ಅಂಬೇಡ್ಕರ್ v/s ಮನುಸ್ಮೃತಿ
ಡಾ. ಬಿ.ಆರ್ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಡಿಸೆಂಬರ್ ೨೫, ೧೯೨೭ ರಂದು ಸಾರ್ವಜನಿಕವಾಗಿ ಸುಟ್ಟುಹಾಕಿದರು. ಈ ಘಟನೆ ನಡೆದು ೯೨ ವರ್ಷಗಳಾದವು. ಆದರೂ ಮನುಸ್ಮೃತಿ ಆಚರಣೆ ಸಮಾಜದಲ್ಲಿ ಇಂದಿಗೂ ಗರಿಷ್ಠ ಪ್ರಮಾಣದಲ್ಲಿ ಜೀವಂತವಿರುವುದು ದುರಂತವೇ ಸರಿ.
ಮನು ಎಂಬುವವನು ಇದ್ದನೇ ? ಅಥವಾ ಮನು ಎಂಬುವವರು ಅನೇಕರಿದ್ದರೆ ? ಅಥವಾ ಇಡೀ ಸಮಾಜವೇ ಮನುಸ್ಮೃತಿಯನ್ನು ರೂಪಿಸಿದೆಯೇ ? ಸಮಾಜದಲ್ಲಿ ಈಗಾಗಲೇ ಆಚರಣೆಯಲ್ಲಿರುವ ಲಿಂಗ, ವರ್ಗ, ಜಾತಿ, ವರ್ಣ ತಾರತಮ್ಯದ ಸಂಗತಿಗಳನ್ನು, ಆ ಕುರಿತು ಜನಮಾನಸದಲ್ಲಿರುವ ನಂಬಿಕೆಗಳನ್ನು, ಆಚರಣೆಗಳನ್ನು ಕ್ರೂಢೀಕರಿಸಿ ಬಂದಿರುವ ಗ್ರಂಥ ಮನುಸ್ಮೃತಿಯಾಗಿದೆ. ಭಾರತದ ಇತಿಹಾಸವನ್ನು ಕೆದಕಿ ನೋಡಿದಾಗ ಕ್ರಿಸ್ತಪೂರ್ವ ೩೦೦೦ ವರ್ಷಗಳಿಂದಲೂ ಅಸ್ತಿತ್ವದಲ್ಲಿದ್ದ ಸಿಂಧೂ ಬಯಲಿನ ನಾಗರೀಕತೆಯಲ್ಲಿ ಎಲ್ಲರೂ ಸಮಾನತೆಯಿಂದ ಜೀವನ ನಡೆಸುತ್ತಿದ್ದುದು ತಿಳಿಯುತ್ತದೆ. ಕ್ರಿ.ಪೂ ೬ ನೇ ಶತಮಾನದಲ್ಲಿ ಗೌತಮಬುದ್ದನ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳುವಳಿಯಿಂದ ಅದು ಮತ್ತಷ್ಟು ಬಲ ಪಡೆದುಕೊಂಡು ಇನ್ನಷ್ಟು ಗಟ್ಟಿಯಾಯಿತು. ಕ್ರಿ.ಪೂ ೧೮೫ ರ ಸುಮಾರಿನಲ್ಲಿ ಬೌದ್ದ ಅನುಯಾಯಿಯಾಗಿದ್ದ ಮೌರ್ಯರ ದೊರೆ ಬೃಹದ್ರತ ಮೌರ್ಯನನ್ನು ಕೊಂದು ಪುಷ್ಯಮಿತ್ರ ಶುಂಗ ಎಂಬ ಬ್ರಾಹ್ಮಣ ಮೌರ್ಯ ಸಾಮ್ರಾಜ್ಯದ ಅಧಿಪತಿಯಾದನು. ಇವನ ಕಾಲದಲ್ಲಿ ಸುಮತಿ ಬಾರ್ಗವ ಎಂಬ ವ್ಯಕ್ತಿಯಿಂದ ಮನುಧರ್ಮಶಾಸ್ತ್ರ ಎಂಬ ಗ್ರಂಥವನ್ನು ಬರೆಸಿ ಅದನ್ನು ಕಾನೂನು ಗ್ರಂಥವಾಗಿ ಜಾರಿ ಮಾಡಲಾಯಿತು. ಇವನ ನಂತರ ಬಂದ ಎಲ್ಲಾ ಹಿಂದೂ ರಾಜರುಗಳು ಈ ಗ್ರಂಥವನ್ನು ರಾಜ್ಯದ ಕಾನೂನಾಗಿ ಜಾರಿಗೊಳಿಸಿದರು. ಎಂದು ಅನೇಕ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಹೀಗೆ ವಿವಿಧ ದೃಷ್ಟಿಕೋನಗಳ ಮೂಲಕ ಮನುಧರ್ಮದ ಕುರಿತು ಅನೇಕ ಚರ್ಚೆಗಳು ನಡೆದಿವೆ.
ಮನುಸ್ಮೃತಿಯ ಪ್ರಥಮ ಶ್ಲೋಕದಲ್ಲಿ ಹೀಗೆ ಹೇಳಲಾಗಿದೆ. “ಏಕಾಗ್ರಚಿತ್ತನಾಗಿ ಚಿಂತೆಯಲ್ಲಿ ಮಗ್ನನಾದ ಮನು ಮಹರ್ಷಿಯ ಬಳಿಸಾರಿದಾಗ ಮಹರ್ಷಿಗಳು ಮನುವಿಗೆ ಹೀಗೆ ಹೇಳಿದರು”( ಅಧ್ಯಾಯ ೧,||೧||)
“ಭಗವಾನ್ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಲ್ಲಾ ವರ್ಣಗಳ ಹಾಗೂ ಮಿಶ್ರ ವರ್ಣಗಳ ಜನರ ಕರ್ತವ್ಯ ಹಾಗೂ ಅಕರ್ತವ್ಯ ರೂಪದ ಧರ್ಮಗಳನ್ನು ಕ್ರಮವಾಗಿ, ಶಾಸ್ತ್ರ ಅನುಸಾರವಾಗಿ ತಿಳಿಸಿ ಹೇಳಲು ನೀನು ಸಮರ್ಥನಾಗಿರುವಿ” (ಅ-೧,||೨||)
ಎಂಬುದನ್ನು ಗಮನಿಸಿದರೆ ಮನು ಎಂಬ ವ್ಯಕ್ತಿ ಇದ್ದನೆಂಬುದು ತಿಳಿಯುತ್ತದೆ. ಸ್ಮೃತಿಯ ಒಳ ಶ್ಲೋಕಗಳಲ್ಲಿ ಮಹರ್ಷಿಗಳು ಹೀಗೆ ಹೇಳುವರು, ಗೌತಮ ಮಹರ್ಷಿಗಳು ಹೀಗೆ ಹೇಳುವರು, ಬಲ್ಲ ಹಿರಿಯ ಪಾಮರರು ಹೀಗೆ ಹೇಳುವರು ಎಂಬುದನ್ನು ಉಲ್ಲೇಖಿಸಿರುವುದನ್ನು ಗಮನಿಸಿದರೆ ಸಮಾಜದಲ್ಲಿ ಈಗಾಗಲೇ ಇದ್ದ ನಂಬಿಕೆ ಆಚರಣೆಗಳನ್ನು ಕಲೆಹಾಕಿ ರಚಿತವಾದ ಕೃತಿ ಇದೆಂದು ತಿಳಿಯುತ್ತದೆ. ಮೇಲ್ವರ್ಗದ, ಮೇಲ್ಜಾತಿಯ ಬ್ರಾಹ್ಮಣ ಸಮುದಾಯ ಈ ಕೃತಿಯನ್ನು ರೂಪಿಸಿದೆ ಎಂದು ಹೇಳಲು ಯಾವ ಅಡ್ಡಿಯೂ ಇಲ್ಲ. ಅಂಬೇಡ್ಕರ್ ಅವರು ಭಾರತೀಯ ಸಮಾಜದ ಜಾತಿ ತಾರತಮ್ಯ, ಲಿಂಗ ತಾರತಮ್ಯ, ವರ್ಗ ತಾರತಮ್ಯ, ವರ್ಣ ತಾರತಮ್ಯ ಇವುಗಳ ಮೂಲ ಬೇರುಗಳು ಎಲ್ಲಿರುವುವು ಎಂಬುದನ್ನು ತಿಳಿಯಲು ಅನೇಕ ಗ್ರಂಥಗಳನ್ನು ಓದುವ ಮೂಲಕ ಹುಡುಕಾಟ ನಡೆಸಿದರು. ಅವರ ಹುಡುಕಾಟದ ದಾರಿ ಎಂತಹವರನ್ನೂ ಬೆರಗಾಗಿಸುತ್ತದೆ. ಅವರ ಹುಡುಕಾಟದ ದಾರಿಯಲ್ಲಿ ಮನುಸ್ಮೃತಿಯೇ ಭಾರತೀಯ ಸಮಾಜದಲ್ಲಿ ಹೆಮ್ಮರವಾಗಿ ಬೆಳೆದಿರುವ ಎಲ್ಲಾ ತಾರತಮ್ಯಗಳ ಮೂಲ ಬೇರು ಎಂಬುದನ್ನು ಕಂಡುಕೊಂಡರು. ಮನುಧರ್ಮ ಶಾಸ್ತ್ರ ಜಾರಿಗೆ ಬರುವ ಮುನ್ನ ಇಲ್ಲಿನ ಮಹಿಳೆಯರ ಸ್ಥಿತಿ ಉತ್ತಮವಾಗಿತ್ತು ಎಂಬುದಕ್ಕೆ ಹಲವಾರು ಉದಾಹರಣೆಗಳನ್ನು ಕೊಟ್ಟಿದ್ದಾರೆ. ಅಥರ್ವವೇದದಲ್ಲಿ ಮಹಿಳೆ ಉಪನಯನ ಪಡೆಯುವ ಹಕ್ಕು ಹೊಂದಿದ್ದಳು. ಶ್ರುತ ಸೂತ್ರದ ಪ್ರಕಾರ ಮಹಿಳೆಯರು ವೇದ, ಮಂತ್ರಗಳನ್ನು ಅಧ್ಯಯನ ಮಾಡಿ ಪಠಿಸಬಹುದಿತ್ತು. ಪಾಣಿನಿಯ ಅಷ್ಟಾದ್ಯಾಯದ ಪ್ರಕಾರ ಮಹಿಳೆಯರು ಗುರುಕುಲಗಳಲ್ಲಿ ವೇದಗಳ ಹಲವಾರು ಶಾಖೆಗಳಲ್ಲಿ ಅದ್ಯಯನ ಮಾಡಿ ಮೀಮಾಂಸದ ಪರಿಣಿತರಾಗಿದ್ದರು. ಪತಂಜಲಿಯ ಮಹಾ ಭಾಷ್ಯದಲ್ಲಿ ನಮೂದಿಸಿರುವಂತೆ ಮಹಿಳೆಯರು ಗುರುಗಳಾಗಿ ವಿದ್ಯಾರ್ಥಿಗಳಿಗೆ ವೇದಗಳನ್ನು ಭೋಧಿಸುತ್ತಿದ್ದರು. ಆದರೆ ಮನುಧರ್ಮ ಜಾರಿಯಾದ ನಂತರ ಎಲ್ಲಾ ತಾರತಮ್ಯಗಳು ಕ್ರಮೇಣವಾಗಿ ಈ ನೆಲದಲ್ಲಿ ಬೇರೂರುತ್ತಾ ಬಂದವು. ಮನುಧರ್ಮದ ಸಂಕೀರ್ಣತೆಯನ್ನು, ನೀಚ ನಡೆಯನ್ನು ಅಧಿಕೃತವಾಗಿ, ವಿವರವಾಗಿ ತಮ್ಮ ಬರವಣಿಗೆ, ಭಾಷಣಗಳ ಮೂಲಕ ಅಂಬೇಡ್ಕರ್ ಜಗತ್ತಿಗೆ ತಿಳಿಸಿದರು.
ಮನುಸ್ಮೃತಿಯಲ್ಲಿ ಅಸ್ಪೃಷ್ಯರ ಕುರಿತು, ಮಹಿಳೆಯರ ಕುರಿತು ಅವರು ಪಾಲಿಸಬೇಕಾದ ಕಠಿಣ ಕಾನೂನುಗಳನ್ನು ಹೇಳಲಾಗಿದೆ. ಅವುಗಳನ್ನು ಮಹಿಳೆಯರು, ಕೆಳಜಾತಿಗಳು ಕಡ್ಡಾಯವಾಗಿ ಪಾಲಿಸಲೇ ಬೇಕು. ಅಂತಹ ನಿಯಮಗಳನ್ನು ಮೀರಿದವರಿಗೆ ಎಂತಹ ಶಿಕ್ಷೆ ಕೊಡಬೇಕು ಎಂಬುದನ್ನು ಮನುಸ್ಮೃತಿ ಹೇಳುತ್ತದೆ. ಮನುಸ್ಮೃತಿ ಮಹಿಳೆಯರ, ದೀನ ದಲಿತರ ಹಕ್ಕು, ಸ್ವಾತಂತ್ರ್ಯಗಳನ್ನು ಕಸಿದುಕೊಂಡು ಗುಲಾಮರನ್ನಾಗಿಸಿದ್ದರಿಂದ ಅವರು ಈ ಸಮಾಜದಲ್ಲಿ ಇನ್ನೂ ಹೆಚ್ಚು ಶೋಷಣೆಗೆ ಒಳಪಟ್ಟರು.
“ಹುಟ್ಟುವಾಗಲೇ ಬ್ರಾಹ್ಮಣನು ಭೂಮಿಯಲ್ಲಿ ಆಳುವ ಅಧಿಕಾರ ಪಡೆದುಕೊಂಡು ಹುಟ್ಟಿರುತ್ತಾನೆ. ಮತ್ತು ಧರ್ಮ ಸಂಪತ್ತಿನ ರಕ್ಷಣೆಗಾಗಿ ಅವನು ಸಕಲ ಜೀವಿಗಳ ಒಡೆಯನಾಗಿರುತ್ತಾನೆ (ಅ-೧,||೯೯||) ಎಂದು ಹೇಳುತ್ತಾ ಮೇಲ್ಜಾತಿಗಳು ತಮ್ಮ ಸ್ವಾರ್ಥಸಾಧನೆಗೆ ತಮ್ಮ ಮೂಗಿನ ನೇರಕ್ಕೆ ಮಾಡಿದ ಎಲ್ಲಾ ಕೆಲಸಗಳು ಇಲ್ಲಿ ಕಾನೂನುಗಳಾಗಿ ತಯಾರಾಗಿರುವ ರೀತಿ ಕಾಣುತ್ತದೆ.
ಇದರಲ್ಲಿ ಮಹಿಳೆಯರ ಕುರಿತು ಹೇಳಿರುವ ಕಾನೂನುಗಳಲ್ಲಿ ಕೆಲವು ಹೀಗಿವೆ-
“ಪುರುಷರ ಮನಸನ್ನು ಕೆಡಿಸುವುದೇ ನಾರಿಯರ ಸ್ವಭಾವವಾಗಿದೆ. ಅದ್ದರಿಂದ ತಿಳುವಳಿಕೆಯುಳ್ಳ ಪ್ರಾಜ್ಞರು ಸ್ತ್ರೀಯರ ವಿಷಯದಲ್ಲಿ ಎಚ್ಚರ ತಪ್ಪಿ ನಡೆಯಬಾರದು”(ಅ-೨,||೨೧೩||)
“ಕಾಮಕ್ರೋದಗಳಿಗೆ ವಶನಾದ ಮನುಷ್ಯನನ್ನು, ಅವನು ಪಂಡಿತನೇ ಇರಲಿ, ಪಾಮರನೇ ಇರಲಿ ದಾರಿತಪ್ಪಿಸಲು ಸ್ತ್ರೀಯರು ಸಮರ್ಥರಾಗಿರುತ್ತಾರೆ”ೆ(ಅ-೨,||೨೧೪||)
“ದ್ವಿಜರಿಗೆ ಮೊದಲ ವಿವಾಹದಲ್ಲಿ ತಮ್ಮ ತಮ್ಮ ಜಾತಿಯ ಕನ್ಯೆಯನ್ನೆ ವಿವಾಹವಾಗಬೇಕು. ದೇಹಸುಖಕ್ಕಾಗಿ ನಂತರ ಮಾಡಿಕೊಳ್ಳುವ ವಿವಾಹದಲ್ಲಿ ಬೇಕಾದ ಜಾತಿಯವರನ್ನು ಮದುವೆಯಾಗಬಹುದು”(ಅ-೩,||೧೨||)
ಬಾಲ್ಯದಲ್ಲಿ ಸ್ತ್ರೀಯು ತಂದೆಯ ವಶದಲ್ಲಿ, ಯವ್ವನದಲ್ಲಿ ಗಂಡನ ವಶದಲ್ಲಿ, ಗಂಡ ಸತ್ತ ನಂತರ ಪುತ್ರರ ಅಧೀನದಲ್ಲಿ ಬಾಳಬೇಕಲ್ಲದೇ ತಾನೇ ಸ್ವತಂತ್ರವಾಗಿ ವ್ಯವಹರಿಸಬಾರದು(ಅ-೫,||೧೪೮||)
“ಪತಿಯ ನಡತೆಯು ಚನ್ನಾಗಿರದಿದ್ದರೂ, ಕಾಮಾತುರನಾಗಿ ಅವನು ಅನ್ಯ ಹೆಂಗಸರಲ್ಲಿ ಮನಸ್ಸಿಟ್ಟಿದ್ದರೂ, ದುರ್ಗುಣಿಯಾಗಿದ್ದರೂ ಸಹ ಸಾದ್ವಿಯಾದ ಹೆಂಡತಿಯು ತನ್ನ ಪತಿಯನ್ನು ದೇವರೆಂದೇ ಭಾವಿಸಿ ಸೇವೆ ಮಾಡಬೇಕು”(ಅ-೩,||೧೫೪||)
“ಪತಿಯನ್ನು ಬಿಟ್ಟು ಸ್ತ್ರೀಗೆ ಇನ್ನಾವ ಬೇರೆ ಯಜ್ಙ ಇಲ್ಲ. ಪತಿಸೇವೆಯನ್ನು ಬಿಟ್ಟು ಇನ್ನಾವ ವ್ರತವೂ ಇಲ್ಲ. ಉಪವಾಸವೂ ಇಲ್ಲ. ಪತಿವ್ರತಾಭಾವದಿಂದ ಪತಿಸೇವೆ ಮಾಡುವುದರಿಂದಲೇ ಸ್ತ್ರೀ ಸ್ವರ್ಗಲೋಕದಲ್ಲಿ ಗೌರವ ಪಡೆಯುತ್ತಾಳೆ (ಅ-೫,||೧೫೫||)
“ಪತಿವ್ರತೆಯಾದ ಸ್ತ್ರೀಯು ತನ್ನ ಗಂಡನ ಮರಣಾ ನಂತರ ತಾನು ಸಾಯುವ ತನಕ ನಿರಂತರ ಬ್ರಹ್ಮಚಾರಿಣಿಯಾಗಿಯೇ ಉಳಿದು, ಪರಪುರುಷ ಸಂಘಮಾಡದೇ, ವ್ರತಾಚರಣೆ ಮಾಡುತ್ತಾ ಧರ್ಮವನ್ನು ಸಂಪಾದಿಸಬೇಕು (ಅ೫,||೧೫೮||)
“ಪತ್ನಿಯು ತನಗಿಂತ ಮೊದಲು ಮೃತಳಾದರೆ ಅವಳ ಅಂತ್ಯ ಕರ್ಮಗಳನ್ನು ಮುಗಿಸಿದ ನಂತರ ಪತಿಯು ಯೋಗ್ಯ ಕಾಲದಲ್ಲಿ ಪುನರ್ ವಿವಾಹ ಮಾಡಿಕೊಳ್ಳಬೇಕು (ಅ-೫||೧೬೮||)
ಕೆಳಜಾತಿಯವರನ್ನು ಕುರಿತು ಹೇಳಿರುವ ಶ್ಲೋಕಗಳಲ್ಲಿ ಕೆಲವನ್ನು ನೋಡುವುದಾದರೆ-
“ಮಹಾಪ್ರಭುವಾದ ಬ್ರಹ್ಮನು, ಪ್ರಸ್ತುತ ಮೂರುವರ್ಣಗಳ ( ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ನಿಸ್ವಾರ್ಥ ಸೇವೆ ಮಾಡುವುದೇ ಶೂದ್ರನ ಕರ್ತವ್ಯವೆಂದು ಆದೇಶಿಸಿದ್ದಾನೆ (ಅ-೧,||೯೧||)
“ಉಪನಯನ ಸಂಸ್ಕಾರ ಹೊಂದಲು ಅರ್ಹತೆ ಇಲ್ಲದ ಏಕಜಾತಿಯವನಾದ ಶೂದ್ರನು ದ್ವಿಜಾತಿಯವರಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರನ್ನು ಹೀನವಾದ ಕೆಟ್ಟಮಾತುಗಳಿಂದ ಬೈದರೆ, ಕೆಳಜಾತಿಯಲ್ಲಿ ಹುಟ್ಟಿದ ಆ ಶೂದ್ರನ ನಾಲಿಗೆಯನ್ನು ಕತ್ತರಿಸಬೇಕು. ಏಕೆಂದರೆ ಅವನು ಕೆಳಜಾತಿಯವನು”.(ಅ-೮,||೨೭೦||)
“ಬ್ರಾಹ್ಮಣರಿಗೆ ಧರ್ಮವನ್ನು ಭೋದಿಸುವ ಶೂದ್ರನಿಗೆ ರಾಜನು ಬಾಯಲ್ಲಿ ಹಾಗೂ ಕಿವಿಯಲ್ಲಿ ಕಾದ ಎಣ್ಣೆಯನ್ನು ಹಾಕಬೇಕು”(೮,||೨೭೨||)
“ಬ್ರಾಹ್ಮಣನ ಜತೆಗೆ ಒಂದೇ ಆಸನದಲ್ಲಿ ಕುಳಿತ ಅಂತ್ಯಜನಿಗೆ ಅಥವಾ ಶೂದ್ರನಿಗೆ ಸೊಂಟದಲ್ಲಿ ಬರೆ ಎಳೆದು ಊರಿನಿಂದ ಹೊರಗೆ ಹಾಕಬೇಕು. ಇಲ್ಲವೇ ಕುಂಡೆಯನ್ನು ಕತ್ತರಿಸಬೇಕು”(ಅ-೮,||೨೮೧||)
“ಬ್ರಾಮ್ಹಣನನ್ನು ಬೈದರೆ ಕ್ಷತ್ರಿಯನಿಗೆ ನೂರು ಪಣಗಳ ದಂಡ, ವೈಶ್ಯನಿಗೆ ನೂರೈವತ್ತು ಅಥವಾ ಇನ್ನೂರೈವತ್ತು ಪಣಗಳ ದಂಡ. ಬ್ರಾಮ್ಹಣನನ್ನು ಬೈದ ಶೂದ್ರನಿಗೆ ವಧೆ ಶಿಕ್ಷೆ( ಮರಣ ದಂಡನೆ) ವಿಧಿಸಬೇಕು”(ಅ-೮,||೬೨೭||)
ಇಂತಹ ಕಠಿಣ ಕಾನೂನುಗಳು ಮನುಸ್ಮೃತಿಯಲ್ಲಿ ನೂರಾರು ಇವೆ. ಆದ್ದರಿಂದಲೇ ಇದನ್ನು ಓದಿದ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಮಾಹಡ್ ಚಳುವಳಿಯ ಸಂದರ್ಭದಲ್ಲಿ ಸುಡಲು ನಿರ್ಧರಿಸಿದರು. ೧೯೨೭ ಕ್ಕಿಂತ ಮೊದಲೇ ಅಂಬೇಡ್ಕರ್ ಅವರು ದಲಿತರ ಸ್ವಾಭಿಮಾನಕ್ಕಾಗಿ ಅನೇಕ ಕೆಲಸಗಳನ್ನು ಶುರುಮಾಡಿದ್ದರು. ಸ್ವಾಭಿಮಾನ ಚಳುವಳಿಯ ಹಿನ್ನಲೆಯಲ್ಲಿ ಭಾರಿ ಪ್ರಗತಿಯನ್ನು ಸಾದಿಸಲಾಗಿತ್ತು. ಅವರ ನೇತೃತ್ವದಲ್ಲಿ ಮಹಾರಾಷ್ಟದ ಕರಾವಳಿ ಪ್ರದೇಶವಾದ ಕೊಂಕಣದ ಮಾಹಡ್ನಲ್ಲಿ ಮಾಹಡ್ ಕೆರೆ ನೀರನ್ನು ಮುಟ್ಟುವ ಹೋರಾಟ ರೂಪಿಸಲಾಯಿತು. “ಮಾಹಡ್ ಕೆರೆ ನೀರನ್ನು ನಾಯಿನರಿಗಳು ಕುಡಿಯುತ್ತವೆ. ನಾವು ಅವುಗಳಿಗಿಂತ ಕೀಳೆ?” ಎಂದು ಅವರು ಎತ್ತಿದ ಮಹತ್ತರವಾದ ಪ್ರಶ್ನೆಗಳು ದಲಿತರ ಎದೆಯಲ್ಲಿ ದೊಡ್ಡ ತಲ್ಲಣ ಶುರುಮಾಡಿತ್ತು. ಅಸ್ಪೃಶ್ಯರು ಈ ಕುರಿತು ಯೋಚಿಸಲು ಶುರುಮಾಡಿದರು. ಅಂಬೇಡ್ಕರ್ ಮತ್ತು ಸಾವಿರಾರು ಸ್ವಯಂ ಸೇವಕರು ಪ್ರತಿಭಟನೆ ಮತ್ತು ಆಂದೋಲನಕ್ಕೆ ಸೇರಿ ಎಲ್ಲರಿಗೂ ಮುಕ್ತವಾಗುವ ಹಾಗೆ ಸಾರ್ವಜನಿಕ ನೀರಿನ ಮೂಲವಾದ ಚೌಡಾರ್ ಕೆರೆ ನೀರನ್ನು ಕುಡಿಯುವ ಶಾಂತಿಯುತ ಆಂದೋಲನವಾಗಿ ಮಾಹಡ್ ಸತ್ಯಾಗ್ರಹವನ್ನು ಆಯೋಜಿಸಿದರು.
ಈ ಕುರಿತು ತಿಳಿದುಕೊಂಡ ಸ್ಥಳೀಯ ಮೇಲ್ಜಾತಿಗಳು ಸ್ಥಳೀಯ ನ್ಯಾಯಾಲಯದಲ್ಲಿ ಸ್ಟೇ ಅನ್ನು ಹೊರಡಿಸಿದ್ದರು. ಪ್ರತಿಭಟನೆಯನ್ನು ಹೇಗಾದರೂ ಮಾಡಿ ಸ್ಥಗಿತಗೊಳಿಸಲು ಮೇಲ್ಜಾತಿಗಳು ಸಹಿಸಲು ಅಸಾಧ್ಯವಾದ ಒತ್ತಡವನ್ನು ನ್ಯಾಯಾಲಯದಲ್ಲಿ ಹೇರಿದ್ದರು. ಆ ಕಾರ್ಯಕ್ರಮ ನಡೆಸಲು ಮೇಲ್ಜಾತಿಗಳವರು ಸ್ಥಳವನ್ನು ಕೊಡಲಿಲ್ಲ. ಕೆಳಜಾತಿಯವರಿಗೆ ಸ್ಥಳ ಕೊಡಲು ಅವರ ಹತ್ತಿರ ಜಮೀನಿರಲಿಲ್ಲ. ಅಂತಹ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಸಹೃದಯಿ ಪಟ್ಟೆ ಖಾನ್ ಎಂಬುವವರು ಪ್ರತಿಭಟನೆಗಾಗಿ ತನ್ನ ಖಾಸಗಿ ಭೂಮಿಯನ್ನು ಹಾಗೂ ಒಗ್ಗಟ್ಟನ್ನು ಹೋರಾಟಕ್ಕೆ ನೀಡಿದರು. ಗ್ರಾಮದಲ್ಲಿ ದಂಗೆಯನ್ನು ಎದುರಿಸುತ್ತಿರುವ ಸಂಘಟಕರು ಆಹಾರ, ನೀರಿನ ವ್ಯವಸ್ಥೆ ಮತ್ತು ಇತರ ಸಾಮಗ್ರಿಗಳನ್ನು ಸರಬರಾಜು ಮಾಡಲು ಆ ಪರಿಸ್ಥತಿಯನ್ನು ಸೂಕ್ಷ್ಮವಾಗಿ ನಿಭಾಯಿಸಬೇಕಿತ್ತು. ಅದು ಅವರಿಗೆ ದೊಡ್ಡ ಸವಾಲಾಗಿತ್ತು.
ಈ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಅವರು ಬಾಂಬೆಯಿಂದ ಹಡಗಿನಲ್ಲಿ ಬಂದು ಇಳಿದಾಗ ಅನೇಕರು ಅವರನ್ನು ಅಡ್ಡಗಟ್ಟಿ ಗಲಾಟೆ ಮಾಡಿದರು. ಯಾವುದಕ್ಕೂ ಹೆದರದ ಅಂಬೇಡ್ಕರ್ ಹೋರಾಟಕ್ಕೆ ಬಂದು ಎಲ್ಲರ ಮನ ಕಲಕುವ, ಕಣ್ಣುಬಿಟ್ಟು ನೋಡುವಂತೆ ಭಾಷಣ ಮಾಡಿದರು.
ಪ್ರತಿಭಟನೆಯಲ್ಲಿ ಭಾಗವಹಿಸುವವರಿಗೆ ಮೊದಲಿಗೆ ಕೆಲವು ಪ್ರತಿಜ್ಞೆಗಳನ್ನು ಮಂಡಿಸಿದರು. ಅವುಗಳು ಹೀಗಿದ್ದವು -
೧.ಜನ್ಮವನ್ನು ಆಧರಿಸಿ ನಾನು ಚಾತುರ್ವರ್ಣವನ್ನು ನಂಬುವುದಿಲ್ಲ.
೨.ನಾನು ಜಾತಿಭೇದಗಳನ್ನು ನಂಬುವುದಿಲ್ಲ.
೩.ಅಸ್ಪೃಶ್ಯತೆಯು ಹಿಂದೂ ಧರ್ಮಕ್ಕೆ ಅಸಹ್ಯವಾಗಿದೆ ಎಂದು ನಾನು ನಂಬುತ್ತೇನೆ ಮತ್ತು ನಾನು ಅದನ್ನು ಸಂಪೂರ್ಣವಾಗಿ ನಾಶಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
೪.ಕನಿಷ್ಠ ಎಲ್ಲಾ ಹಿಂದುಗಳ ನಡುವೆ ಆಹಾರ ಮತ್ತು ಪಾನೀಯದ ಬಗ್ಗೆ ಯಾವುದೇ ನಿರ್ಬಂಧಗಳನ್ನು ಅನುಸರಿಸುವುದಿಲ್ಲ.
೫. ಅಸ್ಪೃಶ್ಯರಿಗೆ ದೇವಾಲಯಗಳು, ನೀರಿನ ಮೂಲಗಳು, ಶಾಲೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಪ್ರವೇಶಿಸಲು ಸಮಾನ ಹಕ್ಕುಗಳು ಇರಬೇಕೆಂದು ನಾನು ನಂಬುತೇನೆ. ಎಂಬಂತಹ ಪ್ರತಿಜ್ಞೆಗಳನ್ನು ಅಲ್ಲಿ ನೆರೆದಿದದ್ದ ತುಂಬು ಸಭೆಯಲ್ಲಿ ಎಲ್ಲರೂ ತುಂಬು ಜವಾಬ್ದಾರಿಯಿಂದ ಉಚ್ಛರಿಸಿದರು.
ವೇದಿಕೆಯ ಮುಂಭಾಗದಲ್ಲಿ ಮನುಸ್ಮೃತಿಯನ್ನು ಸುಡಲು ಆರು ಇಂಚು ಅಳ ಹಾಗೂ ಒಂದುವರೆ ಅಡಿ ಚೌಕದಲ್ಲಿ ಹಳ್ಳವನ್ನು ಅಗೆದು ಮರದ ತುಂಡುಗಳಿಂದ ತುಂಬಿಸಿದ್ದರು. ಅದರ ನಾಲ್ಕು ಕಡೆ ಬ್ಯಾನರ್ಗಳಲ್ಲಿ,
“ಮನುಸ್ಮೃತಿ ಧಹನ ಭೂಮಿ”,
“ಮನುಸ್ಮೃತಿ ಶವಾಗಾರ”,
“ಅಸ್ಪೃಶ್ಯತೆ ನಾಶ ಮಾಡಿ”,
“ಬ್ರಾಹ್ಮಣ ಧರ್ಮವನ್ನು ಹೂತು ಹಾಕಿ” ಎಂದು ಬರೆಯಲಾಗಿತ್ತು.
ಮನುಸ್ಮೃತಿ ಸುಡುವ ವಿಷಯವನ್ನು ಅಂಬೇಡ್ಕರ್ ಅವರ ಬ್ರಾಹ್ಮಣ ಸಹವರ್ತಿ ಗಂಗಾಧರ್ ನೀಲಕಂಠ ಸಹಾಶ್ರುದ್ದೆ ಅವರು ಮಂಡಿಸಿದರು. ಚಮ್ಮಾರರ ನಾಯಕನಾಗಿದ್ದ ಪಿ.ಎನ್. ರಾಜಭೋಜರವರು ಅನುಮೋಧಿಸಿದರು. ರಾಜಭೋಜ್, ಥೋರಾತ್ ಮೊದಲಾದವರು ಮನುಸ್ಮೃತಿಯ ಹಲವು ಅಂಶಗಳನ್ನು ಸವಿವರವಾಗಿ ವಿವರಿಸಿ ಉಗ್ರವಾಗಿ ಟೀಕಿಸಿದರು. ಶೂದ್ರಾತಿಶೂದ್ರರ ಅಭಿವೃದ್ದಿಗೆ ಅಡ್ಡಿಪಡಿಸುವ, ಅವರ ಸ್ವಾಭಿಮಾನ ಮೊಟಕುಗೊಳಿಸಿದ ಆರ್ಥಿಕ, ಸಾಮಾಜಿಕ, ದಾರ್ಮಿಕ, ರಾಜಕೀಯ ಗುಲಾಮಗಿರಿಗೆ ಅವರನ್ನು ತಳ್ಳಿದ ಮನುಸ್ಮೃತಿಯನ್ನು ಕಠೋರವಾಗಿ ಖಂಡಿಸಲಾಯಿತು. ಅಂಬೇಡ್ಕರ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೀಗೆ ಹೇಳಿದರು ʼʼಹಿಂದೂ ಸವರ್ಣಿಯರು ತಮಗೆ ಬೇಕಾದಾಗ ಮನುಸ್ಮೃತಿಯನ್ನು ಎತ್ತಿ ಹಿಡಿಯುತ್ತಾ ಬೇಡವಾದಾಗ ಉಲ್ಲಂಘಿಸುತ್ತಾ ಬಂದಿದ್ದಾರೆ. ಅದರ ಪ್ರಕಾರ ಬ್ರಾಮ್ಹಣರು ರಾಸಾಯನಿಕಗಳು, ಪೇಯಗಳು, ಬಣ್ಣದ ಬಟ್ಟೆ, ಹೂವು, ಸುಗಂಧದ್ರವ್ಯ, ಶಸ್ತ್ರಾಸ್ತ್ರ ವ್ಯಾಪಾರದಲ್ಲಿ ತೊಡಗುವಂತಿಲ್ಲ ಆದರೆ ಈ ಕಟ್ಟಪ್ಪಣೆಯನ್ನು ಬ್ರಾಮ್ಹಣರು ಮುರಿಯುತ್ತಾರೆ. ಶೂದ್ರಾತಿಶೂದ್ರರ ಮೇಲಷ್ಟೇ ಅದನ್ನು ಹೇರುತ್ತಾರೆ. ಎಂದು ಬಿಡಿಸಿ ವಿವರಿಸಿದರು.
ಭಯಂಕರ ರೋಗಕ್ಕೆ ಭಯಂಕರ ಚುಚ್ಚುಮದ್ದು ಕೊಡಬೇಕು. ಕಿವುಡರನ್ನು ಸೆಳೆಯಲು ಬಾಂಬ್ ಸ್ಪೋಟದಂತಹ ಶಬ್ದವೇ ಆಗಬೇಕು. ಹಾಗೆ ಸನಾತನವಾದಿ ಹಿಂದೂ ಸಮಾಜ ಮೈಕೊಡವಿಕೊಳ್ಳಲು ಮನುಸ್ಮೃತಿ ದಹನದಂತಹ ಕ್ರಮಕ್ಕೆ ಮುಂದಾಗಬೇಕಾಯಿತು ಎಂದು ಸ್ಪಷ್ಟಪಡಿಸಿದರು. ಚಳುವಳಿಯ ಉದ್ದೇಶವು ನೀರು - ದೇವಾಲಯ ಪ್ರವೇಶವನ್ನು ಪಡೆಯುವುದು, ಪ್ರಾರಂಭದ ಅಡೆತಡೆಗಳನ್ನು ತೊಡೆದುಹಾಕುವುದು ಮಾತ್ರವಲ್ಲ, ಸಮಾಜದ ಅಸಮಾನತೆಯನ್ನು ಬೆಂಬಲಿಸುವ ವರ್ಣ ವ್ಯವಸ್ಥೆಯನ್ಬು ಒಡೆದು ಹಾಕುವುದು ಈ ಕಾರ್ಯಕ್ರಮದ ಮೂಲ ಉದ್ದೇಶ ಎಂಬುದನ್ನು ವಿವರಿಸಿದರು. ಈ ದೊಡ್ಡ ಸಾಮಾಜಿಕ ಉದ್ದೇಶವನ್ನು ಸಾಧಿಸಲು ನಾವು ಹುಟ್ಟಿದ್ದೇವೆ ಎಂದು ನಾವು ಒಪ್ಪಿಕೊಳ್ಳಬೇಕು. ಇದು ನಮ್ಮ ಜೀವನದ ಗುರಿಯಾಗಬೇಕು. ನಮ್ಮ ಹಾದಿಯಲ್ಲಿನ ಅಡೆತಡೆಗಳನ್ನು ತಡೆದುಹಾಕಲು ನಮ್ಮನ್ನು ಅರ್ಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಅಸ್ಪೃಷ್ಯತೆಯ ಮೂಲ ಅಂತರ್ ಜಾತಿ ವಿವಾಹವನ್ನು ನಿಷೇಧಿಸುವುದರಲ್ಲಿದೆ. ಅದನ್ನು ನಾವು ಮುರಿಯಬೇಕು.
ಸಾಮಾಜಿಕ ಕ್ರಾಂತಿ ಶಾಂತಿಯುತವಾಗಿ ನಡೆಯಲು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ನ್ಯಾಯತತ್ವವನ್ನು ಸ್ವೀಕರಿಸಿ ಶಾಂತಿಯುತವಾಗಿ ಹೋರಾಟ ಮಾಡಬೇಕು ಎಂದು ಹೇಳಿ ಮನುಸ್ಮೃತಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದರು. ವರ್ಣವ್ಯವಸ್ಥೆ ಇರುವವರಿಗೂ ಬ್ರಾಹ್ಮಣರು ಉನ್ನತ ಸ್ಥಾನವನ್ನು ಖಾತ್ರಿ ಪಡಿಸುತ್ತಾರೆ. ವರ್ಣವ್ಯವಸ್ಥೆಯ ಬುಡವನ್ನು ಸುಟ್ಟು ಹಾಕೋಣ, ಘನತೆಯ ಬದುಕಿಗಾಗಿ ಹೋರಾಟ ನಿರಂತರವಾಗಿರಬೇಕು ಎಂದು ಹೇಳಿದರು. ಅಂಬೇಡ್ಕರ್ ಅವರು ತಮ್ಮ ಕೊನೆಯುಸಿರಿರುವವರೆಗೂ ವರ್ಣವ್ಯವಸ್ಥೆಯ ನಾಶಕ್ಕಾಗಿ, ತನ್ನ ಸಮುದಾಯದ ಘನತೆಯ ಬದುಕಿಗಾಗಿ ಹೋರಾಡಿದರು.
ಒಂದು ವಿಷಯವನ್ನು ಸುಡುವುದು ಎಂದರೆ ಅದು ಪ್ರತಿನಿಧಿಸುವ ಕಲ್ಪನೆಯ ವಿರುದ್ದ ಪ್ರತಿಭಟನೆಯನ್ನು ನೊಂದಾಯಿಸುವುದು ಎಂದರ್ಥ. ಮನುಸ್ಮೃತಿಯ ವಿರುದ್ದ ಪ್ರತಿಭಟಿಸಿ ಇಷ್ಟು ವರ್ಷಗಳಾದರೂ ನಮ್ಮ ಸಮಾಜದಲ್ಲಿ ಈಗಲೂ ಗರಿಷ್ಟ ಪ್ರಮಾಣದಲ್ಲಿ ಮನುಸ್ಮೃತಿ ನಿಯಮಗಳು ಜಾರಿಯಲ್ಲಿರುವುದು ಏನನ್ನು ಹೇಳುತ್ತವೆ? ಪುಲೆದಂಪತಿಗಳಿಂದ ಹಿಡಿದು ಇತ್ತೀಚಿನ ದಲಿತಬಂಡಾಯದ ಚಳುವಳಿಗಳವರೆಗೂ ಈ ಸಮಾಜದ ಅನಿಷ್ಟಗಳನ್ನು ತೊಡೆದು ಹಾಕುವಲ್ಲಿ ಅನೇಕ ಮಹನೀಯರು ದುಡಿದಿದ್ದಾರೆ. ಹಾಗಾದರೆ ಅವರ ಶ್ರಮ ಎಲ್ಲಿ ಹೋಯಿತು? ಎಂದು ಹುಡುಕಿದರೆ ಆ ಮಹನೀಯರ ಶ್ರಮಕ್ಕೆ ವಿರುದ್ದವಾಗಿ, ಅದೇ ಕಾಲಘಟ್ಟಗಳಲ್ಲಿ ತಮ್ಮ ಸ್ವಹಿತಾಸಕ್ತಿಯ ಲಾಲಸೆಗಳಿಗಾಗಿ, ನೀಚರಾಜಕೀಯಕ್ಕಾಗಿ ತಮ್ಮನ್ನು ತಾವು ಮಾರಿಕೊಂಡ ರಕ್ಷಸರು ಮನು ಪರವಾಗಿ ಕೆಲಸಮಾಡಿರುವುದನ್ನು ಇತಿಹಾಸ ಮಾತಾಡುತ್ತದೆ. ಸಂವಿಧಾನ ಜಾರಿಯಾಗುವ ಒಂದು ವರ್ಷದ ಮೊದಲೇ ಅಂದರೆ ೧೯೪೯ ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಮುಖವಾಣಿ ಪತ್ರಿಕೆಯಲ್ಲಿ “ಡಾ. ಬಿ.ಆರ್ ಅಂಬೇಡ್ಕರ್ ಕರಡು ಸಮಿತಿಯ ಅದ್ಯಕ್ಷರಾಗಿ ರಚಿಸಿರುವ ಸಂವಿಧಾನದಲ್ಲಿ ಭಾರತೀಯತೆ ಇಲ್ಲವಾಗಿದೆ. ಈ ದೇಶದ ನೆಲದ ಕಾನೂನಾದ ಮನುಸ್ಮೃತಿಯಿಂದ ಏನೂ ಪಡೆದಿಲ್ಲ. ಹೀಗಾಗಿ ಈ ಸಂವಿಧಾನ ನಮಗೆ ಒಪ್ಪಿತವಲ್ಲ” ಎಂದು ಪ್ರಕಟಿಸಲಾಗಿತ್ತು. ಸಾವರ್ಕರ್ “ವೇದಗಳ ನಂತರ ಅತ್ಯಂತ ಪೂಜನೀಯ ಗ್ರಂಥ ಮನುಸ್ಮೃತಿ. ದೇಶ ಅದರ ಆಧಾರದಲ್ಲಿ ನಡೆಯಬೇಕು” ಎಂದು ಹೇಳಿದ. ಗೋಲ್ವಾಲ್ಕರ್ “ಹಿಂದುಗಳಿಗೆ ಪ್ರಜಾಪ್ರಭುತ್ವ ತತ್ವಗಳು ಹೊರಗಿನವು, ಇಡೀ ಮನುಕುಲದ ಅತಿಶ್ರೇಷ್ಟ ಮತ್ತು ಮಹಾನ್ ಕಾನೂನು ರಚನೆಕಾರ ಮನು” ಎಂದು ಹೇಳಿದ.
ಮತ-ಧರ್ಮಗಳ ಹೆಸರಿನಲ್ಲಿ ಜನಸಾಮಾನ್ಯರನ್ನು ತುಳಿಯುತ್ತಿದ್ದ ಪುರೋಹಿತ ಶಾಹಿಯು ತನ್ನ ಪಾಶವನ್ನು ಗಟ್ಟಿಯಾಗಿಸಿಕೊಳ್ಳುತ್ತಾ, ಜನಸಾಮಾನ್ಯರ ವಿಚಾರ ಪ್ರಗತಿಗೆ ಅಡ್ಡಿಯಾಗಿದ್ದ ಮನುಶಾಸ್ತ್ರವನ್ನು ಇದ್ದ ಹಾಗೆಯೇ ಉಳಿಸಿಕೊಂಡು ನಡೆಯುವುದರಿಂದ ತಮಗೆ ಆಗುವ ಲಾಭವನ್ನು ಕಿಂಚಿತ್ತೂ ಕೂಡ ಬಿಟ್ಟುಕೊಡಲು ಅವರು ತಯಾರಿರಲಿಲ್ಲ. ಇಂತಹ ನೀಚ ನಡೆ ಅಂದಿನಿಂದ ಇಂದಿನ ವರೆಗೂ ನಿಂತಿಲ್ಲ.
ಕೆಲವು ದಿನಗಳ ಹಿಂದೆ ದೇಹಲಿಯ ಜಂತರ್ ಮಂತರ್ ಮೈದಾನದಲ್ಲಿ ಸೇರಿದ್ದ ಕೋಮುವಾದಿ ಶಕ್ತಿಗಳು ಸಂವಿಧಾನದ ಪ್ರತಿಗಳನ್ನು ಸುಟ್ಟುಹಾಕಿ “ಮನುಸ್ಮೃತಿ ಜಿಂದಾಬಾದ್, ಸಂವಿಧಾನ ಮುರ್ದಾಬಾದ್” ಎಂಬಂತಹ ಘೋಷಣೆಗಳನ್ನು ಕೂಗಿದರು. ಅವರ ಈ ಆಕ್ರೋಶಕ್ಕೆ ಕಾರಣ ಪರಿಶಿಷ್ಟರಿಗೆ ಇರುವ ಮೀಸಲಾತಿ ಸವಲತ್ತು ಮತ್ತು ದೌರ್ಜನ್ಯ ವಿರೋಧಿ ಕಾಯ್ದೆ. ಮನುಸ್ಮೃತಿಯನ್ನು ಸಂವಿಧಾನ ಮಾಡಬೇಕು ಎಂದು ದೇಶದ್ರೋಹಿ ಘೋಷಣೆ ಕೂಗಿದರೂ ಅಲ್ಲಿ ನರೆದಿದ್ದ ಪೋಲಿಸರು ಸುಮ್ಮನಿದ್ದರು. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದರೂ ಯಾರೂ ಈ ಕುರಿತು ಚಕಾರ ಎತ್ತಲಿಲ್ಲ. ಜನರನ್ನು ದಮನಿಸುವ ಸಿಎಎ ವಿರುದ್ದ ಕವನ ಬರೆದಿದ್ದಕ್ಕಾಗಿ ಸಿರಾಜ್ ಬೀಸರಳ್ಳಿ ವಿರುದ್ದ ಎಫ್ ಐ ಆರ್ ದಾಖಲಿಸಿದ್ದರು. ಪ್ರಧಾನಿಯನ್ನು ನಿಂಧಿಸಿದ ನಾಟಕವನ್ನು ಮಕ್ಕಳು ಪ್ರದರ್ಶಿಸಿದ್ದಾರೆ ಎಂಬ ನೆಪವೊಡ್ಡಿ ಶಾಹಿಮ್ ಶಿಕ್ಷಣ ಸಂಸ್ಥೆಯ ಶಿಕ್ಷಕಿಯನ್ನು ದೇಶದ್ರೋಹದ ಆರೋಪದಡಿಯಲ್ಲಿ ಬಂಧಿಸಲಾಗಿತ್ತು. ಇದರ ಹಿಂದೆ ಕೆಲಸಮಾಡುತ್ತಿರುವುದು ಮನುಪ್ರಣೀತ ಮನಸ್ಥಿತಿಗಳು.
ಈಗ ಬಹಳಷ್ಟು ಯುವಕರು ಮನುಸ್ಮೃತಿಯ ಜಾರಿಗಾಗಿ ಪ್ರಮಾಣಿಕವಾಗಿ ದುಡಿಯುತ್ತಿದ್ದಾರೆ. ಮನುಧರ್ಮವನ್ನು ಆಧರಿಸಿದ ಹಿಂದುತ್ವವನ್ನು ಯಶಸ್ವಿಯಾಗಿ ಜಾರಿಗೊಳಿಸುವುದಕ್ಕಾಗಿ ದುಡಿಯಲು ಅನೇಕ ಯುವತಿಯರು, ದಲಿತ ಯುವಕರು ಅಂಬೇಡ್ಕರ್ ಚಿಂತನೆಗಳ ವಿರುದ್ದ ದುಡಿಯುತ್ತಿದ್ದಾರೆ. ಆದರೆ ಅವರು ಯಾರು ಮನುಧರ್ಮವನ್ನು ಸ್ವಲ್ಪವೂ ಓದಿಲ್ಲ. ಅದಕ್ಕೆ ಅಂಬೇಡ್ಕರ್ ಹೇಳಿದ್ದು ‘ಇತಿಹಾಸವನ್ನು ತಿಳಿಯದವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು. ಕೋಮುವಾದಿ ಗುಂಪುಗಳೊಂದಿಗಿರುವ ಹಿಂದುಳಿದ, ಕೆಳಜಾತಿ ಯುವಕ ಯುವತಿಯರು ನಿಜವಾಗಿಯೂ ಮನುಧರ್ಮವನ್ನು ಓದಿದ್ದೇ ಆದರೆ ಅವರು ಯಾರು ಪ್ರಜಾಪ್ರಭುತ್ವದ ವಿರುದ್ದ ಎಂದಿಗೂ ಕೆಲಸಮಾಡಲಾರರು.
ಭಾರತದಲ್ಲಿ ೧೯೫೦ ರಿಂದ ಜಾರಿಯಾದ ನಮ್ಮ ಸಂವಿಧಾನವು ಮಹಿಳೆಯರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ, ಅಸ್ಪೃಶ್ಯರಿಗೆ ಸಮಾನವಾದ ಹಕ್ಕುಗಳನ್ನು ನೀಡಿದೆಯಾದರೂ ಸಮಾಜದ ಜನರಲ್ಲಿ ಮನು ಮನಸ್ಥಿತಿಯು ಬದಲಾಗದೇ ಇರುವುದರಿಂದ ಅವರು ಇನ್ನೂ ಕೂಡ ಶೋಷಣೆಗೆ ಒಳಪಡುತ್ತಿದ್ದಾರೆ. ಕೋಮುವಾದಿ ಶಕ್ತಿಗಳ ವಿರುದ್ದ ಎಷ್ಟು ಕೆಲಸಮಾಡಿದರೂ ಸಾಲದಾಗಿದೆ. ಅಂಬೇಡ್ಕರ್ ಹೇಳುವಂತೆ ನಾವು ಹುಟ್ಟಿರುವುದೇ ಸಮಾನತೆ ಎಂಬ ದೊಡ್ಡ ಸಾಮಾಜಿಕ ಉದ್ದೇಶವನ್ನು ಸಾಧಿಸಲು. ಇದು ನಮ್ಮ ಜೀವನದ ಗುರಿಯಾಗಬೇಕಾಗಿದೆ. ನಮ್ಮ ಸಮಾನತೆ ಹಾದಿಯಲ್ಲಿನ ಕೋಮುವಾದಿ ಅಡೆತಡೆಗಳನ್ನು ತೊಡೆದು ಹಾಕುವಲ್ಲಿ ದುಡಿಯಲು ನಮ್ಮನ್ನು ನಾವು ಅರ್ಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕಾಗಿದೆ.
- ಡಾ. ಕೆ.ವಿ. ನೇತ್ರಾವತಿ, ಅಧ್ಯಾಪಕರು.
ಕನ್ನಡ ವಿಭಾಗ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ