ಶನಿವಾರ, ಜನವರಿ 15, 2022

ಸ್ಮರಣೆ ಮಾತ್ರದಿ ನರನಾಡಿಗಳಲ್ಲಿ ಚೈತನ್ಯ ತುಂಬುವ ಮಹಾನ್ ಚೇತನ (ಲೇಖನ) - ಪ್ರಭಾವತಿ ಹೆಗಡೆ.

ಹತ್ತೊಂಬತ್ತನೆಯ ಶತಮಾನದ 
 #ಯುಗಪ್ರವರ್ತಕರೆಂದೇ ಹೆಸರಾದ  ಸ್ವಾಮಿ ವಿವೇಕಾನಂದರು ನಮ್ಮ ಭಾರತೀಯ ಸಂಸ್ಕೃತಿಯ  ಘನತೆಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ವ್ಯಕ್ತಿ.  ಇವರ ಜೀವನ, ಸಾಧನೆ ಮತ್ತು ಇವರು ನೀಡಿದ ಸಂದೇಶಗಳು  ಪ್ರತಿಯೊಬ್ಬ ಭಾರತೀಯರಿಗೂ -- ಅದರಲ್ಲೂ ಯುವಜನತೆಗೆ ಇಂದಿಗೂ ಸ್ಫೂರ್ತಿದಾಯಕವಾಗಿವೆ.

ಆಧ್ಯಾತ್ಮದಲ್ಲಿ ಸಾಧನೆ ಮಾಡಿದ ಮಹಾಗುರು   #ರಾಮಕೃಷ್ಣಪರಮಹಂಸರ ಶಿಷ್ಯನಾಗಿ ಬಂದ ನರೇಂದ್ರನೆಂಬ ತೇಜಸ್ವಿ ಬಾಲಕ   ಗುರುವಿನ ಅಂತರಂಗದ ಶಿಷ್ಯರಾಗಿ #ವಿವೇಕಾನಂದ ಎಂದು ಹೆಸರು ಪಡೆದು  ಶತಮಾನದ ದಿವ್ಯ ಪುರಷರಾದ ಕಥೆ ರೋಚಕವಾದುದು.  

ಗುರು ಪರಮಹಂಸರ ತತ್ವ, ಆದರ್ಶ ಹಾಗೂ ಜ್ಞಾನ ಸಂದೇಶವನ್ನು ಎಲ್ಲೆಡೆ ಪಸರಿಸಲು ಕಂಕಣಬದ್ಧರಾದ  ಸ್ವಾಮಿ  ವಿವೇಕಾನಂದರು -- ಇಡೀ ಭಾರತದೇಶವನ್ನು  ಭೈರಾಗಿಯಾಗಿ ಸಂಚರಿಸಿದರು.   ಈ ದೇಶಪರ್ಯಟನೆಯಲ್ಲಿ  ಅವರು-- ಅಂದಿನ ಸಮಾಜದ   ಕಂದಾಚಾರ, ಮೂಢನಂಬಿಕೆಗಳು,  ಬಡತನ,  ಅಜ್ಞಾನ ...ಹೀಗೆ ಅನೇಕ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ಕಂಡು -- ಸಮಾಜ ಪರಿವರ್ತನೆ ಮತ್ತು ಧರ್ಮ ಸುಧಾರಣೆಗೆ ಮುಂದಾದರು.   ನಮ್ಮ ಸನಾತನ ಹಿಂದೂ ಧರ್ಮದ ಮೂಲ ತಿರುಳನ್ನು  ಎಲ್ಲರಿಗೂ ಮನವರಿಕೆ ಮಾಡಿಕೊಡುತ್ತ ಒಳ್ಳೆಯ ಆಶಯಗಳನ್ನು ಎತ್ತಿ ಹಿಡಿದು,  ಸಮಾಜಕಂಟಕ ಅಂಶಗಳನ್ನು ಬದಿಗೊತ್ತಿ  ಹಿಂದೂಧರ್ಮವನ್ನು     #ಪುನರುಜ್ಜೀವನಗೊಳಿಸಿದರು. 

#1893 #ಸೆಪ್ಟೆಂಬರ್ #11 
ಇದು  ಸ್ವಾಮಿವಿವೇಕಾನಂದರ ಹಾಗೂ ಭಾರತೀಯ ಸಂಸ್ಕೃತಿಯ ಇತಿಹಾಸದಲ್ಲಿ  'ಆವಸ್ಮರಣೀಯ'  ದಿನ.  ಅಮೆರಿಕ ದ ಶಿಕಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಯಂ ಪ್ರೇರಣೆಯಿಂದ ಹಿಂದೂಧರ್ಮದ ಪ್ರತಿನಿಧಿಯಾಗಿ ಭಾಗವಹಿಸಿ  ಮಾಡಿದ ಭಾಷಣ  -- ಹಿಂದೂಧರ್ಮದ ಹಿರಿಮೆಯನ್ನು ಜಗತ್ತಿಗೆ  ತೋರಿಸಿಕೊಟ್ಟಿತು.  ನಮ್ಮ  ಭಾರತ ಬ್ರಿಟೀಷರ ದಾಸ್ಯದಲ್ಲಿದ್ದ ಆ ಕಾಲದಲ್ಲಿ ವಿದೇಶೀಯರು ಭಾರತೀಯರನ್ನು ಬಹಳ ಕೀಳಾಗಿ ಕಾಣುತ್ತಿದ್ದ ದಿನಮಾನದಲ್ಲಿ---  ಸ್ವಾಮಿಜೀಯವರು ಮಾಡಿದ ಭಾಷಣ  -- ವಿದೇಶೀಯರು  ಭಾರತೀಯರನ್ನು ಹೊಸದೃಷ್ಠಿಕೋನದಿಂದ ನೋಡುವಂತೆ ಮಾಡಿತು.  ಇಡೀ ವಿಶ್ವದ ಜನತೆ ಭಾರತೀಯ ತತ್ವ ಆದರ್ಶಗಳನ್ನು ಮೆಚ್ಚಿಕೊಳ್ಳುವಂತಾಯಿತು.  

'ನಾನು ಹಿಂದೂಧರ್ಮದವನು'  ಎಂದು ಹೆಮ್ಮೆಯಿಂದ ಹೇಳಿಕೊಂಡ  ವಿವೇಕಾನಂದರು --ಹಿಂದೂಧರ್ಮವೆಂದರೆ   ಒಂದು ಮತಧರ್ಮವಲ್ಲ, ಅದೊಂದು ಜೀವನದರ್ಶನ --ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟರು.  ಕೇವಲ ಮತಪ್ರಚಾರಕರಾಗದೇ  ಮಹಾನ್ ಮಾನವತಾವಾದಿಯಾಗಿ ವಿಶ್ವಮಾನವನೆನಿಸಿಕೊಂಡರು.  

ತಾರುಣ್ಯದಲ್ಲಿಯೆ ವಿಶ್ವ ಪರ್ಯಟನೆ ಮಾಡಿ ತಮ್ಮ  ತತ್ವಾದರ್ಶಗಳಿಂದ   ವಿದೇಶೀಯರ ಮನಗೆದ್ದ  ವಿವೇಕಾನಂದರು  ಅಲ್ಲಿನ ಶ್ರೀಮಂತಿಕೆಗಾಗಲೀ, ಪ್ರಲೋಭನೆಗಾಗಲಿ  ಮನಸೋಲಲಿಲ್ಲ.   ಮರಳಿ ಭಾರತಕ್ಕೆ ಬಂದು ಇಲ್ಲಿನ ಜನರ  ದಾಸ್ಯಮನೋಭಾವವನ್ನು ಕಿತ್ತೊಗೆದು,  ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡಿದರು.   ಕೇವಲ ರಾಜಕೀಯ ಸ್ವಾತಂತ್ರ್ಯವಷ್ಟೇ ಅಲ್ಲದೆ ಸಾಮಾಜಿಕ, ಧಾರ್ಮಿಕ ಸ್ವಾತಂತ್ರ್ಯವನ್ನೂ ಪಡೆಯುವಂತೆ  ಜನರನ್ನು ಎಚ್ಚರಿಸಿದರು.  ತಮ್ಮ ಅಸ್ಖಲಿತ ಗಂಭೀರ ವಾಣಿಯಿಂದ ಭಾರತೀಯರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಿದರು. ಸನ್ಯಾಸಿಯಾದರೂ ಸಮಾಜದಿಂದ ವಿಮುಖರಾಗದೇ ಶೌರ್ಯ, ಧೈರ್ಯ,   ಕ್ಷಾತ್ರ ತೇಜಸ್ಸಿನಿಂದ ಯುವಜನತೆಗೆ ಸ್ಫೂರ್ತಿಯ ಚಿಲುಮೆಯಾದರು.

ಇಂತಹ ಧೀಮಂತ ವ್ಯಕ್ತಿತ್ವದ ಸ್ವಾಮಿ  ವಿವೇಕಾನಂದರು ತಮ್ಮ ತನು-ಮನ-ಧನಗಳನ್ನು ಭಾರತಾಂಬೆಯ ಸೇವೆಗೆ ಸಮರ್ಪಿಸಿ 1902 ಜುಲೈ 2 ರಂದು  ಇಹಲೋಕ ತ್ಯಜಿಸಿ ಅಮರರಾದರು.  ಕೇವಲ  39  ವರ್ಷಗಳ  ಅತ್ಯಲ್ಪ ಜೀವಿತಾವಧಿಯಲ್ಲಿ  ಅಮೋಘ ಸಾಧನೆ ಮಾಡಿ,  ಚಿರಸ್ಮರಣೀಯರಾದರು. 

ಮಹಾನ್   #ಸಮಾಜಸಿರಿ  ಸ್ವಾಮಿ  ವಿವೇಕಾನಂದರ ಜೀವನಚರಿತ್ರೆ  ಸಮಾಜಕ್ಕೂ ,  ವ್ಯಕ್ತಿಗತ ಜೀವನಕ್ಕೂ  ಮಾರ್ಗದರ್ಶನ  ನೀಡುವ   ಪ್ರಖರ ಜ್ಯೋತಿ ಇದ್ದಂತೆ.  ಇಂದಿನ ಯುವಜನತೆಯನ್ನು ಯಶಸ್ಸಿನತ್ತ ಮುನ್ನಡೆಸಲು,  ಪ್ರತಿಯೊಬ್ಬರ ಆತ್ಮಾಭಿಮಾನವನ್ನು ಎಚ್ಚರಿಸಿ, ದೇಶಭಕ್ತಿಯನ್ನು  ಮೂಡಿಸಲು--ಈ ಧೀರ ಸನ್ಯಾಸಿಯ ವೀರ ವಿವೇಕವಾಣಿ ಹಾಗೂ ತತ್ವ ಸಂದೇಶಗಳು  ಸದಾ ಸ್ಫೂರ್ತಿ ನೀಡುವ ಚಿಲುಮೆಯಾಗಿವೆ.
- ಪ್ರಭಾವತಿ ಹೆಗಡೆ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...