ಮಂಗಳವಾರ, ಅಕ್ಟೋಬರ್ 12, 2021

ಪಾರಾಯಣದ ವೈಭವದಲ್ಲಿ ದೇವಿಯ ಆರ್ಭಟ (ಲೇಖನ) - ಮಂಜುನಾಥ ಹಿರೇಮಠ ದಂಡಸೋಲಾಪುರ, ಚಾಮನಾಳ.

"ಪಾರಾಯಣದ ವೈಭವದಲ್ಲಿ ದೇವಿಯ ಆರ್ಭಟ "
ಪರಶಿವನ ಪತ್ನಿಯಾದ ಶ್ರೀ ದುರ್ಗಾ ದೇವಿಯು ಅತ್ಯಂತ ಶಕ್ತಿಶಾಲಿ ದೇವತೆಯಾಗಿದ್ದು ಆಧಿಶಕ್ತಿ, ಪರಾಶಕ್ತಿ  ಎಂದೂ ಕರೆಯುತ್ತಾರೆ. ಆಧಿಶಕ್ತಿಯನ್ನು ಮಹಾಕಾಳಿ, ಚಾಮುಂಡೇಶ್ವರಿ, ಶಾಂಭವಿ , ಭೈರವಿ ಹೀಗೆ ಅನೇಕ ರೂಪದಲ್ಲಿ ಆರಾಧಿಸುತ್ತಾರೆ. ಶ್ರೀ ಜಗನ್ಮಾತೆಯು ಅವತಾರ ಎತ್ತಿರುವದು ರಾಕ್ಷಸರ ಸಂಹಾರಕ್ಕಾಗಿ. ಮಹಿಷಾಸುರನೆಂಬ ರಾಕ್ಷಸ ದೇವಲೋಕಕ್ಕೆ ದಾಳಿಮಾಡಿ, ದೇವತೆಗಳನ್ನು ಹೊರಗೆ ಅಟ್ಟಿದನಂತೆ ಆಗ ದೇವತೆಗಳು ನಮ್ಮನ್ನು ರಕ್ಷಿಸು ಎಂದು ಶಿವನ ಬಳಿಗೆ ಹೋದಾಗ ಬ್ರಹ್ಮ -ವಿಷ್ಣು -ಮಹೇಶ್ವರರು ತಮ್ಮ ಶಕ್ತಿಯನ್ನೆಲ್ಲ ಸೇರಿಸಿ  ದೇವತೆಯನ್ನು ಸೃಷ್ಟಿಸಿದರು. ಈಶ್ವರನು ತ್ರಿಶೂಲವನ್ನು, ವಿಷ್ಣುವು ಚಕ್ರವನ್ನು, ಇಂದ್ರನು ವಜ್ರ ಆಯುಧವನ್ನು, ಪರ್ವತ ರಾಜನು ಸಿಂಹವನ್ನು ನೀಡಿದನು. ಎಲ್ಲಾ ಆಯುಧಗಳಿಂದ ದೇವಿಯು ಯುದ್ಧಕ್ಕೆ ಸಿದ್ದಳಾಗಿ ರಾಕ್ಷಸರನ್ನು ಸಂಹಾರ ಮಾಡಿದಳು. ಮಹಿಷಾಸುರನನ್ನು ಸಂಹರಿಸಿ ಮಹಿಷ ಮರ್ದಿನೀಯಾದಳು. ಹೀಗೆ ಮುಂದುವರೆದ ಪಾರಾಯಣದ ಅಧ್ಯಾಯದಲ್ಲಿ ದೈತ್ಯ ರಾಕ್ಷಸರಾದ ಸುಂಭ - ನಿಸುಂಭರ ಅಟ್ಟಹಾಸ ಮುರಿದು ಸಂಹಾರಮಾಡಿ ಶಾಂಭವಿಯಾದಳು, ರಾಕ್ಷಸ ವಂಶಕ್ಕೆ ಸೇರಿದ ಚಂಡಮುಂಡರನ್ನು ಸಂಹರಿಸಿ ಚಾಮುಂಡೇಶ್ವರಿಯಾದಳು. ದೇವತೆಗಳ ರಕ್ಷಣೆಯ ಹೊಣೆಗಾರಿಕೆ ತಾಯಿಯ ಮೇಲಿತ್ತು. ರಾಕ್ಷಸರ ಸಂಹಾರಕ್ಕಾಗಿಯೇ ತಾಯಿಯ ಜನನ. ದೇವಲೋಕದ ಇಂದ್ರನನ್ನು ಕಷ್ಟಕ್ಕೆ ಸಿಲುಕಿಸಿ ಹಿಂಸೆ ನೀಡಿದ ರಾಕ್ಷಸರನ್ನು ಸಂಹರಿಸಿದ  ಜಗದಂಬೆಯು ದೇವಲೋಕದ  ಉಳಿವಿಗೆ ಕಾರಣಿಕರ್ತಳಾಗಿದ್ದಾಳೆ.ಸಂಹಾರ ಮಾಡುವಾಗ ದೇವಿಯ ಆರ್ಭಟ ರಾಕ್ಷಸರನ್ನು ಬೆಚ್ಚಿ ಬೀಳಿಸುವದಲ್ಲದೆ ಸಂಹಾರದ ನಂತರ ರುಂಡಗಳನ್ನು ಮಾಲೆಯಾಗಿ ಹಾಕಿಕೊಂಡು ದೇವಿಯು ರುಂಡಮಾಲಿನಿಯಾದಳು. ರಾಕ್ಷಸನಾದ ರಕ್ತಬೀಜಾಸುರನು ಹೇಗೆಂದರೆ ಅವನ ದೇಹದಿಂದ ಒಂದು ಹನಿ ರಕ್ತ ಕೆಳಗೆ ಬಿದ್ದರೂ ಸಾವಿರ  ರಾಕ್ಷಸರು ಹುಟ್ಟಿಕೊಳ್ಳುತ್ತಿದ್ದರು ಆಗ ಶ್ರೀ ದುರ್ಗಾ ಮಾತೆಯೂ ತನ್ನ ನಾಲಿಗೆಯನ್ನು ನೆಲದಮೇಲೆ ಹಾಕಿ ಸಂಹಾರ ಮಾಡಿ ರಾಕ್ಷಸನ ದೇಹದಿಂದ ಹೊರಬರುವ ರಕ್ತವನ್ನೆಲ್ಲಾ ಕುಡಿದಳು ಅಷ್ಟೆ ಏಕೆ ಆ ರಾಕ್ಷಸನನ್ನು ನುಂಗಿ ಕಾಳಿಮಾತೆಯಾದಳು. ತಾಯಿಯ ಎಲ್ಲಾ ಹೆಸರುಗಳ ಹಿಂದೆ ಬಹುದೊಡ್ಡ ಚರಿತ್ರೆಯೇ ಇದೆ. ಹೀಗೆ ಇನ್ನೊಂದು ಸನ್ನಿವೇಶ ನೋಡುವದಾದರೆ  ಧೂಮರಾಕ್ಷಸನು ದೇವಿಯ ಮೇಲೆ ಆಕ್ರಮಣ ಮಾಡಿದಾಗ ಅವನ ಕರುಳನ್ನೇ  ಮಾಲೆಯಾಗಿಸಿಕೊಂಡಳು ಹೀಗೆ  ದುರ್ಗಾ ದೇವಿಯ ಮಹಿಮೆ ಅನಂತ. ನಂಬಿದರೆ ಕೈಬಿಡದೆ ಕಾಪಾಡುವ ಜಗದಂಬೆ ತಾಯಿಯು  ಕಣ್ಣೀರು ಒರೆಸುವ ತಾಯಿ ಇವಳು. ತಬ್ಬಲಿ ಮಕ್ಕಳಿಗೆ ತಾಯಿಯಾಗಿದ್ದಾಳೆ.  ಈ ನವರಾತ್ರಿ ಸಮಯದಲ್ಲಿ ದೇವಿಯ ಮಹಿಮೆಯನ್ನೊಳಗೊಂಡ ಪಾರಾಯಣ  ಆರಂಭವಾಗಿ 9 ದಿನದಲ್ಲಿ ಮುಗಿಯುತ್ತದೆ  ಈ ಪಾರಾಯಣದಲ್ಲಿ ಸಂಹಾರದ ಕ್ಷಣಗಳು, ದೇವಿಯ ಆರ್ಭಟ ಬಹು ರೋಚಕವಾಗಿದೆ. ನವರಾತ್ರಿ ಎಂದರೆ ಪಾರಾಯಣದ ವೈಭವ ಈ ವೈಭವದಲ್ಲಿ ದೇವಿಯ ಆರ್ಭಟ ಇರುವುದು ಒಂದು ವಿಶೇಷ. ಅಷ್ಟೆ ಏಕೆ ದೇವಿಯ ಹೆಸರಿನಲ್ಲಿ 9 ದಿನಗಳವರೆಗೂ ದೀಪ ಹಾಕಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಇದುವೇ ನಿಜವಾದ ನವರಾತ್ರಿ ಆಚರಣೆ. ದುಃಖದಲ್ಲಿರುವವರನ್ನು ಆ ಜಗದಂಬೆ ಕಾಪಾಡುವಳು. ಮಕ್ಕಳು ಹೇಗೆ ತಾಯಿಯನ್ನು ಹಂಬಲಿಸಿ ಹೋದರೆ ಬೇಡಿದ್ದನ್ನು ಕೊಡುವಳೋ ಹಾಗೆ ಈ ತಾಯಿಯಾದ ಶ್ರೀ ದುರ್ಗಾ ದೇವಿಯು ಬೇಡಿದವರಿಗೆ ಬೇಡಿದ್ದನ್ನು  ನೀಡುವ ಕರುಣಾಮಯಿಯಾಗಿದ್ದಾಳೆ. ತಂದೆ- ತಾಯಿ ಇದ್ದರು ಇಲ್ಲದಂತೆ ಇರುವ ಅದೆಷ್ಟೋ ಮಕ್ಕಳಿಗೆ ತಾಯಿಯಾಗಿ ಸಲಹುತ್ತಿದ್ದಾಳೆ. ಮನದಲ್ಲಿ ದೇವಿಯ ಪುಟ್ಟ ಗುಡಿ ಸ್ಥಾಪಿಸಿ ಅಲ್ಲಿ ದೇವಿಯನ್ನು ಪೂಜಿಸಿದರೆ ಇಷ್ಟಾರ್ಥ ಪೂರೈಸುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ದೇವಿಯ ಕುರಿತು ದುರ್ಗಾ ಕವಚದಲ್ಲಿ ಯಾ ದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತ ನಮಸ್ತೆ ನಮೋ ನಮಃ - ಯಾದೇವಿ ಸರ್ವಭೂತೆಷು ಖಡ್ಗ ರೂಪೇಣ ಸಂಸ್ಥಿತ ನಮಸ್ತೆ ನಮೋ ನಮಃ  ಹೀಗೆ  ದೇವಿಯನ್ನು ಖಡ್ಗ ರೂಪಿಣಿ, ಶಕ್ತಿ ರೂಪಿಣಿ ಎಂದು ವರ್ಣನೆ ಮಾಡಿರುವದು ದೇವಿಯ ಸ್ವರೂಪಕ್ಕೆ ಮೆರಗು ನೀಡಿದಂತಾಗಿದೆ. ಸಿಂಹದ ಮೇಲೆ ಕುಳಿತು ಬರುವ ತಾಯಿ - ನಾನಾವಿಧದ ಆಯುಧ ಹಿಡಿದು  ಬರುವ ತಾಯಿ - ರುಂಡಗಳನ್ನೇ ಮಾಲೆಯಾಗಿಸಿಕೊಂಡ ನನ್ನ ತಾಯಿ - ಆ ತಾಯಿಗೆ ಸಾವಿರ ಹೆಸರು..
ಕೊನೆಗೆ ಜಗತ್ತಿನ ಕುರಿತಾಗಿ ದೇವಿ ನುಡಿದ ಮಾತುಗಳು ಗೋಚರಿಸುತ್ತವೆ ಅದೇನೆಂದರೆ ರಾಕ್ಷಸ ಕುಲ ಸಂಹಾರಕ್ಕಾಗಿಯೇ ನನ್ನ ಜನನ.ಮುಂದೆ ಜಗತ್ತಿನಲ್ಲಿ ಅಧರ್ಮವೇ ತಾಂಡವವಾಡುತ್ತದೆ  ಪಾಪದ ಕೊಡವು ತುಂಬಿ ಭೂಮಿಯ ಅಂತ್ಯದಲ್ಲಿ ಜಗತ್ತು ಸರ್ವನಾಶವಾಗಿ ಮತ್ತೆ ಶಿವನು ಹೊಸದಾದ ಲೋಕದ ಸೃಷ್ಠಿಗೆ ಕಾರಣಿಕರ್ತನಾಗುವನು  ಎಂಬುದು ತಾಯಿಯ ನುಡಿ. ಯಾರು  ಈ ತಾಯಿಯನ್ನು ಪೂಜಿಸುತ್ತಾರೋ ಅವರಿಗೆ ಕೈ ಹಿಡಿದು ನಡೆಸುವಳು. ಕೈಯಲ್ಲಿ ತ್ರಿಶೂಲವಿಡಿದು ದುರ್ಗೆಯಾದ ಒಂದು ರೂಪ - ಖಡ್ಗವಿಡಿದು ಚಾಮುಂಡೇಶ್ವರಿಯಾದ ತಾಯಿಯ ಇನ್ನೊಂದು ರೂಪ - ಕೊರಳಲ್ಲಿ ರುಂಡಗಳ ಮಾಲೆ ಧರಿಸಿಬಂದ ತಾಯಿಯ ಮಗದೊಂದು ರೂಪ - ಸಿಂಹದ ಮೇಲೆ ಕುಳಿತು ಬರುವ ಜಗದಂಬೆಯ  ಪಾರಾಶಕ್ತಿಯ ರೂಪ - ಕೆಂಪು ಬಣ್ಣದ ಉಡುಗೆ ಧರಿಸಿ ಬರುವ ತಾಯಿಯ ರೂಪ ಅನೇಕ. 

- ಮಂಜುನಾಥ ಹಿರೇಮಠ ದಂಡಸೋಲಾಪುರ, ಚಾಮನಾಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...