ಬೇಡೆನಗೆ....
ಕವಿಯಾಗುವ ಬಯಕೆ
ಇಲ್ಲಿ-
ಪಾಚಿಗಟ್ಟಿದ ಮನಗಳು
ದಂಗೆದ್ದು,
ಶಬ್ದಗಳನು ನೇಣಿಗೇರಿಸುತ್ತವೆ
ಮಣ್ಣಿನೆದೆಯ ಪ್ರೀತಿ ನಾಟಕವೆನಿಸಿಬಿಡುತ್ತದೆ.
ನೂರಾರು ಕೈಗಳು
ಸಾವಿನ ಕದ ತಟ್ಟುತ್ತವೆ
ಹೂವು ಬಾಡಿದಂತೆ,
ಮಗುವು ಬಿಕ್ಕಿದಂತೆ
ಗಕ್ಕನೆ ನಿಂತು ಬಿಡುತ್ತದೆ ನಗುವು
ಅಮಾನುಷರ ನಾಲಿಗೆ ಬೆತ್ತಲಾಗಿ
ಮುಸಿ ಉಸಿರ ಧಗೆ
ಆಯುಧವೆನಿಸಿಬಿಡುತ್ತದೆ
ಅದಕ್ಕಾಗಿ ನಾನು-
ಅಮಾಯಕ ಭಾವನೆಗಳನ್ನು
ತಡೆದು ಬಿಡುತ್ತೇನೆ
ಇಲ್ಲಿ-
ಕೆಂಡದುಂಡೆಯಡಿ
ಗಟ್ಟಿ ಬೇರುಂಡ
ಜಾತಿ ಧರ್ಮದ ಸಸಿಯು
ಮಸೀದಿ, ಚರ್ಚು,ಗುಡಿ ಗೋಪುರದ ಮೇಲೆ ಮೋಕ್ಷ ಪಡೆದು,ಕೇಡಿನ ಕಿಡಿಗೆ
ಚಕಮುಖಿಯೆನಿಸುತ್ತದೆ
ಜಡತ್ವದ ಮೋಹಕೆ ಬಿದ್ದು
ಪಾಪಿಯ ಪರವಿದೆ ನನ್ನ ಕವಿತೆ,
ಈಗಾಗಲೇ
ನನ್ನ ಸಮಾಧಿಗೆ ಮೀಸಲಾಗುವ ಹೂವು,ಸ್ಥಾನ ಪಲ್ಲಟಿಸಿ ಓಡಿದೆ.,
ಹಾಡು ಹಗಲೇ ಅವರ ಹಸಿವು ಹೆಚ್ಚಿ,
ಆತ್ಮವನು ಬಿಚ್ಚಿ
ಹಬೆಯೊಳಗೆ ಬೇಯಿಸಿ
ಸ್ವಾದಿಸಿಬಿಡುವರೆನಿಸುತ್ತದೆ
ಬೇಡೆನಗೆ.....
ಕವಿಯಾಗುವ ಬಯಕೆ
ನನ್ನ ಖಾಲಿ ಹೃದಯವು-
ಸತ್ತ ಕನಸುಗಳ ಎಣಿಸಿದರೆ ಸಾಕು
- ಡಾ.ಶರಣಪ್ಪ ತಳ್ಳಿ ಕುಪ್ಪಿಗುಡ್ಡ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ