ಜನ್ಮ ತಳೆದು ಕರ್ಮ ಮಾಡಿಹ 'ಚೇತನ'ಕ್ಕೆ
'ಅನಿಕೇತನ'ವಾಗುವ ಸಂದೇಶವ ಸಾರಿ
'ವಿಶ್ವಮಾನವ'ನಾಗಿ ಜನಿಸಿದ ಚೇತನಕೆ
ದೇಶ, ಭಾಷೆ, ಜಾತಿ-ವರ್ಣ, ಮತಗಳ
ಸಂಕೋಲೆಗಳ ತೊಡಿಸಿ ಅದನು
'ಅಲ್ಪಮಾನವ'ನನ್ನಾಗಿ ಮಾಡಿಪರು...
ಸಂಕೋಲೆಗಳಿಂ ಬಂಧಮುಕ್ತಿಗೊಳಿಸಿ
ರೂಪ ಆಕಾರಗಳ ಎಲ್ಲೆಯನು ದಾಟಿ
ಅಲ್ಪ ಮತಿಯೊಳು ಭ್ರಮಿಸುತಿರುವವರ
ಮತ್ತೆ 'ವಿಶ್ವಮಾನವ'ನನ್ನಾಗಿಸುವುದೇ
ನಮ್ಮ ವಿದ್ಯೆ, ಸಂಸೃತಿಯ ಧ್ಯೇಯವಾಗಲಿ
ಈ ಕಾರ್ಯಕೆ ಯಾವಾಗಲೂ ಜಯವಾಗಲಿ...
ಹಲವು ಮಹಾತ್ಮರ ವಾಣಿಗಳೊಡೆದು ಜಗದಿ
ಹೊಸಮತಗಳುದಿಸಲು ಕಾರಣವಾಗಿರಲು
ಹುಟ್ಟಿಕೊಂಡವು ಹಲವು ಧರ್ಮಗಳು
ಹಲವು ಕ್ಷೋಭೆಗಳಿಗೆ ಕಾರಣವೀ ಧರ್ಮ
ಮತದ ನಿರುಪಯುಕ್ತತೆಯ ಫಲವೀ ಧರ್ಮ
ತೊರೆಯಬೇಕಿದೆ ಇನ್ನು ಈ ಮತಮೌಢ್ಯವಾ...
ಮತ-ರಾಜಕೀಯಗಳೆಲ್ಲ ಸೋರಿ ಹೋಗಿ
ವಿಜ್ಞಾನಾಧ್ಯಾತ್ಮದ ಕಾಲ ಬರಬೇಕಿದೆ ಉದ್ಧಾರಕೆ
ತತ್ವಗಳ ಗಡಿಯನು ಮೀರಿ ಸಾಗಬೇಕಿದೆ
ಅನಂತವನ್ನಾರೋಹಿಸಿ ನಡೆಯಬೇಕಿದೆ
ಮೌಲ್ಯಗಳನು ಎಲ್ಲಡೆ ಬಿತ್ತಿ ಸಾರಬೇಕಿದೆ
ಜಗದಿ ಸಮನ್ವಯತೆಯನು ಸಾಧಿಸಲು...
ಮನುಜಜಾತಿ ತಾನೊಂದೆಂಬುದನರಿಯಬೇಕಿದೆ
ವರ್ಣಾಶ್ರಮಗಳನೆಲ್ಲ ತೊಡೆದು ಹಾಕಬೇಕಿದೆ
ಜಾತಿಪದ್ಧತಿಯನಡಿಯಿಂದ ಕಿತ್ತೆಸೆಯಬೇಕಿದೆ
ಮತ ತೊಲಗಿ ಆಧ್ಯಾತ್ಮವೆಲ್ಲೆಡೆ ಪಸರಬೇಕಿದೆ
ಮನಜಮತವು ವಿಶ್ವಪಥದಿ ನಡೆಯಬೇಕಿದೆ
ಹೀಗೆ 'ವಿಶ್ವಮಾನವ'ನಾಗಿ ರೂಪುಗೊಳ್ಳಬೇಕಿದೆ...
- ಶಿವಪ್ರಸಾದ ಪುರುಷೋತ್ತಮ ಮಂಡಿ.
ಮಹಾಲಿಂಗಪುರ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ