ದೈನಂದಿನ ಸಮಾಜಿಕ ಧಾರ್ಮಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವಂತಹದ್ದೆ "ಹಬ್ಬಗಳು", ಇಡೀ ಮನುಷ್ಯ ಸಮೂಹಕ್ಕೆ ಸಂತೋಷ, ಸಡಗರ ಸಹಜ ಪ್ರೀತಿಯ ವಿಷಯವಾಗಿರುವುದೇ ಹಬ್ಬಗಳು ಇಂದಿನ ಆಧುನಿಕ ಒತ್ತಡಯುಕ್ತ ಜೀವನದಲ್ಲಿ ತೊಡಗಿದ್ದಾಗಲೂ, ಹಬ್ಬಹರಿದಿನಗಳ ಬಗೆಗಿನ ಆಸಕ್ತಿಯು ಕಳೆದುಕೊಂಡಿಲ್ಲದ್ದನ್ನು ಕಾಣಬಹುದು, ಹಬ್ಬವೆಂಬುದು ಕೆಲವೇ ಧರ್ಮ ಸಂಪ್ರದಾಯಕ್ಕೆ ಸೀಮಿತವಾದುದಲ್ಲ. ಎಲ್ಲಾ ಧರ್ಮಗಳಲ್ಲೂ ಅವರ ಆಚರಣೆಗೆ ತಕ್ಕಂತೆ ಹಬ್ಬಗಳಿರುವುದನ್ನು ಗಮನಿಸಬಹುದು.ಜಾತ್ಯಾತೀತ ರಾಷ್ಟ್ರವಾದ ನಮ್ಮ ಭಾರತದಲ್ಲಂತು ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ವೈವಿಧ್ಯಮಯವಾದ ಹಬ್ಬಹರಿದಿನಗಳನ್ನು ಕಾಣಬಹುದು. ಕೆಲವು ಹಬ್ಬಹರಿದಿನಗಳಂತು ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು, ರೀತಿ ನೀತಿಯಿಂದ ಆಚರಿಸುತ್ತಿರುವುದನ್ನು ಕಾಣಬಹುದು, ಹಬ್ಬ ಒಂದೇ ಆದರೂ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಿಸುವಂತಹ ಬಹಳಷ್ಟು ಹಬ್ಬಗಳಿದ್ದು "ಸಂಕ್ರಾಂತಿ" ಹಬ್ಬವು ಆ ರೀತಿ ಆಚರಣೆಗೆ ಒಳಪಡುವ ಹಬ್ಬಗಳಲ್ಲಿ ಒಂದು,
ನಮ್ಮದು ಹೇಳಿ ಕೇಳಿ ಮಂಡ್ಯ ಜಿಲ್ಲೆ ನಮ್ಮಲ್ಲಿ ಸಂಕ್ರಾಂತಿಯು ಸುಗ್ಗಿ ಹಬ್ಬವೆಂದು ಆಚರಿಸುತ್ತಾರೆ ಈ ಹಬ್ಬದಲ್ಲಿ ರೈತರು ತಾವು ಬೆಳೆದಿರುವ ಬೆಳೆಗಳನ್ನು ಕಟಾವು ಮಾಡಿ ಸುಗ್ಗಿಯ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಸಂಕ್ರಾಂತಿ ಹಬ್ಬದ ವಿಶೇಷವೆಂದರೆ ಸುಗ್ಗಿ ಹಬ್ಬದ ವಿಶೇಷ ಈ ಹಬ್ಬದಲ್ಲಿ ಹೆಚ್ಚಾಗಿ ನಮ್ಮ ಜಿಲ್ಲೆಯ ಹೆಣ್ಣುಮಕ್ಕಳು ಸೊಬಗಿನಿಂದ ಆಚರಿಸುತ್ತಾರೆ. ನಮ್ಮ ಮಂಡ್ಯ ಜಿಲ್ಲೆಯಲ್ಲಿ ಸಂಕ್ರಾಂತಿಯನ್ನು ಹೆಚ್ಚಾಗಿ ಆಚರಿಸುವುದು ಹೆಣ್ಣುಮಕ್ಕಳು ಅದರಲ್ಲೂ ಅವರ ವಿಶೇಷ ಉಡುಪುಗಳಿಂದ ತನ್ನದೇ ಆದ ವೈಶಿಷ್ಟ್ಯ ಮತ್ತು ವೈಭವದ ರೂಪದಲ್ಲಿ ಹಬ್ಬವನ್ನು ಆಚರಿಸುತ್ತಾರೆ.
ಆಚರಣೆಯಲ್ಲಿ ಮುಖ್ಯವಾಗಿ ಕಂಡುಬರುವುದು "ಎಳ್ಳು ಬೆಲ್ಲ". ಮನೆಯಲ್ಲಿ ಎಳ್ಳ್ಳು ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ "ಎಳ್ಳುಹಂಚುವುದು" ಸಂಕ್ರಾಂತಿಯ ಸಂಪ್ರದಾಯ. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು ಬೆಲ್ಲ" ತಯಾರಿಸಲಾಗುತ್ತದೆ.
ಸಂಕ್ರಾಂತಿ ಹಬ್ಬವನ್ನು ಎಳ್ಳು-ಬೆಲ್ಲದ ಹಬ್ಬ ಎನ್ನುತ್ತಾರೆ. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಈ ಕಾರಣಕ್ಕಾಗಿ ಸುಗ್ಗಿಯ ಹಬ್ಬ ಎನ್ನುತ್ತಾರೆ. ಸಂಕ್ರಾಂತಿಯ ಹಬ್ಬದ ದಿನ ಎಳ್ಳು ದಾನ ಮಾಡಬೇಕು ಎಂಬ ನಿಯಮವಿದೆ. ಎಳ್ಳು ಶನಿ ಗ್ರಹದ ಪ್ರತಿನಿಧಿ ಹಾಗೂ ಆತನ ಧಾನ್ಯವಾಗಿದೆ. (ಶನಿಗ್ರಹ ಎಂದೊಡನೆ ಎಲ್ಲರಿಗೂ ಏನೋ ಒಂದು ರೀತಿ ಭಯ) ಎಳ್ಳನ್ನು ನಾವು ದಾನ ಮಾಡಲು ಹೋದಾಗ ಸಾಮಾನ್ಯವಾಗಿ ಅದನ್ನು ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ. ಕಾರಣ ಅವರ ಪಾಪ ನಾಮ ತೆಗೆದುಕೊಂಡ ಹಾಗೆ ಎಂದು ಹಾಗೂ ದೋಷ ಉಂಟಾಗುವುದು ಎಂದು. ಆದ್ದರಿಂದ ಈ ಕಾರಣದಿಂದ ಎಳ್ಳಿನ ಜತೆಯಲ್ಲಿ ಬೆಲ್ಲ, ಕಡಲೆಬೀಜ, ಕೊಬ್ಬರಿಯನ್ನು ಮಿಶ್ರಣ ಮಾಡಿ ದಾನ ಮಾಡುವ ಪದ್ಧತಿ ಪ್ರಾರಂಭವಾಯಿತು. ಅಲ್ಲದೆ ಆ ಬೆಳೆಗಳು ಆಗ ತಾನೆ ಬೆಳೆದು ಮಾರುಕಟ್ಟೆಗೆ ಬಂದಿರುತ್ತದೆ. ಅವುಗಳನ್ನು ಪೂಜೆ ಮಾಡಿ ದಾನ ಧರ್ಮ ಮಾಡಿದರೆ ಇನ್ನು ಫಲ ಹೆಚ್ಚು ಬರುವುದು ಎಂಬ ನಂಬಿಕೆಯೂ ಇದೆ.
ಮಕರ ಸಂಕ್ರಾಂತಿಯ ದಿನದಂದು ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣವನ್ನು ಪ್ರವೇಶಿಸುತ್ತಾನೆ, ಇದನ್ನು ಮಕರ ರಾಶಿಯ ಪ್ರವೇಶ ಎಂದೂ ಕರೆಯುತ್ತಾರೆ. ಮಕರ ರಾಶಿಯಲ್ಲಿ ಸೂರ್ಯನ ಪ್ರವೇಶವು ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಿಂದ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಸೂರ್ಯನು ದಕ್ಷಿಣ ಗೋಳಾರ್ಧದಿಂದ ಉತ್ತರ ಗೋಳಾರ್ಧಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ, ಇದನ್ನು ನಾವು ‘ಉತ್ತರಾಯಣ’ ಎಂದು ಕರೆಯುತ್ತೇವೆ. ಆಧ್ಯಾತ್ಮಿಕ ದೃಷ್ಟಿಕೋನದಿಂದ, ಅಂತಹದನ್ನು ಹೊಂದಲು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ.
ಈ ಮಂಗಳಕರ ದಿನದಂದು ಜನರು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಮೂಲಕ ತಮ್ಮ ಪಾಪಗಳನ್ನು ತೊಳೆದುಕೊಳ್ಳುತ್ತಾರೆ ಮತ್ತು ಸೂರ್ಯ ದೇವರನ್ನು ಪೂಜಿಸುತ್ತಾರೆ ಮತ್ತು ಅವರ ಆಶೀರ್ವಾದವನ್ನು ಪಡೆಯುತ್ತಾರೆ. ಜನರು ಕೂಡ ಈ ದಿನ ದಾನ ಮಾಡುತ್ತಾರೆ, ದಾನ ಮಾಡುವುದರಿಂದ ಸೂರ್ಯದೇವನು ಪ್ರಸನ್ನನಾಗುತ್ತಾನೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ದಕ್ಷಿಣ ಗೋಳಾರ್ಧದಿಂದ ಉತ್ತರ ಗೋಳಾರ್ಧಕ್ಕೆ ಸೂರ್ಯನ ಪ್ರವೇಶವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ.
ಆರೋಗ್ಯದ ದೃಷ್ಟಿಯಿಂದ ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ, ದಿನಗಳ ಸಮಯ ಬದಲಾಗಲು ಪ್ರಾರಂಭಿಸುತ್ತದೆ. ಮಕರ ಸಂಕ್ರಾಂತಿ ಹಬ್ಬವು ಸಂತೋಷ ಮತ್ತು ಉಲ್ಲಾಸವನ್ನು ಸಹ ತರುತ್ತದೆ. ಮಧ್ಯಾಹ್ನದ ವೇಳೆಗೆ ಹೊಸ ಬೆಳೆಯ ಅಕ್ಕಿಯಿಂದ ಖಿಚಡಿ ತಯಾರಿಸಿ, ಅದರಲ್ಲಿ ವಿವಿಧ ತರಕಾರಿಗಳನ್ನು ತಯಾರಿಸುತ್ತಾರೆ. ನಾವೆಲ್ಲರೂ ಖಿಚಡಿಯನ್ನು ಸ್ಥಳೀಯ ತುಪ್ಪ ಅಥವಾ ಮೊಸರಿನೊಂದಿಗೆ ಬೆರೆಸಿ ತಿನ್ನುವುದು. ಇದರ ಜೊತೆಗೆ ಬೆಲ್ಲ, ಎಳ್ಳು ಇತ್ಯಾದಿಗಳಿಂದ ಮಾಡಿದ ವಸ್ತುಗಳು ಮತ್ತು ಸಿಹಿತಿಂಡಿಗಳು ಸೇರಿವೆ.
ಗ್ರಾಮೀಣ ಪ್ರದೇಶದಲ್ಲಿ ರೈತರು ಆ ದಿನ ಎತ್ತುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸುತ್ತಾರೆ. ಹೊರ ದೇಶದಲ್ಲೂ ವಿಭಿನ್ನ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ.
ಈ ಸಂಕ್ರಾಂತಿ ಹಬ್ಬವು ಎಲ್ಲರಿಗೂ ಸುಗ್ಗಿಯ ಹಬ್ಬ ಈ ಹಬ್ಬದಲ್ಲಿ ತಮ್ಮದೇ ಆದ ವೈಭವದಿಂದ ಆಚರಿಸುವ ಹಬ್ಬವಾಗಿದೆ ಇದು ರೈತರಿಗೆ ವಿಶಿಷ್ಟ ಹಬ್ಬವೆಂದು ಕರೆದರೆ ತಪ್ಪಾಗಲಾರದು. ಈ ಹಬ್ಬವು ಹೆಚ್ಚಿನ ಆನಂದ ಮತ್ತು ಸಂತೋಷ ತರುವ ಹಬ್ಬವಾಗಿದೆ. ಸಂಕ್ರಾಂತಿ ಹಬ್ಬವು ಜನರಿಗೆ ರಂಜಿಸುವ ಹಬ್ಬವಾಗಿದೆ. ಈ ಎಳ್ಳು-ಬೆಲ್ಲ ಹಬ್ಬವು ಹೆಚ್ಚಾಗಿ ನಮ್ಮ ದಕ್ಷಿಣ ಭಾರತದಲ್ಲಿ ಆಚರಿಸುತ್ತಾರೆ. ಈ ಹಬ್ಬದಲ್ಲಿ ಎಳ್ಳು-ಬೆಲ್ಲ ತಿನ್ನುವುದರ ಮೂಲಕ ವಿಶೇಷ ಮತ್ತು ವಿಶಿಷ್ಟವಾಗಿ ಹಬ್ಬವನ್ನು ಆಚರಿಸುತ್ತಾರೆ. ಸುಗ್ಗಿಯು ಬಂದು ಹಿಗ್ಗಲು ತಂದಿತ್ತು ಎಂಬ ಮಾತಿನ ಅರ್ಥ ಹಾಗೆ ರೈತನಿಗೆ ಇದು ಹಿಗ್ಗನು ತರುವ ಹಬ್ಬವಾಗಿದೆ.
ಈ ಹಬ್ಬದಲ್ಲಿ ಎಲ್ಲರೂ ಎಳ್ಳು-ಬೆಲ್ಲವನ್ನು ಸೇವಿಸಿ ಹಾಗೂ ಒಳ್ಳೆ ಮಾತುಗಳನ್ನು ಆಡಿ. ಕೋರೋಣ ದಿಂದ ಎಲ್ಲರೂ ದೂರವಿದ್ದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಸಂಕ್ರಾಂತಿ ಹಬ್ಬವನ್ನು ಸರಳವಾಗಿ ಆಚರಿಸುವುದರ ಮೂಲಕ ಸರ್ಕಾರದ ನಿಯಮಗಳನ್ನು ಪಾಲಿಸಿ. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳನ್ನು ಲೇಖನದ ಮೂಲಕ ನಿಮಗೆ ತಿಳಿಸುತ್ತಿದ್ದೇನೆ.
- ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ
ಅಕ್ಕಿಹೆಬ್ಬಾಳು ಗ್ರಾಮ
ಕೃಷ್ಣರಾಜಪೇಟೆ ತಾಲ್ಲೂಕು
ಮಂಡ್ಯ ಜಿಲ್ಲೆ-571605
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ