ಇದನ್ನು *ಪೋತ೯ಮರೈಕುಳಂ* ಅಂದರೆ ಚಿನ್ನದ ತಾವರೆಕೆರೆ ಎಂದು ಕರೆಯುವರು. ವಿಶೇಷವೆಂದರೆ ಈ ಕೆರೆಯಲ್ಲಿ ಯಾವುದೇ ಜಲಚರಗಳಿಲ್ಲ. ತಮಿಳು ಪುರಾಣ ಕಥೆಯ ಪ್ರಕಾರ ಈ ಕೆರೆ ಹೊಸ ಸಾಹಿತ್ಯದ ಮೌಲ್ಯವನ್ನು ನಿರ್ಣಯಿಸುವ ತೀರ್ಪುಗಾರನೆಂದು ಹೇಳಲಾಗುತ್ತದೆ. ಅಂದರೆ ಸಾಹಿತಿಗಳು ತಮ್ಮ ಕೃತಿಗಳನ್ನು ಈ ಕೆರೆಯಲ್ಲಿ ಬಿಡುತ್ತಾರೆ. ಪಾಂಡಿತ್ಯಪೂರ್ಣವಾದ ಸಾಹಿತ್ಯಗಳು ತೇಲುತ್ತವೆ. ಉಳಿದವುಗಳು ನಾಶಹೊಂದುತ್ತವೆ ಎಂಬ ನಂಬಿಕೆ ಇದೆ.ಮೀನಾಕ್ಷಿ ಅಮ್ಮನ ದೇವಾಲಯದ ಹೊರಗೆ ಏಕಶಿಲೆಯಿಂದ ಕೆತ್ತಿದ ದೊಡ್ಡದಾದ ಗಣೇಶನ ವಿಗ್ರಹವಿದೆ.
1812 ರಲ್ಲಿ ನಡೆದ ನೈಜ ಘಟನೆಯೊಂದನ್ನು ಮೀನಾಕ್ಷಿ ಅಮ್ಮನ ಪವಾಡವೆಂದು ತಿಳಿಸುತ್ತಾರೆ. ರೋಸ್ ಪೀಟರ್ ಎಂಬ ಬ್ರಿಟಿಷ್ ಅಧಿಕಾರಿ ಮಧುರೈನ ಕಲೆಕ್ಟರ್ ಆಗಿದ್ದ .ಒಂದು ದಿನ ಬೆಳಗಿನ ಜಾವ ಗುಡುಗು ಮಿಂಚಿನಿಂದ ಕೂಡಿದ ವಾತಾವರಣ, ಬಾಲಕಿಯೋರ್ವಳು ಕಾಲ್ಗೆಜ್ಜೆ ಹಾಕಿಕೊಂಡು ಈ ಅಧಿಕಾರಿಯ ಮನೆಯ ಮುಂದೆ ಹೋಗುತ್ತಾ, ಹೊರಗೆ ಬಾ ಪೀಟರ್ ಎಂದು ಕೂಗಿದಳಂತೆ.ಹೊರಗೆ ಬಂದು ನೋಡುತ್ತಿದ್ದಂತೆ ಆ ಬಾಲಕಿ ಕಾಣಿಸಲಿಲ್ಲ. ಆದರೆ ಆತನ ಮನೆಯಲ್ಲಾ ಕುಸಿದು ಬಿದ್ದಿತ್ತು.ತಾಯಿ ಮೀನಾಕ್ಷಿ ಅಮ್ಮನೇ ನನ್ನನ್ನು ಬದುಕಿಸುವುದಕ್ಕೋಸ್ಕರ ಬಾಲಕಿಯ ರೂಪದಲ್ಲಿ ಬಂದಿರಬಹುದು ಎಂದು ಅವರು ಗದ್ಗದಿತರಾಗಿ ಅಮ್ಮನಿಗೋಸ್ಕರ ವಜ್ರಖಚಿತ ಪಾದುಕೆಗಳನ್ನು ಅರ್ಪಿಸಿದ್ದಾರೆ. ಈಗಲೂ ಅವುಗಳನ್ನು *ಪೀಟರ್ ಪಾದುಕಂ* ಎಂದು ಕರೆಯುತ್ತಾರೆ ಎನ್ನುವ ಪವಾಡದ ವಿಷಯ ತಿಳಿಯಿತು.
ನಾವು ಹುಬ್ಬಳ್ಳಿಯಿಂದ ಮದುರೈವರೆಗೆ ರೈಲಿನಲ್ಲಿ ಪ್ರಯಾಣ ಬೆಳಸಿದಾಗ ಮಧುರೈನ ಸ್ಥಳ ಪುರಾಣದ ಕಥೆಯನ್ನು ದಾರಿಯುದ್ದಕ್ಕೂ ಓದುತ್ತಾ ಬಂದಿದ್ದೆ.ಆ ದೇವಾಲಯವನ್ನು ನೋಡನೋಡುತ್ತಿದ್ದಂತೆ ಓದಿದ ಎಲ್ಲ ವಿಷಯಗಳು ಒಂದರ ನಂತರ ಒಂದರಂತೆ ಮರುಕಳಿಸಿತ್ತು.ನಾವೆಲ್ಲರೂ ಹಣ್ಣು ಕಾಯಿ ಕರ್ಪೂರದೊಂದಿಗೆ ತಾಯಿ ಮೀನಾಕ್ಷಿ ಅಮ್ಮನ ಹಾಗೂ ಶಿವನ ದೇಗುಲದ ದರ್ಶನ ಪಡೆದು ಹೊರಗಡೆ ಬಂದೆವು.ನಮ್ಮ ಗಮನ ಆ ದೇಗುಲದ ಹೊರಗಡೆ ಬೀದಿ ವ್ಯಾಪಾರಿಗಳು ಚಹಾ ಮಾಡುತ್ತಿದ್ದ ಕಡೆ ಹೋಯಿತು.ಮಧುರೈನ ಚಹಾದ ರುಚಿ ಮತ್ತೆ ಮತ್ತೆ ನಮ್ಮನ್ನು ಮಧುರೈಗೆ ಕರೆಸುವಂತೆ ಇತ್ತು .ಗ್ಲಾಸಿಗೆ ಸಕ್ಕರೆ ಹಾಕಿ ಮೇಲಿನಿಂದ ಎತ್ತಿ ಚಹಾವನ್ನು ಗ್ಲಾಸಿಗೆ ಸುರಿಯುವ ರೀತಿಯೇ ವಿಶಿಷ್ಟ .ಬುರುಗಿನಿಂದ ಕೂಡಿದ ಚಹಾವನ್ನು ಒಮ್ಮೆ ಕುಡಿದರೆ ಮತ್ತೆ ಮತ್ತೆ ಕುಡಿಯಬೇಕೆನಿಸುತ್ತಿತ್ತು .ಹೋಟೆಲ್ ನಲ್ಲಿ ನಾಷ್ಟ ಮಾಡಿದ್ರು ಚಹಾ ಮಾತ್ರ ಬೀದಿ ವ್ಯಾಪಾರಿಗಳ ಬಳಿಯೇ ಬಂದು ಕುಡಿಯುತ್ತಿದ್ದೆವು.ಅವರು ಚಹಾ ಮಾಡಿದ ರೀತಿಯಲ್ಲಿ ನಿಮಗೇಕೆ ಬರುವುದಿಲ್ಲ ಎಂದು ಎಷ್ಟೋ ಸಾರಿ ನಮ್ಮ ಮನೆಯವರು ರೇಗಿಸಿದ್ದು ಉಂಟು. ಹಾಗೆಯೇ ಕೆಲವೊಂದಿಷ್ಟು ಮದುರೈ ವಿಶೇಷ ವಸ್ತುಗಳನ್ನು ಖರೀದಿಸಿ ಪ್ರಯಾಣ ಮುಂದುವರೆಸಿದೆವು .
ಮಧುರೈಯಲ್ಲಿ ನೋಡಬಹುದಾದಂಥ ಇನ್ನಿತರ ಸ್ಥಳಗಳೆಂದರೆ *ತಿರುಮಲೈ ನಾಯಕರ್ ಮಹಲ್**ಎಂಬ ಇಂಡೋ ಸಾರ್ಸೆನಿಕ್ ಅಥವಾ ಭಾರತೀಯ ಇಸ್ಲಾಂ ಶೈಲಿಯಲ್ಲಿ ತಿರುಮಲೈ ನಾಯಕರ್ ಎಂಬ ರಾಜನು ಕಟ್ಟಿಸಿದ ಅರಮನೆ .ಈಗ ಇದು ರಾಷ್ಟ್ರೀಯ ಸ್ಮಾರಕವಾಗಿದ್ದು ಪುರಾತತ್ವ ಇಲಾಖೆಯ ಆಶ್ರಯದಲ್ಲಿದೆ. ಈ ಅರಮನೆಯಲ್ಲಿ 58 ಅಡಿ ಎತ್ತರ 5 ಅಡಿ ಸುತ್ತಳತೆ ಹೊಂದಿರುವ 248 ಕಂಬಗಳಿವೆ .ಅವುಗಳು ಗಜಗಾತ್ರದ ಕಂಬಗಳೇ ಸರಿ.ಅಲ್ಲಿರುವ ಸಾಕಷ್ಟು ಪುರಾತನ ವಸ್ತುಗಳನ್ನು ಸಂರಕ್ಷಿಸಿಡಲಾಗಿದೆ .
ಮತ್ತೊಂದು *ದೇವಾಲಯ ಅಜಗರ್ ಕೋಯಲ್*ಇಲ್ಲಿ ನವಗ್ರಹಗಳನ್ನು ಹೊಂದಿರುವ ವಿಷ್ಣು ದೇವಾಲಯವಿದೆ .ಹೆಚ್ಚಾಗಿ ನವಗ್ರಹಗಳನ್ನು ನಾವು ಶಿವ ದೇವಾಲಯದಲ್ಲಿ ಕಾಣುವುದು ವಿಶೇಷ .ಇಲ್ಲಿಯ ಪ್ರವೇಶ ದ್ವಾರದಲ್ಲಿ ಬದರಿ ನಾರಾಯಣ ದೇವಾಲಯದ ಮಾದರಿಯನ್ನು ಉತ್ತರ ಭಾರತದ ಕೈಲಾಸ ಪರ್ವತದಲ್ಲಿರುವ ಬದರಿನಾಥದಂತೆ ನಿರ್ಮಿಸಲಾಗಿದೆ.
ಬಹುಶಃ ಶಬ್ದಗಳಿಂದ ಮಧುರೈನ ದೇವಾಲಯಗಳ ವಾಸ್ತು ಶಿಲ್ಪದ ವರ್ಣನೆ ಮಾಡುವುದು ನನ್ನಿಂದ ಅಸಾಧ್ಯವೆನಿಸುತ್ತದೆ .ಲಕ್ಷಾಂತರ ಜನರ ಕಣ್ಮನಗಳನ್ನು ತಣಿಸುವಂತೆ ವಾಸ್ತುಶಿಲ್ಪಗಳನ್ನು ನಿರ್ಮಿಸಿ ಈ ಜಗದಿಂದ ಕಣ್ಮರೆಯಾದ ಆ ಎಲ್ಲ ವಾಸ್ತುಶಿಲ್ಪಿಗಳಿಗೆ ನಮ್ಮೆಲ್ಲರ ನಮನ.ಪ್ರಯಾಣದುದ್ದಕ್ಕೂ ನಮಗೆ ಎದುರಾದ ಸಮಸ್ಯೆಯೆಂದರೆ ತಮಿಳುಭಾಷೆ .ಭಾಷೆ ಗೊತ್ತಿರದ ಸ್ಥಳದಲ್ಲಿ ಅಲ್ಪಸ್ವಲ್ಪ ಹಿಂದಿ, ಇಂಗ್ಲಿಷ್, ಭಾಷೆಯ ಜೊತೆಗೆ 2 ದಿನದ ಪ್ರವಾಸ ಮಧುರವಾಗಿತ್ತು .ಆದ್ದರಿಂದಲೇ ಭಾಷಾ ಸಾಮರಸ್ಯವನ್ನು ಬೆಳೆಸಿಕೊಳ್ಳಬೇಕೆನ್ನುವುದು ಸತ್ಯ ಎನಿಸಿತು.ನಾವು ನಮ್ಮ ನಾಡ ಭಾಷೆಯನ್ನು ಎಷ್ಟು ಪ್ರೀತಿಸುತ್ತೇವೆಯೋ ಅಷ್ಟೇ ಅನ್ಯಭಾಷೆಗಳನ್ನು ಪ್ರಪಂಚ ತಿಳಿಯುವುದಕ್ಕೋಸ್ಕರವಾದರೂ ಕಲಿಯಬೇಕೆನಿಸಿತು. ತಮಿಳುನಾಡಿನ ಜನತೆಯ ವೇಷಭೂಷಣ, ವೈಶಿಷ್ಟತೆ, ಪೂಜಾ ಪದ್ದತಿಗಳು, ಅವರ ಉಡುಗೆ ತೊಡುಗೆಯ ಶೈಲಿ, ವಿಭಿನ್ನತೆಯ ಪರಿಚಯ ನಮಗೆಲ್ಲಾ ಆಯಿತು.ನಾವು ಮಧುರೈಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ ನಮ್ಮ ಪ್ರಯಾಣವನ್ನು ಕನ್ಯಾಕುಮಾರಿಯತ್ತ ಬೆಳೆಸಿದೆವು................
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಇಲಕಲ್ಲ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ